ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 33 & 34): ಎಂ. ಜವರಾಜ್

-೩೩-
ಕರಿ ನಾಯಿ
ಕಿಂವ್ಞ್ ಕಿಂವ್ಞ್ ಅನ್ತ
ಬಾಲ ಅಳ್ಳಾಡುಸ್ತ ಬಂದು
ಶಂಕ್ರಪ್ಪೋರ ಕಾಲ್ನೆಕ್ಕಕ ಶುರು ಮಾಡ್ತು


ಶಂಕ್ರಪ್ಪೋರು ಬಂದು
ಕುಂತು ಎಸ್ಟೊತ್ತಾಯ್ತು
ಈ ಅಯ್ನೋರ್
ನಿದ್ದ ಮುಗಿನೇ ಇಲ್ಲ..

ತ್ವಾಟದ ಬೇಲಿ
ಇಣುಕುದ್ರ
ಊರೊಳಗ
ತಮ್ಟ ಸದ್ದು
ಜೋರಾಯ್ತು
ಜೊತ್ಗ
ಬೆಳಕೂ ಹರಿತು.

ಈ ಅಯ್ನೋರು
ಈಗ
ಈಚ ಬಂದು
ಮೈ ಮುರಿತಾ…
ಆಕುಳುಸ್ತಾ
ಕಣ್ಣಾಡುಸ್ತ ಕಣ್ಣಾಡುಸ್ತ
ಕಲ್ಲಾಸಿನ ಮ್ಯಾಲ
ಶಂಕ್ರಪ್ಪೋರು ಕುಂತಿರದ ನೋಡುದ್ರು

ಈ ಅಯ್ನೋರು,
‘ಹ್ಞು ಈಗ ಗ್ಯಾನ ಬತ್ತಾ’
‘ನಾನೇನು ಗ್ಯಾನ್ಗೆಟ್ಟಿಲ್ಲ’
‘ಮತ್ತ ಈಗ್ ಬಂದಿದೈ’
‘ಅವ್ವುನ್ಗ ಹುಷಾರಿಲ್ಲ ರಾತ್ರೆಲ್ಲ’
‘ಅವ್ಳಿಗೇನಾಗಿದ್ದು ಅದೇನ್ ಕಮ್ಮಿ ಆಗಿದ್ದು
ರಾಶಿ ಗುಡ್ಡ ಹಿಡುದ್ದ..
ಉಣ್ಣಕಿಲ್ವ ತಿನ್ನಕಿಲ್ವ’
‘ಅದ. ನೆಮ್ದಿ ಒಂದಿಲ್ಲ.
ಅದು ಬುಡು ಡಾಕ್ಟ್ರು ಬಂದಿದ್ರು’
‘ಡಾಕ್ಟ್ರಾ..
ಡಾಕ್ಟ್ರು ಬರ ಅನ್ತ ಕಾಯ್ಲಿ
ಏನಲೇ ಅವ್ಳಿಗೆ’
‘ಯಾವ್ ಕಾಯ್ಲಿನು ಇಲ್ಲ
ನೀ ಇನ್ಮೇಲ
ಅವ್ವನ್ನ ಬಂಜ ಅನ್ಬೇಡ’
‘ಅಂದ್ರೇನೋ ಬಂಚೊತ್..’
‘ನಾ ಬತ್ತಿನಿ’
ಅನ್ತ ಶಂಕ್ರಪ್ಪೋರು ತ್ವಾಟದ ತಡಿ ತಗ್ದು
ತಿರುಗೂ ನೋಡ್ದೆ ಹೋದ್ರು.

ಇತ್ತಗ ಈ ಅಯ್ನೋರು,
‘ಥೂ ಲೌಡಿ ಮುಂಡೆ
ಸಾಯವತ್ಲಿ ಬಸ್ರಿ ಆಗಿದ್ದಾಳ’
ಅನ್ತ ಕಿಡಿ ಕಿಡಿ ಆಗ್ತಾ
ಬೀಡಿ ಹಚ್ಕಂಡು ಸೇಯ್ತ
ಏನೇನೊ ಯೋಚಿಸ್ತಾ ತಿರುಗಾಡ್ತ
ಹಾಗೆ
ಕಲ್ಲಾಸಿನ ಮ್ಯಾಲ ಕುಂತ್ರು.


ಎಳೂರುಂಡಿ ಓಣಿಗುಂಟ
ನಡಿತಾ
ಚೆಂಗುಲಿ ಬಂದು ಕೂಡ್ದ

ಚೆಂಗುಲಿಯೊಳಗ ಪ್ರಶ್ನೆ ಎದ್ದು
ಓಣಿಗುಂಟ ಓಡಾಡ್ದು.
ಈ ಅಯ್ನೋರು
ಚೆಂಗುಲಿ ಪ್ರಶ್ನೆನ ಎಸ್ದು
ಗಿರಿಕ್ಕು ಗಿರಿಕ್ಕು ಅನ್ತ
ಕಲ್ ಕಲ್ ದಾಟ್ತ ಎಳೂರುಂಡಿ
ಮೂಲೆ ಮನ ಹೊಕ್ರು.

ಓಣಿ ಮನ.
ದೊಡ್ದು ಅಂದ್ರ ದೊಡ್ದು
ನೇಣ್ ನೇಣ್ಗದ.

ನೇಣ್ಗಿರವತ್ಗ
ನಂಗ ಏನೂ ಕಾಣ್ದು.
ಎಸ್ಟೋ ಹೊತ್ತಾಯ್ತು
ಬರನೇ ಇಲ್ಲ

ಅದ್ಯಾರೋ ಹಂಗೇ ಇಬ್ರು
ಹೆಣ್ಣೆಂಗ್ಸು ಒಳಕ್ಕೋದ್ರು
ಅವ್ರು ಹೋದವ್ರು ಬರನೇ ಇಲ್ಲ.


ಕುಲೊಸ್ತರೆಲ್ಲ ಬಂದು ನಿಂತಿದ್ರು
ಚೆಂಗುಲಿ ಗಾಡಿ ಕಟ್ದ
ನೀಲವ್ವೋರು ಮೇಲತ್ತಿ ಕುಂತ್ರು
‘ಏ ದೊಡ್ಡವ್ವಾ ಬಾ ಇಲ್ಲಿ
ಹತ್ತು ಮ್ಯಾಲ
ವಸಿ ಎಳೂರುಂಡಿಗ ಹೋಗ್ಬಾ’
ಅಯ್ನೋರು ಎದುರು ಮನ
ನಿಂಗವ್ವಳನ್ನ ಕರುದು ಹೇಳುದ್ರು.

ಚೆಂಗುಲಿ
ಮೂಕಿ ಮ್ಯಾಲ ಕುಂತು
ಎಡಗೋಲು ಹಗ್ಗ ಹಿಡ್ದು
ಬಲಗೋಲ ಬೆನ್ನ ಮ್ಯಾಲ
ಅರ್ಕಡ್ಡಿ ಇಟ್ಮೇಲ
ಕಡ್ಸುಗಳು ನುಲಿತಾ ಹೋದು.


ಕಂಡಾಯಗಳು ಹೊಳಲಿ
ಪೂಜುಸ್ಕಂಡು ದಿಬ್ಬ ಹತ್ತಿ
ಕುಣಿತಿದ್ದು.

ಈ ಅಯ್ನೋರ ಕಂಡ ಕುಲೊಸ್ತರು
ಓಡೋಡ್ ಬಂದ್ರು
ಅವ್ರು ಓಡೋಡ್ ಬಂದಾಗ
ಈ ಅಯ್ನೋರು ನನ್ನ ಬುಟ್ಟು ನಿಂತ್ರು

ಕುಲೊಸ್ತರು
ಒಂದು ಹೂವಿನ ಹಾರ ತಂದು
ಅಯ್ನೋರ್ ಕತ್ಗ ಹಾಕಿ
‘ಅಯ್ನೋರ್ಗೆ ಜೈ’ ಅಂದ್ರು
ಅಯ್ನೋರು ಹಿಗ್ತಾ
ಹಾಗೆ ಹಿಂದುಕ್ಕ ಬಂದು ನನ್ನ ಮೆಟ್ಟಿ
ಕಂಡಾಯ್ದ ಜೊತ್ಗ ಹೆಜ್ಜ ಹಾಕುದ್ರು…


೩೪-
ರಾತ್ರ ಒಂಭತ್ತು ಅನ್ಸುತ್ತ
ಕಲ್ಬುಟ್ರ ಓಣಿ
ದೊಡ್ಡೋಣಿ ಅದು.
ಕುಂತ್ಕಳಕ ನಿಂತ್ಕಳಕ
ಚೆಂದಗದ ಜಾಗ
ಹೊಲುಕ್ಕ ಗದ್ದಗ
ಹೋಗದು ಬರದು
ಅದೆ ಓಣಿ.

ಮದ್ಯಾಹ್ನ ಅಂದ್ರ
ಆ ಓಣಿ ಸರಿಲ್ವಂತ
ಗಾಳಿ ಗಾಚಾರನಂತ
ಈಗೇನು ಇಲ್ದೆ ಇದ್ರು
ಹಿಂದ ಕೊಲಗಿಲ ಆಗಿತಂತ

ಈ ಅಯ್ನೋರು
ಯಾವಾಗ್ಲೊ ಒಂದ್ಸಾರಿ ಬರೋರು
ಜೊತ್ಗ
ಯಾರ್ಯಾರೋ ಬರೋರು
ಏನೇನೋ ಮಾತಾಡೋರು
ಅವರ ಮಾತು ಕತಾ
ಒಂದೂ ಅರ್ಥ ಆಗದೆ
ನರಳಾಡಿನಿ
ಇನ್ನೊಂದೇನಪಾ ಅಂದ್ರ
ಈ ಅಯ್ನೋರು ಇಲ್ಲಿಗ ಬಂದಾಗೆಲ್ಲ
ಏನಾರಾ ಒಂದು ಆಗದು
ಇದೇ ಆಯ್ತು.
ಆವತ್ತು ಚಂದ್ರವ್ವೋರು
ಕಪಲ ಬಾವಿಗ ಬಿದ್ಸುದ್ದಿ ಆಯ್ತಲ್ಲ
ಮಾದಪ್ಪನ ಬೆಟ್ಗ ಹೋಗಿದ್ರಲ್ಲ
ವಾರ್ಕು ಮುಂಚ ಇಲ್ಲೆ ಇದ್ದೊದ್ರಂತ.
ನಂಗು ಇದು ನೆಪ್ಪರ್ನಿಲ್ಲ
ಪಂಚ ಅಂಚು ಹೇಳಿದ್ದು ನೆಪ್ಪು.
ನನ್ಗು ಮುಂಚ ಅವ್ನೆ ಅಲ್ವ ಕಂಡಿದ್ದು
ಅಂವ ಹೇಳದು ನಕ್ಲಿಗ ಅನ್ತ ಸುಮ್ನಾಗಿದ್ದಿ
ನಂಗು ಆಮೇಲಾಮೇಲ
ಈ ಅಯ್ನೋರಾ ತಳಾಬುಡಾ ಗೊತ್ತಾಯ್ತು.

ಈಗ ರಾತ್ರ್ಯಾಗದ
ಈಗೇನಾ..

ಅಮಾಸ ಕಳ್ದು
ಚನೈನಬ್ಬ ಹುಟ್ಟದ
ಇವತ್ಲಿಂದೆ ಅಲ್ವ..
ಈಗ
ಮ್ಯಾಲ ತಿಂಗ್ಳಿಲ್ಲ

ಈಗಾಗ್ಲೆ
ಒಂದ್ಕಟ್ಟು ಬೀಡಿ
ಉರುದು ಬಿದ್ದು
ಇನ್ನು ಉರಿತನೆ ಅದ

ಗವ್ವನ್ನ ಕತ್ಲಲ್ಲಿ
ಬೀಡಿ ಮೊನೆ ಕಿಡಿ
ಅಯ್ನೋರೆಳೆಯೋ ದಮ್ಮಿಗೆ
ಬೆಳುಗ್ತುದಾ ಮಂಕಾಯ್ತುದಾ
ಬೆಳುಗ್ತುದಾ ಮಂಕಾಯ್ತುದಾ
ನಂಗು ನೋಡಿ ನೋಡಿ ಸಾಕಾಯ್ತು

ಈ ಗವ್ಗತ್ಲಲಿ
ಈ ಕಲ್ಬುಟ್ರ ಓಣಿ ಮೂಲೆಲಿ
ತಾಯೂರೋಣಿಗ ಹೋಗ ದಾರಿಲಿ
ಮಿಣಮಿಣ ಬೆಳುಕ್ಕಾಣ್ತು

ಈ ಅಯ್ನೋರು
ಆ ಬೆಳ್ಕ ಕಂಡು
ನಿಧಾನಕೆ ಎಳಿತಿದ್ದ ದಮ್ಮು
ಇದ್ದಕ್ಕಿದ್ದಾಗೆ ಜೋರಾಗಿ
ರಟ್ಟಗಾತ್ರದ ಹೊಗೆ
ನುಲಿತಾ ನಲಿತಾ ಮೇಲುಕ್ಕೊಯ್ತ ಇರದು
ಬೀಡಿ ಮೊನೆ ಕಿಡಿ
ಬೆಳ್ಕಲಿ ಕಾಣ್ತಿತ್ತು

ಆ ಬೆಳ್ಕು ಹತ್ತತ್ರ
ಬತ್ತಿರಗ
ಕಾಲೆತ್ತಿ ಕುಟ್ಟೋರು
ನಂಗ ಹೆಂಗಾಗದು ಗೊತ್ತಾ..
ಅಳ ಬರದು,
ಅಳ ಬಂದ್ರ ಯಾರ್ ನೋಡಿರು
ಈ ಪಾಪಿನಾ…

‘ಅಯ್ನೋರಾ..’
ಲಾಟೀನು ಕಾಣ್ತು
ಆದ್ರ ಲಾಟೀನಿಂದ
‘ಅಯ್ನೋರಾ’ ಅಂದ್ರಲ್ಲ
ಅವ್ರು ಯಾರಂತ ಕಾಣ್ದು.

ಲಾಟೀನು ಬೆಳ್ಕಲ್ಲಿ
ಅಯ್ನೋರು ಬೆಳಗೋರು
ಕಣ್ಣಂತು ರವ್ಗುಟ್ಟದು

ಲಾಟೀನು ಕೆಳಗಿಳಿತು
ಈಗ ಕಾಣ್ತು
ಅಂವ ಚೆಂಗುಲಿ ಅನ್ತ.

‘ಅಯ್ನೋರಾ ಆಯ್ತು’
‘ಈಗ ಹೆಂಗಿದ್ದಳು’
‘ಎಲ್ಲ ಸರಿ ಅದ ಬುಡಿ’
‘ಬಂಜ ಬಸರಾಗದ ನೋಡಿದಯಲ’
‘ಅಯ್ನೋರಾ
ಬಂಜ ಬಸರಾಗಿರದು ಕಾಣಿ
ಆದ್ರ,
ಬಸರಾಗಕ
ಮದ್ದು ಮಡಿಕಂಡಿರದ ಕಂಡಿನಿ’
‘ಅಯ್ನೋರಾ
ಏಡ್ದಿನ ರಾತ್ರನಾಗ ಸಿಕ್ಕಿ
ನನ್ನ
ಬೀದ್ಬೀದಿ ಅಲಿತಿದೈ ಅಂದ್ರಿ
ನಾ ಏನೇಳ್ಳಿ..
ಆ ಪರ್ಶು ಸೂಳೆಮಗ ನಂಗೆ ಹೊಡ್ದ
ನಾ ಹೇಳಗಿದ್ದಾ…
ನೀವ್ ಕೇಳಗಿದ್ದಾ…
ಕಾಲ ಕಾಲ ಕಾಲ
ಕಾಲುನ್ ತಿಕುದ್ಸಂದಿನೇ ಬೇಕು ನಿಮ್ಗ..’

ಆ ಗವ್ಗತ್ಲಲ್ಲಿ
ಆ ಲಾಟೀನು ಬೆಳುಕ್ಲಿ
ಇಬ್ರೂ ರವ್ಗುಟ್ಟತರ ಕಂಡ್ರು.

ಅರೆ
ಇದ್ದಕ್ಕಿದ್ದಂತೆ ಗಾಳಿ ಬೀಸ್ತು
ಲಾಟೀನು ಬೆಳ್ಕು ಆರಿ
ಯಾರು ಎತ್ತೆತ್ತಾಗಿ
ತೂರುದ್ರು ಅನ್ತ ಕಾಣಿ
ಗಾಳಿ ಅಂದ್ರ ಗಾಳಿ ಬಿರುಗಾಳಿನೆ.
ಚೆಂಗುಲಿ ಎತ್ತಗೋದ..
ಈ ಅಯ್ನೋರು
ಕಲ್ಬುಟ್ರ ಓಣಿ ಒಳ್ಗ
ದಿಕ್ಕಾಪಾಲು ಕಾಲಾಕ್ತ
ಏಳ್ತ ಬೀಳ್ತ
ಓಣಿ ಮ್ಯಾಲುಕ್ಕ ಬಂದಗಾಯ್ತು.

ಎಂ.ಜವರಾಜ್


ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x