-೨೭-
ಕತ್ತಲಾಗಿತ್ತು.
ಹೆಂಡದ ಗುಳ್ಳಲಿ
ಲಾಟೀನು ಉರಿತಾ ಉರಿಯೋ ಬೆಳಕಲಿ ಕುಡಿಯೋರು ಕುಡಿತಾ ತೂರಾಡ್ತ
ಆ ಕುಡ್ದೋರು ಗಂಟ್ಲು ಗಳ್ಳಾಕ ಸದ್ದಿತ್ತು.
‘ಅಯ್ನೋರಾ ನಾ ಈಗ ಏನ್ಮಾಡ್ಲಿ
ಸಂತ ಒಳಗ ಹೇಳುದ್ದಾ
ನಾ ಯಾಗಾರು ನಂಬ್ಲಿ
ಮದ್ವಿ ಆಗಿ ಮಕ್ಳ ಫಲ ಇಲ್ದೆ
ಈ ಸವ್ವಿನೇ ದೇವ್ತಿತರ ಬಂತು
ಆ ದೇವ್ತಿ ಕಿಲಕಿಲ ಅನ್ನವತ್ಲಿ
ನನ್ ಪರ್ಶು ಹುಟ್ತು
ಆ ದೇವ್ತಿ ಈಗ ಈತರ ಅಂದ್ರ
ನನ್ ಕಳ್ಳು ಕಿತ್ಬತ್ತುದ ಅಯ್ನೋರಾ..’
ಅಂತ ನನ್ ಕಾಲಯ್ಯ
ಬಿಕ್ಕುಳುಸ್ತ ಬಿಕ್ಕುಳುಸ್ತ ಅಳಕ ಶುರು ಮಾಡಿ
ಅಯ್ನೋರ್ ಕಾಲ ಹಿಡ್ಕಂಡು ಒದ್ದಾಡುದ್ನಲ್ಲೊ..
ಆಗ ಆ ಪಂಚ ಅಂಚು
ಕ್ಯಾಕರಿಸಿ ಉಗಿತಾ ನನ್ನ ನೋಡ್ತಾ,
‘ಏ ಮೆಟ್ಟೇ ಅವತ್ತೇನಂದಾ..
ನಾ ಸುಳ್ಳೇಳಿನಾ..
ನಾ ಸುಳ್ಳು ಪಳ್ಳು ಹೇಳ್ನಾರಿ
ಆ ಸುಳ್ಳೇಳಿ ನಂಗೇನಾಕ್ಬೇಕು…’
ಅಂತ ನನ್ಕಡ ನೋಡಿ ನಗ್ತು.
ನನ್ಗ ಕಾಲಯ್ಯನ ಮಾತು
ತರಾವರಿ ಯೋಚ್ನ ಮಾಡ ತರ ಆಯ್ತು
ಅಯ್ನೋರು,
‘ಏಯ್, ಏಳ್ ಮ್ಯಾಕ್ಕೆ..
ದೇವ್ತಿತರ ಅಂದ್ರ ಏನ್ಲ, ಬಂಚೊತ್
ಎಲ್ಲಿತ್ಲ ಆ ದೇವ್ತಿ..’
‘ಅಯ್ನೋರಾ, ಯಾರ ಅನ್ತ ಕಾಣ್ಲಿ
ಅರ್ಧ ರಾತ್ರನಾಗ ಒಂದೇ
ಜಗುಲಿಲಿ ಕಾಲಾಡುಸ್ತ ಕಿರುಚ್ತಿತ್ತು
ಆ ಹುಣಸ ಮರದತ್ರ ನಂದೊಂದೆ ಮನ ಅಲ್ವ ಅಯ್ನೋರಾ.. ನನ್ ಚೆಲ್ವಿ ನೋಡ್ತಾ ಆಡುಸ್ತಾ
ನಡ್ಮನ ಒಳಕ ಹೋಗಿ ಅಲ್ಲೆ ಬುಟ್ಟು ಈಚ್ಗ ತರ್ನಿಲ್ಲ
ಚೆಲ್ವಿ ಬ್ಯಾಡ ಬ್ಯಾಡ ಅಂದ್ರು
ನಾ ಬಂದಿ ನಿಮ್ತಾವ್ ಹೇಳಂವ ಅನ್ತ
ನೀವ್ ದೊಡ್ಡೋರು
ನೀವಾವಾಗ ಶಂಕ್ರವ್ವೋರ್ ಜೊತ್ಗ
ಮಾದಪ್ಪನ ಬೆಟ್ಗ ಹೋಗಿದ್ರಿ
ನಾ ಹಿಂದುಕ್ ಬಂದು ಕುಂತಿ
ಚೆಲ್ವಿ ಕಣ್ಲಿ ಮಗಿನೇ ಇತ್ತು
ಸರಿ ನಾನೂ ಏನಾದ್ದ ಎತ್ತಾದ್ದ ಅನ್ತ
ಹೇಳ್ದೆ ಸುಮ್ನಾದಿ..’
ಅಯ್ನೋರು ಬೀಡಿ ತಗ್ದು ಹಚ್ಕಳು
ಚೆಂಗುಲಿ ಕತ್ಲೊಳ್ಗ ಓಡ್ಬಂದು
ಹೆಂಡ ಬಾಟ್ಲಿ ಕೊಡಕು ಸರಿಯಾಯ್ತು
ಬೀಡಿ ಸೇದ್ತಾ ಹೊಗೆ ಬಿಡ್ತಾ
ಸೇದ್ದಾ ಆ ಬೀಡಿ ಮೋಟು
ಕಾಲಯ್ನ ಬಾಯಿ ಸೇರ್ತು.
ಕಾಲಯ್ಯ ಕಚ್ಚಿಕೊಂಡ ಬೀಡಿ ಮೋಟಿಂದ
ಬೆಂಕಿ ಕಾಣ್ತ ರಪುಣ ರಪುಣ ಹೊಗೆ ಬರ್ತಿತ್ತು.
ಅಯ್ನೋರು ಜಾಡ್ಸಿ ನೆಲುಕ್ಕ ಒದ್ದು
ಹೆಂಡದ ಬಾಟ್ಲಿ ಬಾಯಿಗಿಟ್ಟು ಗಟಗಟನೆ
ಹೀರ್ತಾ ನನ್ಕಡ ನೋಡ್ತಾ ಇದ್ರ
ಒದ್ದ ರಬುಸುಕ್ಕ ನಾ ಮಾರ್ದೂರ ಬಿದ್ದಿದ್ದಿ.
ಚೆಂಗುಲಿ ಅದ್ಯಾಕೋ ಓಡ್ದ
ತಿರುಗ ಓಡ್ಬಂದ
ಅವನ ಕೈಲಿ ಇನ್ನೊಂದು ಅಗ್ಗರಿಸಿದ ಕಾಳಿತ್ತು
‘ಅಯ್ನೋರಾ ಬ್ಯಾಡ ಬುಡಿ
ಬ್ಯಾಡ ಬುಡಿ ಅಯ್ನೋರಾ..’
ಸವ್ವಿ ಮಾತು
ಅಯ್ನೋರ್ ತಲ ಒಳಕ ಬಂತು ಅನ್ನುಸ್ತು.
ಚೆಂಗುಲಿ ಕೈಲಿರ ಬಾಟ್ಲು ಕಿತ್ತು ಬಾಯ್ಗಿಟ್ಟು
ಹೀರಕ ಶುರು ಮಾಡುದ್ರು.
‘ಅಯ್ನೋರಾ..’
ಕಾಲಯ್ಯ ಮೋಟು ಬೀಡಿ ದಮ್ಮೆಳಿತಾ
‘ನನ್ ಚೆಲ್ವಿ ಆ ದೇವ್ತಿ ಮ್ಯಾಲ ಪ್ರಾಣ ಇಟ್ಟಳ
ನೀವು ನೋಡಿದರೆಲ್ಲ
ಆ ದೇವ್ತಿ ಅನ್ತ ಕೆಲ್ಸ ಮಾಡಿದಾ..
ಆ ದೇವ್ತಿ ನಿಮ್ಗು ಮಗುಳ್ತರ ಅಲ್ವ ಅಯ್ನೋರಾ..’
ಅಯ್ನೋರು ಚೆಂಗುಲಿ ಹೆಗುಲ್ಗ ಕೈಯಾಕಿ
ಅವನ ಬಾಯ್ಗ ಹೆಂಡ ಬಾಟ್ಲಿ ಇಟ್ರು
ಆ ಚೆಂಗುಲಿ ಅಯ್ನೋರ ಸಲ್ಗೆ ಕಂಡು
ಕುಡ್ದ ಮತ್ತಲ್ಲಿ
ಸವ್ವಿ ಅಂದ ಚೆಂದ ಕಣ್ಲಿ ಕಟ್ಟ ತರ ಹೇಳ್ತ
ಅಯ್ನೊರ್ ಹೆಗುಲ್ಗ ಕೈ ಹಾಕ್ದ.
ಚೆಂಗುಲಿ ಆಟುಕ್ಕು ಅಯ್ನೋರ್ ಪಟ್ಗು
ಕಾಲಯ್ಯ ಕಣ್ಕಣ್ ಬುಟ್ಟು ನೋಡ್ತಾ ಏಳ್ತಾ
ಕತ್ತಲಲ್ಲಿ ಕರಗಿದ್ದು ನಂಗೆ ದಿಗಿಲಾಯ್ತು.
೨೮-
ಚನ್ನೈನಬ್ಬ ವಾರ ಅದ.
ನಾಟ್ಕನು ಅವತ್ಗೆ.
ನೆನ್ನ ಊರ್ಗ ವಾಮ ಪಡಿಸಿ
ಪೀಡಮರಿ ಎಳ್ದಾಯ್ತು
ಪೀಡಮರಿ ಎಳುದ್ಮೇಲ
ಊರ್ಲಿ ಸೊಗ್ಡುಪಗ್ಡು ಅಟ್ಟಗಿಲ್ಲ
ನಾಮ್ ನೇಮ್ದಲ್ಲಿ ಇರ್ಬೇಕು.
ಅದ್ಕ ಇವತ್ತು ನಾಟ್ಕದ ಗೆಜ್ಪೂಜ
ಅದ್ಕ ಅಯ್ನೋರ ಕರಿಸಿ
ಕುರ್ಚಿ ಹಾಕಿ ಕೂರ್ಸಿ ಮರ್ವಾದಿ ಮಾಡಿದ್ರು
ನಾಟ್ಕದ ಮೇಸ್ಟ್ರು ಹಾರ್ಮನಿ ಪೂಜ ಮಾಡುದ್ರು.
ಈ ರಾತ್ರ ಪೂರ
ಕುರುಕ್ಷೇತ್ರ ನಾಟ್ಕನ ನಡು ಬೀದಿಲಿ
ಚೆಲ್ಲಿ ಚಪ್ರ ಹಾಕಂಡು
ಸೀನ್ಸಿಲ್ದೆ ಸೂಳರಿಲ್ದೆ ಆಡದು.
ಒಂದಪ ಹೆಂಗೆಂಗ್ ಮಾಡ್ದರು
ಅನ್ತ ನೋಡ್ಕಳದು ತಪ್ಪಿದ್ರ ಇಂದೇ ತಿದ್ಕಳದು.
‘ಕ್ರಿಸ್ಣಾ..’
ನಾಟ್ಕದ ಮೇಷ್ಟ್ರು ಕೂಗ್ದೇಟ್ಗೆ ಆ ಪಾತ್ರ ಮಾಡಂವ ಬಂದು ಕೈ ಮುಗಿತಾ ನಿಂತ.
ಜನ ಗೊಳ್ ಅಂದ್ರು.
‘ಅರ್ಜುನಾ..’
ಅವನೂ ಬಂದಾ.
‘ದುರ್ಯೋಧನಾ..’
ಅವನೂ ಬಂದ.
‘ಅರ್ಜುನಾ ನೀ ಇಲ್ಬಾ
ಕ್ರಿಸ್ಣಾ ನೀ ಇತ್ತಗ್ ಬಾ
ಏ ದುರ್ಯೋಧನ ಅತ್ತಗ್ ನಿಂತ್ಗ’
‘ಮೇಷ್ಟ್ರೇ ಕರ್ಣುನ್ನು ಕರೀರಿ’
ಅರ್ಜುನನ ಪಾತ್ರಧಾರಿ ಹೇಳಿದ
‘ಏಯ್ ಈ ಸೀನ್ಲಿ ಕರ್ಣ ಎಲ್ಬಂದನು
ಮೊಕ್ಕೊಡಿತಿ ನಿಂತ್ಕಳವ್..’
ಮೇಷ್ಟ್ರು ಗದರಿದರು.
ಅಯ್ನೋರು,
‘ಮೇಷ್ಟ್ರೇ ಇನ್ನು ಯಾವ್ಯಾವ್ ಸೀನು
ಹೆಂಗೆಂಗೆ ಯಾರ್ಯಾರು ಅಂತ ಗೊತ್ತಿಲ್ವ..
ನಾಟ್ಕ ವಾರದ ಗೊತ್ತಿದ್ದಾ..
ಮೂರ್ತಿಂಗ್ಳಿಂದ ಇನ್ನು ಕಲ್ತಿಲ್ವ’
ಕೆಣಕ ತರ ಅಂದ್ರು.
ಮೇಷ್ಟ್ರು ತಲ ಬಗ್ಗುಸ್ಕಂಡು
‘ಅಯ್ನೋರಾ,
ಎಲ್ಲ ನನ್ ಮಾನ ಕಳ್ಯಾಕ ಇಂಗ ಆಡ್ತಿರದು
ನೆನ್ನ ತಾನೆ ಚೆನ್ನಾಗೆ ಗೆಪ್ತಿ ಇದ್ರು
ಕುಡ್ದು ಬಂದಿರ್ಬೇಕು ಥೂ..’
ಅನ್ತ ಅರ್ಜುನ ಪಾತ್ರಧಾರಿಗೆ ಉಗುತ್ರು.
ಜನ ಈಗ್ಲೂ ಗೊಳ್ ಅಂದ್ರು.
ಹಿಂಗೆ ಆಡ್ತ ಆಡ್ತ ಒಂದು ದಾರಿಗ ಬಂದು
ಚೆನ್ನಾಗೆ ಆಡಕ ಶುರು ಮಾಡುದ್ರು.
ಮೇಷ್ಟ್ರು ಮಧ್ಯ ಮಧ್ಯ ಬಯ್ಯೋದೇ ಆಯ್ತು.
ಅಯ್ನೋರು ಪಂಚ ಮೇಲೆತ್ಗಂಡು ಮೇಲೆದ್ರು
ಆಗ ಸರೊತ್ತಾಗಿತ್ತು.
ಅಯ್ನೋರು ಎದ್ದದ ನೋಡ್ದ ಕುಲೊಸ್ತರು
ಮೇಷ್ಟ್ರ ಮೇಲುಕ್ಕರಸಿ
ಇಬ್ರಿಗು ಹೂನಾರ ಹಾಕಿ
ಅಯ್ನೋರ್ಗ ಜೈಕಾರ ಹಾಕುದ್ರು.
ಜನ ಶಿಳ್ಳ ಹೊಡಿತಾ ಕೇಕೆ ಹಾಕ್ತ
ಚೆಪ್ಪಾಳೆ ತಟ್ದಾಗ ಅಯ್ನೋರು ಮೀಸೆ ತಿರಿತಾ
‘ಚೆನ್ನಾಗಿ ಆಡ್ತಿದ್ದರಿ ಆಡಿ ಆಡಿ ಚೆನ್ನಾಗ್ ಆಡಿ’
ಅನ್ತ ಗಿರಿಕ್ಕು ಗಿರಿಕ್ಕು ಅನ್ನುಸ್ಕಂಡು ನಡುದ್ರು.
ಬೀದಿ ಕೊನ ಮುಟ್ತಿದ್ದಂಗೆ ಗವ್ಗತ್ಲಲ್ಲಿ
ಮೇಗಲ ಬೀದಿಲಿ
ಯಾರೊ ಹೊಯ್ತಿರತರ ಆಯ್ತು
ಅಯ್ನೋರು ನೋಡುದ್ರು
ನಂಗು ರಪಣ ಕಾಣ್ತು
ಹಂಗೇ ಬೀದಿ ಸವಿಸ್ತಾ
ಹತ್ತತ್ರ ಬರಾಗ ಚೆಂಗುಲಿ ಕಂಡ್ನಲ್ಲಾ..
ಅಯ್ನೋರು,
‘ಲೇ ಇಲ್ಲೇನಾ ಮಾಡ್ತ ಇರದು..
ಗೆಜ್ಪೂಜ್ಗಲಿ ನೋಡ್ದಂಗಿರ್ನಿಲ್ಲ..
ಇದ್ಯಾಕಲೇ ಬೀದ್ಬೀದಿ ಅಲಿತಿದೈ
ಇದೇನಲೈ ನಿನ್ ತಿರುಕ್ ಬುದ್ದಿ’
ಅಂದೇಟ್ಗೆ ಚೆಂಗುಲಿ ವರಸೆನೆ ಬದಲಾದ್ದ
ಅಯ್ನೋರು ಕಂಡ್ರು.
ನಂಗ
ಈ ಚೆಂಗುಲಿ ಬಡ್ಡೆತದು ಯಾಕ್ಬಂತು ಅನ್ಸಿ
ಅವತ್ತು ಆಲ್ದೆಲ ನೊರಕ ನೊರಕ
ಅಂದುದು ಗೆಪ್ತಿಗ ಬಂದು
ತಲ ಒಳಗ ಹುಳಾಡಕ ಶುರುವಾಯ್ತು.
-ಎಂ. ಜವರಾಜ್
ಮುಂದುವರಿಯುವುದು…