ಮೆಟಾಫಿಸಿಕಲ್ ಸ್ಕೂಲ್‍ನ ಪ್ರಮುಖ ಇಂಗ್ಲೀಷ ಕವಿ ಜಾನ್ ಡನ್. 1572ರ ಜನವರಿ 24ರಿಂದ ಜೂನ 19 ರ ಮಧ್ಯಭಾಗದಲ್ಲಿ ಲಂಡನ್ನಿನಲ್ಲಿ ಜನಿಸಿದ ಜಾನ್ ಡನ್. ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ್ದ. ಡನ್‍ನ ತಂದೆ ಇಜಾಕ್ ವಾಲ್ಟನ್ ಎಂಬಾತ ಶ್ರೀಮಂತ ವ್ಯಾಪಾರಿಯಾಗಿದ್ದ. ಆದರೆ ಡನ್ ತನ್ನ ತಂದೆಯನ್ನು ತನ್ನ ನಾಲ್ಕನೇ ವಯಸ್ಸಿಗೆ ಕಳೆದುಕೊಂಡ. ತಾಯಿ ಸರ್ ಥಾಮಸ್ ಮೋರ್‍ನ ಸಹೋದರಿ, ನಾಟಕಕಾರ ಜಾನ್ ಹೇವುಡ್‍ನ ಪುತ್ರಿಯಾಗಿದ್ದು ಪತಿ ಇಜಾಕ್‍ನ ಮರಣದ ನಂತರ ಡಾ. ಜಾನ್ ಸೈಮಂಜೆಸ್‍ನನ್ನು ಮರುವಿವಾಹವಾದಳು. ಹೀಗಾಗಿ ಡನ್ ತನ್ನ ಬಾಲ್ಯವನ್ನು ತನ್ನ ಮಲತಂದೆ ಸೈಮಂಜಸ್‍ನ ಪಾಲನೆಯಲ್ಲಿ ಕಳೆದ. ಹನ್ನೆರಡನೇ ವಯಸ್ಸಿಗೆ ಆಕ್ಸಫರ್ಡ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಮುಗಿಸಿ ನಂತರ ಕೇಂಬ್ರಿಜ್ಡ್ ಯುನಿವರ್ಸಿಟಿ ಸೇರಿದರೂ ಪದವಿಯನ್ನು ಪೂರ್ಣಗೊಳಿಸಲಾಗಲಿಲ್ಲ. ಕಾರಣ ಪ್ರೋಟೆಸ್ಟಂಟ್ ರಾಣಿ ಎಲಿಜಬೆತ್‍ಗೆ ನಿಷ್ಠತೆಯನ್ನು ಕುರಿತು ಶಪಥ ಮಾಡಬೇಕಿತ್ತು. ಹಾಗಾಗಿ ತನ್ನ ಅಧ್ಯಯನದ ದಾರಿಯಲ್ಲಿ ಆತ ಸ್ಪೇನ್, ಇಟಲಿ ಮುಂತಾದ ಕಡೆಗಳಿಗೆ ಸುತ್ತಿ ಪುನಃ ಲಂಡನ್ನಿಗೆ ಹಿಂದಿರುಗಿ ಲಾ ಅಧ್ಯಯನ ಮಾಡಿದ.
ಆನಂತರ ಲಂಡನ್ನಿನಲ್ಲಿ ಸರ ಥಾಮಸ್ ಎಗರಟನ್ ಎಂಬ ಶ್ರೀಮಂತನಲ್ಲಿ ಕೆಲಸಕ್ಕೆ ಸೇರಿದ ಡನ್ ಆ ಮನೆಯ ಸದಸ್ಯನಂತೆ ಪರಿಗಣಿಸಲ್ಪಟ್ಟಿದ್ದ. ಎಗರಟನ್ ತುಂಬಾ ಪ್ರೀತಿಯಿಂದ ಡನ್‍ನನ್ನು ಆಧರಿಸುತ್ತಿದ್ದ. ಡನ್‍ನ ವ್ಯಕ್ತಿತ್ವ ಶಿಸ್ತುಬದ್ಧ ಜೀವನ ಶೈಲಿ,ಸಾಹಿತ್ಯ ಗೀಳು ಎಲ್ಲವೂ ಆತನನ್ನು ಆಕರ್ಷಿಸಿದ್ದವು. ಆದರೆ ಆ ಮನೆಯಲ್ಲಿ ಕೆಲಸ ಮಾಡುತ್ತಲೇ ಡನ್ ಥಾಮಸ್ ಎಗರಟನ್‍ನ ಎರಡನೇ ಪತ್ನಿಯ ಸೋದರ ಸಂಬಂಧಿಯಾದ ಆನ್ನಿ ಮೋರಳನ್ನು ಪ್ರೀತಿಸತೊಡಗಿದ. ಇದು ಎಗರಟನ್ ಕುಟುಂಬಕ್ಕೆ ಇಷ್ಟವಿರಲಿಲ್ಲ. ಹೀಗಾಗಿ ಕುಟುಂಬದ ವಿರೋಧದ ನಡುವೆಯೂ ಇವರಿಬ್ಬರೂ ವಿವಾಹವಾದರು. ಡನ್ ತನ್ನ ಕೆಲಸ ಕಳೆದುಕೊಂಡ. ಯಾವೊಂದು ಬೆಂಬಲವೂ ಇಲ್ಲದೇ ಡನ್ ತನ್ನ 30 ನೇ ವಯಸ್ಸಿಗೆ ಬದುಕಿನ ಸತ್ಯಗಳನ್ನು ಎದುರಿಸುವ ಸಂಕಟಗಳು ಎದುರಾದವು. ಅಲ್ಲಿಂದ ಹತ್ತು ವರ್ಷಗಳ ಕಾಲ ಡನ್ ಕೆಲಸಕ್ಕೋಸ್ಕರ ಅಲೆದಾಡಿದ. ತೀರಾ ಬಳಲಿದ. ಬಡತನ, ಇತರರ ಕರುಣೆ ಕೃಪೆಗಳ ನಡುವೆ ಆತನ ಬದುಕು ಏರಿಳಿತಗಳ ಜೊತೆಗೆ ಸಾಗುತ್ತಿತ್ತು. ಇತ್ತ ದಾಂಪತ್ಯದ ಕುರುಹುಗಳಾಗಿ ಕುಟುಂಬದ ಗಾತ್ರವೂ ಹಿಗ್ಗಿತ್ತು. ಆನಿ ಹನ್ನೆರಡು ಮಕ್ಕಳನ್ನು ಹೆತ್ತಿದ್ದರೂ ಐದು ಮಕ್ಕಳು ಬಾಲ್ಯದಲ್ಲಿಯೇ ಅಸುನೀಗಿದ್ದರು. ಡನ್ ತನ್ನ ಪತ್ನಿ ಆನ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. “Because I have transplanted [her] into a wretched fortune, I must labour to disguise that from her by all such honest devices, as giving her my company, and discourse.” ತನ್ನ ಪ್ರೀತಿಸಿದ್ದ ಕಾರಣ ದುರಾದೃಷ್ಟದ ಬದುಕನ್ನು ಆನ್ನಿ ನಡೆಸಬೇಕಾಯಿತೆಂಬ ಕೀಳಿರಿಮೆ ಆತನ ಕಾಡುತ್ತಿತ್ತು.
ತನ್ನ ಬದುಕಿನ ತುಂಬಾ ಕಹಿಯನ್ನೆ ಉಣ್ಣುತ್ತಿದ್ದರೂ, ದೇವಶಾಸ್ತ್ರದ ಬಗ್ಗೆ, ಫಿರಂಗಿ ಕಾನೂನುಗಳ ಬಗ್ಗೆ, ಕ್ಯಾಥೋಲಿಕ ವಿರೋಧಿ ವಿವಾದಾತ್ಮಕ ಸಂಗತಿಗಳ ಬಗ್ಗೆ ಅಧ್ಯಯನ, ಬರವಣಿಗೆಗಳನ್ನು ನಡೆಸಿದ. ಹಲವಾರು ಪ್ರೇಮ ಕವಿತೆಗಳು,ಧಾರ್ಮಿಕ ಗೀತೆಗಳು, ತನಗೆ ಆಸರೆಯಾದ ಜನರ ಕುರಿತು ಕೃತಜ್ಞತೆಯ ಕವನಗಳು, ಹೀಗೆ ಬರೆಯುತ್ತಲೇ ಹೋದ. ಆತನ ಉದ್ಯೋಗದ ಹುಡುಕಾಟವೂ ನಿರಂತರ ನಡೆದೇ ಇತ್ತು. 1614ರಲ್ಲಿ ಡನ್ ಕೋರ್ಟವೊಂದರಲ್ಲಿ ಕೆಲಸ ಮಾಡುವ ಆಶೆಗೆ ಸ್ವತಃ ರಾಜ ಒಂದನೇಯ ಜೇಮ್ಸ ಸಮ್ಮತಿಸಲಿಲ್ಲ. ದೊರೆ ಚರ್ಚಿನ ಹೊರತಾಗಿ ಉಳಿದ ಕಾರ್ಯಕ್ಕೆ ಡನ್‍ನ ನಿಯುಕ್ತಿ ಸಾಧ್ಯವಿಲ್ಲವೆಂದ. ಹೀಗಾಗಿ ಡನ್ ಪವಿತ್ರ ಕಾರ್ಯಕ್ಕೆ ಒಪ್ಪಿಕೊಳ್ಳಬೇಕಾಯ್ತು. 1615ರಲ್ಲಿ ರಾಜನ ಅಣತಿಯಂತೆ ಕೆಂಬ್ರಿಜ್ಡ್‍ನಿಂದ “ಡಾಕ್ಟರ್ ಆಫ್ ಡಿವಿನಿಟಿ” ಯಲ್ಲಿ ಪದವಿ ಪಡೆದು ರಾಯಲ್ ಚಾಪ್ಲಿನ್ ಆದ. ಆದರೆ ಡನ್ ಬದುಕಿನ ಸಂಕಟಗಳು ಕಡಿಮೆಯಾಗಿರಲಿಲ್ಲ. ಎರಡು ವರ್ಷಗಳ ತರುವಾಯ 1617ರಲ್ಲಿ ಪ್ರೀತಿಯ ಪತ್ನಿ ಆನ್ನಿ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ತನ್ನ 33ನೇ ವರ್ಷದಲ್ಲಿ ತೀರಿಹೋದಳು. ತನ್ನ ಭಾವನಾತ್ಮಕ ಕೊಂಡಿ ಕಳೆದುಕೊಂಡಿದ್ದ ಡನ್ ಮತ್ತೆಂದೂ ವಿವಾಹವಾಗುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ. ತನ್ನ ಮಕ್ಕಳ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಆತನ ಮೇಲಿತ್ತು. 1621ರಲ್ಲಿ ಸೇಂಟ್ ಪೌಲ್ಸ್ ಕ್ಯಾಥಡ್ರಲ್‍ನ ಡೀನ್ ಆಗಿ ನೇಮಿಸಲ್ಪಟ್ಟ. ಕ್ರಮೇಣ ದೈವಿಕ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡ ಡನ್ ಆ ಕಾಲದ ಶ್ರೇಷ್ಠ ಪ್ರವಚನಕಾರನಾಗಿ ಬೆಳೆದುಬಂದ. ದೊರೆ ಒಂದನೇಯ ಜೇಮ್ಸ್ ಹಾಗೂ ಚಾಲ್ರ್ಸರಿಂದ ಮನ್ನಣೆಗೆ ಪಾತ್ರನಾಗಿದ್ದ. 1631ರಲ್ಲಿ ಉದರದ ಕ್ಯಾನ್ಸರಿಗೆ ಬಲಿಯಾದ ಡನ್ ಕೊನೆಯ ಕ್ಷಣದವರೆಗೂ ತನ್ನನ್ನು ಪ್ರವಚನಗಳಲ್ಲಿ ತೊಡಗಿಸಿಕೊಂಡಿದ್ದ. ಇಂಗ್ಲೀಷ ಕಾವ್ಯ ಪರಂಪರೆಗೆ ತನ್ನದೇ ಕಾಣಿಕೆ ನೀಡಿದ್ದ.
ಹದಿನಾರನೇ ಶತಮಾನದ ಉತ್ತರಾರ್ದದ ಕಾಲ. ನಿಜಕ್ಕೂ ಕವಿತೆ ಹೇಗಿರಬೇಕು? ಎಂಬ ವಿಚಾರದಲ್ಲಿ ಆ ಕಾಲದ ಕವಿತೆಗಳ ಸ್ಥಿತಿಗತಿ ಕುರಿತು ಹೇಳುವುದಾದರೆ ಕವಿತೆ ತೀರಾ ಅಶಕ್ತ ಅಭಿವ್ಯಕ್ತಿಯಾಗಿತ್ತು. ಸಡಿಲವಾದ ಹೆಣಿಗೆ ಇದ್ದು, ವಸ್ತು ಸಂಗತಿಗಳು ಕೂಡಾ ಉತ್ಕøಷ್ಟವಾಗಿರಲಿಲ್ಲ. ಏಕತಾನತೆಯಿಂದ ಕೂಡಿದ್ದು, ಪುನರಾವರ್ತಿತ ಸಂಗತಿಗಳನ್ನೆ ಚರ್ಚಿಸುತ್ತಿತ್ತು. ಅದಕ್ಕೆ ಹೊಸ ಹೊಳಪ ನೀಡುವ ಪ್ರಯತ್ನಗಳೇ ನಡೆಯುತ್ತಿರಲಿಲ್ಲ. ಕವಿತೆ ಬರಿಯ ಆಲಂಕಾರಿಕವಾಗಿತ್ತೇ ಹೊರತು ಒಳ ಅಂತರ್ಗತ ಹೊಳವುಗಳ ನೀಡುತ್ತಿರಲಿಲ್ಲ. ಕವಿತೆಗಳಲ್ಲಿಯ ಭೌದ್ಧಿಕ ಭಾವ ಸಾರ ಸತ್ವದ ಕೊರತೆಯ ಕಾರಣ ಕಾವ್ಯ ಸಂಭಾಷಣೆಗಳು ನಿರ್ಜೀವ ಮತ್ತು ಅನುಪಯುಕ್ತ ಎನಿಸಿದ್ದವು. ಅನುಭವದ ಮೂಸೆಯಿಂದ ಹುಟ್ಟದ ಕೃತಕತೆಯ ಕಾರಣ ಸಂಕುಚಿತ ಪರಧಿಯಲ್ಲಿ ಕಟ್ಟಿದಂತಿದ್ದವು. ಬದುಕಿನಿಂದ ಸಾಕಷ್ಟು ದೂರವೇ ಉಳಿದ ಕವಿತೆಗಳು ನಿಜ ಜೀವನದ ಸಂಬಂಧಗಳನ್ನು ಬೆಸೆಯುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೊದಲಿನ ಕವಿತೆಗಳಿಗೆ ಸಂವಾದಿಯಾಗಿ ಸಮಾನವಾಗಿ ಒಂದಿಷ್ಟು ಕವಿಗಳ ಗುಂಪು ಜಾನ್ ಡನ್‍ನ ಮುಂದಾಳತ್ವದಲ್ಲಿ ಎದ್ದು ಬಂತು. ಆ ಶತಮಾನದ ಬೇರೆ ಬೇರೆ ದಶಕಗಳ ಉದ್ದಕ್ಕೂ ಸಾಂಪ್ರದಾಯಿಕ ಹೆಣಿಗೆಗಳನ್ನು ಬದಿಗೊತ್ತಿ, ಹೊಸ ನವೀನ ಶೈಲಿಯನ್ನು ರೂಢಿಸಿಕೊಂಡು ಮೂಡಿಬಂದ ಕವಿತೆಗಳೇ “ಮೆಟಾಫಿಸಿಕಲ್ ಕವಿತೆಗಳು” ಜಾನ್ ಡನ್ ಈ ಕವಿತೆಗಳ ಆದ್ಯ ಕವಿ ಎನ್ನಬಹುದಾದರೂ,ಆತನಿಗೆ ಮೊದಲೆ ಈ ಕಾವ್ಯ ಮಾದರಿ ಬರೆಯಲ್ಪಟ್ಟಿದ್ದರೂ ಅವುಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಜಾನ್ ಡನ್ ಮತ್ತಾತನ ಪ್ರಭಾವಕ್ಕೆ ಒಳಗಾದ ಜಾರ್ಜ ಹರ್ಬರ್ಟ, ಹೆನ್ರಿ ವ್ಯಾಗನ್, ಆಂಡ್ರ್ಯೂ ಮಾರವೆಲ್ ಮುಂತಾದವರು ಇವರೆಲ್ಲ ತಮ್ಮ ಭಿನ್ನ ಕ್ಷೇತ್ರದ ಜ್ಞಾನದ ಸರಕುಗಳನ್ನು ಕಾವ್ಯದ ಹೃದಯಕ್ಕೆ ಹೊಂದಿಸಿ ಕವಿತೆಯ ಆಯಾಮಗಳನ್ನು ವಿಸ್ತøತಗೊಳಿಸಿದರು. ಹೊಸ ಬಣ್ಣವನ್ನು ತಂದುಕೊಟ್ಟರು. ಆದರೆ ಕವಿತೆಗಳು ಸಾಮಾನ್ಯನಿಗೆ ಸುಲಭಕ್ಕೆ ದಕ್ಕಲಾರದಂತೆ ಸೂಚ್ಯತೆಯ ಅಂಗಿ ತೊಟ್ಟಿದ್ದವು. ಓದುಗನ ಜ್ಞಾನ, ಸಾಮಥ್ರ್ಯದ ಮೇಲೆ ಕವಿತೆ ಅವನಿಗೆ ಅರಗಿಸಿಕೊಳ್ಳುವಷ್ಟೇ ದಕ್ಕುತಿತ್ತು.
ಇವೆಲ್ಲದರ ಕಾರಣದಿಂದ ಈ ಮೆಟಾಫಿಸಿಕಲ್ ಕವಿತೆಗಳು ಬಹುಕಾಲದವರೆಗೆ ಮುನ್ನೆಲೆಗೆ ಬರಲಾಗಲೇ ಇಲ್ಲ. ಆದರೆ ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಜಾನ್ ಡನ್ ಇಂಗ್ಲೀಷ ಕಾವ್ಯ ಪರಂಪರೆಯ ಮಹತ್ವದ ಕವಿ ಎಂದು ಗುರುತಿಸಲ್ಪಟ್ಟ. ಮೆಟಾಫಿಸಿಕಲ್ ಕಾವ್ಯದ ಯೋಗ್ಯತೆಯ ಅರಿವಾಗುತ್ತಲೇ ಶ್ರೇಷ್ಟ ವಿಮರ್ಶಕರಾದ ಹೆಲನ್ ಗಾರ್ಡನರ್, ಗೇಸೆನ್ಸ್ ಮುಂತಾದವರು ಈ ಕ್ಷೇತ್ರದಲ್ಲಿ ಕೆಲಸಮಾಡಿದರು. ಮೆಟಾಫಿಸಿಕಲ್ ಕವಿತೆಗಳ ಸಂಕಲನವೊಂದನ್ನು ಹೊರತಂದರು. ಪ್ರತಿ ಕವಿಗಳ ಕಾವ್ಯಗಳನ್ನು ವೈಯಕ್ತಿಕವಾಗಿ ವಿಮರ್ಶೆಗಳಿಗೆ ಒಳಪಡಿಸಿದರು. ಶ್ರೇಷ್ಠ ವಿಮರ್ಶಕ ಕವಿ ಟಿ. ಎಸ್ ಎಲಿಯಟ್ ಕೂಡಾ ಆಧುನಿಕ ಮನಸ್ಸುಗಳಿಗೆ ಈ ಮೆಟಾಫಿಸಿಕಲ್ ಕವಿತೆಗಳ ವಿಲಕ್ಷಣ ಅನಿವಾರ್ಯತೆಯನ್ನು ಎತ್ತಿ ಹೇಳಿದರು.
ಜಾನ್ ಡನ್ ಬರೆದ ಕವಿತೆಗಳು ಸುಂದರವಾದ ಕಲ್ಪನೆಯ ಹೂರಣಗಳು. ತನ್ನ ಪರಿಕಲ್ಪನೆಗಳನ್ನು ಆತ ಬರಿಯ ನೈಸರ್ಗಿಕ ಚೆಲವಿನಿಂದ ಮಾತ್ರ ಎರವಲು ಪಡೆಯದೇ ಭೂಗೋಳ, ಖಗೋಳ, ತತ್ವಜ್ಞಾನ ರಸಾಯನ ಶಾಸ್ತ್ರ ಸಿದ್ದಾಂತ ತತ್ವಗಳಿಂದಲೂ ಪದಗಳ ಕಡ ಪಡೆಯುವುದರಿಂದ ಶಿಕ್ಷಿತ ಸಮಾಜ ಆತನ ಕವಿತೆಗಳ ಆರಾಧಿಸಿತು.
–ನಾಗರೇಖಾ ಗಾಂವಕರ