“ತೆರೆಮರೆಯ ಕಲೆಗಾರ ಅಪ್ಪ”: ಕವಿತಾ ಜಿ. ಸಾರಂಗಮಠ

‘ಬದುಕಿನ ಪುಟಗಳಲ್ಲಿ
ಭರವಸೆಯ ಹಾದಿಯಲ್ಲಿ
ನೂರು ಕನಸ ಹೊತ್ತು
ಸಾಗಿಹನು. .
ತಾ ಲಾಲಿಸಿದ ಮಕ್ಕಳಿಗೆ. . ‘

ಅಪ್ಪ ಎಂದರೆ ಭಯ, ಆತಂಕ, ಗೊಂದಲ, ಕೋಪ, ಪಕ್ಷಪಾತಿ ಎಂಬಿತ್ಯಾದಿ ಭಾವನೆಗಳ ಚಿತ್ರ ಎಲ್ಲ ಮಕ್ಕಳ ಮನದಲ್ಲಿ ಮೂಡಿರುತ್ತದೆ. ಆದರೆ ವಾಸ್ತವವೇ ಬೇರೆ. “ಅಪ್ಪ ಎಂದರೆ ಮಕ್ಕಳ ಪಾಲಿನ ಅದ್ಭುತ ಶಕ್ತಿ. ಉತ್ತಮ ಸ್ಥಾನ, ಮಾನ, ನಾಗರೀಕತೆಯ ಹಿರಿಮೆಯನ್ನು ಸಮಾಜದಲ್ಲಿ ಮಕ್ಕಳಿಗೆ ತಂದುಕೊಡುವ ದಿವ್ಯ ಚೇತನ”

ನಾವೆಲ್ಲ ಅಮ್ಮನ ಬಗ್ಗೆ ಚಿಂತಿಸುತ್ತೇವೆ. ಅವಳ ತ್ಯಾಗ, ಹೋರಾಟ, ಹಿರಿಮೆ ಹೀಗೆ. . ಅವಳಿಗೆ ಸರಿಸಾಟಿಯಿಲ್ಲ ಎಂಬುದು ನಿಜವೇ. ಅವಳನ್ನು ಪದಗಳಲ್ಲಿ ಕಟ್ಟಿ ಹಾಕಲು ಅಸಾಧ್ಯ. ಆದರೆ ತಾಯಿಗಿಂತಲೂ ತಂದೆಯ ತ್ಯಾಗವು ಪ್ರತ್ಯೇಕರ ಬದುಕಿನಲ್ಲಿ ಇರುತ್ತದೆ. ಅದನ್ನು ಗುರುತಿಸುವುದರಲ್ಲಿ ಎಷ್ಟೋ ಬಾರಿ ಎಡವುತ್ತೇವೆ. ತಾಯಿಯ ಮಮತೆ, ಪ್ರೀತಿಯಷ್ಟೇ ತಂದೆಯು ತನ್ನ ಮಕ್ಕಳ ಮೇಲೆ ಇಟ್ಟಿರುತ್ತಾರೆ. ಬದುಕಿನ ಅಂತ್ಯದ ವರೆಗೂ ಅವನು ಮಾಡಿದ ತ್ಯಾಗಗಳು ಅಪಾರ. . . .

ಮಕ್ಕಳ ಭವಿಷ್ಯಕ್ಕೆ ತಾನು ಮಾಡಬೇಕಾದ ಕರ್ತವ್ಯಗಳನ್ನು ತನ್ನ ಶಕ್ತಿ ಮೀರಿ ಪೂರೈಸಲು ಪ್ರಯತ್ನಿಸುತ್ತಾನೆ. ಅಮ್ಮ ತುತ್ತಿಟ್ಟು ಪಾಲಿಸಿದರೆ ಅಪ್ಪ ಬೆರಳು ಹಿಡಿದು ನಡಿಗೆ ಕಲಿಸುವ. ಗಂಡಾಗಲಿ ಹೆಣ್ಣಾಗಲಿ ಯಾವ ತಾರತಮ್ಯ ತೋರದೆ ಅವರ ಅಗತ್ಯತೆಗಳ ಪೂರೈಸುವ. ಒಂದುವೇಳೆ ಪೂರೈಸಲಾರದ ಸ್ಥಿತಿ ಒದಗಿದಾಗ ತನ್ನ ಪ್ರಾಣ ಪಣಕ್ಕಿಟ್ಟು ಹೋರಾಡುವ. ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಧೃತಿಗೆಡದೆ ನಿಭಾಯಿಸುವ ಚತುರ. . . .

ಜೀವನದ ಏಳುಬೀಳಿನ ದಾರಿಯಲ್ಲಿ ತನ್ನ ನೋವುಗಳನ್ನು ನುಂಗಿ ಮಕ್ಕಳಿಗೆ ಕಷ್ಟ ಬರದಂತೆ ನೋಡಿಕೊಳ್ಳುವ. ಅಕಸ್ಮಾತ್ ಕಷ್ಟ ಎದುರಾದರೂ ಎದೆಯೊಡ್ಡಿ ನಿಂತು ಅವರ ಪಾಲಿಗೆ ಸುಖದ ಮಳೆ ಸುರಿಸುವ. . ಅವರ ಸಂತೋಷಕ್ಕೆ ಶತತ ಮೀರಿ ಸತತ ಹೋರಾಡುವ. ಕೂಲಿಕಾರ, ಕಾರ್ಮಿಕ, ಜವಾನ, ಅಟೆಂಡರ್ ಅಷ್ಟೇ ಏಕೆ ಶೂ ಪಾಲಿಶ್, ಚಮ್ಮಾರ, ಕಮ್ಮಾರ, ಕುಂಬಾರ ವೃತ್ತಿ ಭೇದಗಳಿಲ್ಲದೆ ಪ್ರಾಮಾಣಿಕತೆಯಿಂದ ದುಡಿದು ದುಡ್ಡು ಮಾಡುತ್ತ ಮಕ್ಕಳ ಹೊಟ್ಟೆ, ಬಟ್ಟೆ, ಶಿಕ್ಷಣ, ನೌಕರಿ, ಮದುವೆಗಳಿಗಾಗಿ ಖರ್ಚು ಮಾಡುವ ಶ್ರಮಜೀವಿ. .

ಅದೆಷ್ಟೋ ಬಾರಿ ತನಗೆ ಹಾಕಿಕೊಳ್ಳಲು ಉಡುಪು ಇಲ್ಲದಿದ್ದರೂ ಮಕ್ಕಳಿಗಾಗಿ ಹೊಸ ಉಡುಪು ಕೊಡಿಸಿ ; ಅವರ ಉಡುಪಿನ ಸಂಭ್ರಮಿಸುವಿಕೆಯಲ್ಲಿ ತನ್ನ ಅಂಗಿಯ ತೂತುಗಳನ್ನು ಮರೆತು ಬಿಡುವ. ಮಕ್ಕಳ ಆಸೆ ಕೈಗೂಡದಿದ್ದಾಗ ಹೆಚ್ಚಿನ ಕಾರ್ಯ ನಿರ್ವಹಿಸಿ ಅವರ ಆಸೆ ಈಡೇರಿಸುವ ಧೀರ ಅಪ್ಪ. ವಿಧಿಬರಹದೊಂದಿಗೆ ಹೊರಾಡಿ, ದೇವರ ಹತ್ತಿರ ಬೇಡಿ ಮಕ್ಕಳ ಸುಖದ ಬೆನ್ನೆಲುಬಾಗುವ. ಮಕ್ಕಳಿಗೆ ಉಣಬಡಿಸಿ ಅಂಬಲಿಯ ಗಡಿಗೆ ಖಾಲಿಯಾದಾಗ ತನಗೆ ಹಸಿವಿಲ್ಲವೆಂದು ಮಡದಿಗೆ ಸಾಥ್ ನೀಡಿ ನೀರುಕುಡಿದು ತನ್ನ ಹಸಿವು ಮರೆಮಾಚುವ ಕಲೆಗಾರ. .

ಮಕ್ಕಳು ತಪ್ಪಿ ನಡೆದಾಗ ಏರು ಧ್ವನಿಯಲ್ಲಿ ಗದರಿ, ಅವರು ಅಳುವಾಗ ಅವರ ರಮಿಸಲು ಚಾಕಲೇಟ್, ಗೋಭಿ, ಸೇವ್ ಪೂರಿ ಮುಂತಾದ ತಿನಿಸು ಕೊಡಿಸುವುದರಲ್ಲೇ ಕ್ಷಮೆ ಕೇಳಿ ಪಶ್ಛಾತಾಪ ಪಡುವ. ಮಕ್ಕಳ ಪ್ರಗತಿ, ಅವರ ಸ್ವಾತಂತ್ರ್ಯಕ್ಕಾಗಿ ಹಣದ ಹೊಳೆ ಹರಿಸಿ ಸಾಲ ತೀರಿಸಲು ಚಪ್ಪಲಿ ಸವೆಸುವ. ಉತ್ತಮ ದಾರಿಯಲ್ಲಿ ನಡೆವ, ಸಲಹೆ, ಮಾರ್ಗದರ್ಶನ ಗಳನ್ನು ಬದುಕಿನುದ್ದಕ್ಕೂ ನೀಡುವ. .

ಅಪ್ಪನ ಕುರಿತು ಹೇಳಹೊರಟರೆ ಜೀವಮಾನವೂ ಸಾಲದು. ಮಕ್ಕಳ ಶೈಶವ, ಬಾಲ್ಯ, ಯೌವನ, ಪ್ರೌಢ, ವೃದ್ಧಾಪ್ಯ ಹಂತಗಳಿಗೆ ಭದ್ರ ಬುನಾದಿ ಹಾಕುವ . ಬಾಲ್ಯ ಮುಗಿಸಿ ಯೌವನಕ್ಕೆ ಕಾಲಿಡುವ ಹೊತ್ತಿಗೆ ಅವನ ಅರ್ಧ ಆಯುಷ್ಯ ಕಳೆದೇ ಹೋಗಿರುತ್ತದೆ. ಗಂಡು ಮಕ್ಕಳಿದ್ದರೆ ಮಗ ಎಲ್ಲಿ ದಾರಿತಪ್ಪಿ ನಡೆಯುವನೋ ಏನೋ ಎಂಬ ಆತಂಕ. ಹೆಣ್ಣುಮಕ್ಕಳಿದ್ದರೆ ಉತ್ತಮ ವರನ ಹುಡುಕಿ ಮದುವೆ ಮಾಡುವುದು. ಅವನ ಈ ನಿಲುವಿನಲ್ಲಿ ಸ್ವಲ್ಪ ಏರುಪೇರಾದರೂ ತನ್ನ ಸ್ವಾಭಿಮಾನ ಪಣಕ್ಕಿಟ್ಟು ಮಗಳ ಬಾಳ ಸರಿದೂಗಿಸಲು ಹೆಣಗುವ. ಒಂದುವೇಳೆ ವಿಫಲವಾದರೆ ನಿರಂತರ ಹೋರಾಡಿ ಯಶ ಕಾಣುವ.

ಮಗನಿಗೆ ಮದುವೆ ಆಗಿ ಮನೆಗೆ ಸೊಸೆ ಬಂದ ಮೇಲಂತೂ ಅವನ ಪಾಡು ಹೇಳತೀರದು. ಮನೆಯವರೆಲ್ಲರಿಂದ ತಿರಸ್ಕಾರಗಳ ಸುರಿಮಳೆ. ಕೊನೆಗಾಲದ ನೆಮ್ಮದಿಗೂ ಆತ ಪರದಾಡುವ ಪರಿಸ್ಥಿತಿ. ತನ್ನ ಮಕ್ಕಳಿಗಾಗಿ ತ್ಯಾಗದ ಸರಮಾಲೆಯನ್ನೇ ಹೊತ್ತುಕೊಂಡ ಅವನಿಗೆ ವೃದ್ಧಾಪ್ಯವೂ ಗೋಳಾಗಿಬಿಡುವುದು.

ಬದುಕಿನುದ್ದಕ್ಕೂ ಒಂದಲ್ಲಾ ಒಂದು ರೀತಿಯ ಕಷ್ಟಗಳನ್ನು ಎದುರಿಸುವ ಅಪ್ಪ ಕೊನೆಗೆ ಯಾರಿಗೂ ಅರ್ಥವಾಗದೇ ಉಳಿದು ಬಿಡುವ. ಅವನು ಮಾಡಿದ ಎಲ್ಲ ತ್ಯಾಗಗಳು ಗೌಣ. ಬದುಕಿನ ಸಂಘರ್ಷಗಳಿಗೆ ಮಿತಿಯಿಲ್ಲದೇ ಅಪ್ಪ ಯಾರಿಗೂ ಅರ್ಥ ವಾಗದೇ ಕೊನೆಯುಸಿರೆಳೆಯುವ. . .
ಅಪ್ಪ ಎಂದರೆ ,
“ಒಬ್ಬ ಕನಸುಗಾರ. . . .
ಬದುಕು ಕಲಿಸುವ ಕಲೆಗಾರ. .
ಮಕ್ಕಳ ಭವಿಷ್ಯ ರೂಪಿಸುವ ಹಠಗಾರ
ಪರಿವಾರದ ಒಳಿತಿಗಾಗಿ ಚಿಂತಿಸುವ
ಸರದಾರ. .
ವೈಶಿಷ್ಟ್ಯಗಳ ಖನಿ. .
ನಿಸ್ವಾರ್ಥ, ನಿರ್ಮಲ ಹೃದಯಿ ಅಪ್ಪ. . !

ಹೀಗೆ ಅಪ್ಪನ ಕುರಿತು ಹೇಳುವುದೆಂದರೆ ಸಂಭ್ರಮ. ನನ್ನ ಬದುಕಿನ ನನ್ನ ಇಂದಿನ ವೃತ್ತಿ ಹಂತಕ್ಕೆ ಅವರೇ ಕಾರಣ. ನಾ ಅವರ ಹೆಮ್ಮೆಯ ಮಗಳೆಂದು ಹೇಳುವುದೇ ನನಗೊಂದು ಹಿರಿಮೆಯ ಗರಿ. ಇಂಥ ನನ್ನ ತಂದೆಗೆ ಇಂದು ಜನ್ಮದಿನದ ಸಡಗರ. ಅವರು ನಗುನಗುತಾ ಆರೋಗ್ಯದಿಂದ ಬದುಕು ಸಾಗಿಸಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. . ಅವರು ನನ್ನೊಟ್ಟಿಗಿದ್ದರೆ ಸೋಲು ಎಂಬ ಪದ ಹತ್ತಿರವೂ ಸುಳಿಯದು.

ತಂದೆಯ ಪಾತ್ರ ಬದುಕಿನಲ್ಲಿ ಬಹುಮುಖ್ಯ. ಅದು ಎಲ್ಲರಿಗೂ ದೊರಕಲಿ. ಎಲ್ಲರ ಬದುಕಿನ ಹಿರೋ ಅಪ್ಪಂದಿರಿಗೆ ನನ್ನೀ ಲೇಖನ ಅರ್ಪಣೆ. .

ಕವಿತಾ ಜಿ. ಸಾರಂಗಮಠ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಶಿವಮೂರ್ತಿ.ಹೆಚ್.
ಶಿವಮೂರ್ತಿ.ಹೆಚ್.
3 years ago

ಅತ್ಯುತ್ತಮ ಲೇಖನ…

1
0
Would love your thoughts, please comment.x
()
x