ಮೆಕ್ಸಿಕೋ ಮೈತ್ರಿ: ಪ್ರಶಸ್ತಿ ಪಿ.

ಕೆಲಸದ ನಿಮಿತ್ತ ಮೆಕ್ಸಿಕೋಗೆ ಬಂದ ಮೊದಲ ದಿನಗಳಲ್ಲಿ ಕಾಡಿದ ದಿಗಿಲುಗಳು ಅಷ್ಟಿಷ್ಟಲ್ಲ. ಭಾರತದ ಮಾಧ್ಯಮಗಳಲ್ಲಿ ಕಂಡ ಹಾದಿಬೀದಿಯಲ್ಲೆಲ್ಲಾ ಡ್ರಗ್ಸ್ ಮಾಡೋ ನಾಡೆಂಬ ಸುದ್ದಿಗಳಾಗಿರಬಹುದು, ರಾತ್ರಿ ಏಳರ ಮೇಲೆ ಹೊರಗೆ ಕಾಲಿಡಬೇಡವೆಂದು ಎಚ್ಚರಿಸುತ್ತಿದ್ದ ಹೋಟೇಲು ರೂಂಮೇಟಾಗಿರಬಹುದು, ಗೊತ್ತಿಲ್ಲದ ಸ್ಪಾನಿಷ್ ಭಾಷೆಯಾಗಿರಬಹುದು, ಇಂಟರ್ ನ್ಯಾಷನಲ್ ರೋಮಿಂಗ್ ಇದ್ದರೂ ಸಿಗ್ನಲ್ ಸಿಗದ ಸಿಮ್ಮಾಗಿರಬಹುದು, ಎಲ್ಲೆಡೆಯೂ ಮಾಂಸದ ಸಾಮ್ರಾಜ್ಯವಾಗಿ ವೆಜ್ಜಿಗಳಿಗೆ ಸಿಗದ ಊಟವಾಗಿರಬಹುದು, ತಮ್ಮ ಕೆಲಸವನ್ನೇ ನೋಡಿಕೊಳ್ಳುತ್ತಾ ಹೆಚ್ಚೇನೂ ನೆರವಾಗದ ಈಗಾಗಲೇ ಅಲ್ಲಿಗೆ ಹೋಗಿದ್ದ ಸಹೋದ್ಯೋಗಿಗಳಾಗಿರಬಹುದು. ಸಿಮ್ಮು ತಗೊಳ್ಳೋಕೆ ನಾಲ್ಕು ದಿನ, ಬ್ಯಾಂಕ್ ಅಕೌಂಟ್ ತೆಗೆಯೋಕೆ ೨ ತಿಂಗಳು ಅಂತ ಕಾಲಿಟ್ಟಲ್ಲೆಲ್ಲಾ ಸಮಸ್ಯೆಗಳಲ್ಲಿ ತೊಡರುತ್ತಿದ್ದ ನನಗೆ ಆಶಾಕಿರಣದಂತೆ ಗೋಚರಿಸಿದವರು, ಹತ್ತು ಹಲವು ವಿಷಯಗಳಲ್ಲಿ ಸ್ಪೂರ್ತಿಯ ಸೆಲೆಯಾದವರು, ತಮ್ಮ ಅಪಾರ ಜೀವನಪ್ರೀತಿಯಿಂದ ಸಾಮಾನ್ಯರಲ್ಲಿ ಅನಿರೀಕ್ಷಿತವಾಗಿ ಅಸಾಮಾನ್ಯರೆನಿಸಿದವರು ಅತ್ಯಂತ ಆತ್ಮೀಯರೆನಿಸಿದವರು ಹಲವು ಮೆಕ್ಸಿಕನ್ನರು . ಅವರಲ್ಲೊಬ್ಬರ ಬಗ್ಗೆ ಇಂದು ಬರೆಯಬಯಸುತ್ತೇನೆ.

ನಾ ಮೆಕ್ಸಿಕೋ ಆಫೀಸಿಗೆ ಕಾಲಿಟ್ಟ ಮೊದಲ ದಿನ. ಇವನು ಇಂತಹವನು , ಇಂತಹ ಟೀಮಿನಲ್ಲಿ ಕೆಲಸ ಮಾಡುತ್ತಿದ್ದಾನೆ ಅಂತ ಅಲ್ಲಿರೋ ಸಹೋದ್ಯೋಗಿಗಳಿಗೆಲ್ಲಾ ಪರಿಚಯಿಸಲಾಗಿತ್ತು. ಅದರಲ್ಲೊಬ್ಬರು ಸೋರಿ ಮೈ ಫ್ರೆಂಡ್, ನಿನ್ನ ಹೆಸರೇನೆಂದೆ ಅಂತ ಅವತ್ತು ಎರಡು ಕಡೆ ಸಿಕ್ಕಾಗ ಕೇಳಿದ್ದರು. ನಾನು ಖುಷಿ ಖುಷಿಯಿಂದಲೇ ಹೇಳಿಕೊಂಡಿದ್ದೆ. ಅದಾದ ಮಾರನೇ ದಿನ ಮತ್ತು ಅದರ ಮಾರನೇ ದಿನ ಸಿಕ್ಕಾಗಲೂ ಅವರು ನನ್ನ ಹೆಸರು ಕೇಳಿದ್ದು ಕೇಳಿ ಅವರಿಗೆ ನನ್ನ ಹೆಸರು ನೆನಪಿತ್ತೋ ಇಲ್ಲವೋ ನನಗೆಂತೂ ಅವರ ಹೆಸರು ಹಾರ್ಗೆ ಗಾರ್ಸಿಯ ಅಂತ ನೆನಪಾಗಿ ಹೋಯ್ತು . ಮೆಕ್ಸಿಕೋ ಬಗೆಗಿನ ಭಯ ಮತ್ತು ತಿರುಗಾಡಲು ಜೊತೆಗಾರರಿಲ್ಲದ ಕಾರಣ ಮೊದಲ ವಾರ ಎಲ್ಲೂ ಹೋಗಿರಲಿಲ್ಲ. ಎರಡನೇ ವಾರಂತ್ಯಕ್ಕೂ ಎಲ್ಲೂ ಹೋಗೋ ಲಕ್ಷಣಗಳು ಗುರುವಾರದ ತನಕವೂ ಕಾಣುತ್ತಿರಲಿಲ್ಲ. ಹಾಗೇ ಸುಮ್ಮನೇ ಮಾತನಾಡುತ್ತಾ ಹಿಂದಿನ ವಾರ ಪರಿಚಯವಾಗಿದ್ದ ಹಾರ್ಗೆ ಅವರತ್ರ ಅಲ್ಲಿ ಸುತ್ತಮುತ್ತಲಿರೋ ಸುರಕ್ಷಿತವಾಗಿ ತಿರುಗಾಡಬಲ್ಲ ಜಾಗಗಳ ಬಗ್ಗೆ ಕೇಳಿದ್ದೆ. ಅವರು ಕೊಟ್ಟ ಒಂದಿಷ್ಟು ಮಾಹಿತಿಗಳ ಜೊತೆಗೆ ಗೂಗಲ್ಲಲ್ಲೊಂದಿಷ್ಟು ಮಾಹಿತಿಗಳ ಕಲೆಹಾಕಿ ಅಲ್ಲೇ ಹತ್ತಿರದ ಚಿಪಿಂಕಿ ಅನ್ನೋ ಎಕೋ ಪಾರ್ಕಿಗೆ ಹೋಗಿ ಬರೋಕೆ ನಿಶ್ಚಯಿಸಿದ್ದೆ. ಆ ಸಂರಕ್ಷಿತ ಕಾಡು ಎಷ್ಟು ಇಷ್ಟವಾಗಿ ಹೋಯ್ತಂದ್ರೆ ಬೆಳಗ್ಗೆ ಒಂಭತ್ತರಿಂದ ಸಂಜೆ ಆರರವರೆಗೆ ಅಲ್ಲೇ ಇದ್ದಿದ್ದೂ ಅಲ್ಲದೇ ಅದಾದ ಮೇಲೆ ಮತ್ತೆ ಮೂರು ಬಾರಿ ಅಲ್ಲಿಗೆ ಹೋಗಿ ಬಂದಾದ್ರೂ ಇನ್ನೂ ಅಲ್ಲಿಗೆ ಹೋಗೋ ಆಸೆ ತೀರಿಲ್ಲ.

ಚಿಪಿಂಕಿಯ ಅನುಭವಗಳ ಬಗ್ಗೆ ಮಾತಾಡುತ್ತಾ ನಮ್ಮ ತಿರುಗಾಟದ ಆಸಕ್ತಿಗಳ ಮಾತು ಬಂದಿತ್ತು.

ಮೆಕ್ಸಿಕೋದ ಹದಿಹರೆಯ ಮತ್ತು ಮಧ್ಯವಯಸ್ಕರಲ್ಲಿ ಓಡುವ ಹವ್ಯಾಸ ಹೆಚ್ಚು. ನಲವತ್ತರ ಸುಮಾರಿನ ಪ್ರಾಯದಲ್ಲೂ ಮೆಕ್ಸಿಕೋದ ಪ್ರಸಿದ್ದ ೪೨ ಕಿ.ಮೀ ಓಟದಲ್ಲಿ ಮತ್ತೆ ಮಾಂಟೆರರಿಯ ಸುತ್ತಮುತ್ತ ನಡೆಯೋ ಹತ್ತಿಪ್ಪತ್ತು ಕಿ.ಮೀ ಓಟದಲ್ಲಿ, ಗುಡ್ಡಗಾಡು ಓಟಗಳಲ್ಲಿ ಪಾಲ್ಗೊಳ್ಳೋ ಹಾರ್ಗೆಯವರ ತರಹ ಸುಮಾರು ಜನ ಸಿಗುತ್ತಾರಿಲ್ಲಿ. ಬೆಂಗಳೂರಿನಲ್ಲಿ ನಡೆಯೋ ಹತ್ತು ಕಿ.ಮೀ ಟಿಸಿಎಸ್ ೧೦ಕೆ, ಶ್ರೀರಾಂ ಚಿಟ್ಸ್ ಅವರ ೧೦ಕಿ.ಮೀ ಮುಂತಾದ ಓಟಗಳಲ್ಲಿ ಪಾಲ್ಗೊಳ್ಳೋ ನಮಗೆ ಗುಡ್ಡಗಾಡು ಓಟವೆನ್ನೋದು ಹೊಸ ಅನುಭವ. ಕಾವೇರಿ ಟ್ರಯಲ್ ಮ್ಯಾರಥಾನ್ ನಂತಹ ಸ್ಪರ್ಧೆಗಳು ಅಲ್ಲಿ ನಡೆದರೂ ಅಪರೂಪ. ಐದು ಘಂಟೆ ಸಮಯವಿರುತ್ತೆ. ಅದರಲ್ಲಿ ಹದಿನಾರು ಕಿ.ಮೀ ಓಟ ಮುಗಿಸಬೇಕು. ಚೆನ್ನಾಗಿರುತ್ತೆ ಬಾ ಅಂತ ಹಾರ್ಗೆ ಅವರು ಕರೆದುಕೊಂಡು ಹೋದ ಮೊದಲ ಓಟ ಗೃತಾಸ್ ಡೇ ಗಾರ್ಸಿಯ ಅನ್ನೋ ಪ್ರದೇಶದಲ್ಲಿದ್ದ ಗುಡ್ಡಗಾಡು ಓಟ. ಸಮತಲ ನೆಲದ ಮೇಲೆ ಓಡಿದಷ್ಟು ಸಲೀಸಾಗಿರದ ಬೆಟ್ಟ ಹತ್ತಿಳಿಯೋ ಈ ಓಟದಲ್ಲಿ ಪ್ರಯಾಸ ಪಡುತ್ತಾ ಎರಡೂ ಮುಕ್ಕಾಲು ಘಂಟೆಯ ಸುಮಾರಿಗೆ ಮುಗಿಸಿದ್ರೂ ರೇಸಿನಲ್ಲಿ ಎರಡನೆಯವನಾಗಿ ಬಂದ ನನಗೆ ಸಖತ್ ಅಚ್ಚರಿ ಮತ್ತು ಖುಷಿ ! ಇಂತಹ ರೇಸುಗಳಲ್ಲಿ ಯಾವ ಸರ್ಟಿಫಿಕೇಟ್ ಕೊಡದಿದ್ದರೂ ಕಾಡುಮೇಡುಗಳ ನಡುವೆ ಓಡೋ ಟ್ರಯಲ್ ರನ್ನಿಂಗ್ ಅನ್ನೋ ಇಲ್ಲಿನ ಸ್ಪರ್ಧೆಗಳು ಮತ್ತು ಅಲ್ಲಿ ಮಕ್ಕಳು ಮುದುಕರಾದಿಯಾಗಿ ಪಾಲ್ಗೊಳ್ಳೋ ನೂರಾರು ಜನರ ಜೀವನಪ್ರೀತಿ ಸಖತ್ ಇಷ್ಟವಾಗುತ್ತೆ. ಎಂದೂ ೨೦ ಕಿ.ಮೀ ಓಡದ ನನಗೆ ದೂರದ ಓಟಗಳ ಬಗ್ಗೆ ಸ್ಪೂರ್ತಿ ಸಿಕ್ಕಿದ್ದೂ ಇಲ್ಲಿಯೇ. ೨೩ ಕಿಮೀನ ಕೊಲಾ ದೋ ಕಬಯ್ಯೋ-ಸಾಂಟಿಯಾಗೋ ಗುಡ್ಡಗಾಡು ಓಟದಲ್ಲಿ ನಾನು ಭಾಗವಹಿಸಿ ನಾಲ್ಕೂವರೆ ಘಂಟೆಗಳ ಅವಧಿಯಲ್ಲಿ ಮುಗಿಸಬಲ್ಲೆನೆಂದು ಇಲ್ಲಿಗೆ ಬರೋ ಮೊದಲು ಕನಸಿನಲ್ಲೂ ಎಣಿಸಿರಲಿಲ್ಲ. ಹಾಫ್ ಮ್ಯಾರಥಾನ್ ಓಡಬಲ್ಲೆನೆಂಬ ಕಲ್ಪನೆಯೂ ಇರದ ನನಗೆ ಸೂರ್ತಿ ತುಂಬಿ ೨೧ ಕಿ.ಮೀ ಹಾಫ್ ಮ್ಯಾರಥಾನನ್ನ ೨ ಘಂಟೆಯಲ್ಲಿ ಓಡುವಂತೆ ಸ್ಪೂರ್ತಿ, ಶಕ್ತಿ ಸಿಕ್ಕಿದ್ದು ಇಲ್ಲಿಯೇ

ಅದಾಗಿ ಕೆಲ ದಿನಗಳಲ್ಲೇ ಅಲ್ಲಿದ್ದ ಗೆಳೆಯರೆಲ್ಲಾ ಮೆಕ್ಸಿಕೋದ ಪ್ರಸಿದ್ದ ಬೀಚಾದ ಕ್ಯಾನ್ಕೂನಿಗೆ ಹೋಗಬೇಕಂತ ಪ್ಲಾನ್ ಮಾಡ್ತಾ ಇದ್ದರು. ಅಂತೂ ಇಂತೂ ಅಲ್ಲಿಗೆ ಹೋಗಿ ಬಂದೆವು. ಬಂದ ಮೇಲೆ ಹೀಗೇ ಹಾರ್ಗೆ ಅವರ ಹತ್ತಿರ ಮಾತಾಡುತ್ತಾ ಇದ್ದಾಗ ತಮ್ಮ ಪತ್ನಿ ಮತ್ತು ಸಂಬಂಧಿಕರದ್ದೇ ಟ್ರಾವೆಲ್ ಕಂಪೆನಿಯೂ ಇರೋ ಬಗ್ಗೆ ಹೇಳಿದ್ದರು. ಅದಾಗಿ ಕೆಲ ವಾರಗಳಲ್ಲಿ ಹತ್ತಿರದ ಸಾಂಟಿಯಾಗೋ ಅನ್ನೋ ಸ್ಥಳಕ್ಕೆ ಹೋಗೋ ಪ್ಲಾನ್ ಹಾಕುತ್ತಿದ್ವಿ. ಸರಿ, ಹೋಗೋದೇಗೆ ಅಂತ ಯೋಚನೆ ಮಾಡ್ತಿದ್ದಾಗ ನೆನಪಾದವರು ಹಾರ್ಗೆ. ಆ ಸಂದರ್ಭದಲ್ಲಿ ನಮಗೆ ಸೂಕ್ತವಾಗುವಂತ ಗಾಡಿ ದೊರಕಿಸಿಕೊಟ್ಟಿದ್ದಲ್ಲದೇ ಅದಾದ ನಂತರದ ನಾಲ್ಕೈದು ಟ್ರಿಪ್ಪುಗಳಲ್ಲಿ ವಾಹನದ ಸೌಲಭ್ಯ ಒದಗಿಸಿ ಮೆಕ್ಸಿಕೋ ಪೂರ್ತಿ ತಿರುಗಾಡುವಂತೆ ಕಾಲಿಗೆ ಚಕ್ರ ಕಟ್ಟಿದವರು ಹಾರ್ಗೆ 🙂

ನಮಗೆ ಸಹಾಯ ಮಾಡಬೇಕಾದ ಯಾವ ಅಗತ್ಯ, ಅನಿವಾರ್ಯತೆಗಳಿಲ್ಲದಿದ್ದರೂ ಸ್ಪಾನಿಷ್ ಕಲಿಯೋಕೆ ಒದ್ದಾಡುತ್ತಿದ್ದ ನಮಗೆ ಸಹಾಯ ಮಾಡಿದ್ದು ಹಲವಾರು ಗೆಳೆಯರು. ಕನ್ನಡ ಮಾಧ್ಯಮದ ಹುಡುಗರಿಗೆ ಇಂಗ್ಲೀಷ್ ಕಲಿಯೋದು ಹೇಗೆ ಕಷ್ಟವೋ ಹಾಗೆಯೇ ಹಾರ್ಗೆಯವರೂ ಇಂಗ್ಲೀಷ್ ಕಲಿಯೋಕೆ ಒದ್ದಾಡಿದ್ದರಂತೆ. ಮೆಕ್ಸಿಕೋದ ತುಂಬೆಲ್ಲಾ ಸ್ಪಾನಿಷ್ಷೇ ತುಂಬಿದ್ದಾಗ ಇಂಗ್ಲೀಷಿನ ಅಗತ್ಯವೇ ಇಲ್ಲದೇ ಬೆಳೆದುಬಂದವರಿಗೆ ಆಫೀಸಿಗೆ ಬಂದಾಗ ಆಗಾಗ ಇಂಗ್ಲೀಷಿನ ಅನಿವಾರ್ಯತೆಯುಂಟಾಗುತ್ತಿತ್ತಂತೆ. ಅದನ್ನೇ ಒಂದು ಸವಾಲಾಗಿ ಸ್ವೀಕರಿಸಿ ಪ್ರತಿದಿನ ಆಫೀಸಿನ ನಂತರ ಕೆಲವು ಘಂಟೆ ಕ್ಲಾಸುಗಳಲ್ಲಿ, ರೇಡಿಯೋಗಳಲ್ಲಿ ಇಂಗ್ಲೀಷು ಕಲಿಯುತ್ತಾ ಬೆಳೆದ ಹಾರ್ಗೆ ಈಗ ಇಂಗ್ಲೀಷಿನಲ್ಲಿ ನಿರರ್ಗಳವಾಗಲ್ಲದಿದ್ದರೂ ಆರಾಮವಾಗಿ ಮಾತಾಡೋದನ್ನ ನೋಡಿದರೆ ಆಶ್ಚರ್ಯವಾಗುತ್ತೆ. ಮಕ್ಕಳು ಧ್ವನಿ ಮೂಲಕ ಹೇಗೆ ಭಾಷೆ ಕಲಿಯುತ್ತಾರೋ ಹಾಗೆಯೇ ಕೇಳುಕೇಳುತ್ತಲೇ ಸ್ಪಾನಿಷನ್ನಾಗಲೀ ಅಥವಾ ಇನ್ಯಾವುದೇ ಭಾಷೆಯನ್ನಾಗಲೀ ಕಲಿಯಬಹುದು ಅನ್ನೋ ಅವರ ಮಾತುಗಳು ಹೊಸಾ ಪ್ರಯತ್ನಕ್ಕೆ ಸೂರ್ತಿಯಾಗುತ್ತೆ.

ಹಾರ್ಗೆ ಅವರ ಸ್ನೇಹಭಾವ, ಯಾವಾಗಲೂ ಇನ್ನೊಬ್ಬರಿಗೆ ಸಹಾಯ ಮಾಡೋಕೆ ಸಿದ್ದವಿರುವ ಸ್ವಭಾವವೇ ಅವರೊಂದಿಗಿನ ಮೈತ್ರಿ ಹೆಚ್ಚುತ್ತಿರೋಕೆ ಕಾರಣವಾಗಿರಬಹುದು. ಆಫೀಸಿನ ಸುತ್ತಲಿರೋ ಎಲ್ಲಾ ಬ್ಯಾಂಕುಗಳ, ಕೆಲವನ್ನು ಎರಡೆರಡು ಸಲ ಸುತ್ತಿದರೂ ಭಾಷೆ ಬಾರದ ಕಾರಣ ಎರಡು ತಿಂಗಳಿಂದ ಅಕೌಂಟ್ ತೆಗೆಯಲಾಗದೇ ಹೈರಾಣಾಗಿದ್ದ ನನ್ನ ನೆರವಿಗೆ ಬಂದು ಜೊತೆಗೇ ಬ್ಯಾಂಕಿಗೆ ಬಂದು ಸಹಾಯ ಮಾಡಿದ್ದು ಹಾರ್ಗೆ. ಗ್ವಾದಲಹರ ಎನ್ನೋ ಜಾಗದಲ್ಲಿ ನನ್ನ ಮೊಬೈಲನ್ನು ದೋಚಿದ್ದಾಗ ಮೊಬೈಲು ಕಂಪೆನಿಯವರೆಗೂ ಬಂದು ಹಳೇ ಫೋನಿನ ಐ.ಎಂ.ಇ.ಐ ಮೂಲಕ ಅದನ್ನು ಬ್ಲಾಕ್ ಮಾಡಿಸೋಕೆ ಸಹಾಯ ಮಾಡಿದ್ದು ಇವರೇ !

ಮೆಕ್ಸೀಕೋದ ಆಚರಣೆಗಳ ಬಗ್ಗೆ ತಿಳಿಸೋಕೆ, ಭಾರತೀಯ ಸಂಸ್ಕೃತಿ ಆಚರಣೆಗಳ ಬಗ್ಗೆ ತಿಳಿಯೋಕೆ ಇವರಿಗೆ ಎಲ್ಲಿಲ್ಲದ ಆಸಕ್ತಿ. ನಾವು ಕೆಲಸ ಮಾಡುತ್ತಿದ್ದ ಮಾಂಟೆರೆರಿಯ ಸುತ್ತಮುತ್ತ ನಡೆಯುತ್ತಿದ್ದ ಹಲವು ಓಟ , ಸಂಗೀತದಂತಹ ಕಾರ್ಯಕ್ರಮಗಳಲ್ಲಿ ಸ್ವತಃ ಭಾಗವಹಿಸಿತ್ತಾ, ಅಂತವುಗಳ ಬಗ್ಗೆ ನಮಗೂ ತಿಳಿಸುತ್ತಾ, ಮಕ್ಕಳೊಂದಿಗೆ ಮಕ್ಕಳಾಗಿ ನಲಿವ ಇವರ ಉತ್ಸಾಹ ಸದಾ ಸ್ಪೂರ್ತಿ ಕೊಡುವಂತದ್ದು.

ಮೆಕ್ಸಿಕೋದ ಬಗೆಗಿನ ನಮ್ಮ ಭಯ, ಗಾಬರಿಗಳನ್ನು ದೂರಗೊಳಿಸಲಷ್ಟೇ ಅಲ್ಲದೇ ಮೆಕ್ಸಿಕೋ ಬಗೆಗೊಂದು ಮಧುರ ಭಾವ ಮೂಡಲು ಕಾರಣವಾದ ಹಾರ್ಗೆಯಂತಹ ಗೆಳೆಯರು ದೇಶ ದೇಶಗಳ ನಡುವೆ ಸ್ನೇಹ ಭಾವ ಮೂಡಲು ಕಾರಣವಾಗುತ್ತಾರೆ. ಅನಂತ ಹೆಜ್ಜೆಗಳ ಜೀವನ ಪಯಣದಲ್ಲಿ ಸುಮಧುರ ನಗುವಾಗಿ ನೆನಪುಳಿಯುತ್ತಾರೆ.

ಪ್ರಶಸ್ತಿ ಪಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x