ಮೂವರ ಕವಿತೆಗಳು: ಶಿವು.ಕೆ, ನಾಗೇಶ ಮೈಸೂರು, ಸತೀಶ್ ರೆಡ್ಡಿ

 

ಒಪ್ಪಿಕೊಳ್ಳಬೇಕಷ್ಟೆ…

ತಪ್ಪು ಹಣವನ್ನು ಕೊಟ್ಟ ಎಟಿಎಂ ಯಂತ್ರವನ್ನು

ಏಕೆಂದು ಪ್ರಶ್ನಿಸಲಾಗುವುದಿಲ್ಲ

ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ

ಒಪ್ಪಿಕೊಳ್ಳಬೇಕಷ್ಟೆ….

 

ಬೇಡದ ಕೆಂಪು ಹಳದಿ ಮಳೆ ಸುರಿಸಿದ ಮೋಡಗಳಿಗೆ

ಅದನ್ನು ವಾಪಸ್ ಕಳಿಸಲಾಗುವುದಿಲ್ಲ

ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ

ಒಪ್ಪಿಕೊಳ್ಳಬೇಕಷ್ಟೆ….

 

ಮುಂಜಾನೆ ನಾಟ್ ರೀಚಬಲ್ ಆದ ಪೇಪರ್ ಬೀಟ್ ಹುಡುಗರನ್ನು

ಹುಡುಕಿದರೆ ಸಿಗುವುದಿಲ್ಲ

ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ

ಒಪ್ಪಿಕೊಳ್ಳಬೇಕಷ್ಟೆ…

 

ತಪ್ಪು ತಪ್ಪು ಅಕ್ಷರಗಳ ಇಂಕನ್ನು ಬಾಲ್ ಪೆನ್ನಿಗೆ 

ಕಾಗದದಿಂದ ವಾಪಸ್ ಕಳಿಸಲಾಗುವುದಿಲ್ಲ

ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ

ಒಪ್ಪಿಕೊಳ್ಳಬೇಕಷ್ಟೆ…

 

ಬಾಯಿಂದ ಹೊರಬಿದ್ದ ಕೆಟ್ಟ ಮಾತುಗಳ ಅದೇ ಉಸಿರನ್ನು

ವಾಪಸ್ ಬಾಯಿಗೆ ತೆಗೆದುಕೊಳ್ಳಲಾಗುವುದಿಲ್ಲ

ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ

ಒಪ್ಪಿಕೊಳ್ಳಬೇಕಷ್ಟೆ…

 

ಜೋರುಮಳೆಯಲ್ಲಿ ಮೈಲಿಗಟ್ಟಲೆ ಟ್ರಾಫಿಕಲ್ಲಿ ಆಫ್ ಆದ ಸ್ಕೂಟರ್

ಆನ್ ಆಗದೇ ಒಂದಿಂಚು ಕದಲಲಾಗುತ್ತಿಲ್ಲ

ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ

ಒಪ್ಪಿಕೊಳ್ಳಬೇಕಷ್ಟೆ…

 

ಕೊಲ್ಕತ್ತದಲ್ಲಿ  ತಿನ್ನುವ ಅನ್ನದ ಬಣ್ಣ ಹಳದಿ

ಬೆಂಗಳೂರಿನಲ್ಲಿ ತಿನ್ನುವ ಅನ್ನದ ಬಣ್ಣ ಬಿಳಿ

ಅಲ್ಲಿ ಗಂಗಾ ಇಲ್ಲಿ ಕಾವೇರಿ

ಆ ಕ್ಷಣದಲ್ಲಿ ಏನೂ ಮಾಡೋಕೆ ಆಗೋಲ್ಲ

ಒಪ್ಪಿಕೊಳ್ಳಬೇಕಷ್ಟೆ…

ಶಿವು.ಕೆ

ಬೆಂಗಳೂರು.


ಶ್ರಾವಣ ..

ಆಷಾಡದ ಅಗ್ಗಿಷ್ಟಿಕೆಯಲ್ಲಿ
ಬೆಂದ ಬಯಕೆಯ ಬೆಂಕಿ
ಜಿಟಿಪಿಟಿ ಮಳೆಯಡಿ
ತಂಪಾಗುತಿದೆಯಲ್ಲ
ಬಂತೆ…? ಬಂತೆ..!
ಓಹ್! ಶ್ರಾವಣ..!

ಮೊದಲ ಮಲ್ಲಿಗೆ ಮುಡಿದು
ತವರ ಸೇರಿದ ತವಕ
ಹುಡಿಯಾಗಿ ಬಳಲಿಸಿತೆ
ಇರುಳ ನಡುಕದ ಶಾಪ?
ಕಾದೂ, ಕಾದೂ ಮನದ
ಶೋಕ ಸಂತಾಪ;
ವಿರಹದುಬ್ಬರದಲ್ಲಿ
ತಡೆತಡೆದು ನಿಟ್ಟುಸಿರು
ಬಂತಲ್ಲ ಕೊನೆಗೂ
ಓಹ್! ಶ್ರಾವಣಾ…!!

ಮೊಗ್ಗೊಡೆವ ಹನಿಗಾಗಿ
ಕಾದು ಕಂಗಾಲಾಗಿ
ಬಾಯ್ದೆರೆದು ನಿಂತಿದೆ
ಅಂತರಂಗ…
ನವಿರು ನವಿರು ಪುಳಕ
ಹಿಗ್ಗಿ ನಿಂತೆಡೆ ಜಳಕ
ಸುಖದ ಬೆವರರಿಸಿದೆ
ಓಹ್! ಶ್ರಾವಣಾ….!!!

– ನಾಗೇಶ ಮೈಸೂರು


ಮಾರಾಟಕ್ಕಿದೆ

ಮಾರಾಟಕ್ಕಿದೆ
ಉಚಿತವಾಗಿ
ಮಾರಾಟಕ್ಕಿದೆ
ರೈತರ ಕನಸು;   ದಲಿತರ
ದುಡಿಮೆ; ಬಡವರ ಬದುಕು
ಮಾರಾಟಕ್ಕಿದೆ
ಸರ್ಕಾರದ ಭರವಸೆಗಳ
ಸುರಿಮಳೆಯ ನಡುವೆ.

ಯಾರಾದರೂ
ಕೊಳ್ಳಬಹುದು..!!!
ಮುಂದೆ ಬನ್ನಿ
ಬನ್ನಿ ಮುಂದೆ ಬನ್ನಿ
ಕೊಳ್ಳಬನ್ನಿ
ಉಚಿತವಾಗಿ ಕೊಳ್ಳ
ಬನ್ನಿ…!!!

ಒಪ್ಪೋತ್ತಿನ
ತುತ್ತಿನ ಚಿಲಕ್ಕಾಗಿ
ದವಸ ಧಾನ್ಯವನ್ನ
ದಾನವಾಗಿ ಕೊಟ್ಟು
ಕೊಳ್ಳ ಬನ್ನಿ
ಉಚಿತವಾಗಿ
ಕೊಳ್ಳಬನ್ನಿ..

ಬದುಕಿನ ಬವಣೆ
ಹೊತ್ತಿ
ಉರಿಯುತ್ತಿದೆ
ಸುಡುವ ರಣಬಿಸಿಲಿಗೆ ;
ಕನಸುಗಳ  ಕಡಲಿನ
ಚಿಲುಮೆ
ಕಮರುತ್ತಿದೆ
ತುಳಿತಗಳ ನಡುವೆ.
ನಾಡ ಪ್ರಜೆಗಳ ಬದುಕು
ಮಾರಾಟಕ್ಕಿದೆ
ಆಳುವವರ ಮುಂದೆ…

ಕೊಳ್ಳಬನ್ನಿ ಧನಿಕರೇ
ಕೊಳ್ಳಬನ್ನಿ..
ಅರಳುತ್ತಿರುವ ಕಮಲಗಳ
ಆಯುಷ್ಯ  ಕರಗಿ ಬಾಡುವ
ಮೊದಲು ಕೊಳ್ಳಬನ್ನಿ..!

ರೈತರ ಕನಸು ಸರ್ಕಾರದ
ಕೈಸೆರೆ; ದಲಿತ ಬಡವರ
ಬದುಕು ಧನಿಕರ ಹಿತ್ತಲ
ಸೆರೆ..
ಆಳುವವರ ಭರವಸೆಗಳ
ನಡುವೆ ಉಳುವವರ ಬದುಕು
ಮಣ್ಣಲ್ಲಿ ಮಣ್ಣಾಗಿ
ಅಳಿಯುವ ಮುನ್ನ
ಕೊಳ್ಳಬನ್ನಿ…
ಸರ್ಕಾರದ  ಚರಮ ಗೀತೆಯ
ನಡುವೆ ಮುಳುಗಿ ಬಳಲಿ
ಬೆಂಡಾದವರ ಬದುಕನ್ನ
ಕೊಳ್ಳಬನ್ನಿ..

ಮಾರಾಟಕ್ಕಿದೆ…!!
ಉಚಿತವಾಗಿ
ಮಾರಾಟಕ್ಕಿದೆ…!!
ರೈತರ ಕನಸು;   ದಲಿತರ
ದುಡಿಮೆ; ಬಡವರ ಬದುಕು
ಮಾರಾಟಕ್ಕಿದೆ
ಸರ್ಕಾರದ ಭರವಸೆಗಳ
ಸುರಿಮಳೆಯ ನಡುವೆ.

ಸತೀಶ್ ರೆಡ್ಡಿ
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
sharada.m
sharada.m
10 years ago

nice

1
0
Would love your thoughts, please comment.x
()
x