ವಿಷ
೧
ಮನುಜರನ್ನು ನಾನು ಬೆರಳುಗಳಿಗೆ ಹೋಲಿಸಿದೆ
ಆದರೆ, ಕೆಲ ವರ್ಗಭೇದಿಗಳು
"ಎಲ್ಲಾ ಬೆರಳುಗಳು ಸಮಾನವಾಗಿಲ್ಲ"
ಎಂದು ಮುಷ್ಟಿ ಬಿಗಿದರು
ಮನುಜರನ್ನು ನಾನು ರೋಮಗಳಿಗೆ ಹೋಲಿಸಿದೆ
ಆದರೆ, ಕೆಲವರು
"ಇರುವ ಜಾಗಕ್ಕನುಗುಣವಾಗಿ ಅವುಗಳಲ್ಲಿಯೂ ಮೇಲು-ಕೀಳುಗಳಿವೆ"
ಎಂದು ಮೀಸೆ ತಿರುವಿದರು
ಮನುಜರನ್ನು ನಾನು ರಕ್ತಕಣಗಳಿಗೆ ಹೋಲಿಸಿದೆ
ಆದರೆ, ಕೆಲ ವರ್ಣಗೇಡಿಗಳು
"ಅಲ್ಲಿಯೂ ಬಿಳಿಯರಿದ್ದಾರೆ"
ಎಂದು ನಂಜು ಕಾರಿದರು
ಕೊನೆಗೆ
ಮನುಜರನ್ನು ನಾನು ಕವಿತೆಯ ಪದಗಳಿಗೆ ಹೋಲಿಸಿದೆ
ಆದರೆ, ಕೆಲ ಕಾವಿಯನ್ನು(ಕಾವ್ಯವನ್ನಲ್ಲ) ಉಟ್ಟವರು
ಅಲ್ಲಿಯೂ ಪಂಕ್ತಿಭೇದವನ್ನು ಸಮರ್ಥಿಸಿಕೊಂಡರು
*
೨
ತೀವ್ರ ಹತಾಶೆಯಿಂದ ನಾನು
ಇಂಥವರ ಪಾದ ತೊಳೆದ ನೀರು ಕುಡಿದು
ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದೆ
ಮನುಜರ ಸಮಾನತೆಗೆ ವಿಷ ಹಿಂಡುವವರ
ಪಾದ ತೊಳೆದ ನೀರಿನಲ್ಲಿ
ನಾನು ಸಾಯುವಷ್ಟಾದರೂ ವಿಷ ಇರಬೇಕಲ್ಲವೆ?
*
೩
ಕೊನೆಗೂ ಸತ್ತು ಹೋದೆ ನಾನು
ಆದರೆ, ಆ ಪುಣ್ಯಾತ್ಮ ಸ್ವಾಮಿಗಳು
ನನ್ನ ಸಮಾಧಿಯ ಮೇಲೆಯೇ ಪತ್ರಿಕಾಗೋಷ್ಟಿ ಕರೆದು
ಜಾಹೀರು ಮಾಡಿದರು-
"ಹೌದು, ಪಾದ ತೊಳೆದ ನೀರಿನಲ್ಲಿ ವಿಷವಿದ್ದಿರಬಹುದು
ಏಕೆಂದರೆ, ಮೊನ್ನೆಯಷ್ಟೆ ನಾನು
ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡಿದ್ದೆ"!!
-ವಿಲ್ಸನ್, ಕಟೀಲ್
ಹುಟ್ಟಿನಿಂದ ಹೊದ್ದು ತಂದ ನಾನು ಎಂಬ ಹೊದಿಕೆ ಎಸೆದು ನೀನಾಗಲೇನು ನಾನು
ಬಾನ ಕೆಳಗೆ ನಿಂತು ಈಗ ಅಹಮು ಎನುವ ದೇಹ ತೊರೆದು ನೀನಾಗಲೇನು ನಾನು
ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಎಲ್ಲೊ ಸಾಯೊ ತಿರುಕ ಮನಕೆ ಕೋಟಿ ಆಸೆ ಎಲುಬಿನೊಳಗೆ
ಇಂಚು ಇಂಚೆ ಇರಿವ ಮೊದಲೆ ಬೇಡದಿರುವುದೆಲ್ಲ ಕಳೆದು ನೀನಾಗಲೇನು ನಾನು
ನೂರು ನಾಮ ಚೂರು ಕಾಮ ಕೊಳೆತು ಹೋಗೊ ನರನ ಜನ್ಮಕದೇನು ತೀರದಂಥ ತೆವಲೊ
ಎಲ್ಲ ಸೇರಿ ಕುಕ್ಕಿ ತಿನಲು ಬಿಸಿಲ ಹಗಲುವೇಷ ತೊಡೆದು ನೀನಾಗಲೇನು ನಾನು
ಸಾಕು ವೇಷ ಸಾಕು ದ್ವೇಷ ಉದಯವಾಗಲೆಮ್ಮೊಳಗೊಂದು ಸಾಮರಸ್ಯ ಹೊದೆದ ದೇಶ
ಖಾಲಿ ಇಳೆಯೊಳಳಿವ ಮೊದಲೆ ಮರುಹುಟ್ಟನೊಂದ ಪಡೆದು ನೀನಾಗಲೇನು ನಾನು
ಎಲುಬೆಲುಬುಗಳ ಹಂದರಗಳೊಳು ಮೀಸೆ ತಿರುವೊ 'ರಾಜ' ನಿನದೆಂಥ ತೆರೆದ ಹೃದಯವಯ್ಯ
ಏಕ ಮನಸೊಳೀಗ ಎದೆಯ ತಿಳಿಯ ನೀರಿನಲ್ಲಿ ತೊಳೆದು ನೀನಾಗಲೇನು ನಾನು
-ರಾಶೇಕ್ರ
ನಾ ನಿನ್ನಲಿ
ಚೆಂದುಟಿಯ ನಗುವೊಂದ ನನಗಾಗಿ ನೀ ನೀಡೆ,
ಅಂದದೊಳಗಿನ ಕಂದ ನಾನಾಗುವೆ.
ಸುಂದರಿಯೆ ಅನುರಾಗ ಅನುರಣಿಸುತಿರುವಾಗ,
ಬೆಂದಿರುವ ಸಿಹಿದ್ರಾಕ್ಶಿ ನಾ ನಿನ್ನಲಿ.
ಎದೆಯೊಳಗೆ ಕಣ್ಣಾಲಿ ನಿನ ಸುತ್ತ ತಿರುಗುತಿದೆ,
ಕದವೇಕೆ ನಮ್ಮೊಳಗೆ ಈ ನಂತರ.
ನದಿ ನೀರು ಹರಿವಾಗ ಸಾಗರವು ಸೆಳೆಯುವುದು,
ಸುಧೆ ನಾನು ಶರಧಿ ನೀ, ನಾ ನಿನ್ನಲಿ.
ಬಿರುಸಾದ ಬಿಸಿಯುಸಿರು, ನುಡಿಯುವುದು ನಿನಹೆಸರು,
ಸರಸದಲಿ ಜ್ವರವೇರೆ ಜಡವೇತಕೆ..?
ಕಿರುನಗೆಯ ಹೂಹಾಸು ಕರೆದೆನ್ನ ಸವರುತಿರೆ,
ಸರದಾರ ಸೋತಿಹೆನು ನಾ ನಿನ್ನಲಿ
ಮದವೇರಿದಾ ಹೃದಯ ಮಧುಶಾಲೆಯಾಗಿಹುದು,
ವಧುವಾಗಿ ಮೆದುವಾಗಿ ಬೆರೆ ನನ್ನಲಿ.
ಹೆದೆಯೇರಿದಾ ಬಿಲ್ಲು ನಿನ್ನ ಬಳಿ ಕರಗುವುದು,
ಹದಿಯಾಗಿ ಹಾಲೊಳಗೆ ನಾ ನಿನ್ನಲಿ.
ನವಿರಾದ ಮಾತುಗಳು ನವಜೀವ ತುಂಬುತಿದೆ,
ಸವಿಜೇನು ಸವಿದಂತೆ ಹೂ ದುಂಬಿಯು,
ಭವಜೀವಕಾಧಾರ.. ಅವಯವಕೆ ಆಹ್ಲಾದ,
ನವಯುಗಗಳಾ ಋತುವು ನಾ ನಿನ್ನಲಿ.
ಹನಿಮಳೆಯ ಶುರುವಲ್ಲಿ ಧರಣಿ ಗಂಧವ ಸೂಸೆ,
ಕನಸುಗಳ ಸರಮಾಲೆ ನನ್ನೆದೆಯಲಿ.
ವನಸಿರಿಯ ನಡುವಲ್ಲಿ ಹನಿಮಾಲೆ ಪೋಣಿಸಲು
ತನುಮನವು ನಿನಗಾಗಿ, ನಾ ನಿನ್ನಲಿ.
ಮುತ್ತೊಳಗೆ ಸವಿ ತುತ್ತು , ಏರಿಸಿದೆಯಾ ಮತ್ತು.
ಮತ್ತಿನೊಳಗಣ ಗತ್ತ ಏನೆನ್ನಲಿ.?
ಇತ್ತ ಮುಳುಗಿದೆ ಹೊತ್ತು, ಸುತ್ತ ಹೊಳೆಯುವ ನತ್ತು,
ಹೊತ್ತೇಕೆ ಜಗಮರೆಯೆ ನಾ ನಿನ್ನಲಿ
ಮನಸಹುದು ಆಗಸವು. ನೀನೆನ್ನ ಶಶಿಯು,
ಹನಿಸು ಇಬ್ಬನಿಯ ತಂಪು ನೀನೆನ್ನಲಿ.
ಕಣ ಕಣದಿ ಕಂಪನವು ನಿನ ಒಲವ ಸವಿದಾಗ,
ಅಣುವಿನೊಳಗಿನಾ ಅಣುವು ನಾ ನಿನ್ನಲಿ.
-ಶಶಿಕಿರಣ್
ವಿಲ್ಸನ್, ಕಟೀಲ್ರವರ ಕವನ ಸೊಗಸಾಗಿದೆ.
ನೀನಾಗಲೇನು ನಾನು , ರಾಶೇಕ್ರ ರವರ ಕವನ ಚೆನ್ನಾಗಿದೆ.
ನಾ ನಿನ್ನಲಿ -ಶಶಿಕಿರಣ್ ರವರ ಪ್ರಣಯ ಕವನ ಸೊಗಸಾಗಿದೆ.
All three are superb!!
ಕೊಂಕಣಿಯಲ್ಲಿ ಮೋಡಿ ಮಾಡುತ್ತಿದ್ದ ಕೊಂಕಣಿಯ ಹೆಮ್ಮೆಯ ಕವಿ ವಿಲ್ಸನ್ ಕಟೀಲ್, ಕನ್ನಡದಲ್ಲೂ ಶುರುಹಚ್ಚಿಕೊಂಡಿದ್ದಾರೆ. ತುಂಬಾ ಸಂತೋಷ 🙂 ಕವಿತೆಯಲ್ಲಿ ವಿಷವಿದೆ..ಅದನ್ನು ಕಾರಿರುವ ಬಗೆಯಂತು ವಿಸ್ಮಯಕಾರಿ! ಬರೀತಿರಿ ವಿಲ್ಸನ್.
loved the first poem the best. lots of spellos though!!!!
Adhbuthavada kavithe Wilson …..
tumba ishtavayitu……
ವಿಲ್ಸನ್, ಇದೊಂದು ಟಿಪಿಕಲ್ ದಲಿತ ಕವಿತೆ. liked it. keep going…
ಎಲ್ಲವೂ ಚೆನ್ನಾಗಿವೆ,
ವಿಲ್ಸನ್ ರವರ ಕೊನೆಯ ಸಾಲುಗಳು ದಲಿತ ಕೇರಿಗಳ ಚಿತ್ರಣಕ್ಕೆ ಒತ್ತು ನೀಡಿದ್ದು ಸೊಗಸಾಗಿ ಹೇಳಿದ್ದಾರೆ. ಚಿಂತನೆಗೀಡು ಮಾಡುತ್ತದೆ. ಧನ್ಯವಾದಗಳು
ವಿಪರ್ಯಾಸ ಏನೆಂದರೆ, ಏನು ಮಾಡಿದರೂ, ಬರೆದರೂ ನಿಮ್ಮ ಆಶಯಕ್ಕೆ ವಿರುದ್ಧವಾಗಿ brand ಆಗುತ್ತಿರಿ! (ವಿಲ್ಸನ್ ರಿಗೆ).
ವಿಲ್ಸನ್ ಕಟೀಲ್ ಅವರ ಕವನ ವಾಸ್ತವೆತೆಗೆ ಹಿಡಿದ ಕನ್ನಡಿಯಂತಿದೆ….!!!