ಕಾವ್ಯಧಾರೆ

ಮೂವರ ಕವಿತೆಗಳು: ಮುಕುಂದ್ ಎಸ್., ಮೌಲ್ಯ ಎಂ., ಅಕುವ

ಲೋ ಮಾರ್ಕು, 
ನೀ ಕಟ್ಟಿದ್ ಜಗ್ಲಿ ಮ್ಯಾಕ್ ಕೂತು, 
ದೊಡ್ಡ್ ದೊಡ್ಡ್ವರು ಹೇಳಿದ್ದು 
ಅರ್ಥವಾಗ್ದಿದ್ರು ಬೇರೆಯವರಿಗೆ
ಷೇರ್ ಗಿರ್ ಮಾಡಿಕ್ಕಂಡು,

ರಾಜಕಾರಣಿ ಹಾಕೋ ಥರಾವರಿ 
ಟೋಪಿಗಳ್ ನಾವ್ ನಮ್ಮ್ 
ಗೆಳ್ಯರಿಗು ಹಾಕಿ, 
ಪರ್ ವಿರೋಧ ಬಾಯ್ ಬಡ್ಕೊಂಡು,
ಫ್ರೆಂಡ್, ಅನ್ ಫ್ರೆಂಡ್ ಅಂತ್
ಆಟ್ಗಳ ಜೊತೆ ಕ್ಯಂಡಿ ಕ್ರಷುಗಳ್ ಬಗ್ಗೆ
ಉರ್ಕೊಂಡು, 

ನಮ್ಮ್ ನಮ್ಮ್ ಪಟ್ವ ತೆಗೆದು 
ಸ್ಚಯಂವರಕ್ಕೆ ರೆಡಿ ಆಗೋ ಪರಿಯಲ್ಲಿ ತೆಗ್ಸಿ,
ಲೈಕುಗಳ ಬಿಕ್ಕ್ಸೆಗೆ ಕಾಯ್ಕೊಂಡು,
ಅಕ್ಕ ಪಕ್ಕ ಇರೋ ಅಣ್ಣ್ ತಮ್ಮದಿರ್
ದೂರ್ ಅಟ್ಟಿ, 
ಪರಿಚಯವಿಲ್ಲದವರ ಹತ್ರ
ಕಸ್ಟ್, ಸುಖ್ವ ಹಂಚ್ಕೊಂಡು, 
ನಮ್ಮ ಸಮಯ ಹಾಳ್ ಮಾಡಿ, 
ನಿನ್ನ ಕೊಪ್ಪರಿಗೆ ಹಿಂದಿನ ವರ್ಸ್ 
ಸೊನ್ನೆ ಬರೆಯಕ್ಕೆ ಜಾಗ ಸಾಲ್ದಷ್ಟು, 
ನಿನ್ನ ವ್ಯಾಪಾರ ಕುದಿರಿಸಿ ಬೆಳಸಿದ್ದಕ್ಕೆ, 
ನಮ್ಗೆ ಬಾಡ್ ಊಟ ಹಾಕ್ಸಿ,
ನಾಲ್ಕ್ ಕಾಸ್ ದಕ್ಕ್ಸಿಣೆ ಕೊಡೋದ್ 
ಬ್ಯಾಡ 
ಬಂದ್ ಲಾಭ್ವಾ ಸ್ವಲ್ಪ ಬಡಬಗ್ಗರಿಗ್ ಹಂಚಿದ್ರೆ, 
ಮಾರ್ಕ್ ಬದಲು ಮಾರ್ಕ್ ಝುಕರ್ಬರ್ಗೆಪ್ಪ , 
ಅಂದೇವು, 
ನೀ ಕಣ್ಣಾಮುಚ್ಚಿ ಬಿಡೋದ್ರೋಳಗೆ
ಸಾವಿರಾರು ಲೈಕು ವತ್ತೇವು 
-ಮುಕುಂದ್ ಎಸ್..

 

 

 

 

( ಫೇಸ್ ಬುಕ್ಕು ಹೋದ ವರುಷ ತನ್ನ ವಹಿವಾಟಿನಲ್ಲಿ ೫ ಬಿಲಿಯನ್ ಡಾಲರುಗಳಷ್ಟು ಲಾಭ ಪಡೆಯುವುದಕ್ಕೆ ಕಾರಣೀಭೂತನಾದ ನನ್ನಿಂದ ಬಿಟ್ಟಿ ಸಲಹೆ)


ಕತ್ತಲು –ಮೌನದ ಮುನಿಸ ಸದ್ದು         
 
ಅಂಜುಬುರುಕಿ
ಸಾಸಿವೆ ಡಬ್ಬಿಯೋಳಗಿಷ್ಟು
ಆತುಮ ಮತ್ತು ಸಾಕ್ಷಿ
-ಗಳೆರಡನ್ನು ಅಡಗಿಸಿದ್ದೆ.
ಅವರ ತಾಪದ ಎಣ್ಣೆಗೆ ಬಿದ್ದು
ಹತ್ಯೆಯಾಗಿದೆ.
ಸಾಕ್ಷಿ ನಾಪತ್ತೆ.
 
ಮುಂಬಾಗಿಲ  ಅಂಗಳದಲ್ಲಿ
ರಂಗೋಲಿಯ ರಟ್ಟೆಗಳನ್ನು
ನಿರೀಕ್ಷೆಯ ಕಸುವನೂ ಬೆರೆಸಿ ಹೆಣೆದಿದ್ದೆ.
ಯಾರದೋ ಪಾದದ ಗುರುತು
ಪೆದ್ದು ನೋಟ ಬೀರುತ್ತಿದೆ.
 
ಆ ನಗು ಪಟದ ಹಿಂದಿನ
ಹುಂಡಿಯಲ್ಲಿಷ್ಟು  ನಾಳೆಗಳ
ಉಳಿಸಿದ್ದೆ.
ಕುಲುಕಿ ನೋಡಿದರೆ
ಈಗ  ಕತ್ತಲು, ಮೌನ
ಮುನಿಸಿದ ಸದ್ದು.
 
ಅವನ ದಿಂಬಿನಡಿಯಲ್ಲಿಷ್ಟು
 ಹಸಿ ಕಾಂಕ್ಷೆ
ಗಳ ಹರಡಿದ್ದೆ.
ರಾತ್ರಿ ಕಳೆದು
ಬೆಳಗು ಮೂಡುವಹೊತ್ತಿಗೆ
ಬೂದಿ ಮಾತ್ರವೇ ಉಳಿದಿದೆ.
 
ಪೆಟ್ಟಗೆಯೊಳಗಿನ
ಮಡಿಕೆ ಮುರಿಯದ
ರೇಶಿಮೆಯೊಳಗೆಷ್ಟೊ ಎದೆಯ
ಚದುರಿದ ನಾದಗಳ
 ಬಿಕ್ಕು ಅವಿಸಿದ್ದೆ..
ಹೊಳೆಯ ಬೆರಳುಗಳ
ಯಾರೋ ಕೊಯ್ದ ಸುದ್ಧಿ..
 
ಕನ್ನಡಿಯ  ಕೆನ್ನೆಗಿಷ್ಟು
ನಗುವ ಮೆತ್ತಿ,
ಹಾವಿ ಹಬ್ಬಿದ ಗಾಜಿನ
ಮಬ್ಬುಗಿವಿಯಲ್ಲಿ
ಏನೇನೋ ಪಿಸುಗಿದ್ದೆ.
 
ಗುಟ್ಟು ಗುಟ್ಟಾಗಿಯೇ
ಹಾರಿಹೋಗಿದೆ
ಎತ್ತಲೋ..
 
ಇಲ್ಲಿ ಕ್ರೌರ್ಯ
ದಾಪುಗಾಲಿಕ್ಕಿ
ಹಗಲಿನಲೋ, ಬಯಲಿನಲೋ
ಎದೆಯುಬ್ಬಿಸಿ ಬಂದು
 ತಬ್ಬುವುದಿಲ್ಲ.
ಕೆನ್ನೆ ಸೀಳಲು
ಖುದ್ದು ಧಾವಿಸುವ ಸಾಸಿವೆಯೊಳಗೂ
ಧ್ಯಾನ ಕೆಡಿಸುವ
ಹಿಕ್ಮತ್ತೇ.

ಹೀಗಿರಲು,
ತುಲನೆಗಿಲ್ಲಿ ಯಾವುದೂ ಗಿಟ್ಟುವುದಿಲ್ಲ.
ನಾವು ಹುಡಿಗಿಯರಿಗೋ..
ವೃಥಾ ಹುಚ್ಚು.
-ಮೌಲ್ಯ ಎಂ

 

 

 

 


ನಾನು ಮತ್ತು ಸಂಪಿಗೆಮರ 

ಹದಿಮೂರು ದಿನ ಕಳೆದಿತ್ತು 
ಮನೆಯಂಗಳ ಮೌನದ  ಮಡುವಾಗಿತ್ತು 
ಕಳೆಯದ ಬಂಧವೋ ತೀರದ ಆಶೆಯೋ 
ಇನ್ನೂ ಜೋತು ಬಿದ್ದಿದ್ದೆ  ಸಂಪಿಗೆ ಮರಕ್ಕೆ !!

ದುಃಖದ ಛಾಯೆ ಹೊರಗೊರಗೆ 
ಮರೆತೇ ಬಿಟ್ಟರಲ್ಲ. ಅಳು ನನ್ನೊಳಗೆ !
ಬಿಡಲಿಕ್ಕೊ ಕೊಡಲಿಕ್ಕೋ ಅಗಾಧ ಅಂತರ 
ಯಾರೂ ನೆನೆದದ್ದು ಮುಟ್ಟಲಿಲ್ಲ ನನ್ನ  ಅಂತರಂಗ !

ನನ್ನಾಕೆಯ ಬಿಕ್ಕಳಿಕೆ ಅಕ್ಕಿಯ ಬಟ್ಟಲಲ್ಲಿ 
ಕಳೆದು ಹೋಗಿತ್ತು !
ಮಗ ಆಗಲೇ ಮರೆತಿದ್ದ ವೃಂದಾವನ 
ಸುತ್ತುತ್ತ ! 
ಇನ್ನುಳಿದವರಿಗೆ ವ್ಯವಹಾರ ಧ್ಯಾನ !

ಅತ್ತು ಬಿಡಲೆಂದರೆ ಸಂದರ್ಭವಿಲ್ಲ 
ಅತ್ತರೂ ಕೇಳುವವರಿಲ್ಲ !
ಸಂಪಿಗೆ ಮರಕ್ಕೆ ದುಃಖವಾದಿತೆಂಬ ಭಯ !
ಸುಮ್ಮನಾದೆ !
ಎಲ್ಲಾ  ನೋಡಿ ನಗುತಿತ್ತು 
ಗೋಡೆ ಏರಿದ ನನ್ನ ಭಾವ ಚಿತ್ರ !!
ಮರವೂ ಕೊಂಬೆ ಮುರಿದುಕೊಂಡು 
ನಕ್ಕಿತ್ತು !!

ಅಶೋಕ್ ಕುಮಾರ್ ವಳದೂರು (ಅಕುವ)

 

 

 

 

 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂವರ ಕವಿತೆಗಳು: ಮುಕುಂದ್ ಎಸ್., ಮೌಲ್ಯ ಎಂ., ಅಕುವ

Leave a Reply

Your email address will not be published. Required fields are marked *