ಝೆನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ಪುಷ್ಪ ವೃಷ್ಟಿ
ಸುಭೂತಿ ಬುದ್ಧನ ಶಿಷ್ಯನಾಗಿದ್ದ. ಶೂನ್ಯತೆಯ ಶಕ್ತಿಯನ್ನು ತಿಳಿಯುವುದರಲ್ಲಿ ಆತ ಯಶಸ್ವಿಯಾಗಿದ್ದ. ವ್ಯಕ್ತಿನಿಷ್ಠತೆ ಮತ್ತು ವಿಷಯನಿಷ್ಠತೆಗಳೊಂದಿಗೆ ಶೂನ್ಯತೆಗೆ ಇರುವ ಸಂಬಂಧದ ಹೊರತಾಗಿ ಏನೂ ಅಸ್ಥಿತ್ವದಲ್ಲಿ ಇಲ್ಲ ಅನ್ನುವ ದೃಷ್ಟಿಕೋನ ಇದು.


ಒಂದು ದಿನ ಮಹೋನ್ನತ ಶೂನ್ಯತೆಯ ಚಿತ್ತಸ್ಥಿತಿಯಲ್ಲಿ ಸುಭೂತಿ ಒಂದು ಮರದ ಕೆಳಗೆ ಕುಳಿತಿದ್ದ. ಅವನ ಸುತ್ತಲೂ ಹೂವುಗಳು ಬೀಳಲಾರಂಭಿಸಿದವು.
“ಶೂನ್ಯತೆಯ ಕುರಿತಾದ ನಿನ್ನ ಪ್ರವಚನಕ್ಕಾಗಿ ನಾವು ನಿನ್ನನ್ನು ಶ್ಲಾಘಿಸುತ್ತಿದ್ದೇವೆ” ಎಂಬುದಾಗಿ ಪಿಸುಗುಟ್ಟಿದರು ದೇವತೆಗಳು.


“ಶೂನ್ಯತೆಯ ಕುರಿತಾಗಿ ನಾನು ಮಾತನಾಡಿಯೇ ಇಲ್ಲ” ಪ್ರತಿಕ್ರಿಯಿಸಿದ ಸುಭೂತಿ.
“ನೀನು ಶೂನ್ಯತೆಯ ಕುರಿತು ಮಾತನಾಡಲಿಲ್ಲ, ನಾವು ಶೂನ್ಯತೆಯನ್ನು ಕೇಳಲೂ ಇಲ್ಲ. ಇದೇ ನಿಜವಾದ ಶೂನ್ಯತೆ” ಅಂದರು ದೇವತೆಗಳು. ಮಳೆ ಸುರಿದಂತೆ ಸುಭೂತಿಯ ಮೇಲೆ ಪುಷ್ಪವೃಷ್ಟಿ ಆಯಿತು.

*****

ಶ್ಲೋಕಗಳನ್ನು (Sutras) ಪ್ರಕಟಿಸುವಿಕೆ
ಜಪಾನ್‌ವಾಸಿ ಝೆನ್ ಭಕ್ತ ಟೆಟ್ಸುಜೆನ್‌ ಅವನ ಕಾಲದಲ್ಲಿ ಚೀನೀ ಭಾಷೆಯಲ್ಲಿ ಮಾತ್ರ ಲಭ್ಯವಿದ್ದ ಶ್ಲೋಕಗಳನ್ನು ಎಲ್ಲರಿಗೂ ತಿಳಿಯುವಂತೆ ಪ್ರಕಟಿಸಬೇಕೆಂದು ತೀರ್ಮಾನಿಸಿದನು. ಪುಸ್ತಕದ ೭೦೦೦ ಪ್ರತಿಗಳನ್ನು ಮರದ ಪಡಿಯಚ್ಚುಗಳಿಂದ ಮುದ್ರಿಸುವ ಪ್ರಚಂಡ ಕಾರ್ಯ ಇದಾಗಿತ್ತು.

ಈ ಉದ್ದೇಶಕ್ಕಾಗಿ ಊರಿಂದೂರಿಗೆ ಪಯಣಿಸಿ ದೇಣಿಗೆ ವಸೂಲಿ ಮಾಡಲು ಟೆಟ್ಸುಜೆನ್ ಆರಂಭಿಸಿದನು. ಸಹಾನುಭೂತಿಯುಳ್ಳ ಕೆಲವರು ಅವನಿಗೆ ೧೦೦ ಚಿನ್ನದ ನಾಣ್ಯಗಳನ್ನು ಕೊಡುತ್ತಿದ್ದರಾದರೂ ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಅಲ್ಪ ಮೌಲ್ಯದ ನಾಣ್ಯಗಳೇ ಲಭಿಸುತ್ತಿತ್ತು. ಪ್ರತೀ ದಾನಿಗೂ ಅವನೂ ಒಂದೇ ರೀತಿಯಲ್ಲಿ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದನು. ೧೦ ವರ್ಷಗಳ ನಂತರ ಕಾರ್ಯಾರಂಭಿಸಲು ಅವಶ್ಯವಿರುವಷ್ಟು ಹಣ ಟೆಟ್ಸುಜೆನ್ ಹತ್ತಿರವಿತ್ತು.

ಆ ಸಮಯಕ್ಕೆ ಸರಿಯಾಗಿ ಉಜಿ ನದಿ ಉಕ್ಕಿ ಹರಿಯಿತು. ಅದರ ಬೆನ್ನ ಹಿಂದೆಯೇ ಬರಗಾಲ ಬಂದಿತು. ಹೊಟ್ಟೆಗಿಲ್ಲದೇ ನರಳುವುದರಿಂದ ಇತರರನ್ನು ಬಚಾವು ಮಾಡಲೋಸುಗ ಪುಸ್ತಕಗಳಿಗಾಗಿ ತಾನು ಸಂಗ್ರಹಿಸಿದ್ದ ನಿಧಿಯನ್ನು ಟೆಟ್ಸುಜೆನ್ ದಾನವಾಗಿ ಕೊಟ್ಟನು. ತದನಂತರ ಪುನಃ ನಿಧಿ ಸಂಗ್ರಹಿಸುವ ಕಾರ್ಯ ಆರಂಭಿಸಿದನು.

ಅನೇಕ ವರ್ಷಗಳ ನಂತರ ಸಾಂಕ್ರಮಿಕ ರೋಗವೊಂದು ದೇಶದಾದ್ಯಂತ ಹರಡಿತು. ಜನರಿಗೆ ಸಹಾಯ ಮಾಡಲೋಸುಗ ಟೆಟ್ಸುಜೆನ್ ಪುನಃ ತಾನು ಸಂಗ್ರಹಿಸಿದ್ದನ್ನು ದಾನವಾಗಿ ನೀಡಿದನು.
ಮೂರನೆಯ ಸಲ ಪುನಃ ಮೊದಲಿನಂತೆಯೇ ತನ್ನ ಕಾರ್ಯ ಮಾಡಲಾರಂಭಿಸಿದ, ೨೦ ವರ್ಷಗಳ ನಂತರ ಅವನ ಆಸೆ ಈಡೇರಿತು. ಶ್ಲೋಕಗಳ ಮೊದಲ ಆವೃತ್ತಿಯನ್ನು ಉತ್ಪಾದಿಸಲು ಉಪಯೋಗಿಸಿದ ಮರದ ಪಡಿಯಚ್ಚುಗಳನ್ನು ಕ್ಯೋಟೋದ ಒಬಾಕು ಆಶ್ರಮದಲ್ಲಿ ಇಂದೂ ನೋಡಬಹುದು.

*****

ಹಗಲುಹೊತ್ತು ನಿದ್ರಿಸುವಿಕೆ
ಗುರು ಸೋಯೆನ್‌ ಶಾಕು ತಮಗೆ ೬೧ ವರ್ಷ ವಯಸ್ಸು ಆದಾಗ ಈ ಪ್ರಪಂಚದಿಂದ ತೆರಳಿದರು. ತಮ್ಮ ಜೀವನದ ಕೆಲಸವನ್ನು ಪೂರೈಸಿದ ಅವರು ಇತರ ಝೆನ್‌ ಗುರುಗಳ ಪೈಕಿ ಬಹಳಷ್ಟು ಮಂದಿಗಿಂತ ಎಷ್ಟೋ ಪಟ್ಟು ಹೆಚ್ಚು ಶ್ರೀಮಂತವಾದ ಮಹಾನ್‌ ಬೋಧನೆಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಶಿಷ್ಯರು ನಡುಬೇಸಗೆಯಲ್ಲಿ ಹಗಲು ಹೊತ್ತು ಮಲಗುತ್ತಿದ್ದರು. ಗುರುಗಳು ಅದನ್ನು ನಿರ್ಲಕ್ಷಿಸುತ್ತಿದ್ದರಾದರೂ ತಾವು ಒಂದು ಕ್ಙಣವನ್ನೂ ಹಾಳು ಮಾಡುತ್ತಿರಲಿಲ್ಲ.

ಅವರು ತಮ್ಮ ೧೩ ನೆಯ ವಯಸ್ಸಿನಲ್ಲಿಯೇ ಟೆಂಡೈ ದಾರ್ಶನಿಕ ಚಿಂತನೆಯನ್ನು ಅಧ್ಯಯಿಸುತ್ತಿದ್ದರು. ಬೇಸಗೆಯಲ್ಲಿ ಉಸಿರುಗಟ್ಟಿಸುವ ಧಗೆ ಇದ್ದ ಒಂದು ದಿನ ಗುರುಗಳು ಹೊರಗೆಲ್ಲಿಗೋ ಹೋಗಿದ್ದಾಗ ಬಾಲಕ ಸೋಯೆನ್‌ ಕಾಲು ಚಾಚಿ ಮಲಗಿದವ ಹಾಗೇ ನಿದ್ದೆ ಮಾಡಿದ.

ಮೂರು ಗಂಟೆಗಳ ನಂತರ ದಿಢೀರನೆ ಎಚ್ಚರವಾದಾಗ ಅವನ ಗುರುಗಳು ಒಳಗೆ ಬರುತ್ತಿರುವ ಸಪ್ಪಳ ಕೇಳಿಸಿತಾದರೂ ತುಂಬ ತಡವಾಗಿತ್ತು. ಅವನು ಬಾಗಿಲಿಗೆ ಅಡ್ಡಲಾಗಿ ಒಡ್ಡೊಡ್ಡಾಗಿ ಕೈಕಾಲು ಚಾಚಿಕೊಂಡು ಮಲಗಿಯೇ ಇದ್ದ.

“ನಾನು ನಿನ್ನ ಕ್ಷಮೆ ಕೋರುತ್ತೇನೆ, ನಾನು ನಿನ್ನ ಕ್ಷಮೆ ಕೋರುತ್ತೇನೆ” ಎಂಬುದಾಗಿ ಪಿಸುಧ್ವನಿಯಲ್ಲಿ ಹೇಳುತ್ತಾ ಗುರುಗಳು ಅವನು ಒಬ್ಬ ಗೌರವಾನ್ವಿತ ಅತಿಥಿಯೋ ಎಂಬಂತೆ ಬಲು ಜಾಗರೂಕತೆಯಿಂದ ಅವನನ್ನು ದಾಟಿದರು. ಸೋಯೆನ್‌ ಅಂದಿನಿಂದ ಎಂದೂ ಮಧ್ಯಾಹ್ನದ ವೇಳೆಯಲ್ಲಿ ಮಲಗಲೇ ಇಲ್ಲ.

*****

ಕನಸಿನಲೋಕದಲ್ಲಿ
ಗುರು ಸೋಯೆನ್‌ ಶಾಕುವಿನ ಶಿಷ್ಯನೊಬ್ಬ ತನ್ನ ಬಾಲ್ಯದ ಪ್ರಸಂಗವೊಂದನ್ನು ಇಂತು ವಿವರಿಸಿದ:
“ನಮ್ಮ ಶಾಲಾ ಮಾಸ್ತರರು ಪ್ರತೀ ಮಧ್ಯಾಹ್ನ ನಸುನಿದ್ರೆ ಮಾಡುತ್ತಿದ್ದರು. ಇಂತೇಕೆ ಮಾಡುವಿರಿ ಎಂಬುದಾಗಿ ನಾವು ಕೇಳಿದಾಗ ಅವರು ಹೇಳಿದರು: ’ಕನ್‌ಫ್ಯೂಶಿಯಸ್‌ ಮಾಡುತ್ತಿದ್ದಂತೆ ನಾನೂ ಹಳೆಯ ಮಹಾಜ್ಞಾನಿಗಳನ್ನು ಸಂಧಿಸಲು ಕನಸಿನ ಲೋಕಕ್ಕೆ ಹೋಗುತ್ತೇನೆ.” ಕನ್‌ಫ್ಯೂಶಿಯಸ್‌ ನಿದ್ದೆ ಮಾಡಿದಾಗ ಪುರಾತನ ಮಹಾಜ್ಞಾನಿಗಳ ಕನಸು ಕಾಣುತ್ತಿದ್ದನಂತೆ ಮತ್ತು ಆ ನಂತರ ಅವರ ಕುರಿತು ತನ್ನ ಶಿಷ್ಯರಿಗೆ ಹೇಳುತ್ತಿದ್ದನಂತೆ. 

ವಿಪರೀತ ಸೆಕೆ ಇದ್ದ ಒಂದು ದಿನ ನಾವು ಕೆಲವರು ನಸುನಿದ್ದೆ ಮಾಡಿದೆವು. ನಮ್ಮ ಶಾಲಾಮಾಸ್ತರರು ಅದಕ್ಕಾಗಿ ನಮ್ಮನ್ನು ಬಯ್ದರು. ’ಕನ್‌ಫ್ಯೂಶಿಯಸ್‌ ಮಾಡುತ್ತಿದ್ದಂತೆ ನಾವೂ ಹಳೆಯ ಮಹಾಜ್ಞಾನಿಗಳನ್ನು ಸಂಧಿಸಲು ಕನಸಿನ ಲೋಕಕ್ಕೆ ಹೋಗಿದ್ದೆವು’ ಎಂಬುದಾಗಿ ವಿವರಿಸಿದೆವು. ನಮ್ಮ ಶಾಲಾಮಾಸ್ತರರು ಕೇಳಿದರು:’ ಮಹಾಜ್ಞಾನಿಗಳ ಸಂದೇಶವೇನು?’ ನಮ್ಮ ಪೈಕಿ ಒಬ್ಬ ಉತ್ತರಿಸಿದ:’ನಾವು ಕನಸಿನಲೋಕಕ್ಕೆ ಹೋಗಿ ಮಹಾಜ್ಞಾನಿಗಳನ್ನು ಸಂಧಿಸಿದೆವು ಮತ್ತು ಪ್ರತೀ ದಿನ ಮಧ್ಯಾಹ್ನ ಅಲ್ಲಿಗೆ ನಮ್ಮ ಶಾಲಾಮಾಸ್ತರರು ಬರುತ್ತಾರೆಯೇ ಎಂಬುದಾಗಿ ಕೇಳಿದೆವು. ಅಂಥ ಯಾವುದೇ ವ್ಯಕ್ತಿಯನ್ನು ನಾವು ನೋಡಿಯೇ ಇಲ್ಲ ಅಂದರವರು.”

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x