ಕಾವ್ಯಧಾರೆ

ಮೂವರ ಕವಿತೆಗಳು: ಮಂಜು ಹಿಚ್ಕಡ್, ಚೇತನ್ ಕೆ ಹೊನ್ನವಿಲೆ, ಕಾಜೂರು ಸತೀಶ್

ಹೂ-ದುಂಬಿ 

ಹೂಬನದಿ ಆಗತಾನೇ

ಅರಳಿದ ಹೂ

ಕಾದಿಹುದು ದುಂಬಿ

ತನ್ನ ಚುಂಬಿಸಲೆಂದು.

 

ಮುಂಜಾವಿನ ತಂಗಾಳಿಗೆ

ಮೈಯೊಡ್ಡಿ ಕಾದಿಹುದು

ಎಂದು ಸೂರ್ಯ,

ಉದಯಿಸಿಹೆನೆಂದು.

 

ಪಕಳೆಗಳ ಅರಳಿಸಿ

ಕಾದಿಹ ಸುಮವ ಕಂಡು

ತಾ ಮೋಹಗೊಂಡು

ಹಾರಿತು ದುಂಬಿ

ಆಗತಾನೆ ಅರಳಿನಿಂತ

ಆ ಸುಮದೆಡೆಗೆ.

 

ಝೇಂಕರಿಸಿ ತನ್ನೆಡೆಗೆ

ಹಾರಿ ಬಂದ ದುಂಬಿಗೆ

ತನ್ನ ಮೈ ಅಲುಗಿಸಿ

ಸ್ವಲ್ಪ ಸತಾಯಿಸಿ

ಸಹಕರಿಸಿತು ದುಂಬಿಗೆ

ತನ್ನ ಮಕರಂದ ಹೀರಲು.

 

ಮಕರಂದ ಹೀರಿ

ತನ್ನಾಸೆ ತೀರಿತೆಂದು

ಹಾರಿತು ದುಂಬಿ

ಇನ್ನೊಂದರ ಬಳಿಗೆ.

 

ಆತ ಮತ್ತೆ ಬರಬಹುದೆಂದು

ಸೂರ್ಯ ಮುಳುಗಿ

ಭಾನು ಕೆಂಪಾಗುವವರೆಗೆ ಕಾದು

ತಾನು ಮರುಗಿ, ಸುಸ್ತಾಗಿ

ಹಾರಿ ಹೋದ ಆ

ದುಂಬಿಯ ನೆನಪಾಗಿ

ಪಕಳೆಗಳನ್ನುದಿರಿಸಿತು

ತನ್ನ ಗಿಡದ, ಬುಡದ ಬಳಿಗೆ.

 

ಮಕರಂದ ಹೀರಿ

ಆಸೆ ಹತ್ತಿದ ದುಂಬಿಗೆ

ಕಂಡ ಕಂಡದ್ದೆಲ್ಲ ಹೂವೆಂದು

ತಿಳಿದು ಹಾರಿತು

ರಸ್ತೆ ದೀಪದ ಬಳಿಗೆ.

 

ಉರಿವ ದೀಪವ ಸುತ್ತಿ

ಸುಟ್ಟು ಕರಕಲಾಗಿ ಬಿದ್ದಿತು

ದೀಪದ ಕಂಬದ ಬಳಿಗೆ.

–ಮಂಜು ಹಿಚ್ಕಡ್ 


ಅಮ್ಮ!! 

ಹಲ್ಲು ಬಂತಾ ಅಂತ,
ಬೊಟ್ಟು  ಬಾಯೊಳಗಿಟ್ಟು 
ಒಸಡು ಒತ್ತಿ ನೋಡುವಳು, 

ಚಿಗುರು ಹಲ್ಲು  ಉಜ್ಜಲು,
ನಚ್ಚಗಾಗಿ, 'ಅಬ್ಬಾ!! ' ಅಂದು,
ತನ್ನೊಳಗೆ ತಾನು ಸುಖಿಸುವಳು.

ಮೊದ-ಮೊದಲ ಮಕಾಡೆಗೆ, 

ಬಲದ ಕೈ!! ಸಿಕ್ಕಾಕೊಂಡು..,
' ಹಿಯ್ ' ಎಂದು ಅಳುವ ಹೊತ್ತು,
'ಅಂಗಾತ' ಮಾಡಿ ನಗುವಳು!! 

ಮೊದಲ ಎರಡು 
ಹೆಜ್ಜೆ ಇಟ್ಟು  

ವಗ್ಗಾಲೆ ತೂಗಿ ಬೀಳುವಾಗ,
ಬೊಗಸೆಯೊಡ್ಡಿ  ಹಿಡಿವಳು, 
ಮಂಡಿ ಮೇಲೆ ತಾನು ಕೂತು,
ತೆವಳುತ್ತ  ಇಂಥ ಕ್ಯಾಚಿಗಾಗಿ 
ಹಿಂದೆ-ಹಿಂದೆ ಅಲೆವಳು. 

ತೊದಲು ನುಡಿಗೆ ,
ಕಿವಿಯ ಕೊಟ್ಟು ..,
ಬೇಕಾದಂತ ಅರ್ಥವಿಟ್ಟು  .. 
ಮೊದಲ!! ಎಲ್ಲಾ ಅಭಾಸಗಳನು 

ಹಿಡಿ-ಹಿಡಿಯಾಗಿ ಸಂಭ್ರಮಿಸುವಳು.  

ಮೊಲೆಯಹಾಲ ರೂಢಿಯನ್ನ
ಬಿಡಿಸಬೇಕು ಅಂದಮೇಲೆ  
ಅಮೃತದ ನಳಿಗೆಗೆ 

ಬೇವು ಅರೆದು ಹಚ್ಚುವಳು. 
ಮೋಸ ಇದು!! ಅಂದರೂ 
ನಿನ್ನ ಸುಳ್ಳುಗಳಿಂದಲೇ  ಅಲ್ಲವೇನೆ  
ಮೊದಲಾಗಿದ್ದು  ಸತ್ಯಾನ್ವೇಷಣೆ!!
 
ಕೆತ್ತಿದ ಮೂರ್ತಿಯ  ಕಂಡು 
ಶಿಲ್ಪಿಯೇ ನಿಬ್ಬೆರಗಾದಂತೆ 
ತನ್ನ ಸೃಷ್ಟಿಗೆ ತಾನೇ. ಮಾರುಹೋಗುವಳು. 
ಬರೆದ ಕವಿತೆಯನ ತಿರುಗಿ,
ಕವಿಯೊಬ್ಬ ಉರು ಹೊಡೆದಂತೆ
ನಿನ್ನ ನಿನಗಿಂತಲೂ ಹೆಚ್ಚು  ಓದುವಳು. 
-ಚೇತನ್ ಕೆ ಹೊನ್ನವಿಲೆ 

 

*ಒಲೆ ಮತ್ತು ಅವ್ವ*

ದೀಪ ಆರಿಸಿ 
ಬೂದಿಯ ಹಾಸಿ ಮಲಗಿದರೂ
ಸುಡುವ ಕೆಂಡ ಒಳಗೆ.

ನಿದ್ರಿಸಿದರೂ ಹೊಗೆಯಾಡುತ್ತದೆ
ಗತದ ಹಾಳೆ ತಾಗಿದೊಡನೆ
ಒಂದೇ ಉಸಿರಿಗೆ ಓದಿ ಮುಗಿಸುತ್ತದೆ.

ಅವ್ವನ ಉಸಿರ ಕುಡಿಯಲು
ಚರ್ಮದ ರುಚಿ ಚಪ್ಪರಿಸಲು
ಕೆಡದೆ ಕಾಯುತ್ತದೆ ಮುಂಜಾವದವರೆಗೂ.
ಬೆಕ್ಕಿನ ಬೆಚ್ಚನೆಯ ಗುರುಗುರು ಲಾಲಿಹಾಡಿಗೆ
ಉರಿಯುತ್ತಾ ನಿದ್ದೆಹೋಗುತ್ತದೆ ಒಲೆ.

ಫೂ…ಫೂ…ಊದಿದರೂ ಹೊತ್ತದ ಹೊತ್ತು
ಸಂಕಟಗಳು  ಬೆಂದು ಆವಿಯಾಗಲು
ಒಳಗೊಳಗೇ ಒಲೆಯಾಗುತ್ತಾಳೆ ಅವ್ವ.

ಹೊಗೆಯಾಡುತ್ತಲೇ ಇದೆ ಲೋಕದ ಒಲೆ
ಕಾಯುತ್ತಲೇ ಇದೆ ಸಿಡಿಮದ್ದಿನ ಬತ್ತಿಗಾಗಿ.

ಹೊಗೆಯಿಲ್ಲದ ಮಹಾನಗರದ ಒಲೆಗಳಲ್ಲಿ
ಸುಟ್ಟ ಸಂಬಂಧಕ್ಕೆ ಸಾಕ್ಷಿಯಾಗಿ
ಬೂದಿ ಕೂಡ ಉಳಿಯುವುದಿಲ್ಲ.

ಹೊತ್ತಿಕೊಂಡಿರಲಿ ಒಲೆ
ಅನ್ನ ಬೇಯುವವರೆಗೆ.

-ಕಾಜೂರು ಸತೀಶ್

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮೂವರ ಕವಿತೆಗಳು: ಮಂಜು ಹಿಚ್ಕಡ್, ಚೇತನ್ ಕೆ ಹೊನ್ನವಿಲೆ, ಕಾಜೂರು ಸತೀಶ್

Leave a Reply

Your email address will not be published. Required fields are marked *