ಎದ್ದಾಗ ಸುತ್ತೆಲ್ಲ ಕತ್ತಲು
ಸಾಯುವ ದಿನ ನಿಕ್ಕಿಯಿಲ್ಲವೆಂದು
ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು
ತಿಂದುಬಿಡುವ ಕಾತುರಕೆ
ಹಸಿವು ಸಾಯುವುದಿಲ್ಲ.
ಇದ್ದ ಎಣ್ಣೆಯನೆಲ್ಲ ದೀಪಕೆ ಸುರುವಿ
ಬೆಳಕನು ಹೊದ್ದು ಗಡದ್ದು ನಿದ್ದೆ
ಎದ್ದಾಗ ಸುತ್ತೆಲ್ಲ ಕತ್ತಲು.
ನಿರ್ದಯ ದೈವದೆದುರು ಮುಗಿದ ಕೈಗಳು
ನೈವೇದ್ಯದ ಸಕ್ಕರೆ ಇರುವೆ ತಿಂದು ಖಾಲಿ
ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೆ
ಖಾಲಿ ಪುಟದ ತುಂಬೆಲ್ಲ ರಾಡಿ.
ಅತಿರಥ ಮಹಾರಥ ಭಗೀರಥ ಪ್ರಯತ್ನ
ಆಗಸ ಮುಟ್ಟುವ ಹುತ್ತಿನ ಪರ್ವತದ ಹಿಂದೆ
ಮುದ್ದಿಸುವ ಇರುವೆಗಳು ಕಾಣದೇ
ವಿಜಯ ದುಂದುಭಿ ಝೇಂಕಾರ.
ಗಡಚಿಕ್ಕುವ ಕಾಂಕ್ರೀಟು ಕಾಡುಗಳ ಮಧ್ಯ
ತೊನೆದಾಡುವ ಮರಗಳ ಚೀತ್ಕಾರ
ಸೌಂದರ್ಯ ಧಗಧಗಿಸಿ ಕಣ್ಣನೋವು
ಕೋಗಿಲೆಯ ಗಾನಕೆ ಕಿವಿಗೆ ಬಾವು.
ಸಂಬಂಧಗಳ ನಾತ ನೆತ್ತಿಗೇರಿ
ಪ್ರೇಮಕ್ಕೂ ಕಾಮಕ್ಕೂ ರಾತ್ರಿಯಿಡಿ ಸೆಣಸಾಟ
ಸ್ನೇಹಕ್ಕೂ ಸ್ವಾರ್ಥಕ್ಕೂ ನಿಲ್ಲದ ಗೊಣಗಾಟ
ಕಂಬನಿಗೂ ಮುಗುಳಿಗೂ ಕಣ್ಣುಮುಚ್ಚಾಲೆ
ಹೆಡ್ಡುವ ಪ್ರತಿ ಖೆಡ್ಡದಲಿ ನಿಧಿಯ ಹುಡುಕಾಟ.
ಗದ್ದಲಕೆ ನನ್ನ ಛೀಮಾರಿ.
–ಪ್ರವೀಣ
ಮರಳಿ ವಶವಾಗುವುದೆಂದರೆ
ಮರಳಿ ವಶವಾಗುವುದೆಂದರೆ ನಿನಗೆ
ಶವವಾದಂತೆ ನನಗೆ,
ನಿನ್ನೆತ್ತರದ ಆಕೃತಿಯು ಹದ್ದಿನಂತೆ
ಬಿಸುಟು ಕುಕ್ಕಲು
ನಾನು ಶವವಾಗುವುದಿಲ್ಲ,
ನಿನಗೆ ವಶವಾಗುವೂ ಇಲ್ಲ.
ಬೇಡ ಪ್ರೇಮದ ಡೊಂಬರಾಟ, ಲಕಲಕನೆ
ಫಳ್ ಗುಟ್ಟು, ನಡುನಡುವೆ
ಮನಮರೆಸಿ, ಸಾಕು ಎಂದೆನಿಸದೆ
ದೇನಿಸುವಂತೆ ಕಾಡುವ ಮೋಹ,
ಈಗ ಬದ್ಧತೆಗೆ ವಿಶ್ವಪ್ರೇಮದ
ಬಿಂಧುಗಳು ಸೆರೆಹಿಡಿದಿವೆ.
ನೋಡುವ ನೋಟದಲ್ಲಿ ಬರೀ ನೀನು ಮಾತ್ರ ಇಲ್ಲ,
ನಿನ್ನೊಂದಿಗೆ ನಿನ್ನ ಕಳೆಗಟ್ಟಿದ ಕೂದಲು,
ಆಸೆಯ ಕಣ್ಣು ಮಂಜಾಗಿ
ಸುತ್ತಲಿನ ಬಡವರು, ಕೊಳೆಯಾದ ಮೈಲಿಗೆ
ಬಟ್ಟೆಗಳು, ಎಣ್ಣೆಯಿಲ್ಲದ ತಲೆ,
ಅನ್ನವಿಲ್ಲದ ಹೊಟ್ಟೆ,, ಹೊಡೆದ ಹಿಮ್ಮಡಿ,
ಬಿರಿದ ತುಟಿಗಳು, ರಸ್ತೆ ಬದಿಯಲ್ಲೆಲ್ಲಾ ನಿಂತ ಪ್ರಯಾಣಿಕರು
ಬರದ ಬಸ್ ಗೆ ಕಾಯುತ್ತಲೇ ಇರುವ ಕಾಲೇಜ್
ಹುಡುಗ-ಹುಡುಗಿಯರು,
ಬ್ಯಾಗಿನ ಮೂಟೆ ಎಳೆದೊಯ್ಯುವ ಹೈಟೆಕ್ ಶಾಲೆಯ
ಮಕ್ಕಳ ಸ್ಕೂಲ್ ಬಸ್ಸು..
ಪ್ರಿಯಾ, ಕಣ್ಣು ತೆರೆಸಿದೆ, ಇನ್ನು ನನ್ನ ಪಯಣ ಚಲಿಸುತ್ತಿದೆ…
-ನಳಿನಾ ಡಿ.
ಎದೆಯಲೊಂದು ಸಣ್ಣ ಕರುಳು..!!
ಮರುಳು ಮಾಡುವಂಥ ನೋಟ,
ಕರುಣೆಯಿರದೆ ಕಾಡುತಿಹುದು.
ವಿರಳವಾದ ನಗೆಯ ಭಕ್ಶ್ಯ,
ಸರಿದು ನೀಡಿದಾಗ ಕಾಟ.
ಬೆರಗಿನಲ್ಲಿ ಸಣ್ಣ ಕರುಳು
ಚುರುಕ್ ಎಂದಿತು.
ಬರಿದೆ ನೋಡಿದರೂ ಸಾಕು,
ಒರಗಿ ಮೈಯ ಮರೆಯುವೆ.
ಅರಿತು ನಗೆಯ ಸೂಸಿಬಿಟ್ಟೆ,
ತಿರುಗಿ ಬಿಟ್ಟ ಬುಗುರಿಯಂತೆ.
ಕೆರಳಿ ಬಿಟ್ಟ ಸಣ್ಣ ಕರುಳು
ಚುರುಕ್ ಎಂದಿತು.
ಗಗನದಲ್ಲಿ ಮುಗಿಲಮಾಲೆ,
ನಗುವಿನಡೊನೆ ಒಲವಿನಲ್ಲೆ .
ಸೊಗಸಿನೊಡನೆ ಉಸುರುತಿರಲು,
ಜಗದ ತುಂಬ ನೀನೆ ಇರಲು.
ಮಗುವಿನಂಥ ಸಣ್ಣ ಕರುಳು
ಚುರುಕ್ ಎಂದಿತು.
ಎನ್ನ ಮನದ ಗಲ್ಲಿ ಗಲ್ಲಿ,
ನಿನ್ನ ಬಯಸಿ ಹಾಡುವಾಗ,
ಕಣ್ಣುಗಳಲಿ ಹೊಸತು ಬಣ್ಣ,
ಸಣ್ಣ ಸಣ್ಣ ಆಸೆ ಚಿಗುರಿ,
ಹೆಣ್ಣಿನಂಥ ಸಣ್ಣ ಕರುಳು
ಚುರುಕ್ ಎಂದಿತು.
ಹಲವುಬಾರಿ ನೋಡಿ ಸೋತು,
ಕೆಲಸವೆಲ್ಲ ಮರೆತುಹೋಯ್ತು.
ಒಲವ ಬಯಸಿ ಬಳಲಿ ಬಳಲಿ,
ಮಳೆಯ ಕಂಡ ನೆಲದ ಹಾಗೆ.
ಚೆಲುವ ಕಂಡ ಸಣ್ಣ ಕರುಳು
ಚುರುಕ್ ಎಂದಿತು.
ಭಾವನೆಗಳು ತಲೆಗೆ ಏರಿ,
ಹಾವಭಾವವಾಗಿ ತೋರಿ.,
ಜೀವವನ್ನು ಬಯಸುವಾಗ,
ನಾವೆಯಂತೆ ನೀನು ಕಂಡೆ,
ಹೂವಿನಂಥ ಸಣ್ಣ ಕರುಳು
ಚುರುಕ್ ಎಂದಿತು.
ಕಾಣೆಯಾದ ಹೃದಯವನ್ನು.,
ಓಣಿ ಓಣಿ ಹುಡುಕುವಾಗ,
ರಾಣಿಯಾಗಿ ನೀನು ಕಂಡೆ.
ಏಣಿ ಏರಿ ನಿನ್ನ ತಲುಪೆ,
ಬಾಣದೇಟು ತಿಂದ ಕರುಳು
ಚುರುಕ್ ಎಂದಿತು.
ಬೆದರುತಿಹುದು ಬಿದಿರು ಬೊಂಬೆ,
ಪೊದರು ತುಂಬ ಮನದಲಿ.
ಕೆದರಿ ಕೆದರಿ ಕೆಣಕುವಾಸೆ,
ಸದರಿ ನಿನ್ನ ಕಾಣಲಾಗ,
ಎದೆಯ ಒಳಗೆ ಸಣ್ಣ ಕರುಳು
ಚುರುಕ್ ಎಂದಿತು.
–ಶಶಿಕಿರಣ್