ಈಗಿನ ಕಾಲದಲ್ಲಿ ಕ್ರೆಡಿಟ್ ಕಾರ್ಡಿಲ್ಲದವನು, ಮೊಬೈಲ್ ಫೋನಿರದವನು ಶ್ವಾನಕಿಂತ ಕಡೆಯೆಂದ ಸರ್ವಜ್ಞ!
ದೂರವಾಣಿ ಮಾಡಿ ತಲೆ ತಿನ್ನುವ ಕ್ರೆಡಿರ್ಟ್ ಕಾರ್ಡು ಕಂಪನಿಯವರನ್ನು ನಾನು ಒಮ್ಮೆ ಸತಾಯಿಸಿದ್ದು ಹೀಗೆ.
’ಸರ್, ದಯವಿಟ್ಟು ನಿಮ್ಮ ಕೆಲ ನಿಮಿಷಗಳನ್ನು ಬಳಸಿಕೊಳ್ಳಲೇ?’ ಕರ್ಣಾನಂದಕರ ದನಿ, ಆಂಗ್ಲ ಭಾಷೆಯಲ್ಲಿತ್ತು.
’ಸರಿ, ಹೇಳಿ,’
’ನಾವು… ಬ್ಯಾಂಕಿನವರು. ನಿಮಗೆ ಕ್ರೆಡಿಟ್ ಕಾರ್ಡನ್ನು ಫ್ರೀಯಾಗಿ ಕೊಡುತ್ತೇವೆ.’
ನಾನು ಅವಳ ಮಾತು ಮುಂದುವರಿಸುವ ಮೊದಲೇ ಹೇಳಿದೆ, ’ಹೌದಾ? ನನಗೆ ನಿಜವಾಗಿಯೂ ಕ್ರೆಡಿಟ್ ಕಾರ್ಡಿನ ಅವಶ್ಯಕತೆ ಇದೆ. ನಾನು ಈಗಾಗಲೇ ಮೂರು ನಾಲ್ಕು ಬ್ಯಾಂಕಿನವರಿಗೆ ಡಿಫಾಲ್ಟರ್ (ಹಣ ಕಟ್ಟಲಾಗದೇ ಬಾಕಿ ಉಳಿಸಿಕೊಂಡದ್ದು) ಆಗಿದ್ದೇನೆ. ಅವರೂ ನನ್ನ ಕಾರ್ಡನ್ನ ಡಿಸ್‌ಆನರ್ (ಚಲಾವಣೆಯಾಗದಂತೆ ತಡೆಯುವುದು) ಮಾಡಿದ್ದಾರೆ. ಯಾವಾಗ ನನಗೆ ಕಾರ್ಡು ಸಿಗುತ್ತದೆ? ನೀವು ನನಗೆ ಕಾರ್ಡನ್ನು ಕೊಡಲೇಬೇಕು. ಯಾಕೆಂದರೆ ನಾನು ಹಾನೆಸ್ಟ್ (ನಂಬಿಕಸ್ಥ)ನಾಗಿ ಯಾವ ವಿಷಯಗಳನ್ನೂ ಮುಚ್ಚಿಡದೇ ಹೇಳಿದ್ದೇನೆ. ನೀನು ನನ್ನನ್ನು ಗೌರವಿಸಬೇಕು. ಯಾವಾಗ ಬರಲಿ ನಿಮ್ಮ ಕಚೇರಿಗೆ ಅಥವಾ ಯಾರಾದರೂ ಬರುತ್ತಾರೆಯೇ?….’
ಆಕೆ ನನ್ನ ಮಾತಿನ ನಡುವೆಯೇ ಅನೇಕ ವಿಷಯಗಳನ್ನು ಕೇಳಲು, ಹೇಳಲು ಬಯಸಿದ್ದರೂ ನಾನು ಬಿಡುವು ಕೊಡದೇ ಹೇಳುತ್ತಿದ್ದೆ. ಕೊನೆಗೆ ಅವಳೇ ಕರೆ ಕಟ್ ಮಾಡಿದಳು. ಬಹುಶಃ ಈ ಫೋನ್ ಸಂಖ್ಯೆಗೆ ಪುನಃ ಕರೆ ಬರಲಿಕ್ಕಿಲ್ಲ.
ನಮ್ಮ ಬಾಲ್ಯದಿಂದಲೇ ಸಾಲದ ಬಗ್ಗೆ ನಮಗೆ ಜ್ಞಾನ ಕೊಡಲಾಗುತ್ತದೆ. ನಮ್ಮ ಶಾಲೆಯ ಗಣಿತದ ವಿಷಯದಲ್ಲಿ ಪಾಠವಿತ್ತು, ’ರಂಗಪ್ಪನು ರಾಮಪ್ಪನಿಂದ ಒಂದು ಸಾವಿರ ರೂಪಾಯಿ ಸಾಲ ತೆಗೆದುಕೊಳ್ಳುತ್ತಾನೆ, ವರ್ಷಕ್ಕೆ ಹತ್ತು ಪರ್ಸೆಂಟ್ ಬಡ್ಡಿಯ ಮೇಲೆ. ವರ್ಷದ ನಂತರ ರಂಗಪ್ಪನು ಮರುಪಾವತಿಸಬೇಕಾದ ಹಣ ಎಷ್ಟು?’ ಎಂಬಂತಿರುತ್ತಿದ್ದವು ಆ ಪ್ರಶ್ನೆಗಳು.
’ಏನೂ ಇಲ್ಲ,’ ಎಂದು ಹೇಳಿದೆ ನಾನು.
’ಏನೋ, ಅಷ್ಟೂ ಗಣಿತ ಜ್ಞಾನವಿಲ್ಲವಾ? ಏನೂ ಇಲ್ಲ ಅಂತಿ?’ ಎಂದು ಗದರಿದರು ಮೇಸ್ಟರು.
’ಗಣಿತ ಜ್ಞಾನ ಇದೆ ಸರ್. ಆದರೆ ನಿಮಗೆ ರಂಗಣ್ಣನ ಬಗ್ಗೆ ಜ್ಞಾನ ಇಲ್ಲ,’ ಎಂದುತ್ತರಿಸಿ ಕೈ ಬಾಸುಂಡೆಯೇಳಿಸಿಕೊಂಡಿದ್ದೆ ನಾನು. ಏನೇ ಆದರೂ ಈ ಪಾಠಗಳು ನಮ್ಮನ್ನು ಸಾಲ ಪಡೆಯುವಂತೆ ಪ್ರೋತ್ಸಾಹಿಸುತ್ತವೆ.
ಕೆಲವು ಸಾಲಗಳನ್ನು ನಾವು ಮಾಡಲೇಬೇಕಾಗುತ್ತದೆ. ಅವೆಂದರೆ ಮನೆ ಕೊಳ್ಳಲು/ಕಟ್ಟಲು ಸಾಲ, ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಸಿಗುತ್ತದೆ. ಕೆಲವು ಬಾರಿ ಮಗಳ ಮದುವೆ ಮಾಡಲು ’ಸಾಲಂಕೃತ’ ಮದುವೆ, ಇತ್ಯಾದಿ. ಸಾಲ ಮಾಡದೇ ಮದುವೆ ಮಾಡಲು ಜನಸಾಮಾನ್ಯರಿಗೆ ಸಾಧ್ಯವೇ ಇಲ್ಲ! ಕನ್ಯಾಪಿತೃತ್ವಂ ಖಲು ನಾಮ ಕಷ್ಟಂ.
ಸಾಲ ಎಂಬುದು ಸುಳ್ಳಿನ ಸಹೋದರ. ಬೇರೆಯವರ ಹತ್ತಿರ ಹೋಗಿ ಸಾಲ ಕೇಳುವಾಗ ನನಗೆ ರೇಸ್‌ಗೆ ಹೋಗುವುದಿದೆ, ಗೆಳೆಯರಿಗೆ ಪಾರ್ಟಿ ಕೊಡಬೇಕು, ಗರ್ಲ್ ಫ್ರೆಂಡ್‌ಗೆ ಚಿನ್ನದ ಸರ ಕೇಳ್ತಿದ್ದಾಳೆ, ಇಸ್ಪೀಟ್ ಆಡಬೇಕು, ಸಾಲ ಕೊಡಿ ಎಂದರೆ ಚಿಕ್ಕಾಸೂ ಹುಟ್ಟುವುದಿಲ್ಲ. ಹಾಗಾಗಿ ತಂದೆಯ ಹಾರ್ಟ್ ಆಪರೇಶನ್, ತಾಯಿಯ ಅನಾರೋಗ್ಯ, ಮಗನಿಗೆ ಅಪಘಾತವಾಗಿದ್ದು, ಇಂತರ ಸುಳ್ಳುಗಳನ್ನು ಹೇಳಬೇಕಾಗುತ್ತದೆ. ಹೆಚ್ಚು ವರ್ಣರಂಜಿತ ಸುಳ್ಳನ್ನು ಹೇಳಿದರೆ ಹೆಚ್ಚು ಫಲ ಸಿಗುತ್ತದೆ. ನಿಮ್ಮ ಮುಖಭಾವ ಹೇಗಿರಬೇಕೆಂದರೆ ನಿಮಗೆ ಸಾಲ ಕೇಳಲು ಇಷ್ಟವಿಲ್ಲ, ಆದರೆ ಪರಿಸ್ಥಿತಿ ಹಾಗೆ ಮಾಡಿಸಿದೆ ಎಂಬುದನ್ನು ತೋರಿಸುವಂತಿರಬೇಕು. ನಾಯಿ ಮಾರಿದ ದುಡ್ಡೇನೂ ಬೊಗಳುವುದಿಲ್ಲ. ಹೇಗೆ ಬಂದರೂ ಹಣ ಹಣವೇ.
ಸಾಲ ಕೇಳುವಾತ ಸಾಲ ಕೊಡುವಾತನ ಮೂಡನ್ನು ಸರಿಯಾಗಿ ಅಭ್ಯಸಿಸಬೇಕು. ಅವನ ಗುಣಾವಗುಣಗಳೇನು, ಅವನ ಇಷ್ಟಾನಿಷ್ಟಗಳೇನು, ಅವನು ಯಾವ ಸಮಯದಲ್ಲಿ ಸಂತೋಷದಿಂದಿರುತ್ತಾನೆ, ತಾನು ಹಣ ಕೇಳುವಾಗ ಅವನು ಹೆಂಡತಿಯೊಡನೆಯೋ, ಕಚೇರಿಯಲ್ಲಿಯೇ, ಮಕ್ಕಳೊಂದಿಗೋ ಜಗಳಾಡಿ ಕೆಟ್ಟ ಮನಸ್ಥಿತಿಯಲ್ಲಿ ಇಲ್ಲ ತಾನೇ, ಎಂದೆಲ್ಲಾ ಪರಿಶೀಲಿಸಬೇಕು.
ಸಾಲ ಕೇಳುವುದು ಹೇಗೆ ಎನ್ನುವುದನ್ನು ನಾನು ಸಾಲಿಗನಾಗಿ, ನೀವು ಸಾಲಗಾರನಾಗಿ ನಿಂತು ಯೋಚಿಸೋಣ.
ನೀವ ನನ್ನ ಮನೆಗೆ ಬರುವಾಗ ನಾನು ಯಾವತ್ತು ಸಂತೋಷದಿಂದ, ಪ್ರಫುಲ್ಲತೆಯಿಂದ ಇರುತ್ತೇನೆಯೇ ಎಂದು ನೋಡಿಕೊಂಡು ಬರುತ್ತೀರಿ. ನೀವು ಮನೆಯೊಳಗೆ ಬರುತ್ತಲೇ ನನ್ನ ದರ್ಜೆಗೆ ಅನುಗುಣವಾಗಿ ಗುಡ್ ಮಾರ್ನಿಂಗ್ ಸರ್ ಎಂದೋ, ನಮಸ್ಕಾರ ಎಂದೋ, ಹಾಯ್ ಎಂದೋ ಹೇಳಬೇಕು. ನೇರವಾಗಿ ಸಾಲ ಕೇಳುವ ತಪ್ಪು ಮಾಡಬೇಡಿ. ನಿಮ್ಮ ದನಿ ಅತ್ತ ದಯನೀಯವಾಗಿಯೋ, ಇತ್ತ ಆರ್ಡರಿಸುವಂತೆಯೋ ಇರಬಾರದು. ನೀವು ಬಿಡಿ, ತಿಳಿದವರು, ಈ ವೃತ್ತಿಯಲ್ಲಿ ಪರಿಣಿತರು. ನಿಮಗೆ ಹೆಚ್ಚೇನೂ ಹೇಳಬೇಕಿಲ್ಲ.
ನನ್ನ ಕುಶಲ ವಿಚಾರಿಸಿ, ನನ್ನ ಮಕ್ಕಳು ಏನು ಮಾಡುತ್ತಿದ್ದಾರೆ, ಕೆಲಸದಲ್ಲಿ ಬಡ್ತಿ ಸಿಕ್ಕಿದೆಯೋ ಹೇಗೆ, ಹೊಸ ಸೈಟನ್ನು ಕೊಂಡಿದ್ದೀನಾ, ಎಂದೆಲ್ಲಾ ಮಾತು ಆರಂಭಿಸಿ ನಂತರ ಅದು ಪ್ರಸ್ತುತ ರಾಜಕೀಯಕ್ಕೆ ಬಂದು, ’ಹೊಲಸು ವಿಷಯ ಮಾತಾಡಿ ಏಕೆ ಬಾಯಿ ಗಲೀಜು ಮಾಡಿಕೊಳ್ಳಬೇಕು,’ ಎಂದು ಮಾತು ನಿಲ್ಲಿಸಿ. ನಾನು ಬುದ್ಧಿವಂತ, ನೀವು ಯಾಕೆ ಬಂದಿದ್ದೀರಿ ಎಂಬುದು ನನಗೆ ಗೊತ್ತು.
ಕುಳಿತುಕೊಳ್ಳಿ ಎನ್ನುತ್ತೇನೆ ನಾನು. ’ಸಾರ್, ನೀವು ದೊಡ್ಡ ಮನುಷ್ಯರು, ನಿಮ್ಮ ಎದುರು ನಾನು ಕುಳಿತುಕೊಳ್ಳುವುದೇ, ಏನೋ ಹೇಳ್ತಿದ್ದೀರಿ ಎಂದು..’, ಎಂದು ಹೇಳುತ್ತಾ ನೀವು ಕುರ್ಚಿಯ ಮುಂತುದಿಯಲ್ಲಿ ಕುಳಿತುಕೊಳ್ಳುತ್ತೀರಿ, ವಿನಯದಿಂದ.
ನಿಧಾನವಾಗಿ ನೀವು ವಿಷಯಕ್ಕೆ ಬರುತ್ತೀರಿ. ’ಅರ್ಜೆಂಟಾಗಿ ಒಂದು ಹತ್ತು ಸಾವಿರ ಬೇಕಿತ್ತು ಸೂರಿ. ನನ್ನ ಎಲ್ಲಾ ಹಣ ಎಲ್ಲೆಲ್ಲೋ ಸಿಕ್ಕಿ ಹಾಕಿಕೊಂಡು ಸಮಯಕ್ಕೆ ಸರಿಯಾಗಿ ಸಿಕ್ಕುತ್ತಿಲ್ಲ.
ನೀವು ನನ್ನನ್ನು ತುಂಬಾ ಸಭ್ಯ, ಜನ ಸೇವಕ, ಸಮಾಜೋದ್ಧಾರಕ, ಕಷ್ಟದಲ್ಲಿರುವ ಜೀವಿಗಳನ್ನು ಕಂಡರೆ ಕರುಣೆತೋರುವ ವ್ಯಕ್ತಿ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತೀರಿ. ನನಗೆ ಗೊತ್ತು, ’ಸರ್ವೇ ಗುಣಾಃ ಕಾಂಚನಮಾಶ್ರಯಂತೇ’ (ಭರ್ತೃಹರಿ) ಎಂಬ ಹೇಳಿಕೆ. ಸರ್ವೆ ಎಂದರೆ ಆಂಗ್ಲ ಪದವಲ್ಲ, ಸರ್ವೆ ಡಿಪಾರ್ಟ್‌ಮೆಂಟಿಗೆ ಸಂಬಂಧಿಸಿದ್ದಲ್ಲ. ನಾನು ನಿರ್ಲಕ್ಷಿಸುತ್ತೇನೆ.
ನೀವು ನನ್ನ ಮನಸ್ಸನ್ನು ಕರಗಿಸಲು ಯತ್ತಿಸುತ್ತೀರಿ, ಅಂದರೆ ಇಮೋಶನಲ್ ಬ್ಲಾಕ್‌ಮೈಲ್. ನಾನು ಹೆಚ್ಚು ಎಚ್ಚರ ವಹಿಸುತ್ತೇನೆ, ಯಾಕೆಂದರೆ ನಿಮಗೆ ಕೊಟ್ಟ ಹಣ ನೀರಿನಲ್ಲಿ ಮಾಡಿದ ಹೋಮ.
ನನಗೆ ಗೊತ್ತು, ನಿಮಗೆ ಬೇಕಿರುವುದು ಹತ್ತು ಸಾವಿರ ಅಲ್ಲ, ಒಂದು ಸಾವಿರ ಅಂತ. ಹಾಗಂತ ನೀವು ಒಂದೇ ಸಾವಿರ ಕೇಳಿದರೆ ನನ್ನಿಂದ ನಿಮಗೆ ನೂರು ರೂಪಾಯಿ ಮಾತ್ರ ಸಿಗುತ್ತದೆ. ನಿಮಗೆ ಕೊಟ್ಟ ಸಾಲ ವಾಪಾಸು ಬರುವುದಿಲ್ಲ, ಬಂದರೂ ಅಲ್ಪ-ಸ್ವಲ್ಪ ಎಂದೂ ನನಗೆ ತಿಳಿದಿದೆ. ’ಪುಸ್ತಕಂ ವನಿತಾ ವಿತ್ತಂ ಪರಹಸ್ತಂ ಗತಂ ಗತಂ, ಅಥವಾ ಪುನರಾಯಾಂತಿ ಜೀರ್ಣಾ ಭ್ರಷ್ಟಾಚ ಖಂಡಶಃ’ ಎಂಬುದು ನನಗೆ ಗೊತ್ತು. ಬೇರೆಯವರ ಹತ್ತಿರ ಇರುವ ಹಣ, ಪುಸ್ತಕದಲ್ಲಿರುವ ವಿದ್ಯೆ ಎಂದೂ ಬೇಕಾದಾಗ ಸಿಗುವುದಿಲ್ಲ, ಪುಸ್ತಕಸ್ತಾಚಯಾ ವಿದ್ಯಾ ಪರಹಸ್ತೇತಿ ಯದ್ಧನಂ, ಕಾಲ ಕಾಲೇ ಸಮುತ್ಪನ್ನೇ ನಸಾ ವಿದ್ಯಾ ನತದ್ಧನಂ!
ನೀವು ಹತ್ತು ಸಾವಿರ ರೂಪಾಯಿ ಕೇಳುತ್ತೀರಿ. ಸಾಧ್ಯವಾದರೆ ಅಲ್ಲೊಂದು ಗಾದೆ ಸೇರಿಸುತ್ತೀರಿ. ’ನನ್ನ ಕಷ್ಟ ಯಾರಿಗೂ ಬರಬಾರದು ನೋಡಿ, ವೈರಿಗೂ ಕೂಡಾ,’ ಎಂದು. ಮಾತಿಗಿಷ್ಟು ತೂಕ ಬರುತ್ತದೆ.
ನನ್ನ ಮರ್ಯಾದೆ, ಸ್ಟೇಟಸ್ ಉಳಿಯಬೇಕಲ್ಲ. ನಾನು ಕತೆ ಹೇಳುತ್ತೇನೆ. ’ಓ.. ಬೆಳಗ್ಗೆ ಬರಬಾರದಿತ್ತೇನಯ್ಯ? ಲಕ್ಷ ಲಕ್ಷ ರೂಪಾಯಿ ಇತ್ತು ಮನೆಲಿ. ನನ್ನ ತಮ್ಮ ಬಂದು ಕೇಳಿದ, ಪಾಪ ಮನೆ ಕಟ್ತಾ ಇದ್ದಾನೆ. ಅಷ್ಟೂ ಎತ್ತಿಕೊಟ್ಟೆ. ಒಂದು ಐದಾರು ಸಾವಿರ ಇರಬೇಕೇನೋ, ಇದ್ದರೆ ಕೊಡುತ್ತೇನೆ.’ ಮತ್ತೆ ’ಲೇ’ ಎನ್ನುತ್ತೇನೆ. ’ಲೇ’ ಎಂದರೆ ನನ್ನ ಹೆಂಡತಿ.
ಅವಳು ಬರುವ ತನಕ ವಿಜೃಂಭಿಸಲು ಮೌನಕ್ಕೆ ಅವಕಾಶ ಕೊಡಬಾರದಲ್ಲ. ’ಮೊನ್ನೆ ಸುನಾಮಿ ಬಂತಲ್ಲ, ಸ್ವತಃ ಪ್ರೈಂ ಮಿನಿಸ್ಟರೇ ಫೋನ್ ಮಾಡಿ, ಸೂರಿ, ನೀವು ನೊಂದ ಜನಕ್ಕೆ ಸಹಾಯ ಮಾಡಬೇಕು, ನಿಮ್ಮ ಶಕ್ತಿ ಮೀರಿ, ಎಂದು ಹೇಳಿದ್ದರು. ಹತ್ತು ಲಕ್ಷ ರೂಪಾಯಿಯನ್ನು ನಾನೇ ಕೊಟ್ಟೆ. ನನಗೆ ಪ್ರಚಾರ ಎಂದರೆ ಆಗದು. ಬಲಗೈಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುವವನು ನಾನು. ಅದಕ್ಕೇ ನನ್ನ ಹೆಸರು ಎಲ್ಲಿಯೂ ಬಂದಿಲ್ಲ,’ ಎನ್ನುವಷ್ಟರಲ್ಲಿ ನನ್ನ ಹೆಂಡತಿ ಬರುತ್ತಾಳೆ. ’ಏನ್ರೀ?’
’ಅದೇ, ಒಳಗೆ ಬೀರುವಿನಲ್ಲಿ ಹತ್ತೋ, ಎಂಟೋ ಸಾವಿರ ಇದೆ. ತಂದುಕೊಡು ಇವರಿಗೆ. ಪಾಪ, ಬಲು ಕಷ್ಟ. ಯಾವತ್ತೂ ನನ್ನ ಸಹಾಯ ಕೇಳಲಿಲ್ಲ, ಅಷ್ಟು ಸಭ್ಯ. ಕಷ್ಟದಲ್ಲಿ ಇರೋವರಿಗೆ ಸಹಾಯ ಮಾಡದೇ ಇದ್ದರೆ ನಾವು ಮನಷ್ಯರಲ್ಲ, ಮೃಗ, ಕಾಡು ಮೃಗಗಳಿಗೆ ಸಮಾನ ಅಂತಾರೆ.’
ನಿಮಗೆ ಖುಷಿಯಾಗುತ್ತದೆ. ನಾನು ಸಕಲಕಲಾವಲ್ಲಭ ಎನಿಸುತ್ತದೆ (ಸುಳ್ಳು), ನನ್ನ ಗಾರ್ದಭ ಕಂಠ ಕಿವಿಗೆ ಇನಿದೆನಿಸತ್ತದೆ (ಮತ್ತೊಂದು ಸುಳ್ಳು), ನನ್ನ ವರಾಹ ದೇಹ ಕಣ್ಣಿಗೆ ಸುಂದರವೆನಿಸತ್ತದೆ (ಮಗದೊಂದು ಸುಳ್ಳು), ನನ್ನ ಮರ್ಕಟದಂತಹ ಮುಖವೂ ನಿಮಗೆ ಅಪ್ಯಾಯಮಾನವಾಗುತ್ತದೆ (ಇನ್ನೊಂದು ಸುಳ್ಳು). ನೀವು ನನ್ನನ್ನು ಖುಷಿಪಡಿಸಲು ಯತ್ತಿಸುತ್ತೀರಿ.
’ಸರ್, ನಾನು ನಿಮ್ಮ ಫ್ಯಾನು ಸರ್. ನಿಮ್ಮ ಹಾಸ್ಯ ಲೇಖನ ಅಂತೂ ನನಗೆ ತುಂಬಾ ಇಷ್ಟ. ಓದಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಬಿಡುತ್ತೆ ಸರ್. ನನ್ನ ಅತ್ತೆ ಹೊಟ್ಟೆ ಹುಣ್ಣಾಗಿಯೇ ಸತ್ತಿರೋದು. ಏನು ಸರ್, ಇತ್ತೀಚೆಗೆ ನೀವು ಬರೀತಾನೇ ಇಲ್ಲ?’ ಕೇಳುತ್ತೀರಿ. ಅದು ಸುಳ್ಳಾದರೂ ನನ್ನ ಕಿವಿಗೆ ಇಷ್ಟವಾಗುತ್ತದೆ.
’ಎಲ್ಲಪ್ಪಾ ಬರಿಯೋದು? ಬರೆದರೂ ಪತ್ರಿಕೆಯವರು ಪ್ರಕಟಿಸೋಲ್ಲ. ಇತ್ತೀಚೆಗೆ ನೀನು ಯಾವುದೇ ನಿಯತಕಾಲಿಕಗಳಲ್ಲಿ ನಗೆಬರೆಹ ಕಂಡಿದ್ದೀಯಾ? ಇಲ್ಲ. ಹಾಸ್ಯಲೇಖನ ಅಂದರೆ ಅವರಿಗೆ ಎಲೆಯ ಕೊನೆಯಲ್ಲಿ ಹಾಕೋ ಉಪ್ಪಿನಕಾಯಿ ಹಾಗೆ. ಈಗ ಬಹುಶಃ ಡಾಕ್ಟರು ಅವರಿಗೆ ಹೇಳಿರಬಹುದು, ’ನಿಮಗೆ ಬಿಪಿ ಇದೆ, ಉಪ್ಪಿನ ಕಾಯಿ ತಿನ್ನೋದು ಇರಲಿ, ನೋಡಲೂ ಬಾರದು, ಎಂತ. ಅದಕ್ಕಾಗಿ ಯಾವುದೇ ನಗೆಬರೆಹ ಬಂದರೂ ಅದನ್ನ ಓದೋದು ಇರಲಿ, ಕೈಯಲ್ಲಿ ಕೂಡಾ ಮುಟ್ಟದೆ, ಸ್ಕೇಲಿನಿಂದಲೇ ಕಬುಗೆ ತಳ್ಳುತ್ತಾರೆ ಈ ಸಂಪಾದಕರು. ಗಾದೇನೇ ಇಲ್ಲವೇ, ಸಂಪಾದಕ ಅತ್ತೆ, ಲೇಖಕ ಸೊಸೆ ಅಂತ,’ ಎನ್ನುತ್ತೇನೆ.
’ಏನು ಸರ್ ಕಬು ಎಂದರೆ?’
’ಕಸದ ಬುಟ್ಟಿ ಕಣಯ್ಯ. ನಾನು ಟಂಕಿಸಿದ ಪದವಲ್ಲ ಅದು.’
ನೀವು ಜೋರಾಗಿ ನಗುತ್ತೀರಿ.
ಅಷ್ಟರಲ್ಲಿ ನನ್ನ ಹೆಂಡತಿಯು ಮುಖವನ್ನು ಮಿಡಿ ಉಪ್ಪಿನಕಾಯಿಯಂತೆ ಮಾಡಿಕೊಂಡು ಹೊರಬರುತ್ತಾಳೆ. ’ರೀ’
’ಏನೇ?’
’ಬೆಳಗ್ಗೆ ನನ್ನ ತಮ್ಮ ಬಂದಿದ್ದ. ಕೇಳಿದ, ಅಷ್ಟೂ ಎತ್ತಿಕೊಟ್ಟೆ,’ ನಾನು ಒದೆದರೆ ಅದನ್ನು ಸ್ವೀಕರಿಸಲೂ ಸಿದ್ಧವೆನಿಸುವಷ್ಟು ದೊಡ್ಡ ಅಪರಾಧ ಮಾಡಿರುವವಳಂತೆ ನನ್ನ ಹೆಂಡತಿ ಹೇಳುತ್ತಾಳೆ. ನಟನೆಗೆ ಆಸ್ಕರ್ ಫರ್‍ನಾಂಡಿಸ್ ಪ್ರಶಸ್ತಿ ದೊರಕಬೇಕು ಅವಳಿಗೆ. ಸತ್ಯ ಹೇಳಬೇಕೆಂದರೆ ಅವಳಿಗೆ ತಮ್ಮನಿಲ್ಲ. ಆಕೆ ನನ್ನ ಗರಡಿಯಲ್ಲಿ ಪಳಗಿದ ಕಾರಣ ಎಲ್ಲಿ ಹೇಗೆ ವರ್ತಿಸಬೇಕೆಂಬುದು ಗೊತ್ತು.
’ಮತ್ತೆ ಅವನಿಗೆ ಕೊಟ್ಟೆಯಾ? ಸರಿ, ಬರೋದಿಲ್ಲ ಬಿಡು. ನಿನ್ನ ತಮ್ಮನಿಗೆ ಕೊಟ್ಟ ಹಣ, ಸ್ಮಶಾನಕ್ಕೆ ಹೋದ ಹೆಣ, ಎರಡೂ ಒಂದೇ, ವಾಪಾಸು ಬರೋಲ್ಲ. ಸರಿ, ಎಷ್ಟು ಕೊಟ್ಟೆ ಎಂಬುದನ್ನಾದರೂ ಬರೆದಿಟ್ಟುಕೊ, ಗಾದೆನೇ ಇಲ್ಲವೇ, ಹೊಳೆಗೆ ಹಾಕಿದರೂ ಅಳೆದು ಹಾಕು, ಅಂತ,’ ಎಂದವನು ನಿಮ್ಮತ್ತ ತಿರುಗಿ ಎನ್ನುತ್ತೇನೆ, ’ಇವನಿಗೊಬ್ಬ ತಮ್ಮ ಇದ್ದಾನೆ, ಇದ್ದು ಬದುಕಲ್ಲ, ಸತ್ತು ಸಾವಲ್ಲ, ಅನ್ನುತ್ತಾರಲ್ಲ, ಹಾಗಿನವನು. ಕೆಲಸ ಇಲ್ಲ, ಕಾರ್ಯ ಇಲ್ಲ, ಖರ್ಚು ಮಾಡೋದ್ರಲ್ಲಿ ಮಾತ್ರ ಎತ್ತಿದ ಕೈ’ ಎನ್ನುತ್ತೇನೆ.
ನನ್ನಾಕೆ ಕೋಪಮಾಡಿಕೊಳ್ಳುತ್ತಾಳೆ. ’ಬಂದವರ ಹತ್ತಿರವೆಲ್ಲಾ ಹೀಗೆ ಹೇಳ್ಕೊಂಡರೆ ನಿಮಗೆ ಖುಷಿ. ಅವನಿಗೊಂದು ಕೆಲಸ ಸಿಗಲಿ, ಆಗ ನೋಡಿ, ಇದೇ ಮಾತನ್ನ ನೀವು ವಾಪಾಸು ತಗೋತೀರಿ,’ ಎನ್ನುತ್ತಾಳೆ.
’ನಿನ್ನ ತಮ್ಮನಿಗೆ ಕೆಲಸ? ನನಗೆ ಗೊತ್ತಿಲ್ಲವೇ ನಮ್ಮ ದೇವರ ಗುಣ? ಕೆಲಸ ಸಿಕ್ಕರೆ, ಆದರೆ, ಹೋದರೆ, ಅಜ್ಜಿಗೆ ಮೀಸೆ ಬಂದರೆ, ನಮ್ಮ ಮನೆ ಎತ್ತು ಕರು ಹಾಕಿದರೆ ಅವನಿಗೆ ಒಂದು ಉದ್ಯೋಗ ಸಿಕ್ಕೀತು,’ ಎಂದು ಗದರುತ್ತೇನೆ.
ಅವಳು ಜೋರಾಗಿ ಅಳಲು ಆರಂಭಿಸುತ್ತಾಳೆ.
’ಸಾರಿ.. ಇವರೇ.. ಈ ಬಾರಿ ನನ್ನ ಕೈ ಖಾಲಿ,’ ಎಂದು ಖೇದದಿಂದ ಹೇಳುತ್ತೇನೆ. ನಾನೂ ರಂಗನಟನೇ. ನಟಿಸುವುದರಲ್ಲಿ ಎತ್ತಿದ ಕೈ. ನನ್ನ ಮುಖಭಾವ ಕಂಡ ನೀವು ಅದನ್ನು ನಿಜವೆಂದೇ ಭಾವಿಸುತ್ತೀರಿ ಎಂದುಕೊಂಡಿರುತ್ತೇನೆ.
ನೀವು ಮನಸ್ಸನಲ್ಲಿಯೇ ಬೈದುಕೊಳ್ಳುತ್ತೀರಿ, ಯಾಕೆಂದರೆ ನಾನು ಹೇಳುತ್ತಿರುವುದರಲ್ಲಿ ತುಸುವೂ ಸತ್ಯವಿಲ್ಲ ಎಂಬುದು ನಿಮಗೆ ಗೊತ್ತು. ಆದರೆ ಅದನ್ನು ಹೇಳುವಂತಿಲ್ಲ.
ನಾನು ಮಂದುವರಿಸುತ್ತೇನೆ, ’ಹೋಗಲಿ, ನಿಮಗೆ ಒಂದು ಲೋಟ ದಪ್ಪದ ಹಾಲಿನ ಕಾಫಿನಾದರೂ ಮಾಡಿಕೊಡೋಣ ಎಂದರೆ ಅವಳು ಹೀಗೆ ಮುಖ ಊದಿಸಿಕೊಂಡಿದ್ದಾಳೆ, ಸಾರಿ’ ಎಂದು. ಅದಾಗಲೇ ಹತಾಶರಾಗಿದ್ದ ನೀವು ಕಾಫಿ ಬೇಡ ಎಂದು ಹೇಳಿ ಎದ್ದುಬಿಡುತ್ತೀರಿ. ಅಲ್ಲಿಗೆ ಈ ವ್ಯವಹಾರ ಮುಗಿಯಿತು.
ಯಾಕೆಂದರೆ ನನಗೆ ನೀವು ಯಾರೆಂದು, ನಿಮ್ಮ ನಿಯತ್ತು ಏನೆಂದು ಗೊತ್ತು. ಕೊಟ್ಟು ಕೋಡಂಗಿಯಾಗಲು, ತೆಗೆದುಕೊಂಡ ನಿಮ್ಮನ್ನು ವೀರಭದ್ರನನ್ನಾಗಿಸಲು ನಾನು ಸಿದ್ಧನಿಲ್ಲ.
ಸೂರಿಯವರೆ, ಸಾಲದ ವಿಶ್ವರೂಪದ ಪೂರ್ಣ ವಸ್ತ್ರಾಪಹರಣ ಮಾಡುತ್ತಿರುವಂತಿದೆ ನಿಮ್ಮ ನಗೆ ಬರಹದ ಮೂಲಕ ! ನಿಮ್ಮಲ್ಲೀಗ ಸಾಲ ಕೇಳಲೆ ಬರುವಂತಿಲ್ಲ !
ಚೆನ್ನಾಗಿ ಬರುತ್ತಿದೆ ಸರಣಿ – ಹೀಗೆ ಓಡುತ್ತಿರಲಿ 🙂
– ನಾಗೇಶ ಮೈಸೂರು