ಕಾವ್ಯಧಾರೆ

ಮೂವರ ಕವಿತೆಗಳು: ಅಕುವ, ಕೃಷ್ಣಮೂರ್ತಿ ನಾಯಕ್, ಶ್ರೀವಲ್ಲಭ ಕುಲಕರ್ಣಿ.

 

 

 

 

 

ದಾನಿಗಳೇ…..
 
ಇಲ್ಲಿ ಎಲ್ಲರೂ ದಾನಿಗಳು
ಹಲವರು ಅಲ್ಪದಾನಿಗಳು
ಕೆಲವರು ಮಹಾದಾನಿಗಳು
ಮತ್ತುಳಿದವರು ಅಗ್ರಮಾನ್ಯರು
ಆದರೂ ಯಾರೂ ಕರ್ಣನಾಗಲ್ಲಿಲ್ಲ
ಶಿಬಿಯ ಮೀರಲಿಲ್ಲ !!
 
ದೇವರ ಹೆಸರೆತ್ತಿದ್ದರೆ ಹೇಸದೆ ಕೊಡುವರು
ಸಾರ್ಥಕತೆಯ ಮಂಕಿಗೆ ಬೆರಗಾಗಿರುವರು
ದಟ್ಟನೆ ಸಭೆಯಲಿ ಸಾಲು ಹೊದಿಯುವರು
ಬೆನ್ನಲ್ಲಿಯೇ ಮೆತ್ತನೆ ವಾಪಾಸು ಕೇಳುವರು !!
 
ನನ್ನೂರ ಹಾದಿಯ ಇಕ್ಕೆಲ್ಲದಲಿ ಬಸ್ಸು ತಂಗುದಾಣಗಳು
ದೇಗುಲದ ರಸ್ತೆಗೆ ಮೇಲೆದ್ದ ಸ್ವಾಗತ ಗೋಪುರಗಳು
ಬುಡದಲ್ಲಿ ಕೆತ್ತಿದ ದಾನಿಗಳ ನಾಮ ಫಲಕಗಳು
ಇದೆಲ್ಲಾ ಜೀವಿತದಿ ಅಸಡ್ದೆಗೊಳಗಾದವರ ಸ್ಮಾರಕಗಳು!!
 
ಹಳೇ ಗರ್ಭಗುಡಿಗೆ ದಾನಿಗಳ ಹೊಸ ಚಪ್ಪರ
ಕೋಟಿ ಸುರಿಸಿ ಉಸಿರುಕಟ್ಟಿಸಿಕೊಂಡ ಮುಕ್ಕೋಟಿ ದೇವರು
ದೇವಳದ ಬಿತ್ತಿ ತುಂಬಾ ನಮೂದಿಸಿದ ನಾಮ ಪಟ್ಟಿಗಳು
ಇವರೆಲ್ಲಾ ನನ್ನ ಸಮಾಜದ ಉದಾರ ದಾನಿಗಳು!!
 
ಕಾಣದ ದೇವನಿಗೆ ದಾನದ ಮುಗಿತ
ಸಂಸಾರಿಯೇ ಆತ ?
ಆತನ ಲೋಕದಲ್ಲೂ ಲಕ್ಷ್ಮಿ ಇದ್ದಾಳಲ್ಲ !!
ಶಾರದೆಯು ಮೌನವಾಗಿದ್ದಾಳೆ !
ವಿದ್ಯೆಗೆ  ದಾನಿಗಳ ಕೊರತೆಯೇ?
ಗೋಡೆ ಸುಣ್ಣ ಕಂಬ ಗುಡಿ ಚಪ್ಪರಕ್ಕಿರುವ ದಾನ
ತನಗೇಕಿಲ್ಲವೆಂಬ ಗುಡುಗು !
ಆದರೂ ಹಾರೈಸಿದ್ದಾಳೆ ಸದಾ ಆರೋಗ್ಯವಿರಲೆಂದು !
 
ಇಲ್ಲಿ ನಾವೆಲ್ಲಾ ದಾನಿಗಳೇ
ಕರ್ಣನಾಗಬೇಕಿಲ್ಲ
ಶಿಬಿಯ ಎತ್ತರಕ್ಕೆ ಏರಬೇಕಿಲ್ಲ
ನನ್ನವರ ದಾನ ಪೋಲಾಗ ಬೇಕಿಲ್ಲ!
ನನ್ನಿ ಹಾರೈಕೆ ಸುಳ್ಳಾಗಬೇಕಿಲ್ಲ !!
 
– ಅಶೋಕ್ ಕುಮಾರ್ ವಳದೂರು (ಅಕುವ)

 

 

 

 

 

ಬದುಕಬೇಕು ನಾವು 

ಹುಟ್ಟಿದ್ದೇವೆ ! ಯಾಕೆ ?
ತಿಳಿದಿಲ್ಲ; ತಿಳಿಸುವವರಿಲ್ಲ 
ಉಂಟೇ ತಿಳಿದವರು ? ಗೊತ್ತಿಲ್ಲ ! ಇಲ್ಲ !!
ಮೊದಲಿಲ್ಲ … ಕೊನೆಯಿಲ್ಲ
ಕೆನೆಕೆನೆದು ಕರುಬಿದ
ಘಳಿಗೆಗೆ ಲೆಕ್ಕವಿಲ್ಲ ; ಇದ್ದರೂ ಪಕ್ಕಾ ಅಲ್ಲ !!

ಹುಟ್ಟಿಗಿಲ್ಲದ ಕಾರಣ
ಬದುಕಿಗೇಕೆ? ಬದುಕಲೇಕೆ?
ಬಿಟ್ಟ ಲೆಕ್ಕ … ಕೊಟ್ಟ ಲೆಕ್ಕ … ಇಟ್ಟ ಲೆಕ್ಕ 
ಯಾರದೋ ? ಯಾರಿಗೋ ??
ಚುಕ್ತಾ ಮಾಡಲು ಏನಿದೆ ? ನಮ್ಮದು !
ಅನಿಸಿಕೆಯ ಅನ್ನಕ್ಕೆ ದಾರೀಲಿ ತೋಚಿದ್ದೇ ತಂಬುಳಿ
ಬಂದದ್ದು ಬರಗಿ ಬಾಚಿ
ಉಂಡು ಮಲಗಿದ್ದೇ ನಿಜ !!

ನೆಪದಲ್ಲಿ ಜಪದಲ್ಲಿ
ನೆನಪೊಂದೇ ಶಾಶ್ವತ ! ನೆನಪಿರುವವರಿಗೆ … ನೆನಪಿರುವವರೆಗೆ !!
ಬಿಕ್ಕಳಿಕೆ ಬಂದಾಗ ನೆನೆದವರು ಕಂಡರೆ
ನಗುವಲ್ಲಿ  ಅಳುವಲ್ಲಿ ಪ್ರೀತಿ ಕಣ್ತುಂಬಿ ಬಂದರೆ
ಸಾಕು ! ಮತ್ತಿನ್ನೇನಿದೆ ಕಳೆದ ಕ್ಷಣಗಳ ಸಾರ್ಥಕತೆಗೆ ?
ಬೇಕು ಬೇಡವಾಗಬೇಕು ; ಖಾಲಿ ಖಾಲಿಯಾಗಬೇಕು 
ಸಾವಿಗೂ ಬರಬೇಕು ಸಾವು
ಉಸಿರಾಡೋದಲ್ಲ ; ನಿಜಕೂ ಬದುಕಬೇಕು ನಾವು !!      

 – ಕೃಷ್ಣಮೂರ್ತಿ ನಾಯಕ 

 

 

 

 

 

ಅ೦ತರಾತ್ಮ
ಮನದ ವೀಣೆ ತ೦ತಿ ಮೀಟಿ
ನೂರು ರಾಗ ನುಡಿಸಿವೆ
ಭಾವನೆಗಳು ತು೦ಬಿ ಎದೆಯ
ಲಯವನದಕೆ ತೊಡಿಸಿವೆ
ಯಾವ ಜನುಮದ ಬ೦ಧವೇನೋ
ನೆನಹು ಒ೦ದು ಕಾಡಿದೆ
ನಿನ್ನ ಸುಳಿಹು ತಿಳಿಯಲಾರದೆ
ಮನವು ನೊ೦ದು ಬೆ೦ದು ಬಾಡಿದೆ……
ಕಣ್ಣಿನ ರೆಪ್ಪೆಗಳೆರಡು
ಆಲ೦ಗಿಸಿ ದಿನಗಳೆಷ್ಟೋ ಉರುಳಿವೆ..
ಮಾತುಗಳೆ ಬರಿದಾಗಿ
ಮೌನವೇ ಉಸಿರಾಗಿ
ಸೋತ ಬಾಳು ಸಾಗಿದೆ …….

-ಶ್ರೀವಲ್ಲಭ ಕುಲಕರ್ಣಿ

*****
                            

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *