ಕಾವ್ಯಧಾರೆ

ಮೂವರ ಕವನಗಳು: ರವಿಶಂಕರ್.ಎನ್. ಕೆ., ಬಿದಲೋಟಿ ರಂಗನಾಥ್, ಸಿಪಿಲೆ ನಂದಿನಿ

ಬದುಕುವೆನು ನಾನು 

ಬರೆಯುವ ಮೊದಲೇ ಮರೆತು ಹೋಗಿದೆ 
ನನ್ನಿಷ್ಟದ ಸಾಲು ,
ಹೇಗೆ ಹೇಳಲಿ …? ಏನು ಮಾಡಲಿ…?

ಜಿಗಿದಾಡುವ ಮನದ ಮೂಲೆಯಲ್ಲಿ
ಜೋಕಾಲಿಯಂತೆ ಜೀಕುವಾಗ ನೀನು 
ಸುಡುವ ಪ್ರೇಮದ ಒಡಲೊಳಗೆ
ಕಾಡುವ ನಿನ್ನದೇ ನೆನಪಿನ ಜಗದೊಳಗೆ
ತುಸು ಯಾಮಾರಿದಾಗ
ಹೇಗೆ ಹೇಳಲಿ …? ಏನು ಮಾಡಲಿ …?

ಜಗದ ಕೊನೆಯ ತುದಿಯ ಬಳಿ ನಿಂತು 
ಕೂಗುವಾಗ ಸಾವಿರ ಸಲ
ಹೇಳ ಹೆಸರಿಲ್ಲದಂತೆ ಮರೆತು ಹೋಗಿ ಬಿಡು 
ಮತ್ತೆ ಬಾರದಂತೆ ನೀನು,
ಬದುಕಬಹುದು ನಾನು.
ನೀನಿಲ್ಲದೆ…! ಏನೂ ಇಲ್ಲದೆ…!!
-ರವಿಶಂಕರ್.ಎನ್. ಕೆ.

 

 

 

 


ನನ್ನೆದೆಯ ಗೋಡೆ

ನನ್ನೆದೆಯ ಗೋಡೆಗೆ
ಬಳಸಿದ್ದ ಮಣ್ಣು 
ಉದುರಲು ಮುಂಗಾಲಿಟ್ಟು
ಗೋಡೆ ಜೇನಿಗೆ ತಾವು ಕಳೆದುಕೊಳ್ಳುವ ಭಯ

ಕತ್ತಿಯಾದೆ ಕತ್ತರಿಸಲು
ಕತ್ತರಿಸಿದಷ್ಟು ಚಿಗುರುತ್ತಲೇ ಇತ್ತು
ಅರೆ ಕ್ಷಣವೂ ಸುಮ್ಮನಿರದೆ.

ಬೇರು ಸಮೇತ ಕೀಳಲು
ಹಾರೆ, ಗುದ್ದಲಿ ಪಿಕಾಸಿ ಜೋಡಿಸಿಕೊಂಡು ಅಗೆದೆ
ಸಿಕ್ಕಿದ್ದು ಆಕಾಶ ಗಾತ್ರದ ಹಾಸು ಬಂಡೆ
ನನ್ನದೇ ಬೆವರ ಹನಿ

ಸುಮ್ಮನಿದ್ದೆ
ಕಾಲನ ಕೈಗೆ ಮನಸ ಕೊಟ್ಟು
ಗೋಡೆಯ ಮಣ್ಣು ಒಂದು
ಎರೆಹುಳುವಿನ ಎಂಜಲಿಂದ ಗಟ್ಟಿಗೊಂಡಿತ್ತು
ಮತ್ತೆ, ಮಾಮೂಲಿ ಗೋಡೆ
ಗೋಡೆ ಜೇನಿಗೆ ನೀರಾಳ ಉಸಿರು.

-ಬಿದಲೋಟಿ ರಂಗನಾಥ್

 

 

 

 


ಕತ್ತಲ ವಿಕಾಸ 
ಕುದಿಯುತ್ತಿದ್ದಾರೆ
ತಣ್ಣನೇಯ ಕತ್ತಲಲಿ
ಸಹಸ್ರಾರು ವರ್ಷಗಳ 
ತುಳಿತದ ಸೋಂಕಿಗೆ

ಸೆರಗುಹಾಸಿ
ಹೂಜಡೆಯನೆಣೆದು
ರೆಡಿಯಾಗಿದ್ದಾರೆ
ಕೋಪವನು
ಮುಚ್ಚಿಟ್ಟು
ಬಣ್ಣ-ಬಣ್ಣದ
ಕೆನ್ನೆರೋಸ್
ಹೊಳಪ 
ತುಸು ಸಂಭ್ರಮದ
ಮೇಕಪ್ಪಿನಲಿ ..

ಕ್ರೂರ ಕತ್ತಲ
ಕೋಟೆಯಲಿ
ಸ್ವಾತಂತ್ರಕ್ಕಾಗಿ ಬೆಳಕನೆ
ಇಣುಕಿ ನೋಡಿತಿದ್ದಾರೆ
ನವ ನಾಗರೀಕತೆ 
ಉದಯವಾಗಲಿದೆಯೆಂದೂ

ಕತ್ತಲಿಗೂ  
ಹಸಿ ರಕ್ತ ಬೆವರ ಸ್ರವಿಸುವ 
ನನ್ನವರ ಕತ್ತಲಿಗೂ
ಎತಂಹ ಅವಿಭಾಜ್ಯ ನಂಟು
ವಿಭಜಿಸಲಾಗದ ಬೆಸುಗೆ ಅಂಟು 
ಲೆಕ್ಕವಿಲ್ಲದಷ್ಟು ಕಪ್ಪುನೆರಳ ಗಂಟು

ರಕ್ತಪಾತದ ಬಲಿ
ಕತ್ತಲ ಕ್ರೌರ್ಯಕೆ
ಅಹಿಂಸೆಯ ಬಸವ
ಬುದ್ದನ
ಬೆಳಕು ಏಕೆ ಚೆಲ್ಲಲಿಲ್ಲ?

ವಿಶ್ವಕಪ್ಪು ಮುಸುಕ 
ತೊಲಗಿಸಲು
ಕೆಂಪುಕ್ರಾಂತಿ
ಆಧುನಿಕ ಮಾದರಿಯೆಂದವರು
ಕತ್ತಲ ತೊಳೆಯಲು
ಬೆಳಕು ತನ್ನೆಲ್ಲವನು
ಸುಟ್ಟುಕೊಳ್ಳುವಂತೆ 
ಸಾಗಿ ಸುಸ್ತಾಗುತ್ತಿರುವುದೇತಕ್ಕೆ?

ಜಾಗತೀಕ ತಳುಕಿನಲಿ
ಕತ್ತಲ ವಿಕಾಸಕ್ಕೆ 
ಬೆಳಕಿನ ಸ್ವಾತಂತ್ರ್ಯದ
ಹಾಡಿಗೆ 
ರಾಗಯಾವುದು
ಜಗದಪರಿವರ್ತನೆಗೆ?

-ಸಿಪಿಲೆ ನಂದಿನಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಮೂವರ ಕವನಗಳು: ರವಿಶಂಕರ್.ಎನ್. ಕೆ., ಬಿದಲೋಟಿ ರಂಗನಾಥ್, ಸಿಪಿಲೆ ನಂದಿನಿ

  1. ಬದುಕುವೆನು ನಾನು, ನನ್ನೆದೆಯ ಗೋಡೆ ಮತ್ತು ಕತ್ತಲ ವಿಕಾಸ ಕವನಗಳು ಚೆನ್ನಾಗಿವೆ.ಶೋಷಣೆ,ಕ್ರೌರ್ಯ,ಅಸಮಾನತೆಗಳ ಕತ್ತಲನ್ನು ದೂಡುವ ಸ್ವಾತಂತ್ರ್ಯದ ಬೆಳಕಿಗಾಗಿ ಹಂಬಲವನ್ನು ವ್ಯಕ್ತಪಡಿಸುವ ಸಿಪಿಲೆ ನಂದಿನಿಯವರ ಕವನ ಚೆನ್ನಾಗಿದೆ.

  2. ಬದುಕುವೆನು ನಾನು, ನನ್ನೆದೆಯ ಗೋಡೆ ಮತ್ತು ಶೋಷಣ,ಕ್ರೌರ್ಯ,ಅಸಮಾನತೆಗಳ ಕತ್ತಲನ್ನು ದೂಡುವ ಸ್ವಾತಂತ್ರ್ಯದ ಬೆಳಕಿಗಾಗಿ ಹಂಬಲವನ್ನು ವ್ಯಕ್ತಪಡಿಸುವ ಸಿಪಿಲೆ ನಂದಿನಿಯವರ ಕವನ ಚೆನ್ನಾಗಿದೆ.

Leave a Reply

Your email address will not be published. Required fields are marked *