ಅಪ್ಪ
ಬೆಂಕಿ ಉಗುಳುವ ಕಣ್ಣು| ಘರ್ಜಿಸುವ ದನಿ| ಹೃದಯ ಸೂಕ್ಷ್ಮ |
ಒಮ್ಮೊಮ್ಮೆ ಉಗ್ರ ಪ್ರತಾಪಿ | ಮಗದೊಮ್ಮೆ ಮಗುವಿನ ಮನಸ್ಸು|
ಅರ್ಥಕ್ಕೆ ನಿಲುಕದಾ ನನ್ನ ಅಪ್ಪ ನೆನಪಾಗುತ್ತಾರೆ !
ಏನೀ ಪ್ರಶ್ನೆಗಳು? ಈ ಹಳೆಯ ಕಾಲದ ಮಂದಿ|
ಏನೇನೋ ಕೇಳುವರು ದೊಡ್ಡ ವೈದ್ಯರಿಗೇ ಪ್ರಶ್ನೆ | ಈ ನರ್ಸುಗಳು |
ಬಿಳಿ ಬಟ್ಟೆ ವೈದ್ಯರು ಕಂಡಾಪಟ್ಟೆ ಓದಿದವರು|
ಆತನ ಪ್ರಶ್ನೆಗಳಿಗೆ ಉತ್ತರಿಸಲಾರರು ಅದಕ್ಕೆ
ಅಪ್ಪ ನೆನಪಾಗುತ್ತಾರೆ !
ಇನ್ನೂ ಈ ಮಕ್ಕಳು ಮರಿಗಳು? ಚಿಕ್ಕವರಿದ್ದಾಗ ಅಂಜಿ ಬೆದರಿ |
ದೊಡ್ಡವರಾದಾಗ ಗುರ್ರ್ ಎಂದವರು| ನಿಮಗೇನು ಗೊತ್ತು?
ಗೊತ್ತೆ ಆಗುವುದಿಲ್ಲ ಏನೇನು? ಅಪ್ಪನ ಬಾಯಿ ಮುಚ್ಚಿಸಿದವರು|
ಹೆಂಡತಿ ಮಕ್ಕಳ ಮುಂದೆ ಹೀರೋ ಆದವರು| ಯಾಕೋ
ಅಪ್ಪ ನೆನಪಾಗುತ್ತಾರೆ !
ಅಪ್ಪ ಪ್ರೀತಿಸುವುದಿಲ್ಲ ನಿಜ | ಆತನ ಇರುವಿಕೆಯೇ ಹತ್ತಾನೆ ಬಲ |
ಮದುವೆ, ಮುಂಜಿ, ಸೀಮಂತ, ತೊಟ್ಟಿಲು ಎಲ್ಲದರಲ್ಲಿಯೂ ಆತನೇ ಮುಂದು|
ಕಳೆದಾಗಲೇ ಅಲ್ಲವೇ ಕೂಡಿಟ್ಟ ಬೆಲೆ ಗೊತ್ತಾಗುವುದು| ಅದಕ್ಕೆ
ಅಪ್ಪ ನೆನಪಾಗುತ್ತಾರೆ !
ಕುಡಿಯಲಿಲ್ಲ, ಸೇದಲಿಲ್ಲ, ಬದುಕನ್ನು ವಿಲಾಸಿಯಾಗಿ ಕಳೆಯಲಿಲ್ಲ
ಬದುಕಿನುದ್ದಕ್ಕೂ ದುಡಿತ| ಯಾಕೆ ಬೆಂಡಾಗುತ್ತೀರಿ ಅಪ್ಪಗಳಿರಾ?
ಮಕ್ಕಳು ದೊಡ್ಡವರಾಗಿ ಅಪ್ಪಂದಿರ ಮುಪ್ಪು ಮಾಡುತ್ತೀರಿ ಯಾಕೋ?
ಅಪ್ಪ ನೆನಪಾಗುತ್ತಾರೆ !
-ಸಂತೋಷಕುಮಾರ ಸೋನಾರ
ಜಲಪಾತ ಮತ್ತು ನಾನು
1
ಎಲ್ಲೆಂದರಲ್ಲಿ ಹಸಿರು ಮಳೆ ಸುರಿದು, ಸೊಂಪಾಗಿತ್ತು,
ನನ್ನೊಡಲಿನ ಈ ಅಂಗಳಕ್ಕೆ ತಾಕುತ್ತಿರಲಿಲ್ಲ, ರಶ್ಮಿಗಳು
ಬಲು ನುಸುಳುತ್ತಿದ್ದವು ಮರಗಳ ಕೊರಳಲ್ಲಿ ದಿಕ್ಕು ತಪ್ಪಿಸಿ, ನೆಲ ಮೂಸಲು,
ಆಡಿಕೊಂಡಿದ್ದವು ಬದುಕಿನಾಟ ,….ಹುಲಿ, ಚಿರತೆ, ಆನೆ, ಕೋಣಗಳು
ಜಿಂಕೆ ಮೊಲಗಳ ದಂಡಿನೊಂದಿಗೆ,
ನವಿಲುಗಳು ಕಲಿಸುತ್ತಿದ್ದವು ಕುಣಿತಗಳನ್ನು, ಹಸಿರು ಕಾನನದ ಎಲೆಎಲೆಗಳಿಗೆ,
ನನ್ನ ಭೋರ್ಗರೆತಕ್ಕೆ ಹಕ್ಕಿ ಇಂಚರಗಳ ಮಾರ್ದನಿ,
ಧೂಮ್ರಪಟಗಳು ಪರದೆ ತೂರಿ ನನ್ನ ರಂಗವನ್ನು ಮಾಯವಾಗಿಸುತ್ತಿದ್ದವು,
ಹಾಡು ಹಗಲಲ್ಲೆ ಕವಿಯುವ ಕತ್ತಲು,
ನಿಶಾಚರಿಗಳನ್ನು ಬೇಟೆಗಿಳಿಸುತ್ತಿತ್ತು,
ತಣ್ಣಗೆ ಜುಳುಜುಳು ಹರಿವ, ಕಲರವದ ದಂಡೆಗೆ ದಣಿದು
ಬಾಯಾರಿ ಬಾಯಿ ಚಾಚಿ ಮುತೀಡುತ್ತಿದ್ದವು ,.. ನನ್ನ ಅಂಗಳದ ಚತುರ್‍ಪಾದಿಗಳು……
ಗುಟುಕು ನೀಡಿ ಸಂತೈಸುತ್ತಿದ್ದೆ,
….
ಒಂದೊಮ್ಮೆ ಈ ದ್ವಿಪಾದಿಯ ಹೆಜ್ಜೆಗಳು ಮೂಡಿದ ಮೇಲೆ,
…, ನನ್ನ ಒಡಲಿಗೆ ಬೆಂಕಿ ಬಿದ್ದಿತು….
ಇವನ ವಾಂಛೆಗಳೋ ಮುಗಿಲೆತ್ತರ!…..
ರಸ್ರೆ, ಗಣಿ, ಮನರಂಜನೆಯೆಂದು, ನನ್ನ ಎದೆ ಎದೆಗಳಲ್ಲಿ ಬಗೆದು,
ಅಪಧಮನಿಗಳನ್ನು ಕತ್ತರಿಸಿ, ನನ್ನುಸಿರು ಕೊಲ್ಲುತ್ತಿದ್ದಾನೆ,
ನೆತ್ತಿ ಬೋಳಾಗಿ,….ನನ್ನ ನಾಡಿಗಳು ನಿಧಾನವಾಗಿ ಸಾಯುತ್ತಿವೆ, ಕ್ಷಣ ಕ್ಷಣವೂ,
ನನ್ನ ಜಲಪಾತದಲ್ಲಿ ನಾನೀಗ ಜಿನುಗುತ್ತಿರುವೆ ಮಾತ್ರ,
ಕಲ್ಲು ಕೊರಕಲಲ್ಲಿ, ಸಂದು ಗೊಂದುಗಳಲ್ಲಿ ನಿಶ್ಯಬ್ದವಾಗಿ,
ಪೋಲಿಯೋ ಕಾಲುಗಳಲ್ಲಿ
ಮರದ ದಿಮ್ಮಿಗಳು ಬೇರುಸಹಿತ ತೇಲಿ ಬರುತ್ತಿದ್ದವು ಮೊದಲು,
ಈಗ ಕರಗಿದ ಮಣ್ಣಷ್ಟೆ ಧುಮಿಗಿಡುತ್ತದೆ, … ಬಣ್ಣಗೆಟ್ಟು!
ಎಂದೂ ಕೈಜೋಡಿಸದ ನನ್ನ ದಂಡೆಗಳು
ಈಗ ವರ್ಷದ ಬಹುತೇಕ ದಿನಗಳು ಜೊತೆಗೂಡಿ
ಓಡುವ ಮೋಡಗಳನ್ನು ನೋಡುತ್ತಿರುತ್ತವೆ,… ಬಾಯೊಣಗಿ
…..
2
ಅದೇ ಜಲಪಾತವು ಆಕರ್ಷಣೆಯ ಪ್ರವಾಸಿ ಕೇಂದ್ರವೀಗ,
ಕಿರಿದಾದ ದಾರಿಯೊಂದು ಜಲಪಾತದಡಿಗೆ ಕರೆದೊಯ್ಯುತ್ತದೆ,
ಕೊರಕಲಿನಲ್ಲಿ ಜಿನುಗುತ್ತಿರುವ ನೀರನ್ನು ಒಮ್ಮೆ ಬಾಯಲ್ಲಿ ಹಾಕಿಕೊಂಡೆ,
ಅರೆ…..ಇದೇನಿದು……!!
ನನ್ನರಿವಿಗೆ ಬರುವ ಮುನ್ನ ಫಕ್ಕನೆ ನನ್ನವೆರಡು ಕಂಬನಿಗಳೂ ಅದಕ್ಕೆ ಗೂಡಿದವು!
ಅದೇನೊ 'ರೆಸಾರ್ಟ'ಗಳಂತೆ, ….ಹೊಸ 'ಎಬೋಲಾ' ಅದಕ್ಕೆ,
ಅದರ ನೆತ್ತಿಯ ಕಾಡಿನಲ್ಲಿ ಹುಣ್ಣುಗಳಂತೆ ಎದ್ದಿವೆ,…. ಲಂಗು ಲಗಾಮಿಲ್ಲದಂತೆ,
ಬಾಯಾರಿಕೆ ಎಂದರೇನೆಂದೇ ಅರಿಯದ ಜಲಪಾತಕ್ಕೀಗ ನಿತ್ಯ ಬಾಯಾರಿಕೆ,
ಅದರ ಕಾಡೆಲ್ಲ ದಿನ ದಿನವೂ ಬರಡು, ಇನ್ನಷ್ಟು…
ಪ್ರತಿ ವರುಷವೂ ಮೊಳಗಟ್ಟಲೆ ಎತ್ತರವಾಗಿ ಬೆಳೆಯಬೇಕಾದ ಮರಗಳೆಲ್ಲ
ಈಗ ಗೇಣು ಗಿಡ್ಡವಾಗುತ್ತಿವೆ,,,
ನೆತ್ತಿಯ ಟೊಂಗೆಗಳೂ ಕೂಡ ನೀರು ಹುಡುಕಿಕೊಂಡು ಕೆಳಬರುತ್ತಿವೆ…..
ಮಳೆಗಾಲದಲ್ಲೂ ಹಳದಿ ಎಲೆಗಳು ,….ಎಲ್ಲೆಂದರಲ್ಲಿ ಮರಗಳಲ್ಲಿ,
ಅದರ ಹಸಿರು ಭಾಷೆಯ ಮೇಲೆ ಅದೆಂತಹ ದಬ್ಬಾಳಿಕೆ,
ನೋಡಲು ಬಂದವರೊಬ್ಬರ ದೃಷ್ಟಿ, ಜಲಪಾತದ ಗೋಡೆಗಂಟಿ ಬೆಳೆದ
ಆ ದಷ್ಟ ಪುಷ್ಟ ಮರದ ಮೇಲೆ ಇದೆ, ಹೂ ಹಣ್ಣು ತುಂಬಿದ ಅದರ ರೆಂಬೆಗಳಲ್ಲಿ
ನೂರಾರು ಗೂಡುಗಳು, ಹಕ್ಕಿಗಳು, ಪಿಕ್ಕಿಗಳು, ಮರಿಗಳು….
ತಡೆಯುವುದಾಗಲಿಲ್ಲ ಅವರಿಗೆ….
''…..ಎಷ್ಟೊಂದು ಚಂದ ಮರ ಅಲ್ಲವೇ…. ವಿಶಾಲ, ಎತ್ತರ …. ….ಅಬ್ಬಾ….ನೋಡಿ !
ಸಂದಣಿಯಿಂದೊಂದು ದನಿ….
''ಹೌದು …ಹೌದು,…. ಭಾರಿ ಗಾತ್ರ'',
'' ಒಂದಿಡೀ… ಮನೆಗೆ ಸಾಕಾಗುತ್ತದೆ ಬಿಡಿ..!!
– ಲಕ್ಷ್ಮೀಕಾಂತ ಇಟ್ನಾಳ
ಭೂಮಿಗೆ ಇಳಿದ ಸುಂದರಿ
ಇವಳ್ಯಾವ ಲೋಕದ ಸುಂದರಿಯೋ
ಈ ಭೂಮಿಗೆ ಇಳಿದು ಬಂದಿಹಳೊ
ನಮ್ಮ ಬಾಳಿನ ಕೀರ್ತಿಯ ಗಳಿಸಿರು ನೀ.
ಕಾಲ ಗೆಜ್ಜೆಯ ಕುಣಿಸುತಲಿ
ಕೈಯೊಳು ವೀಣೆಯ ನುಡಿಸುತಲಿ
ಸುಂದರ ಹಾಡನು ಹಾಡುತ ನೀ
ಎಲ್ಲರ ಮನ ಸಂತೋಷ ಗೊಳಿಸುತ ನೀ.
ಚಂದದ ನಾಟ್ಯವನಾಡುತಲಿ
ನವಿಲಿನ ಕುಣೀತವ ಕುಣಿಯುತಲೀ
ಸರಿಗಮ ಪದನಿಸ ಬಾರಿಸುತ
ಸಂಗೀತದ ಸುಧೆಯೆಂದೆನಿಸಿರು ನೀ.
ಬಾರೆ ಬಾರೆ ಸುಂದರಿಯೆ
ನಿನ್ನ ನಗು ಮೊಗ ತೋರೆ ತನ್ಮಯಿಯೆ
ನಮ್ಮ ಬಾಳಿನ ಭಾಗ್ಯದ ಲಕ್ಷುಮಿ ನೀ
ನಮ್ಮ ಬಾಳಲಿ ಬೆಳಕನು ಬೆಳಗಿಸು ನೀ.
-ನಳಿನಾಕ್ಷಿ ಹೀನಗಾರ್