ಜೇ.ಸಿ.ಬಿ!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ

ಬೆಳ್ಳಂ ಬೆಳಿಗ್ಗೆ ಅಮೇರಿಕದಿಂದ ವೆಂಕಟ್ ಕಳಿಸಿದ್ದ ಒಂದು ಇಮೇಲ್ ಭಾರತದಲ್ಲಿದ್ದ ಅವನ ಬಾಸ್ ಸುಧೀರನನ್ನು ಅಧೀರನನ್ನಾಗಿಸಿತ್ತು! ಅದು ಅಲ್ಲಿನ ಒಂದು ಬಹು ಮುಖ್ಯ ಸುದ್ದಿಯನ್ನು ಭಿತ್ತರಿಸಿದ ಸಂದೇಶವಾಗಿತ್ತು. ಇವರ ಕಂಪನಿಯ ಅಮೆರಿಕಾದ ಮೂಲ ಶಾಖೆಯ ಉಪಾಧ್ಯಕ್ಷ ನಾಗಿದ್ದ ರೋಜರ್ ನನ್ನು ಅಲ್ಲಿನ ಆಡಳಿತ ಮಂಡಳಿ ಕಿತ್ತೊಗೆದಿತ್ತು. ಖಾಲಿಯಾದ ಅವನ ಸ್ಥಾನದಲ್ಲಿ ಮೂವತ್ತು ವರ್ಷದಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸಿ. ಬೇಕರ್ ನನ್ನು ಕುಳ್ಳಿರಿಸಿದ್ದರು. 

…ಅಮೆರಿಕಾದಲ್ಲಿ ಇದೆಲ್ಲ ಈಗ ಮಾಮೂಲಿ. ಅದು ಕಂಪನಿಯ ವೆಚ್ಚಗಳ ಕಡಿತಗೊಳಿಸುವ ಒಂದು ವಿಧಾನ. ಕೆಲವು ದೊಡ್ಡ ತಲೆಗಳನ್ನು ಕಿತ್ತುಹಾಕಿ, ಆ ಹಿರಿ ತಲೆಗಳಿಗಿಂತ ಕಡಿಮೆ ದರ್ಜೆಯ, ಕಂಪನಿಯ ಇತರ ಸಹೋದ್ಯೋಗಿಗಳನ್ನು ಮುಂದಿನ ದರ್ಜೆಗೆ ಏರಿಸುವುದು ಇದರ ಉದ್ದೇಶ. ಹಾಗೆ ಕಂಪನಿಯಲ್ಲೇ ಇದ್ದು ಮೇಲೆ ಏರಿದವರ ವೇತನ ವನ್ನು ಸ್ವಲ್ಪ ಏರಿಸಿದರೂ ಹೊರ ಹೋದ ವ್ಯಕ್ತಿಯ ಸಂಬಳಕ್ಕಿಂತ ಎಷ್ಟೋ ಪಟ್ಟು ಕಡಿಮೆ. ಅದೂ ಅಲ್ಲದೆ ಹಾಗೆ ಬರುವ ಹೊಸಬರಿಗೆ ಹೆಚ್ಚಿಗೆ ಜವಾಬ್ದಾರಿ ವಹಿಸಿದರೂ ಮೇಲಿನ ಸ್ಥಾನಕ್ಕೇರಿದ ಉತ್ಸಾಹದಲ್ಲಿ, ಖುಷಿಯಿಂದಲೇ ಕೆಲಸ ಮಾಡುತ್ತಾರೆ. ಇದು ಹೀಗೆ ಮಾಡುವುದರಿಂದಾಗುವ ಮತ್ತೊಂದು ಲಾಭ..     

ಆದರೆ ಸುಧೀರನ ಚಿಂತೆಗೆ ಬೇರೆಯದೇ ಕಾರಣವಿತ್ತು. ಪದಚ್ಯುತ ಉಪಾಧ್ಯಕ್ಷ ರೋಜರ್ ಜೊತೆಗಿದ್ದ ಭಾರತದ ಇವನ ಶಾಖೆಯ ಸಂಬಂಧ ತುಂಬಾ ಉತ್ತಮವಾಗಿತ್ತು. ಅವನು ತುಂಬಾ ಒಳ್ಳೆಯವನೂ ಹಾಗೂ ಎಲ್ಲ ವಿಷಯಗಳಲ್ಲೂ ಸಹಕಾರ ನೀಡುವವನೂ ಆಗಿದ್ದ. ಆದರೆ, ಈಗ ನಿಯುಕ್ತನಾಗಿದ್ದ ಹೊಸಬ ತುಂಬಾ ಘಮಿಂಡಿ ಹಾಗೂ ಹಿಟ್ಲರ್ ತರಹದ ವ್ಯಕ್ತಿ ಅನ್ನುವುದು, ಮೊದಲಿನಿಂದಲೂ ಆ ಕಂಪನಿಯ ಬಗ್ಗೆ ಬಲ್ಲ ಸುಧೀರ್ ಗೆ ಗೊತ್ತಿತ್ತು. ಅದೂ ಅಲ್ಲದೆ, ಅವನು ಮುಂದಿನ ವಾರವೇ ತಮ್ಮ ಶಾಖೆಗೆ ೫ ದಿನಗಳ ಭೇಟಿ ನೀಡಲಿದ್ದಾನೆ ಎನ್ನುವ ವಿಷಯ ಇವನಲ್ಲಿ ಇನ್ನೂ ಕೊಲಾಹಲವನ್ನುಂಟು ಮಾಡಿತ್ತು. ಆ ವಿವರಗಳನ್ನೊಳಗೊಂಡ ಇನ್ನೊಂದು ಇಮೇಲ್ ಅನ್ನು ತನ್ನ ಇಮೇಲ್ ಜೊತೆಗೇ ಲಗತ್ತಿಸಿದ್ದ ವೆಂಕಟ್.

…ಜಾನ್ ಸಿ. ಬೇಕರ್ ಗೆ ಎಲ್ರೂ ಜೇ.ಸಿ.ಬಿ ಅಂತಾನೆ ಕರೀತಿದ್ರು. ಅವನ ಹೆಸರಿನ ಮೊದಲ ಅಕ್ಷರಗಳನ್ನೆಲ್ಲ ಕೂಡಿಸಿ ಓದಿದರೆ ಹಾಗೆ ಕೇಳುತ್ತಿತ್ತು ಅನ್ನುವುದು ಒಂದು ಕಾರಣವಾದರೆ, ಇನ್ನೊಂದು ತರ್ಕದ ಪ್ರಕಾರ, ಜೇ.ಸಿ.ಬಿ ಯಂತ್ರ ಭೂಮಿಯನ್ನು ನಿಷ್ಕರುಣೆಯಿಂದ ಬಗೆದಂತೆ, ಆತ ಹೋದಲ್ಲೆಲ್ಲ ಜನರನ್ನು ಕೆಲಸದಿಂದ ಕಿತ್ತೊಗೆದು ಸ್ವಚ್ಚ ಮಾಡುತ್ತಿದ್ದ. ಹೇಳದೆ ಕೇಳದೆ ಕಂಪನಿಯಿಂದ ಜನರನ್ನು ಓಡಿಸುವುದರಲ್ಲಿ ಅವನು ನಿಸ್ಸೀಮ. ಇವರದು ಅಮೇರಿಕಾದ ಕಂಪನಿಯಾಗಿದ್ದರಿಂದ ಅಲ್ಲಿನವರು ಹೇಳಿದಂತೆ ಕೇಳುವ ಅನಿವಾರ್ಯತೆ ಇವರಿಗಿತ್ತು. ಹೀಗಾಗಿ ಜಾನ್ ಭಾರತಕ್ಕೆ ಬರುತ್ತಿದ್ದಾನೆ ಎಂದರೆ ಎಷ್ಟು ಬಲಿ ಬೀಳುವವೋ ಎಂದು ಇವನು ಚಿಂತಾಕ್ರಾಂತನಾಗಿದ್ದ. ಇವನು ಭಾರತ ಶಾಖೆಯ ಮುಖ್ಯಸ್ಥನಾಗಿದ್ದರಿಂದ ಎಲ್ಲರ ಜವಾಬ್ದಾರಿ ಇವನ ಮೇಲೆಯೇ ಇತ್ತು. ಜಾನ್, ತನ್ನ ತಲೆಗೂ ಸಂಚಕಾರ ತಂದರೂ ತರಬಹುದೆಂಬ ಚಿಂತೆಯೂ ಇವನಿಗಿತ್ತು. ಸುಧೀರ್ ಕೂಡಲೇ ಪೃಥ್ವಿ ಗೆ ಫೋನಾಯಿಸಿ. ಜಾನ್ ಬರುತ್ತಿರುವ ವಿಷಯ ತಿಳಿಸಿ, ಎಲ್ಲ ಮುಖ್ಯಸ್ಥರನ್ನು ಸೇರಿಸಿ ಮದ್ಯಾಹ್ನದ ಊಟದ ನಂತರ ಒಂದು ಮೀಟಿಂಗ್ ಕರೆಯಲು ತಿಳಿಸಿದ… 

ತಂಪು ಹವೆಯನ್ನು ಸೂಸುತ್ತಿದ್ದ ಆ ಮೀಟಿಂಗ್ ಕೋಣೆಯಲ್ಲಿ ಒಟ್ಟು ಇಪ್ಪತ್ತು ಆಸನಗಳು ಹಾಗೂ ಒಂದು ದೊಡ್ಡದಾದ ಮೇಜು ಇತ್ತು. ಮೇಜಿನ ಮೇಲೆ ಫೋನ್ ಗಳು, ಲ್ಯಾಪ್ಟಾಪ್ ಗಳನ್ನು ವಿದ್ಯುತ್ ಪೂರಣಗೊಳಿಸಲು ಅನುಕೂಲವಾಗುವಂತೆ ವಿದ್ಯುತ್ ನ ಕುಹರಗಳು ಇದ್ದವು. ಎದುರಿಗೆ ಎಲ್ಲರಿಗೂ ಕಾಣುವಂತೆ ಇರಿಸಿದ್ದ ದೊಡ್ಡ ಎಲ್ ಇ ಡಿ ಪರದೆ ಇತ್ತು. ಗೋಡೆಗಳ ಮೇಲೆ ಇವರ ಕಂಪನಿಯ ದೃಷ್ಟಿಕೋನವನ್ನು ಸಾರಿ ಸಾರಿ ಹೇಳುವ ಸಂದೇಶಗಳನ್ನು ಹೊತ್ತ ಫಲಕಗಳು ರಾರಾಜಿಸುತ್ತಿದ್ದವು. 

ಮೂರು ಗಂಟೆಗೆ ಅಂತ ಮೀಟಿಂಗ್ ಗೊತ್ತು ಮಾಡಿದ್ದರೂ, ಆಗಲೇ ಆ ಕೋಣೆ ಭರ್ತಿಯಾಗಿತ್ತು. ಯಾವುದೇ ಬೇರೆ ಮೀಟಿಂಗ್ ಗೆ ತಡವಾಗಿ ಬರುವ ಪ್ರಜೆಗಳು ಇವತ್ತು ಇಷ್ಟು ಬೇಗನೆ ಬಂದ ಕಾರಣ ಸುಧೀರ್ ಗೆ ಸ್ಪಷ್ಟವಾಗಿತ್ತು. ಎಲ್ಲರಿಗೂ ಜೇ.ಸಿ.ಬಿ ಬರುತ್ತಿರುವ ಸುದ್ದಿಯನ್ನು ಆಗಲೇ ಡಂಗುರ ಸಾರಿದ್ದ ಪ್ರಥ್ವಿ. ಅದರ ಬಗ್ಗೆ ಮೀಟಿಂಗ್ ಅಂದ ಮೇಲೆ ಎಲ್ಲರಿಗೂ ಕುತೂಹಲವಿತ್ತು. ಅದಕ್ಕೆ, ಇದ್ದ ಬದ್ದ ಕೆಲಸವ ಬಿಟ್ಟು ಬಂದು ಕೂತಿದ್ದರು. ಎಲ್ಲರೂ ಹಿರಿಯ ಮ್ಯಾನೇಜರ್ ಗಳೆ; ತುಂಬಾ ವರ್ಷಗಳಿಂದ ಅದೇ ಕಂಪನಿಯಲ್ಲಿ ಬೇರು ಬಿಟ್ಟು ಹಂತ ಹಂತವಾಗಿ ಮೇಲೇರಿದವರು. ಅವರೆಲ್ಲರಿಗೂ ಸಹಜವಾಗಿ ಜಾನ್  ಬರುತ್ತಿರುವ ಬಗ್ಗೆ ಕುತೂಹಲದ ಜೊತೆಗೆ  ಕಳವಳವೂ ಇತ್ತು. ಅದರಲ್ಲೂ ಮೈಗಳ್ಳತನದಲ್ಲಿ ಔನ್ನತ್ಯಕ್ಕೆ ಏರಿದ್ದ ಷಣ್ಮುಗಂ, ವೆಂಕಟರಾಜು ಹಾಗೂ ಚಂದ್ರಕಾಂತ್ ತುಂಬಾನೇ ಭಯದಲ್ಲಿದ್ದರು. ಅವನು ತಮಗೆಲ್ಲಾ ಎತ್ತಂಗಡಿ ಮಾಡಿಬಿಟ್ಟರೆ  ಏನು ಗತಿ ಅಂತ ಅವರು ಚಿಂತೆಗೊಳಗಾಗಿದ್ದರು.   

ಸುಧೀರ್ ಎಲ್ಲರೂ ಬಂದದ್ದನ್ನು ಖಚಿತಪಡಿಸಿಕೊಂಡು ಇವತ್ತಿನ ಮೀಟಿಂಗ್ ನ ಉದ್ದೇಶವನ್ನು ಹೇಳಿದ. ಎಲ್ಲರಿಗೂ ಅದಾಗಲೇ ಗೊತ್ತಿರುವುದೆಂದು ಅವನು ಊಹಿಸಿದ್ದನಾದರೂ ಅದೊಂದು ಔಪಚಾರಿಕತೆಯಾಗಿತ್ತು. 

"ಜಾನ್ ಮುಂದಿನ ಸೋಮವಾರ ಬರುತ್ತಿದ್ದಾನೆ. ಅವನ ಜೊತೆಗೆ ಅವನ ಸಲಹಾಗಾರ ಜೇಕಬ್ ನೂ ಬರುತ್ತಿದ್ದಾನೆ." ಅಂದ ಸುಧೀರ್. ಜೇಕಬ್ ಒಂತರಹ ಚಾಣಕ್ಯ ಇದ್ದಂತೆ. ಇವರಿಬ್ಬರ ಜೋಡಿ ತಮ್ಮ ಶಾಖೆಯಲ್ಲಿ ಒಳ್ಳೆಯ ಬಿರುಗಾಳಿ ಎಬ್ಬಿಸಲಿದೆಯೆಂದು  ಎಲ್ಲರಿಗೂ ಖಾತ್ರಿಯಾಯ್ತು.

"ಜಾನ್ ಎಷ್ಟು ದಿನ ಇರ್ತಾರೆ?" ಸ್ಮಿತಾ ಕೇಳಿದಳು. ಅವಳು ಹಾಗೇನೆ, ಇನ್ನೂ ಹೇಳುವುದು ಬಾಕಿ ಇದ್ದಾಗಲೇ ಪ್ರಶ್ನೆ ಕೇಳದಿದ್ದರೆ ಅವಳಿಗೆ ಸಮಾಧಾನವೇ ಇಲ್ಲ. ಸುಧೀರ್ ಗೆ ಅವಳ ಪ್ರಶ್ನೆಯಿಂದ ಸಿಟ್ಟು ಬಂತಾದರೂ ಸಮಾಧಾನ ದ ಮುಖವಾಡದಲ್ಲೇ ಹೇಳಿದ 

"ಅವರು ಐದು ದಿನಗಳ ಭೇಟಿಗೆ ಇಲ್ಲಿಗೆ ಬರುತ್ತಿದ್ದಾರೆ. ಅಂದಹಾಗೆ ನಾನು ಹೇಳಬೇಕಿರುವುದನ್ನು ಮೊದಲು ಹೇಳಿ ಮುಗಿಸುತ್ತೇನೆ. ನಿಮ್ಮ ಪ್ರಶ್ನೆಗಳನ್ನು ಆಮೇಲೆ ಕೇಳಬಹುದು." ಅಂತ ಸ್ಮಿತಾಗೆ ಮೆಲ್ಲನೆ ಎಚ್ಚರಿಸಿ ಮುಂದುವರಿಸಿದ…

"ಜಾನ್ ನಿಮ್ಮೆಲ್ಲರ ಜೊತೆಗೂ ಪ್ರತ್ಯೇಕವಾಗಿ ಹಾಗೂ ನೇರವಾಗಿ ಮಾತಾಡಬೇಕಂತೆ. ಅದಕ್ಕೆ ಅವರ ಅನುಕೂಲದ ಸಮಯದಲ್ಲಿ ಮೀಟಿಂಗ್ ಅನ್ನು ಈಗಲೇ ಗೊತ್ತುಪಡಿಸಿಕೊಳ್ಳಿ." ಈ ಮಾತಿನಿಂದ ಕೆಲವರು ತಮ್ಮ ಹೊಟ್ಟೆಯಲ್ಲಿ ಸಣ್ಣ ಪ್ರಮಾಣದ ಕಂಪನಗಳನ್ನು ಅನುಭವಿಸತೊಡಗಿದರು. ಆದರೆ ತನ್ನ ಬಗ್ಗೆ ಹೇಳಿಕೊಳ್ಳಲು ಹಾಗೂ ಮುಂದಿನ ಸ್ಥಾನಕ್ಕೆ ಹೋಗುವ ಉತ್ಸುಕತೆಯನ್ನು ಹೊಂದಿರುವ ಸ್ಮಿತಾ ಹಾಗೂ ಸುಜಯ್ ಅಂಥವರು ತಮ್ಮ ಅಹವಾಲನ್ನು ಜಾನ್ ಗೆ ಹೇಳಲು ಕಾಯುತ್ತಿದ್ದರು. ಇವರನ್ನು ಬಿಟ್ಟರೆ, ಸುಧೀರ್ ತನ್ನ ಬಾಸ್ ಅನ್ನುವುದನ್ನು ಸಹಿಸದ ರೋಶನ್ ಮತ್ತು  ಅವನ ಚೇಲಾಗಳು, ಇವನ ವಿರುದ್ಧ ಸಂಚು ಹೂಡಲು ಇದೊಳ್ಳೆ ಅವಕಾಶವೆಂದು ಜಾನ್ ನನ್ನು ಪ್ರತ್ಯೇಕವಾಗಿ ಭೇಟಿಯಾಗಲು ಕಾತರಿಸಿದ್ದರು.

ಜಾನ್ ಹಾಗೂ ಜೇಕಬ್ ಇಲ್ಲಿಗೆ ಬಂದಾಗ ಏನೇನು ಚಟುವಟಿಕೆಗಳು ನಡೆಯಲಿವೆ ಎಂಬ ಸ್ಥೂಲ ಚಿತ್ರಣವನ್ನು ಎಲ್ಲರಿಗೂ ನೀಡಿದನವನು. ಆ ಐದು ದಿನಗಳಲ್ಲಿ ಒಂದು ದಿನ ಕಂಪನಿಯ ಎಲ್ಲ ಉದ್ಯೋಗಿಗಳನ್ನು ಉದ್ದೇಶಿಸಿ ಒಂದು ಗಂಟೆಯ ಸಭೆಯನ್ನು  ಮಾಡುವ ಇಂಗಿತ ಜಾನ್ ವ್ಯಕ್ತಪಡಿಸಿದ್ದಾನೆ ಅಂತಲೂ ತಿಳಿಸಿದ. ಅಲ್ಲಿ ಹೆಚ್ಚು ಕಡಿಮೆ ೫೦೦ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಏನಾದರೂ ಪ್ರಶ್ನೆಗಳಿವೆಯೆ ಎಂದು ಕೇಳಿದ್ದಕ್ಕೆ ಸ್ಮೀತಾ ತನಗೆ ಗೊತ್ತಿರುವ ವಿಷಯಗಳ ಬಗ್ಗೆಯೇ ಮತ್ತೊಂದಿಷ್ಟು ಪ್ರಶ್ನೆಗಳ ಸುರಿಮಳೆ ಸುರಿಸಿ ತನ್ನ ಜ್ಞಾನ ಪ್ರದರ್ಶಿಸಿದಳು! ಸುಧೀರ್ ಅವಳ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರಿಸಿ ತನ್ನ ಅಸಮಾಧಾನವನ್ನು ಮುಚ್ಚಿಟ್ಟನು. ಇಷ್ಟು ದೊಡ್ಡ ಸಂಸ್ಥೆಯ ಮುಖ್ಯಸ್ಥನಾದ ಕಾರಣಕ್ಕೆ ಸಾಕಷ್ಟು ತಾಳ್ಮೆಯನ್ನು ಸಹಜವಾಗಿಯೇ ಅವನು ಮೈಗೂಡಿಸಿಕೊಂಡಿದ್ದನು. ಮಿಕ್ಕವರು ಯಾರಿಗೂ ಆ ಮಟ್ಟಿಗೆ ಯಾವ ಪ್ರಶ್ನೆಗಳೂ ಇರಲಿಲ್ಲ. ಕೊನೆಯಲ್ಲಿ ವಿದೇಶದ ಅತಿಥಿಗಳ ವಾಸ್ತವ್ಯ, ವಾಹನ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಎಂದಿನಂತೆ  ಪೃಥ್ವಿಗೆ ವಹಿಸಿ, ಅಲ್ಲಿಗೆ ಆ ಮೀಟಿಂಗ್ ನ್ನು ಮುಗಿಸಿದನು. 

ಮೀಟಿಂಗ್ ಮುಗಿಸಿ ತನ್ನ ಜಾಗಕ್ಕೆ ಮರಳಿದ ಸುಜಯ್ ಯಾವುದೋ ಯೋಚನೆಯಲ್ಲಿ ಮುಳುಗಿದ್ದನ್ನು ನಿಶಾ ಗಮನಿಸಿದಳು. ಏನೆಂದು ಕೇಳಲಾಗಿ ಜಾನ್ ಬರುತ್ತಿರುವ ವಿಷಯ ತಿಳಿದು ಅವಳೂ ಪುಳಕಗೊಂಡಳು. ತನ್ನ ಬೇಳೆ ಬೇಯಿಸಿಕೊಳ್ಳಲು ಇದೊಂದು ಸದವಕಾಶವೆಂದು ಅವಳಿಗೂ ಗೊತ್ತಿತ್ತು. ಆದರೆ ಅದನ್ನು ತೋರ್ಪಡಿಸದೆ, ಸುಜಯ್ ಗೆ, ನೀನ್ಯಾಕೆ ಅಮೆರಿಕಾಕ್ಕೆ ಹೋಗಿ ಅಲ್ಲಿಂದ ಕೆಲಸ ಮಾಡುವ ಅವಕಾಶದ ಬಗ್ಗೆ ಜಾನ್ ಜೊತೆಗೆ ಮಾತಾಡಬಾರದು ಎಂಬ ಉಚಿತ ಸಲಹೆಯನ್ನೂ ನೀಡಿದಳು. ನೀನು ವೆಂಕಟ್ ಗಿಂತ ಮೊದಲೇ ಈ ಕಂಪನಿಯಲ್ಲಿ ಇದ್ದವನು, ಜಾನ್ ಖಂಡಿತ ನಿನ್ನ ಮಾತು ಕೇಳಿಯೇ ತೀರುತ್ತಾನೆ ಎಂದು ಒಂದು ಹುಳುವನ್ನು ಅವನ ತಲೆಗೆ ಬಿಟ್ಟಳು. ಸುಜಯ್ ಅವಳ ಮಾತಿಗೆ ಎಂದಿನಂತೆ ಪುಂಗಿಯ ನಾದಕ್ಕೆ ತಲೆ ಆಡಿಸುವ ಹಾವಿನಂತೆ ಹೂಗುಡುತ್ತಾ ಮನದಲ್ಲೇ ಏನೋ ಲೆಕ್ಕ ಹಾಕುತ್ತಿದ್ದ…   

(ಮುಂದುವರಿಯುವುದು…)           

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಐಟಿ ಕಂಪನಿಗಳ ಒಳ ರಾಜಕಾರಣವನ್ನು ಚೆಂದವಾಗಿ ಬಿಂಬಿಸಿದ್ದೀರಿ ಕುರ್ತಕೋಟಿ. ಚೆಂದದ ಲೇಖನಕ್ಕೆ ಧನ್ಯವಾದಗಳು.

ಗುರುಪ್ರಸಾದ ಕುರ್ತಕೋಟಿ

ಪ್ರಿಯ ಅಖಿಲೇಶ್, ನಿಮ್ಮ ಅನಿಸಿಕೆ ಓದಿ ಖುಷಿಯಾಯ್ತು! ಧನ್ಯವಾದಗಳು!

Vitthal Kulkarni
Vitthal Kulkarni
9 years ago

ಮಸ್ತ ಅನಸ್ತು ಗುರು! ಈ ವಾರದ ಕಂತು ಭಾಳನ ಕುತುಹಲ ಹುಟ್ಟುಸ್ತು. ಛೊಲೊನ ಹಿದಡತದಾಗ್ ಮುಂದವರಿಸಿರಿ ಅನಸ್ತು… ಜೇ.ಸಿ.ಬಿ ಮಂದ ಯೆನ್ ಮಾಡತಾನ ನೊಡಬೇಕು… 

ಗುರುಪ್ರಸಾದ ಕುರ್ತಕೋಟಿ

ಗೆಳೆಯ ವಿಟ್ಠಲ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು! ಈ ಜೇ.ಸಿ.ಬಿ ನನಗೆ ತುಂಬಾ ಇಷ್ಟದ ಪಾತ್ರ. ಅವನು ಮಾಡೋ ಕರಾಮತ್ತು ಬಹಳ ಇವೆ. ತಪ್ಪದೆ ಓದಿ

ಶ್ರೀಧರ್. ಜಿ
ಶ್ರೀಧರ್. ಜಿ
9 years ago

ಸತ್ಯಂ ಕಂಪ್ಯೂಟರ್ ಬಗ್ಗೆ  ನ್ಯಾಯಾಲಯದಲ್ಲಿ ತೀರ್ಪು ಬಂದಾಗ ಐಟಿ ಬ್ರಷ್ಟತೆ ಜಗಜಾಹೀರು ಆಯಿತು . ಇನ್ನು ಐಟಿ ಆಂತರಿಕ ಕಾರ್ಮಿಕ ಶೋಷಣೆ ಮುಖ ಹೊರಗೆಡುವಲ್ಲಿ ಈ ಕಂತು ಪ್ರತಿಪಲಿಸಿದೆ. ಇದೆ ರೀತಿ ಆರ್ಥಿಕ ಸಂಘರ್ಷ ಮುಂದಿನ ಕಂತಿನಲ್ಲಿ ಕಾಣಬಹುದೇ … ನಿಮ್ಮ ಚಿಂತನ ಲಹರಿ ಸ್ವೀಕಾರ್ಹವಾಗಿದೆ . 

ಗುರುಪ್ರಸಾದ ಕುರ್ತಕೋಟಿ

ಶ್ರೀಧರ ಗುರುಗಳೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು! ಮುಂದಿನ ಕಂತಿನಲ್ಲಿ ಅವೆಲ್ಲವನ್ನೂ ತೋರಿಸುವ ಇರಾದೆ ಖಂಡಿತ ಇದೆ! ತಪ್ಪದೆ ಓದಿ 🙂

trackback

[…] ಇಲ್ಲಿಯವರೆಗೆ ವೆಂಕಟ್ ಗೆ ಬಾಡಿಗೆ ಕಾರು ತೆಗೆದುಕೊಳ್ಳೋದು ಹೆಚ್ಚು ಕಡಿಮೆ ಅನಿವಾರ್ಯವಾಗಿತ್ತು. ಇವನು ಇನ್ನೂ ಮೂರು ವಾರಗಳಾದರೂ ಅಮೆರಿಕಾದಲ್ಲಿ ಇರುವುದು ಬಾಕಿ ಇತ್ತು. ದಿನಾಲೂ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಇವನ ಸಹೋದ್ಯೋಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದನಾದ್ದರಿಂದ ಇವನಿಗೆ ದಿನಾಲೂ ಆಫಿಸಿಗೆ ಹೋಗುವುದೇ ಕಷ್ಟವಾಗಿತ್ತು. ಅದೂ ಅಲ್ಲದೆ, ಅಲ್ಲಿ ಕಾರಿಲ್ಲವೆಂದರೆ ಕಾಲೇ ಕಳೆದುಕೊಂಡಂತೆ. ತನ್ನ ಅಪ್ಪ ಕಾರು ತರಲು ಹೋಗುತ್ತಿದ್ದಾನೆ ಎನ್ನುವುದೇ ಖುಷಿ ಗೆ ಕೌತುಕದ ಸಂಗತಿಯಾಗಿತ್ತು. ಜಾನುನೂ  ಅಲ್ಲಿ ಇಲ್ಲಿ ಅಡ್ಡಾಡಲು ಅನುಕೂಲವಾಗುತ್ತದೆಂದು ಖುಷಿಯಲ್ಲಿದ್ದಳು.  […]

8
0
Would love your thoughts, please comment.x
()
x