ನಾನು ಕೊಳಲಾಗಿ ಪ್ರೀತಿಸಲೇ…?
ಕೊಳಲಿನವಗಾಹನೆಗೆ ಜೀವ ತೆತ್ತ ರಾಧೆ
ಗಾಳಿಯಲ್ಲು ಲೀನವಾದ ಸ್ವರ ಸನ್ನಿಹಿತ
ಎಷ್ಟೊಂದು ಪ್ರೀತಿಗಳು! ಮುಡಿಯಲ್ಲಿ,
ಹೆಬ್ಬೆರಳ ತುದಿಯಲ್ಲು……………!
ನಾಚಿ ನಿಂತ ನೀರೆಗೆ ನಿರ್ಮಲ ನಿರ್ಬಂಧನೆ
ಪಂಚಾಕ್ಷರಿ, ಸುಪ್ರಭಾತ ಸ್ವರ ತೆತ್ತ ಮಾಧವ
ಕೊಳಲ ಗೋಪುರ ನಿನಾದ ಮುಗಿಲು ಮುಟ್ಟಿತು
ಪ್ರೀತಿಗಾಗಿ ಪ್ರೀತಿಸಿದ ತೆಕ್ಕೆಗೆ
ನ್ಯಾಯ ತೆತ್ತ ಮುತ್ತಿನ ಪೀಠ
ತೇದ ಗಂಧದಂದದಿ ನಿಷ್ಠೆ ಹೊತ್ತ ರಾಧೆ
ರಾಗ ತೆತ್ತ ದಿಟ ಸಂದೇಶ
ಸುತ್ತ ಸುಳಿವ ಮಾಯೆಯಲ್ಲು
ಕಣ್ಣ ಕಾಣ್ಕೆಯ ನೀಲಿ ನೋಟ
ಕಣ್ಣಿಂದ ಹೃದಯಕ್ಕೆ ದಾರಿಗುಂಟ ನೆನಪು
ತೇಯುವುದು ಕಾಲ ಇನಿಯನಿಂಚರ ಪುಟಿದು
ಮತ್ತೆ ಮತ್ತೆ ಶುರುವಿಟ್ಟ ಕೊಳಲು
ಸಂಗೀತದಾಸೆಗೆ ಪದನಿಮಿತ್ತ ಹುಡುಕಾಟ
ಹುಡುಕಾಟದಲ್ಲೇ ಉಸಿರುಗಟ್ಟುವ ಪ್ರೀತಿ
ಚಮತ್ಕಾರದೆದೆಯಲ್ಲು……
ನಾನು ಕೊಳಲಾಗಿ ಪ್ರೀತಿಸಲೇ ಶ್ರೀಕೃಷ್ಣ!
-ಸಂಗೀತ ರವಿರಾಜ್
ಮಸಣದ ಹೂವು:
೧: ಮಸಣದಲಿ
ಸತ್ತ ದೇಹಗಳಿಗೆ
ಗೋರಿ
ನನ್ನ ಹೃದಯದಲಿ
ಸತ್ತ ನಿನ್ನ ನೆನಪುಗಳಿಗೆ
ಗೋರಿ.
೨: ನೀ ಕೊಂದದ್ದು
ಬರೀ ನನ್ನನ್ನಲ್ಲ
ಜನ್ಮ ತಳೆದು
ಬದುಕಬೇಕಿದ್ದ
ಅದೆಷ್ಟೋ
ಕವಿತೆಗಳನ್ನ.
೩: ನನ್ನ ಕವಿತೆಗಳಿಗೆ
ಮರುಹುಟ್ಟು
ಮಸಣದ
ಗೋರಿಗಳಲ್ಲಿ.
೪: ಮಸಣದಲ್ಲೂ
ಕವಿತೆ ಹುಟ್ಟಬಹುದು
ಅತೃಪ್ತ ಆತ್ಮಗಳು
ಜೋತೆ ಬೆರೆತಾಗ.
೫: ಮಸಣದಲಿ
ಆತ್ಮಗಳ
ಮಿಲನವಾದೊಡೆ
ಮುಕ್ತಿ, ಮುಂದೆ…
ಸ್ವರ್ಗವೋ.?
ನರಕವೋ.?
೬: ಬೀದಿಗುಂಟ
ಹೂ ಗಿಡವನ್ನೆಲ್ಲ
ಕೀಳುತ್ತಾ ಹೊರಟಿದ್ದ
ಪೂಜಾರಿಯ
ಕಂಡು ನಕ್ಕಿದ್ದು
ಮಸಣದ ಹೂವು.
-ಗಣೇಶ್ ಖರೆ
ಬದುಕು
““““
ನೀನು ತೇಲಿಸಿ
ದಡ ಸೇರಿಸುವಿಯೆಂಬ
ಭರವಸೆಯಿಂದಲೇ
ತೇಲಿಬಿಟ್ಟಿದ್ದೇನೆ
ನನ್ನ ಈ ಪುಟ್ಟ
ಹರಿಗೋಲನ್ನು
ನಂಬುಗೆಯ ಹುಟ್ಟಿನ
ಹೊರತು ಮತ್ತಾವ
ಆಯುಧಗಳೂ ಇಲ್ಲ
ನನ್ನಬಳಿ
ಸಿದ್ಧಾಂತಗಳು
ನನ್ನ ಪರವಾಗಿವೆ;
ಹಾಗೆಂದು
ಹುಂಬುತನವಿಲ್ಲ
ದೋಣಿ ಮುಳುಗಲು
ಕಾರಣಗಳಿಗೆ ಬರವೇ?
ಆಕಸ್ಮಿಕಗಳು ನಿನ್ನ
ಪಾಲಿಗೂ ಇವೆ
ಈ ವಿವೇಕವೇ
ನನ್ನ ಭರವಸೆಗೆ
ಕಣ್ಗಾವಲು..
-ಸಿದ್ಧಲಿಂಗಸ್ವಾಮಿ ಎಚ್ ಇ
muru kavitegalu chennagive
ಗಣೇಶ, ನೀವು ಕವಿಗಳೂ ಹೌದು ಅಂತ ಗೊತ್ತಿರಲಿಲ್ಲ! ನಿಮ್ಮ ಎರಡನೇ ಕವಿತೆ ತುಂಬಾ ಇಷ್ಟವಾಯ್ತು!
ಉತ್ತಮ ಕವಿತೆಗಳು……
೩ಕವಿತೆಗಳೂ ಚೆನ್ನಾಗಿವೆ. ಅಭಿನ೦ದನೆಗಳು.
chennagive kavitegalu…..
ಕವನಗಳು ಚೆನ್ನಾಗಿವೆ.ಅಭಿನಂದನೆಗಳು
odugarige dhanyavadaglu
sangeetha
ಧನ್ಯವಾದಗಳು ಎಲ್ಲರಿಗೂ.