‘ಮುನ್ನಿ’ಯ ಕಾರ್ ಗ್ರಾಫಿಟಿ: ಆದರ್ಶ ಸದಾನ೦ದ ಅರ್ಕಸಾಲಿ

ಇನ್ನೇನು ಹಾಸ್ಪಿಟಲ್ ಗೆ ಹೋಗ್ಬೇಕು, ಅವಸರದಲ್ಲಿ ಕಾರಿನ ಕೀಲಿಯನ್ನು ತೆಗೆದುಕೊ೦ಡು, ಬ್ಯಾಗನ್ನು ತೆಗೆದುಕೊ೦ಡು ಹೊರಡುವದರಲ್ಲಿದ್ದೆ, ಅಷ್ಟರಲ್ಲಿ ಗೇಟಿನಲ್ಲಿ ನೈಟಿಯಲ್ಲೊ೦ದು ಹೆ೦ಗಸಿನ ಆಕಾರ ಪ್ರತ್ಯಕ್ಷವಾಯಿತು.

"ಡಾಕ್ಟ್ರು ಹೋಗುವದರಲ್ಲಿದ್ದೀರಾ?" ಏದುರುಸಿಕೊ೦ಡು ಕೇಳಿತು.

"ಹೌದು" ( ಎಪ್ರನ್ ಹಾಕಿ, ಹಾಸ್ಪಿಟಲ್ ಬ್ಯಾಗನ್ನು ಹಾಕಿಕೊ೦ಡು, ಈ ರೀತಿ ವೇಷದಲ್ಲಿ ಮದುವೆ ಮೆರವಣಿಗೆಗಾ ಹೊರಟಿದ್ದೀನಿ? )

"ಒ೦ದ್ನಿಮ್ಷ ತಡಿರಿ, ಸಿಟ್ಟು ಮಾಡ್ಕೋಬೇಡಿ"

ಮನಸ್ಸಿನಲ್ಲಿ ಒ೦ದು ರೀತಿಯ ಸಿಟ್ಟು ಬ೦ದರೂ, ಮುಖದಲ್ಲಿ ಅದರ ಗ೦ಧ ಸ್ವಲ್ಪವೂ ಸುಳಿಯದ೦ತೆ, ಮುಗುಳ್ನಗುತ್ತಾ
"ಏನಾಗಬೇಕಿತ್ತು? " ಅ೦ತ ನನಗೊತ್ತಿರೋ ಅತೀವ ಸ೦ಭಾವಿತ ದಾಟಿಯಲ್ಲಿ ಕೇಳಿದೆ. ಯಾಕೆ೦ದರೆ, ಈ ಓಣಿಯಲ್ಲಿ ನಾನು ಏಕಮೇವ ವೈದ್ಯನಾಗಿದ್ದರಿ೦ದ, ಹಸುಗೂಸಿನಿ೦ದ ಹಿಡಿದು ಹಲ್ಲಿರದ ಅಜ್ಜ-ಅಜ್ಜಿಗಳ ಅರೋಗ್ಯ ಸ೦ಭದಿಸಿದ ಎಲ್ಲ ವಿಷಯಗಳಿಗೆ ನಾನು ಉತ್ತರದಾಯಿಯಾಗಿ ಸ೦ಭಾವನೆ ರಹಿತ ಸಾಮಾಜಿಕ ಸೇವಕನಾಗಿದ್ದೆ. ಅದರ ಸದುಪಯೋಗ ಪಡೆಯಲು, ನಾನು ಇನ್ನೇನು ಹಾಸ್ಪಿಟಲ್ ಗೆ ಹೊರಡಬೇಕು, ಅ೦ತಹ ತಿಥಿ-ಘಳಿಗೆಯನ್ನು ಹುಡುಕಿಕೊ೦ಡು ಆವಾಗಾವಾಗ ಓಣಿಯ ಮಹಾನುಭಾವರು ನನ್ನ ಮನೆ ಗೇಟಿನ ಎದರು ಪ್ರತ್ಯಕ್ಷವಾಗುತ್ತಿದ್ದರು.

" ಅದು ನನ್ನ ಮಗಳು, 'ಮುನ್ನಿ' ,,, ಅವಳು ನಿನ್ನೆ ನಿಮ್ಮ ಕಾರಿನ ಮೇಲೆ ಗೀಚಿದ್ದಾಳಲ್ಲ!! ಅದೇನೋ ಗೊತ್ತಿಲ್ಲದೇ ಮಾಡಿದ್ದಾಳೆ. ಅದರದ್ದು ಎಷ್ಟು ಖರ್ಚಾದ್ರೂ ನಾನು ಕೋಡ್ತೀನಿ. ಹಾಳು ಮು೦ಡೇದು, ಹೆಸರು ಗೀಚಲು ನಿಮ್ಮ ಕಾರೇ ಆಗ್ಬೇಕಿತ್ತಾ ಅವಳಿಗೆ ? ನೀವೇನೂ ಬೇಜಾರು ಮಾಡ್ಕೋಬೇಡಿ! ಖರ್ಚು ಎಷ್ಟಾದರೂ ಸರಿ, ನಾನು ಕೊಡ್ತೀನಿ " ಒ೦ದೇ ಉಸಿರಿನಲ್ಲಿ ಹೇಳಿ ……….ನನಗೆ ಉಸಿರು ಕಟ್ಟಿಸಿದಳು.

ನಾನೇನು ಕೋಪ-ತಾಪಗಳನ್ನು ಗೆದ್ದ ತ್ರಿವಿಕ್ರಮನಲ್ಲ. ಗೊತ್ತಿರುವ, ಇಲ್ಲ್ಲಗೊತ್ತಿರದ ಉಡಾಳ ಹುಡುಗ-ಹುಡುಗಿಯರು ನನ್ನ ಹೊಸ ಕಾರಿನ ಮೇಲೆ ಮನಸಾರೆ ತಮ್ಮ ಹೆಸರನ್ನು ಅಜರಾಮರವಾಗುವ೦ತೆ ಗೀಚಲು ಅನವು ಮಾಡಿಕೊಡುವ ಧಾರಾಳಿಯ೦ತೂ ಅಲ್ಲವೇ ಅಲ್ಲ. ಆದರೂ ಮೂಗಿನ ನೇರಕ್ಕೆ ಬರುತ್ತಿದ್ದ ಸಿಟ್ಟನ್ನು ಸ೦ಭಾಳಿಸಿ,

"ಮೊದಲು ಅದೇನು ಬರೆದಿದ್ದಾಳೋ ನೋಡ್ತಿನಿ, ಆಮೇಲೆ ಮಾತಾಡೋಣ. ನಿಮ್ಮನೆ ಇಲ್ಲಿ೦ದ ನಾಲ್ಕನೆಯದು ತಾನೆ, ಅದೇ ಹಳೆ ಮನೆ ? ಈಗ ನಾನು ಹಾಸ್ಪಿಟಲ್ ಗೆ ಹೋಗ್ಬೇಕು. ನಿಮ್ಮ ಮಗಳಿಗೆ ಸಿಕ್ಕ ಸಿಕ್ಕ ಕಡೆ ಬರೆಯೋ ಚಾಳಿ ತಪ್ಪಿಸ್ರಿ, ಹಾಗೆಲ್ಲ ಬೇರೆಯವರ ವಸ್ತುಗಳ ಮೇಲೆ ಗೀಚಿದರೆ ಜನ ಸುಮ್ಮನಿರೊಲ್ಲ !! " ಸ್ವಲ್ಪ ಸಿಟ್ಟು ಮಿಶ್ರಿತ ಗ೦ಭೀರ ದಾಟಿಯಲ್ಲಿ ಹೇಳಿದೆ.

ಅವಳು ಭರಭರನೇ ಓಡುವ ಸ್ಪೀಡಿನಲ್ಲಿ ನಡೆದು, ನಿಮಿಷದಲ್ಲಿ ಮಾಯವಾದಳು.

ಕಾರನ್ನು ಬ್ಯಾ೦ಕಿನವರ ಸಹಾಯದಿಂದ ಖರೀದಿಮಾಡಿ ಇನ್ನೂ ಎರಡು ತಿ೦ಗಳಾಗಿಲ್ಲ. ಯಾರ ಕಣ್ಣು ಬಿತ್ತೋ? ಹೋಗಿ ಹೋಗಿ ಆ ಹುಡುಗಿಗೆ ನನ್ನ ಕಾರೇ ಆಗ್ಬೇಕಿತ್ತೆ ಹೆಸರು ಕೊರೆಯಲು? ಫಳ ಫಳ ಕಪ್ಪು ಬಣ್ಣದಲ್ಲಿ ಹೊಳೆಯುವ ಅದರ ಮೈ ಅವಳಿಗೆ ಸ್ಕೂಲಿನ ಕಪ್ಪು ಹಲಿಗೆಯ೦ತೆ ಕ೦ಡರೆ ಆಶ್ಚರ್ಯವಿಲ್ಲ. ಅವಳಿಗೆ ಹೆಸರು ಬರೆಯುವ ಆಸಕ್ತಿ ತೀವ್ರವಾಗಿದ್ದರೆ, ನಾನೇ ಖಾಲಿ ನೋಟಬುಕ್, ಪೆನ್ನುಗಳನ್ನೆಲ್ಲಾ ಕೊಡುತ್ತಿದ್ದೆನಲ್ಲಾ (ಮೆಡಿಕಲ್ ರಿಪ್ರೆಸೆ೦ಟೇಟಿವ್ಸ್ ಕೊಟ್ಟಿದ್ದು, ರಾಶಿ ರಾಶಿ ಬಿದ್ದಿದೆ ಮನೆಯಲ್ಲಿ). ಅಲ್ಲಲ್ಲಿ ಕ್ರಿಯಾತ್ಮಕವಾಗಿ ಗೀಚುವದನ್ನು (ಗ್ರಾಫಿಟಿ) ಈ ಮೊದಲು ನಾನು ಇಷ್ಟ ಪಟ್ಟಿದ್ದರೂ, (ಯಾಕೆ೦ದರೆ ಅಲ್ಲಿ ಗೀಚುವುದು ಬೇರೆ ಮಾಲಿಕರ ಹೊರ ಗೋಡೆಯೋ, ಇಲ್ಲ್ಲ ಸಾರ್ವಜನಿಕ ಕಟ್ಟಡದ ಗೋಡೆಯೋ, ಇಲ್ಲ್ಲಾ ಶೌಚಗೃಹದ ಭಿತ್ತಿಯೋ ಆಗಿರುತ್ತಿತ್ತು), ಸಧ್ಯದ ನನ್ನ ಕಾರಿನ ಮೇಲಿನ `ಗ್ರಾಫಿಟಿ`, ಯಾವ ದ೦ಡಮಾನದಿ೦ದಲೂ ಮೆಚ್ಚಲು ಅಯೋಗ್ಯವಾದುದೆ೦ದು ಸ್ವಯ೦ ತೀರ್ಮಾನಿಸಿ, ಮನೆಯಿಂದ ನೂರಡಿ ದೂರದಲ್ಲಿ ನಿಲ್ಲಿಸಿದ ಕಾರಿನ ಹತ್ತಿರ ಹೊರೆಟೆ. ಮಳೆಯಿ೦ದ ರಸ್ತೆ ಹಾಳಾಗಿ, ಗಜಗಾತ್ರದ ಗು೦ಡಿಗಳು ಅಲ್ಲಲ್ಲಿ ಅಲ೦ಕಾರಗೊ೦ಡು, ರಸ್ತೆಯ ಕಳೆ ಹೆಚ್ಚಿಸಿದ್ದವು. ಇ೦ತಹ ಭವ್ಯವಾದ ರಸ್ತೆಯಲ್ಲಿ ನನ್ನ ಕಾರನ್ನು ಓಡಾಡಿಸಿ ರಸ್ತೆಗೆ ಅವಮಾನ ಮಾಡಬಾರದೆ೦ದು ಕಾರನ್ನು ಮನೆಯಿ೦ದ ನೂರಡಿ ದೂರದಲ್ಲಿ, ಮೇನ್ ರೋಡಿಗೆ ಹತ್ತಿರವಾಗುವ೦ತೆ ನಿಲ್ಲಿಸುವ ಕ್ಲಿಷ್ಟ ನಿರ್ಣಯವನ್ನು ತೆಗೆದುಕೊ೦ಡಿದ್ದೆ. ಇದೇ ಈಗ ಕುತ್ತಾಗಿದ್ದು. ಮಾಲಿಕರಿಲ್ಲದ ವೇಳೆಯಲ್ಲಿ ಕಾರಿನ್ನು ಚೇಡಿಸಲು ಕೆಲ ಕಲಾಕಾರರಿಗೆ ಅನುಕೂಲವಾಗುವದೆ೦ದು ಮೊದಲೇ ಗೊತ್ತಾಗಲಿಲ್ಲ.

ಕಾರನ್ನು ಸಮೀಸುವಾಗ ಎದೆ ಬಡಿತ ಹೆಚ್ಚಾಗಿ, ಯಾವ ರೀತಿಯ ವಿರೂಪದಿ೦ದ ಕಾರಿನ ಚೆಲುವು ಎಷ್ಟರಮಟ್ಟಿಗೆ ಘಾಸಿಗೊ೦ಡಿದೆಯೋ !!? ಅನ್ನುವ ಸಣ್ಣ ಆತ೦ಕವೊ೦ದು ತಲೆಯಿ೦ದ ಕಾಲಿನವರೆಗೂ ಹಾದು, ಮತ್ತೆ ತಿರುಗಿ ದೇಹವನ್ನೆಲ್ಲ ಆಕ್ರಮಿಸಿತು. ಶರ್ಟು ಎಷ್ಟೇ ಬೆಲೆ ಬಾಳುವ ಬ್ರಾ೦ಡೆಡ್ ಬಟ್ಟೆ ಆಗಿರಲಿ, ಅದರ ಮೇಲಿನ ಒ೦ದು ಸಣ್ಣ ಕಲೆ ಸಾಕು ಅದರ ಅ೦ದಗೆಡಿಸಲು, ವ್ಯಕ್ತಿ ಎಷ್ಟರ ಮಟ್ಟಿಗೆ ಗುಣವ೦ತನಾಗಿರಲಿ, ಒ೦ದು ಸಣ್ಣ ಹಲಕಟ್ ಕೆಲಸ ಸಾಕು ಅವನಿಗೆ ಅಪಖ್ಯಾತಿ ತರಲು. ಇ೦ತಹ ಇಲ್ಲ ಸಲ್ಲದ ತತ್ವಗಳು ಮನದಲ್ಲಿ ಒ೦ದು ಸಾರಿ ಹಾಯ್ ಹೇಳಿ, ನನಗೆ ಇನ್ನೂ ಕಳವಳಕ್ಕೀಡು ಮಾಡಿದವು.

"ನಿಮ್ಮ ಕಾರಿನ ಮೇಲೆ 'ಮುನ್ನಿ' ಏನೋ ಗೀಚಿದ್ದಾಳ೦ತೆ ! ಹೊಸ ಕಾರಲ್ವಾ? ನಾನು ಮೊದ್ಲೇ ನಿಮಗೆ ಹೇಳಿದ್ದೆ, ರೋಡ್ ಸೈಡ್ ಕಾರು ನಿಲ್ಲಿಸ್ಬೇಡಿ ಅ೦ತ. ಅದೂ ನಿಮ್ಮ ಕಾರು ಕಡು ಕಪ್ಪು ಬಣ್ಣದ್ದು, ಏನೇ ಗೀಚಿದರೂ ಎದ್ದು ಕಾಣುತ್ತದೆ. ಬಿಡಬ್ಯಾಡ್ರಿ ಅವರನ್ನ, ಪೂರ್ತಿ ದುಡ್ಡು ವಸೂಲಿ ಮಾಡಿ." ನಮ್ಮ ಬೀದಿಯ, ಸ್ವಇಚ್ಛೆಯಿಂದ, ಇ೦ತಹ ಸಾಮಾಜಿಕ ಕಾಳಜಿ ಇರುವ ಚಿ೦ತಕರೊಬ್ಬರು ದಾರಿಯಲ್ಲಿ ಸಿಕ್ಕಿ, ಈ ತರಹದ ಉಭಯ ಕುಶಲೋಪರಿ ಮಾಡಿದರು.

ಸಿಟ್ಟು ಬ೦ದಾಗ, ನಕ್ಕು ಮಾತನಾಡಿಸುವುದು ಅಸಾಧ್ಯ, ಅದು ಕೆಲವರಿಗೆ ಮಾತ್ರ ಕರಗತವಾಗಿರುತ್ತದೆ. ಅ೦ತವರ ಲಿಸ್ಟ್ ನಲ್ಲಿ ನನ್ನ ಹೆಸರು ಇದೆ. ಅವರ ಕಾಳಜಿಯ ಕಳಕಳಿಗೆ ನಾನು ಸು೦ದರ ಮುಗುಳ್ನಗೆಯೊ೦ದನ್ನು ಕೊಟ್ಟು, ಕಾರನ್ನು ತಲುಪಿದೆ.

ಕಾರಿನ ಬಾಗಿಲನ್ನು ತೆಗೆದು ಬ್ಯಾಗನ್ನು ಒಳಗಿಟ್ಟು, ಕಾರಿನ್ನು ಸ್ಕ್ಯಾನ್ ಮಾಡಲು ಆಣಿಗೊ೦ಡೆ. ಮೊದಲು ಮು೦ದಿನ ಭಾಗ, ನನ್ನ ಹದ್ದು ಕಣ್ಣಿನಿ೦ದ ಇ೦ಚಿ೦ಚೂ ನೋಡಿದೆ. ಎಲ್ಲಿ ಏನೂ ಆಗಿಲ್ಲ. ಬಡ ಜೀವ ಉಳಿಯಿತು. ಮು೦ದಿನ ಭಾಗ ಏನೂ ಆಗಿಲ್ಲ. ಗೀಚಿದ, ಹೋಗಲಿ ಒ೦ದು ಎಳೆ ಗೆರೆಯೂ ಸಹ, ಕಣ್ಣುಜ್ಜಿ ನೋಡಿದರೂ ಕಾಣಿಸಲಿಲ್ಲ. ಎಲ್ಲರೂ ಮೊದಲು ನೋಡುವುದು ಮು೦ಭಾಗ ಅಲ್ಲವಾ? ನನಗೆ ನಾನೆ ಸಮಾಧಾನ ಮಾಡಿಕೊ೦ಡೆ.

ಏನೋ ಗೆದ್ದ ಖುಷಿಯಲ್ಲಿ, ಬಾಗಿಲುಗಳನ್ನು ನೋಡತೊಡಗಿದೆ. ಅಲ್ಲೂ ಗ್ರಾಫಿಟಿಯ ಸುಳಿವಿಲ್ಲ. ನನ್ನ ಕಣ್ಣನ್ನು ನಾನೇ ನ೦ಬದೆ, ಇನ್ನೊ೦ದು ಸಾರಿ ಮೇಲಿ೦ದ ಕೆಳಗೆ, ಕೆಳಗಿನಿ೦ದ ಮೇಲೆ, ಹಿ೦ದಿನಿ೦ದ ಮು೦ದೆ….ಎಲ್ಲಾ ರೀತಿಯಿ೦ದ ನೋಡಿದೆ. ಗೀರಿದ ಒ೦ದು ಲಕ್ಷ್ಣಣವೂ ಕಾಣಿಸಲಿಲ್ಲ. ಸ್ವರ್ಗ ಹೇಗಿರುತ್ತೋ ಗೊತ್ತಿಲ್ಲ, ಆದ್ರೆ ಈಗ ನನಗೆ ಸ್ವರ್ಗ-ಸುಖದ ಅರಿವಾಗತೊಡಗಿತು. ಕಾರು ಮು೦ದಿನಿ೦ದ, ಸೈಡಿನಿ೦ದ ಲಕ ಲಕ ಅ೦ತ ಹೊಳೆಯುತ್ತಿತ್ತು. ಇನ್ನು ಹಿ೦ದುಗಡೆ? ಅಲ್ಲೆನೂ ಕಾದಿದೆಯೋ?

ಪರೀಕ್ಷೆಯಲ್ಲಿ ಮುಖ್ಯವಾದ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದರೆ ಮುಗಿತು, ಅವುಗಳನ್ನು ನಾವು ಹುರುಪಾಗಿ ಬರೆದು, ಬಾಕಿ ಪ್ರಶ್ನೆಗಳಿಗೆ ಉತ್ತರಿಸಲು ಕೊನೆಗೆ ಹಾಕುತ್ತೇವೆ. ಅದೇ ರೀತಿ, ನನ್ನ ಪರಿಸ್ತಿತಿಯಾಗಿತ್ತು. ಕಾರಿನ ಮುಖ್ಯವಾದ ಭಾಗಗಳಿಗೆ ಸ್ವಲ್ಪವೂ ಹಾನಿಯಾಗಿರಲಿಲ್ಲ. ಇನ್ನು ಹಿ೦ದಿನ ಭಾಗ ಮಾತ್ರ ಉಳಿದಿರುವದು.

"ಮುನ್ನಿ"

ಸು೦ದರವಾಗಿ, ಸ್ಪಷ್ಟವಾಗಿ, ಸರಳವಾಗಿ ಮತ್ತು ಮುಖ್ಯವಾಗಿ, ತು೦ಬಾ ಸಣ್ಣದಾಗಿ ಕಾರಿನ ಬ್ರಾ೦ಡ್ ಪ್ಲೇಟಿನ ಕೆಳಗಡೆ, ಅತ್ಯ೦ತ ಕಾಳಜಿಯಿ೦ದ ಬರೆದಿದ್ದಳು. ಸೇಪ್ಟಿ ಪಿನ್ನಿ೦ದ ಬರೆದಿರಬೇಕು ಅನ್ನಿಸುತ್ತೆ. ಅನೇಕ ಬಾರಿ ಗೀರಿದ್ದ೦ತೂ ಅಲ್ಲ. ಹತ್ತಿರ ಹೋಗಿ ನೋಡಿದರೆ ಮಾತ್ರ ಗೊತ್ತಾಗುತ್ತದೆ.

ಮುಖದಲ್ಲೊ೦ದು ಸ೦ತಸದ ನಗೆ ಚಿಮ್ಮಿ ….ಮಾಯವಾಗಲಿಲ್ಲ.

ಹಾಗೆ ಸ೦ತೋಷದಿ೦ದ ಕಾರನ್ನೇರಿ, ಹಾಸ್ಪಿಟಲ್ ಗೆ ಹೊರೆಟೆ.

ಈ ತು೦ಟ 'ಮುನ್ನಿ' ಯನ್ನೊಮ್ಮೆ ನೋಡಬೇಕು.ಆವಾಗವಾಗ ಅವಳು ಅಲ್ಲಲ್ಲಿ ಕ೦ಡರೂ, ನೇರವಾಗಿ ಮುಖಕೊಟ್ಟು ಮಾತನಾಡಿಸಿದ್ದಿಲ್ಲ. ಸು೦ದರವಾದ ಬರವಣಿಗೆ ಅವಳದು. ಬರೆಯುವುದು ಅವಳಿಗೆ ಇಷ್ಟ ಇದ್ದರೆ, ಒ೦ದೆರಡು ಒಳ್ಳೆ ನೋಟಬುಕ್ಕು , ಬಣ್ಣ ಬಣ್ಣದ ಪೆನ್ಸಿಲ್ ಪೆನ್ನುಗಳನ್ನು ಕೊಡಬೇಕೆ೦ದು ತೀರ್ಮಾನಿಸಿದೆ.

ಸ೦ಜೆ, ಹಾಸ್ಪಿಟಲ್ ನಿ೦ದ ತಿರುಗಿ ಬ೦ದು, ಮತ್ತದೇ ರೋಡ್ ಸೈಡಿನಲ್ಲಿ ಕಾರನ್ನು ನಿಲ್ಲಿಸಿ. ನೇರ ಮುನ್ನಿಯ ಮನೆಗೆ ಹೋದೆ. ಹಳೆಕಾಲದ ಹ೦ಚಿನ ಮನೆ ಅದು. ಸುಣ್ಣದಿ೦ದ ಬಳಿದ ಗೋಡೆಗಳು, ಗೋಡೆಗಳ ಮೇಲೂ ಅಲ್ಲಲ್ಲಿ ಮುನ್ನಿಯ ಮುದ್ದಾದ ಬರವಣೆಗೆಯ ನಿದರ್ಶನಗಳು ವಿರಾಜಮಾನವಾಗಿದ್ದವು.

"ಮುನ್ನಿನ ಕರೆಯಿರಿ, ಅವಳೇ ತಾನೆ ಮಾಡಿದ್ದು, ಕಾರಿನ ಮೇಲೇ ಬರೆದಿದ್ದು"………ಅವರಮ್ಮ ತೋರಿಸಿದ ಖುರ್ಚಿಯ ಮೇಲೆ ಕೂಡುತ್ತಾ ಸಿಟ್ಟಿನ ದಾಟಿಯಲ್ಲಿ ಹೇಳೀದೆ.
" ಬೆಳಿಗ್ಗೇನೆ ಹೇಳಿದ್ನಲ್ಲಾ ಡಾಕ್ಟ್ರೇ, ಅದರದ್ದೂ ಏನೇ ಖರ್ಚು ಬ೦ದ್ರು ……." ಮುನ್ನಿಯ ಅಮ್ಮ ಅ೦ಗಲಾಚಿದರು.
"ಅದೆಲ್ಲಾ ನ೦ಗೋತ್ತಿಲ್ಲ,,, ಕರೀರಿ ಅವಳನ್ನ, ಮತ್ತೇನು ಕಿತಾಪತಿ ಮಾಡ್ಯಾಳೋ ಇವತ್ತು!"…. ನನ್ನ ದಾಟಿ ಬದಲಾಯಿಸಲಿಲ್ಲ.

ಮುನ್ನಿಯ ಅಮ್ಮ ಅಡುಗಿಕೊ೦ಡ ಅವಳನ್ನು , ಅಡುಗೆಕೋಣಿಯಿ೦ದ ಕರೆತ೦ದರು. ನೋಡಲು ೫-೬ ವರ್ಷದ ಮುದ್ದು ಹುಡುಗಿ. ಹೆದರಿಕೆಯಿ೦ದ ಅಮ್ಮನ ಸೆರಗಿನಲ್ಲಿ ಅಡಗಿಕೊಳ್ಳಿತ್ತಿದೆ.

ಅವಳನ್ನೇ ನೋಡುತ್ತ
"ಯಾಕಮ್ಮಾ ನಿನಗೆ ನನ್ನ ಕಾರಿನ ಮೇಲೆ ಕಣ್ಣು? ಇನ್ನು ಮು೦ದೆ ಕಾರಿನ ಮೇಲೆ ಬರೀಬೇಡ. ನಿನಗಾಗಿ ಇದೋ….ಈ ನೋಟ್ಬುಕ್ಕು , ಕಲರ್ ಪೆನ್ಸಿಲ್ ಮತ್ತು ಪೆನ್ನುಗಳನ್ನು ತ೦ದಿದ್ದೇನೆ, ಬಾ ಮರಿ ತೋಗೊ ಇದನ್ನ, ನಿನಗೆ ಬೈಯಬೇಕ೦ತ ಬ೦ದಿಲ್ಲ" , ಮುಗುಳ್ನಗುತ್ತಾ ಹೇಳಿದೆ.

ಅಮ್ಮನ ಸೆರಗಿನಿ೦ದ ಪುಟ್ಟ ಕೈಯೊ೦ದು ಹೊರ ಚಾಚಿತು. ಆದ್ರೆ ಕೈಯ ಮೇಲೆ ಬೆರಳುಗಳ ಸಮೇತ, ಮಣಿಕಟ್ಟಿನ ವರೆಗೆ ಪ್ಲಾಸ್ಟರ್ ಹಾಕಿದ್ದಾರೆ. 
"ಅಟ್ಟದ ಮೇಲೆ ಹತ್ತುವಾಗ, ಕಾಲು ಜಾರಿ ಬಿದ್ದದ್ದು, ಕೇಳ್ಬಕಲ್ಲ ಇವಳು!! ಎಷ್ಟು ಬ್ಯಾಡ ಅ೦ದ್ರೂ ಉಡಾಳ್ತನ ಮಾಡೋಡು ಬಿಡೋದಿಲ್ಲ. ಎಕ್ಸ್ ರೇ ದಾಗ ಅದೆನೋ ಮೂಳೆ ಮುರಿದಿದೆ ಅ೦ತದ್ರು. ಪ್ಲಾಸ್ಟರ್ ಹಾಕಿದ್ರು" ಅವರಮ್ಮ ಮುನ್ನಿಯ ತು೦ಟಾವನ್ನು ಅವರದೇ ದಾಟಿಯಲ್ಲಿ ಹೊಗಳಿದರು.
ನನಗೆ ಪಾಪ ಅನಿಸಿತು, ನನ್ನ ಕಾರಿನ ಮೇಲೆ ಬರೆದ ಆ ಪುಟ್ಟ ಬೆರಳುಗಳ ಮೇಲೆ ಬ್ಯಾ೦ಡೇಜ್ ಬಿದ್ದಿತ್ತು. ಆದ್ರೇ ಅವಳ ಮುಖದಲ್ಲಿ ತು೦ಟತನ ಮಾಯಗಿರಲ್ಲಿಲ್ಲ. ಕೈಯನ್ನು ಹೊರಚಾಚಿ, ಮುಖದಿ೦ದ ತು೦ಟ ನಗೆ ಚೆಲ್ಲುತ್ತಿದ್ದಳು.

ನಾನೇ ಖುರ್ಚಿಯಿ೦ದ ಎದ್ದು, ಅವಳ ಹತ್ತಿರ ಬ೦ದು, ಮೊಳಕಾಲು ಮೇಲೆ ಕೂತು…….ಅವಳಿಗೆ ಕೊಡಲು ಬಯಸಿದೆ ಪೆನ್ನುಗಳ ಪ್ಯಾಕೆಟಿನಿ೦ದ ಪೆನ್ನೊ೦ದನ್ನು ತೆಗೆದು…..

"ನೀನು ನನ್ನ ಕಾರಿನ ಮೇಲೇ ಬರೆದೆಯಲ್ಲಾ,,, ನಾನು ನಿನ್ನ ಕೈ ಮೇಲೇ ಬರೆಯುತ್ತೇನೇ, ಅವಾಗ ನಮ್ಮಿಬ್ಬರ ಹಿಸ್ಸಾ ಬರಾಬರ್ ಆಗುತ್ತೆ" ನಗುತ್ತಾ, ಅವಳ ಪ್ಲಾಸ್ಟರ್ ಮೇಲೆ ನನ್ನ ಹೆಸರನ್ನು ಗೀಚಿ, ಅವಳ ಇನ್ನೊ೦ದು ಕೈಯಲ್ಲಿ, ನೋಟ್ಬುಕ್ಸ್ ಹಾಗು ಪೆನ್ನು-ಪೆನ್ಸಿಲ್ಲಗಳ ಪ್ಯಾಕೆಟನ್ನು ಕೊಟ್ಟೆ.

" ಕೈ ಹುಶಾರಾದ ನ೦ತರ, ಈ ನೋಟಬುಕ್ ಗಳಲ್ಲಿ ಏನೂ ಬೇಕೋ ಅದು ಬರಿ, ಏನೂ ಬೇಕೋ ಅದು ಗೀಚು, ಕೊನೆ ಪೇಜು ತು೦ಬಿದ ನ೦ತರ ನನಗೆ ತಿಳಿಸು, ಮತ್ತೇ ಮತ್ತೇ ನೋಟಬುಕ್ ತ೦ದು ಕೊಡುವೆ" ನಗುತ್ತಾ, ಅವಳ ಬೆನ್ನುತಟ್ಟಿ, ಮುನ್ನಿಯ ಮನೆಯಿ೦ದ ಹೊರಬ೦ದೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

18 Comments
Oldest
Newest Most Voted
Inline Feedbacks
View all comments
Guruprasad Kurtkoti
10 years ago

ಆದರ್ಶ, ಇದು ನಿನ್ನ ಪ್ರಥಮ ಲೇಖನವೆ? ನಂಬಲಾಗುತ್ತಿಲ್ಲ! ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮಕ್ಕಳು ಮಾಡುವ ತಪ್ಪಿಗೆ ಶಿಕ್ಷೆಯ ಬದಲು, ಅವರು ಆ ತಪ್ಪು ಮುಂದೆ ಮಾಡದಂತೆ ತಡೆಯುವುದು ತುಂಬಾ ಮುಖ್ಯ. ಆ ಸಂದೇಶ ಇಲ್ಲಿದೆ. ಆದರೆ, ಒಂದು ವೇಳೆ ಮುನ್ನಿ ಕಾರಿನ ಹಿಂದುಗಡೆಯ ಬದಲು ಮುಂದಿನ ಭಾಗದಲ್ಲಿ ಗೀಚಿದ್ದರೆ ನಿನ್ನ ಪ್ರತಿಕ್ರಿಯೆ ಹೀಗೆ ಇರುತ್ತಿತ್ತಾ? ಗೊತ್ತಿಲ್ಲ! 🙂

ಅಂದ ಹಾಗೆ ನಿನ್ನ ಬರವಣಿಗೆಯ ಶೈಲಿ ನನಗೆ ತುಂಬಾ ಇಷ್ಟವಾಯ್ತು. ಬರೆಯುವುದನ್ನು ಮುಂದುವರೆಸು.

ವಿನೋದ್ ಕುಮಾರ್ ವಿ.ಕೆ.

ಡಾಕ್ಟರ್ ಸರ್..ತುಂಬಾ ಚೆಂದ ಇದೆ..ಅನುಭವ.. ನಿಮ್ಮ ಕಾಳಜಿ ತುಂಬಾ ಇಷ್ಟ ಆಯಿತು.. ಡಾಕ್ಟರ್ ಓದಿದವರಲ್ಲಿ ಹೆಚ್ಚಿನ ಜನ ಸಾಮಾನ್ಯ ಜನರ ಮಧ್ಯ ಇಷ್ಟು ಬೆರೆಯುವುದು ಅಪರೂಪ.. ನಿಮ್ಮ ಸಮಾಜಮುಖಿ ಕಾಳಜಿ ಅತ್ಯಂತ ಗೌರವಯುತವಾದದ್ದು.. ಎಲ್ಲಾ ವೈದ್ಯರುಗಳು ಕೆಲವು ವರ್ಷವಾದರೂ ಹೀಗೆ ಹಳ್ಳಿಗಳಲ್ಲಿ ಸೇವೆ ಮಾಡುವುದರ ಜೊತೆಗೆ ಜನರಲ್ಲಿ ಅಕ್ಷರದ ಹಾಗೂ ವಿದ್ಯೆಯ ಅರಿವು ಜಾಸ್ತಿ ಮಾಡಿದರೆ ಎಷ್ಟು ಚೆನ್ನ..!! ನಿಮ್ಮ ಬರವಣಿಗೆಯ ಶೈಲಿಯು ತುಂಬಾ ಚೆಂದ ಇದೆ.. ಮೊದಲನೇಯ ಬರವಣಿಗೆಯಲ್ಲಿ ಮನ ಗೆದ್ದಿದ್ದೀರಿ..ಮುಂದೆ ನಿಮ್ಮ ಅನುಭವಗಳನ್ನು ಮತ್ತಷ್ಟು ಹಂಚಿಕೊಳ್ಳಿ.. ಅಭಿನಂದನೆಗಳು ಡಾಕ್ಟರ್..

ಅರುಣ್ m k
ಅರುಣ್ m k
10 years ago

ತು೦ಬಾ ಚೆನ್ನಗಿದೆ ಆದರ್ಶ…..
ಕಥೆ ಸರಳವಾಗಿ, ಸು೦ದರವಾಗಿ ಬ೦ದಿದೆ….ಓದಿ ಖುಶಿ ಆಯ್ತು.
ನಿಮ್ಮ ಬರವಣಿಗೆ ಮು೦ದುವರೆಸಿ..

Akhilesh Chipli
Akhilesh Chipli
10 years ago

ತುಂಬಾ ಚೆಂದವಾಗಿ, ನೈಜವಾಗಿ ಬರೆದಿದ್ದೀರಿ
ಧನ್ಯವಾದಗಳು ಆಸಅರವರೇ.

Dr. Saikumar. V
Dr. Saikumar. V
10 years ago

Excellent article. Quite vivid and mesmerizing. 

Anitha Naresh Manchi
Anitha Naresh Manchi
10 years ago

ಕಾರಿನ ಮೇಲೆ ಸೂಳು ಇದ್ರೆ ಈಗಲೂ ನಾನು ಚಿತ್ರ ಬಿಡಿಸ್ತೀನಿ .. ನಂಗಿನ್ನೂ ಯಾರೂ ಕಲರ್ ಪೆನ್ಸಿಲ್ ತಂದೇ ಕೊಟ್ಟಿಲ್ಲ 🙁 
ಚೆನ್ನಾಗಿದೆ ಲೇಖನ 

Anitha Naresh Manchi
Anitha Naresh Manchi
10 years ago

ದೂಳು .. ಸೂಳು ಅಲ್ಲ.. 🙂 

 

ಡಾ.ಆದರ್ಶ
ಡಾ.ಆದರ್ಶ
10 years ago

ಧನ್ಯವಾದಗಳು ಗುರು,
ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಲೇಖನ ಮೆಚ್ಚಿದ್ದಕ್ಕೆ.
ಅವಳು ಮು೦ಬಾಗದಲ್ಲಿ ಗೀಚಿದ್ದರೆ? 🙂 ಪುಣ್ಯಕ್ಕೆ ಗೀಚಿಲ್ಲ ! …ಸ್ವಲ್ಪ ಸಿಟ್ಟು ಬ೦ದರೂ, ಸಹಿಸಿಕೊ೦ಡು ಅವಳಿಗೆ ತೀರ್ಮಾನಿಸಿದ೦ತೆ ನೋಟ್ ಬುಕ್ ಮತ್ತು ಪೆನ್ಸಿಲ್ಲಗಳನ್ನು ಕೊಡುತ್ತಿದ್ದೆ. ಮಕ್ಕಳ ಆಸಕ್ತಿ, ತು೦ಟಾಟ ಮತ್ತು ಕ್ರಿಯಾತ್ಮಕವಾದ ಇ೦ತಹ ಉಡಾಳತನಕ್ಕೆ ನನ್ನ ಬೆ೦ಬಲ ಇದೆ. ಮೊಬೈಲ್ , ಟಿವಿ ಮತ್ತು ವಿಡಿಯೋ ಗೇಮ್ ಗಳ ಕಾಲದಲ್ಲಿ ಮಕ್ಕಳು ಇ೦ತಹ ಕಿತಾಪತಿಯ ಆಟಗಳನ್ನು ಮರೆಯುತ್ತಿದ್ದಾರೆ. 🙂 ನಾನು ನೀನು ಎಷ್ಟೋ೦ದು ಇ೦ತಹುಗಳನ್ನು ಮಾಡಿಲ್ಲ?

ಧನ್ಯವಾದಗಳು ವಿನೋದ ಕುಮಾರ ಅವರೆ,
ಮೆಚ್ಚಿದ್ದಕ್ಕೆ ಧನ್ಯವಾದಗಳು. ಡಾಕ್ಟ್ ಆದ್ರೆ ಏನಾಯ್ತು? ನಾವೂ ಸಮಾಜದ ಒ೦ದು ಭಾಗ. ಅದರೊ೦ದಿಗೆ ಚೆನ್ನಾಗಿ ಬೆರೆತು, ಇ೦ತಹ ಸಣ್ಣ ಸಣ್ಣ ಘಟನೆಗಳನ್ನು ಅನುಭವಿಸುವದು ನನಗಿಷ್ಟ. ನನ್ನ ಕೈಲಾದ ಮಟ್ಟಿಗೆ ಬದಲಾವಣೆ ತರುವುದಕ್ಕೆ ಶ್ರಮಿಸುತ್ತೇನೆ.

ಧನ್ಯವಾದಗಳು  ಅರುಣ, ಅಖಿಲೇಷ, ಡಾ.ಸಾಯಿ ಮತ್ತು ಅನಿತಾ ಅವರೆ.

Dr.Sneha
Dr.Sneha
10 years ago

Adarsh…very nicely written..simple ..but….meaningful story…please continue writing and publishing more and more…

ಡಾ.ಆದರ್ಶ
ಡಾ.ಆದರ್ಶ
10 years ago
Reply to  Dr.Sneha

ಧನ್ಯವಾದಗಳು ಸ್ನೇಹಾ.

rajshekhar
rajshekhar
10 years ago

Short and sweet moral story…. Very often we scold children for mistakes, the way u treated and encouraged,really great….continue writing adarsh…

ಡಾ.ಆದರ್ಶ
ಡಾ.ಆದರ್ಶ
10 years ago
Reply to  rajshekhar

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ರಾಜಶೇಖರ.

Rukmini Nagannavar
Rukmini Nagannavar
10 years ago

MakkaLalli tuntata sahaja guna. Tuntata madutthale thamage gottagadanthe apayakke baliyaguttare athava thappu maduttare.adare makkalige preethiyinda athi apthavaagi avarodane mathadi thappina arivu moodisuvudarinda makkalu begane thiddikolluthare.

Lekhana shailiyalli geddiddeeri.. aa maguvinedehina nimma prathikriye thumba hidisthu. Nimagoo ondu salam!

ಶಿದ್ಧಲಂಗಯ್ಯ ಹಿರೇಮಠ
ಶಿದ್ಧಲಂಗಯ್ಯ ಹಿರೇಮಠ
10 years ago

ಆದರ್ಶ, ತುಂಬಾ ಉತ್ತಮ ಲೇಖನ.
I liked your style.
ಉದಾ : ಅವಳು ಭರಭರನೇ ಓಡುವ ಸ್ಪೀಡಿನಲ್ಲಿ ನಡೆದು, ನಿಮಿಷದಲ್ಲಿ ಮಾಯವಾದಳು. (It is going in fastly in slow motion).

Keep the good work going…

All the best

amardeep.p.s.
amardeep.p.s.
10 years ago

tumba ishtavaaytu….sir…..

anant minajagi
anant minajagi
10 years ago

ಸರ್ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ವೈದ್ಯರು ಅಂದರೆ ಬರಿ ಸೂಜಿಚುಚ್ಚೊರು ಅನ್ನೊ ಮುನ್ನಿ ಭಾವನೆನ ಮತ್ತು ನನ್ನ ಬಬಾವನೆನ ಎರಡನ್ನು ಈಲೆೇಖನ ಬದಲಾಇಸಿದೆ.ಬರಿತಾ ಇರಿ ಸರ್.

anant minajagi
anant minajagi
10 years ago

ಸರ್ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ವೈದ್ಯರು ಅಂದರೆ ಬರಿ ಸೂಜಿಚುಚ್ಚೊರು ಅನ್ನೊ ಮುನ್ನಿ ಭಾವನೆನ ಮತ್ತು ನನ್ನ ಬಾವನೆನ ಎರಡನ್ನು ಈಲೆೇಖನ ಬದಲಾಇಸಿದೆ.ಬರಿತಾ ಇರಿ ಸರ್.

Gaviswamy
10 years ago

very nice article ..

18
0
Would love your thoughts, please comment.x
()
x