ಬುಂಡೆದಾಸನೆಂಬ ಹುಚ್ಚಯ್ಯ: ಹೃದಯಶಿವ

 

ನಾನು ಹದಿನಾರನೇ ವಯಸ್ಸಿಗೆ ಹಳ್ಳಿಗಳನ್ನು ಬಿಟ್ಟಿದ್ದರೂ ಹಳೆಯ ಪರಿಚಿತರು ಮದುವೆ, ಗೃಹಪ್ರವೇಶ, ನಾಮಕರಣ, ಶಾಲಾಕಾಲೇಜುಗಳ ಸಮಾರಂಭ ಅಥವಾ ಯಾರಾದರು ಸತ್ತರೆ ಕರೆಯುತ್ತಾರೆ; ನನ್ನ ಬೇರುಗಳು ಎಂದಿಗೂ ಹಳ್ಳಿಗಳಲ್ಲಿಯೇ ಇರುವುದರಿಂದ ಇದೆಲ್ಲಾ ಸರ್ವೇ ಸಾಮಾನ್ಯ. ನನಗೆ ಸಾವಿನ ಮನೆಗಳ ಬಗ್ಗೆ ಬೇಜಾರು. ಏಕೆಂದರೆ ನನಗದು ನಾಟಕದ ವಾತಾವರಣದ ನೆನಪು ತರುತ್ತದೆ. ಜೀವಂತವಾಗಿದ್ದಾಗ ಎಷ್ಟೋ ಸಲ ಮಕ್ಕಳ, ಸೊಸೆಯಂದಿರ ಕಾಲು ಕಸವಾಗಿ ಬದುಕಿದ ವೃದ್ಧರ ಹೆಣದ ಮುಂದೆ ಅವರ ಬಂಧುಗಳೆನಿಸಿಕೊಂಡವರೆಲ್ಲಾ ಕೂತು ಗೊಳೋ ಅಂತ ಅಳುವ ಪ್ರೊಫೆಶನಲ್ ಪಾತ್ರಧಾರಿಗಂತೆ ಕಾಣುತ್ತಾರೆ. ಅವರ ದುಃಖ, ಸಂತಾಪ, ಕಣ್ಣೀರು ಎಲ್ಲವೂ ಸುಳ್ಳು ಎಂದು ಜಗತ್ತಿನೆದುರು ಬಹಿರಂಗ ಪಡಿಸಲು ಸತ್ತು ಮಲಗಿರುವವರಿಗೆ ಯಾಕಾದರೂ ಮತ್ತೆ ಜೀವ ಬರಬಾರದು ಅನ್ನಿಸುತ್ತದೆ. 

ಆದರೆ ಇಲ್ಲೊಂದು ಸಾವಿನ ಮನೆ ಭಿನ್ನವಾದದ್ದು. ಮುದುಕ ಬುಂಡೆದಾಸ ಸತ್ತು ಮಲಗಿದ್ದಾನೆ. ಅವನ ಪ್ರೀತಿಯ ನಾಯಿ ಭೈರ ಅತ್ತಿತ್ತ ತಬ್ಬಲಿಯಂತೆ ಓಡಾಡುತ್ತಿದೆ. ಇಷ್ಟಕ್ಕೂ ಈತ ಬಾಲ್ಯದಿಂದಲೇ ಲಂಬಾಣಿಗರ ಮನೆಯಲ್ಲಿ ಭಟ್ಟಿಸರಾಪು ಕುಡಿಯುತ್ತಿದ್ದರಿಂದ ಈತನಿಗೆ ಬುಂಡೆದಾಸ ಎಂಬ ಹೆಸರು ಬಂದಿರುತ್ತದೆ. ಇವನ ನಿಜವಾದ ಹೆಸರು ಹುಚ್ಚಯ್ಯ. ಹುಚ್ಚುಕುದುರೆ ಬೀರಯ್ಯನ ವರದಿಂದ ಹುಟ್ಟಿದ್ದರಿಂದ ಇವನಿಗೆ ಈ ಹೆಸರು ಅಂತ ಪ್ರತೀತಿ. ಸತ್ತು ಮಲಗಿರುವ ಈ ಮುದುಕ ಬುಂಡೆದಾಸನ ಬಗ್ಗೆ ನನಗೆ ಎಲ್ಲಿಲ್ಲದ ಕುತೂಹಲ. ನಾನು ಒಂಥರಾ ಇವನ ಫ್ಯಾನ್ ಎಂದು ಹೇಳಿಕೊಳ್ಳಬಲ್ಲೆ. ಏಕೆಂದರೆ ಬುಂಡೆದಾಸ ನನ್ನ ಇಷ್ಟದ ವ್ಯಕ್ತಿಯಾಗಿದ್ದ. ಅದಕ್ಕೆ ಕಾರಣವನ್ನೂ ಹೇಳಲಿದ್ದೇನೆ. ಬುಂಡೆದಾಸ ಆನೆ ತುಳಿದು ಸತ್ತನು ಎಂಬ ಸುದ್ದಿ ಕೇಳಿ ಹೋದೆ. ಈ ಸಾವಿನ ಸಂದರ್ಭದಲ್ಲಿ ನನಗೆ ಅಳಬೇಕೆಂದು ಅನಿಸಿರಲಿಲ್ಲ. ಜನ ಮುತ್ತಿದ್ದರು. ಬುಂಡೆದಾಸನನ್ನು ಪ್ರೀತಿಸುತ್ತಿದ್ದ ಲಂಬಾಣಿಗರು, ಆತನನ್ನು ಕುತೂಹಲದಿಂದ ನೋಡುತ್ತಿದ್ದವರು, ತಮಗೆ ಬೇಲದಹಣ್ಣು, ಎಸರೇ ಹಣ್ಣು, ಜೇನು, ತುಡುಬೆಗಳನ್ನು ತಂದು ಕೊಡುತ್ತಿದ್ದ ಮುದುಕ ಸತ್ತುಹೋದದ್ದಕ್ಕೆ ಅಳುತ್ತಿದ್ದ ಊರಿನ ಮಕ್ಕಳು, ಎಲ್ಲರೂ ಇದ್ದರು. ಅದು ಅಷ್ಟೇನೂ ನೋವಿನಿಂದ ಕೂಡಿದ್ದ ವಾತಾವರಣವೇನೂ ಆಗಿರಲಿಲ್ಲ. ಅಲ್ಲಿ ಸಂತಾಪದ ವಾತಾವರಣವಿರುತ್ತದೆಂದು ನಾನಷ್ಟೇ ಊಹಿಸಿಕೊಂಡಿದ್ದೆ. ಹೆಣಕ್ಕೆ ನೀರು ಹುಯ್ದು, ಚಟ್ಟದ ಮೇಲೆ ಮಲಗಿಸಿ, ಬಿಳಿಯ ಬಟ್ಟೆ ಹೊದಿಸಿ, ಅವರಿವರು ತಂದಿದ್ದ ಹೂವಿನ ಹಾರ ಹಾಕಿ ನಾಲ್ಕು ಜನ ಚಟ್ಟಕ್ಕೆ ಹೆಗಲು ಕೊಡುವ ಮುನ್ನ ಬುಂಡೆದಾಸನ ಆವರೆಗಿನ ಬದುಕಿನ ಬಗ್ಗೆ ಒಂದಿಷ್ಟು ಜ್ಞಾಪಿಸಿಕೊಳ್ಳುವ ಮನಸಾಯಿತು. ಆ ನೆನಪಿನ ನೆಪದ ಆ ನಿಮಿಷಗಳ ನನ್ನ ಸ್ವಗತವನ್ನು ಇಲ್ಲಿ ಕೊಡುತ್ತೇನೆ:

ಬುಂಡೆದಾಸ ಸತ್ತಿದ್ದಾನೆ. ಈತನ ಅಣ್ಣಂದಿರಾದ ಗುಡ್ಡಪ್ಪ ಮತ್ತು ಸಿದ್ಧರಾಮನಿಗೂ ಅವರ ಹೆಂಡತಿಯರಿಗೂ ಈತ ಯಾವತ್ತೋ ಸತ್ತುಹೋಗಿದ್ದ. ಈ ಸಾವು ಅವರಿಗೆ ಒಂದು ನೆಪವಷ್ಟೇ. ಇಲ್ಲಿ ನೆರೆದಿರುವ ಗಂಡಸರು, ಹೆಂಗಸರು, ಮಕ್ಕಳು, ಈತನ  ರಕ್ತಸಂಬಂಧಿಕರು- ಯಾರೂ ಇವನನ್ನು ಆಳದಿಂದ ಸ್ಟಡಿ ಮಾಡಿದವರಲ್ಲ. ದೂರದಿಂದ ನೋಡಿ, ನಕ್ಕು, ತಮಾಷೆ ಮಾಡಿ ಸುಮ್ಮನಾಗಿದ್ದವರು.

ಬುಂಡೆದಾಸನನ್ನು ನಾನು ಚಿಕ್ಕವನಿದ್ದಾಗಿಂದಲೂ ನೋಡಿದ್ದೇನೆ. ಇವನು ಕಾಡಿನಿಂದ ತರುತ್ತಿದ್ದ ಬೇಲದಹಣ್ಣು, ಎಸರೇ ಹಣ್ಣು ತಿಂದವರ ಪೈಕಿ ನಾನೂ ಒಬ್ಬ. ಆದರೆ ಬುಂಡೆದಾಸನ ಎರಡನೇ ಅಣ್ಣ ಮುದುವೆಯಾಗುವಷ್ಟರಲ್ಲಿ ಈ ಮನೆಯ ವಾರಗಿತ್ತಿ ಕಾಳಗ ಶುರುವಾಗಿತ್ತು. ಈ ಕಾರಣದಿಂದಲೇ ಇವನ ಎರಡನೇ ಅಣ್ಣ ತನ್ನ ಹೆಂಡಿರ ದೆಸೆಯಿಂದ ಹೊಲಮನೆ ಭಾಗ ತೆಗೆದುಕೊಂಡು ಬೇರೆ ಹೋಗುವುದಾಗಿ ಪಟ್ಟು ಹಿಡಿದ, ಹಿರಿಯಣ್ಣನೂ ಆಗಲಿ ಅಂದ. ಊರಿನ ಹಿರೀಕರೆಲ್ಲ ಸೇರಿ ಹೊಲಮನೆ ಭಾಗ ಮಾಡಲು ಕೂತರು. ಮುಗ್ಧನೂ, ಪೆದ್ದನೂ, ತುಸು ಬುದ್ಧಿಮಾಂದ್ಯನೂ ಆದ ಬುಂಡೆದಾಸನಿಗೆ ಜಮೀನು, ಮನೆ ಯಾವುದನ್ನೂ ಕೊಡಬಾರದಾಗಿಯೂ, ಆತ ಬದುಕಿರುವವರೆಗೆ ತಲಾ ಒಂದೊಂದು ವರ್ಷ ಇಬ್ಬರೂ ಅಣ್ಣಂದಿರು ಆತನ ಊಟಬಟ್ಟೆ, ಬೀಡಿ ಬೆಂಕಿಪೊಟ್ಟಣ, ಜ್ವರಗಿರ ಬಂದರೆ ಸೂಜಿ ಪಿಲ್ಸು ಖರ್ಚು ಇತ್ಯಾದಿಗಳನ್ನು ನೋಡಿಕೊಳ್ಳುವುದಾಗಿಯೂ ತೀರ್ಮಾನವಾಯಿತು. ಸಾಧುಪ್ರಾಣಿಯಂತಹ ಬುಂಡೆದಾಸನಿಗೆ ಏನು ಮಾಡಬೇಕೆಂದು ಆ ಕ್ಷಣಕ್ಕೆ ತೋಚಲಿಲ್ಲ. ಅವತ್ತಿನಿಂದ ಮೂರ್ನಾಲ್ಕು ದಿನ  ಊರಾಚೆಯ ಪಾಳುಗುಡಿಯ ಜಗಲಿ ಬಿಟ್ಟು ಕದಲಲಿಲ್ಲ. ಜೋರಾಗಿ ಅಳಬೇಕೆನಿಸಿದರೂ ದಟ್ಟ ಮೌನ, ಒಂಟಿತನದಲ್ಲಿ ಮುಳುಗಿದ. ತನ್ನ ಬಳಿ ಯಾವಾಗಲೂ ಇಟ್ಟುಕೊಳ್ಳುತ್ತಿದ್ದ ದಮ್ಮಡಿಯನ್ನು ಬಡಿಯುತ್ತಾ ಮೈಮರೆತು ಹಾಡುತ್ತಿದ್ದ. ಹೂನೀರಿಲ್ಲದೆ ಜೇಡದ ಬಲೆಯ ನಡುವೆ ಅಪರಾಧಿಯಂತೆ ಕುಳಿತಿದ್ದ ಪುರಾತನ ಶಿವಲಿಂಗವನ್ನು ನೋಡುತ್ತಾ ಕುಳಿತ. ಆಗಲೇ ಧೈರ್ಯ ತಂದುಕೊಂಡು ಸೀದಾ ಮನಗೆ ಬಂದು ರೇಷ್ಮೆಹುಳುವಿಗೆ ಸೊಪ್ಪು ಕೊರೆಯಲು ಬಳಸುವ ಉದ್ದನೆಯ ಚೂರಿಯನ್ನು ಕೈಯಲ್ಲಿ ಹಿಡಿದು ಅಣ್ಣಂದಿರು, ಅತ್ತಿಗೆಯಂದಿರಿಗೆಲ್ಲಾ ಚುಚ್ಚಲು ಹೋಗಿ ರಂಪ ಮಾಡಿ, ಮತ್ತೊಮ್ಮೆ ಊರಿನವರನ್ನೆಲ್ಲ ನ್ಯಾಯಕ್ಕೆ ಸೇರಿಸಿ ಹೇಳಿದನು. "ಬೇಕಾರೆ ಮನೆ ನೀವೇ ಮಡಿಕೊಳ್ಳಿ, ನನಗೆ ನಮ್ಮವ್ವ, ನಮ್ಮಪ್ಪನ ಗೋರಿ ಇರೋ ಹೊಲ ಮಾತ್ರ ಕೊಡ್ಬುಡಿ." 

ಊರಿನ ಹಿರೀಕರು ಅನ್ನಿಸಿಕೊಂಡ ಮನೆಹಾಳರು ಆತ ಚೂರಿ ಹಿಡಿದುಕೊಂಡು ಓಡಾಡಿದ್ದನ್ನು ಕೇಳಿಪಟ್ಟಿದ್ದರಿಂದ 'ಮಡಿಕೋ ಹೋಗು' ಅಂದರು. ಜೊತೆಗೊಂದಿಷ್ಟು ಕಾಳುಕಡ್ಡಿ, ಒಂದು ಜೊತೆ ಬಡಕಲೆತ್ತು, ಚೂರುಪಾರು ದುಡ್ಡನ್ನೂ ಕೊಡಿಸಿದ್ದರು. ಬುಂಡೆದಾಸನ ಅಣ್ಣಂದಿರು ತಂತಮ್ಮ ಹೆಂಡತಿಯರ ಮುಖ ನೋಡಿ ತಲೆತಗ್ಗಿಸಿ ನಿಂತರು. ಬುಂಡೆದಾಸ ಒಬ್ಬನೇ ಕಾಡಿಗೆ ಹೋಗಿ ಮರ ಕಡಿದು ತಂದು, ತಾನೇ ಮಣ್ಣು ಮಿದ್ದಿಸಿ ಊರಾಚೆಗಿನ ಹೊಲದಲ್ಲಿರುವ ತನ್ನ ಹೆತ್ತವರ ಗೋರಿಯ ಪಕ್ಕದಲ್ಲೇ ಪುಟ್ಟದೊಂದು ಗುಡಿಸಲು, ಎತ್ತುಗಳನ್ನು ಕಟ್ಟಲು ಒಪ್ಪಾರ್ಲು ಕಟ್ಟಿಕೊಂಡ. ಹೊಲ ಫಲವತ್ತಾಗಿತ್ತು. ಮಳೆಯೂ ಆಗಿತ್ತು. ಉತ್ತು, ಹಸನು ಮಾಡಿ ಹೇಗೋ ರಾಗಿ ಬಿತ್ತಿದ. ಬುಂಡೆದಾಸನಿಗೆ ನೆಟ್ಟಗೆ ಕೂರಿಗೆ ಹಿಡಿಯುದನ್ನು ಹೊರತು ಪಡಿಸಿ ಉಳುಮೆ ಮಾಡುವುದು, ಅಲುಬೆ ಹೊಡೆಯುವುದು, ಕುಂಟೆ ಹೊಡೆಯುವುದು, ಅರಗುವುದು, ಕುಯ್ಲು ಕಟ್ಟಣೆ ಮಾಡಿ ಮೆದೆ ಬಿಡುವುದು, ಕಳ ಕೆತ್ತಿ, ತಾರಿಸಿ ಅರಿ ಹಾಸುವುದು, ಗುಂಡು ಹೊಡೆಯುವುದು, ಉದ್ದಿಗೆ ಮಣೆ ಮೇಲೆ ನಿಂತು ರಾಗಿ ತೂರುವುದು, ರಾಶಿಗೆ ಪೂಜೆ ಮಾಡಿ 'ಓಲ್ಗಾ ವಾಸುದೇವರಿಗೆ… ಹುಲಿದೇವರಿಗೆ ಓಲ್ಗೋ…" ಎಂದು ಹೇಳಿ ಬಂದವರ ಸೆರಗಿಗೆ ಒಂದಿಷ್ಟು ಧರ್ಮದ ರಾಗಿ ಹಾಕಿ, ಸಂಜೆ ಕೋಳಿ ಕುಯ್ದು ಕಳದ ಮುನಿ ಮಾಡಿ ಒಂದಿಷ್ಟು ಜನರಿಗೆ ಬಾಡೂಟ ಹಾಕಿ ರಾಶೀನ ಮನೆಗೆ ಸಾಗಿಸುವವರೆಗೆ ಎಲ್ಲವೂ ಗೊತ್ತಿತ್ತು; ವಂಶಪಾರಂಪರ್ಯವಾಗಿ ಬಂದ ಕಸುಬು, ಸಂಸ್ಕೃತಿ. 

ಬುಂಡೆದಾಸ ಆ ಹೊಲವನ್ನು ಉತ್ತು, ಬಿತ್ತು ಹದ ಮಾಡುವಾಗ ನಾವೆಲ್ಲಾ ಚಿಕ್ಕ ಹುಡುಗರು. ಆತ ನಮಗೆಲ್ಲ ಅಚ್ಚರಿಯಾಗಿ ಕಾಣುತ್ತಿದ್ದ. ಊರವರ ಗೇಲಿ, ಕಿಚಾಯಿಸುವಿಕೆಗೆ ಹೆಸರಾಗಿದ್ದ ಬುಂಡೆದಾಸ ಯಾರೊಂದಿಗೂ ಹೆಚ್ಚು ಮಾತಾಡುತ್ತಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಅನ್ನುವಂತಿದ್ದ; ಆತನ ಜಗತ್ತು ತನ್ನ ಹೊಲ, ಬಡಕಲೆತ್ತುಗಳು, ಪುಟಾಣಿ ಮರಿ ಭೈರನ ಸುತ್ತ ಮಾತ್ರ. ಯಾರಾದರು ಮಾತಾಡಿಸಿದರೆ ಎಷ್ಟು ಬೇಕೋ ಅಷ್ಟು ಮಾತಾಡುತ್ತಿದ್ದ; ಅವರು ಮಾತಾಡಿಸುವಾಗಲೂ ಎತ್ತುಗಳಿಗೆ ಹುಲ್ಲು ಹಾಕುವುದೋ, ನೀರು ಕುಡಿಸುವುದೋ ಮಾಡುತ್ತಿರುತ್ತಿದ್ದ. ಇಲ್ಲವೇ ಅಚ್ಚೆ ಕೆತ್ತುತ್ತಲೋ, ಮಂಕರಿ, ಪುಟ್ಟಿ, ತಟ್ಟಿ, ಕುಕ್ಕೆ, ಮೋದು, ಚಂದ್ರಿಕೆ, ಏಣಿ ಇತ್ಯಾದಿಗಳನ್ನು ತಯಾರಿಸುತ್ತಲೋ ಕೂತಿರುತ್ತಿದ್ದ. ಎಷ್ಟೋ ಸಲ ಹಾಗೆ ಮಾತಾಡಿಸುತ್ತಿದ್ದವರೇ ಅವನ್ನು ಕೊಂಡುಕೊಳ್ಳುತ್ತಿದ್ದದ್ದೂ ಉಂಟು. ಉಳಿದಂತೆ ವಾರದ ಸಂತೆಗೆ ಹೋಗಿ ಮಾರುತ್ತಿದ್ದ. 

ಹಾಗಂತ ಬುಂಡೆದಾಸ ಅಷ್ಟೇನೂ ಪೆಕರನಾಗಿಯೇನೂ ಇರಲಿಲ್ಲ. ಊರಿನವರ ಉಡಾಫೆಯ ಮಾತು, ಆಡಿಕೊಳ್ಳುವ ಗುಣಕ್ಕೆ ಉತ್ತರವಾಗಿ ಬಾಯಿಗೆ ಬೀಗ ಹಾಕಿಕೊಂಡಿದ್ದ. ಅವನ ಮನಸು ಯಾವುದೋ ಚಿಂತೆಯಲ್ಲಿ ಮುಳುಗಿತ್ತು; ಅವನ ಒರಟು ಮೈ, ಮೃದು ಮನಸು ಒಂದೆಡೆ ಸಂಧಿಸಿದ್ದವು. ಒಂದು ತುಂಬುತೋಳಿನ ಬನೀನು, ಒಂದು ವಲ್ಲಿಬಟ್ಟೆ, ಸುಕ್ಕು ಹಿಡಿದಿದ್ದ ಪಟಾಪಟಿ ಚೆಡ್ಡಿ ಅವನ ಉಡುಪಾಗಿತ್ತು. ಪ್ರತಿದಿನ ಬೆಳಗ್ಗೆ ತನ್ನ ಹೆತ್ತವರ ಗೋರಿಗಳಿಗೆ ಗಣಗಲ ಹೂವು ಇಡುತ್ತಿದ್ದ; ಆಗಾಗ ಆ ಗೋರಿಗಳ ಗೂಡುಗಳಲ್ಲಿ ಮಣ್ಣಿನ ಸೊಡಿಲು ಹಚ್ಚುತ್ತಿದ್ದ; ಅದಕ್ಕೆ ಬೇಕಾದ ಕೈಯೆಣ್ಣೆಯನ್ನು ತಾನೇ ಸಿದ್ಧಪಡಿಸಿಕೊಂಡಿದ್ದ. ಆ ಕಲೆಯನ್ನು ತನ್ನವ್ವನಿಂದ ಕಲಿತಿದ್ದ ಅನಿಸುತ್ತದೆ; ಆತನ ತಾಯಿ ಹರಳು ಬೇಯಿಸಿ ತೆಗೆಯುತ್ತಿದ್ದ ಕೈಯೆಣ್ಣೆ ತುಂಬಾ ಚೆನ್ನಾಗಿರುತ್ತಿತ್ತು ಅಂತ ಆಗಿನ ಕಾಲಕ್ಕೆ ಉಷ್ಣ, ಉರಿ ಅಂತ ನರಳುತ್ತಿದ್ದವರ ಬಾಯಲ್ಲಿ ಕೇಳಿಪಟ್ಟಿದ್ದೆ. 

ಕಾಲವುರುಳಿ ನಾವೆಲ್ಲಾ ಹಳ್ಳಿ ಬಿಟ್ಟು ಪಟ್ಟಣ ಹೊಕ್ಕಿ ನಮ್ಮ ನಮ್ಮ ಬದುಕಿನ ಬಾಗಿಲುಗಳನ್ನು ತೆರೆದುಕೊಳ್ಳುವ ತುಡಿತದಲ್ಲಿ ಅಲ್ಲಿ ಇಲ್ಲಿ ಕೆಲಸ ಹುಡುಕುತ್ತ ಬಸವಳಿಯುವಷ್ಟರಲ್ಲಿ ಬುಂಡೆದಾಸನ ಹೊಲ ಒಳ್ಳೆಯ ಫಸಲನ್ನೇ ಕೊಡಲಾರಂಭಿಸಿತ್ತು. ಇದರೊಂದಿಗೆ ಬುಂಡೆದಾಸನ ಬದುಕು ಸ್ವಂತ ಕಾಲಿನ ಮೇಲೆ ಮತ್ತಷ್ಟು ಸ್ಥಿರವಾಗಿ ನಿಲ್ಲಲು ಅನುಕೂಲವಾಯಿತು. ಬೆಳೆದ ರಾಗಿರಪಟೆ, ಕಾಳುಕಡ್ಡಿಯಲ್ಲಿ ತನಗೆ ಬೇಕಾದಷ್ಟು ಇಟ್ಟುಕೊಂಡು ಉಳಿದದ್ದನ್ನು ಮಾರುತ್ತಿದ್ದ. ಬಂದ ದುಡ್ಡಿನಲ್ಲಿ ಮನೆಗೆ ಬೇಕಾದ ಸಣ್ಣ ಪುಟ್ಟ ಸಾಮಾನುಗಳನ್ನು ಕೊಂಡುಕೊಳ್ಳುತ್ತಿದ್ದ. ಉಗಾದಿ ಹಬ್ಬಕ್ಕೊಂದು ಅಂಗಿ, ಚೆಡ್ಡಿ; ಒಂದು ಮುದ್ದೆ ಇಟ್ಟು, ಒಂದು ಮಿಳ್ಳೆ ಸಾರಿನಲ್ಲಿ ಅವನ ಹೊಟ್ಟೆ ತುಂಬುತ್ತಿತ್ತು. ತನ್ನ ಪುಟ್ಟ ಮನೆಯನ್ನು ಚೆನ್ನಾಗಿ ಇಟ್ಟುಕೊಂಡಿದ್ದ-ಆಳೆತ್ತರ ಮಣ್ಣಿನ ವಾಡೆ, ಮಡಕೆಗಳು, ಒಂದೆರಡು ತಣಿಗೆ, ಒಂದೆರಡು ಲೋಟ, ಟ್ರಂಕು, ಅದಕ್ಕೊಂದು ಬೀಗ. ಆಗಾಗ ಕೈ ಬಿಸಿ ಮಾಡುತ್ತಿದ್ದ ಮಂಕರಿ, ಪುಟ್ಟಿಗಳ ಕಾಸು ಅಪರೂಪಕ್ಕೊಮ್ಮೆ ಭಟ್ಟಿಸರಾಪಿನ ಬದಲು ಪೇಟೆಯಿಂದ ಬಾಟಲು ತಂದು ಕುಡಿಯುವಷ್ಟು ಆತನನ್ನು ಚೆನ್ನಾಗಿಟ್ಟಿದ್ದವು. ಆದರೂ ಬುಂಡೆದಾಸ ಯಾವತ್ತಿಗೂ ದುಡ್ಡು, ಸುಖದ ಬೆನ್ನತ್ತಿದವನಲ್ಲ. ಎಷ್ಟೋ ಸಲ ಇವನಿಂದ ಮಂಕರಿ, ಪುಟ್ಟಿ, ಏಣಿ ಮಾಡಿಸಿಕೊಂಡ ಎಷ್ಟೋ ಜನ ಹಣ ಕೊಡದಿದ್ದದ್ದೂ ಉಂಟು. ಹಾಗೆಯೇ ಇವನ ಹತ್ತಿರ ಕಷ್ಟಕ್ಕೆ ಅಂತ ಅಷ್ಟೋ ಇಷ್ಟೋ ಕಾಸು ಪಡೆದ ಕೆಲವು ನೀಚರು ವಾಪಾಸು ಕೊಡದೆ ಯಾಮಾರಿಸಿರುವುದೂ ಉಂಟು. ಅದಕ್ಕೇ ಬುಂಡೆದಾಸ "ಗೇದುಣ್ಣೋರ್ಗೆ ಉಳ್ಗಾಲ ಇಲ್ಲ… ಅಂತಾದ್ರಲ್ಲಿ… ಕೇದುಣ್ಣೋರ್ಗುಳ್ಗಾಲ ಉಂಟೆ?" ಅಂದು ನಕ್ಕು ಸುಮ್ಮನಾಗುತ್ತಿದ್ದ. 

ಬುಂಡೆದಾಸನಿಗೆ ನಲವತ್ತು ತುಂಬಿತು. ಕಡೆಗೂ ಹೆಣ್ಣು ಕೊಡಲು ಯಾರೂ ಮುಂದೆ ಬರಲೇ ಇಲ್ಲ. ಅವನ ಫಲವತ್ತಾದ ಹೊಲ,  ಮಂಕರಿ, ಪುಟ್ಟಿ ಸಂಪಾದನೆ ನೋಡಿ ಕೆಲವರಿಗೆ ಹೆಣ್ಣು ಕೊಡುವ ಮನಸಾದರೂ ಅಂದರೆ ಗಂಡನನ್ನು ಬಿಟ್ಟ ತಮ್ಮ ಮಗಳನ್ನೋ, ತಂಗಿಯನ್ನೋ ಕೂಡಿಕೆ ಮಾಡುವ ಆಲೋಚನೆ ಬಂದರೂ ಬುಂಡೆದಾಸ ಯಾರೋ ಲಂಬಾಣಿ ಜಾತಿಯ ವಿಧವೆಯನ್ನು ಮಡಿಕೊಂಡಿದ್ದಾನೆಂದೂ, ಆಗಾಗ ಆಕೆಯೊಂದಿಗೆ ಬೆರೆಯುತ್ತಾನೆಂದೂ, ಆಕೆಗೆ ಕೊರಳಿಗೆ ಹಾಕಿಕೊಳ್ಳಲು ನಾಲ್ಕು ಚೈನ್ ಪೀಸ್ ಮಾಡಿಸಿಕೊಟ್ಟಿದ್ದಾನೆಂದೂ ಅವರಿವರು ಗಾಳಿಯಲ್ಲಿ ತೂರಿಬಿಟ್ಟಿದ್ದ ಗಾಸಿಪ್ ದೆಸೆಯಿಂದ ಅದೂ ಮುರಿದುಬಿತ್ತು. ಆನಂತರ ಬುಂಡೆದಾಸ ಈ ಬೆರಕೆ ಜಗತ್ತಿನಿಂದ ದೂರವುಳಿದು ತನ್ನೊಳಗೆ ಒಂದು ಜಗತ್ತನ್ನು ಕಂಡುಕೊಳ್ಳಲಾರಂಭಿಸಿದ. ಹೊಲದ ತುಂಬೆಲ್ಲ ಪೈರು ನಡುವಿನೆತ್ತರಕ್ಕೆ ಬೆಳೆದು ಕಾಚಕ್ಕಿಗಳು ಹಾಲ್ದುಂಬಿ ತೊನೆದಾಡಲಾರಂಭಿಸಿದವು. ಗುಬ್ಬಚ್ಚಿ, ಕಾಡಕ್ಕಿ, ಸ್ವಾರಕ್ಕಿ, ಗಿಳಿಗಳು ಇವನ ಮನೆಯ ಸುತ್ತ ಹಾರಾಡತೊಡಗಿದವು. ಮೊಲ, ಕಾಡುಬೆಕ್ಕುಗಳು ಅಂಗಳದಲ್ಲಿ ಸುಳಿದು ಸರ್ರನೆ ಮಾಯವಾಗತೊಡಗಿದವು. ಭೈರ ಅವನ್ನು ಕಾಡಿನವರೆಗೂ ಅಟ್ಟಿಸಿಕೊಂಡು ಹೋಗಿ ಸುಸ್ತಾಗಿ ವಾಪಾಸಾಗುತ್ತಿದ್ದ. ಆ ಪ್ರಾಣಿಪಕ್ಷಿಗಳಿಗೆ ಬುಂಡೆದಾಸನ ಬಗ್ಗೆ ಯಾವುದೇ ಭಯ ಇದ್ದಂತಿರಲಿಲ್ಲ. ಕೆಲವೊಮ್ಮ ಬುಂಡೆದಾಸ ಅಡುಗೆಗೆ ಸೌದೆ ತರಲೆಂದು ಸಮೀಪದಲ್ಲೇ ಇದ್ದ ಕಾಡಿಗೆ ಹೋದಾಗ ಅಲ್ಲಿ ಹರಿಯುತ್ತಿದ್ದ ಪುಟ್ಟತೊರೆಯಲ್ಲಿ ನಿರುಮ್ಮಳವಾಗಿ ಈಜುತ್ತಿದ್ದ ಮೀನುಗಳನ್ನು ನೋಡುತ್ತಾ ಕೂತುಬಿಡುತ್ತಿದ್ದ. ಇದು ಕಕ್ಕೆದುಂಬಿ, ಹೊನ್ನೆದುಂಬಿ, ಚಿಟ್ಟೆ ಹಿಡಿಯಲು, ಕಳಲೆ ಮುರಿಯಲು, ಸೀಗೆಸೊಪ್ಪು ತರಲು ಕಾಡಿಗೆ ಬರುತ್ತಿದ್ದ ಊರಿನ ಮಕ್ಕಳಲ್ಲಿ ಕುತೂಹಲ ಕೆರಳಿಸುತ್ತಿತ್ತು. ಮಕ್ಕಳು ಬುಂಡೆದಾಸನ ಸುತ್ತ ಕೂತು ಆತ ದಮ್ಮಡಿ ಹಿಡಿದು ಹಾಡುವುದನ್ನು ಕೇಳುತ್ತಿದ್ದವು. ಬುಂಡೆದಾಸ ಕಾಡನ್ನು, ಅದರಲ್ಲಿ ವಾಸಿಸುವ ಪ್ರಾಣಿಪಕ್ಷಿಗಳನ್ನು ಚೆನ್ನಾಗಿ ಅರಿತಿರುವನೆಂದೂ, ಮೀನುಗಳೊಂದಿಗೆ ಮಾತಾಡುತ್ತಾನೆಂದೂ ಅರಿತಿದ್ದರು. ಆತ ಮೀನುಗಳ ಬಣ್ಣಗಳ ಬಗ್ಗೆ, ಹೂವುಗಳ ಬಣ್ಣಗಳ ಬಗ್ಗೆ, ಗೋಸುಂಬೆಯ ಬಣ್ಣಗಳ ಬಗ್ಗೆ, ಚಿಟ್ಟೆಗಳ ಬಣ್ಣಗಳ ಬಗ್ಗೆ ವಿವರಿಸುವಾಗ ಮಕ್ಕಳು ಯಾವನದೋ ಇತಿಹಾಸ, ಯಾರೋ ಬರೆದ ಕತೆ, ಕವನಗಳ ಬಗ್ಗೆ ಕೊರೆಯುತ್ತ ಬೋರು ಹೊಡೆಸುವ ತಮ್ಮ ಸ್ಕೂಲು ಮೇಷ್ಟ್ರಿಗಿಂತ ಬುಂಡೆದಾಸನೇ ವಾಸಿ ಅಂದುಕೊಳ್ಳುತ್ತಿದ್ದರು. ಆತ ಹಕ್ಕಿಗಳ ಚಿಲಿಪಿಲಿ, ನದಿಯ ಜುಳುಜುಳು, ಮಳೆಯ ಟಪಟಪ, ಹಾವಿನ ಬುಸ್, ಜೇನ್ನೊಣಗಳ ಜೊಂಯ್, ಆನೆಯ ಕೋಂವ್ ಇತ್ಯಾದಿಗಳ ಬಗ್ಗೆ ಹೇಳಿದಾಗ ಮಕ್ಕಳು ಇವನ ಅಭಿಮಾನಿಗಳಾದದರು. ಜೊತೆಗೆ ಆತ ದಮ್ಮಡಿ ಬಾರಿಸುತ್ತಾ ಮೈಮರೆತು ಹಾಡುತ್ತಿದ್ದದ್ದು ಅವರ ಕೌತುಕಕ್ಕೆ ಮತ್ತಷ್ಟು ಇಂಬು ನೀಡುತ್ತಿತ್ತು.

ಹೀಗೆ ಅಷ್ಟೇನೂ ಲೋಭದಿಂದ ಕೂಡಿರದ ಬುಂಡೆದಾಸನ ಬದುಕು ಕೂಡ ದಾರಿ ತಪ್ಪುವ ಅವಕಾಶವಿತ್ತು. ಅದರಿಂದ ಆತ ಪಾರಾಗಿದ್ದೇ ವಿಶೇಷ. ಆತನಿಗೆ ಅಪಾರ ದೈವಿಕಶಕ್ತಿಯಿದೆಯೆಂದೂ, ಪಾಳುಗುಡಿಯಲ್ಲಿರುವ ಶಿವಲಿಂಗದೊಡನೆ ಮಾತಾಡುತ್ತಾನೆಂದೂ, ಆತ ತಯಾರಿಸುವ ತಟ್ಟಿ, ಮೋದು, ಚಂದ್ರಿಕೆಗಳಿಗೆ ಅಪಾರ ಶಕ್ತಿಯಿರುವುದಾಗಿಯೂ ವದಂತಿ ಹುಟ್ಟಿಕೊಂಡಿತು; ಏಕೆಂದರೆ ಆ ತಟ್ಟಿ, ಮೋದು, ಚಂದ್ರಿಕೆ ಬಳಸಿ ಯಾವುದೇ ಸುಣ್ಣಕಟ್ಟು, ಸಪ್ಪೆ, ಇತ್ಯಾದಿ ರೋಗಗಳಿಲ್ಲದ ಒಳ್ಳೆಯ ಆರೋಗ್ಯವಂತ, ಹೆಚ್ಚು ತೂಕದ ಗೂಡು ಬೆಳೆದು ಒಳ್ಳೆಯ ಬೆಲೆಗೆ ಮಾರಿದವರಿದ್ದರು. ಇಂಥ ಕತೆಗಳಿಗೆ ಮಾರು ಹೋದ ಟಿಪಿಕಲ್ ಭಾರತೀಯ ಮನಸ್ಥಿತಿಯ ಮಂದಿ ಬುಂಡೆದಾಸನಲ್ಲಿಗೆ ಗುಂಪುಗುಂಪಾಗಿ ಬಂದು ತಟ್ಟಿ, ಮೋದು, ಚಂದ್ರಿಕೆ ಮಾಡಿಕೊಡು ಮಾರಾಯಾ ಅನ್ನುತ್ತಿದ್ದರು. ಅದೆಲ್ಲ ಕಟ್ಟುಕತೆ ಅಂತ ಅವರಿಗೆಲ್ಲ ತಿಳಿಸಿ ನಾಲ್ಕೈದು ದಿನಗಳ ಮಟ್ಟಿಗೆ ಯಾರ ಕಣ್ಣಿಗೂ ಬೀಳದಂತೆ ಬುಂಡೆದಾಸ ತನ್ನ ಎತ್ತು, ನಾಯಿಗಳೊಂದಿಗೆ ಮುತ್ತತ್ತಿ ಸಮೀಪದ ಭೀಮೇಶ್ವರಿಯಲ್ಲಿ ಠಿಕಾಣಿ ಹೂಡಿದ್ದ. 

ನನಗೆ ಮದುವೆಯಾಗುವ ಹೊತ್ತಿಗೆ ಬುಂಡೆದಾಸ ಮುದುಕನಾಗಿದ್ದ. ಮುದಿಯಾದ ಎತ್ತುಗಳನ್ನು ಮರಳವಾಡಿ ಸಂತೆಯಲ್ಲಿ ಮಾರಾಟ ಮಾಡಿ ಆ ದುಡ್ಡಿಗೆ ಒಂದು ಹಾಲು ಕರೆಯುವ ಕೆಂದು ಬಣ್ಣದ ಹಸು ತಂದಿಟ್ಟುಕೊಂಡಿದ್ದ. ಹೊಲವನ್ನು ಟ್ರ್ಯಾಕ್ಟರಿನಿಂದ ಉಳಿಸುತ್ತಿದ್ದ. ಪೊರೆ ಕವಿದಿದ್ದರಿಂದ ಒಂದು ಕಣ್ಣಿಗೆ ಎಂಥದೋ ಹಸಿರು ಬಟ್ಟೆಯನ್ನು ಹಾಕಿಸಿಕೊಂಡು ಬಂದಿದ್ದ ಬುಂಡೆದಾಸನ ಒಂಟಿತನದ ಬದುಕು, ಮೇಲುನೋಟಕ್ಕೆ ಬೈಗುಳದಂತೆ ಕಂಡರೂ ಆಳದಲ್ಲಿ ಅಪಾರವಾದ ಅನುಭವ, ಬದುಕಿನ ನಿಗೂಢತೆಯನ್ನು ಅಡಗಿಸಿಕೊಂಡಂತಿದ್ದ ಆತನ ಮಿತಮಾತುಗಳಿಗೆ ಜನ ಕಿವಿಗೊಡತೊಡಗಿದರು. ಆತನೆದುರು ತಮ್ಮ ಆಂತರಿಕ ತುಮುಲ, ಬದುಕು ತಂದೊಡ್ಡುವ ಪ್ರಶ್ನೆಗಳನ್ನು, ಸವಾಲುಗಳನ್ನು ಬಿಚ್ಚಿಕೊಳ್ಳಲು ತುಡಿಯುತ್ತಿದ್ದದ್ದು ಆತನಲ್ಲಿ ಎಂತಹ ಘಾಸಿಗೊಂಡ ಮನಸನ್ನೂ, ಸೋತು ಹೋದ ಮನುಷ್ಯನನ್ನೂ ಸಮಾಧಾನಪಡಿಸಬಲ್ಲ ತಾಕತ್ತಿದೆಯೆಂಬ ಒಂದೇ ಒಂದು ಆಶಾವಾದ ಭಾವನೆಯಿಂದ. ಇದಕ್ಕೆ ಪೂರಕವಾಗಿ ಬುಂಡೆದಾಸ ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಿದ್ದ. ಸಮಾಜದಿಂದ ಹೊರಗುಳಿದಿದ್ದ ಈ ಅಚ್ಚರಿಯ ಜೀವವನ್ನು ಸ್ವತಃ ಸಮಾಜವೇ ಹುಡುಕಿಕೊಂಡು ಬರಲಾರಂಭಿಸಿತು. ಎಲ್ಲರ ನೋವಿಗೂ ಸ್ಪಂದಿಸುವ ತಾಯ್ಗರುಳು ಆತನಲ್ಲಿತ್ತು. ಎಲ್ಲರದಂತಿರದಿದ್ದ ಆತನ ಬದುಕು ದಮ್ಮಡಿ ಬಡಿಯುತ್ತಾ ತಾನು ಹಾಡುತ್ತಿದ್ದ ಹಾಡಿನಂತೆ, ಅದರೊಳಗಿನ ಅಲೌಕಿಕ ತತ್ವದಂತೆ. ನನಗೆ ದುಃಖವಾದಾಗಲೆಲ್ಲ ಕದ್ದು ಮುಚ್ಚಿ ಆತನ ದಮ್ಮಡಿಯನ್ನೊಮ್ಮೆ ಮೃದುವಾಗಿ ಬೆರಳುಗಳಿಂದ ಸವರಲು, ಹಿತವಾಗಿ ಬಡಿಯಲು, ಮೆಲ್ಲಗೆ ಹಾಡಲು ಯತ್ನಿಸುತ್ತಿದ್ದೆ. ನಾನು ಹಾಗೆಲ್ಲಾ ಮಾಡುವುದನ್ನು ಬುಂಡೆದಾಸ ಎಲ್ಲಿ ನೋಡಿಬಿಟ್ಟಾನೋ ಅಂತ ಭಯಗೊಳ್ಳುತ್ತಿದ್ದೆ; ಮಾನವರಿಂದ ದೂರ ಉಳಿದು ಕಾಡಿನ, ಅಲ್ಲಿಯ ಪ್ರಾಣಿ, ಪಕ್ಷಿ, ಗಿಡ, ಮರ, ನದಿ, ಬೆಟ್ಟ, ಹೂವುಗಳೊಂದಿಗೆ ನೆಮ್ಮದಿಯಿಂದಿರುತ್ತಿದ್ದ ಬುಂಡೆದಾಸ ಇಂದಿಗೂ ನನ್ನ ಪಾಲಿಗೆ ವಿಸ್ಮಯದ ವಿಶ್ವ. ಬುಂಡೆದಾಸ ಆನೆ ತುಳಿದು ಸತ್ತನು ಎಂದು ಅವನ ಅಣ್ಣಂದಿರು ಹೇಳುತ್ತಿದ್ದಾರೆ. ಪ್ರಕೃತಿಯನ್ನೇ ತಾಯಿಯಂತೆ ಪ್ರೀತಿಸುತ್ತಿದ್ದ ಅಥವಾ ಪ್ರಕೃತಿಯ ಧಾರಾಳತೆ, ಔದಾರ್ಯತೆ, ಮಮತೆ, ಕರುಣೆ ಇತ್ಯಾದಿಗಳನ್ನೇ ತನ್ನೊಳಗೆ ಅಡಗಿಸಿಕೊಂಡಿದ್ದ ಆತನನ್ನು ಆನೆ ತುಳಿಯಲಿಕ್ಕೆ ಸಾಧ್ಯವೇ ಇಲ್ಲ. ಹೇಗೋ ಸತ್ತಿದ್ದಾನಷ್ಟೇ

-ಇಲ್ಲಿಗೆ ನನ್ನ ಸ್ವಗತ ಮುಗಿಯುತ್ತದೆ.

ಧಗಧಗನೆ ಬೆಂಕಿ ಉರಿಯುತ್ತಿದೆ. ಹೊಗೆ ಆವರಿಸುತ್ತಿದೆ ಬಯಲನ್ನು, ಒಳಗನ್ನು, ಭುವನವನ್ನು, ಗಗನವನ್ನು. ಬುಂಡೆದಾಸ ಇಡೀ ಪ್ರಕೃತಿಯಲ್ಲಿ ಲೀನ. 

-ಹೃದಯಶಿವ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Rukmini Nagannavar
Rukmini Nagannavar
9 years ago

Bundedasanadu nijakkoo acchari moodisuva vyaktitva…
Odidameloo manasinalli ulidhu kaduva patra..

Sogasada baraha.. 🙂

DhanyavadagaLu.

Akhilesh Chipli
Akhilesh Chipli
9 years ago

ಶ್ರಮಜೀವಿ, ಸಮಾಜಜೀವಿ
ಬುಂಡೆದಾಸರಿಗೊಂದು ಸಲಾಂ!!
ಧನ್ಯವಾದಗಳು ಹೃದಯಶಿವ.

amardeep.p.s.
amardeep.p.s.
9 years ago

ಚೆನ್ನಾಗಿದೆ ಕವಿಗಳೇ….

ಜೆ.ವಿ.ಕಾರ್ಲೊ
ಜೆ.ವಿ.ಕಾರ್ಲೊ
9 years ago

ಸೊಗಸಾಗಿದೆ.

Ramakrishna
Ramakrishna
9 years ago

ಇಂಥವರೂ ಇದ್ದರು ಎಂದರೆ ನಂಬಲಾಗದ ಕಾಲದಲ್ಲಿದ್ದೇವೆ. ಅಪರೂಪದ ವ್ಯಕ್ತಿಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ. ಬುಂಡೆದಾಸನಿಗೆ ಜತೆ ಈಗಲಾದರೂ ಸಿಕ್ಕಿರಲಿ..

 

pavithra
pavithra
9 years ago

ನಿಜವಾಗಿಯೂ ಹೃದಯ ಸ್ಪರ್ಶಿ ಬುಂಡೆದಾಸನ ಬದುಕಿನ ಕತೆ

Leon D souza
Leon D souza
8 years ago

Bunde dasa's life was like a painting on a canvas , beautifully weaved by Hridya Shiva . excellent job dear. expecting  a break through novel soon which will bring the fame to Karnataka

Jai Karnataka Jai Kannada

ಪ್ರವೀಣಕುಮಾರ ಪಿ ಕೆ..
ಪ್ರವೀಣಕುಮಾರ ಪಿ ಕೆ..
7 years ago

ಯಾಕೋ ಕಾರಂತರು ಚೋಮನದುಡಿ ಕಾದಂಬರಿ ನೆನಪಾಗುತ್ತದೆ ಸರ್
ಅಲ್ಲಿ ಚೋಮನ ಸಂಸಾರಿ ಇಲ್ಲಿ
ಬುಂಡೆ ದಾಸ ಇಬ್ಬರು ಶ್ರಮಜೀವಿಗಳೇ ಎಂಬುದು ಸಾಬೀತು ಆಗುತ್ತೆ ಸರ್ ಬಹಳ ಇಷ್ಟವಾಯ್ತು

8
0
Would love your thoughts, please comment.x
()
x