ಆರು ಮಿಲಿಯನ್. ಅಂದರೆ ಅರವತ್ತು ಲಕ್ಷ! ಅರವತ್ತು ಲಕ್ಷದಲ್ಲಿ ಎಷ್ಟು ಸೊನ್ನೆ ಎಂದು ಥಟ್ ಅಂತ ಕೇಳಿದರೆ ಒಂದು ಕ್ಷಣ ನೀವೂ ತಡವರಿಸುತ್ತೀರ. ಈ ಸಂಖ್ಯೆಯ ಅಗಾಧತೆ ಗೊತ್ತಾಗಬೇಕಾದರೆ ಅರವತ್ತು ಲಕ್ಷ ಜನರನ್ನು ಊಹಿಸಿಕೊಳ್ಳಿ. ಅದು ಎರಡನೇ ವಿಶ್ವಮಹಾಯುದ್ಧದಲ್ಲಿ ಬರ್ಬರವಾಗಿ ಕೊಲ್ಲಲ್ಪಟ್ಟ ಯಹೂದಿಗಳ ಸಂಖ್ಯೆ! ಒಂದು ಅಣುಬಾಂಬು ಹಾಕಿ ಅಷ್ಟೂ ಜನರನ್ನು ಕೊಂದಿದ್ದರೆ ಅದನ್ನು ಯುದ್ಧಕಾಲದ ವಿವೇಚನಾರಹಿತ ನಿರ್ಧಾರ ಅನ್ಕೊಬೋದಿತ್ತು. ಆದರೆ ವ್ಯವಸ್ಥಿತವಾಗಿ ಯಹೂದಿಗಳ ಮನೆ, ಆಸ್ತಿ ಎಲ್ಲವನ್ನೂ ವಶಪಡಿಸಿಕೊಂಡು, ಅವರನ್ನು ಸ್ಥಳಾಂತರಿಸಿ, ಸರಿಯಾಗಿ ಊಟ ಕೊಡದೇ ದುಡಿಸಿಕೊಂಡು, ಮೈಮೇಲಿರುವ ಒಡವೆಗಳೂ, ಶೂಗಳನ್ನೂ ಬಿಡದೇ ಎಲ್ಲವನ್ನೂ ಕಸಿದುಕೊಂಡು ಜಿರಲೆಗಳಂತೆ ಹೊಸಕಿ ಹಾಕಿದ ಆ ತಣ್ಣನೆಯ ಕ್ರೌರ್ಯ, ಮನುಷ್ಯ ಇಷ್ಟು ಬರ್ಬರವಾಗಿ ನಡೆದುಕೊಳ್ಳಲು ಸಾಧ್ಯವೇ ಅಂತ ನೆನೆಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಉಂಟಾಗುತ್ತದೆ. ಈ ಘಟನೆ ಮನುಕುಲವನ್ನು ಎಷ್ಟು ತಲ್ಲಣಗೊಳಿಸಿದೆ ಅಂದರೆ ಇಷ್ಟು ವರ್ಷಗಳಾದರೂ ಚಿತ್ರಕರ್ಮಿಗಳಿಗೆ ಇದು ಪ್ರೇರಣೆಯಾಗಿಯೇ ಉಳಿದಿದೆ, ಬೇರೆ ಬೇರೆ ದೃಷ್ಟಿಕೋನಗಳಿಂದ ಆಯಾಮಗಳಿಂದ ಈ ವಿಷಯವನ್ನು ನೋಡುವ ಪ್ರಯತ್ನಗಳು ನಡೆದೇ ಇವೆ.
ಈ ಸಾಲಿನಲ್ಲಿ ತೀರಾ ಇತ್ತೀಚಿಗೆ ಬಂದ ಚಿತ್ರ “ದಿ ಬಾಯ್ ಇನ್ ದಿ ಸ್ಟ್ರೈಪ್ಡ್ ಪೈಜಾಮಾಸ್”. 2008ರಲ್ಲಿ ಬಂದ ಈ ಚಿತ್ರ ಐರಿಶ್ ಬರಹಗಾರ ಜಾನ್ ಬಾಯ್ಲ್ ಬರೆದ ಪುಸ್ತಕದ ಮೇಲೆ ಆಧರಿಸಿದ್ದು.
ರಾಲ್ಫ್ ಜರ್ಮನಿಯ ಸೈನ್ಯದಲ್ಲಿ ಕಮ್ಯಾಂಡರ್. ಹೆಂಡತಿ ಎಲ್ಸಾ, ಹನ್ನೆರಡು ವರ್ಷದ ಮಗಳು ಗ್ರೆಟೆಲ್, ಒಂಬತ್ತು ವರ್ಷದ ಮಗ ಬ್ರೂನೋ ಜೊತೆಗೆ ಬರ್ಲಿನ್ನಿನಲ್ಲಿ ವಾಸವಾಗಿರುತ್ತಾನೆ. ರಾಲ್ಫ್ ಗೆ ಕೆಲಸದಲ್ಲಿ ಬಡ್ತಿ ಸಿಕ್ಕು ದೂರದೊಂದು ಊರಿಗೆ ವರ್ಗಾವಣೆ ಆಗುತ್ತದೆ. ತನ್ನ ನೆಚ್ಚಿನ ಗೆಳೆಯರಿಂದಲೂ, ಅಜ್ಜ ಅಜ್ಜಿಯಿಂದಲೂ ದೂರವಾಗುವ ಬ್ರೂನೋ, ಹೊಸ ಊರಿನಲ್ಲಿ ತನ್ನ ವಯಸ್ಸಿನವರ ಸಾಂಗತ್ಯ ಸಿಗದೇ ಬೇಸರಗೊಳ್ಳುತ್ತಾನೆ. ಅಲ್ಲೇ ಸ್ವಲ್ಪ ದೂರದಲ್ಲಿ ಇರುವ “ಕ್ಯಾಂಪ್” ಅಲ್ಲಿ ಪಟ್ಟಾಪಟ್ಟಿ ಪೈಜಾಮದಂತಹ ಬಟ್ಟೆ ಹಾಕಿರುವ ಜನರನ್ನು ನೋಡುತ್ತಾನೆ. ಅವರು ಯಾರು ಅಂತ ಕೇಳಿದಾಗ ಆ ಖೈದಿಗಳು ಮನುಷ್ಯರೇ ಅಲ್ಲ, ಅವರು ಯಹೂದಿಗಳು ಅನ್ನುವ ಉತ್ತರ ಸಿಗುತ್ತದೆ. ವಾರಕ್ಕೊಮ್ಮೆ ಬರುವ ಮೇಷ್ಟ್ರು ಕೂಡ ಜರ್ಮನ್ ಪ್ರೊಪಗಾಂಡಾ ಹಾಗೂ ಯಹೂದಿಗಳನ್ನು ತೆಗಳುವ ಪಾಠಗಳನ್ನು ಹೇಳುವುದರಲ್ಲಿ ನಿರತನಾಗಿರುತ್ತಾನೆ.
ತಮ್ಮ ಮನೆಯಲ್ಲೇ ತರಕಾರಿ ಹೆಚ್ಚುವ ಪವೆಲ್ ಎಂಬ ಮೃದುಮನಸ್ಸಿನ ಯಹೂದಿ ಡಾಕ್ಟರ್ ಆಗಿದ್ದವನು ಅಂತ ತಿಳಿದ ಬ್ರೂನೋಗೆ ಮೇಷ್ಟ್ರು ಹೇಳಿರುವ ವಿಷಯಗಳ ಮೇಲೆ ನಂಬಿಕೆ ಬರೋದಿಲ್ಲ. ಅದೇ ವೇಳೆಯಲ್ಲಿ ಬ್ರೂನೋ ಕದ್ದುಮುಚ್ಚಿ ಒಂದು ಕಳ್ಳ ದಾರಿ ಪತ್ತೆ ಮಾಡಿ, ಆ “ಕ್ಯಾಂಪ್” ಹಿಂಭಾಗದ ಕಡೆಗೆ ಹೋಗುತ್ತಾನೆ. ಅಲ್ಲಿ ಬೇಲಿಯ ಹಿಂದೆ ಅವನಿಗೆ ಪಟ್ಟಾಪಟ್ಟಿ ಪೈಜಾಮ ಹಾಕಿರೋ ಶ್ಮುಲ್ ಅನ್ನೋ ತನ್ನ ವಯಸ್ಸಿನ ಯಹೂದಿ ಹುಡುಗನ ಪರಿಚಯ ಆಗುತ್ತೆ. ಶ್ಮುಲ್ ಅಂತೆಲ್ಲಾ ಹೆಸರಿರಲು ಸಾಧ್ಯವಾ ಅನ್ನುವ ಅಪರಿಚಿತತೆಯಿಂದ ಮಾತುಕತೆ ಶುರುಮಾಡುವ ಇವರು ನಂತರ ಗೆಳೆಯರಾಗುತ್ತಾರೆ. ಬೇಲಿಯ ಇಬ್ಬದಿಯಲ್ಲಿ ಕೂತು ಆಟ ಆಡುತ್ತಾರೆ, ಹಂಚಿಕೊಂಡು ತಿಂಡಿ ತಿನ್ನುತ್ತಾರೆ. ಸೈನಿಕರು ತಮಗೆ ತುಂಬಾ ತೊಂದರೆ ಕೊಡುತ್ತಾರೆ ಅಂತ ಶ್ಮುಲ್ ಹೇಳಿದಾಗ, ಬ್ರೂನೋ ತನ್ನಪ್ಪ ಆ ರೀತಿಯಲ್ಲ, ಬಹಳ ಒಳ್ಳೆಯವನು ಅಂತ ಹೇಳುತ್ತಾನೆ. ಆದರೂ ಖೈದಿಗಳನ್ನು ಎಷ್ಟು ಚನ್ನಾಗಿ ನೋಡಿಕೊಳ್ಳುತ್ತಿದ್ದೇವೆ ಅನ್ನುವ ತಂದೆಯ ಮಾತಿಗೂ, ತಾವು ತುಂಬಾ ಕಷ್ಟ ಪಡುತ್ತಿದ್ದೀವಿ ಅನ್ನುವ ಶ್ಮುಲ್ ಮಾತಿಗೂ ತಾಳೆಯಾಗದಿರುವುದನ್ನು ಕಂಡು ಬ್ರೂನೋ ಕನ್ಫ್ಯೂಸ್ ಆಗ್ತಾನೆ.
“ಕ್ಯಾಂಪ್” ಇಂದ ಬರುತ್ತಿರುವ ಕೆಟ್ಟ ವಾಸನೆಯ ಹೊಗೆಯ ಬಗ್ಗೆ ಎಲ್ಸಾ ವಿಚಾರಿಸಿದಾಗ ಒಬ್ಬ ಸೈನಿಕ “ಅವರು (ಯಹೂದಿಗಳು) ಉರಿದಾಗ ಇನ್ನೂ ಕೆಟ್ಟ ವಾಸನೆ” ಅಂತ ಹೇಳುತ್ತಾನೆ. ಇದನ್ನು ತಿಳಿದು ಬೆಚ್ಚಿಬಿದ್ದ ಎಲ್ಸಾ ತನ್ನ ಗಂಡನ ಜೊತೆ ಜಗಳವಾಡಿ, ತಾನು ಮಕ್ಕಳನ್ನು ಈ ನರಕದಿಂದ ಕರೆದೊಯ್ಯುವ ನಿರ್ಧಾರ ಮಾಡುತ್ತಾಳೆ. ಹೊರಡುವ ಮುನ್ನ ಕಡೆಯ ಬಾರಿಗೆ ಶ್ಮುಲ್ ನೋಡಿಬರಲು ಯಾರಿಗೂ ಗೊತ್ತಾಗದಂತೆ ಹೋಗ್ತಾನೆ ಬ್ರೂನೋ. ಕಳೆದ ಕೆಲವು ದಿನದಿಂದ ತನ್ನ ಅಪ್ಪ ಕಾಣ್ತಿಲ್ಲ ಅಂತ ಶ್ಮುಲ್ ಹೇಳಿದಾಗ, ಅವನನ್ನು ಕ್ಯಾಂಪ್ ಒಳಗೆ ಹುಡುಕಲು ಸಹಾಯ ಮಾಡುತ್ತೇನೆ ಎಂದು ಹೇಳಿ ಬ್ರೂನೋ ಗುಂಡಿ ತೋಡಿ ಬೇಲಿಯ ಒಳಗೆ ಹೋಗಿಬಿಡುತ್ತಾನೆ.
ಚಿತ್ರ ಸ್ವಲ್ಪಮಟ್ಟಿಗೆ ನನಗೆ ನಿರಾಸೆ ಮೂಡಿಸಿದ್ದು ಅದು ಇಂಗ್ಲಿಷ್ ಅಲ್ಲಿ ಇರುವುದರಿಂದ. ಜರ್ಮನ್ನರು ಸ್ವಚ್ಛ ಇಂಗ್ಲಿಷ್ ಅಲ್ಲಿ ಮಾತಾಡೋದು ನನಗೆ ಹಿಡಿಸಲಿಲ್ಲ. ಪೌರಾಣಿಕ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಏನೂ ಅನಿಸೋಲ್ಲ, ಯಾಕಂದ್ರೆ ಅದು ಬಹುಶಃ ಕಾಲ್ಪನಿಕ ಅನ್ನುವ ಕಾರಣಕ್ಕೆ ಇರಬೇಕು. ಆದರೆ ಐತಿಹಾಸಿಕ ಅಥವಾ ನೈಜ ಘಟನೆಯನ್ನು ಆಧರಿಸಿದ್ದರೆ, ಈ ವ್ಯತ್ಯಾಸವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಹಾಗೆಯೇ ಬ್ರೂನೋ ಯಾರಿಗೂ ಗೊತ್ತಾಗದಂತೆ ಪದೇ ಪದೇ ಶ್ಮುಲ್ ನೋಡಲು ಹೋಗುವುದು ಸ್ವಲ್ಪ ನಂಬಲಸಾಧ್ಯ ಅನಿಸಿತು.
ಈ ಸಣ್ಣಪುಟ್ಟ ದೋಷಗಳಿದ್ದರೂ ಚಿತ್ರ ಇಷ್ಟವಾಗಲು ಕಾರಣ, ಬ್ರೂನೋವಿನ ಕಣ್ಣಿನಿಂದ ಈ ಭೀಕರ ಸಮಯವನ್ನು ತೋರಿಸಿರುವುದು. ಚಿತ್ರದಲ್ಲಿನ ಸಂಘರ್ಷ ಇರುವುದು ಮುಗ್ಧತೆ ಮತ್ತು ಭೀಕರತೆಯ ನಡುವೆ. ಬೇಲಿಯ ಆ ಕಡೆ, ಈ ಕಡೆ ಕೂತು ಸ್ನೇಹದಿಂದ ಮಾತಾಡುವ ಬ್ರೂನೋ ಮತ್ತು ಶ್ಮುಲ್ ಇಂದ ದೊಡ್ಡವರು ಕಲಿಯಬೇಕಾದ್ದು ಎಷ್ಟಿತ್ತು ಆಲ್ವಾ? ಇದು “ಕಾನ್ಸಂಟ್ರೇಶನ್ ಕ್ಯಾಂಪ್” ಬಗೆಗಿನ ಕಥೆಯಾದರೂ ಕ್ರೌರ್ಯವನ್ನು ಬಹಳ ಕಮ್ಮಿ ತೋರಿಸಲಾಗಿದೆ. ಕಡೆಯವರೆಗೂ ಬ್ರೂನೋವಿಗೆ ಈ ಕರಾಳತೆಯ ಪೂರ್ಣ ದರ್ಶನ ಆಗಲ್ಲ. ಆದರೆ ಬ್ರೂನೋಗೆ ಗೊತ್ತಿಲ್ಲದೇ ಇರುವುದು “ನಮಗೆ” ಗೊತ್ತಿರುವುದರಿಂದ, ತೋರಿಸದಿದ್ದರೂ ಅಲ್ಲಿನ ಭೀಕರತೆ, ಅದರಿಂದ ಮುದುಡಿಹೋಗಬಹುದಾದ ಮುಗ್ಧತೆ ಎರಡರ ಅರಿವೂ ಆಗಿ ಬೇಸರ ಮೂಡುತ್ತದೆ.
ನಮ್ಮಲ್ಲಿ ತುಂಬಾ ಜನ ಬುದ್ಧಿವಂತರು, ಚನ್ನಾಗಿ ಓದಿಕೊಂಡವರೂ ಸಹ ಲೋಕಾಭಿರಾಮವಾಗಿ ಈ ಮಾತನ್ನು ಆಡುತ್ತಾರೆ – “ನಮ್ ದೇಶಕ್ಕೆ ಪ್ರಜಾಪ್ರಭುತ್ವ ಸರಿ ಹೋಗಲ್ಲ, ಯಾವಾನಾದ್ರೂ ಸರಿಯಾಗಿರೋ ಡಿಕ್ಟೇಟರ್ ಒಬ್ಬ ಬಂದು ಸ್ಟ್ರಿಕ್ಟ್ ಆಗಿ ಈ ದೇಶವನ್ನ ಆಳಿದರೆ ನಮ್ ದೇಶನೂ ಉದ್ಧಾರ ಆಗುತ್ತೆ”. ಆದರೆ ಅಂತಹ ಡಿಕ್ಟೇಟರ್ ಗೆ ಸಿಗುವ ಅನಿಯಮಿತ ಶಕ್ತಿ ಎಷ್ಟು ದೊಡ್ಡದು, ಅದರ ದುರುಪಯೋಗ ಆದರೆ ಯಾವ ಪ್ರಮಾಣದಲ್ಲಿ ನಷ್ಟ ಆಗಬಹುದು ಅನ್ನುವುದನ್ನ ಸಲೀಸಾಗಿ ಮರೆತುಬಿಡುತ್ತಾರೆ. ಬದುಕಿನಲ್ಲಿ ನಾವೇ ಎಲ್ಲವನ್ನೂ ಪ್ರಯತ್ನಿಸಿ ಅನುಭವ ಪಡೆಯಬೇಕೇ? ಇತಿಹಾಸದಿಂದ ಹಾಗೆಯೇ ಕಲಿಯಬೇಕಾದ್ದು ಬೇಕಾದಷ್ಟು ಇದೆ ಅಲ್ಲವೇ?
Estavaythu lekana enastu mahithi nidabahudithu shbhavagali
ಉತ್ತಮ್, ನಾನು ಬೇಕಂತಲೇ ಚಿತ್ರ ಬಗ್ಗೆ ಹೆಚ್ಚು ಮಾಹಿತಿ ಕೊಡುವುದಿಲ್ಲ. ನನ್ನ ಬರಹದಿಂದ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಬೇಕು ಅನ್ನುವುದಕ್ಕಿಂತ ಇದನ್ನು ಓದಿ ಚಿತ್ರ ನೋಡಬೇಕು ಅನಿಸಲಿ ಅನ್ನುವುದು ನನ್ನ ಉದ್ದೇಶ.
ಇದನ್ನು ಓದಿ ಚಿತ್ರ ನೋಡಬೇಕು ಅನಿಸಲಿ ಅನ್ನುವುದು ನನ್ನ ಉದ್ದೇಶ.
+1