ಪೌಲ್ ಬುರ್ರೆಲ್ ಎಂಬ ಡಯಾನಾರ ತೆರೆಮರೆಯ ತಾರೆ: ಪ್ರಸಾದ್ ಕೆ.

ಕೆಲವೊಂದು ಮುಖಗಳೇ ಹಾಗಿರುತ್ತವೆ. ವರ್ಷಗಳು ಸಂದು ಹೋದರೂ, ಪೀಳಿಗೆಗಳು ಕಳೆದರೂ "ಐಕಾನ್" ಎನಿಸಿಕೊಳ್ಳುತ್ತವೆ. ವಿನ್ಸ್‍ಟನ್ ಚರ್ಚಿಲ್ ಸಿಗಾರ್ ಸೇದುತ್ತಾ ರಾಜಭಂಗಿಯಲ್ಲಿ ಕುಳಿತ ಕಪ್ಪು ಬಿಳುಪು ಛಾಯಾಚಿತ್ರ ಈಗಲೂ ಆ ದಂತಕಥೆಗೆ ಮೆರುಗನ್ನು ನೀಡುತ್ತದೆ. ಮರ್ಲಿನ್ ಮನ್ರೋರ ಮಾದಕ ನಗುಮುಖಕ್ಕೆ ಮರ್ಲಿನ್ ಮನ್ರೋರೇ ಸಾಟಿ. ಇಂತಹ ವಿಶಿಷ್ಟ ಮುಖಗಳ ಬಗ್ಗೆ ಮಾತನಾಡುವಾಗ ಮೊದಲಿಗೆ ಮನಸ್ಸಿನಲ್ಲಿ ಹಾದುಹೋಗುವ ಚಿತ್ರ ಬ್ರಿಟನ್ನಿನ ರಾಜಕುಮಾರಿ ಡಯಾನಾರದ್ದು. ಪ್ರಪಂಚದಲ್ಲೇ ಅತೀ ಹೆಚ್ಚು ಬಾರಿ ಛಾಯಾಚಿತ್ರೀಕರಿಸಲ್ಪಟ್ಟ ಮಹಿಳೆಯೆಂದರೆ ರಾಜಕುಮಾರಿ ಡಯಾನಾ. ತನ್ನ ಜೀವಿತಾವಧಿಯಲ್ಲಿ ವಿಶಿಷ್ಟ ಕಾರ್ಯವೈಖರಿ, ನಾಯಕತ್ವವನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವದಿಂದ ಖ್ಯಾತಿಯ ಉತ್ತುಂಗಕ್ಕೇರಿದ ರಾಜಕುಮಾರಿ ತನ್ನ ಸಾವಿನ ನಂತರವೂ ರಾಜಮನೆತನದ ಐಕಾನ್ ಆಗಿಯೇ ಉಳಿದುಕೊಂಡರು. ಡಯಾನಾರ ಜೀವನ ಶೈಲಿ ಮತ್ತು ವೈವಾಹಿಕ ಜೀವನದ ಏರುಪೇರುಗಳ ಬಗ್ಗೆ ಹುಟ್ಟಿಕೊಂಡ ಕಾಲ್ಪನಿಕ ಕಥೆಗಳಿಗೆ ಲೆಕ್ಕವಿಲ್ಲ. ಹಾಗೆಯೇ ಸಾವಿನ ನಿಗೂಢತೆಯ ಬಗ್ಗೆ ಹರಿದುಬಂದ ಥಿಯರಿಗಳಿಗೆ ಅಂತ್ಯವಿಲ್ಲ. ಇಂತಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಂಡ ಓರ್ವ ಯಶಸ್ವಿ ಮಹಿಳೆಯ ಹಿಂದೆ ಸದಾ ನೆರಳಿನಂತಿದ್ದ ಪೌಲ್ ಎಂಬ (ಅ)ಸಾಮಾನ್ಯ ಸೂತ್ರಧಾರನ ಬಗ್ಗೆ ಬಹುಜನರಿಗೆ ಗೊತ್ತಿರಲಿಕ್ಕಿಲ್ಲ.

ಪೌಲ್ ಬುರ್ರೆಲ್ ಕಳೆದ ಶತಮಾನದ ಅಂತ್ಯದಲ್ಲಿ ಬ್ರಿಟನ್ ನಲ್ಲಿ ಲೇಖಕರಾಗಿಯೂ, ಮೀಡಿಯಾ ಸೆಲೆಬ್ರಿಟಿಯಾಗಿಯೂ ಎಲ್ಲದಕ್ಕಿಂತಲೂ ಹೆಚ್ಚಾಗಿ ಬ್ರಿಟಿಷ್ ರಾಜಮನೆತನದ ವಿವಾದದಲ್ಲಿ ಮನೆಮಾತಾದ ವ್ಯಕ್ತಿ. ಗಣಿ ಕಂಪೆನಿಯೊಂದರ ಲಾರಿ ಚಾಲಕನಾಗಿ ಉದ್ಯೋಗಿಯಾದ್ದ ಓರ್ವ ಮಧ್ಯಮವರ್ಗದ ಕುಟುಂಬದ ಮಗನಾಗಿ ಜನಿಸಿದ ಪೌಲ್ ಈ ಮಟ್ಟದಲ್ಲಿ ಬೆಳೆಯುತ್ತಾನೆ ಎಂದು ಬಹುಶಃ ಯಾರೂ ಯೋಚಿಸಿರಲಿಕ್ಕಿಲ್ಲ. ಹದಿನೆಂಟರ ವಯಸ್ಸಿನಲ್ಲಿ ಹೋಟೇಲ್ ಮ್ಯಾನೇಜ್ ಮೆಂಟ್ ಪದವೀಧರನಾದ ಪೌಲ್ ಬ್ರಿಟಿಷ್ ರಾಜಮನೆತನದ  ಅರಮನೆಯ ಸೇವಕನಾಗಿ ಸೇರಿಕೊಳ್ಳುತ್ತಾರೆ. ನಂತರದ ಒಂದೆರಡು ವರ್ಷಗಳಲ್ಲೇ ರಾಣಿ ಎಲಿಜಬೆತ್ ರ ವೈಯಕ್ತಿಕ ಸೇವಕನಾಗಿ ಭಡ್ತಿ ಹೊಂದುತ್ತಾರೆ. ರಾಣಿ ಎಲಿಜಬೆತ್ ರ ಪುತ್ರ ಚಾಲ್ರ್ಸ್ ವಿವಾಹ ಡಯಾನಾ ಸ್ಪೆನ್ಸರ್ ಜೊತೆ ನಡೆದ ಬೆನ್ನಲ್ಲೇ ಪೌಲ್ ಬ್ರಿಟನ್ನಿನ ಕೆನ್ಸಿಂಗ್ ಸ್ಟನ್ ಅರಮನೆಯಲ್ಲಿ ರಾಜಕುಮಾರಿ ಡಯಾನಾರ ಆಹ್ವಾನದ ಮೇರೆಗೆ ಬಟ್ಲರ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಬಟ್ಲರ್ ಹುದ್ದೆಯ ವ್ಯಕ್ತಿಯ ಜವಾಬ್ದಾರಿ ಬೆಳಗ್ಗಿನ ಉಪಾಹಾರದ ಹಿಡಿದು ರಾಜಕುಮಾರಿಯ ಮುಖತಃ ಭೇಟಿ, ಕಾರ್ಯಕ್ರಮಗಳಂತಹ ದೈನಂದಿನ ವೈಯಕ್ತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲೂ, ರಾತ್ರಿಯ ಭೋಜನದವರೆಗೂ ಮುಂದುವರಿಯುತ್ತದೆ. ಈ ಸೇವೆ ಡಯಾನಾರ ಅಂತ್ಯದವರೆಗೂ ಮುಂದುವರೆಯುತ್ತದೆ. ಇಪ್ಪತ್ತೊಂದು ವರ್ಷಗಳ ಕಾಲ ರಾಜಮನೆತನದಲ್ಲಿ ವಿಧೇಯ ಸೇವೆ ಸಲ್ಲಿಸಿದ ಪೌಲ್ ರವರಿಗೆ ಬ್ರಿಟನ್ನಿನ ರಾಣಿಯಿಂದ ಕೊಡಲ್ಪಡುವ ಪ್ರತಿಷ್ಠಿತ ರಾಯಲ್ ವಿಕ್ಟೋರಿಯನ್ ಮೆಡಲ್ ನಂತಹ ಪುರಸ್ಕಾರಗಳು ಸಂದಿವೆ. ಪ್ರಸ್ತುತ ಅಮೆರಿಕಾದ ನಿವಾಸಿಯಾಗಿರುವ ಪೌಲ್ ತನ್ನದೇ ಹೆಸರಿನ ಬ್ರ್ಯಾಂಡ್ ನ ಹೂಡಿಕೆಯ ಹೂವಿನ ವ್ಯಾಪಾರದಲ್ಲಿ ತೊಡಗಿದ್ದಾರೆ. 

ಪೌಲ್ ಬುರ್ರೆಲ್ ತನ್ನ ಒಡತಿ ವೇಲ್ಸ್ ನ ರಾಜಕುಮಾರಿ ಡಯಾನಾರ ಜೊತೆಗಿನ ಒಡನಾಟದಿಂದ ಮಾಧ್ಯಮದ ಬೆಳಕಿಗೆ ಬಂದ ವ್ಯಕ್ತಿ. ಬ್ರಿಟಿಷ್ ರಾಜಮನೆತನಕ್ಕೆ ಕಾಲಿರಿಸಿದ ಡಯಾನಾರ ವೈವಾಹಿಕ ಜೀವನದ ಆರಂಭದಿಂದ ಡಯಾನಾರ ದೇಹಾಂತ್ಯದವರೆಗೂ ಜೊತೆಗಿದ್ದ ಏಕಮಾತ್ರ ಸಾಮಾನ್ಯ ವ್ಯಕ್ತಿ ಪೌಲ್. ರಾಜಕುಮಾರ ಚಾಲ್ರ್ಸ್ ರೊಂದಿಗಿನ ವಿವಾಹವು ವಿಚ್ಛೇದನದಲ್ಲಿ ಮುರಿದು ಬಿದ್ದ ನಂತರ ರಾಜಕುಮಾರಿ ಡಯಾನಾ ಏಕಾಂಗಿ ಮತ್ತು ಸಾಮಾಜಿಕ ಜೀವನವನ್ನು ನಡೆಸುತ್ತಾ ತಮ್ಮ ಇಮೇಜ್ ಅನ್ನು ಉತ್ತುಂಗಕ್ಕೇರಿಸಿಕೊಂಡಿದ್ದರು. ಹುಟ್ಟಿನಿಂದಲೇ ಭಾವಜೀವಿಯಾಗಿದ್ದ ರಾಜಕುಮಾರಿ ಡಯಾನಾ ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಅಂತರ್ಮುಖಿಯಾಗಿಯಾಗಿದ್ದರು ಮತ್ತು ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆಂತರಿಕವಾಗಿ ಚೇತರಿಸಿಕೊಂಡರು. ಸ್ನೇಹಜೀವಿಯಾಗಿದ್ದ ಡಯಾನಾ ವಿವಾಹವಾಗಿ ರಾಜಮನೆತನಕ್ಕೆ ಬಂದ ಆರಂಭದಿಂದಲೂ ಅರಮನೆಯ ಬಹು ಸೇವಕ-ಸೇವಕಿಯರಿಗೆ ಬಹು ಪ್ರಿಯವಾಗಿದ್ದ ವ್ಯಕ್ತಿ. ತನ್ನ  ನಿಶ್ಕಲ್ಮಷ ಮುಗುಳ್ನಗೆಯಿಂದಲೂ ಮಾನವೀಯತೆಯ ಗುಣಗಳಿಂದಲೂ ಮೈಗೂಡಿದ್ದ ರಾಜಕುಮಾರಿ ತನ್ನ ಪ್ರಿಯ ಸೇವಕರಿಗೆ, ಹಿತೈಷಿಗಳಿಗೆ ಧಾರಾಳ ಉಡುಗೊರೆಗಳನ್ನು ನೀಡುತ್ತಿದ್ದರು. ಬಟ್ಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪೌಲ್ ಡಯಾನಾರ ದೈನಂದಿನ ಚಟುವಟಿಕೆಯ ಮೇಲ್ವಿಚಾರಣೆಯ ಜವಾಬ್ದಾರಿಯ ಜೊತೆ ಸ್ನೇಹಿತನಾಗಿ ಬಹು ಆಪ್ತರಾಗಿಯೂ ಇದ್ದರು. ವಿವಾಹ ವಿಚ್ಛೇದನದ ನಂತರ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಡಯಾನಾರಿಗೆ ಅರಮನೆಯಲ್ಲಿ ಪೌಲ್ ಸದಾ ಬೆನ್ನ ಹಿಂದೆಯೇ ಊರುಗೋಲಿನಂತೆ ನಿಂತಿದ್ದರು. 

ಪೌಲ್ ರ ಪತ್ನಿ ಮರಿಯಾ ಕೂಡ ಡಯಾನಾರ ಮಾವ ಎಡಿನ್ ಬರ್ಗ್ ನ ರಾಜನ ಸೇವಕಿಯಾಗಿ ಸೇವೆ ಸಲ್ಲಿಸಿ ಡಯಾನಾರ ಪರಮಾಪ್ತ ಸ್ನೇಹಿತರ ಕೂಟದಲ್ಲಿ ಒಂದಾಗಿದ್ದರು. ಪೌಲ್ ರ ಕೌಟುಂಬಿಕ ಸಮಾರಂಭಗಳಲ್ಲಿ ಡಯಾನಾ ತನ್ನಿಬ್ಬರು ಮಕ್ಕಳೊಂದಿಗೆ ಸದಾ ಹಾಜರಿರುತ್ತಿದ್ದರು. ಪೌಲ್ ಮನೆಯ ಅಂಗಳ ಬಾಲ್ಯದಲ್ಲಿ ಒಂದೇ ವಯಸ್ಸಿನ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹ್ಯಾರಿಗೂ ಪೌಲ್ ರ ಮಕ್ಕಳಾದ ಅಲೆಕ್ಸ್ ಮತ್ತು ನಿಕ್ ಗೂ ಅತ್ಯಂತ ಪ್ರಿಯವಾದ ಆಟದ ಮೈದಾನವಾಗಿತ್ತು. "ನನ್ನ ಮತ್ತು ರಾಜಕುಮಾರಿಯ ಸ್ನೇಹ ಬಹು ಗಾಢವಾಗಿತ್ತು. ನಾವಿಬ್ಬರು ಸುಖ ದುಃಖಗಳನ್ನು ಹಂಚುತ್ತಾ ಕಳೆದ ಮಧುರ ಕ್ಷಣಗಳು ಒಂದೆರಡಲ್ಲ. ನಾನು ನಾವಿಕನಂತೆ ಮತ್ತು ರಾಜಕುಮಾರಿ ನಾವೆಯಂತೆ ಎಂದು ಡಯಾನಾರೇ ಹೇಳುತ್ತಿದ್ದರು" ಎಂದು ಪೌಲ್ ರವರು ತನ್ನ ಆತ್ಮ ಕಥೆ "ರಾಯಲ್ ಡ್ಯೂಟಿ"ಯಲ್ಲಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಹೇಳಿದಂತೆ ರಾಜಕುಮಾರಿ ಡಯಾನಾ ತನ್ನ ಬಹು ಖಾಸಗಿ ವಿಚಾರಗಳನ್ನು ಪೌಲ್ ಜೊತೆ ಹಂಚಿಕೊಳ್ಳುತ್ತಿದ್ದರು. ವಿಚ್ಛೇದನದ ಕಾಗದ ಪತ್ರಗಳು, ದುಬಾರಿ ಉಡುಗೊರೆಗಳು, ಮತ್ತು ಖಾಸಗಿ ಪತ್ರಗಳನ್ನು ಜೋಪಾನವಾಗಿರಿಸಲು ಪೌಲ್ ರವರಿಗೆ ರಾಜಕುಮಾರಿ ಕೊಡುತ್ತಿದ್ದರು. ಬ್ರಿಟಿಷ್ ರಾಜಮನೆತನದಲ್ಲಿ ಸೇವಕರಿಗೆ ಉಡುಗೊರೆಗಳನ್ನು ಕೊಡುವುದು ಸಾಮಾನ್ಯ ಮತ್ತು ಒಡೆಯನ ಸಂತುಷ್ಟಿಯ ಸಂಕೇತ. ರಾಜಕುಮಾರಿ ಡಯಾನಾ ಹಲವು ಬಾರಿ ತನ್ನ ಅಂತಾರಾಷ್ಟ್ರೀಯ ಪರ್ಯಟನೆಗಳಲ್ಲಿ ಪೌಲ್ ರನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ವಿಶ್ವದಾದ್ಯಂತ ಹಲವು ಬಾರಿ ಮಾಧ್ಯಮಗಳೂ ಕೂಡ ಬಟ್ಲರನೊಬ್ಬ ರಾಜಮನೆತನದ ವೈಭವದ ಜೊತೆ ರಾಷ್ಟ್ರೀಯ ಅಧ್ಯಕ್ಷರಂತಹ ವ್ಯಕ್ತಿಗಳ ಜೊತೆಗೆ ಆಹಾರ ಹಂಚಿಕೊಳ್ಳುತ್ತಿರುವುದನ್ನು ಕಂಡು ಹುಬ್ಬೇರಿಸಿದ್ದವು. ಆದರೆ ಡಯಾನಾರ ವಿಶ್ವಾಸಕ್ಕೆ ಅರ್ಹನಾದಂತಹ ವ್ಯಕ್ತಿ ಪೌಲ್ ಬಿಟ್ಟರೆ ಬೇರೊಬ್ಬನಿರಲಿಲ್ಲ. ಡಯಾನಾ ಎಷ್ಟೋ ಬಾರಿ ಜೊತೆ ಕುಳಿತು ತನ್ನ ವಿಫಲ ವೈವಾಹಿಕ ಜೀವನದ ಬಗ್ಗೆ ಕಣ್ಣೀರು ಹಾಕುತ್ತಿದ್ದರೆಂದು ಪೌಲ್ ವಿವರಿಸುತ್ತಾರೆ. ಈ ಸ್ನೇಹ ವರ್ಷಗಳು ಕಳೆದರೂ, ಡಯಾನಾ ನಗುತ್ತಾ ಬೇಡವೆಂದು ನಾಚಿಕೊಂಡರೂ ಪೌಲ್ ರಾಜಕುಮಾರಿಯನ್ನು ಗೌರವಪೂರ್ವಕವಾಗಿ "ಯುವರ್ ರಾಯಲ್ ಹೈನೆಸ್" ಎಂದೇ ಸಂಬೋಧಿಸುತ್ತಿದ್ದರು. ಅಂತಹ ಒಂದು ಸ್ನೇಹದ ಅಪೂರ್ವ ಬಂಧ ಒಡತಿ ಮತ್ತು ಸೇವಕನ ಜೊತೆ ಕಾಲದೊಂದಿಗೆಯೇ ರೂಪುಗೊಂಡಿತ್ತು. 

ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಡಯಾನಾರೊಂದಿಗೆ ಮಾಧ್ಯಮಗಳಲ್ಲಿ ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೌಲ್ ಬಗ್ಗೆ ರಾಜಕುಮಾರಿಯ ತಾಯಿಯ ಕುಟುಂಬದಿಂದ ಹೆಚ್ಚಾಗುತ್ತಿದ್ದ ಅಸಮಧಾನದ ಜೊತೆಗೇ ಡಯಾನಾರ ಸಾವಿನ ನಂತರ ಪೌಲ್ ಯಾರಿಗೂ ಒಂದೇ ಸಮನೆ ಬೇಡವಾದರು. ರಾಜಮನೆತನದ ಸಂಗ್ರಹಗಳನ್ನು ಕದ್ದ ಆರೋಪದ ಮೇಲೆ ಪೌಲ್ ವಿರುದ್ಧ ಮೊಕದ್ದಮೆ ಹೂಡಲಾಯಿತು. ಹಲವು ವರ್ಷಗಳಲ್ಲಿ ಡಯಾನಾರವರು ಪೌಲ್ ಮತ್ತು ಕುಟುಂಬಕ್ಕೆ ನೀಡಿದ ಎಲ್ಲಾ ಉಡುಗೊರೆಗಳನ್ನು ಮುಟ್ಟುಗೋಲು ಹಾಕಲಾಯಿತು. ಪೀಠೋಪಕರಣಗಳು ಮತ್ತಿತರ ಸಂಗ್ರಹಯೋಗ್ಯವಸ್ತುಗಳನ್ನು ಸೇರಿಸಿ ಮುನ್ನೂರ ನಲವತ್ತೆರಡು ವಸ್ತುಗಳು ಆರೋಪದ ನೆಪದಲ್ಲಿ ಜಪ್ತಿಯಾದವು. ಡಯಾನಾರಿಗೆ ತನ್ನ ಖಾಸಗಿ ವಿಚಾರಗಳನ್ನು ಡೈರಿಯೊಂದರಲ್ಲಿ ದಾಖಲಿಸುವ ಅಭ್ಯಾಸವಿತ್ತು. ತನಗೆ ಬಂದ ಪ್ರತಿಯೊಂದು ಶುಭಾಶಯ ಪತ್ರಗಳಿಗೂ ರಾಜಕುಮಾರಿ ಸ್ವತಃ ಧನ್ಯವಾದ ಪತ್ರಗಳನ್ನು ಬರೆಯುತ್ತಿದ್ದರು. ರಾಜಕುಮಾರಿ ಡಯಾನಾರಿಗೆ ಅರಮನೆಯಲ್ಲಿ ತನ್ನ ಮಾತುಗಳನ್ನು ಯಾರೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಖಾಸಗಿತನದ ಆತಂಕವಿತ್ತು. ಇದನ್ನು ಸಮರ್ಥಿಸುವಂತೆ ಒಂದೆರಡು ಬಾರಿ ಅರಮನೆಯ ಕೆಲ ಮೂಲೆಗಳಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳೂ ಪತ್ತೆಯಾಗಿದ್ದವು.

ಇವೆಲ್ಲದರಿಂದ ವಿಚಲಿತರಾಗಿದ್ದ ಡಯಾನಾ ಕೆಲವು ಪತ್ರಗಳನ್ನು ತನ್ನ ವಿಧೇಯ ಅನುಭವಿ ಸೇವಕ ಪೌಲ್ ರವರಿಗೆ ಜೋಪಾನವಾಗಿರಿಸಲು ಕೊಟ್ಟಿದ್ದರು. ಇವುಗಳಲ್ಲಿ ಕೆಲವು ರಾಜಕುಮಾರಿಯ ಖಾಸಗಿ ಪತ್ರಗಳೂ, ವಸ್ತುಗಳೂ ಸೇರಿದ್ದವು. ಎಲ್ಲದಕ್ಕಿಂತಲೂ ಮುಖ್ಯವಾಗಿ ಈ ಕೌಟುಂಬಿಕ ವಿಷಯಗಳು ಡಯಾನಾರ ಮಕ್ಕಳಾದ ಪ್ರಿನ್ಸ್ ವಿಲಿಯಂ, ಪ್ರಿನ್ಸ್ ಹ್ಯಾರಿ, ಮಾಜಿ ಪತಿ ಚಾಲ್ರ್ಸ್ ಮತ್ತು ಅತ್ತೆ ಮಾವಂದಿರಾದ ರಾಣಿ ಎಲಿಜಬೆತ್ ಮತ್ತು ಎಡಿನ್ ಬರ್ಗ್‍ನ ರಾಜ ಫಿಲಿಪ್ ಗೂ ಗೊತ್ತಿತ್ತು. ಡಯಾನಾರ ತಾಯಿ ಪೌಲ್ ವಿರುದ್ಧ ಹೂಡಿದ್ದ ಈ ಕಳ್ಳತನದ ಮೊಕದ್ದಮೆ ವಿಶ್ವದಾದ್ಯಂತ ಮಾಧ್ಯಮಗಳು ಬಡಬಡಿಸುವಂತೆ ಮಾಡಿದರೂ ಬ್ರಿಟಿಷ್ ರಾಜಮನೆತನ ಕೊನೆಯವರೆಗೂ ತಲೆಹಾಕುವ ಗೋಜಿಗೆ ಹೋಗಲಿಲ್ಲ. ಮನೆಯೊಳಗಿನ ಕಥೆ ಬೀದಿಗೆ ಬರುವುದು ಅವರಿಗೆ ಬೇಡವಾಗಿತ್ತು. ರಾಜಕುಮಾರಿಯ ಮರಣದ ನಂತರ ಪೌಲ್ ರವರ ಉತ್ತಮವಾದ ಜೀವನಶೈಲಿಯನ್ನು ಗುರಿಯಾಗಿಸಿ ವಾದಗಳನ್ನು ಮಂಡಿಸಲಾಯಿತು. ಆದರೆ ಸತ್ಯ ಬೇರೆಯೇ ಆಗಿತ್ತು. ಪೌಲ್ ರವರ ಮೊದಲ ಪ್ರಕಟಿತ ಪುಸ್ತಕ ಉತ್ತಮ ಮಾರುಕಟ್ಟೆಯನ್ನು ಆಗಲೇ ಗಳಿಸಿಕೊಂಡಿತ್ತು. ಹಲವು ವಿಶ್ವವಿದ್ಯಾಲಯಗಳಲ್ಲಿ, ಖಾಸಗಿ ಕಾರ್ಯಕ್ರಮಗಳಲ್ಲಿ ಉಪನ್ಯಾಸಗಳನ್ನು ನೀಡಲು ಪೌಲ್ ರನ್ನು ಸಂಪನ್ಮೂಲ ವ್ಯಕ್ತಿಯಾಗಿ ಕರೆಯಲಾಗುತ್ತಿತ್ತು. ಇದರಿಂದ ಸ್ವಾಭಾವಿಕವಾಗಿಯೇ ಪೌಲ್ ರವರ ಜೀವನ ಶೈಲಿ ಹಿಂದಿಗಿಂತಲೂ ಉತ್ತಮವಾಗಿತ್ತು. ತೊಂಭತ್ತು ಪ್ರತಿಶತ ಎಲ್ಲಾ ಮುಗಿದು ಪೌಲ್ ರವರು ಮಾಡದ ತಪ್ಪಿಗೆ ಶಿಕ್ಷೆಯನ್ನು ಎದುರುನೋಡುತ್ತಿರುವ ಸಂದರ್ಭದಲ್ಲಿ ರಾಣಿ ಎಲಿಜಬೆತ್ ರ ಮಧ್ಯಪ್ರವೇಶದಲ್ಲಿ ನ್ಯಾಯಾಲಯದ ಜೊತೆಗೆ ನಡೆದ ಗೌಪ್ಯ ಸಂಧಾನ ಪೌಲ್ ರವರನ್ನು ದೋಷಮುಕ್ತಗೊಳಿಸಿತು. ಕೊನೆಗೂ ರಾಣಿ ಎಲಿಜಬೆತ್ ತನ್ನ ನಂಬಿಕೆಯ ಸೇವಕನನ್ನು ಪಾರುಮಾಡಿದ್ದರು. ಆದರೆ ಮಾಧ್ಯಮಗಳು ಪೌಲ್ ರವರಿಗೆ ಆಗಲೇ ಕಳ್ಳನ ಪಟ್ಟ ಕಟ್ಟಿದ್ದವು. ಮಾಧ್ಯಮಗಳು ಡಯಾನಾ ಮತ್ತು ರಾಣಿ ಎಲಿಜಬೆತ್ ರ ಸಂಬಂಧದ ಬಗ್ಗೆ ಏನೇ ಬರೆದರೂ ಅತ್ತೆ-ಸೊಸೆಯ ಸಂಬಂಧ ಸೌಹಾರ್ದಯುತವಾಗಿತ್ತು. ರಾಣಿ ಎಲಿಜಬೆತ್ ತನ್ನ ಪತಿಯ ಜೊತೆ ಡಯಾನಾ ಮತ್ತು ತನ್ನ ಪುತ್ರನ ವಿವಾಹವನ್ನು ಉಳಿಸಲು ಎಲ್ಲಾ ಕಸರತ್ತನ್ನೂ ಪ್ರಾಮಾಣಿಕವಾಗಿ ಮಾಡಿದ್ದರು. ಆದರೆ ಚಾಲ್ರ್ಸ್ ಜೀವನದಲ್ಲಿ ಕಮಿಲ್ಲಾ ಎಂಬ ಮಹಿಳೆಯ ಆಗಮನ ಎಂದೋ ಆಗಿಹೋಗಿತ್ತು. ರಾಜಕುಮಾರಿ ಡಯಾನಾ ರಾಣಿ ಎಲಿಜಬೆತ್ ರನ್ನುದ್ದೇಶಿಸಿ ಬರೆದ ಸೌಹಾರ್ದಯುತ ಪತ್ರಗಳೇ ಇವಕ್ಕೆ ಸಾಕ್ಷಿ. 

ಡಯಾನಾರ ಮರಣದ ನಂತರ ಅವರು ಬಳಸುತ್ತಿದ್ದ ವಸ್ತುಗಳು ಪತಿ ಕಿಂಗ್ ಚಾಲ್ರ್ಸ್ ಮತ್ತು ಮಕ್ಕಳಾದ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹ್ಯಾರಿಯವರ ವಶವಾದವು. ಕಿಂಗ್ ಚಾಲ್ರ್ಸ್ ತನ್ನ ಪತ್ನಿಗಾಗಿ ಸ್ವತಃ ಬಿಡಿಸಿದ ವರ್ಣಚಿತ್ರಗಳು ಮತ್ತು ಇನ್ನಿತರ ದುಬಾರಿ ವಸ್ತು ಮತ್ತು ಆಭರಣಗಳು ಅರಮನೆಯ ಮ್ಯೂಸಿಯಂ ಸೇರಿದವು. ರಾಜಕುಮಾರಿ ಬಳಸುತ್ತಿದ್ದ ಹೆಚ್ಚಿನ ಸೌಂದರ್ಯ ಪ್ರಸಾಧನಗಳು ಮತ್ತು ಅಮೂಲ್ಯ ಬಟ್ಟೆಬರೆಗಳು ಹರಾಜಾದವು. ಈ ಮೊತ್ತವನ್ನು ಡಯಾನಾರ ನೆನಪಿನಲ್ಲಿ ನಡೆಸುತ್ತಿರುವ ಸಾಮಾಜಿಕ ಕಾರ್ಯಸಂಸ್ಥೆಗೆ ದೇಣಿಗೆ ರೂಪದಲ್ಲಿ ಸಂದಾಯವಾಯಿತು. ಅಸಲಿಗೆ ಡಯಾನಾರ ಮನದಾಸೆಯೂ ಇದೇ ಆಗಿತ್ತು. ಕಲ್ಕತ್ತಾದಲ್ಲಿ ಮದರ್ ತೆರೆಸಾರವರನ್ನು ಭೇಟಿಯಾದ ನಂತರ ಅವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದ ಯಾತ್ರÂ ಉತ್ತಮ ಹಾದಿಯಲ್ಲಿ ಸಾಗುತ್ತಿತ್ತು. ತನ್ನ ಸಂಬಂಧಿಗಳಿಗಿಂತಲೂ ಸ್ನೇಹಿತರಲ್ಲೇ ಹೆಚ್ಚಿನ ಬಾಂಧವ್ಯವನ್ನಿರಿಸಿದ್ದ ಧಾರಾಳ ಮನಸ್ಸಿನ ರಾಜಕುಮಾರಿ ತನ್ನ ಸ್ನೇಹಿತ ಸ್ನೇಹಿತೆಯರಿಗೆ ತನ್ನ ಹಸ್ತಾಕ್ಷರದೊಂದಿಗೆ ಕೊಟ್ಟ ಉಡುಗೊರೆಗಳು ಲೆಕ್ಕವಿಲ್ಲದಷ್ಟಿವೆ. ಇವೆಲ್ಲದರಲ್ಲಿ ತುಂಬಿಕೊಂಡಿರುವ ಪ್ರೀತಿ ವಿಶ್ವಾಸಕ್ಕೆ ಬೆಲೆಕಟ್ಟುವುದಕ್ಕಾಗುವುದಿಲ್ಲ. ಆದರೆ ಈ ಪ್ರೀತಿಯ ಉಡುಗೊರೆಗಳೇ ಮುಳುವಾದದ್ದು ಪೌಲ್ ಜೀವನದಲ್ಲಿ ರಾಜಕುಮಾರಿಯ ಕಾರು ಅಪಘಾತಕ್ಕಿಂತಲೂ ನಡೆದ ಒಂದು ದೊಡ್ಡ ವಿಪರ್ಯಾಸ. 

ಡಯಾನಾರ ಜೊತೆಗಿನ ಸಾರ್ವಜನಿಕವಾಗಿ ಹೆಚ್ಚಿದ ಒಡನಾಟ ಮಾಧ್ಯಮಗಳ ಕಣ್ಣು ಕುಕ್ಕುತ್ತಿರುವಂತೆ ಪೌಲ್ ರವರೂ ಕೂಡ ಅನಗತ್ಯವಾಗಿ ವಿವಾದಗಳ ಸುಳಿಯಲ್ಲಿ ಮುಳುಗಿಹೋದರು. ಡಯಾನಾರನ್ನು ಬಹು ಹಚ್ಚಿಕೊಂಡಿದ್ದ ಪೌಲ್ ರಾಜಕುಮಾರಿಯ ದೇಹಾಂತ್ಯದ ಮೊದಲ ಕೆಲವು ವರ್ಷಗಳಲ್ಲಿ ದುಃಖದಲ್ಲಿ ನಂಬಲಾಗದಷ್ಟು ಆಘಾತಕ್ಕೀಡಾಗಿದ್ದರು. ಕಳ್ಳತನದ ಮೊಕದ್ದಮೆಯೂ ಪೌಲ್ ರವರನ್ನು ಒತ್ತಡಕ್ಕೀಡು ಮಾಡಿ ಆತ್ಮಹತ್ಯೆಯ ಒಂದು ಚಿಂತನೆಗೂ ಈಡುಮಾಡಿತ್ತು. ತನ್ನ ನೆಚ್ಚಿನ ಒಡತಿಯ ಶವ ಪ್ಯಾರಿಸ್ ನಿಂದ ಬಂದ ನಂತರ ಕಳೇಬರದ ಮುಂದೆ ಹೂವುಗಳನ್ನು ಗುಡ್ಡಹಾಕಿ ರಾತ್ರಿಯಿಡೀ ಕಂಬನಿಗರೆದ ಪಾಲ್ ಮನೋಸ್ಥಿತಿಯ ಬಗ್ಗೆ ಮಾಧ್ಯಮಗಳು ನಕಾರಾತ್ಮಕವಾಗಿ ಸಾಕಷ್ಟು ಬಡಬಡಿಸಿದ್ದವು. ಡಯಾನಾರ ವಿಚ್ಛೇದನಾ ನಂತರದ ಗೌಪ್ಯ ಸಂಬಂಧದ ಊಹಾಪೋಹಗಳಲ್ಲಿ ಇದನ್ನೂ ಕಲೆಹಾಕಲಾಯಿತು. ರಾಜಕುಮಾರಿ ಡಯಾನಾ ಮತ್ತು ತನ್ನ ಬಗ್ಗೆ ಬರೆದ ಮೊದಲ ಪ್ರಕಟಿತ ಪುಸ್ತಕ "ಅ ರಾಯಲ್ ಡ್ಯೂಟಿ" ಡಯಾನಾರ ಖಾಸಗಿ ಜೀವನದಲ್ಲಿ ಪೌಲ್ ರವರ ಪಾತ್ರವನ್ನು ಜನರ ಮುಂದಿರಿಸಿ ಅಚ್ಚರಿಗೆಡೆಮಾಡಿತು. ಅಮೆರಿಕಾ ಮತ್ತು ಆಸ್ಟ್ರೇಲಿಯಾದ ವೀಕ್ಷಕರಿಗಾಗಿ ರಾಜಮನೆತನದ ಜೀವನ ಶೈಲಿಯನ್ನು ಅನುಕರಿಸುವ ರಿಯಾಲಿಟಿ ಶೋಗಳಲ್ಲಿ ಪೌಲ್ ಕಾಣಿಸಿಕೊಂಡರು.

ದೇಶದಾದ್ಯಂತ ರಾಜಮನೆತನದ ಬಗ್ಗೆ ಭಾಷಣಗಳನ್ನು, ಸಂದರ್ಶನಗಳನ್ನು ಕೊಡುತ್ತಾ ಮೀಡಿಯಾ ಸೆಲೆಬ್ರಿಟಿ ಎನಿಸಿಕೊಂಡರು. ಹಲವು ಟಿ.ವಿ ಚಾನೆಲ್ ಗಳಿಗೆ ನೀಡಿದ ಸಂದರ್ಶನಗಳಲ್ಲಿ ಪೌಲ್ ರವರಿಂದ ರಾಜಮನೆತನದ ಖಾಸಗಿ ವಿಷಯಗಳು ಸೋರಿಹೋದವು. ಇದರಿಂದ ನಕಾರಾತ್ಮಕ ವಾತಾವರಣವೇ ರೂಪುಗೊಂಡಿತು. ರಾಜಕುಮಾರಿ ಡಯಾನಾರ ಹೆಸರಿನ ಬಲದಿಂದ ಬಿಟ್ಟಿ ಪ್ರಚಾರಕ್ಕಾಗಿ ಇವೆಲ್ಲದನ್ನು ಪೌಲ್ ಮಾಡುತ್ತಿರುವಂತೆ ಪ್ರತಿಕ್ರಿಯೆಗಳು ಎದುರಾದವು. ಡಯಾನಾರ ನೆನಪಿನಲ್ಲಿ ನಡೆಸಲಾಗುತ್ತಿರುವ ಸಾಮಾಜಿಕ ಕಾರ್ಯಸಂಸ್ಥೆಯ ಪ್ರಮುಖ ಹುದ್ದೆಯಿಂದ ಇವರನ್ನು ಕೆಳಗಿಳಿಸಲಾಯಿತು. ಮೊಕದ್ದಮೆಯಲ್ಲಿ ಸಿಕ್ಕಿಹಾಕಿಕೊಂಡ ನಂತರ ಪೌಲ್ ಸಂದರ್ಶನಗಳನ್ನು ನೀಡುವುದನ್ನು ಬಹುಮಟ್ಟಿಗೆ ನಿಲ್ಲಿಸಿಬಿಟ್ಟಿದ್ದರು ಎಂಬುವುದೂ ಸತ್ಯ. ಪೌಲ್ ರವರ ಲೈಂಗಿಕ ಜೀವನದ ಬಗ್ಗೆ ಇಂದಿಗೂ ನಿಗೂಢತೆಯ ಆವರಣವಿದೆ. ಪ್ರಸ್ತುತ ಪೌಲ್ ತನ್ನ ಪತ್ನಿ ಮತ್ತು ಇಬ್ಬರು ಹರೆಯದ ಗಂಡು ಮಕ್ಕಳೊಡನೆ ವಾಸಿಸುತ್ತಿದ್ದರೂ ಎರಡು ದಶಕಗಳ ಹಿಂದೆ ಅರಮನೆಯಲ್ಲಿ ಸೇವಕನಾಗಿದ್ದ ಗ್ರೆಗ್ ಪೀಡ್ ಎಂಬಾತನ ಜೊತೆ ಎರಡು ವರ್ಷಗಳ ಕಾಲ ಸಲಿಂಗಕಾಮಿ ಸಂಬಂಧವನ್ನಿರಿಸಿಕೊಂಡಿದ್ದ ಬಗ್ಗೆ ಮೂಲಗಳು ಹೇಳುತ್ತವೆ. ರಾಜಮನೆತನದ ಸೇವಕ ಮತ್ತು ಸೈನ್ಯ ದಳದಲ್ಲಿ ಸಲಿಂಗಕಾಮಿ ಸಂಬಂಧಗಳು ನಿಷಿದ್ಧವಾಗಿದ್ದುದರಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ಪೌಲ್ ತನ್ನ ಮೊದಲ ಒಡತಿ ರಾಣಿ ಎಲಿಜಬೆತ್ ರ ಪತಿ ರಾಜ ಫಿಲಿಪ್ ರ ಸೇವಕಿ ಮರಿಯಾಳನ್ನು ವಿವಾಹವಾದರು ಎಂದೂ ಹೇಳಲಾಗುತ್ತದೆ. ಈವರೆಗೆ ಪೌಲ್ ಇದರ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕ್ಯಾಮೆರಾದ ಮುಂದೆ ನೀಡಿಲ್ಲ. ಡಯಾನಾರ ರಹಸ್ಯಗಳು ತನ್ನ ಸಾವಿನೊಡನೆಯೇ ಗೋರಿ ಸೇರುತ್ತವೆ ಎಂದು ಪೌಲ್ ಈವರೆಗೆ ಹೇಳುತ್ತಾ ಬಂದಿದ್ದಾರೆ. ಅಂತೆಯೇ ತನ್ನ ವೈಯಕ್ತಿಕ ಜೀವನದ ರಹಸ್ಯಗಳ ಸುಳಿವನ್ನೂ ಕೂಡ ಇಂದಿನವರೆಗೂ ತಳ್ಳಿಹಾಕುತ್ತಾ ಬಂದಿದ್ದಾರೆ.  

ಜೀವನವೆಂಬ ಹಾವು-ಏಣಿಯ ಆಟದಲ್ಲಿ ಪೌಲ್ ಸಾಕಷ್ಟು ಏರುಪೇರುಗಳನ್ನು ಅನುಭವಿಸಿದ್ದಾರೆ. ಪೌಲ್ ರವರು ಒಟ್ಟಾರೆ ಬರೆದ ಮೂರನೇ ಕೃತಿ, ಆದರೆ ರಾಜಕುಮಾರಿ ಡಯಾನಾ ಮತ್ತು ತನ್ನ ನಡುವಿನ ಶುದ್ಧ ಒಡತಿ-ಸೇವಕ ಸಂಬಂಧದ ಅನುಭವ ಮಾಲೆಯ ಬಗ್ಗೆ ಬರೆದ ಎರಡನೇ ಕೃತಿ "ದ ವೇ ವಿ ಆರ್ : ರಿಮೆಂಬರಿಂಗ್ ಡಯಾನಾ"  ಕೂಡ ಮಿಶ್ರ ಪ್ರತಿಕ್ರಿಯೆಯನ್ನು ಗಳಿಸಿಕೊಂಡಿತು. ರಾಜಕುಮಾರಿಯ ಬಗ್ಗೆ ಇನ್ನು ಏನನ್ನೂ ಬರೆಯಹೋಗುವುದಿಲ್ಲ ಎಂದು ಹಿಂದೊಮ್ಮೆ ಪೌಲ್ ಹೇಳಿದ್ದರು. ಆದರೂ ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಹುಡುಕಾಟದಲ್ಲಿ ಆಗಾಗ್ಗೆ ಪೌಲ್ ಹಿಂದೆ ಬೀಳುತ್ತಾರೆ. ಕೊನೆಯ ಬಾರಿ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡ್ಲ್ ಟನ್ ವಿವಾಹ ಸಮಾರಂಭದಲ್ಲಿ ಪೌಲ್ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. "ರಾಜಕುಮಾರಿ ಕೇಟ್ ವ್ಯಕ್ತಿತ್ವ ಡಯಾನಾರನ್ನು ಹೋಲುತ್ತದೆ" ಎಂದು ಪೌಲ್ ತಮ್ಮದೇ ಹೆಸರಿನ ಅಧಿಕೃತ ಬ್ಲಾಗ್ ನಲ್ಲಿ ಹೇಳಿಕೊಂಡಿದ್ದಾರೆ. ಕಮಿಲ್ಲಾರನ್ನು ಮುರಿದುಬಿದ್ದ ವಿವಾಹದಲ್ಲಿ ಪರೋಕ್ಷವಾಗಿ ಉಲ್ಲೇಖಿಸುತ್ತಾ ಈ ಮದುವೆಯಲ್ಲಿ ನಾವು ಮೂವರಿದ್ದೆವು ಎಂದು ಡಯಾನಾ ಹೇಳುತ್ತಿದ್ದರಂತೆ. ಡಯಾನಾರ ಮರಣಾನಂತರ ಮಾನಸಿಕವಾಗಿ ಸಾಕಷ್ಟು ಜರ್ಝರಿತರಾಗಿದ್ದ ಪೌಲ್ ಬಗ್ಗೆ ನೊಂದುಕೊಳ್ಳುತ್ತಾ ಪೌಲ್ ಪತ್ನಿ ಮರಿಯಾ ಎಲ್ಲೋ ಒಂದು ಕಡೆ ತಮ್ಮ ವಿವಾಹದ ಜೀವನದ ಬಗ್ಗೆಯೂ ಚಿಂತಿತರಾಗಿದ್ದರು. ಮರಿಯಾ ಕೂಡ ಡಯಾನಾರನ್ನು ಉಲ್ಲೇಖಿಸುತ್ತಾ ಕೆಲವೊಮ್ಮೆ ನನ್ನ ಮದುವೆಯಲ್ಲೂ ಮೂವರಿರುವಂತೆ ಭಾಸವಾಗುತ್ತದೆ ಎಂದು ಹೇಳಿದ ಅಸಹಾಯಕತೆಯ ಮಾತನ್ನು ಪೌಲ್ ನೆನಪಿಸಿಕೊಳ್ಳುತ್ತಾರೆ. ಡಯಾನಾರ ಮರಣಾನಂತರ ಅವರ ಬಗ್ಗೆ ಬಹಳಷ್ಟು ಕೃತಿಗಳು ಬಂದುಹೋದವು. ಆದರೂ ಪೌಲ್ ರ ಪದಗಳು ಇವೆಲ್ಲದರ ಮಧ್ಯೆ ತನ್ನದೇ ಆದ ನೆಲೆಯನ್ನು ಕಂಡುಕೊಳ್ಳುತ್ತವೆ. ಯಾರು ಏನೇ ವಿಮರ್ಶಿಸಿದರೂ ರಾಜಮನೆತನದ ಮತ್ತು ಡಯಾನಾರ ಖಾಸಗಿ ಜೀವನದ ಹಲವು ರಹಸ್ಯಗಳು ಅವರೊಂದಿಗೆಯೇ ಸಮಾಧಿಯಾಗಿವೆ. ಕಾಲ ಕಳೆದಂತೆ ಇನ್ನಷ್ಟು ಸತ್ಯಗಳು ಒಂದೊಂದಾಗಿ ಹೊರಬೀಳಬಹುದು ಎಂಬುದರ ಹೊರತಾಗಿ ಇನ್ನೇನೂ ಹೇಳುವ ಹಾಗಿಲ್ಲ.  

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Vasuki Raghavan
10 years ago

Very interesting and informative!

1
0
Would love your thoughts, please comment.x
()
x