ಮಿಂಚುತಾರೆಗಳ ಬೆಳದಿಂಗಳು: ಹೆಚ್. ಷೌಕತ್ ಆಲಿ

ಯುವ ಕವಿ ಗುರು ಹಿರೇಮಠರ ಬೆಳಂದಿಗಳು ಚುಟುಕು ಕವಿತೆಗಳ ಸುಂದರ ವಿಚಾರ ಲಹರಿ. ಕವಿಯ ಅಂತರಂಗದಲ್ಲಿ ಹೊಕ್ಕಿನೋಡಿದಾಗ ಒಬ್ಬ ಸತ್ಯ ಅನ್ವೇಷಕ, ಮಮತೆ ವಾತ್ಸಲ್ಯಮಯಿಯಾಗಿ, ಪ್ರೀತಿಯ ಚಿಲುಮೆಯ ನಲ್ಮೆಯ ಪ್ರೇಮಿಯಾಗಿ, ಪ್ರಕೃತಿಪುರುಷನಾಗಿ ಸಂತನಾಗಿ ಕಾವ್ಯಕುಸುರಿಯಲ್ಲಿ ಸಂಶೋಧನೆ ನಡೆಸಿದಂತೆ ನನಗೆ ಅರಿವಿಲ್ಲದೇ ನನಗೆ ಇಷ್ಟವಾದರು ಗುರು.

ತನ್ನಷ್ಟಕ್ಕೆ ತೆರೆದುಕೊಳ್ಳುವ ಈ ಕೃತಿಯ ಒಂದೊಂದು ಕವಿತೆಯು ಹೊನ್ನಹೂವುಗಳಾಗಿ ಓದುಗರು ಯಾರೆ ಆಗಿರಲಿ ಮನಸ್ಸಿಗೆ ಮುದ ನೀಡುತ್ತ ಕಾವ್ಯದ ಪಾವಿತ್ರ್ಯತೆಯನ್ನು ಪರಿಚಯಿಸುವ ಪ್ರಯತ್ನ ಫಲಕಾರಿ ಎಂದೆನಿಸಿತು. ಈ ಕೃತಿಯ ಬಗ್ಗೆ ನಾಲ್ಕು ಪದ ಬರೆಯಲೆತ್ನಿಸಿತು. ನನ್ನ ಲೇಖನಿಯು ಗುರುರವರ ಕವಿತೆಗಳಿಗೆ ನಾನು ಸಾತ್ ನೀಡುವುದರಲ್ಲಿ ಅರ್ಥವಿದೆ ಎಂದೆನಿಸಿತು.

“ಸಂಜೆ ಹೊತ್ತು
ದೀಪ ಹಚ್ಚಿಟ್ಟು ಹೋದ ಅಪ್ಪ
ಮರಳಿ ಬರಲೇ ಇಲ್ಲ
ದೀಪ ಇಂದಿಗೂ ಆರಿಲ್ಲ”

ಎಂಬ ಕಾವ್ಯದ ಸಾಲು ಚನ್ನಾಗಿದೆ. ಜಗತ್ತಿಗೆ ಬೆಳಕ ಕೊಟ್ಟ ಭಗವಂತ ಸೂರ್ಯ ಚಂದ್ರರನ್ನು ನಿರಂತರವಾಗಿ ಬೆಳಕು ನೀಡುವಂತೆ ಮಾಡಿದ. ಅಪ್ಪ ಕೊಟ್ಟ ಜ್ಞಾನ ನಮಗೆ ಕಡೆಯನಕ ಜೀವಂತ ಅನ್ನುವ ಸತ್ಯದ ಅರಿವು ಈ ಕವಿತೆಯು ಮಾಡಿದಂತೆ ಇದೆ. ಈ ಕೃತಿಯಲ್ಲಿ ಇರುವ ಎಲ್ಲಾ ಕವಿತೆಗಳಿಂದ ಮೊದಲ ಸ್ಥಾನ ನೀವು ನೀಡಿದೀರಿ, ಅಲ್ಲೇ ಒಬ್ಬ ನಿಷ್ಠವಂತ ಕವಿಯ ಜನನವಾಗಿರುವ ಸತ್ಯ ತಂದೆಯ ರೂಪದಲ್ಲಿ ಬಂದಿರುವ ಭಗವಂತ ಸತ್ಯ ಸಾಕಾರ.

“ಅವ್ವನ ಸೆರಗು ನೋಡಿ
ಕತ್ತಲಲ್ಲಿ ಅಪ್ಪ ಅತ್ತಿದ್ದು
ಬೆಳದಿಂಗಳಿಗೆ ಮಾತ್ರ ಗೊತ್ತಿತ್ತು
ಹೀಗಾಗಿ ಅವಳಿಗೆ ಬೆಳದಿಂಗಳು ಇಷ್ಟ”

ತಂದೆ ತಾಯಿ ಬಗ್ಗೆ ಕವಿ ಅಷ್ಟೇ ಅಲ್ಲ ಓದುಗರಿಗೂ, ನಾನು ಸೇರಿದಂತೆ ಕಣ್ಣು ತೇವವಾದರೆ ಮನಸ್ಸು ಮುದುಡುವಂತಾಗುವುದು ಸಹಜ. ಈ ಕವಿತೆಯಲ್ಲಿ ಬಡತನವಿರಬಹುದು, ನೋವು, ನಿರಾಶೆ, ಹತಾಶೆ ಏನೇ ಇದ್ದರೂ ದುಃಖವನ್ನು ಪರಸ್ಪರ ಹಂಚಿಕೊಂಡು ನಾಳಿನ ಭರವಸೆಯ ಬೆಳಕಿಗೆ (ಬೆಳದಿಂಗಳು) ಹಾತೊರೆಯುವುದು, ಬದುಕು ಬವಣೆಯ ಚಿತ್ತಾರವೇ ಗುರುರವರ ಲೇಖನಿಯಿಂದ ಮೂಡಿ ಓದುಗರ ಕಂಬನಿಯವರೆಗೆ ಪಯಣ ಸಾಗಿದೆ.

“ಕವನಗಳೆಂದರೆ
ಹಕ್ಕಿಗಳಂತೆ……..”

ಕವಿತೆ ಕಟ್ಟುವ ಕಾಯಕ ಕವಿಯ ಕರ್ಮ. ವರಕವಿ ಬೇಂದ್ರೆಯವರ ‘ಹಕ್ಕಿಯೂ ಹಾರುತಿದೆ ನೋಡಿದಿರಾ’ ರಸ ಋಷಿ ಕುವೆಂಪುನವರ ‘ ದೇವರು ರುಜು ಮಾಡಿದನು’ ಕವಿತೆಗಳಸಾಲುಗಳು ನೆನಪಿನ ಅಂಗಳದಲ್ಲಿ ಸುಳಿದಾಡಿದವು. ಹಕ್ಕಿಗಳ ಹಾರಾಟದಂತೆ ಕವನವು ಹತ್ತಾರು ಓದುಗರ, ಹಲವಾರು ವಿಮರ್ಶಕರ ಮೆಚ್ಚುಗೆಗಾಗಿ, ಪ್ರಶಂಸೆಗಾಗಿ ಪ್ರಗತಿಗಾಗಿ ಉನ್ನತ ಸ್ಥಾನದಕ್ಕಲಿ ಇಲ್ಲಿ ಕವಿಯ ಭಾವ ಸ್ವಚ್ಛಂದವಾಗಿ ಮೂಡಿಬಂದಿದೆ.

“ಬರೆದಷ್ಟು ನನ್ನೊಳಗೆ ನಾನು
ಮೌನವಾಗುತ್ತೇನೆ.........” 

ಕವಿಯ ಅಂತರಂಗ ಚಿಂತನೆ ನಡೆಸುತ್ತಿರುವಾಗ ಕವಿಯು ಮೌನವಾಗಿಯೇ ಇರಬೇಕು. ಇಲ್ಲವೆಂದರೆ ಭಾವನೆಗಳು ಚಿಗುರುವುದೆಂತು? ಕವಿತೆಯ ರೂಪತಾಳಿ ಮೌನದಲ್ಲೇ ಮನಸಾರೆ ನಕ್ಕಿ ಬಿಡುವ ತೃಪ್ತಿ ಪಡುವ ಪ್ರೇಮ ಕವಿ ಪ್ರೀತಿಯ ಕಡಲಾಳಕ್ಕೆ ವಿಹರಿಸಿ ಮುತ್ತನ್ನು ಹುಡುಕಿ ತರುವ ಪ್ರಯತ್ನ ಮಾಡಿದ್ದಾರೆ.

“ನದಿ ನೀನು
ಒಮ್ಮೆ ಹರಿದು ಬಂದು ಬಿಡು ಸಾಕು……..”

ಇಲ್ಲಿಯೂ ಕವಿಯ ಹೃದಯ ವೈಶಾಲ್ಯತೆ ನದಿಗೂ ಮೀರಿದ್ದು. ಈ ಮರುಭೂಮಿಯನ್ನು ತಣಿಸಿ ಹೋಗುವ ಮಳೆಯಂತೆ ಈ ಇಳೆಗೆ ಹಸಿರ ರೂಪ ನೀಡುವ ಪ್ರಕೃತಿ ಪ್ರೇಮ ಕವಿಯಲ್ಲಿ ಅಪಾರವಿದೆ.

    “ಇತ್ತೀಚೆಗೆ ಮೌನವೂ
    ಸಹ ಎಲ್ಲವನ್ನೂ
    ತೂಕ ಮಾಡಿಕೊಡುತ್ತಿದೆ......”

ಮೌನದ ಭಾಷೆಯ ಮನಸ್ಸಿನ ಗೀತೆ ಹೃದಯದಲ್ಲಿ ಗುನುಗುತ್ತಿರುವ ಆಲಿಸುವ ಭಾವನೆಗಳನ್ನು ಅರ್ಥಮಾಡಿಕೊಂಡಿಲ್ಲ ಅಂದಮೇಲೆ ನಗಬೇಕೋ ಅಳಬೇಕೊ ತಿಳಿಯದೆ ಹೋದಾಗ ನಗುವ ಸಂಭ್ರಮವಿದ್ದರೂ ಮೌನದ ಆಸರೆಯಲ್ಲೆ ಎಲ್ಲವೂ ಅನುಭಿಸಬೇಕಾಗುತ್ತೆ. ಕವಿಗೂ ಆಗಿರಬಹುದಾದ ಅನುಭವವೂ ಇಲ್ಲಿ ಸೇರಿದೆ.

“ಹಸಿವು ನೀಡುವಷ್ಟು
ಅವಕಾಶ
ಮತ್ತೊಂದು ನೀಡುವುದಿಲ್ಲ”

ಕನಕದಾಸರ ವಾಣಿಯಂತೆ ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಇಲ್ಲಿ ಕವಿಯ ಅಂತರಂಗವಾಗಿದೆ.ಜಗತ್ತಿನ ಎಲ್ಲಾ ವ್ಯಾಪಾರ ವ್ಯವಹಾರ, ವಹಿವಾಟುಗಳಿಗಾಗಿ ಅನೇಕ ಕಾರಣಗಳು ಇದ್ದರೂ ಅದರ ಹಿಂದೆ ಇರುವುದೇ ಹಸಿವು. ಹಸಿದವರಿಗೆ ಅನ್ನದ ಹುಡುಕಾಟ, ಒಂದು ದೊಡ್ಡ ಸವಾಲಾಗಿ ಹೊಸ ಅನ್ವೇಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ರೀತಿಯ ಇನ್ನೂ ಅನೇಕ ಕವಿತೆಗಳು ನನಗಿಷ್ಟವಾಗಿವೆ. ಈಗಲೂ ನೆನಪಾಗುತ್ತಿವೆ.

ಒಟ್ಟಾರೆ ಗುರುರವರ ಬೆಳದಿಂಗಳು ಓದುಗರ ಮನಸ್ಸಿನಲ್ಲಿ ಉಳಿಯುವಂತಹ ಕವಿತೆಗಳನ್ನು ಮತ್ತೆ ಮತ್ತೆ ಮೆಲಕು ಹಾಕುವಂತಹ ಕವಿತೆಗಳಾಗಿವೆ. ತಂದೆ ತಾಯಿಯ ಬಗ್ಗೆ ದೇವರಷ್ಟೆ ಗೌರವ ಭಕ್ತಿಗಳಿವೆ. ಪ್ರಕೃತಿಪ್ರೇಮ ಸಹಜವಾಗಿವೆ. ವಯಸ್ಸಿಗೆ ತಕ್ಕ ಕಲ್ಪನೆ ಕಾಮನೆಗಳು ಹೆಣ್ಣಿನ ಸೌಂದರ್ಯಕ್ಕಾಗಿ ರಚಿಸಲ್ಪಟ್ಟ ಕವಿತೆಗಳಿಗೆ ನಕ್ಷತ್ರಗಳ ಮಿಂಚು ಹೂಗಳ ಪರಿಮಳ, ಹೃದಯದ ಭಾವ ಸರಳ ಕನ್ನಡದ ಪದಗಳಲ್ಲಿ ಒಂದೊಂದು ಮುತ್ತು ಪೋಣಿಸಿದ ಹಾರದಂತೆ ಇದೆ.

ಗುರು ನಿಮಗೊಂದು ಮಾತು ಕಾವ್ಯ ಕವಿಗೆ ಮಾತ್ರವಲ್ಲ ತನ್ನ ಬಳಗಕ್ಕೆಲ್ಲ ಸಮುದಾಯಕ್ಕೆಲ್ಲ ಈ ನೆಲ ಜಲ ಭಾಷೆಯ ರಕ್ಷಣೆಗೆ ನೀವು ತಾಳಿರುವ ನಿಲುವುಗಳನ್ನು ಧಾರೆಯೆರೆಯುವಂತಹ ಮುಂದಿನ ಕವಿತೆಗಳು ರೂಪುಗೊಳ್ಳಲಿ. ಒಬ್ಬ ಕವಿಯೂ ನಿರಂತರ ಓದುಗನಾಗಲೇಬೇಕು. ಪ್ರಸ್ತುತ ಸಮಸ್ಯೆಗಳಿಗೆ ಸ್ಪಂದಿಸುವ ಕವಿತೆಗಳ ರಚನೆ ನಿಮ್ಮಿಂದ ನಿರೀಕ್ಷಿಸುತ್ತೆನೆ. ನಿಮಗೆ ಶುಭವಾಗಲಿ.

ಹೆಚ್. ಷೌಕತ್ ಆಲಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x