ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 11 & 12): ಎಂ. ಜವರಾಜ್

೧೧-
ಅಲಲಲಲೇ ಇದೇನ ಇದು
ಗರಿಗರಿ ಪಿಲ್ಲ ಪಂಚ ಜಾರ್ತ
ನನ್ನ ಮೈನ ಸೋಕ್ತ
ಮಣಮಣನೆ ಮಾತಾಡ್ತ
ಬೀದಿ ಧೂಳ ತಾರುಸ್ತ ಏಳುಸ್ತಲ್ಲೊ..

‘ನೀ ಯಾವೂರ್ ಸೀಮೆನಪ್ಪ
ನೀ ಯಾಕ ಈ ಅಯ್ನೋರ್ ಕಾಲ್ಗಾದೆ
ನಾ ಈ ಅಯ್ನೋರ ಸೊಂಟ ಸೇರಿ
ನೋಡಬಾರದ ನೋಡ್ದಿ
ಕೇಳಬಾರದ ಕೇಳ್ದಿ ಶಿವಶಿವ
ಆ ನೀಲವ್ವೋರ ನೋಡ್ದೆಯಲ್ಲೊ
ನಾ ನೋಡ್ದೆ ಇರ ಜಿನ್ವೆ ಇಲ್ಲ
ನಾ ಕೇಳ್ದೆ ಇರ ಜಿನ್ವೆ ಇಲ್ಲ’
ಅಂತಂತ ಮಾತಾಡ್ತಲ್ಲೊ…

ನಾ ಕೇಳ್ತ
ನೀಲವ್ವೋರು ಕಣ್ಮುಂದ ಬರ್ತಾ
ಸಂಕ್ಟ ಉಕ್ಕಿ ಉಕ್ಕಿ ಹರಿತಾ
ಅದೇನ ಬಿಡ್ಸಿ ಹೇಳಲೆ
ಅಂತ ಪಿಲ್ಲ ಪಂಚ್ಗ ರೇಗ್ದ ದೆಸ್ಗ
‘ಅಪ್ಪೊಯ್ ಕ್ಯಾಣ ಯಾಕ
ಆ ನೀಲವ್ವೋರ್ ಬರೋಕು ಮುಂಚೆ
ದೇವಮ್ಮೋರು ಇದ್ರು
ಆ ದೇವಮ್ಮೋರು ಸಾಕ್ಷಾತ್ ದೇವ್ತಿ
ಆ ದೇವ್ತಿ ಕರುಳೆ ಆ ಶಂಕ್ರಪ್ಪ
ಆ ಶಂಕ್ರಪ್ಪೊರು ಬಂದಾಗ್ಲೆ ನಾ ಬಂದುದು
ಆ ದೇವಮ್ಮೊರು ತವರಿಗೋದ್ರು
ನಾ ಬಂದಾಗ್ಲೆ ಅದ್ಯಾವಳೊ ಬತ್ತಿದ ಹೊಯ್ತಿದ್ದ
ಈ ಅಯ್ನೊರು ನನ್ನ ಬಿಚ್ಚಿ ಎಸೆಯೋರು
ಆ ಕತ್ಲಲಿ
ನಾ ಎಲ್ಬಿದ್ದಿ
ನೆಲುಕ್ ಬಿದ್ನೊ
ಚಾಪೆಲೆ ಬಿದ್ನೊ
ಅವಳ ಮೇಲೇ ಬಿದ್ನೊ
ಒಂದೂ ಗೊತ್ತಾಗ್ದೆ
ಆ ಕತ್ಲೊಳ್ಗೆ ನಾನಂತು ಓಡಾಡತರ ಆಗದು
ಇನ್ನೊಂದ್ ರಾತ್ರ ಇನ್ನೊಬ್ಬ ಬರವ..
ಈ ಅಯ್ನೊರೊವ್ವ ಶಂಕ್ರವ್ವ ಹಜಾರಲಿ
ಕಣ್ಣು ಕತಿ ಕಾಣ್ದೆ ಕೂಗಾಡ್ತ
ದೊಣ್ಣ ಸದ್ದು ಮಾಡ್ತ
ಚಟೀರ್ ಚಟೀರ್ ಅನ್ಸೋಳು..’

ನೂರೆಂಟ್ ರಾತ್ರ ಕಳಿತಾ
ದೇವಮ್ಮೋರು ಕಂಕಳಲ್ಲಿ
ಅಸುಗೂಸು ಕಿಲಕಿಲ ನಗ್ತಾ ಆಡ್ತಾ
ವಾರಾಯ್ತು ತಿಂಗ್ಳಾಯ್ತು ವರ್ಷಾಯ್ತು
ಸೂರ್ಯ ಮುಳಗ ಹೊತ್ಲಿ
ದೇವಮ್ಮೋರು ಮಲ್ಲಿಗೆ ಮೆಳದ ಬುಡ್ದಲ್ಲಿ
ನೊರ ಕಚ್ಕಂಡು ಬಿದ್ದಿರ ಸುದ್ದಿ ಗವ್ವರಾಕತಲ್ಲೊ..

ನನ್ನ ಅಲ್ಲೆ ವತಾರನೆ ಒಗ್ದು ಒಣಗಾಕಿ
ಒಣಗಿದ ಗರಿಗರಿ ಅಂತಿದ್ದ ನನ್ನ ಎತ್ತಿ ಒಳಗಾಕಿ ಅದೇನ ಮರ್ತವ್ರ್ ತರ ತಲೆ ಬೆಂಟ್ತ
ತಿರಗಾ ಹಿತ್ಲಿಗೆ ಹೋದ್ರಲ್ಲೊ..

ಆ ಕೂಸು ಅಳ್ತ ಅಳ್ತ
ಕಣ್ಣು ಕತಿ ಕಾಣ್ದ ಶಂಕ್ರವ್ವ
ತವಿತಾ ತವಿತಾ ಕೂಸ ಎತ್ಗಂಡು ಮುದ್ದಾಡ್ತ
ಲೇ ದೇವಿ ಬಾರಲೇ
ಅಲಲ ಅಲಲ ಅಲಲ
ಜೋಗುಳ ಆಡ್ತ ಆಡ್ತ
ದೇವಮ್ಮೊರು ಬಿದ್ದ ಸುದ್ದಿ ತಿಳಿದೆ
ಪೇಚಾಡ್ತ ಜೋಗುಳ ಆಡ್ತ
ಅಯ್ನೊರು ಬಂದು ಅಳೊ ಕೂಸ ಎತ್ಕಂಡು
ಬಾಯಿ ಬಡಿತಾ
ಲೇ ಅವ್ವೊ ದೇವಿಗಾವು ಕಚ್ತಲ್ಲೊ
ನಿಂಗೊತ್ತಾಗ್ನಿಲ್ಲೊ ಅವ್ವೊ..
ಶಂಕ್ರವ್ವ ತವಿತಾ ತವಿತಾ
ಮೊಮ್ಮಗೂಸ ಎತ್ಕಂಡು ಗೋಳಾಡ್ತ
ಲೇ ದೇವೇಯ್ ಏನಾಯ್ತಲೇ
ಲೇ ದೇವೇಯ್ ನಿಂಗೇನಾಯ್ತೆಲೇ
ಅದ್ಯಾವ ಹಾವಲೇ ಕಚ್ತು ನಿಂಗೆ
ಈ ಅಸುಗೂಸ ಬುಟ್ಟು ತಬ್ಬಲಿ ಮಾಡ್ದೆಲ್ಲೆ

ಅಯ್ನೋರು ಹಜಾರಲಿ ಬಿದ್ದು ಒದ್ದಾಡ್ತ
ನನ್ನ ಬಾಚಿ ಎತ್ಕಂಡು
ಮೂಗ್ಲಿ ಸುರಿಯೋ ಗೊಣ್ಣ ಒರುಸ್ಕಂಡು
ಆ ಅಸುಗೂಸ ರೋದನೆ ತೀರದಾಗಿತಲ್ಲೊ..

ಆ ಕೂಸ್ಗ ಅವ್ವನ್ನೋಳು ಬರಬೇಕಲ್ಲ
ಶಂಕ್ರವ್ವ ಅಯ್ನೊರ್ ಬೆನ್ನ ಬಿದ್ಲಲ್ಲ
ವರ್ಷೊಂಬತ್ತು ಕಳೆದ್ರಲ್ಲಿ
ನೀಲವ್ವ ಮನ ತುಂಬ್ಕಡ್ಲಲ್ಲಾ..
ಶಂಕ್ರವ್ವ ತೀರ್ಕಂಡು ಆ ಅಸುಗೂಸ್ಗ
ಶಂಕ್ರವ್ವನ ಹೆಸ್ರ ಇಟ್ರಲ್ಲಾ…
ಆ ನೀಲವ್ವನ ಕೆಲ್ಸೆಲ್ಲ ಆ ಕೂಸ್ನ ನೋಡ್ತ
ಆಡುಸ್ತ‌ ಬೆಳಿಸ್ತ ನಗಾಡ್ತ ಓಡಾಡ್ತ ಇದ್ಲಲ್ಲೊ
ಈ ಅಯ್ನೊರು ವಾರೊಪ್ಪತ್ತು
ಆಚೀಚೆ ಬಂದು ಹೋಗ್ತಾ
ನೀಲವ್ವನ ಹೊಟ್ಟ ತುಂಬ್ಲಿಲ್ವಲ್ಲಾ..

ನೀಲವ್ವನ ಹೊಟ್ಟ ಯಾಕಾರು ತುಂಬ್ಲಿಲ್ಲ
ನನ್ನ ತಗ್ದು ತೊಲೆಗೆ ಹಾಕಿ
ನೀಲವ್ವನ ಕತ್ತಿಗೆ ಬಿಗ್ದು
ಬೀಡಿ ಕಚ್ಚಿ ಕೂತ್ರಲ್ಲ
ಬಿಗಿದ ಗಂಟು ಬಿಚ್ಚಿ ನೀಲವ್ವ ಬಿದ್ರಲ್ಲ..’

***

೧೨-

ಅಯ್ಯೊ ಶಿವನೆ ನೀ ಹೇಳ್ತ ಇದ್ರ
ನಂಗೀಗ ತಡಿಯಾಕಾಗ್ತಿಲ್ವಲ್ಲಾ..
ಈ ಅಯ್ನೋರ್ ಪಾದ
ಈ ಕಾದ ಧೂಳೊಳಗ ಸೇರ್ಕಂಡು
ಗಿರ್ಕಗಿರ್ಕನೆ ಸದ್ದು ಮಾಡ್ತ
ಆ ಸದ್ದಿಗೆ ಧೂಳು ಮೇಲೇಳ್ತ
ನಾ ದಿಕ್ಕ್ ದಿಕ್ಕಿಗೆ ನೋಡ್ತ
ಕಣ್ಣೀರ್ಕಚ್ಕಂಡಿದ್ದ ಆ ಪಿಲ್ಲ ಪಂಚವ
ಬೆಂಟಿ ಬೆಂಟಿ
ಅಳಬ್ಯಾಡ ಸುಮ್ನಿರು
ನಂಗೂ ಅಳ ಬತ್ತುದ
ಆಮೇಲೇನಾಯ್ತು ಶಿವನೇ…

ನೀಲವ್ವ ಬಿದ್ದ ಜಾಗ್ದಲ್ಲಿ
ಗುಕ್ಕಗುಕ್ಕನೆ ಕೆಮ್ತ ಕೆಮ್ತ
ಅಳ್ತ ಗೋಳಾಡ್ತ ಎದ್ದು ಈಚ ಹೋಗಾಕು
ಶಂಕ್ರ ಅವ್ವೋ ಅವ್ವೊ ಅನ್ನಾಕು ಸರಿಯಾಗಿ
ಬೀಡಿ ಸೇದ್ತ ಇದ್ದ ಅಯ್ನೋರು
ದಡದಡನೆ ಮೇಲೆದ್ದು
ತೊಲೆಗೆ ಕಟ್ಟಿದ್ದ ನನ್ನ ಬಿಚ್ಚಿ
ಸೊಂಟಕ್ಕೆ ಕಟ್ಕಂಡು ಓಡೋಡಿ ಈಚ ಬಂದು
ಶಂಕ್ರುನ್ನ ಕೂಗ್ತ ನಗತರ ಆಡ್ತ
ಜಗುಲಿಲಿ ಕಂಬ ಒರಗಿ ಕುಂತ್ನಲ್ಲೊ…

ಶಂಕ್ರು ಅಯ್ನೋರ್ ದಿಕ್ಕ ನೋಡ್ದೆ
ನೀಲವ್ವನ ತಂಬ್ಕೊಂಡು ತೊಡೆ ಏರುದ್ನಲ್ಲಾ..
ನೀಲವ್ವ ಶಂಕ್ರನ ತಬ್ಕಂಡು
ಅಳಳ್ತ ಮುತ್ತಿಕ್ಕಂಡು
ನೀ ಎಲ್ಲು ಹೋಗ್ಬ್ಯಾಡ
ಸ್ಕೂಲ್ಗು ಹೋಗ್ಬ್ಯಾಡ ನನ ಕಂದೋ..

ನೀಲವ್ವನ ಅಳು ಶಂಕ್ರನ ತಾಕಿ
ಮಿಕಿಮಿಕಿ ನೋಡ್ತ ನೋಡ್ತ
ನೀಲವ್ವನ ಕಣ್ಣಿಂದ ಹರಿಯೋ
ಕಣ್ಣೀರ್ಗ ಬೆರಳಾಡಿಸಿ
ಅವ್ವೊ ಅವ್ವೊ ಯಾಕವ್ವೊ
ನಾ ನಿನ್ಜೊತನೆ ಇರ್ತಿನವ್ವೊ
ನೀ ಅಳಬ್ಯಾಡವ್ವೊ
ನೀ ಅತ್ರ ನಂಗು ಅಳಂಗಾಯ್ತುದವ್ವೊ…

ಈ ಅಯ್ನೋರು
ಆ ಶಂಕ್ರನ ಮಾತ ಕೇಳ್ಕಂಡು
‘ಏ ಬಂಚೊತ್ ಇಲ್ಲಿದ್ಕಂಡು ಏನ್ಮಾಡ್ದಯ್
ಅವ್ಳಿಗ ಕೇಮಿ ಇಲ್ಲ ನಿಂಗೂ ಇಲ್ವ
ಬಂಚೊತ್ ನಾಕಕ್ಷರ ಕಲಿಬ್ಯಾಡ್ವ
ಈ ಬೇವರ್ಸಿ ಹೇಳ್ದ ನೀ ಕೇಳ್ದ
ಏಳಲೇ..
ಅಂತ
ಶಂಕ್ರುನ ಎಳುದು
ನೀಲವ್ವನ ಎದೆಗೆ ಒದ್ನಲ್ಲೊ
ಶಂಕ್ರು ಕಿಟ್ಟನೆ ಕಿರುಚಿ
ಅವ್ವೊ ಅವ್ವೊ
ಅನ್ಕಂಡು ಓಡ್ಬಂದು ತಬ್ಬಿಕೊಳ್ತ
ಅಪ್ಪೊ ಅಪ್ಪೊ ಬ್ಯಾಡಪ್ಪೊ ಅಂತ
ಈ ಅಯ್ನೋರ
ನೀರ್ದುಂಬಿಕೊಂಡ ಕಣ್ಲಿ ನೋಡ್ತಾ ನೋಡ್ತಾ
ಶಂಕ್ರನು ಬೆಳಿತಾ ಮೈ ತುಂಬ್ಕತಾ
ಆ ನೀಲವ್ವನೂ
ಆ ಶಂಕ್ರನ ಕಣ್ಗಾವಲಲಿ ಬಾಳಾಟ ಮಾಡ್ತ
ಈ ಅಯ್ನೋರ್ಗು ಒಂದೋಚ್ನೆ ಆಗಿ
ಶಂಕ್ರನ್ಗು ಒಂದು ಕಂಕಣ ಭಾಗ್ಯ ಕೂಡುಸ್ತ
ಆ ಸೊಸೆನು ವರ್ಷೊಂಬತ್ತಲ್ಲಿ
ಹೊಸಿಲು ದಾಟಿ ಹೋಗಿ
ಆ ನೀಲವ್ವನೂ
ಈ ಅಯ್ನೋರ್ ಕಿದ್ದಂಡಲಿ ಜೀವ ಹಿಂಡ್ಕಂಡು
ಉಸಿರು ಬುಡದ ರೀತಿಲಿ
ಬಾಳಾಟ ಮಾಡಂಗಾಯ್ತಲ್ಲೊ
ಅಂತಂತ ಹೇಳ್ತ ಅಳ್ತ ಇದ್ದಂಗೆ
ಈ ಅಯ್ನೋರು
ಆ ಪಿಲ್ಲ ಪಂಚವ ಮೇಲೆತ್ತಿ ಕಟ್ಕಂಡು
ಓಣಿಲಿರ ಆಲದ ಮರದ ಬುಡದ
ನೆರಳಲ್ಲಿ ಕುಂತ್ರಲ್ಲ..

ನಾ ನೋಡ್ತ
ಪಿಲ್ಲ ಪಂಚದ ಮಾತ್ಗ ಅಳ್ತ
ಈ ಅಯ್ನೋರು ಮುಖನೆಲ್ಲ ಕಿವುಚುತ್ತ
ನನ್ನ ಆ ಮರದ ಬುಡದಲ್ಲಿ ಬುಟ್ಟು
ಹೆಗಲಲ್ಲಿದ್ದ ಟರ್ಕಿ ಟವಲ್ಲ ಮಡ್ಸಿ
ತಲೆ ದಿಂಬು ಮಾಡ್ಕಂಡು ಒರಗಿದರಲ್ಲೊ..

ಶಿವನೇ ಏನಪ್ಪ ಈ ಬಿಸ್ಲು
ಬೇಯೊ ಬಿಸ್ಲು…

ಎಂ. ಜವರಾಜ್‌


ಮುಂದುವರೆಯುವುದು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x