ಮಾಯಕಾರ: ತಿರುಪತಿ ಭಂಗಿ

ತಮ್ಮ ತಲೆಯಲ್ಲಿ ಅಲ್ಲಲ್ಲಿ ಹುಟ್ಟಿಕೊಂಡ ಬಿಳಿ ಕೂದಲು ನೋಡಿದೊಡನೆ ಅವತ್ತು, ತನ್ನ ವಯಸ್ಸು ದಿನೆದಿನೆ ಮಂಜುಗಡ್ಡೆಯಂತೆ ಕರಗುತ್ತಿದೆ ಎಂಬ ಅರಿವಾಗಿ ಸಾವಕಾರ ಸಿದ್ದಪ್ಪನ ಮನದಲ್ಲಿ ಶೂನ್ಯ ಆವರಿಸಿತು.“ನನಗೆ ಮಕ್ಕಳಾಗಲಿಲ್ಲ, ಆಗುವುದೂ ಇಲ್ಲ, ನಾನೊಬ್ಬ ಎಲ್ಲ ಇದ್ದು, ಏನೂ.. ಇಲ್ಲದ ನತದೃಷ್ಟ, ಕೈಲೆ ಆಗದವನು, ಮಕ್ಕಳನ್ನು ಹುಟ್ಟಿಸಲು ಆಗದ ಶಂಡ ನಾನು…..”ನೂರೆಂಟು ವಿಚಾರಗಳನ್ನು ಮನದಲ್ಲಿ ರಾಶಿ ಹಾಕಿಕೊಂಡು ನೆನೆ-ನೆನೆದು ವ್ಯಥೆಪಟ್ಟ.

ಯಾರಿಗೂ ಗೊತ್ತಾಗದಂತೆ ಬೆಂಗಳೂರು, ಕಾರವಾರ, ಕೇರಳ, ಸುತ್ತಾಡಿ ನಾ..ನೀ.. ಅನ್ನುವ ನಂಬರ್ ಒನ್ ವೈದ್ಯರ ಮುಂದೆ ತಾವು ಬೆತ್ತಲಾಗಿ ಎಲ್ಲ ತೋರಿಸಿದ್ದೆ ನಿರರ್ಥಕವಾಯಿತು. ಯಾವಬ್ಬ ವೈದ್ಯನೂ ನಿಮಗೆ ‘ಮಕ್ಕಳಾಗುವುದಿಲ್ಲ’ಅನ್ನುವುದನ್ನು ಪಕ್ಕಕ್ಕಿರಿಸಿ ಅದರ ಬದಲು ‘ಆಗಬಹುದು’ ಅಂತಾದರೂ ಹೇಳಿದ್ದರೆ ಮನಸ್ಸಿಗೆ ಎಷ್ಟೋ ನೆಮ್ಮದಿ ಅನಿಸುತ್ತಿತ್ತು. ಎಲ್ಲ ವೈದ್ಯರೂ ಸಿದ್ದಪ್ಪನಿಗೆ ದೇಹದ ಮದ್ಯಬಿಂದುವನ್ನು ಪರೀಕ್ಷಿಸಿ “ನಿಮಗೆ ಈ ಜನ್ಮದಲ್ಲಿಯೇ ಮಕ್ಕಳಾಗುವುದಿಲ್ಲ” ಅಂತ ತಲೆ ಅಲ್ಲಾಡಿಸಿದಾಗ ಸಿದ್ದಪ್ಪನಿಗೆ, ಬದುಕಿಗೆ ಬೆಂಕಿ ಇಟ್ಟಂತೆ ಅನಿಸುತ್ತಿತ್ತು. ಮಕ್ಕಳಾಗಿಲ್ಲ, ಆಗುವುದಿಲ್ಲ ಅನ್ನುವ ವ್ಯಥೆ ಅವನ ಎದೆಯನ್ನು ಗಾಢವಾಗಿ ಸುಡುತ್ತಿತ್ತು. ಬದುಕೇ ಒಂದು ಬಹುದೊಡ್ಡ ಬೇಸರವಾಗಿ ದಿನವಿಡಿ ಹಿಂಡತೊಡಗಿತು.

ಸಾವುಕಾರ ಸಿದ್ದಪ್ಪ ಅವರಿವರು ಮಾತಾಡಿದ ಮೂಲಾಧಾರದ ಮೇಲೆ ಕಲಬುರ್ಗಿಯಲ್ಲೊಬ್ಬರು ನಾಟಿ ವೈದ್ಯರಿದ್ದಾರೆ,“ಅವರ ನಾಟಿ ಶಕ್ತಿಯಿಂದ ಮೂಖನೂ ಮಾತಾಡುತ್ತಾನೆ, ಕಿವುಡನಿಗೂ ಕಿವಿಕೇಳುತ್ತೆ, ಕುಂಟನೂ ಎದ್ದು ಓಡುತ್ತಾನೆ” ಎಂಬ ಆ ನಾಟಿ ವೈದ್ಯನ ಕುರಿತಾಡಿದ ಮಾತು ಇವನ ತಲೆಯಲ್ಲಿ ತಕ-ಥೈ ತಾಳ ಹಾಕುತ್ತಲೇ ಇತ್ತು. ಹಂಗಾದ್ರ ಖಂಡಿತ ನನ್ನ ಸಮಸ್ಯೆಯನ್ನು ಆ ವೈದ್ಯ ಪರಿಹರಿಸಬಹುದು. ಧಿಡಿರನೆ ಕಲ್ಬುರ್ಗಿಗೆ ಹಾರಲು ಸಿದ್ದಪ್ಪನ ಮನ ಸಜ್ಜಾಯಿತು.

ನಾಟಿವೈದ್ಯ ತನ್ನ ಸಮಸ್ಯೆ ಪರಿಹರಿಸಿದ್ದೇ ಆದರೆ ಸಾಯುವರೆಗೂ ಅವನ ಪಾದಪೂಜೆ ಮಾಡಿಯೇ ಬದಕುತ್ತೇನೆ, ದಿನ ಬೆಳಗಾದರೆ ಅವನ ಪೋಟೋ ಪೂಜೆ ಮಾಡುತ್ತೇನೆ, ನನ್ನಲ್ಲಿವರು ಸಂಪತ್ತಿನ ಅರ್ಧಪಾಲು ಅವನಿಗೆ ಪ್ರೀತಿಯಿಂದ ದೇನಿಗೆ ನೀಡುತ್ತೇನೆ. ಕಲ್ಬುರ್ಗಿಯತ್ತ ಹೋಗುವ ಬಸ್ಸಿನಲ್ಲಿ ಕುಳಿತು ಹೀಗೆ ನೂರೆಂಟು ಯೋಚನೆಯಲ್ಲಿ ಸಿದ್ದಪ್ಪ ಮುಳುಗಿದ್ದ. ಬಿರು-ಬಿಸಿಲಿನ ಕಲ್ಬುರ್ಗಿ ಬಸ್ ನಿಲ್ದಾಣದಲ್ಲಿಳಿದ. ಪ್ರಯಾಣ ಮಾಡಿ ದನಿವಾದಂತೆ ಅನಿಸಿದ್ದರಿಂದ ಒಂದು ಕಪ್ಪು ಬಿಸಿ ಚಹಾ ಕುಡಿದ. ಜೋಬಿನಲ್ಲಿ ಮಡಚಿಟ್ಟ ಹಾಳೆಯನ್ನು ಹೊರ ತಗೆದು ಆ ನಾಟಿವೈದ್ಯನ ಮನೆ ವಿಳಾಸದ ಮೇಲೆ ಕಣ್ಣಾಡಿಸುತ್ತ ಆಟೋರಿಕ್ಷಾ ಇದ್ದಲ್ಲಿಗೆ ಹೆಜ್ಜೆಬೆಳಿಸಿದ. ಪ್ರಾಥಮಿಕ ಶಾಲಾ ಮಕ್ಕಳು ಸಾಲು ಮಾಡಿ ನಿಂತುಕೊಂಡಂತೆ ಆಟೋ ರಿಕ್ಷಾ ದಗದಗಿಸುವ ಬಿಸಿಲಿಗೆ ಬೆನ್ನು ಒಡ್ಡಿಕೊಂಡು ನಿಂತಿದ್ದವು.

ಸಾಲಾಗಿ ನಿಂತುಕೊಂಡಿದ್ದ ಮೊದಲ ಆಟೋದಲ್ಲಿ ಹೋಗಿ ಶಿವಶಿವ ಅನ್ನುತ್ತ ಕುಂಡಿ ಉರಿದ. ಆಟೋದವನ ಏರಿ ಕಣ್ಣೆದರಿಗೆ ಹಾಲಿಯಲ್ಲಿದ್ದ ಆ ವಿಳಾಸ ಕೈನೀಗಿ ತೋರಿಸುತ್ತ ಕರ್ಚಿಪನಿಂದ ಒಂದು ಕೈಲಿ ದಳದಳ ಹರಿಯುವ ಬೆವರನ್ನು ವರಿಸಿಕೊಳ್ಳುತ್ತಿದ್ದ. ಆಟೋ ಚಾಲಕ ಆ ವಿಳಾಸ ನೋಡಿ ಹಾಂ.. ಹೂಂ.. ಅನ್ನದೆ ಬರಗುಡುತ್ತ ಹತ್ತೇ ನಿಮಿಷದಲ್ಲಿ ಹೋಗಿ ನಾಟಿವೈದ್ಯನ ಮನೆಮುಂದೆ ಆಟೋ ನಿಲ್ಲಿಸಿದ. ಸಾವುಕಾರ ಸಿದ್ದಪ್ಪ ಆಟೋದವನಿಗೆ ಹತ್ತರ ಮೂರು ನೋಟು ಕೈಗಿಡುತ್ತಿದ್ದಂತೆ, ಅವನು “ಸರ್ ಅದೇ ನೋಡಿ ಆ ಜೋಗಮ್ಮನ ಮನೆ” ಎಂದು ಸಿದ್ದಪ್ಪನತ್ತ ಕೈದೋರಿ ಆಟೋ ಚಾಲಕ, ಆಟೋ ಚಾಲುಮಾಡಿಕೊಂಡು ಬಂದ ವೇಗದಲ್ಲಿಯೇ ತನ್ನ ಹಾದಿ ಹಿಡಿದು ಬರಗುಡುತ್ತ ಹೋದ.

ಸಾವುಕಾರ ಸಿದ್ದಪ್ಪ ಆ ಆಟೋ ರಿಕ್ಷಾದವನು“ಅದೇ ನೋಡಿ ಜೋಗಮ್ಮನ ಮನೆ” ಅಂದದ್ದು ಕೇಳಿ ಮನ ಗೊಂದಲಕ್ಕೆ ಸಿಲುಕಿಕೊಂಡಂತಾಯಿತು. ಇಲ್ಲಿ ತನಕ ‘ನಾಟಿವೈದ್ಯ’ನನ್ನು ಬೇಟಿಯಾಗಲು ಬಂದಿರುವ ಅವನ ಕನಸು ಬುಡಮೇಲಾಯಿತು. ಆಟೋದವನೇ ಗಡಿಬಿಡಿಯಲ್ಲಿ ‘ನಾಟಿವೈದ್ಯ’ ಅನ್ನುವ ಬದಲು ‘ಜೋಗಮ್ಮ’ ಅಂದಿರಬೇಕು. ತನಗೆ ತಾನೇ ಸಮಾಧಾನ ಹೇಳಿಕೊಂಡ. ನಾನೇ ಬೇರೆ ವಿಳಾಸಕ್ಕೆ ಬಂದೆನೇ? ಎಂದು ಅನುಮಾನಗೊಂಡ. ಮತ್ತೊಮ್ಮೆ ಜೋಬಲ್ಲಿ ತಡಕಾಡಿ ಮಡಚಿಟ್ಟ ಹಾಳೆಯನ್ನು ಹೊರತಗೆದು ಅಲ್ಲಿದ್ದೊಬ್ಬನಿಗೆ ತೋರಿಸಿದ. “ಹಳದಿ ಬಣ್ಣದ ಬಾಗಿಲಿದೆಯಲ್ಲ ಅದೇ ಬಾಗಿಲು ಸರ್ ಜೋಗಮ್ಮನದು” ಎಂದು ಅಲ್ಲಿದ್ದವನೊಬ್ಬ ಕಡ್ಡಿಮುರದಂತೆ ಹೇಳಿದಾಗ ಸಿದ್ದಪ್ಪನಿಗೆ ಮನದಲ್ಲಿ ಒಂದಿಷ್ಟು ತಳಮಳ ಸುರುವಾಯಿತು. ಜೋಗಮ್ಮ ಅಂದ್ರೆ ದೇವ್ರ ಮನಷ್ಯಾಳೇ.. ಇರ್ಬೇಕು. ಇದರಲ್ಲಿ ಸಂಸ್ಯಾನೇ ಇಲ್ಲ. ಸಿದ್ದಪ್ಪ ತನಗೆ ತಾನೇ ಸಮಾಧಾನ ಮಾಡಿಕೊಳ್ಳಲು ಗುದ್ದಾಡಿದ.

ಅವತ್ತ ಊರಾಗ ಬಸರೀ ಕಟ್ಟೆ ಮೇಲೆ ಕುಳಿತು ನಾಟಿವೈದ್ಯರೆಂದು ಮಾತಾಡಿದ್ರಲ್ಲ ಆ ಮೂರ್ಖರು..! ಅವರು ಮಾತಾಡಿದ್ದು ಕೇಳಿ ಅಲ್ಲವೇ ನಾನು ಇಲ್ಲಿಗೆ ಬಂದದ್ದು. ಹೀಗೆ ಯಾರನ್ನೂ ಕೇಳದೆ, ಹೇಳದೆ, ಎಷ್ಟು ಊರು ತಿರುಗಿದ್ದೇನೆ.. ಎಷ್ಟು ಜಾಣರೆದರು ನನ್ನ ಸಮಸ್ಯೆ ತೋಡಿಕೊಂಡಿದ್ದೇನೆ. ಯಾರಿಂದಲೂ ನನ್ನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಜೋಗಮ್ಮನಿಂದ ಪರಿಹಾರ ಸಿಕ್ಕರೆ ನನ್ನ ಜೀವನವೇ ಪಾವನವಾಗುವುದು..!

ಗುಡ್ಡದೆಲ್ಲಮ್ಮ ನನ್ನ ಮೇಲೆ ದಯೆ ತೋರು ತಾಯಿ..!ಯಲ್ಲಮ್ಮಾ ನಿನ್ನಾಲ್ಕೂಧೋ.. ಉಧೋ.. ಅಂತ ಮನದಲ್ಲಿ ಗುಡ್ಡದೆಲ್ಲಮ್ಮನನ್ನು ಭಕ್ತಿ-ಭಾವದಿಂದ ನೆನೆದು, ಹಳದಿ ಬಾಗಿಲಿನ ಎದರು ಸಾವುಕಾರ ಸಿದ್ದಪ್ಪ ಹೋಗುತ್ತಿದ್ದಂತೆ, ಒಬ್ಬಳು ಮೂವತ್ತರ ಆಸು ಪಾಸಿನ ಹೆಂಗಸೊಬ್ಬಳು “ಒಳಗ ಬರ್ರೀ..” ಎಂದು ಆಹ್ವಾನವಿತ್ತಳು. ಸಿದ್ದಪ್ಪನಿಗೆ ಮೆಲ್ಲನೆ ಮನೆಯೊಳಗೆ ನಡೆದು ಹೋಗುವಾಗ ಮನದಲ್ಲಿ ಮುಜುಗರ ಮೂಡಿತು.“ನಿನಗೆಂತಾ ಪರಸ್ಥಿತಿ ಬಂತಪ್ಪಾ..ಎಲ್ಲಲ್ಲಿ ಅಡ್ಡಾಡುವುದಾತು” ಎಂದು ಯಾರೋ ಅನುಕಿಸಿ ನಕ್ಕಂತೆ ಅನಿಸಿತು.ಹಣೆಯ ಮೇಲೆ ಮೂಡಿದ ಬೆವರನ್ನು ಅಂಗೈಯಿಂದ ತೀಡಿಕೊಳ್ಳುತ್ತ ಆ ಹೆಂಗಸು ಕೈದೋರಿದ ಜಾಗದಲ್ಲಿ ನಿಧಾನವಾಗಿ ಕುಳಿತುಕೊಂಡ.

ಕುಂತ ಜಾಗದಲ್ಲಿಯೇ ಇಡೀ ಮನೆ ತುಂಬ ಕಣ್ಣಾಡಿಸಿದ. ಜಂತೆ ಮನೆ ತುಂಬಾ ಹಳೆಯದಾಗಿದ್ದರೂ ಅಷ್ಟೇನೂ ಗಿಗ್ಗಳಾಗಿರಲಿಲ್ಲ. ಗೋಡೆಯ ಮೇಲೆ ಹೆಣ್ಣು ದೇವತೆಗಳ ಫೋಟೋ ಸಾಲು-ಸಾಲು. ಅವು ಮನೆಯನ್ನು ಮಂದಿರದಂತೆ ತೋರಿಸಲು ಹರಸಹಾಸಮಾಡುತ್ತಿದ್ದವು. ಹೆಂಗಸನ್ನು ಬಿಟ್ಟರೆ ಆ ಮನೆಯಲ್ಲಿ ಯಾರ ಸುಳಿವೂ ಕಾಣಲಿಲ್ಲ. “ಅಯ್ಯೋ ನಾ ಬಂದದ್ದಾದರೂ ಎಲ್ಲಿಗೆ?” ಎಂದು ಸಿದ್ದಪ್ಪ ತಮಗೆ ತಾವೇ ಪ್ರಶ್ನೆಮಾಡಿಕೊಂಡ. ಆಗ ಅವನ ಎದೆ ಡವಗುಟ್ಟತೊಡಗಿತು. ಆ ಹೆಂಗಸು ಒಂದು ಲೋಟದಲ್ಲಿ ಬಿಸಿಬಿಸಿ ಹೊಗಿಯಾಡುವ ಕೆನೆಹಾಲು ಚಾ ತಂದು ಕೊಟ್ಟು ಸದಾನಂದರನ್ನು ನೋಡಿ ಮುಗುಳುನಗುತ್ತ ಒಳನಡೆದಳು. ಖಂಡಿತ ನಾನು ಬಂದ ವಿಳಾಸ ತಪ್ಪಿರಬಹುದು. ಈ ಹೆಂಗಸಿನ ನೋಟವೇಕೋ ಭಿನ್ನವಾಗಿದೆ. ಅವನ ಎದೆಯನ್ನು ಹೊಕ್ಕ ಸಂದೇಹ ಗೋಡೆಯ ಮೇಲಿನ ಫೋಟೋ ನೋಡು-ನೋಡುತ್ತ ನೈಜತೆಯತ್ತ ವಾಲಿತು. ಚಾ ಕುಡಿಯುತ್ತ ಮತ್ತೊಮ್ಮೆ ಗೋಡೆಯ ಮೇಲಿರುವ ದೇವರ ಫೋಟೋ ನೋಡಿ ಮನದಲ್ಲಿಯೇ ದೇವರಿಗೆ ನಮಸ್ಕಾರ ಸಲ್ಲಿಸುತ್ತ.. “ದೇವ್ರಗಳಿರಾ ಹೆಂಗಾರ ಮಾಡಿ ನನ್ನ ನೂನ್ಯತೆ ದೂರಮಾಡ್ರವ್ವಾ, ಮಕ್ಕಳ ಮಾಡು ಭಾಗ್ಯಾ ಕೊಡ್ರವ್ವಾ” ಎಂದು ಭಕ್ತಿಯಿಂದ ವಂದಿಸಿದ. ಮನೆ ಧೈವ ಸಂಭೂತದಂತೆ ತೋರಿತು. ನಾನೊಬ್ಬ ಮುಟ್ಟಾಳ ಏನೇನೋ ಕಲ್ಪಿಸಿಕೊಂಡು ಹಾಳಾಗುತ್ತಿದ್ದೇನೆ. ನನ್ನ ಊಹೆಗೆ,ಕಲ್ಪನೆಗೆ ಅರ್ಥವಿಲ್ಲ ಅಂದುಕೊಂಡ.
ಒಳಗಿನಿಂದ ಬಂದ ಹೆಂಗಸು ಸಿದ್ದಪನ ಅಭಿಮುಖವಾಗಿ ಕುಳಿತುಕೊಂಡಳು. ಅವಳ ನೋಟ ಗಂಬೀರವಾಗಿದ್ದವು. ಅದ್ಯಾಕೋ ಸಿದ್ದಪ್ಪನಿಗೆ ಅವಳ ಕಣ್ಣೋಟದ ಕಸುವು ಎದಿರಿಸಲಾಗಲಿಲ್ಲ.
“ನೀವು ಯಾವೂರಿನಿಂದ ಹೊಂಟಿರಿ..” ಎದುರು ಕುಳಿತುಕೊಂಡ ಹೆಂಗಸು ಧಿಡೀರನೆ ಸಿದ್ದಪ್ಪನತ್ತ ಒಂದು ಸಣ್ಣ ಪ್ರಶ್ನೆ ತೂರಿದಳು.

‘ಹೊಂಟಿರಿ’ ಅನ್ನುವ ಕ್ರಿಯಾಪದ ಸಿದ್ದಪ್ಪನ ಮನದಲ್ಲಿ ಗೊಂದಲ ಮೂಡಿಸಿತು. ಧಾರವಾಡದಲ್ಲಿ ತಾನು ಕಾಲೇಜ್ ಓದುವಾಗ ತನಗಿದ್ದ ಒಬ್ಬ ಯಾದಗಿರಿ ಹುಡಗನ ಗೆಳತನ, ಅವನು ಮಾತಾಡುವ ಭಾಷೆ ಅರಿವಿಗೆ ಬಂದು, ತಕ್ಷಣ ಈ ಕಲ್ಬುರ್ಗಿ ಮಂದಿ ಭಾಷೆನೆ ಹಿಂಗ ಅನ್ನುವುದನ್ನು ಅರಿತು ಆ ಹೆಂಗಸು ಕೇಳಿದ ಮಾತಿಗೆ..

“ನಾನು ಕೊಪ್ಪಳಿಂದ ಬಂದಿನ್ರೀ” ಎಂದು ಹೇಳಿದ. ಅವಳ ಮೋತಿಯನ್ನು ನೋಡುವ ಧೈರ್ಯಸಾಲದೆ ಚಾ ಕುಡಿದು ಖಾಲಿಯಾದ ಲೋಟವನ್ನು ಕೈಯಲ್ಲಿ ಹಿಡಿದುಕೊಂಡು ತಿರಿಗಿಸುತ್ತಿದ್ದ. ನಿಧಾನವಾಗಿ ಆ ಹೆಂಗಸನ್ನು ನೋಡಿದಾಗ ಅವಳ ಮುಖದಲ್ಲಿ ಮುಗುಳು ನಗೆ ಅರಳಿಕೊಂಡಿತ್ತು.
“ನಿಮ್ದ ಏನ್ ಸಮಸ್ಯಾ ಇತ್ತರೀ” ಮತ್ತವಳೇ ಕೇಳಿದಳು.
ಅವಳ ಮಾತು ಕೇಳುತ್ತಿದ್ದಂತೆ ಸಿದ್ದಪ್ಪನ ತಲೆ ಮೆಲ್ಲನೆ ಕೆಳಗಾಯಿತು. ಸ್ವಲ್ಪ ತಡೆದು “ಜೋಗಮ್ಮಾರ ಇಲ್ಲೇನ್ರೀ” ಎಂದು ಕೇಳಿದ. ಅವನ ಮಾತು ಇನ್ನೂ ಬಾಯಿ ತುದಿಗಿರುವಾಗಲೇ ಆ ಹೆಂಗಸು ದೊಡ್ಡ ದನಿ ತಗೆದು ನಗಲು ಸುರು ಇಟ್ಟಳು.

ಆ ಹೆಂಗಸು ನಗುವ ಬಗೆಯನ್ನು ಕಂಡು, ಕುಂತ ಜಾಗ ಬಿಟ್ಟು ಎದ್ಹೋಡಬೇಕನಿಸಿದರೂ ಸಿದ್ದಪ್ಪ ಗಟ್ಟಿಮನಸ್ಸು ಮಾಡಿ, ತಮ್ಮಲ್ಲಿದ್ದ ನ್ಯೂನ್ಯತೆ ನೆನೆದು ಸುಮ್ಮನೆ ಕುಳಿತ. ಆ ಹೆಂಗಸು ಇವನನ್ನು ನೋಡುತ್ತ ನೋಡುತ್ತ “ನಿಮಗೆ ಮಕ್ಕಳು ಆಗಿಲ್ಲವಲ್ಲಾ” ಎಂದು ಆ ಹೆಂಗಸು ಕೇಳಿ, ಕೇ..ಕೇ ಹಾಕಿ ನಕ್ಕಂತೆ ಅನಿಸಿತು. ಅವಳ ಮಾತು ಕೇಳುತ್ತಿದ್ದಂತೆ ಸಿದ್ದಪ್ಪ, ಕುಂತ ಜಾಗದಲ್ಲಿಯೇ ತತ್ತರಿಸಿದರು. ಆ ಹೆಂಗಸಿನ ಮಾತು ಇವನ ಬುಡವನ್ನೇ ಹಿಡಿದು ಅಲ್ಲಾಡಿಸಿದಂತೆ ಅನಿಸಿತು.
“ಹೌದು, ನನಗೆ ಮಕ್ಕಳಾಗಿಲ್ಲ…” ಎಂದು ಸ್ವಲ್ಪ ತಡವಾಗಿ ಆ ಹೆಂಗಸಿಗೆ ಉತ್ತರಿಸಿದರು.
“ಮಕ್ಕಳಿಗಾಗಿ ಎಲ್ಲ ವೈದ್ಯರ ಹತ್ತಿರ ಮೊರೆ ಹೋಗಿದ್ದಿರಲ್ಲವೇ?”
“ಹೂಂ.. ಸಾಕಷ್ಟು ಸುತ್ತಾಡಿದ್ದೇನೆ.. ಗಡಿನಾಡು ದಾಟಿ ಹೋಗಿದ್ದು ಆಗಿದೆ..”
“ನಿಮಗೆ ಸಮಸ್ಯೆ ಇದೆ”
“ಹೌದು, ಅದಕ್ಕೆ ನಾ ಇಲ್ಲಿ ಬಂದದ್ದು”
“ಆ ಮಾಯಕಾರ್ತಿಯಿಂದ ಬಗೆ ಹರೆಯದ ಸಮಸ್ಯೆ ಯಾವದೂ ಇಲ್ಲ.. ಆದರೆ ನಿನ್ನ ಸಮಸ್ಯೆ ಒಂದನ್ನು ಬಿಟ್ಟು”

“ನೀವ್ಯಾರು? ಆ ಜೋಗತಿ ಅಮ್ಮನ್ನ ಕರಿರಿ.. ಸುಮ್ಮ-ಸುಮ್ಮನೇ ನೀವ್ ಬಾಯಿಗೆ ಬಂದದ್ದು ಬೊಗಳಬ್ಯಾಡ್ರೀ”
ಆ ಹೆಂಗಸು ಗಹಗಹಿಸಿ ನಕ್ಕಳು, ಅವಳು ನಗುವಾಗ ಥೇಟ್ ದೇವಲೋಕದ ಕನ್ಯೆಯರಂತೆ ಬಲು ಸುಂದರವಾಗಿ ಕಾಣುತ್ತಿದ್ದಳು. ಕಣ್ಣುಗಳು ತುಂಬಾ ಮೋಹಕವಾಗಿ, ಆಕರ್ಶಕವಾಗಿ ವಿಶಾಲ ಸರೋವರದ ಆಳ ಅಗಲದ ವಿಸ್ತಾರಕ್ಕೆ ಹೊಂದಿಕೊಳ್ಳುವಂತಿದ್ದವು. ಅವಳ ತುಟಿಗಳು ಗುಲಾಬಿ ಪಕಳಿಯಂತೆ ಕೆಂಪಗೆ ಮತ್ತೇರಿಸುವಂತಿದ್ದವು. ಕಣ್ಣು ಕುಕ್ಕುವ ಆ ಸೌಂದರ್ಯ, ಅಂತ ದೇವತೆಯಂತ ಸುಂದರಿ ಆಡಿದ ಮಾತನ್ನು ಕೇಳಿದ ಸಿದ್ದಪ್ಪನಿಗೆ ಕಿರಿಕಿರಿ ಅನಿಸಿ “ಜೊಗಮ್ಮನ ಕರಿರಿ” ಅಂದಿದ್ದ. ಅದಕ್ಕೆ ಆ ಹೆಂಗಸು ಬಿಟ್ಟು ಬಿಡದೆ ನಕ್ಕು ನಕ್ಕು……
“ ಆ ಜೋಗತಿಯಮ್ಮ ನಾನೇ ಹ..ಹ..ಹ..ಹ..”ಎಂದು ಹೆಂಗಸು ಉದ್ಗರಿಸಿದ್ದಕ್ಕೆ ಹೇಗೋ ಮೈಯಲ್ಲಿ ದೇವರು ಬಂದಂತೆ ಮಾಡತೊಡಗಿದಳು. ಅವಳ ಮಾತು, ನಗೆ, ಕಂಡು ಸಾವುಕಾರ ಸಿದ್ದಪ್ಪನ ಮೈ ತಣ್ಣಗಾಯಿತು. ಅವಳು ಬಿಟ್ಟುಬಿಡದೇ ನಕ್ಕಳು, ಮತ್ತೆ ಗೋಡೆಯ ಮೇಲಿರುವ ಫೋಟೋ ನೋಡು-ನೋಡುತ್ತಲೇ ಚಿಕ್ಕಮಕ್ಕಳಂತೆ ಬಿಕ್ಕತೊಡಗಿದಳು, ಮತ್ತೆ ಇದ್ದಕಿದ್ದಂತೆ ಕಣ್ಣ ಮುಚ್ಚಿ ಮಾತಾಡತೊಡಗಿದಳು… ಆಗ ಸಿದ್ದಪ್ಪ ತನ್ನ ಸಮಸ್ಯೆ ಎಲ್ಲಿಗೆ ಹೋದರೂ ಪರಿಹಾರ ಆಗದು ಎಂಬುದು ಖಚಿತಮಾಡಿಕೊಂಡಾಗ ಗೊತ್ತಿಲ್ಲದೆ ಅವನ ಕಣ್ಣುಗಳು ತೊಯ್ದಿದ್ದವು.

“ನೀನು ಅತ್ತರೆ ಏನು ಪ್ರಯೋಜನವಿಲ್ಲ, ನಿನ್ನ ಹಣೆ ಬರಹದಲ್ಲಿ ಮಕ್ಕಳಾಗುವ ಯೋಗವಿಲ್ಲ, ನಿನ್ನ ಪೂರ್ವಜರ ಪಾಪ ನಿನಗೆ ಅಂಟಿಕೊಂಡಿದೆ, ಯಾವ ಮಾಯಕಾರ ಬಂದ್ರೂ ನಿನ್ನ ಸಮಸ್ಯಾ ನಿವಾರ್ಣೆ ಆಗಾಂಗಿಲ್ಲ.. ಆದ್ರೂ ನಿನ್ನ ಮನಿ ದೀಪ ಆರುದಿಲ್ಲ”
ಜೋಗತಿ ಮಾತು ಸಿದ್ದಪ್ಪನಿಗೆ ಒಗಟಾಯಿತು. ಮಕ್ಕಳು ಆಗುವುದಿಲ್ಲ ಅಂತ ಹೇಳ್ತಾಳೆ, ಮಕ್ಕಳಿಲ್ಲದೇ ಮನೆ ದೀಪ ಬೆಳಗತೈತಿ ಅಂತ ಹೇಳ್ತಾಳ.. ಏನೇನೋ ಹೇಳತಾಳ ಈ ಜೋಗಮ್ಮಾ.. ಇಕಿ ತಲಿ ಬರೊಬ್ಬರಿ ಐತಿಲ್ಲೋ.. ಮನದಲ್ಲಿ ಸಿದ್ದಪ್ಪ ಗೊಂದಲಕ್ಕಿಳಿದ.

“ನಾನೇ ಜೋಗತಿ” ಎಂದು ಹೇಳಿದ ಆ ಹೆಂಗಸಿನ ಮೇಲೆ ಅವನಿಗೆ‘ಜೋಗತಿ ಹೌದೋ.. ಅಲ್ಲೋ’ ಅನ್ನುವ ಅನುಮಾನ ಸುರು ಆಯಿತು. ಗೋಡೆಯ ಮೇಲಿರುವ ಸಾಲು ಸಾಲು ಫೋಟೋದ ಕೊನೆಯಲ್ಲಿ ಈ ಹೆಂಗಸಿನ ಪೋಟೋ ಇರುವುದನ್ನು ಕಂಡು ಎದಿ ಇದ್ದಕ್ಕಿದ್ದಂತೆ ದಸಕ್ ಅಂದಿತು. ಈ ಹೆಂಗಸೇ ‘ಜೋಗಮ್ಮ’ ಅನ್ನುವ ನಂಬಿಗೆ ಸಿದ್ದಪ್ಪನಿಗೆ ಆಗ ಪೂರ್ತಿ ಮೂಡಿತು. “ಮಗನ ನೀ ನನ್ನ ಅನುಮಾನಿಸಬ್ಯಾಡೋ ಹುಚ್ಚಪ್ಪಾ.. ನಾ ಸತ್ತೂಳ ಜೋಗತಿ ಅದಿನಿ, ನಿನಗ ಪೂರ್ವಜರ ಪಾಪ ಅಂಟಿಕೊಂಡೈತಿ” ಎಂದು ಆ ಜೋಗಮ್ಮ ಹೇಳಿದ್ದು ಕೇಳಿ.. ಗಾಬರಿಯಾಗಿ ಸಿದ್ದಪ್ಪ..

“ಆ ಸುಡಗಾಡ ಪಾಪ ನನಗ್ಯಾಕ ಅಂಟಿಕೋಬೆಕವ್ವಾ.. ನೀವ ದೇವ್ರ ಹಿಂಗ ಯಾರಾರ ಮಾಡಿದ್ದ ಪಾಪ ಯಾರಿಗಾರ ಹಾಕಿ ಮೋಜ ನೋಡ್ತಿರೇನ?”ಎಂದು ಜೋಗಮ್ಮನ್ನು ತರಾಟೆಮಾಡಿದ.
“ನಾವು ಮಾಡಿದ ಪಾಪ ಸಾಯೋ ಮೊದಲೇ ನಮಗೆ ಪಾಠ ಕಲಸ್ತಾವ, ಆದ್ರ ಕೆಲವು ಮಾಡಿದ ಕರ್ಮಗಳು ಹಾಗೇಬಾಕಿ ಉಳಿದುಕೊಂಡು ಮಕ್ಕಳು, ಮೊಮ್ಮಕ್ಕಳ ಬದುಕಲ್ಲಿ ಅಲೆ ಎಬ್ಬಿಸಿ ಅವರ ಬದುಕಿಗೆ ಮುಳುವಾಗತಾವ, ಈಗ ನಿನಗೆ ಬಂದಿರುವ ಕಳಂಕವೂ ನಿಮ್ಮಜ್ಜನದ್ದು, ಇದನ್ನು ಏನೇ ಮಾಡಿದರೂ ಪರಿ ಹರಿಸಲು ಸಾದ್ಯವಿಲ್ಲ, ಇದನ್ನು ನೀನು ಅನುಭವಿಸಲೇಬೇಕು”

“ನಿಮ್ಮ ಮಾತು ನನಗಂತು ಏನೂ ತಿಳಿಯುತ್ತಿಲ್ಲ, ಚಿಕ್ಕಮಕ್ಕಳಿಗೆ ಪಾಪ ಪುಣ್ಯದ ಕತೆ ಹೇಳುವಂತಿದೆ, ಇದನ್ನು ಹೇಗೆ ನಂಬುವುದು? ತರ್ಕವಿಲ್ಲದ್ದು ಅನಿಸುವುದಿಲ್ಲವೇ? ನನಗಿರುವುದು ಬರಿ ನರದೌರ್ಬಲ್ಯದ ಸಮಸ್ಯೆ, ಆ ನರಗಳು ದುರ್ಬಲವಾಗಿರುವುದರಿಂದ ನನ್ನಲ್ಲಿ ಹೆಂಡತಿಯೊಂದಿಗೆ ಹಾಸಿಗೆ ಹಂಚಿಕೊಳ್ಳಲಾಗುತ್ತಿಲ್ಲ, ಅವಳ ಆಸೆ-ಆಕಾಂಕ್ಷೆ ಪೂರೈಸಲಾಗುತ್ತಿಲ್ಲ, ಅವಳಿಗೆ ತೃಪ್ತಿಕೊಡುವಲ್ಲಿ ನಾನೂ ಪೂರಾ ವಿಫಲ..! ಅದು ಬಿಟ್ಟು ನೀವು ಇಲ್ಲದ ಅಜ್ಜ-ಮುತ್ತಜ್ಜನ ಪಾಪ ಕರ್ಮದ ಕಥೆ ಕಟ್ಟಿ ನನ್ನನ್ನು ಹುಚ್ಚನನ್ನಾಗಿ ಮಾಡಬೇಕೆನ್ನುವ ವಿಚಾರವೇ..? ಈ ಕಲಿಯುಗದಲ್ಲಿ ಇಂಥ ಕಥೆಗಳನ್ನು ಯಾರು ನಂಬುತ್ತಾರೆ..? ಇಲ್ಲಾ.. ಅದನ್ನು ನಾನೂ ನಂಬುವುದಿಲ್ಲ, ಅದು ಅಲ್ಲದೆ ನೀವು, ನನ್ನ ಕೈಗಳನ್ನು ನೋಡಿ ಪರೀಕ್ಷೆ ಮಾಡಿಲ್ಲ, ಹೆಸರು,ವಿಳಾಸ ಪೂರಾ ಕೇಳಿಲ್ಲ, ನನ್ನ ಮೋತಿಯನ್ನು ನೋಡಿ, ಅದು ನೀವು ಹೇಗೆ ಪೂರ್ವದ ಕಥೆ ಹೇಳುತ್ತೀರಿ? ತಾವೇನೋ ಕವಡೆ ಒಗೆದು, ಪೂಜೆ ಮಾಡಿ, ಪ್ರಸಾದ ಕೊಟ್ಟಿಲ್ಲ, ನೀವು ಯಾವದನ್ನೂ ಮಾಡದೆ ನನ್ನ ಮೋತಿಯನ್ನಷ್ಟೇ ನೋಡಿ ಎಲ್ಲವನ್ನು ಹೇಳುತ್ತಿದ್ದಿರಂದರೆ ನೀವೇನೋ ಮನೋವೈದ್ಯರೇ? ಮನೋವೈದ್ಯರಾದವರಿಗೂ ಇದು ಕಷ್ಟ..! ಅವರು ಮೊದಲು ಪರೀಕ್ಷೆಗೆ ಒಳಪಡಿಸಿ, ಸಮಯ ತಗೆದುಕೊಂಡು, ಅಧ್ಯಯನ ನಡೆಸಿ, ನಂತರ ಖಾಯಿಲೆ ಪತ್ತೆ ಹಚ್ಚುತ್ತಾರೆ. ನೀವು ಏನೂ ಇಲ್ಲದೆ ನಮ್ಮ ಅಜ್ಜನ ಪೂರ್ವದ ಕಥೆ ಹೇಳಲು ಹೊರಟಿದ್ದಿರಲ್ಲಾ..? ನಾನು ಹೇಗೆ ನಂಬಬೇಕು? ಸಿದ್ದಪ್ಪ ಮನದಾಗಿದ್ದ ಮಾತ ಪಟಪಟ ಉದರಿಸಿದ.

“ನೀ ನಂಬಬೇಕು ನಂಬಲೇಬೇಕು..ನಿನಗಂತು ಮಕ್ಕಳಾಗುವುದಿಲ್ಲ ಅನ್ನುವುದನ್ನು ನೀನು ಮೊದಲು ನಂಬು, ನಂತರ ನಿನಗೆ ನಿಮ್ಮ ಅಜ್ಜನ ಪಾಪ ಕರ್ಮಗಳು ತೊಡರಾಗಿವೇ ಅನ್ನುವುದನ್ನೂ ನೀನು ನಂಬಬೇಕು”
“ನಮ್ಮಜ್ಜ ಏನು ಅಂಥ ಮಹಾನ್ ಘೋರ ತಪ್ಪು ಮಾಡಿದ, ರಾವಣನಂತೆ ಸೀತೆಯನ್ನು ಅಪಹರಿಸಿದನೇ? ದುಶ್ಯಾಸನಂತೆ ಸೀರೆ ಸೆಳೆದನೇ? ಕಂಸನಂತೆ ಹಸುಕಂದಮ್ಮಗಳನ್ನು ಕೊಂದನೇ? ನಮ್ಮ ತಾತ ಏನು ಪಾಪ ಮಾಡಿದ..?

“ ಹಾಗೇನು ಮಾಡಿಲ್ಲ, ಅವನು ಆಸ್ತಿಗಾಗಿ ತನ್ನ ಸಹೋದರನನ್ನೆ ಕೊಲೆ ಮಾಡಿದ್ದ, ಅವನ ಇಬ್ಬರು ಮಕ್ಕಳ ಮರ್ಮಾಂಗವನ್ನೇ ಕತ್ತರಿಸಿದ್ದ, ತನ್ನ ತಮ್ಮನ ಹೆಂಡತಿಯನ್ನು ಹಾದರಕ್ಕೆ ಎಳೆದು, ಅವಳನ್ನು ಅನುಭವಿಸಿದ, ಅವಳ ದೇಹದ ಮದ್ಯಬಿಂದುವಿನಲ್ಲಿ ಕಬ್ಬಿನದ ರಾಡನ್ನು ಬಡೆದು ಕೊಲೆಮಾಡಿದ್ದ, ನೋವು ತಿಂದು, ನರಳಿದ ಆ ಹೆಣ್ಣಿನ ಶಾಪ, ಈಗ ನಿನ್ನನು ಸುತ್ತಿಕೊಂಡಿದೆ, ಯಾರಿಂದಲೂ ಪರಿಹರಿಸದಂತ ಶಾಪವಿದು, ಅನುಭವಿಸಿಯೇ ಅಳಿಯಬೇಕು”

ಸಾವುಕಾರ ಸಿದ್ದಪ್ಪನಿಗೆ ಜೋಗಮ್ಮನ ಮಾತು ಕೇಳಿ ಕನಲಿದ. ತನ್ನಜ್ಜ ಮಾಡಿದ ಕೃತ್ಯಕಂಡು ರೋಷಿಹೋದ, ತನ್ನ ಜೀವಕ್ಕೇ ಬೆಲೆ ಇಲ್ಲ ಅಂದು ಕೊಂಡು ಜೋಗಮ್ಮನ ಕಾಲಿಗೆ ಹಣೆ ಒತ್ತಿ ಅವಳ ಉಡಿಯಲ್ಲಿ ಒಂದಿಷ್ಟು ಹಣವಿಟ್ಟು ಊರತ್ತ ಪಯಣ ಬೆಳಸಿದ.
*

ಕಲ್ಬುರ್ಗಿಯಿಂದ ಬಂದ ಮೇಲಿಂದ ಸಿದ್ದಪ್ಪ ಭಾಳ ಮಂಕಾಗಿದ್ದ. ಆ ಜೋಗತೆಮ್ಮ ಹೇಳಿದ್ದು ಎಷ್ಟು ಖರಯೋ, ಎಷ್ಟು ಸುಳ್ಳೋ. ಕುಂತಲ್ಲಿ ನಿಂತಲ್ಲಿ ಬರೀ ಅದೇ ವಿಚಾರ ಸುತ್ತಿ ಸುಳಿದು ಅವನ ಮನಸನ್ನು ಸಣ್ಣಗೆ ಸುಡುತ್ತಿತ್ತು. ಹೆಂಡತಿ ‘ಯಾಕ್ರೀ ಸಪ್ಪಗಿದ್ದಿರಲ್ಲಾ ಏನಾಗಿದೆ?’ ಎಂದು ಕೇಳಿದರೆ ‘ನೂರೆಂಟು ವ್ಯವಹಾರದ ತಾಪತ್ರಯ’ ಎಂದು ಪೊಳ್ಳ ಮಾತು ಹೇಳಿ ಮತ್ತೆ ಅದೇ ಚಿಂತೆಯಲ್ಲಿ ಧುಮುಕುತ್ತಿದ್ದ.

ಮತ್ತೊಂದು ದಿನ ಇದ್ದಕ್ಕಿದ್ದಂತೆ ಬಸ್ಸೇರಿ ಮಹಾಷ್ಟ್ರಾದ ಮುಂಬೈಗೆ ಹೋಗಿ ಅಲ್ಲೊಬ್ಬ ವೈದ್ಯರನ್ನು ಬೇಟಿಯಾಗಿ ತನ್ನ ಸಮಸ್ಯೆ ಹೇಳಿಕೊಂಡ. ಎಲ್ಲರಂತೆ ಆ ವೈದ್ಯನೂ“ನಿಮಗೆ ಈ ಜನ್ಮದಲ್ಲಿ ಮಕ್ಕಳಾಗುವುದಿಲ್ಲ, ಸುಮ್ನೆ ನೀವು ದವಾಖಾನೆಗೆ ದುಡ್ಡು ಸುರಿಯಬೇಡಿ” ಎಂದು ಆತ್ಮೀಯವಾಗಿ ಸಣ್ಣಮಕ್ಕಳ ತೆಲೆ ಸವರಿ ಸಾಂತ್ವನ ಹೇಳುವಂತೆ ವೈದ್ಯರು ಸಿದ್ದಪ್ಪನಿಗೆ ಹೇಳಿಕಳಿಸಿದರು.
ಹಿಂಗಾಗಿ ಸಿದ್ದಪ್ಪನಿಗೆ ಜೀವನವೇ ಸಾಕೆನಿಸಿತು. ಹೆಂಡತಿಗೆ ಸುಖನೀಡದ ನಾನು, ಮಕ್ಕಳ ಹುಟ್ಟಿಸಲು ಸಾಮಥ್ರ್ಯ ಇಲ್ಲದ ನಾನು,ಭೂಮಿ ಮೇಲೆ ಇದ್ದು ಏನು ಸಾಧಿಸುವುದಿದೆ..? ಇಂದಿಗೆ ಈ ಜೀವಕ್ಕೆ ಮಂಗಳ ಹಾಡಬೇಕೆಂದು ನಿರ್ಧರಿಸಿದ. ಅವತ್ತು ಹೆಂಡತಿ ಅಡಿಗೆಮನೆಯ ಕೆಲಸದ ಗದ್ದಲದಲ್ಲಿ ಕಳೆದುಹೋಗಿದ್ದಳು, ಅವಳನ್ನು ಎಂದೂ ನೋಡಿಯೇ ಇಲ್ಲ ಅನ್ನುವ ಹಾಗೆ ಆನತಿ ದೂರದಲ್ಲಿ ನಿಂತು ಕಣ್ಣತುಂಬ ತುಂಬಿಕೊಂಡ. ಪಡಸಾಲೆಯ ಗೋಡೆಯ ಮೇಲಿರುವ ಅಪ್ಪನ ಪೋಟೋಗೆ ಕೈಮುಗಿದ. ಇನ್ನೊಂದು ಮೂಲೆಯಲ್ಲಿರು ಅವರ ಅಜ್ಜನ ಕಪ್ಪು ಬಿಳುಪಿನ ಪೋಟೋ ನೋಡಿ ‘ಥೂ ಸೂಳಿಮಗನೇ’ ಎಂದು ಬೈದುಕೊಂಡು ಮನೆ ಮುಂದಿದ್ದ ಬೈಕ್ ಚಾಲುಮಾಡಿಕೊಂಡು ತೋಟದ ಮನೆಯತ್ತ ನಡೆದಾಗ ಮಟಮಟ ಮದ್ಯಾನವಾಗಿತ್ತು.

ಅಂದು ಸಾವುಕಾರ ಸಿದ್ದಪ್ಪನಿಗೆ ಜೀವದ ಮೇಲೆ ಅತಿಯಾದ ಬೇಸರವಾಗಿತ್ತು. ದನದ ಮನೆಯಲ್ಲಿರು ಹಗ್ಗಕ್ಕೆ ಕುತ್ತಿಗೆ ಕೊಡಬೇಕು ಅನ್ನುವಷ್ಟರಲ್ಲಿ ಆಳಮನಿಷ್ಯಾ ಹುಚ್ಚರಾಮ ಅಲ್ಲಿಗೆ ಬಂದು ವಕ್ಕರಿಸಿಕೊಂಡುಬಿಟ್ಟ. ಸಾವಕಾರ ಮ್ಯಾಗಿನ ಹ್ವಲದಾಗ ಕಾಡಹಂದಿ ಸತ್ತ ಬಿದೈತ್ರಿ, ಎಂದು ಸಿದ್ದಪ್ಪನ ನೋಡಿದ್ದೇ ತಡಾ ಹುಚ್ಚರಾಮ ಮಾತು ಸುರುಮಾಡಿದ. ಸಿದ್ದಪ್ಪ ಇನ್ನೇನು ಕೊರಳಿಗೆ ಬಿಗಿದುಕೊಳ್ಳಬೇಕೆನ್ನುವ ಹಗ್ಗವನ್ನು ಅಲ್ಲಿಯೇ ಕೈ ಬಿಟ್ಟು ಹುಚ್ಚರಾಮನ ಮಾತಿಗೆ ಕಿವಿಯಾದರು. ಹುಚ್ಚರಾಮ ಅದು ಇದು ಏನೇನೋ ಗೊಣಗುತ್ತಿದ್ದ. ಪಾಪ.. ಹುಚ್ಚರಾಮ..! ತಂದೆ ಇಲ್ಲ, ತಾಯಿ ಇಲ್ಲ, ದಿಕ್ಕೇಡಿ, ಇಂಥವನೇ ಎಷ್ಟೊಂದು ಖುಷಿಯಿಂಬ ಬದಕುತ್ತಿದ್ದಾನಲ್ಲ..!! ನನಗೇನಾಗಿದೆ ಸಾಯಲು? ಇನ್ನೊಮ್ಮೆ ಈ ಸಾವಿನ ವಿಚಾರದ ಗೊಡವಿಗೆ ಹೋಗುವುದೇ ಬೇಡ ಎಂದು ತೀರ್ಮಾನಿಸಿ, ಹುಚ್ಚರಾಮನೊಂದಿಗೆ ಮಾತು ಬೆಳಿಸದೆ ಮತ್ತೆ ಬೈಕ್ ಹತ್ತಿ ಮನೆಗೆ ಬಂದರು. ಹೆಂಡತಿ ಮದುವೆಯ ಪೋಟೋ ನೋಡಿಕೊಳ್ಳುತ್ತ ಪಡಸಾಲೆಯಲ್ಲಿ ಕುಳಿತಿದ್ದಳು. ಸಿದ್ದಪ್ಪ ಒಳ ಬಂದು ಹೆಂಡತಿಯನ್ನು ನೋಡಿ ದೇವತೆಯಂತ ಹೆಂಡತಿಯನ್ನು ಬಿಟ್ಟು ನಾ ಸತ್ತುಹೋಗುತ್ತಿದ್ದೇನಲ್ಲ..! ಅವಳಿಗೆ ಎಲ್ಲಾ ಗೊತ್ತಿದ್ದು ಸುಮ್ಮನೆ ಬದುಕಿನ ಬಂಡಿಗೆ ಗಾಲಿಯಾಗಿದ್ದಾಳೆ. ನಾನು ದುಡುಕಿ ತಪ್ಪುಮಾಡುತ್ತಿದ್ದೆ. ಹುಚ್ಚರಾಮ ಅಲ್ಲಿಗೆ ಬರದಿದ್ದರೆ ಇಷ್ಟೊತ್ತಿಗೆ ಹೆಣವಾಗುತ್ತಿದ್ದೆನೆನೋ..ನಿಟ್ಟಿಸುರು ಬಿಡುತ್ತ ಕುರ್ಚಿಯ ಮೇಲೆ ಮೈಚಲ್ಲಿದ ಅಂದು ಸಾವುಕಾರ ಸಿದ್ದಪ್ಪ.
*

ಧಾರವಾಡ ಕೃಷಿಮೇಳಕ್ಕೆ ಹೋದಾಗ ತಾವು ಬಿಎಸ್ಸಿ ಓದುವಾಗಿನ ಸಹಪಾಠಿ ಅಮರೇಶ ಬೇಟಿಯಾಗಿದ್ದ. ಕುಳ್ಳು ದೇಹದ, ಕಪ್ಪು ಮೈಬಣ್ಣದ, ಅಮರೇಶ ಕಾಲೇಜಿನಲ್ಲಿ ನಂಬರ್ ಒನ್ ವಿದ್ಯಾರ್ಥಿ. ಯಾವಗಲೂ ಸಿದ್ದಪ್ಪನ ಜೊತೆಯಲ್ಲಿಯೇ ಇರುತ್ತಿದ್ದ. ಎಂಟತ್ತು ವರ್ಷದ ನಂತರ ಎದುರಾದ ಇಬ್ಬರು ಗಟ್ಟಿಯಾಗಿ ಬಿಗಿದಪ್ಪಿಕೊಂಡು, ಕುಶಲ,ಕ್ಷೇಮ ಹಂಚಿಕೊಳ್ಳತೊಡಗಿದರು. ತಮ್ಮ ಕಾಲೇಜ್ ದಿನಗಳ ಸವಿ-ನೆನಪುಗಳನ್ನು ಮೆಲಕು ಹಾಕತೊಡಗಿದರು. “ನಮ್ದು ಮನೆ ಚಿಕ್ಕದಿದೆ ಅಂತೆ ಅದಕ್ಕೆ ನನಗೆ ಹೆಣ್ಣು ಕೊಡಲು ಯಾರು ಮುಂದೆ ಬರ್ತಿಲ್ಲಾ ಸಿದ್ದು” ಎಂದು ತನ್ನ ಸ್ಥಿತಿಯನ್ನು ಅಮರೇಶ ತೋಡಿಕೊಂಡ. ಮೊದಲಿನಿಂದಲೂ ಬಡತನದಲ್ಲಿಯೇ ಕೈ ತೊಳೆಯುತ್ತಿದ್ದ ಅಮರೇಶ ಈಗ ಹೈಸ್ಕೂಲ್ ಶಿಕ್ಷಕನಾಗಿದ್ದ, ನೌಕರಿಯಿದ್ದರೂ ಹೆಣ್ಣುಕೊಡದೆ ಲೆಕ್ಕಾಚಾರ ಹಾಕುವ ಜನರ ಕುರಿತು ಸಿದ್ದಪ್ಪ ಮರುಕವ್ಯಕ್ತಪಡಿಸಿದ. ನನಗೆ ಗೊತ್ತಿರುವ ಮನೆತನ ಒಂದಿದೆ ಖಂಡಿತ ಅವರು ಆಸ್ತಿ ನೋಡುವವರಲ್ಲ, ಹುಡಗ ನೌಕರಿ ಮಾಡ್ತಿದ್ರೆ ಸಾಕು ಅಂತಾರೆ. ನೀನೇನೂ ಚಿಂತಿಸಬೇಡ. ಹುಡುಗಿ ಕೂಡಾ ಸದ್ಗುಣಿ. ಮುಂದಿನ ವಾರವೇ ಹೋಗಿ ಬರೋಣವೆಂದು ಸಿದ್ದಪ್ಪ ತನ್ನ ಗೆಳೆಯನಿಗೆ ಭರವಸೆಯನ್ನು ನೀಡಿದ.
“ಯಾಕೋ ಸಿದ್ದು ಮದುವೆಯಾಗಿ ಎಂಟತ್ತು ವರ್ಷವಾಯಿತು ಇನ್ನೂ ಮಕ್ಕಳಾಗಿಲ್ಲವಲ್ಲ”ಇದ್ದಕ್ಕಿದ್ದಂತೆ ಅಮರೇಶ ಆಡಿದ ಮಾತು ಕೇಳಿ ಸಿದ್ದಪ್ಪ ತತ್ತರಿಸಿದ. ಗೆಳೆಯನಿಗೆ ಏನು ಹೇಳಬೇಕು ಗೊತ್ತಾಗದೆ ಒಂದಿಷ್ಟು ತಡೆದು
“ಹೂಂ..ಹೌದು.. ಅಮರೇಶ ಇನ್ನೂ ಮಕ್ಕಳಾಗಿಲ್ಲಾ.. ಮಕ್ಕಳನ್ನ ಪಡಿಬೇಕಾದ್ರೂ ಪುಣ್ಯಾ ಮಾಡಿರ್ಬೇಕು, ನಾನು ಆ ಪುಣ್ಯಾ ಮಾಡಿದಂತೆ ಇಲ್ಲಾ ಅನಿಸುತ್ತಿದೆ” ಸಿದ್ದಪ್ಪ ಆಡಿದ ಮಾತು ಕೇಳಿದ ಗೆಳೆಯ ಅಮರೇಶ ಪಿಕಿಪಿಕಿ ನೋಡತೊಡಗಿದ.

“ಯಾಕೋ ಹಿಂಗಂತಿಯಲ್ಲಾ? ಹೆಂಡತಿಯನ್ನು ಆಸ್ಪತ್ರೆಗೆ ತೋರಿಸಿಲ್ಲವೇ..?ಅವಳಲ್ಲಿ ಮಕ್ಕಳಾಗದ ಸಮಸ್ಯೆ ಏನಾದರೂ ಇದೆಯಾ? ಹಾಗಿದ್ದರೆ ಮಹಾರಾಯ ಇನ್ನೊಂದು ಮದುವೆಯಾಗು, ಊರಿಗೆ ದೊಡ್ಡ ಸಾವುಕಾರ ನೀನು. ಸಿಕ್ಕಾಪಟಿ ಆಸ್ತಿ ಇದೆ. ಅದನ್ನು ಅನುಭವಿಸುವ ವಾರಸುದಾರ ಬೇಕಲ್ಲ ಪುಣ್ಯಾತ್ಮಾ ..! ಮಕ್ಕಳಿಲ್ಲದೆ ಇರಲಾದಿತೇ..? ಹಾಗೇನಾದರೂ ನಿನ್ನ ಹೆಂಡತಿ ಹತ್ತಿರ ಸಮಸ್ಯೆ ಇದ್ದರೆ ಖಂಡಿತ ಇನ್ನೊಂದು ಮದುವೆ ನೀ ಆಗಲೇಬೇಕು”

“ಇನ್ನೊಂದು ಮದುವೆಯಾ..”
“ಹೂಂನಪ್ಪಾ..? ಇನ್ನೊಂದು ಮದುವೆ. ಯಾಕೆ? ಆದರೇನು ತಪ್ಪು.? ನಿನ್ನಂತವರು ಅನಾಥ ಮಕ್ಕಳನ್ನು ಸಾಕಲಾದಿತೇ..! ನನಗೇನೋ ಅದು ಸರಿ ಅನಿಸಲ್ಲ.. ತನಗೆಲ್ಲ ರೀತಿಯ ಸಹಾಯ ಸಹಕಾರ ಮಾಡಿದ ಗೆಳೆಯನ ಬಾಳು ಬಂಗಾರದಂತಿರಲೆಂದು ಅಮರೇಶ ಮಕ್ಕಳಾಗದ ವಿಚಾರವನ್ನು ಕೆನಕಿ, ಇನ್ನೊಂದು ಮದುವೆಯಾಗುವಂತೆ ಒತ್ತಾಯಿಸಿದ. ಗೆಳೆಯನ ಮಾತು ಕೇಳಿದ ಸಿದ್ದಪ್ಪನಿಗೆ, ಕಾಲ ಕೆಳಗೆ ಪ್ರಳಯವಾದಂತೆ ಅನಿಸಿತು. ತನ್ನಲ್ಲಿಯೇ ದೌರ್ಬಲ್ಯವಿದೆ, ನನಗೆ ಮಕ್ಕಳನ್ನು ಹುಟ್ಟಿಸುವ ಸಾಮಥ್ರ್ಯವಿಲ್ಲ, ನನಗೆ ಗಂಡಸತನವೇ ಇಲ್ಲ, ಹೀಗೆಲ್ಲ ಅಮರೇಶನ ಮುಂದೆ ಹೇಳಬೇಕೆಂದು ಸಿದ್ದಪ್ಪನ ಮನಸ್ಸು ಹವನಿಸಿದರೂ ಅದ್ಯಾಕೊ ಹೇಳಲಿಲ್ಲ. ಹೆಂಡತಿಯೊಬ್ಬಳ ಬಿಟ್ಟು ತನ್ನಲ್ಲಿರುವ ನ್ಯೂನ್ಯತೆಯನ್ನು ಯಾರೊಡನೆಯೂ ಉಸಿರು ಬಿಡದೆ ಕಾಪಿಟ್ಟರೂ ಆ ನ್ಯೂನ್ಯತೆ ನೆನಪಾದಗಲೊಮ್ಮೆ ಸಿದ್ದಪ್ಪನ ನೆಮ್ಮದಿಗೆ ಯಾರೋ ಬೆಂಕಿ ಹಚ್ಚಿದಂತಾಗುತ್ತಿತ್ತು.
*

ಒಂದಕಡೆ ದಿನ ಬೆಳಗಾದರೆ ಅತ್ತಿಗೆಯಾಗುವವರು “ಏನೋ ಸಿದ್ದಾ ನಮಗೆ ಗಂಡನ ಯಾವಾಗ ತಯಾರ ಮಾಡ್ತಿ..” ಎಂದು ಚಾಷ್ಟಿ ಮಾಡಿದರೆ, ಮತ್ತೊಂದ ಕಡೆ ಅವನ ಹೆಂಡತಿಗೆ “ಏನ್ ಸಾವಕಾರ್ತಿ ಹಿಂಗ ಹೊಂಟತೆಲ್ಲ ನಿನ್ನ ಗಾಡಿ… ಬಡ್ಡಿನೂ ಇಲ್ಲ ಗಂಟನೂ ಇಲ್ಲ” ಎಂದು ನಕಲಿ ಮಾಡಿ ಅವಳನ್ನು ಕಾಡಿಸುತ್ತಿದ್ದರು. ಕಾಡಿಸಿದಾಗೊಮ್ಮೆ ಸಿದ್ದನ ಹೆಂಡತಿ ಗಳಗಳ ಅತ್ತು, ಹಾಸಿಗೆ ಹಿಡಿದು ಮಲಗುತ್ತಿದ್ದಳು. ಇದ್ದ ಸಮಸ್ಯೆಯನ್ನು ಯಾರಮುಂದಾದರೂ ಹೇಳಬೇಕೆನ್ನುವ ವಿಚಾರ ಒಮ್ಮಿಯೂ ಅವಳು ಆಲೋಚಿಸಲಿಲ್ಲ. ಹೀಗೆ ಅವರ ಬದುಕು ಜಟಕಾ ಬಂಡಿ ಸಾಗಿತ್ತು.

ಅವತ್ತು ತಲೆಯಲ್ಲಿ ಆದ ಬಿಳಿ ಕೂದಲು ಕಂಡು ಅದೆಷ್ಟೋ ಹಳಹಳಿಸುತ್ತ, ಳೆ ನೆನಪುಗಳನ್ನು ಕುಂತ ಕುಂತಲ್ಲಿ ಮನದ ಪುಟದಲ್ಲಿ ತಿರುವಿ ಹಾಕಿದರೂ ಸಿದ್ದಪ್ಪನಿಗೆ ಏನೂ ಹೊಳಿಲಿಲ್ಲ. ಆ ಮಾಯಕಾರನ ಆಟ ಹೇಗಿದೆಯೋ ಆಗೆ ಆಗುತ್ತದೆ. ಆಗುವುದನ್ನು ಯಾರಿಂದ ತಡೆಯಲು ಸಾದ್ಯವಾದೀತು? ತನ್ನ ನ್ಯೂನ್ಯತೆ ನೆನೆದು ತಾನೇ ಕೊರಗಿದ, ವ್ಯಥೆಪಟ್ಟ, ಗೊಡಯ ಮೇಲೆ ನೆತಾಡುತಿದ್ದ ಅವರ ಅಜ್ಜನ ಪೋಟೋ ಕಿತ್ತುಕೊಂಡು ಸಿಟ್ಟಿನಿಂದ ಹೊಳೆಯತ್ತ ಅವಸರ ಅವಸರವಾಗಿ ಸಾವುಕಾರ ಸಿದ್ದಪ್ಪ ನೆಡೆದು ಹೋದ.. ಅದ್ಯಾಕೋ.. ಏನೋ..? ಅದು ಅವನಿಗೆ ಗೊತ್ತು.

ತಿರುಪತಿ ಭಂಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x