ನೆನಪಿನಂಗಳದಲ್ಲಿ ಒಂದು ಪುಟ್ಟ ವಾಕ್: ಭಾರ್ಗವಿ ಜೋಶಿ

ಜೀವನದಲ್ಲಿ ನೆನಪುಗಳು ಅಂದರೇನೇ ಸುಂದರ. ಆ ಕ್ಷಣಕ್ಕೆ ಅತಿಯಾದ ನೋವು ಕೊಟ್ಟ ವಿಷಯಗಳು ಸಹ ಇವತ್ತಿಗೆ ನಗು ತರಿಸುತ್ತವೆ. ಅದಕ್ಕೆ ನೆನಪುಗಳು ಅನ್ನೋದು.

ಈ ರೀತಿಯ ನೆನಪುಗಳ ಆಗರವೇ ನಮ್ಮ ಬಾಲ್ಯ. ಆ ಬಾಲ್ಯದ ನೆನಪುಗಳೇ ನಮ್ಮ ಇಂದಿನ ಈ ಬಡಿದಾಟದ ಬದುಕಿಗೆ ಆಕ್ಸಿಜನ್ ಅಂದ್ರೆ ತಪ್ಪಾಗಲಾರದು. ಅಂತಹ ಬಾಲ್ಯದ ನೆನಪಿನಂಗಳದಲ್ಲಿ ಒಂದು ಪುಟ್ಟ ವಾಕ್ ಹೋಗೋಣ..

ಕಳೆದು ಹೋದ ದಿನವೇ ಬಾಲ್ಯ
ಮರಳಿ ಬರದ ಬದುಕೇ ಬಾಲ್ಯ
ಬಿದ್ದ ಗಾಯವು ಕಲೆಯಾಗಿ
ನೋವುಗಳೆಲ್ಲ ನಲಿವಾಗಿ
ಮಾಸದ ನೆನಪೇ ಬಾಲ್ಯ.

ಮಗುವಾಗಿ ಇದ್ದಾಗ ತುಂಬಾ ಸಮಾದಾನವಾಗಿ ಇದ್ವ? ರಾತ್ರಿಯೆಲ್ಲ ಅಳುತ್ತ ಮನೆಯವರ ನಿದ್ದೆ ಎಲ್ಲ ಹಾಳು ಮಾಡುತ್ತ ಇದ್ವ? ಇದು ಯಾವುದು ನಮಗೆ ನೆನಪಿರಲ್ಲ. ಆದ್ರೆ ಅಮ್ಮ, ಅಜ್ಜಿ ಇವರುಗಳು ಇದರ ಬಗ್ಗೆ ಹೇಳಿದ್ದು ಮಾತ್ರ ನೆನಪಿರತ್ತೆ. ಹುಟ್ಟಿದ ಮಗುವಿಗೆ 4 ವರ್ಷದ ವರೆಗೂ ಬದುಕು ಒಂದು ಸುಂದರ ಸ್ವರ್ಗ. ಸರಿ-ತಪ್ಪು, ಮೋಸ -ಕಪಟ, ಗೆಲುವು -ಸೋಲು ಯಾವುದರ ಪರಿವಿಲ್ಲದೆ ಸ್ವಚ್ಛಂದವಾಗಿ ನಲಿದ ಸಮಯ ಅದು. ಅದಕ್ಕೆ ಅನಿಸತ್ತೆ ದೇವರು ಆ ವಯಸ್ಸಿನ ನೆನಪುಗಳನ್ನು ಮಬ್ಬಾಗಿಸಿದ್ದಾನೆ. ಮುಂದೆ 4- 5 ವಯಸ್ಸಿನಿಂದ ಎಲ್ಲ ನೆನಪುಗಳು ಖಂಡಿತ ಹಸಿರಾಗಿರುತ್ತವೆ.

ಮೊದಲ ಸಲ ಅಮ್ಮನ ಮಡಿಲಿಂದ ಸ್ವಲ್ಪ ಹೊತ್ತು ದೂರ ಇರಬೇಕಾದ ಸಮಯ. ಬೇಡ ಅಂತ ಅತ್ತರು ಕೇಳದೆ ಎಳ್ಕೊಂಡು, ಹೊತ್ಕೊಂಡು ಹೋಗಿ ಶಾಲೇಲಿ ಕೂಡಿಸಿ ಬರೋರು. ಅತ್ತು ಅತ್ತು ಕೊನೆಗೆ ಟೀಚರ್ ಅಟ್ಟದ ಮೇಲಿರೋ ಗುಮ್ಮಾ ಬರತ್ತೆ ಅಂತ ಹೆದರಿಸಿದಾಗ ನಿಜ ಅಂತ ನಂಬಿ ಸುಮ್ಮನಾಗಿರ್ತೀವಿ. ಯಾವುದಕ್ಕೂ ಅಂಜದವರು ಟೀಚರ್ ಗೆ ಅಂಜಿಸಿರ್ತಾರೆ ಅನ್ನೋದು ನಿಜ. ಆಮೇಲೆ ದಿನ ಕಳೆಯುತ್ತಾ ಆ ಶಾಲೆ ಎಂಬ ಜಗತ್ತು, ಹೊಸ ಗೆಳೆತನ ಹೊಸ ಕಲಿಕೆ ಗೆ ಮನಸು ವಾಲುತ್ತಾ ಹೋಗುತ್ತದೆ. ಟೀಚರ್ ಹೇಳಿದ್ದೆ ವೇದ ವಾಕ್ಯ ಅನ್ನೋ ನಂಬಿಕೆ ಚಿಗುರೊಡೆಯುತ್ತದೆ. ಅಮ್ಮ, ಅಪ್ಪಾ, ಅಜ್ಜಿ, ತಾತಾ, ಆಟಿಕೆ ಇಷ್ಟೇ ಗೊತ್ತಿರುವ ಬದುಕು ಹೊಸ ಜಗತ್ತಿಗೆ ಕಾಲಿಟ್ಟಾಗ ಅದೊಂದು ಸುಂದರ ಅಧ್ಯಾಯ.

ಹುಡುಗಿಯರು ಒಂದು ಗುಂಪು, ಹುಡುಗರು ಒಂದು ಗುಂಪು ಅಂತ ಮಾಡಿ ಲಗೋರಿ ಆಡಿದ್ದು, ಕಬ್ಬಡ್ಡಿ ಆಡಿದ್ದು, ಆಟ ಆಡೋವಾಗ ಸ್ವಲ್ಪ ಪೆಟ್ಟಾದ್ರು ಸರ್ ಗೆ ಹೇಳ್ತಿನಿ, ಅಪ್ಪನ್ನ ಕರ್ಕೊಂಡು ಬರ್ತೀನಿ ಅದು ಇದು ಅಂತ ಹೆದ್ರಿಸಿ ಬೆದ್ರಿಸಿ ಪಾಪಾ ಹುಡುಗ್ರನ್ನ ಸೋಲಿಸಿ ಗೆದ್ದು ಬಿಟ್ವಿ ಅಂತ ಬೀಗೊ ಹುಡುಗಿಯರು, ಅದೇ ಕೋಪಕ್ಕೆ ರನ್ನಿಂಗ್ ರೇಸ್‌‌ ನಲ್ಲಿ ಕಾಲು ಅಡ್ಡ ಹಾಕಿ ಬೀಳಿಸಿ ಸೇಡು ತೀರಿಸಿಕೊಳ್ಳೋ ಹುಡುಗರು.

ಅವಳು ಇವಳ ಜೊತೆ ಮಾತು ಬಿಟ್ಟಳು, ಇವಳು ಅವಳ ಜೊತೆ ಮಾತು ಬಿಟ್ಟಳು ನೀನು ಯಾರ ಪಾರ್ಟಿ ಅನ್ನೋ ಕಿತ್ತಾಟ… ಇದೆಲ್ಲ ಬೇರೆ ಕಥೆ. ಮತ್ತೆ ನಾಳೆ ಎಲ್ಲರು ಆಟ ಆಡೋವಾಗ ಒಂದೇ ಪಾರ್ಟಿ.

ನೀವಿಬ್ರು ಪಕ್ಕದಲ್ಲಿ ಕುಳಿತರೆ ತುಂಬಾ ಮಾತಾಡ್ತಿರ ಅಂತ ಜಾಗ ಬದಲಾಯಿಸೋ ಟೀಚರ್ ಗೆ ಪಾಪಾ ಗೊತ್ತೇ ಇರುತ್ತಿರಲಿಲ್ಲ ಅಲ್ಲಿರೋ ಹುಡುಗಿ ಜೊತೆ ಇನ್ನು ಜಾಸ್ತಿ ಮಾತಾಡ್ತೀವಿ ಅಂತ.

ಪಂಚಮಿ ಗೆ ಹಾಡು ಹಾಡುವ ಕಂಪಿಟೆಷನ್.‌ ಜನ್ಮಾಷ್ಟಮಿ ಗೆ ಕೃಷ್ಣ -ರಾಧಾ ವೇಷಭೂಷಣ ಸ್ಪರ್ಧೆ, ಅದರಲ್ಲಿ ಕೃಷ್ಣ ಆದ ಆ ಲಾಸ್ಟ್ ಬೆಂಚ್ ಹುಡುಗ ಎಷ್ಟು ಕ್ಯೂಟ್ ಕಾಣಸ್ತಿದ್ದ. ಅಯ್ಯೋ ಆ ಕೆಂಪು ಲಂಗ ತೊಟ್ಟಿದ್ದ ರಾಧೆ ಅಂತೂ ಮಸ್ತ್. ಇವೆಲ್ಲ ಫೋಟೋಗಳು ಇನ್ನು ಬೀರುವಿನ ಒಂದು ಮೂಲೆಯಲ್ಲಿ ಖಂಡಿತ ಇದ್ದೆ ಇರುತ್ತವೆ.

ಮೊದಲನೇ ಸಲ ಸೈಕಲ್ ಕಲೆಯೋಕೆ ಬಾಡಿಗೆ ಸೈಕಲ್ ಹತ್ತಿ ಓಡಿಸಿದ್ದು, ಎದುರಿಗೆ ಬರ್ತಿದ್ದ ಅಜ್ಜಿಗೆ ಡಿಕ್ಕಿ ಹೊಡೆದು ಅವರ ಹತ್ತಿರ ಗಂಡುಬೀರಿ ತರಹ ಸೈಕಲ್ ತಗೊಂಡು ಬೀದಿ ಸುತ್ತುತ್ತೀಯ ಅಂತ ಬೈಸ್ಕೊಂಡಿದ್ದು ಇವತ್ತು ಗಾಡಿ ಓಡಿಸುವಾಗೆಲ್ಲ ನೆನಪು ಬರತ್ತೆ. ಒಮ್ಮೆ ಸೈಕಲ್ ಇಂದ ಬಿದ್ದು ಕಾಲಿಗೆ ಪೆಟ್ಟಾಗಿ ಕುಂಟುತ್ತಾ ನಡೆಯುತ್ತಾ ಅಯ್ಯೋ ಕಾಲು ನೋವು ನಡೆಯೋಕೆ ಆಗ್ತಿಲ್ಲ ಅಂತ 4ದಿನ ಶಾಲೆಗೆ ಚಕ್ಕರ್. 5ನೇ ದಿನ ಕೂಡ ನಡೆಯೋಕೆ ಬರ್ತಿಲ್ಲ ಅಂತ ಡಾಕ್ಟರ್ ಮುಂದೆ ಹೇಳಿದಾಗ ಜೋರಾದ ಪೆಟ್ಟು ಏನು ಬಿದ್ದಿಲ್ಲ 5ದಿನ ಆದ್ರೂ ನಡೆಯೋಕೆ ಬರ್ತಿಲ್ಲ ಅಂದ್ರೆ ಇದರ ಒಳಮರ್ಮ ಅರ್ಥ ಮಾಡಿಕೊಂಡ ಡಾಕ್ಟರ್ ಅಮ್ಮನ್ನ ಆಚೆ ಕಳಿಸಿ ” ಇನ್ನು ನಾಲ್ಕು ದಿನ ಶಾಲೆಗೆ ರಜೆ ಅಂತ ಬೇಕಾದ್ರೆ ಬರೆದು ಕೊಡ್ತೀನಿ ಆದ್ರೆ ನೋವು ಕಮ್ಮಿ ಆಗಿದೆ ತಾನೇ ನಿಜ ಹೇಳು ಅಂದಾಗ ಅನಿವಾರ್ಯವಾಗಿ ತಲೆ ತಗ್ಗಿಸಿ ಹೌದು ಅಂತ ಗೋಣು ಹಾಕಿದ್ದ ನೆನಪು, ಆ ಡಾಕ್ಟರ್ ಇವತ್ತಿಗೂ ಎದುರು ಸಿಕ್ಕಾಗ ನೆನಪಿಸಿ ನಗುತ್ತಾರೆ.

ಹೀಗೆ ನಿತ್ಯವೂ ಅಂಗಳದಲ್ಲಿ, ಚಂದ್ರನ ಬೆಳಕಲ್ಲಿ ಅಮ್ಮನ ಕೈ ತುತ್ತು ತಿನ್ನುತ್ತಿದ್ದ ನೆನಪು, ಒಮ್ಮೊಮ್ಮೆ ರಜೆ ಗೆ ಬಂದ ಕಸಿನ್ ಗಳು ಎಲ್ಲ ಸೇರಿ ಅಜ್ಜಿ ಕಥೆ ಕೇಳುತ್ತ ಊಟ ಮಾಡುತ್ತಿದ್ದ ನೆನಪುಗಳು. ಎಲ್ಲರು ಸೇರಿ ಒಮ್ಮೊಮ್ಮೆ ಆಟ, ಒಮ್ಮೊಮ್ಮೆ ಕಿತ್ತಾಟ, ಒಂದೇ ಗೊಂಬೆಗಾಗಿ, ಸೈಕಲ್ಗಾಗಿ, ಹೀಗೆ ಯಾವುದಕ್ಕೋ ಕಿತ್ತಾಡಿ ಒಬ್ಬರಿಗೊಬ್ಬರು ಹೊಡೆದಾಡಿ ಅತ್ತು ಕರೆದು ರಾಮಾಯಣ.. ಅಪ್ಪಾ, ದೊಡ್ಡಪ್ಪ ಹತ್ತಿರ ಎಲ್ಲ ಚಾಡಿ ಹೇಳಿ ಆದ್ರೆ ಸರಿ ತಪ್ಪು ಯಾರದೇ ಇರಲಿ ಏಟು ಬೀಳೋದು ಮಾತ್ರ ಅಲ್ಲಿ ದೊಡ್ಡವರು ಯಾರು ಇರುತ್ತಾರೋ ಅವರಿಗೆ, ಚಿಕ್ಕವರನ್ನು ಸಂಭಾಳಿಸಲು ಬರಲ್ವಾ ಅನ್ನೋ ಬುದ್ಧಿ ಮಾತು ಬೇರೆ. ಮಾಡೋ ಕಿತಾಪತಿ ಮಾಡಿ ಏನು ಮಾಡೇ ಇಲ್ಲ ಅನ್ನೋ ತರಹ ಮೂಲೇಲಿ ನಿಂತು ನೋಡ್ತಾ ಇರೋ ತಂಗಿ – ತಮ್ಮನ್ನ ಆಮೇಲೆ ಆಚೆ ಬನ್ನಿ ನೋಡ್ಕೋತೀನಿ ಅನ್ನೋ ಸಿಟ್ಟು ಅಕ್ಕಾ -ಅಣ್ಣನಿಗೆ. ಈಗೆಲ್ಲ ನೆನಪಾದಾಗ ಆ ಏಟುಗಳು ಎಷ್ಟು ಸವಿ ಅನಿಸುತ್ತವೆ.

ಒಂದು ಗಂಟೆ ಕಿತ್ತಾಟ, ಮತ್ತೆ ಅದೆಲ್ಲ ಮರೆತು ಹೊಸ ಆಟ, ಹೊಸ ತರ್ಲೆಗಳು. ಅತ್ತೆ ಮಗಳ ಜಡೆ ಹಿಡಿದು ಎಳೆಯುವುದು, ನನ್ನೇ ಮದ್ವೆಮಾಡಿಕೊಳ್ಲಿಲ್ಲ ಅಂದ್ರೆ ನಿಮ್ ಅಪ್ಪನಿಗೆ ಹೇಳಿನೇ ನಿನ್ನ ಹೊತ್ಕೊಂಡು ಹೋಗ್ತೀನಿ ಕಣೆ ಅಂತ ರೇಗ್ಸಿದ್ದು. ಮಾವನ ಮಗನಿಗಾಗಿ ಫರ್ಸ್ಟ್ ಟೈಮ್ ಚಹಾ ಮಾಡಿಕೊಟ್ಟಿದ್ದು, ದೊಡ್ಡಮ್ಮನ ಮನೆ ಫಂಕ್ಷನ್ ಗೆ ಮೊದಲನೇ ಸಲ ಸೀರೆ ಉಟ್ಟಿದ್ದು. ನಡೆಯೋಕೆ ಬರದೇ ಎಡವಿ ಬಿದ್ದು ಎಲ್ಲರು ನಕ್ಕಾಗ ಅಳ್ತಾ ಹೋಗಿ ಅಜ್ಜಿ ಮಡಿಲು ಸೇರಿದ್ದು. ಇವಲ್ಲ ಮಾಸದ ನೆನಪುಗಳು.

ಹೀಗೆ ನಿಮ್ಮ ಸಿಹಿ – ಕಹಿ ನೆನಪುಗಳನ್ನು ಮೆಲಕು ಹಾಕುತ್ತ ಇರಿ. ಮತ್ತೆ ಮುಂದಿನ ಸಂಚಿಕೆಯಲ್ಲಿ ಬರ್ತೀನಿ ಇನ್ನಷ್ಟು ನೆನಪಿನ ಬುತ್ತಿ ಹೊತ್ತು.

ಧನ್ಯವಾದಗಳು.

ಇಂತಿ ನಿಮ್ಮನೆ ಮಗಳು

ಭಾರ್ಗವಿ ಜೋಶಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x