ಮಾನಸಿ: ಮಹಾದೇವ ಹಡಪದ

       
ಬರೋ…. ಬಂಧು ಬಳಗ ದೊಡ್ಡದು, ಆದ್ದರಿಂದ ಮದುವಿ ಮನಿ ತುಂಬ ಬರೇ ಹೊಯ್ಯ-ನಯ್ಯ ಮಾತುಕತೆ ಜೋರಾಗಿ ನಡೆದಿತ್ತು. ಅತ್ತಿ ಮಾವ ಬಂದ ಮಂದೀನ ಸಂಭಾಳಸಲಿಕ್ಕ ಮತ್ತು ಯಾವ ಅನಾನುಕೂಲ ಆಗಧಂಗ ನೋಡಕೊಳ್ಳಲಿಕ್ಕ ಒದ್ದಾಡೊ ಆ ಹೊತ್ತಿನಾಗ ಮನುಕುಮಾರ ಮತ್ತವನ ವಿಧವೆ ತಾಯಿ ಶಿವಕ್ಕ ಧೂಳಸಂಜಿ ಅಷ್ಟೊತ್ತಿಗೆ ಬಂದ್ರು. ‘ಇದೇನವಾ ಬೆಂಗ್ಳೂರು ಸೇರಿದ್ದ ಮಗರಾಯ ಅಪರೂಪಕ್ಕ ಅತ್ತಿ ಮನೀಗೆ ಬಂದನಲ’್ಲ ಸಣ್ಣತ್ತಿ ಚಾಷ್ಟಿ ಮಾಡಿದಳು. ಹೌದು ನಾಟಕ, ಹಾಡು, ಕುಣಿತ ಅಂತ ತಿರುಗೋ ಮನಶ್ಯಾ ಆದ ಮ್ಯಾಲ ಬೀಗರ ಒಳಬಳಿಕಿ ಕಮ್ಮಿ ಆಗಿದ್ದದ್ದು ಈಗ ಅವನನ್ನ ವಿಚಿತ್ರ ಮುಜುಗರಕ್ಕ ತಂದಿಟ್ಟಿತ್ತು. ‘ಏನು ಓದು, ಏನು ಕೆಲಸಾ ?” ಹಿಂಗ ಅಡ್ಡಡ್ಡ ಪ್ರಶ್ನೆ ಮಡುವ ಸಲುವಾಗಿ ಯಾರ ಸಲುಗೆಗೂ ಬೀಳದ ಧಾರವಾಡ ಸೇರಿ, ಮುಂದ ಬೆಂಗ್ಳೂರು  ಗಾಂಧಿನಗರದಾಗ ಗಿರಕಿ ಹೊಡಿತಿದ್ದ ಮನು ಈಗ ಇಂಗು ತಿಂದ ಮಂಗನ್ಹಂಗ ನಿಂತಿದ್ದು ಚನ್ನಿ ಕಣ್ಣಾಗ ಗೊಂಬ್ಯಾಗಿ ಮೂಡಿತು. ಮನಸಿನ ಗುದಮುರಗಿ, ಮಾತಾಡಿಸುವ ತಳಮಳ, ಕಣ್ಣ ಸನ್ನೆ, ಕೈ ಸನ್ನೆ, ಮುಗುಳ ನಗೆ ಹಿಂಗ ಯಾವ ಯಾವದೋ ಭಾಷೆಯೊಳಗ ತನ್ನನ್ನು ಸೆಳಿಯುವ ಕರಾಮತ್ತನ್ನ ವಾರೆ ನೋಟದಾಗ ಗುರುತ ಮಾಡಿಕೊಂಡಿದ್ದ. ಊಟಾ ಮುಗಿಸಿ ಸಿಗರೇಟು ಸೇದಲಿಕ್ಕ ಮಾಳಿಗೆ ಹತ್ತಿ ಇನ್ನೇನು ಕಡ್ಡಿ ಗೀರಬೇಕು “ಮನು ಹೆಂಗಿದ್ದೀ” ಅವನ ಕೈ ಕಾಲು ತಣ್ಣಗಾಯ್ತು. ಕಣ್ಣಾಗ ಕಣ್ಣಿಟ್ಟು ಮನು ಆಚೀಚೆ ಹೋಗುವುದನ್ನೇ ಕಾಯುತ್ತಿದ್ದ ಚನ್ನಿ ಚಂಗನೆ ಮಾಳಿಗೆ ಹತ್ತಿ ಬಂದಿದ್ದಳು. ನೆತ್ತಿ ಮೇಲೆ ಮೊಳೆ ಹೊಡೆದಂತೆ ಮಾತಿನ ಜಡಿಮಳೆ ಬಾಯಿ ತೆರಪಿಲ್ಲದೆ ಧಾರಾಕಾರ – ಎಳೆತನದ ಆಟದಿಂದ ಬೆಂಗ್ಳೂರು ಬವಣೆ ತನಕ ಬರೀ ಮಾತು…. ನೇರ ಮಾತಾಡೋ ಅವಳ ಸ್ವಭಾವ ಒಂದೀಟು ಬದಲಾಗಿರಲಿಲ್ಲ.  ಅದು ಇದು ಆಗು ಹೋಗುಗಳ ಲೆಕ್ಕಾಚಾರದ ಮಾತು ಮುಗಿಸಿ ಮದುವಿ ಮಾತು ಆಡಿದಾಗ ಇಂವನ ಕೈ ಕಾಲೊಳಗ ಖರೇನ ನಡುಕ ಸುರುವಾಗಿತ್ತು. ಹಾರಿಸಿ ಮಾತಾಡಲಿಕ್ಕ ಪ್ರಯತ್ನ ನಡೆಸಿದಷ್ಟು ಆಕೀ ಹಂತ್ಯಾಕ ಬರಲಿಕ್ಕ ಹತ್ತಿದ್ದಳು. ಮತ್ತ ಹೇಳಬೇಕಂದ್ರ ಆಕೀ ಮನಶ್ಯಾನಾಗ ಗಂಡಸು ಅಂದ್ರ ಇವನೊಬ್ಬ ಆಗಿದ್ದ. “ಮದುವಿ ಅಂತ ಆದರ ನಿನ್ನ ಸಂಗ್ತೀನ” ಮನಸಿಗೆ ಹಗರ ಅನ್ನಸಲಿಕ್ಕ ಅಳಲಿಕ್ಕ ಹತ್ತಿದಳು. ಆಕೀಗೆ ಗೊತ್ತಿತ್ತು- ಅಕ್ಕನ ಮದುವಿ ಮುಗದ ಮ್ಯಾಲ ತನ್ನದ ಪಾಳೆ ಅನ್ನೋದು. ಕುಸಕ್ ಕುಸಕ್ ಬಿಕ್ಕಿದಳು.
ದೆವ್ವ ಬರೋ ಹೊತ್ತು ಒಳಗ ಬಂದು ಮಲ್ಕೊಳ್ಳಿ, ಯಾರೋ ಹೆದರಿಸಲಿಕ್ಕಾಗಿ ಒದರಿದರು. ಒರಟು ಸ್ವಭಾವದ ಆ ಹುಡುಗಿದು ಥೇಟ ಗಂಡಸಿನ ಥರ ಹೋಲಿಕೆ, ಗಂಡರಾಮಿ ಅಂತ ಆಡಿಕೊಂಡರೂ ಕ್ಯಾರೆ ಅನ್ನಲಾರದ ಜಿಗುಟತನದಿಂದಾಗಿ ಆಕೆ ಸಂಗಡ ಬರೇ ಹುಡುಗರು ಮಾತ್ರ ಆಡಲಿಕ್ಕ ಬರತಿದ್ದರು, ಈಸು ಹೊಡೆಯೋದು ಅಂದ್ರ ಪಂಚಪ್ರಾಣ. ಸುಡುಗಾಡು ದಾರಿ ಮ್ಯಾಗ ಇದ್ದ ಅಗಸರ ಬಾವಿಯೊಳಗ ಗುಳು ಗುಳ ಗುಳಕ್ ನೀರು ಕುಡಿತಿದ್ದ ಅಮರೇಶ ಎರಡು ಸಲ ಮುಳಗೆದ್ದು ಉಸರಾಡಲಿಕ್ಕ ಚಡಪಡಸತಿರಬೇಕಾದರ ಮಂಗ ಮಾಯಾ ಆಗಿ ನೀರೊಳಗ ಸುರಂಗ ಹೊಡದು ಕಾಲೀಲೆ ಒದ್ದು ದಡಕ್ಕ ತಂದ ಜೀವರಕ್ಷಕಿ ಚನ್ನಕ್ಕ. ಆಟದ ಮೈದಾನದಾಗ ಸೈತ ಆಕೀದ ದರಬಾರು. ಖೋಖೋ, ವ್ಹಾಲಿಬಾಲ, ಕಬಡ್ಡಿ, ರಿಲೆ, ಗುಂಡೆಸೆತ, ಓಟ, ಉದ್ದ ಮತ್ತು ಎತ್ತರ ಜಿಗಿತ ಯಾವ ಆಟದಾಗೂ ಹಿಂದ ಬೀಳಲಾರದ ಧಾಡಸಿ ಹುಡುಗಿ. ಹಂದರದ ಹೊದಿಕೆ ಕೆಳಗ ಗಾಳಿಗೆ ಮಲಗಿದ್ದ ಮುದುಕ ಗೂರಿ ಕೆಮ್ಮಿ ಕ್ಯಾಕರಿಸಿ ಕಫ ಉಗದು ಕಂವುಚಿ ಮಲಗಿದ, ಬಂದ ಬೀಗತಿಯರು ಎಳಸಲ-ಪಳಸಲ ಮಕ್ಕಳನ್ನ ತೋಳ ದಿಂಬಿನ ಮ್ಯಾಲ ಮಲಗಿಸಿಕೊಂಡು ಮಾತಾಡ್ತ ತಾವು ಗೊರಕಿಯೊಳಗ ಮುಳಗಿದ್ದರು. ಹಾರ್ನ ಒದರಿ ಒದರಿ ಸಾಕಾಗಿ ಕ್ಯಾಸೆಟ್ ಪ್ಲೇಯರ್ ಥಟ್ಟಂತ ನಿಂತು ನೀರವ ಮೌನದೊಳಗ ಊರಿಗೆ ಊರೇ ಥಣ್ಣಗ ಮಲಗಿತ್ತು. 

‘ರಾತ್ರಿ ಭಾಳ ಸಣ್ಣದು ಲಗೂಣ ಹೇಳು’ ಮೆಲ್ಲಕ ಉಸುರಿದಳು.
ಮಾಳಿಗೆ ಮ್ಯಾಲಿನ ಹವಾ ಥಣ್ಣಗ ಹೊಂಟಿತ್ತು. ಬ್ಯಾಸಿಗಿ ಬೈಗು ಥಂಡಿ ಆದ್ದರಿಂದ ಮನು ‘ಮಲಗಲಿಕ್ಕ ಯಾಳೆ ಆಯ್ತು’ ಅಂದವನೆ ಒಂದೆರಡು ಮೆಟ್ಟಲು ಇಳದಿದ್ದ,
 “ಖರೆ ಹೇಳ್ತೀನಿ ಮನು ನನ್ನ ಮನಸಿನ್ಯಾಗ ನಿನ್ನ ಪರಂತು ಮತ್ಯಾರಿಗೂ ಜಾಗ ಇಲ್ಲ. ನೀನು ನಿಕ್ಕಿ ಮಾಡಕೋ… ನಾನು ನಾಳಿ ಸೂರ್ಯನ್ನ ನೋಡೊದಿಲ್ಲ” ಆಕೆ ನಿಶ್ಚಯಿಸಿ ನಿಡುಸುಯ್ದು ಕಣ್ಣೀರು ಹಾಕಲು ಹಿಂದೇಟು ಹಾಕುತ್ತಿದ್ದಳು. “ಆ ಚಂದ್ರ, ಆ ಚಂದಪ್ಪ ಆ ಚಂದಮಾಮ ಎನು ಚಂದ ಕಾಣಸ್ತಾನ ನೋಡು” ಎದೆ ಮ್ಯಾಲ ಕೈಕಟ್ಟಿ ಗಿಳಿ ಪಾಠ ಏನೇನೋ ಗೊಣಗಿದ, ಬಲಗೈ ತೋರುಬೆರಳ ಹಲ್ಲೊಳಗ ಇಟ್ಟು ಉಗುರು ಕಡಿತಿದ್ದ. ಕಣ್ಕಟ್ಟು ಕನಸುಗಾರ  ಸಬೂಬ ಹೇಳಿ ಪಾರಾಗಲಿಕ್ಕ ಒದ್ದಾಡತಿರಬೇಕಾದರ ಆಗಸದ ಚಂದಪ್ಪನ ಸುತ್ತ ಕಟ್ಟಿದ್ದ ಕಟ್ಟೆ  ಮೂಢಣ ದಿಕ್ಕಿಗೆ ಒಡೆದು ಮಿಣುಕು ಮಿಣಕಿನ ಬೆಳ್ಳಿ ಚುಕ್ಕಿ ಹೊಳೆಯಿತು. “ನನಗ ಟೈಮ್ ಕೊಡು, ಹೆಚ್ಚಲ್ಲ ಒಂದ ವರ್ಷ’, ಅವಳ ಭಾಷೆ ಅದ್ಯಾವ ಮಾಯದಿಂದ ಅವನೊಳಗ ಹೊಕ್ಕಿತ್ತೋ ಗೊತ್ತಿಲ್ಲ… ‘ನಾ ನಿನ್ನ ಇಂಗಿತ ತಿಳದ ಮಾತಾಡತೀನಿ ತಿಳಕೊ, ಬೆಂಗಳೂರ ಮೈ ಯಾವುದೂ ಅಂತ ಹೇಳಲಿಕ್ಕ ಬರೊದಿಲ್ಲ. ಕೆಂಪು ಹಳದಿ ಹಸಿರು ಬಣ್ಣದ ಗುರುತ ನಮಗ ದಾರಿ ತೋರಿಸಿದಷ್ಟು ಸರಳ ಅಲ್ಲ ಆ ಊರ ಜೀವನ, ಈಗ ನಾ ಹೊಂಟ ಹಾದಿ ನಿನ್ನ ಚಲೋ ನೋಡಕೊಳ್ಳಲಿಕ್ಕ ಅನುವು ಮಾಡತದ ಅನ್ನೊ ನಂಬಿಕೆ ಎಳ್ಳಷ್ಟು ಇಲ್ಲ, ಒಂದ ಹಂತಕ್ಕ ಬಂದ ಮ್ಯಾಲ ಮದುವಿ ಅಂದಕೊಂಡಿದ್ದೆ, ಇರಲಿ, ಒಂದ ವರ್ಷ ಟೈಮ್ ಕೊಡು.” ಮೌನದ ಉಸಿರು ಮಾತಾಡಿಕೊಳ್ಳುವಷ್ಟು ಹೊತ್ತು ಇಬ್ಬರು ನಿಂತೆ ಇದ್ದರು. ಅಂದಾಜು ಆ ರಾತ್ರಿಯ ನಿದ್ದೆ ಹಾರಿ ಹೋದ ಕಾರಣ ಒಳೊಳಗೆ ಆಗುಹೋಗು ಧೇನಿಕೊಳ್ಳುತ್ತಿದ್ದರು. 

ಮತ್ತದೆ ದಿಬ್ಬಣದ ಗದ್ದಲ, ಮೈಕ್ ಅರಚಾಟ, ಬೀಗರು ಬಿಜ್ಜರ ಸಂಭ್ರಮ ಯಥಾ ನಡೆಯಿತು. ಎಲ್ಲ ಮುಗಿದಾದ ಮ್ಯಾಲೆ ಮುಂದಿನ ಹೋಳಿಗೆ ಊಟದ ಹೊಸ ಜೋಡಿ – ಚನ್ನಕ್ಕನ ಸರದೀ, ಎಂದು ಸೋದರತ್ತೆ ಕಣ್ಣ ಮಿಟುಕಿಸಿ ನಕ್ಕಳು. ಮನುಕುಮಾರ ಆ ಚಾಷ್ಟಿಯಿಂದ ತಪ್ಪಿಸಿಕೊಳ್ಳಲು ಹವಣಿಸಿದ್ದ ಆದರ್ಯಾಕೋ ಜೀವದ ಬಗೆ ಏನನ್ನೊ ಹೇಳಲಿಕ್ಕ ಬಯಸುತ್ತಿತ್ತು. ಅವಳ ಮುಖದಲ್ಲಿ ಅನುಮಾನದ ಗೆರೆಗಳು ಹರಸಾಹಸ ಮಾಡಿ ದೈನ್ಯದಿಂದ ಬೇಡಿಕೊಳ್ಳುತ್ತಿದ್ದವು – ನಡು ನೀರೊಳಗ ಕೈ ಬಿಡಬ್ಯಾಡ, ಮುಂದಿನದು ನನ್ನ ಪಾಳೆ, ನೀ ತಾಳಿ ಕಟ್ಟು ಸಾಕು ಮನೆತನ ತೂಗಿಸೋ ಜವಾಬ್ದಾರಿ ನಂದು – ಆಕೆಯ ಕಣ್ಣು ದಣಿದಿದ್ದವು. ಇವನ ಕಣ್ಣಿಂದ ಯಾವ ಭರವಸೆಯ ನೋಟ ಅತ್ತ ದಾಟಲಿಲ್ಲ. ತೂಕದ ಹೆಜ್ಜೆ  ಅಗದಿ ಎತ್ತಿಡಲಾಗದ ಸಂಕಟ ತಂದಿತ್ತು. ಮಾನ್ವಿಯಿಂದ ಹೊರಡುತ್ತಲೆ ಭರ್ತಿಯಾಗಿ ಇಂಥದೆ ಮದುವೆಗೋ ಸೂಟಿಗೋ ಜಾತ್ರೆಗೋ ಹೋಗಿದ್ದ ಮಂದಿಯ ತುಂಬಿಕೊಂಡಿದ್ದ ಸರಕಾರಿ ಕೆಂಪು ಬಸ್ಸಿನಲ್ಲಿ ಕಾಲಿಡಲು ಜಾಗವಿರಲಿಲ್ಲ ಖರೇ, ಅದೆ ಕಡೆಯ ಮೋಟಾರ ಆದ್ದರಿಂದ ಒಲ್ಲದ ಮನಸ್ಸಿನಿಂದ ಹತ್ತರೊಳಗೆ ಹನ್ನೊಂದಾಗಿ ನಿಂತವರ ಮೈಗೆ-ಮೈ ಅಮರಿಕೊಂಡು ಹೊಟ್ಟೆಯತ್ತ ಮುಖ ಮಾಡಿ ಹೊರಟು ಬಿಟ್ಟ. ಈಟೇ ಈಟು ಬಲಗೈ ಮೇಲೆತ್ತಿ ಟಾಟಾ ಮಾಡಿದ್ದ ಮತ್ತು ಮೆಲಕಾಸೆ ಮುಗುಳು ನಕ್ಕ ಆ ಮುಖ ತೂಕಡಿಸುವ ಕಣ್ಣು ತುಂಬ ತುಂಬಿಕೊಂಡು ಭರಾಟೆಯ ಬೆಂಗ್ಳೂರು ಸೇರಿಕೊಂಡ.
ದಟ್ಟಿ ಕುಣಿತದ ಢೋಲಕಿ ನುಡತ ಕಿವಿಯೊಳಗ ರಣಗುಡುತಿತ್ತು. ಕಣ್ಣು ತೆರೆದಾಗ ಲೋಕವೆಲ್ಲ ಆಪ್ತವಾಗಿ, ಬೆನ್ನ ನೀವಿ, ಹೊಸ ಉಸಿರಾಟದ ಹೊಸ ಹುರುಪು ತುಂಬುವ ಹದವಾದ ಬೆಳಗು. ಖಾಸಾ ನೆಂಟನಂತೆ ಒಡನಾಡುವ, ಖೋಲಿಯ ಬಾಡಿಗೆ ಹಂಚಿಕೊಳ್ಳುವ, ಆಗೀಗ ಸಣ್ಣ ಪುಟ್ಟ ಖರ್ಚಿಗೆ ಆಗುತ್ತಿದ್ದ ಪಾಟೀಲ ಅವಸರ ಅವಸರವಾಗಿ ಬೆಂಗಳೂರು ಕಟ್ಟಲು ತಯಾರಾಗುತಲಿದ್ದ. ಮುಸುಕು ಮುಚ್ಚಿಕೊಂಡ ಹೆಂಗಸು ನಸುನಕ್ಕ ಭ್ರಮೆಯೊಳಗೆ ಸಣ್ಣದಾಗಿ ನಗಾಡಿದ, ನಗುತ್ತಲೇ ವೈನಾದ ಚನ್ನಿಯ ನೆನೆದು ಪಾದಮಸ್ತಕ ಏಕಾಗಿ ಹುರಿಗೊಂಡು ಮೈಮುರಿದ.  ಜಾನಪದ ಹಾಡು, ಕತೆಗಳಲ್ಲೆಲ್ಲ ಮಾಮೂಲಾಗಿರುವ ಆಕೆಯ ಹೆಸರು ಅವಳ ಧಾಡಸಿತನಕ್ಕೆ ಒಪ್ಪುವುದು, ಆದರೂ ತನ್ನ ಹೆಸರಿನೊಂದಿಗೆ ಅದರ ತಳಕು ಯಾಕೋ ಗಲಿಬಿಲಿ ಎನ್ನಸಿ, ನೂರೆಂಟು ಹೆಸರುಗಳ ಹೊಂದಿಸಿ ನೋಡಿದ – ಚನ್ನಿ, ಚಿನ್ನು, ಚಿನ್ನಾಂಬೆ, ಚಲುವೆ, ಚೈತ್ರ, ಹೀಗೆ ಬಂದ ಚಕಾರದ ಹೆಸರುಗಳನ್ನು ಮನಸ್ಸು ಸುತಾರಾಂ ಒಪ್ಪಲಿಲ್ಲ ಮತ್ತು ಮಕಾರದೊಳಗೆ ಹೆಸರು ಹುಡುಕುಲು ತಡಕಾಡಿದ. ಮನು-ಮಲ್ಲಿ, ಮಲ್ಲಿಕಾ, ಮಾಲಾ, ಮಾಲತಿ, ಮಂಜುಳ, ಮಂದಾಕಿನಿ, ಮೇನಕಾ, ಮೋನಿಕಾ, ಮನೀಶಾ…! ಅವಳು ನನ್ನ ಮನಸ್ಸಿನ ಒಂದು ಭಾಗವಾಗಿ ಹೋದ ಕಾರಣ ಮಾನಸ-ಮನು  ಈಡುಜೋಡು, ಸಿನಿಮೀಯ ಜಗತ್ತನ್ನು ಸೃಷ್ಟಿಸಿಕೊಂಡು ವಿಚಿತ್ರವಾದ ಸುಖ ಅನುಭವಿಸಿದ. ಮೈ ಕಾವು ಕೊಡುವ ಎಳೆ ಬಿಸಿಲಿನ ಜೊತೆ ಮುದ ನೀಡುವ ಚಳಿ ಕಾಯಿಸುವ ಆ ಹೊತ್ತು ಸೋಂಬೇರಿತನದ ಜಿಡ್ಡು ಅಂಟುರೋಗದಂತೆ ಮನಸ್ಸನ್ನೇ ಕಟ್ಟಿ ಹಾಕಿಕೊಂಡಿರುತ್ತದೆ. ಪಾಟಿಲ ಹೋದ ತಕ್ಷಣದ ಏಕಾಂತ ರಂಗದ ಮೇಲೆ ಬರುವ ಸಾತ್ವಿಕ ನಟನ ಪಾತ್ರ ಪೋಷಣೆಯ ರೀತಿಯಲ್ಲಿ ವ್ಯಷ್ಟಿ ಉನ್ಮಾದದ ತುತ್ತ ತುದಿ ಮುಟ್ಟಿತು. ಕರುಳು ಚುರುಗುಟ್ಟಿ ಏನೋ ಕಳೆದುಕೊಂಡ ವಿಲಿವಿಲಿ ಒದ್ದಾಟ ವಾಸ್ತವಕ್ಕೆ ತಂದು ಬಿಟ್ಟಿತು.  ಕೆಲಸ ಮತ್ತು ಬಾಡಿಗೆ ಮನೆ ಹುಡುಕುವುದು ಮನು ಊರು ಬಿಟ್ಟಂದಿನಿಂದ ಈತನಕ ಸದೋದಿತ ಅವನ ಜಾಯಮಾನವಾಗಿ ಒಗ್ಗಿತ್ತು. ಕೆಲಸ ಸಿಕ್ಕಾಗ ಖೋಲಿ ದೂರಾಗಿ, ಖೋಲಿ ಸಿಕ್ಕಾಗ ಕೆಲಸ ಇಲ್ಲದಾಗಿ ತಿಂಗಳಾನುಗಟ್ಟಳೆ ಉಪವಾಸ ವನವಾಸದ ವ್ರತ ಆಚರಿಸಿದ್ದು ಗೆಲ್ಲುವ ಕುದುರೆಯ ಪರೀಕ್ಷೆ ಎಂದು ಭಾವಿಸಿದ್ದ. ಮಾನಸಿಯ ಮುಖದ ಇಂಚಿಂಚು ನೆನಪಾಗಿ ಸಾಧಿಸಲೇಬೇಕಾದ ಹರವಿನ ಬದುಕ ಕಲ್ಪಿಸಿಕೊಂಡು, ತಾನು ಬರೆದಿರುವ ಸೆನೆಮಾ ಕತೆಗಳ (ಹನ್ನೆರಡನೇ ಶತಮಾನದ ಜೋಳಿಗೆಯ ಹಾಗಿದ್ದ ಬಗಲ ಚೀಲದಲ್ಲಿ) ಖಾದಿ ಚೀಲದಲ್ಲಿ ಹಾಕಿಕೊಂಡು, ಬಿರಬಿರನೆ ಹೌದೋ ಅಲ್ಲವೋ ಎನ್ನುವ ಹಾಗೆ ಮೂತಿಗೆ ನೀರು ಚುಮುಕಿಸಿ, ಹೊರವೊಂಟ.
     ಯಾರಲ್ಲಿಗೆ ಹೋಗುವುದು ?
     ಯಾವ ಬಸ್ ಹಿಡಿದರೆ ಎಷ್ಟು ಜನರನ್ನು ಭೇಟಿ ಮಾಡಬಹುದು ?
ಯಾವ ಪ್ರೊಡ್ಯೂಜರ್ ಸಿಕ್ಕಿ ತನ್ನ ಕತೆ ಕೇಳಬಹುದು ? ಹೊಸದಾಗಿ ಬೆಂಗ್ಳೂರು ಕಂಡ ದಿನಮಾನದಲ್ಲಿ ತಿರುತಿರುಗಿ ಸೋತು ಸುಣ್ಣಾಗಿದ್ದ ಮೃತ್ಯುಂಜಯ ಕೊಟ್ಟ ಕಾಣಿಕೆ -ಹಳೆಯ ಡೈರಿ-ಯ ಹಾಳೆಗಳ ತಿರುವಿ ಹಾಕಿ ಫೋನಾಯಿಸಿದ……..

 ಪಾಪ ಆ ದಿವಸ ಆರಂಭವಾದ ಹೊಸ ಶಕೆ ಮುನ್ನುಗ್ಗುವ ಯಾವೊಂದು ಛಲಕ್ಕೂ ಸಾತ್ ಕೊಡಲಿಲ್ಲ. ವರ್ಷವೊಂದರ ಮುನ್ನೂರ ಅರವತ್ತು ದಿನಗಳಂತ ದಿನಗಳೆಲ್ಲ ಭವಿಷ್ಯದ ಹಂಬಲಕ್ಕಾಗಿ ಮನುಕುಮಾರ ಮಹಾನಗರದೊಳಗ ಹಲುಬುತ್ತಿರಲು, ಅತ್ತ ಆ ಕಡೆ ಚನ್ನಕ್ಕ ಸುಳಿವಿಲ್ಲದ ತನ್ನ ಸಿಪಾಯಿಯನ್ನ ಯಾವತ್ತು ಬರುತಾನ ಅಂತ- ರಾಜಕುಮಾರಿ ಹಂಗ ಕುದರಿ ಮ್ಯಾಲ ಬರುವ ಸರದಾರ, ಯುವರಾಜನ ರೀತಿಯೊಳಗ ತನ್ನ ಮನದ ಮಾಯಕಾರನ- ಹಾದಿಗೆ ಹದ್ದಾಗಿ ದಾರಿ ಕಾಯುತ್ತಿದ್ದಳು. ತಿಂಗಳು ತುಂಬಿದ್ದ ದಿವಸ ಎಲ್ಲಿಲ್ಲದ ಅಕ್ಕರಾಸ್ತೆಯಿಂದ ಚಂದ್ರನ ಬೆಳಕು ಉಣ್ಣೋ ಚಕೋರಿ ಆಗಿ ಸರೂರಾತ್ರಿತನಕ ಮಾಳಿಗೆ ಮ್ಯಾಲ ಓಡಾಡೋ ಆಕೆಯ ಬಗೆ ಕಂಡು ಮನೀ ಮಂದಿಗೆಲ್ಲ ದಿಗಿಲು ಹುಟ್ಟಿತ್ತು. ಇದೆಲ್ಲ ಯಾರ ಯಾರದೋ ಮುಖೇನ ಮನು ಕಿವಿಗೆ ಬಂದು ಬೀಳತಿತ್ತು ಅನ್ನೋದ ಅವನ ಇರುವಿಕೆಗೆ ಇರಸ ಮುರುಸು ಮಾಡತಿತ್ತು. ‘ಖರೇ! ಯಾವ ಮನಶ್ಯಾನು ಹಿಂಗ ಆಗಬೇಕು ಅಂತ ಬಗಿಸಿ ಬೇಡಿ ಬಂದಿರೋದಿಲ್ಲ, ಒಂದು ವೇಳೆ – ಹಿಂಗಾಗಬಾರದಿತ್ತು ಅಂತ ನಿರ್ಧಾರ ಮಾಡಬೇಕಿತ್ತು ನಾನು ಮೊದಲ…. ಗುರಿ ತಪ್ಪೈತಿ ಅಂದ ಮ್ಯಾಲ ಇನ್ನ ಯಾರನ್ನ ಅಂದ ಏನಾಗೊದೈತಿ….’ ಹುಡುಕಿಕೊಂಡ ಹೋದ ಕಡೆ ಬರೇ ನಿರಾಸೆ ಎದರುಗೊಂಡದ್ದಕ್ಕೆ ಬ್ಯಾಸರ ಆಗಿ ಮತ್ತ ಮನೀ ಸೇರಲಾರದ ಅಲ್ಲಿ ಇಲ್ಲಿ ಓಡ್ಯಾಡತಿದ್ದಾಗ-ಆ ದಿನ ಅಚಾನಕ್ ಆಕಿ ಫೊನ್ ಬಂತು. ಆ ಕಡೆ ಮಾತಿಲ್ಲ ಬರೇ ಅಳು…..                                      
ಒಂಟಿ ಬೂತ,,, ಏನು ಬಯಸತದ – ಒಂದು ಕಪ್ಪ ಚಾ, ಒಂದ ಸಿಗರೇಟ್ ಅಷ್ಟು ಸಾಕನ್ನಿಸಿತು ಆಗ. ಹೊತ್ತಿಗೆ ಮುಂಚೆ ಬಂದಿದ್ದ ಪಾಟೀಲ ಸೂಟಿ ಸಿಕ್ಕ ದೆಸೆಯಿಂದಾಗಿ  ಪಿಚ್ಚರ್ ನೋಡಲಿಕ್ಕೆ ಹೊರಟಿದ್ದ. ಸೆನೆಮಾ ನೋಡಲು ಕರೆದ ಅವನ ಮೆದು ಮಾತಿಗೆ ಸಪ್ಪೆ ಮೂತಿಯಲ್ಲಿ ಗೋಣು ಅಲ್ಲಾಡಿಸಿ ತಲೆ ಕೆಳಗೆ ಹಾಕಿದ, ‘ಯಾಕೋ, ಏನಾಯತಪ ನಿನಗ,, ಯಾರು ಏನಂದ್ರು ?’ ಕನ್ನಡಿ ಮುಂದೆ ಬಾಚಿಕೊಳ್ಳುತ್ತಿದ್ದ. ಬಿಟ್ಟ ಉಸಿರಿನ ಬಿಸಿ ಅವನ ಮೈ ತಾಗಿರಬೇಕು, ‘ಯಾಕ ಮನು ಏನಾಗ್ಯದ? ಯಾಕ ಹಿಂಗ ಉಸರ್‍ಗರೆದಿ?’ “ಎಲ್ಲಾ ದೈವ, ನನ್ನ ವಿಧಿ” ಥಟಕ್ಕನ ಮಾತು ನಿಲ್ಲಿಸಿದ. ನಶೀಬ ಅನ್ನೋದು ಇನ್ನ್ಯಾರದೋ ಕೈಯೊಳಗ ಇರತದ ಅಂಬೊ ಮಾತು ಒಪ್ಪಲಾರದ ಗಿರಾಕಿ ಇವತ್ತು ಏಕಾಕಿ ವಿಧಿ ಆಟ ಎಂಬ ಸಮಾಧಾನದ ಹೊಸ ಮಾತು ಸುರು ಮಾಡಿದ್ದು ಪಾಟಿಲನಿಗೆ ಗಲಿಬಿಲಿ ಮಾಡಿತು. ‘ಇರಲಿ, ಇವತ್ತು ನಾ ಹೊತ್ತ ಮಾಡಿ ಬರತಿನಿ, ಗೆಳೆಯಾರ ಕೂಡ ಹೊಂಟೇನಿ ನೀ ಉಂಡು ಮಲಗಿರು.’ ದಿನಂಪ್ರತಿಯ ಗೋಳಾಗಿದ್ದ ಇವನ ಆವೇಶದ ಕ್ಷಣ ಹಾಗೇ ಮಲಗಲು ಬಿಟ್ಟು ಹೊರಟು ಹೋದ…. ಅಳಬೇಕು ಅನ್ನಿಸಿತು  ಖರೆ ಅವನ ಕಟ್ಟೆ ಒಡದು ಬರಲೆ ಇಲ್ಲ.  ಸಾಲಾ ಕೊಟ್ಟವರಿಗೆ ಉತ್ತರ ಇಲ್ಲದಾಗಿ, ಪರದೇಶಿತನದ ಹೀನ ಮುಖ ಮಾಡಿ, ಬಿಚ್ಚಲಾರದ ಹಾಸಿಗಿ ಮ್ಯಾಲ ಡಬ್ಬು ಬಿದ್ದು – ಸತ್ತು ಸಾಯದ ಹೆಣ ಆದ. ಅವ್ವ, ಅವ್ವನ ಮಡಲು ಯಾಕೋ ಕಾಡಲಿಕ್ಕ ಸುರುವಾಯತು. ಆಗ ಬಿಕ್ಕಿದಂವ ಬೆಳಗಿನ ಮಟಾ ಅತ್ತ. ಹೇಳದ ಕೇಳದ ಅಲ್ಲಿ ನಾಪತ್ತೆ ಆದ. 

ಅಲ್ಲಿ ಮಾಯವಾದಂವ ರೈಲಿನ ಪುಕ್ಕಟೆ ಯಾತ್ರೆ ಸುರುಮಾಡಿದ, ಹುಬ್ಳಿ, ಬಳ್ಳಾರಿ, ಗುಂತಕಲ್ ಹಿಂಗ ಬಂದ ರೈಲಿನ ಪ್ರಯಾಣಿಕನಾದ. ರಾಜಮಂಡಿಯಲ್ಲಿ ರೈಲು ಪ್ರವಾಸಕ್ಕೆ ಕುತ್ತು ಬರುವುದರೊಂದಿಗೆ ಬೆತ್ತದ ರುಚಿ ಕುಂಡಿಯನ್ನು ತಾಕಿತು. ವಿಜಯವಾಡದ ಕಿನಾರೆ ಮ್ಯಾಲೆ ನಿಂತು ತನ್ನ ಪೂರ್ವಿಕರಿಗೆ ಕೇಳೋ ಹಂಗ ಕೂ… ಗುಟ್ಟಿದ, ಆ ಲೋಕ ಅದೆ ಆ ನಾಕನರಕ ಎಂಬವುಗಳು ಇದಾವಾ ? ಹಸಿವಿಗೆ ಹೆದರಲು ಹಿಂಜರಿದ ಕಾರಣ ನಿತ್ರಾಣಗೊಂಡ, ಈ ದೇಶದ ಎಷ್ಟೋ ಆತ್ಮಗಳಂತೆ ತನ್ನ ಒಡಲ ಚೀಲ ಭರ್ತಿಯಾಗುವಷ್ಟು ತುಂಬಿಸಬೇಕು, ಮತ್ತ್ಯಾವತ್ತು-ಯಾವ ಕಾಲಕ್ಕೂ ಹಸಿವು ಎಂಬುದರ ಒಂದಂಶವೂ ಉಳಿದಿರಬಾರದು, ಹಾಗೆ ಗಬಗಬ ತಿನ್ನಬೇಕು ಅನ್ನುವ ಭ್ರಮೆಯೊಳಗೆ ನಡೆಯುತ್ತಿದ್ದ. ಸೇತುವೆಯ ದಾಟುವ, ಅದರ ತುದಿ ಮುಟ್ಟಿ ಬದುಕಿಕೊಳ್ಳುವ ಧಾವಂತ. ಈ ಜಗತ್ತಿನ ನಿಯಮದಲ್ಲಿ ಕನಸುಗಳ ಸೃಷ್ಟಿಸುವ, ಮಾರಾಟ ಮಾಡುವ ಧಂದೆ ಏನಿದ್ದರೂ ಭವಿಷ್ಯದ ಬಗೆಗಿರುತ್ತದೆ ಹೊರತೂ ವಾಸ್ತವದಲ್ಲಿ ಆಸರಾಗುವುದಿಲ್ಲ, ಹೊಟ್ಟೆ ಬಿರಿಯುವ ಹಾಗೆ ತಿಂದ ಕನಸು ಕಂಡ, ಈವರೆಗೂ ಮುದ ನೀಡುತ್ತಿದ್ದ ಕಲ್ಪನೆಗಳು ಇಂದು ಮನಸಿನ ಯಾವ ಭಾಗವನ್ನೂ ತಟ್ಟಲಿಲ್ಲ. ಸಧ್ಯದ ಹಸಿವಿಗೆ ಚೂರುಪಾರು, ಏನು ಸಿಕ್ಕರೂ ತಿನ್ನುವಷ್ಟು ನಿತ್ರಾಣಗೊಂಡಿದ್ದ. ಎರಡು ನಗರಗಳ ನಡುವೆ ಹರಿಯುವ ನೀರ ಮೇಲೆ ನಿಂತವನಿಗೆ ದಾಹ… ಯಾವನೋ ಪುಣ್ಯಾತ್ಮ ಎಸೆದಿದ್ದ ನೀರ ಬಾಟಲಿ ಕಂಡಾಗ ಹೋದ ಜೀಂವ ಹೊಡಮರಳಿ ಬಂದಂತಾಯತು. ಗುಟಕರಿಸಿದ ಸಮಾಧಾನ ಬಿಟ್ಟರೆ ನೆತ್ತಿಸೂರ್ಯನ ಬೇಗೆ ತಣಿಯಲಿಲ್ಲ.
ಬುತ್ತಿಚೀಲ ಬಿಚ್ಚಿದ್ದ ಸನ್ಯಾಸಿಯ ಮುಂದೆ ಕೈ ಚಾಚಿದ ‘ಭಿಕಾರಿಯಲ್ಲೂ ಭಿಕ್ಷೆ ಕೇಳುತ್ತಿಯಲ್ಲಪಾ’ ಮಾಸಿದ ಅಂಗಿಯ ಸಾಧೂ ಜಡೆಗಟ್ಟಿದ್ದ ಗಡ್ಡ ನೀವಿಕೊಳ್ಳುತಾ ತುಟಿಯೊಳಗೆ ನಗಾಡಿದ, ತೆಲುಗು ತಿಳಿಯದು ಆದರೆ ಭಾಷೆ ಅರ್ಥವಾಯಿತು. ಆತನ ಬಾಯಲ್ಲಿ ಕನ್ನಡ ಮಾತು ಕೇಳಿದಾಗ ಅದೇನೋ ಬೀಗರ ಮನೆಗೆ ಬಂದಷ್ಟು ಖುಷಿಪಟ್ಟ. ಕರೀ ಕೊರಚುಟ್ಟಾ ತುಟಿ ಸುಡುವತನಕ ಸೇದಿದ, ಗುರುವಿನ ಸಂಗತಿ ಶರೀಫ ಆಗಿ ಸದಮಲ ಜ್ಞಾನದ ಬತ್ತಿ ಎಳೆದ, ಸನ್ಯಾಸಿಯ ಕೈಕೋಲಾಗಿ ಅವರ ಬೆನ್ನಿಗೆ ಬಿಡದೆ ಮತ್ತಿನ ಮಾಯಕಾರಣ ಜೊತೆಗೂಡಿ ಉತ್ತರ ದೇಶದ ಪುಣ್ಯಕ್ಷೇತ್ರ ದರುಶನ ತೀರಿಸಿದ. ಖಾವಿಯ ಜೋಳಿಗೆ ಮಾತ್ರ ಈ ತೊತ್ತಿನ ಚೀಲ ತುಂಬಿಸುತ್ತದೆ, ಅವಕಾಶಗಳು, ಆಯ್ಕೆಗಳು ಯಾವ ಹಂಗಿಗೂ ಕಾಯದ ನಶೆ ಏರಿಸಿಕೊಂಡೆ ತಿರುಗುವ ಈ ಆಟ ಸಾಕನಿಸಿದ್ದು-ದಾರಿಗೆ ದಾರಿಯೇ ಢಿಕ್ಕಿ ಹೊಡೆದು ಮುದಿ ತಾಯಿ ಮಾತ್ರ ಉಳಿದುಕೊಂಡು ಗೋಳಿಡುತ್ತಿದ್ದ ಆ ಅಪಘಾತ ಕಂಡ ಮೇಲೆಯೇ. ಆರೇಳು ತಿಂಗಳ ಸಂಚಾರದಲ್ಲಿ, ಬಗೆ ಬಗೆಯ ಆಧ್ಯಾತ್ಮ ಅನುಭವಕ್ಕೆ ಸಿಕ್ಕಿತ್ತು. ಆದರೆ ಬಿಡುವಿಲ್ಲದಂತೆ ಅವನ ಮನಸಿನ ಕುದುರೆ ಏರಿದ್ದ ಮಾನಸಿ ಅಂದರೆ ಚನ್ನಿಯ ಮುಖದ ನೆನಪು ಕಣ್ಮುಂದೆ ಆಕಾರಗೊಂಡದ್ದೆ ತಡ ಚಡಪಡಿಸತೊಡಗಿದ, ಗುರುವಿನ ಅಪ್ಪಣೆ ಮೀರಿ ಹೊರಡುವಂತಿರಲಿಲ್ಲ. ಹಂಗಾಗಿ ಮತ್ತೆ ಹೇಳಕೇಳದೆ ಮಾಯವಾದ.
     

 *        *        *        * 

ಇತ್ತ ಅವ್ವ-ಊರೊಳಗೆ ಸಾಲಿ ಕಲಿತ ಮಂದಿಮಕ್ಕಳೆಲ್ಲರನ್ನ ಸಾಲುಗಟ್ಟಿ ಕೇಳಿದ್ದಳು. ಮನುಕುಮಾರನ ವಾರಿಗೆಯವರನ್ನ ನೋಡಿದಾಗ ಕರು ಕಳೆದುಕೊಂಡ ತಾಯಿಯ ತಾಪ ಇಮ್ಮಡಿಯಾಗುತ್ತಿತ್ತು. ಅತ್ತೆ ಅನ್ನಿಸಿಕೊಳ್ಳುವ ತಯಾರಿ ನಡೆಸಿದ್ದವಳ ಪಾಲಿಗೆ ಮಗ ಇಲ್ಲ ಅನ್ನೋದು ದೊಡ್ಡ ಊನವಾಗಿತ್ತು. ಏನಾದ, ಎಲ್ಲಿ ಹೋದ, ಉಂಡನೋ ಇಲ್ಲವೋ, ಬದುಕಿದನೋ ಸತ್ತನೋ ಅಂಥ ಚನ್ನಕ್ಕನ ಅಪ್ಪನ ಕರಕೊಂಡು ಬೆಂಗಳೂರೆಲ್ಲ ಹುಡುಕಾಡಿ ಬಂದಳು. ‘ಹುಡೆದಂತ ಈ ಊರೊಳಗ ಯಾರು ಮುರಕೊಂಡ ತಿಂದರೋ ನನ್ನ ಕಂದನ್ನ’ ಅಂತ ಹಾಡಾಡಿಕೊಂಡು ಅತ್ತಳು. ಜೀವ ಹಿಡಿದ ಒಂದ ಕರಳನ್ನ ಕತ್ತರಿಸಬ್ಯಾಡವ್ವ ತಾಯೇ ಅಂತ ಮನೀ ದೇವರು ಗುಡ್ಡದ ಯಲ್ಲಮ್ಮನಿಗೆ ಹರಕಿ ಒಪ್ಪಿಕೊಂಡಳು. ಅಂಜನ ಹಾಕಿ ನೋಡಿದ ಫಕಿರೇಶಿ ‘ಚಿಂತಿ ಬಿಡು ಮಗ ಬದುಕಿದಾನ’ ಅಂದ. ದೇವರ ಮ್ಯಾಗಳ ಹೂ ಬಲಕ್ಕ ಉದುರಿದ್ದು ಭರೋಸ ಹುಟ್ಟಿಸಿತ್ತು. ಒಂದ ಒಪ್ಪತ್ತಿನ ಊಟ ತಿಂದು ಮಗನ ಪತ್ತಾ ಹಚ್ಚುವುದರೊಳಗ ತೊಡಗಿರುವಾಗಲೇ ಧಿಡಿರ್ ಆಗಿ ಚನ್ನಿಗೆ ಗಂಡು ಗೊತ್ತಾಯ್ತು. ಆ ರಾತ್ರಿ ಮಾತ್ರ ಚನ್ನಕ್ಕನಿಗೆ- ಮಲಗಿದವಳಿಗೆ ಬೆಳಗಾಗುವುದೇ ಬೇಡ ಅನ್ನಿಸಿತ್ತು. ನರಪೇತಲ ಹುಡುಗ ನನ್ನ ಮದುವೀ ಆದದ್ದ ಖರೆ ಆದರ ಅಕರಾಳ ವಿಕರಾಳ ಜೋಡಿ ಅಂದಕೊತಾರ, ಬಪ್ಪರೆ ಗಂಡಸು ತಾನ ಕೈ ಕೊಟ್ಟ ಹೋದ ಮ್ಯಾಲ ಮಾತು ಮುರದು, ಲಗ್ನಕಾರೇವು ನಿಲ್ಲಿಸುವ ಸಂಪೂರ್ಣ ಸ್ವಾತಂತ್ರ್ಯ ಕಳಕೊಂಡ ಅಸಹಾಯಕಿ ಆಗಿದ್ದಳು. ಅವನ ಮುಖದ ಗೆರೆಗಳು ಅಸ್ಪಷ್ಟವಾದಂತೆ ಮಸಕಾದರೂ ಬರತಾನ ಅನ್ನೋ ಹಂಬಲದಿಂದ ಕಾಯುತ್ತಿದ್ದಳು. ಮಲಗುವ ಹೊತ್ತಿಗೆ ಫೋನಾಯಿಸಿ ತಿರಗಾತಿರಗಿ ‘ಊಟ ಆಯ್ತಾ? ಮತ್ತೆ… ಏನು ಊಟ? ಏನ ಮಾದ್ತಿದಿ’ ಅಂತ ತಿದಿ ಒತ್ತುವ ಹೊಸ ವರನ ಅಕ್ಕರೆ, ಮಾತು, ನಿಟ್ಟುಸಿರಿನ ಮೌನ ಒಂದೊಂದೆ ಹಿಡಿಸಲಿಕ್ಕ ಸುರುವಾಗಿ ಅಂದಾಜು ಮಾತಿಲ್ಲದ ಸಲುಗೆಯಲ್ಲಿ ಒಪ್ಪಿಕೊಂಡಿದ್ದಳು.  
    

 *****                             *****                          ***** 

“ಬೀಗತಿಯಾಗಬೇಕಿದ್ದ ಮದುವೆಗೆ ದಿಬ್ಬಣದಾಕಿ ಆಗಿ ಬರೋದಿಲ್ಲ ಮತ್ತ ನನಗನಕಾ ಇದು ಪಸಂದ ಅನಸಿಲ್ಲ ನಾ ಬರಂಗಿಲ್ಲ” ಕಡ್ಡಿ ಮುರಧಂಗ ಹೇಳಿದ್ದಳು ಆ ತಾಯಿ. ಅಕ್ಕ ಸತ್ತರ ಅಮಾಸಿ ನಿಲ್ಲದಾಗಿ ಮನು ಸುಳಿವಿಲ್ಲದೆ ಶುಭಕಾರ್ಯ ನಡೆಯಿತು. ’ನನ್ನ ನಶೀಬದಾಟ ಹಿಂಗಿರಬೇಕಾರ ಯಾರನ್ನ ಅಂದ ಏನಾಗಬೇಕು ಮಗ ಬಂದರ ಸಾಕು’ ದಾರಿ ಮ್ಯಾಲ ನೆಟ್ಟ ಕಣ್ಣು ಕಿತ್ತಿರಲಿಲ್ಲ. ದೇಶಾವರಿ ತಿರಗೋ ಮಂದಿ, ಸುಗ್ಗಿ ಹೋಗಿ ಬಂದವರು, ಅಲ್ಲಿ ಇದ್ದ, ಇಲ್ಲಿ ಸಿಕ್ಕದ್ದ ಅಂತ ತರಹೆವಾರಿ ನೂರೆಂಟು ಮಾತಾಡತಿದ್ದರು. ವಾಸನೆ ತಂದ ಗಾಳಿಯೊಳಗ ಬರೀ ಜೊಳ್ಳ ಪೊಳ್ಳ ಊಹೆಯ ಕತೆಕಟ್ಟುತ್ತಿದ್ದರು ಬಿಟ್ಟರೆ ಕಂಡು ಮಾತಾಡಿಸಿದ ಗಬರು ಯಾವನೂ ಇರಲಿಲ್ಲ. ಹೊಲ-ಮನಿ ಸಲುವಾಗಿ ಗಂಡನ ಅಣ್ಣಂದಿರ ಕೂಡ ರಗಡ ಪರಿಪಾಟಲು ಸೋಸಿದ್ದಳು, ಇದ್ದೊಬ್ಬ ಕೂಸಿನ ಜೀವದ ಆಸರೆ ಹಿಂಗ ಬಾಯಿಗೆ ಬಾರದೆ ಹೋದದ್ದು ಹತ್ತಾರು ಅನುಮಾನಗಳನ್ನ ಹೇಳತಿತ್ತು. ಆಸ್ತಿ ದೆಸಿಯಿಂದ ಖೂನ ಆದನೇನು ? ಇಲ್ಲಾ ಮಾಟ ಮಂತ್ರದ ಗಾಳಿಗೆ ಈಡಾದನಾ? ಅದದೆ ಹಳವಂಡಗಳು ಹಸಿವು ನಿದ್ರೆ ನೀರಡಿಕೆಯ ನುಂಗಿ ಹಾಕಿದ್ದವು. ಸಪ್ಪೆ ಮೂತಿಯಲ್ಲಿ ಸಾವಿನ ಮನೆಯ ಹಾಳು ಯಾತನೆಯ ನೀರವತೆ ತುಂಬಿಕೊಂಡು, ಕಸಮುಸುರೆ ಮುಗಿಸಿ ನೀರು ತರಲು ಹೋದವಳಿಗೆ ಎದುರಾದ್ದು ಊರ ದೇವರ ಕ್ವಾಣ, ದುರ್ಗಮ್ಮನ ಕ್ವಾಣ. ಗೋಣ ಹೊರಳಾಡಿಸುತ್ತ, ಒದರುತ್ತಾ ಬಂದು ಖಾಲಿ ಕೊಡಕ್ಕೆ ಬಾಯಿ ಹಾಕಿತು… ದನಕ್ಕೆ ನೀರಡಿಕೆ, ಇವಳಿಗೆ ಶುಭಶಕುನ. ‘ಅಂವ ಒದಿಸಾನೂ ಗುಡಿ ಕಟ್ಟೆ ಹತ್ತಿ ದೇವರಿಗೆ ಕೈ ಮುಗಿದವನಲ್ಲ, ಆದರ ಇದೇನು ದೇವರ ಆಟ’ ಅಂದವಳ ಭರಭರ ನೀರು ಸೇದಿ ತಂದವಳ ಎಣ್ಣೆಬತ್ತಿ ತಗೊಂಡು ಅಮ್ಮನ ಮುಂದೆ ಹೋಗಿ ನಿಂತಳು. ಈ ಸಲದ ಪರಿಸೆಗೆ ದಿಂಡುರುಳುವ ಹರಕೆ ಹೊತ್ತಳು. ತಾಯಿಯ ಮಾತೆ, ಮಾಯಿ ಕಣ್ಣ ತಗೀಲಿಲ್ಲ ಖರೆ ಮಗ ಮನಿ ಮುಂದ ಬಂದು ಕುಂತಿದ್ದ… ಓಡುತಾ ಬಂದು ಬರ್ಪಿನ ಸಾಹೇಬನ ಮಗ ಹಿಂಗಿನ ಮಾತು ಹಿಂಗ ಹೇಳಿದ್ದ ತಡ, ಅನುಮಾನದ ನಂಬಿಕೆಯಲ್ಲಿ ‘ಇದು ಖರೆಖರೆ ಆಟ ಆಗಿರಲವ್ವ’ ಅಂತ ಗಲ್ಲಗಲ್ಲ ಬಡಕೊಂಡಳು.ಅವಸರಾ ಮಾಡಿ ಮನಿಗೆ ಬಂದ್ರ ದೇವರು ಬಂದಂಗ ಕೂಸು ಬಂದು ವಾರಪಡಸಾಲ್ಯಾಗ ಕುಂತಿತ್ತು.  ಮಗನ ಮಾರಿ ಮ್ಯಾಲಿನ ಕಳಾ ಹಿಂಗ ಹುರುಕ ಹುರುಕ ಆಗಿದ್ದ ಕಂಡ ತಾಯಿ ಎದಿ ಒಡದ ಹೋಯಿತು. “ಯಪ್ಪಾ ಮಗನ…” ಅಂದವಳ ಕಣ್ಣತುಂಬ ನೀರು ತುಂಬಕೊಂಡು ಕಸಬರಿಗಿ ಹಿಡಿಯಲ್ಲಿ ನಿವಾಳಿಸಿದಳು. ಕರಳು ಅನ್ನೋದು ಇಷ್ಟ ಸಂಕಟ ಪಡತದ ಅನ್ನೋ ಸಣ್ಣ ಸತ್ಯ ಬೆಂಗ್ಳೂರು ಬಿಡುವಾಗ ಹೊಳೆದಿರಲಿಲ್ಲ. . ಸೆರಗ ತುದಿ ನೀರಾಗ ತೋಯಿಸಿ ದೇವರ ಮುಂದ ದೀಪ ಹಚ್ಚಿದಳು.

 ಮಾತು ಬಾರದ ಮೂಕನಾಗಿ ಬೆಲ್ಲ ಒಡಿಯುವ ಕಲ್ಲಿನ್ಹಂಗ ಕೂತಂವ ಕಂಬಕ್ಕೊರಗಿ ಕೂತೇ ಇದ್ದ, ಬಾರಾ ಹೊಡೀತು, ಒಂದ ಆಯ್ತು ಮೂರಸಂಜಿ ಯಾಳೆ ಆದರೂ ಮಗ ಸೊಲ್ಲ ಒಡಿಲಿಲ್ಲ. ಬಂದ ಬಂದವರೆಲ್ಲ ಬುದ್ದಿ ಹೇಳಿ ಅವ್ವನ ಪರ ವಕಾಲತ್ತು ಮಾತಾಡಿ ಹೋಗುತ್ತಿದ್ದರು. ಅವ್ವ ಮನಸನ್ಯಾಗಿಂದ ಒಂದ ಮಾತು ಹೇಳಿದಳು-ನೋಡ ತಮ್ಮ ಹರೇಕ್ಕ ಬಂದ ಮಗ ಕೈ ತಪ್ಪಿದ ಅಂದಕೊಂಡಾಕಿಗೆ ಈಗ ಜೀವ ಬಂದದ…ನಿನ್ನ ಹಡೆದಾಗಿನಿಂದ ನಾನೇನು ತುಸ ಅನೂಲಿ ಉಂಡಿಲ್ಲ ಅಂಬೋದು ನಿನಗೂ ಗೊತ್ತೈತಿ, ಹೆಂಗೂ ಹೊಡಮರಳಿ ಬಂದಿ, ದೇವರು ಕೊಟ್ಟದ್ದರಾಗ ಮಾಡಕೊಂಡು ತಿನ್ನೋನು. ನೀ ದುಡದ ಹಾಕುದೇನು ಬ್ಯಾಡ, ನೀ ನನ್ನ ಕಣ್ಣೆದರಿಗೆ ಇದ್ದರ ಸಾಕು-ಆಕೆ ಅವನ ಇಷ್ಟದ ಹುರುಳಿ ಸಂಕ್ಟಿ ಮಾಡಿದ್ದಳು. ಉಂಡಾದ ಮೇಲೆ ತೊಡೆಯ ದಿಂಬು ಮಾಡಿ ಮಲಗಿದ. ತಾಯಿಗೆ  ತಲೆತಟ್ಟುತ್ತ ಕತೆಕಟ್ಟಿ ಮಲಗಿಸುತ್ತಿದ್ದ ಎಳೆವೆಯ ದಿನಮಾನ ನೆನಪಾದವು. “ಚನ್ನಕ್ಕನ್ನ ಹುನುಗುಂದದ ಹಂತ್ಯಾಕ ಯಾವದೋ ಹಳ್ಳಿಗೆ ಲಗ್ನ ಮಾಡಿ ಕೊಟ್ಟರು” ಧಡಕ್ಕನೆ ಎದ್ದು ಕುಳಿತ. ‘ನಿ ಏನ ಬ್ಯಾಸರಾ ಮಾಡ್ಕೋಬ್ಯಾಡ ಇಂಥವ ಹತ್ತು ಹೆಣ್ಣ ತಂದೇನಿ’ ಅವ್ವನ ಮಾತು ನಿಂತಿತು ಹೊರತಾಗಿ  ಅವನ ತದೇಕ ಚಿತ್ತದ ನೋಟ, ಸೋಲಿನ ನಿಟ್ಟುಸಿರು ಮಾತ್ರ ನಿಲ್ಲಲಿಲ್ಲ. ಮಳ್ಳಾ ಮರುದಿನ ಮನೆಯಲ್ಲ ಉತ್ಸಾಹ ಸಂಭ್ರಮ. ತರತರದ ಖಾದ್ಯದ ಅಡುಗೆ, ಸುತ್ತಲ ದೇವರಿಗೆ ಎಡೆಬಾನದ ಪೂಜೆ. ಆರು ತಿಂಗಳಿನಿಂದ ಯಾ ಹುಣ್ಣಿವಿ ಅಮಾಸಿಯನ್ನು ಆಚರಿಸದೆ ದೇವರ ಪಟದ ಮೇಲಿನ ಧೂಳು ತಗೆದಿರಲಿಲ್ಲ.

       *****                             *****                          *****

    ಹೊತ್ತು ಮುಳುಗಿ ಹೊತ್ತೇರುವ ಚಂದ ನೋಡಲು ಹಳ್ಳಿಗೆ ಹಿಂತಿರುಗಿದ ವಿದ್ಯಾವಂತ ನಿರುದ್ಯೋಗಿ ಗೆಳೆಯರಂತೆ ಕೂಡುವುದಾಗಲಿ, ದುಡಿದವರ ಬೆವರ ಬೆಲೆಯ ಅನ್ನ ತಿಂದು ಒಣ ರಾಜಕಾರಣ ಮಾಡುವುದಾಗಲಿ ಅಷ್ಟಾಗಿ ಮನಸಿಗೆ ಹಿಡಿಸದಾಗಿ ತನ್ನೆಲ್ಲ ಆಸ್ತಿಯ ಕಾಗದ ಪತ್ರಗಳ ತಪಶೀಲು ನಡೆಸಿದ. ಚಿಗದೊಡಪ್ಪ ಅವರ ಮೋಸಕ್ಕೆ ಉತ್ತರವಿಲ್ಲದಾಗಿ ಹಕ್ಕಿನ ಮಾತು ಅರ್ಧಕ್ಕೆ ಕೈಬಿಟ್ಟ. ಖಾಲಿ ಹೊತ್ತು ನೋಡಿ ಖಾಯಿಲೆ ಅಡರುವುದು ಚಿಂತೆಯ ಮಖೇನ ಅಂದಂತೆ ಚನ್ನಿಯ ರೂಪ ಕೆನಕಿತು. ಮಾನಸಿ ಇಲ್ಲದ ಬದುಕು ಯಾಕೋ ಅರಕಳಿ ಅನ್ನಿಸಿತು. ಊರ ಜನರೆಲ್ಲ ಹಂಗಿಸುವ ಅಣುಕಿಸುತ್ತಿರುವ ಬ್ರಮೆಯಾಯ್ತು. ಸನ್ಯಾಸದ ವ್ಯಸನ,ಗಾಂಜಾದ ಅಮಲು, ತಳಾಂಗು ತದಗಿಣ ತೋಂ ಹೆಜ್ಜೆಯ ಲಯ, ಬಣ್ಣದ ಗುಂಗು, ಚನ್ನಕ್ಕನ ಮೋಹ, ಕತೆಯ ಸಾಲುಗಳು ಒಂದರೊಳಗೊಂದು ತಳಕಾಗಿ ಆರು ಮೂರು ಸೈಜಿನ ಗೋರಿ ತೋಡಿಕೊಂಡ. ಸತ್ತ ಮೇಲೆ ಸಾಯುವ ಇಂಗಿತ. ಬಟ್ಟೆಬಿಚ್ಚಿ ಚೂರುಚೂರಾಗಿ ಹರಿದು ಬೆತ್ತಲೆ ಓಡುವ ಕನಸು ಮಾತ್ರ ಸತ್ಯವಾಗುವ ಕಾಲ ಒದಗುವ ಮೊದಲು ಇಲ್ಲವಾಗುವ ತವಕದಿಂದೆದ್ದ ಖರೆ, ಅವ್ವ ಜೋಗುತಿಯಾಗಿ, ಭಿಕ್ಷುಕಿಯಾಗಿ, ಕಸಮುಸುರೆ ತೊಳೆದು, ಹರಿದ ಸೀರೆಯಲ್ಲಿ ನಗ್ಗೀಡಾಗುವ, ಹುಚ್ಚಿಯಾಗುವುದು ಪಕ್ಕಾ ಆದಂತೆ ಅನ್ನಿಸಿತು. ಈಗ ಬಂದ ಬದುಕು ತನ್ನದು, ಆಕೆಯ ಕನಸಿನ ಬಾಳು ಬೇರೆ ಬಗೆಯದ್ದು, ವಾಸ್ತವಕ್ಕಂಟಿದ ಜಗತ್ತಿನಲ್ಲಿ ಅನ್ಯನಾಗುಳಿವ ತನ್ನ ಓಟದ ಕುದುರೆಗೆ ನಿಲುಗಡೆ ಕೊಟ್ಟ. ಅವ್ವನ ಮುಖದ ಮ್ಯಾಲಿನ ಅಳುವಿನ ಗೆರೆ ಅಳಿಸಿ ನೆಮ್ಮದಿ ಮಡುಗಟ್ಟುವಂತೆ ಸಾಕಲು ಹಂಚಿಸಿದ್ದ… ಬರ್ಪಿನ ಸಾಹೇಬನ ಮಗ ತನ್ನ ಆಟದ ಸೈಕಲ್ ಟಯರ್ ಕೊರಳಿಗೆ ಹಾಕಿಕೊಂಡು ತೇಕುತ್ತ ಓಡಿ ಬಂದು ಬಡಬಡಿಸಿದಂತೆ ಉಸುರಿದ ನಿಮ್ಮವ್ವ… ಆ,,, ಆ,, ಆ ಗುಡ್ಡದ ವಾರೇಲಿ…. ಕಾಲು ಜಾರಿ.. ಬಿದ್ದಾಳು’ ಅಂದ. ಯಾವ ಮನೆತನದ ಘನತೆಯ ಕುಡಿ ಉಳಿಸಲು ಹೆಣಗಿದ್ದಳೊ ಆ ಬೆಳಕು ಅರೆ ಸುಟ್ಟುಕೊಂಡು ಸಮಾಧಾನ ಸಂತೋಷ ಹುಡುಕಿ ದೇಶಾಂತರ ಹೋದಾಗಲೆ ಅರ್ಧ ಸತ್ತಿದ್ದ ಆಕೆ ಮಗನ ಉಪಚಾರ ಕಾಣದೆ ಸಾಯಬಾರದೆಂದು ಬದುಕಿಸಿಕೊಳ್ಳಲು ಸಾಂಗ್ಲಿಯಿಂದ ಹುಬ್ಬಳ್ಳಿತನಕದ ಎಲ್ಲ ದವಾಖಾನೆ ತಿರುಗಿದ.

ಹೆಣದ ಹಿಂದಿನಿಂದ ಬರುವವರ ಮಾತು ಕನ್ನಡಿಯಾಗಿದ್ದವು. ತಾನು ಕಂಡ ಅವ್ವ ಊರವರೆಲ್ಲರ ಕಣ್ಣೊಳಗಿನ ಅವ್ವ ಬೇರೆಬೇರೆ ಆಗಿದ್ದರು. ಸತ್ತವರು ಸ್ವರ್ಗ ಸೇರತಾರೋ ನರಕಕ್ಕ ಬೀಳತಾರೊ ಅನ್ನೋ ಲೆಕ್ಕಾಚಾರ ತಗೊಳ್ಳಲು ಬಂದಿದ್ದ ಯಮದೇವನ ಎಡ-ಬಲರ ಟಿಪ್ಪಣಿ ಪುಸ್ತಕ ತುಂಬುವಷ್ಟು ಜನ ಮಾತಾಡಿಕೊಳ್ಳುತ್ತಿದ್ದರು. ಮಣ್ಣು ಮಾಡಲು ಬಂದಿದ್ದ ಅವಳ ಮಡಿಲಲ್ಲಿ ಎಕಾಗ್ರ ಜಗತ್ತಿನ ಯಾತನೆ ಅನುಭವಿಸಲು ಎಳಸುಗರು ಕೇಕೆ ಹಾಕಿ ಆಡುತಲಿತ್ತು. ಅರೆ ಗಳಿಗೆ ಕಣ್ಣಿಗೆ ಸಿಕ್ಕವಳ ಕಣ್ತುಂಬ ನೀರು ತುಳುಕುತ್ತಿತ್ತು. ಮೂರನೆ ದಿವಸ ಪಿಂಡ ಮುಟ್ಟವ ಕಾಗೆಗೆ ನೀರು ಬಿಡುವಾಗ ಅತ್ತೆಮಾವ ಕಣ್ಣೀರಿಟ್ಟು ‘ಮನು ಬಗ್ಗೆ ಚಿಂತಿ ಬಿಡು ನಾವು ಕಾವಲು ಇರ್ತೀವಿ’ ಅಂದ ಮ್ಯಾಲೆ ಕಾಗೆ ಪಿಂಡ ಮುಟ್ಟಿದ್ದು ಇವನ ಮನಸ್ಸಿಗೆ ಬರಲಿಲ್ಲ. ತಿಥಿ ಧೂಪ ಹಾಕಲಿಕ್ಕ ಬಂದಾಗ ಮಾವ ಚನ್ನಿಯ ಮತ್ತೊಂದು ಬಗೆಯ ಬವಣೆ ಹೇಳಿದರು…ಹೆಣದ ಮುಂದೆ ಕಣ್‍ಬಿಟ್ಟು ನೋಡಿರದ ಅವಳ ಹಣೆ ಇಂದು ಭಣಭಣ ರಣ ಹೊಡೆಯುತ್ತಿತ್ತು. ಈಗ ಅವ್ವ ಮತ್ತು ಆಕೆ ತಕ್ಕಡಿಯೊಂದರ ಎರಡು ಪರಡೆ ಆಗಿದ್ದರು. ಮನಸಾ ಪ್ರೀತಿಸಿದ್ದ ಚನ್ನಿ ಬಾಳು ಹೆಂಗಾಗಬಾರದು ಅಂತ ಬಯಸಿದ್ದನೊ ಹಂಗಾದದ್ದು ಬ್ಯಾಸರದ ಮಾತಾಯಿತು, ಆದರ ಮತ್ತೆ ಬದುಕಿಗೆ ಭರವಸೆ ತಂದುಕೊಡಬಹುದಾದ ಎಲ್ಲಾ ರೀತಿಯ ಖುಷಿ ಹೊಸ ವೇಷ ತೊಟ್ಟು ನಿಂತಿತ್ತು….
 -ಮಹಾದೇವ ಹಡಪದ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x