ಕಿವಿ ಕಚ್ಚುವುದು!: ಎಸ್.ಜಿ.ಶಿವಶಂಕರ್

ಅರೆ..ಹಾಗಂದರೇನು? ಎಂದು ಹುಬ್ಬೇರಿಸಿದ್ದೀರೇನು? ನೀವು ಈ ಮಾತು ಈವರೆಗೆ ಕೇಳಿಯೇ ಇಲ್ಲವೆ?  ‘ಇಲ್ಲ’ ಎಂಬ ನಿಮ್ಮ ಮಾತನ್ನು ನಾನು ಖಂಡಿತಾ ನಂಬುವುದಿಲ್ಲ! ಎಲ್ಲಿಯಾದರೂ ಅಪರೂಪಕ್ಕಾದರೂ ಈ ಮಾತು ನೀವು ಕೇಳಿಯೇ ಇರುತ್ತೀರಿ. ಕೇಳಿದಾಗ ಈ ಪದದ ಅರ್ಥವಾಗಿರಬಹುದು ಇಲ್ಲ ಅರ್ಥವಾಗದೆ ಮರೆತಿರಬಹುದು! 

ಕಿವಿಕಚ್ಚುವುದು ಎಂದಾಕ್ಷಣ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಕಿವಿಯನ್ನು ಕಚ್ಚುತ್ತಿರುವುದನ್ನು ಕಲ್ಪಿಸಿಕೊಳ್ಳಬೇಡಿ! ಈ ಪದ ನನ್ನ ಕಿವಿಯ ಮೇಲೆ ಬಿದ್ದುದು ಕೇವಲ ವಾರದ ಹಿಂದೆ. ಆಗಿನಿಂದಲೂ ಇದರ ಅರ್ಥ, ವ್ಯಾಪ್ತಿಗಳ ಬಗೆಗೇ ಚಿಂತಿಸುತ್ತಿರುವೆ ಎಂದರೆ ಸುಳ್ಳೆಂದು ತಿಳಿಯಲಾರಿರಿ! 
ಒಂದು ದಿವ್ಯ ಬೆಳಿಗ್ಗೆ, ಸುಮಾರು ಒಂಬತ್ತೂವರೆಯ ಕಾಫಿಯ ಸಮಯಕ್ಕೆ ನನ್ನ ಕಾರ್ಯಾಗಾರದ ಹೊರಗೆ ನಿಂತಿದ್ದೆ. ಇದೇನು ಕಾಫಿ ಸಮಯ ಎನ್ನುವಿರಾ..? ಅದಕ್ಕೊಂದು ಸಮಯವುಂಟೆ..? ಅದು ಒಂಬತ್ತೂವರೆಯೇ ಏಕಾಗಬೇಕು ಎಂಬ ಕೆಲವು ಸಂದೇಹಗಳು ನಿಮ್ಮನ್ನು ಕಾಡುತ್ತಿರಬಹುದು. ಇದಕ್ಕೊಂದಿಷ್ಟು ವಿವರಣೆ ಅವಶ್ಯಕತೆಯಿದೆ. 

ಸುಮಾರು ಇಪ್ಪತ್ತು ವರ್ಷಗಳಿಂದ ನಾನೊಂದು ಕಾರ್ಖಾನೆಯಲ್ಲಿ ಇಂಜಿನಿಯರಾಗಿ ಕೆಲಸ ಮಾಡುತ್ತಿರುವೆ. ನಮ್ಮ ಕಾರ್ಖಾನೆಯ ಎಲ್ಲ ಚಟುವಟಿಕೆಗಳನ್ನೂ ಕಾಫಿ ಸಮಯ, ಲಂಚ್ ಸಮಯ, ಟೀ ಸಮಯ ಎಂದು ಗುರುತಿಸುವ ಪರಿಪಾಟವಿದೆ. ಈ ಸಮಯಗಳು ಕಾರ್ಖಾನೆಯ ಆಡಳಿತವರ್ಗ ನಿಗಧಿ ಮಾಡಿರುವ ಸಮಯಗಳು. ಹಾಗಾಗಿ ನಾನು ಬೆಳಗಿನ ಒಂಬತ್ತೂವರೆಯ ಸಮಯವನ್ನು ಕಾಫಿ ಸಮಯ ಎಂದು ಉಲ್ಲೇಖ ಮಾಡಿರುವ. 

ನಾನು ಕಾರ್ಯಾಗಾರದ ಹೊರಗೆ ನಿಲ್ಲಲು ಕಾರಣವಿತ್ತು! ನಮ್ಮ ಕಾರ್ಖಾನೆಯ ಮುಖ್ಯಸ್ಥರು ನನ್ನ ಇಲಾಖೆಗೆ ಬರುತ್ತೇನೆ ಎಂದು ಫೋನಾಯಿಸಿದ್ದರಿಂದ ನಾನು ಅವರ ಬರವನ್ನು ಎದುರು ನೋಡುತ್ತಿದ್ದೆ. ಆಗ ನನ್ನ ಬಾಲ್ಯ ಸ್ನೇಹಿತ ವಿಶ್ವ ಅವಸರದಲ್ಲಿ ಬಂದು ಏದುಸಿರು ಬಿಡುತ್ತಾ ನಿಂತ.
“ಯಾಕೆ ಈ ಅವಸರ..? ಎಲ್ಲಾದರೂ ಬಾಂಬ್ ಬಿದ್ದಿದೆಯಾ..? ಇಲ್ಲಾ ಬೆಂಕಿ ಹತ್ತಿದೆಯಾ..?” ಅವನನ್ನು ತಮಾಷೆ ಮಾಡಿದೆ.

“ಬಾಂಬೂ ಬೀಳುತ್ತೆ..ಬೆಂಕಿನೂ ಹತ್ತಿಕೊಳ್ಳುತ್ತೆ…ಇಲ್ಲಾ ಹತ್ತಿಸ್ತಾರೆ..?” ನನ್ನ ಮಾತಿಗೆ ವ್ಯಂಗ್ಯವಾಡಿದ, ಅವನ ಮಾತಿನಲ್ಲಿ ಯಾರ ಬಗೆಗೋ ತೀವ್ರವಾದ ಅಸಮಾಧಾನ ಇರುವುದು ಗೋಚರಿಸಿತು!
“ಯಾರು ಬಾಂಬು ಹಾಕ್ತಾರೆ..? ಯಾರು ಬೆಂಕಿ ಹಚ್ಚಿಸ್ತಾರೆ..? ಒಗಟಾಡಬೇಡ ಈಗ ಬಾಸು ಬರೋ ಸಮಯ..ಒಗಟಿಗೆ.. ಜಿಗುಟಿಗೆ ಸಮಯವಿಲ್ಲ” ಎಂದೆ!

“ಬಾಸಿಗಾದರೂ ಕಾಯಿ ಇಲ್ಲಾ ಎಲೆಕೋಸಿಗಾದರೂ ಕಾಯಿ..ಅದು ನನಗೆ ಸಂಬಂಧಿಸಿದಲ್ಲ..ನಾನೀಗ ಮುಖ್ಯವಾಗಿ ಬಂದಿದ್ದು ಆ ಆರ್ಮುಗಂ ಇದ್ದಾನಲ್ಲ… ನಿನ್ನ ಅಸಿಸ್ಟೆಂಟ್ ಅವನ ಬಗ್ಗೆ ಒಂದು ಮಾತು…! ನಿನ್ನಲ್ಲೇ ಇಟ್ಕೋ…ಅವನು ಸಖತ್ ಕಿವಿಕಚ್ಚೋ ಮನುಷ್ಯ!”
ಈ ಪದ ನನ್ನ ಕಿವಿಗೆ ಬಿದ್ದಾಗ ಕೊಂಚ ಗಲಿಬಿಲಿಯಾಯಿತು! ಆ ಪದ ನನಗೆ ಹೊಸದಾಗಿತ್ತು! ಅದರ ಅರ್ಥವೇನೋ ಸ್ಥೂಲವಾಗಿ ತಿಳಿದರೂ ಸ್ಪಷ್ಟತೆ ಬಾರದೆ  ತಲೆ ತಿನ್ನತೊಡಗಿತು. 
“ಯಾಕೆ ಹಾಗೆ ಹೇಳ್ತಿದ್ದೀಯಾ..?”

“ಗೂಬೆ ತರ ಮಾತಾಡ್ಬೇಡ! ನನ್ನ ಬಗ್ಗೆ ನಿನ್ನ ಹತ್ರ ಏನಾದರೂ ಹೇಳುತ್ತಿರುತ್ತಾನಲ್ಲವಾ..?”
“ಹೌದು. ಅದನ್ನ ನಾನು ಈ ಕಿವಿಯಿಂದ ಕೇಳಿ ಆ ಕಿವೀಲಿ ಬಿಟ್ಟುಬಿಡ್ತೀನಿ…ನಾವು ಕಾಲೇಜ್ನಲ್ಲಿ  ಪಾಠ ಕೇಳುವಾಗ, ಲೆಕ್ಚರರ್‍ಗಳ ಹಿತನುಡಿಗಳಿಗೆ ಮಾಡ್ತಿದ್ದ ಹಾಗೆ..!”
“ಅದೇ ರೀತಿ ನಿನ್ನ ಬಗೆಗೂ ನನಗೆ ಹೇಳ್ತಿರ್ತಾನೆ..? ಇಡೀ ಫ್ಯಾಕ್ಟರಿ ತುಂಬಾ ಓಡಾಡ್ತಾ  ಅಲ್ಲೀದು ಇಲ್ಲಿಗೆ ಇಲ್ಲೀದು ಅಲ್ಲಿಗೆ, ಅವರದ್ದು ಇವರಿಗೆ, ಇವರದ್ದು ಅವರಿಗೆ ವರದಿ ಒಪ್ಪಿಸೋ ನಾರದನ ವಂಶದವನು..ಅವನ ಬಗ್ಗೆ ಹುಷಾರು! ಅವನೇ ಕಿವಿಕಚ್ಚೋನು..! ಇನ್ನು ನೀನು ಕಾಯ್ತಿರೋ ನಿಮ್ಮ ಬಾಸು…ಆರ್ಮುಂಗಂನ ತುಂಬಾ ಪೆÇೀಷಣೆ ಮಾಡ್ತಿದ್ದಾನೆ… ನಮ್ಮೆಲ್ಲರ ಬಗೆಗೂ ಬಾಸಿನ ಕಿವಿ ಕಚ್ಚೋದೇ ಅವನ ಫುಲ್‍ಟೈಮು ಕೆಲಸ..”

ದೂರದಲ್ಲಿ ಬಾಸು ಕಂಡಿದ್ದರಿಂದ ವಿಶ್ವ ಅಲ್ಲಿಂದ ಮಾಯವಾದ! ಬಾಸು ಹತ್ತಿರವಾಗುತ್ತಲೇ ಎಲ್ಲಿಯೋ ಇದ್ದ ಅರ್ಮುಗಂ ನನ್ನ ಹಿಂದೆ ಪ್ರತ್ಯಕ್ಷನಾಗಿದ್ದ! ನಾನು ಬಾಸಿಗೆ ನಮಸ್ಕಾರ ಹೇಳುತ್ತಿರುದಕ್ಕೇ ಜೋಡಿ ವಾಲಗದೆಂತೆ ಅರ್ಮುಗಂ ಕೂಡ ನಮಸ್ಕಾರ ಹೇಳಿದ. ಆಗ ವಿಶ್ವನ ಮಾತು ನಿಜವೆನಿಸಿತು! 
ವಿಶ್ವ ಹೇಳಿದ್ದು, ಆರ್ಮುಗಂನ ಸ್ವಭಾವ ಇವೆಲ್ಲವನ್ನೂ ಸಮೀಕರಿಸುತ್ತಾ ಕಿವಿಕಚ್ಚುವುದರ ಸ್ಪಷ್ಟ ಅರ್ಥವನ್ನು ಗ್ರಹಿಸಿಬಿಟ್ಟಿದ್ದೆ! ಕಿವಿಕಚ್ಚುವುದರ ಅರ್ಥ ಮಿಂಚಿನಂತೆ ಹೊಳೆದ ಕ್ಷಣ ಅನಿವರ್ಚನೀಯ ಆನಂದ! ಪುಣ್ಯ! ಆರ್ಕಿಮಿಡೀಸನಂತೆ ‘ಯುರೇಕಾ..ಉರೇಕಾ..’ ಎನ್ನುತ್ತಾ ರಸ್ತೆಯಲ್ಲಿ ಬೆತ್ತಲೆ ಓಡಲಿಲ್ಲ ಅಷ್ಟೆ! 

ಕಿವಿಕಚ್ಚುವುದರ ಅರ್ಥ ಹೀಗಿದೆ: ಇದು ಯಾರಾದರೊಬ್ಬ ವ್ಯಕ್ತಿಯ ಮೇಲೆ ಇನ್ನೊಬ್ಬ ವ್ಯಕ್ತಿ ಇರುವ ಅಥವಾ ಇಲ್ಲದ ವಿಷಯಗಳನ್ನು ಗುಟ್ಟಾಗಿ ಹೇಳುವುದು. ಇನ್ನೂ ಸರಳವಾಗಿ ಹೇಳಬೇಕೆಂದರೆ ಈ ಪದ ಚಾಡಿ ಹೇಳುವವರನ್ನು ಕರೆಯುವ ಒಂದು ವಿಧಾನ! ಚಾಡಿಕೋರ ಎಂಬ ಪದದ ಸೌಮ್ಯ ರೂಪವಷ್ಟೆ! ಚಾಡಿ ಹೇಳುವವರನ್ನು ಕಿವಿಕಚ್ಚುವವರು ಎಂದು ಕರೆಯುವುದು ಕೆಲವು ಪ್ರದೇಶಗಳಲ್ಲಿ ವಾಡಿಕೆ ಇದೆ ಎಂಬುದು ನನ್ನ ಸಂಶೋಧನೆಯಿಂದ ಪ್ರಕಟವಾದ ವಿಷಯ.

ಈ ಕಿವಿಕಚ್ಚುವುದು ಒಂದು ವಿಷಿಷ್ಟವಾದ ಗುಣ. ಬಹುತೇಕ ಎಲ್ಲರೂ ಜೀವನದಲ್ಲಿ ಕನಿಷ್ಟ ಒಂದಲ್ಲ ಒಂದು ಬಾರಿಯಾದರೂ ಈ ಕೆಲಸ ಮಾಡಿರುತ್ತಾರೆ ಎಂದರೆ ನೀವು ಹುಬ್ಬೇರಿಸಿ ಹಣೆ ಗಂಟಿಕ್ಕಿಕೊಳ್ಳಬಹುದು. ಬಹುತೇಕರ ಬಾಲ್ಯದಲ್ಲಿ ಈ ಗುಣ ಪ್ರಕಟವಾಗುತ್ತದೆ. ಇದಕ್ಕೆ ಮೂಲ ಕಾರಣ ತಾನು ಒಳ್ಳೆಯವನು ಅಥವಾ ಒಳ್ಳೆಯವಳು ಎಂದು ಹೇಳಿಕೊಳ್ಳಲು, ಇನ್ನೊಬ್ಬರಿಗೆ ಹತ್ತಿರವಾಗಲು ಇಲ್ಲವೇ  ಬೇರೊಬ್ಬರ ಮೇಲಿನ ಅಸೂಯೆಯಿಂದ ಈ ಕೆಲಸ ಮಾಡಿರುತ್ತೇವೆ. ವ್ಯಕ್ತಿತ್ವ ರೂಪುಗೊಳ್ಳುವಾಗ, ಸರಿ ತಪ್ಪುಗಳ ವಿಶ್ಲೇಷಣೆ ಮಾಡುವ ಶಕ್ತಿ ಬಂದಾಗ ಈ ಕಿವಿಕಚ್ಚುವಿಕೆ ಅಥವಾ ಚಾಡಿ ಹೇಳುವುದು ಕಮ್ಮಿಯಾಗುತ್ತದೆ. ಪ್ರೌಢತೆ ಬಂದಾಗ  ಬುದ್ಧಿಪೂರ್ವಕವಾಗಿ ಈ ದೌರ್ಬಲ್ಯವನ್ನು ಬಹುತೇಕರು ಮೆಟ್ಟಿನಿಲ್ಲುತ್ತಾರೆ. ಕೆಲವರಿಗೆ ಈ ದೌರ್ಬಲ್ಯ ಕೊನೆಯವರೆಗೂ ಚ್ಯೂಯಿಂಗ್ ಗಮ್ಮಿನಂತೆ ಅಂಟಿಕೊಂಡುಬಿಡುತ್ತದೆ. ಅವರೇ ನನ್ನ ಲೇಖನದ ನಾಯಕ ನಾಯಕಿಯರು. ಇಂತವರ ಬಗೆಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು! ಅವರ ಮಾತು ನಂಬಿದರೆ ಕೋಲಾಹಲವೇ ಆಗಬಹುದು.

ಕಿವಿಕಚ್ಚುವವರು ಎಲ್ಲ ಕಾಲದಲ್ಲಿಯೂ ಇದ್ದರು, ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ. ಕಾಲಕ್ಕೂ ಕಿವಿಕಚ್ಚುವಿಕೆಗೂ ಸಂಬಂಧವೇ ಇಲ್ಲ. ನಮ್ಮ ಪುರಾಣಗಳಲ್ಲ್ಲಿ ಬರುವ ನಾರದ ಮಹರ್ಷಿಗಳು ಕಿವಿಕಚ್ಚುವವರಿಗೆ ರೋಲ್ ಮಾಡೆಲ್ ಎಂದು ನನ್ನ ಖಚಿತ ಅಭಿಪ್ರಾಯ! ಪುರಾಣಗಳಲ್ಲಿ ನಾರದರು, ಕೈಲಾಸದ ಮಾತು ವೈಕುಂಠದಲ್ಲಿ, ವೈಕುಂಠದ ಮಾತು ಭೂಲೋಕದಲ್ಲಿ ಹೇಳುವುದರ ಮೂಲಕ ಹಲವು ಕಲಹಗಳ ಸೃಷ್ಠಿಗೆ ಕಾರಣರಾಗುತ್ತಾರೆ, ರಾಕ್ಷಸರ ಮಾತು ದೇವತೆಗಳಿಗೆ, ದೇವತೆಗಳ ಮಾತು ರಾಕ್ಷಸರಿಗೆ ತಿಳಿಸಿ ಅಲ್ಲೋಲಕಲ್ಲೋಲವನ್ನುಂಟು ಮಾಡಿರುವ ಘಟನೆಗಳು ಪುಂಖಾನುಪುಂಖವಾಗಿ ಕಾಣುತ್ತವೆ.

ಕೆಲವರು, ಈ ಕಿವಿಕಚ್ಚುವ ಕೆಲಸದಲ್ಲಿ ಅದೆಷ್ಟು ಆನಂದವನ್ನು ಅನುಭವಿಸುತ್ತಾರೆ ಎಂದರೆ ಅದನ್ನು ನಮ್ಮಿಂದ ವರ್ಣಿಸಲಾಗದು, ಅದನ್ನು ಅವರೇ ಹೇಳಬೇಕು! ಏಕೆಂದರೆ ನನಗೆ ಕಿವಿಕಚ್ಚುವ ಅಭ್ಯಾಸವಿಲ್ಲ! ಕೆಲವರಂತೂ ಈ ಕಿವಿಕಚ್ಚುವ ಕಲೆಯನ್ನು ನಿರಂತರವಾಗಿ ಪೋಷಣೆ ಮಾಡುಕೊಂಡು ಬರುತ್ತಾರೆ! ಕಿವಿಕಚ್ಚುವವರಿಗೆ ತಮ್ಮ ಕಿವಿಯನ್ನು ನೀಡದವರು ಬೆರಳೆಣಿಕೆಯಷ್ಟು ಜನ ಮಾತ್ರ! ಅವರನ್ನು ಪ್ರಜ್ಞಾವಂತರು ಎಂದು ಕರೆಯಬಹುದು. ಈ ಪ್ರಜ್ಞಾವಂತರು ಮಾತ್ರ ತಮ್ಮ ಕಿವಿಯನ್ನು ಕಚ್ಚುವವರಿಗೆ ನೀಡುವುದಿಲ್ಲ! ಕಿವಿಕಚ್ಚುವವರಿಂದ ತಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಲು ವಿಶೇಷ ಎಚ್ಚರಿಕೆ ವಹಿಸುತ್ತಾರೆ.
ಕೆಲವರು ತಮ್ಮ ವೈಯುಕ್ತಿಕ ಲಾಭಕ್ಕಾಗಿ ಕಿವಿಕಚ್ಚಿದರೆ ಇನ್ನು ಕೆಲವರು ಯಾವುದೇ ಫಲಾಪೇಕ್ಷೆಯಿಲ್ಲದೆ ಕೇವಲ ಚಟಕ್ಕಾಗಿ ಕಿವಿಕಚ್ಚುತ್ತಾರೆ. ಈ ಕಿವಿಕಚ್ಚುವಿಕೆಯಿಂದಾಗಿ ದೇವಾನುದೇವತೆಗಳೇ ಯುದ್ಧ ಮಾಡಿದ್ದಾರೆ! ಇತಿಹಾಸದಲ್ಲಿ ಕಂಡುಬರುವ ಅನೇಕ ರಾಜರುಗಳು ಕಿವಿಕಚ್ಚಿಸಿಕೊಂಡು ಅಮಾಯಕರ ಜೀವಹರಣ ಮಾಡಿದ್ದಾರೆ!

ಆಧುನಿಕ ಕಾಲದಲ್ಲಿ, ಅಂದರೆ ಪ್ರಸ್ತುತ ಸಮಯದಲ್ಲಿ, ಕಿವಿ ಕಚ್ಚುವವರನ್ನೂ ಮತ್ತು ಕಚ್ಚಿಸಿಕೊಳ್ಳುವವರನ್ನೂ ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ, ವ್ಯಾಪಾರೀ ಸ್ಥಳಗಳಲ್ಲಿ ಕಾಣಬಹುದು.
‘ಅಂದ ಹಾಗೆ ನಿಮಗೆ ಈ ವಿಷಯ ಗೊತ್ತೆ..?’ ಎಂದು ಯಾರಾದರೂ ಮಾತು ಪ್ರಾರಂಭಿಸಿದರೆ ಅವರು ಖಂಡಿತವಾಗಿಯೂ ಕಿವಿಕಚ್ಚುವವರು! ಅವರಿಗೆ ಕಿವಿಕೊಟ್ಟರೆ ನೀವು ಕಿವಿಕಚ್ಚಿಸಿಕೊಂಡಂತೆಯೇ ಸರಿ!
ಕಿವಿಕಚ್ಚಿಸಿಕೊಳ್ಳುವವರು ಇಲ್ಲದಿದ್ದರೆ ಕಿವಿ ಕಚ್ಚುವವರಿಗೆ ಸ್ಕೋಪೇ ಇರುವುದಿಲ್ಲ! ಕಿವಿ ಕಚ್ಚುವವರು ಇರುವಂತೆಯೇ ಕಿವಿ ಕಚ್ಚಿಸಿಕೊಳ್ಳುವವರೂ ಇರುತ್ತಾರೆ! ಅಂತವರಿಗೆ ಯಾರ ಬಗೆಗಾದರೂ ಗೋಪ್ಯವೆನ್ನಿಸುವ ವಿಷಯ ಕೇಳಿಸಿಕೊಳ್ಳದಿದ್ದರೆ ನಿದ್ರೆಯೇ ಬರುವುದಿಲ್ಲ ಎನ್ನುವುದು ಅಕ್ಷರಶಃ ಸತ್ಯ! ಚಾಡಿ ಮಾತು ಕೇಳುವವರು ಯಾನೆ ಕಿವಿಕಚ್ಚಿಸಿಕೊಳ್ಳುವವರನ್ನು ‘ಹಿತ್ತಾಳೆ ಕಿವಿಯವರು’ ಎಂದು ಕರೆಯುವುದುಂಟು. ಇವರು ಕಿವಿಕಚ್ಚುವವರನ್ನು ಪ್ರೋತ್ಸಾಹಿಸುತ್ತಾರೆ!  ಈ ಇಬ್ಬರು ಅಂದರೆ ಕಿವಿಕಚ್ಚುವವರು ಮತ್ತು ಕಚ್ಚಿಸಿಕೊಳ್ಳುವವರ ಸ್ನೇಹ ಅದ್ವಿತೀಯವಾದದ್ದು. ಇಬ್ಬರೂ ಭೇಟಿಯಾಗುತ್ತಲೇ ಕಂಡೂ ಕಾಣದಂತಹ ಸನ್ನೆ, ಸೂಚನೆಗಳಿಂದ ಹಂಚಿಕೊಳ್ಳಲು ತಾಜಾ ವಿಷಯವಿರುವುದನ್ನು ವಿನಿಮಯ ಮಾಡಿಕೊಂಡುಬಿಟ್ಟಿರುತ್ತಾರೆ.

ನನ್ನ ಮೇಲಧಿಕಾರಿಯೊಬ್ಬರು ಕಿವಿಕಚ್ಚುವವರನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದರು. ಅದರಲ್ಲಿಯೂ ಅವರಿಗೆ ಆಗದವರ ವಿಷಯವನ್ನು ಯಾರೇ ಹೇಳಿದರೂ ಅದನ್ನು ಅತ್ಯಾಸಕ್ತಿಯಿಂದ ಕೇಳುತ್ತಿದ್ದರು. ಹಾಗೆ ಕಿವಿಕಚ್ಚುವವರಿಗೆ ವಿಷೇಶ ಮನ್ನಣೆ ನೀಡುತ್ತಿದ್ದರು. ಇದು ಕಾರ್ಖಾನೆಯಲ್ಲಿ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು! ಅದರೂ  ಕಿವಿಕಚ್ಚುವವರಿಗಾಗಲೀ ಕಿವಿಕಚ್ಚಿಸಿಕೊಳ್ಳುವ ನಮ್ಮ ಬಾಸಿಗಾಗಲೀ ಯಾವುದೇ ರೀತಿಯ ಸಂಕೋಚವಾಗಲೀ, ಕೀಳರಿಮೆಯಾಗಲೀ ಇರಲಿಲ್ಲ!

ಕಿವಿಕಚ್ಚುವುದರಲ್ಲಿ ಲಿಂಗಭೇದವಿಲ್ಲ. ಹೆಂಗಸರೂ, ಗಂಡಸರೂ ಯಾರು ಬೇಕಾದರೂ ಕಿವಿಕಚ್ಚಬಹುದು ಇಲ್ಲವೇ ಕಚ್ಚಿಸಿಕೊಳ್ಳಬಹುದು! ಕಿವಿಕಚ್ಚುವುದರಲ್ಲಿ ಮಹಿಳೆಯರು ಸ್ವಲ್ಪ ಮುಂದೆ ಎಂದು ನನ್ನ ಅಂದಾಜು. ಇದರಿಂದ ಮಹಿಳಾ ಓದುಗರು ರೊಚ್ಚಿಗೇಳಬಹುದು! ನಿಧಾನವಾಗಿ ಯಾವುದೇ ಪೂರ್ವಾಗ್ರಹವಿಲ್ಲದೆ ಯೋಚಿಸಿದರೆ ನನ್ನ ಮಾತು ನಿಜ ಎಂದು ಖಂಡಿತವಾಗಿಯೂ ಒಪ್ಪುತ್ತೀರಿ! ಹೆಂಡತಿಯರು ತಮ್ಮ ಗಂಡಂದಿರ ಕಿವಿಕಚ್ಚುವುದು ತೀರಾ ಸಹಜ! ಮುಂದುವರಿದ ಇಂಗ್ಲೀಷ್ ಭಾಷಿಕರ ದೇಶಗಳಲ್ಲಿ ನಮ್ಮಲ್ಲಿ ಕಿವಿಕಚ್ಚುವುದು ಎಂಬ ಪದಕ್ಕೆ ಸಮಾನವಾಗಿ ‘ಪಿಲ್ಲೋ ಟಾಕ್’ ಎಂಬ ಮಾತಿದೆ. ಕನ್ನಡಕ್ಕೆ ತರ್ಜುಮೆ ಮಾಡಿದರೆ ಅದು ‘ದಿಂಬಿನ ಮಾತು’ ಎಂದಾಗುತ್ತದೆ. ದಿಂಬು ಮಾತಾಡುವುದಿಲ್ಲವಾದರೂ ದಿಂಬಿಗೆ ತಲೆಯಿಡುವವರು ಮಾತಾಡುತ್ತಾರೆ! ದಿನದ ಚಟುವಟಿಕೆಗಳೆಲ್ಲಾ ಮುಗಿದು, ರಾತ್ರಿ ಮಲಗುವ ಸಮಯದಲ್ಲಿ ಹೆಂಡತಿಯರು ತಮ್ಮ ಗಂಡಂದಿರ ಕಿವಿಕಚ್ಚುವುದು ತೀರಾ ಸಾಮಾನ್ಯವಾದ ವಿಷಯ! ಹೆಂಡತಿ ಮಾತಿದೆ ಕಿವಿಗೊಡದ ಗಂಡೆದೆಯ ಗಂಡಸರು ಜಗತ್ತಿನಲ್ಲಿ ಇಲ್ಲವೇ ಇಲ್ಲ ಎಂದು ನಾನು ಗಂಟಾಘೋಷವಾಗಿ ಹೇಳಬಲ್ಲೆ! 

ಈ ಲೇಖನ ಓದಿದ ಮೇಲೆ ಖಂಡಿತವಾಗಿಯೂ ಕಿವಿಕಚ್ಚುವವರನ್ನು ನೀವು ಗುರುತಿಸಬಲ್ಲಿರಿ ಮತ್ತು ಅವರ ಮಾತು ನಂಬಿದರೆ ಆಗುವ ತೊಂದರೆಗಳಿಂದ ಖಂಡಿತವಾಗಿಯೂ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳುವಿರಿ ಎಂಬ ನಂಬಿಕೆಯಿಂದ ಲೇಖನಿಯನ್ನು ಕೆಳಗಿಡುತ್ತಿದ್ದೇನೆ!

****   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
santhoshkumar LM
santhoshkumar LM
8 years ago

🙂 

1
0
Would love your thoughts, please comment.x
()
x