ಮಾತಿಗೂ ಮನಸ್ಸಿಗೂ ಮೌನಯುದ್ಧ ಆರಂಭವಾಗಿದೆ: ಜ ಹಾನ್ ಆರಾ

ವಾರದ ಹಿಂದೆಯಷ್ಟೆ ನನ್ನಲ್ಲಿಯೂ ಅನೇಕ ವಸ್ತುವಿಷಯಗಳು ತಲ್ಲಣಗಳನ್ನು ತಂದು ಮಾತನ್ನು ಮನಸ್ಸನ್ನು ಯುದ್ಧಕ್ಕೆ ನಿಲ್ಲಿಸಿರುವಂತಹ ಕವಿ ಸುರೇಶ ಎಲ್.ರಾಜಮಾನೆಯವರ ‘ಮೌನಯುದ್ಧ’ ಕವನ ಸಂಕಲನ ಕೈಗೆ ಸಿಕ್ಕಿತು. ಕಳೆದ 21ನೇ ಅಕ್ಟೋಬರರಂದು ಲೋಕಾರ್ಪಣೆಯಾದ ಈ ಕೃತಿ ಸುರೇಶನವರ ಎರಡನೇ ಹೆಗ್ಗುರುತು. ಅನುಭವ ಕಲ್ಪನೆ ಆಸೆಗಳ ಹೂರಣವನ್ನು ಸಿಹಿ ಹೊಳಿಗೆಯಾಗಿದರೂ ರುದ್ರ ಭಯಂಕರ ಭಾವನೆಗಳು ಇದ್ದರೂ ಶೀರ್ಷಿಕೆಯೇ ಅನೇಕ ಒಳಾರ್ಥ ಜಾಲವಾಗಿ ಹರಡಿದೆ. ಈ ಜಾಲವನ್ನು ಜಾಲಾಡಿಸಿದಾಗ ಕವಿ ಮನಸ್ಸಿನ ಆಶಯ ಪ್ರೇಮದ ನದಿಯಲ್ಲಿ, ತನ್ನತನದ ನಿಲುವಿನಲ್ಲಿ ತಾನು ಅನುಭವಿಸಿದ ಅನುಭವದ ಸಾರದಲ್ಲಿ ಆಸೆಗಳ ಮುನ್ನೊಟದಲ್ಲಿ ಹೋರಾಟದ ಬೆಂಕಿಯಲ್ಲಿ, ಸಮಾಜದ ವ್ಯವಸ್ಥೆ ವಿಡಂಬನೆಯಲ್ಲಿ, ತಾರ್ಕಿಕತೆಯ ನೆಲೆಯ ಹುಡುಕಾಟದಲ್ಲಿ, ಶೋಷಿತರ ದನಿಯಲ್ಲಿ ರಾಜಕೀಯದ ಡಂಬರಾಟದಲ್ಲಿ ಹಗಲುವೇಷಧಾರಿಗಳ ಮಸಲತ್ತಿನ ವಿಚಾರಗಳಲ್ಲಿ ಮೌನಯುದ್ಧ ಅಂತ್ಯವಾಗುತ್ತದೆ.

ಕವಿ ಚಕ್ರವರ್ತಿ ರನ್ನನ ನಾಡಾದ ಬೆಳಗಲಿಯವರಾದ ಇವರು, ಸಾಹಿತ್ಯದ ವಿದ್ಯಾರ್ಥಿಯಾಗಿರದೇ ಸಾಹಿತ್ಯದ ಆರಾಧಕರಾಗಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಗೌರವಿಸುತ್ತ ಕಾವ್ಯಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಪ್ರಯತ್ನಿಸಿ ಯಶಸ್ವಿಯಾಗುತ್ತಿದ್ದಾರೆ. ಅನೇಕರಂತೆ ಕಾವ್ಯಕ್ಕೆ ಒಂದು ವ್ಯಾಖ್ಯಾನ ನೀಡಬಯಸುವ ಕವಿ ಮನಸ್ಸು
‘ಎದೆಯಿದ್ದವರಿಗೆ ಹೆಡೆಯತ್ತಿ ನಿಲ್ಲುವ ಹಾವು
ಉಸಿರಿಲ್ಲದವರಿಗೆ ಸೂರಿನೊಳಗಿನ ಠಾವು ನನ್ನ ಕವಿತೆ’
(ನನ್ನ ಕವಿತೆ) ಎಂದು ಕಾವ್ಯದ ಶಕ್ತಿಯನ್ನು ಬಿಂಬಿಸಲು ಪ್ರಯತ್ನಿಸಿದೆ.
‘ನಿಲ್ಲದ ಸಾವು ಒಲ್ಲದ ಸಾವು ಇಲ್ಲದ ಸಾವು
ಎಲ್ಲವೂ ಸಾಯುತ್ತಿದೆ ಸಾಯಿಸುತ್ತಿದೆ’ (ಸಾವಿಗೂ ಒಂದು ಮುಖವಿದೆ)
ಸಾಲುಗಳಲ್ಲಿ ಕವಿ ಬದುಕನುಂಗುವ ಸಾವಿನ ವಿವಿಧ ಭಯಾನಕತೆ ಎತ್ತಿ ಹಿಡಿದು ಸಾವಿಗೂ ಎನ್ನುವ ವಾಸ್ತವತೆಗೆ ಬರುತ್ತಾರೆ. ಈ ಭಂಯಾನತೆಯನ್ನು ಮುಂದುವರೆಸುತ್ತ ‘ದೃಶ್ಯ’ ಕವನ ಯುದ್ಧಭೂಮಿಯ ದೃಶ್ಯಗಳನ್ನು ಪ್ರಸ್ತುತ ಪಡಿಸಿದ್ದಾರೆ.

‘ಅವ್ಳಿಗಿ ಅವಳಲ್ದೇ ಅರ್ದಮರ್ದಾ ಆಗೋಗೈತೆ ಬಾಳು
ವಸಿ ಕಾಪಾಡ್ರಪ್ಪ ಅವಳೂ ಕನ್ನಡ್ದೋಳು’
‘ಕಂಗೆಟ್ಟಲ್ಳೆ ಕನ್ನಡತಿ’ ಎಂಬ ಕವನದಲ್ಲಿ ಸಂಸ್ಕøತಿಪರಕಾಳಜಿ ಸ್ತ್ರೀಪರತೆಯನ್ನು ಕವಿ ಹೇಳಲು ಪ್ರಯತ್ನಿಸಿದ್ದಾನೆ. ‘ಬೆಳಗಲಿ ದೀಪ’ ಕವನದ ಮೂಲಕ ಅನೇಕ ಆಶ್ತೋತ್ತರಗಳನ್ನು ಕವಿ ಅಲ್ಲಿ ಎಣ್ಣೆಯಾಗಿಸಿ ದೀಪ ಬೆಳಗಿಸಲು ಬೇಡುತ್ತಿದ್ದಾನೆ.

ಕವಿಯೊಬ್ಬ ಪ್ರೇಮಿಯಾಗಿ ಬರೆದಿರುವ ಕವನಗಳು ಎಲ್ಲಾ ವಯಸ್ಸಿವ ಮನಸ್ಸುಗಳಿಗೆ ರಸದೌತಣ. ಕವಿ ಭಾವ ತನ್ಮಯತೆಯಲ್ಲಿ ಮುಳುಗಿದ ಅನೇಕ ರೂಪಕಗಳು ಈ ಸಂಕಲನದಲ್ಲಿ ಸ್ಥಾನ ಪಡೆದಿದೆ ಅಲ್ಲಿ ಬರುª ಭಾವಗಳು ಮನಸ್ಸಿನಲ್ಲಿ ಕಚಗುಳಿ ಇಡುವಂತಿವೆ. ‘ನಾನೂ ಪ್ರೇಮಿಯಾದೆ’, ‘ಇದ್ದು ಇಲ್ಲದಂತಿದ್ದು ಮಾಡಿದ ಸದ್ದು’, ‘ಅನಿರೀಕ್ಷಿತವಾಗಿ ಹುಟ್ಟಿದ ಕವಿತೆ’, ‘ಅಕಿ ಹಂಗಾ’ ಇತ್ಯಾದಿ ಕವನಗಳಲ್ಲಿ ಪ್ರೇಮರಸ ಹರಿದು ಬಿಟ್ಟಿದ್ದಾರೆ.
ಕವಿತೆಗೆ ಸಾವಿಲ್ಲ ಎಂದು ಅಕ್ಷರಸಃ ಅರಿತಿರುವ ಕವಿ ತನ್ನ ಬಲವೆಂದು ಹೊಗಳುವ ಆ ತಂದೆಯ ತ್ಯಾಗ ಮಾರ್ಗದರ್ಶನ ಪ್ರೀತಿಯೆಲ್ಲವನ್ನು ‘ಸ್ವಾಬಿಮಾನದ ಸುಗಂಧ’, ನನ್ನೊಳಗಿನ(ಅ)ವನೇ ನಾನು,’ ‘ಸ್ವಾಭಿಮಾನಿ ನನ್ನಪ್ಪ’ ಇತ್ಯಾದಿ ಕವಿತೆಗಳಲ್ಲಿ ಜೀವಂತರಾಗಿಸಿದ್ದಾರೆ.

ಸಾಹಿತ್ಯ ಸಮಾಜದ ಪ್ರತಿಬಿಂಬದಂತೆ ಹಾಗಾಗಿ ಅದನ್ನು ಬಹಳ ಎಚ್ಚರಿಕೆಯಿಂದ ಜವಾಬ್ದಾರಿಯಿಂದ ರಚಿಸಬೇಕು. ತನ್ನ ಹರಿತವಾದ ಲೇಖನಿಯ ಜೊತೆಗೆ ಬಲವಾದ ಚಿಂತನೆಗಳನ್ನು ಹೊಂದಿರುವ ಸಮಾಜವನ್ನು ವಿಡಂಭಿಸುವ ‘ಹೌದು ಆದಲ್ಲಿ ಹೌದಾಗದಿದ್ದಲ್ಲಿ,’ ‘ಸುಟ್ಟು ಹಾಕಬೇಕಿದೆ’, ‘ಸಾಯಿಸ್ತಾರೋ ಇವ್ರು ಸಾಯೋದ್ಹೆಂಗ?’, ‘ಹೊಟ್ಟೆಯೊಳಗಿನ ಉರಿ,’ ‘ಯುಗವೊಂದು ನರ(ಮರ)ಳುತಿದೆ’ ಇತ್ಯಾದಿ ಕವನಗಳಲ್ಲಿ ಕವಿ ರೊಚ್ಚಿಗೆದ್ದಿದ್ದಾನೆ. ಶೋಷಿತರ ಪರ ವಕಾಲತ್ತಿಗೆ ನಿಂತವನ ಪಾತ್ರ ನಿರ್ವಹಣೆ ಮಾಡಿದ್ದಾನೆ. ಸಾಹಿತಿಗಳಾದ ಡಾ|| ಟಿ.ಯಲ್ಲಪ್ಪನವರು ಮುನ್ನಡಿಯಲ್ಲಿ ಹೇಳಿರುವಂತೆ ಬಾಹುಬಲಿ ಮತ್ತು ಭರತನ ದ್ವಂದ್ವ ಯುದ್ಧವನ್ನು ಆದಿಪುರಾಣದಲ್ಲಿ ಪ್ರತಿಪಾದಿಸುತ್ತಾನೆ ಹಾಗೇಯೆ ಕವಿ ರಾಜಮಾನೆ ಬರೀ ಶಸ್ತ್ರಾಸ್ತ್ರಗಳಿಂದ ಕೂಡಿದ ಯುದ್ಧದ ವಿರೋಧವಾಗಿ ಮಾತ್ರವಲ್ಲದೆ ಸಾಮಾಜಿಕ ಡಂಬಾಚಾರದ ಹಗಲುವೇಷವನ್ನು, ಮೋಸ ವಂಚನೆಗಳ ಹಗಲುವೇಷವನ್ನು ಕಳಚಲು ‘ಮೌನಯುದ್ಧ’ವನ್ನು ಸಾರುತ್ತಾರೆ.

‘‘ದಮನಿತ ದುರ್ಬಲರ ಪರ ದನಿ ಎತ್ತಲು ಯಾರು ಹೆದರುವರೋ ಅವರು ಗುಲಾಮರು
ಮೌನದಲ್ಲಿ ಕರಗುವ ದೇಶ ಅಧಿಕಾರಗಳ ಮರೆತು ಸತ್ಯದ ದೂರವಾದವರು ಗುಲಾಮರು
ನೇರದಾರಿಯಲ್ಲಿ ದಿಟ್ಟ ಹೆಜ್ಜೆ ಇಟ್ಟರೊಡನೆ ನಡೆಯಲು ಹೆದರುವವರು ಗುಲಾಮ”
ಜೆ.ರೆಸಲ್ ನೊವೆಲ್(ಅಮೇರಿಕಾದ ಕಾಂತ್ರಿಕಾರ)ರ ಮಾತಿನ ಭಾವಕ್ಕೆ ಬಿಂಬದಂತೆ ಅನೇಕ ಕವನಗಳು ನಿಂತಿವೆ.

ಕವಿಯಾದವನು ವ್ಯಕ್ತಿ ಕೇಂದ್ರಿತನಾಗಿರದೇ ಸಮಾಜಮುಖಿಯಾಗಿರಬೇಕು ಕವಿ ನಾನು ಅನುಭವಿಸಿದ ಅಥವಾ ಪ್ರೇರಿತ ಅನುಭವಗಳ ಸಮಸ್ಯೆಗಳನ್ನು ಸಮಾಜಕ್ಕೆ ತಗಲುವ ರೋಗಗಳನ್ನು ವೈಭವಿಸಿರುವುದು ಮಾತ್ರವಲ್ಲ ಅವನು ಅಂತಹ ಸಮಸ್ಯೆಗಳಿಗೆ ಜೀವವಾಗಬೇಕು, ನ್ಯಾಯವಾಗಬೇಕು, ಪರಿಹಾರವಾಗಬೇಕು, ಹೋರಾಟವಾಗಬೇಕು, ಮುಕ್ತಿಯಾಗಬೇಕು ಇಂತಹ ಅನೇಕ ಬಂಡಾಯಾಂಶಗಳು ಈ ಹೊತ್ತಿಗೆ ಹೊತ್ತುಕೊಂಡಿದೆ. ಹಾಗೆಯೇ ಕವನ ಕೆಲವೊಮ್ಮೆ ನೇರವಾಗಿ ಸ್ಪಷ್ಟಿಕರಣ ನೀಡದೇ ಅದು ಓದುಗರ ಅಭಿವ್ಯಕ್ತಿಯಾಗಿ ಲೀನವಾಗುತ್ತದೆ. ಪದಗಳಲ್ಲಿ ಪರಿಹಾರ ಅಡಗಿಸಿರುವ ಜಾಣ್ಮೆ ಈ ಕವಿಯಲ್ಲಿದೆ.

ಸಾಹಿತ್ಯದ ಶಕ್ತಿಯೇನು? ಎಂದು ಸುರೇಶನವರ ಮಾತುಗಳಲ್ಲಿ ಹೇಳುವುವಾದರೆ ‘ನೋವು ಬಡತನ ತಾತ್ಸರ ತಿgಸ್ಕಾರ ಕಷ್ಟಗಳು ಸವಾಲಾಗದೇ ಅದು ಶಕ್ತಿಯಾಗುವುದು ಆ ಶಕ್ತಿಗೆ ಅಸ್ತ್ರವಾದದ್ದು ಈ ಕವನಗಳು ನನ್ನ ಮಾತುಗಳಲ್ಲಿ ಕವಿತೆಗೋದು ರೂಪಕೊಡುವುದಾದರೆ ಅದು ಬದುಕಿನ ಬದುಕು, ಬದುಕಿಗೆ ಬದುಕನ್ನು ಕೊಡುವ ಬದುಕಿನ ಪ್ರತಿಬಿಂಬವೇ ಹೌದು. ನನಗೆ ಬಹಳ ಇಷ್ಟವಾದ ರಾಜಮಾನೆಯವರ ಮಾತು.
ಕವಿ ರಾಜಮಾನೆಯವರು ಕಲ್ಪನಾವಿಹಾರಿಯಲ್ಲ. ವಾಸ್ತವದ ಅನುಭವಿ. ಜೀವನವನ್ನು ವಿರೋಧಿಸದೇ ಎದುರಿಸುವ ಇವರ ಭಾವ ಮೌನವಾಗಿ ಯುದ್ಧ ಮಾಡತ್ತಿದೆ. ಮುಂದೆ ಬರುವ ಸವಾಲುಗಳನ್ನು ವಿಮರ್ಶೆಗಳನ್ನು ಸ್ವೀಕರಿಸುವ ಕವಿ ಬೆಳೆಯುತ್ತಾನೆ ಸ್ಥಿರವಾಗುತ್ತಾನೆ ಎನ್ನುತ ಯುದ್ಧಕ್ಕೆ ಜಯವಾಗಲಿ ಎಂಬುವುದು ನನ್ನ ಶುಭಾಶಯಗಳು

-ಜ ಹಾನ್ ಆರಾ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಡಾ. ನಾಹೀರಾ ಕುಷ್ಟಗಿ
ಡಾ. ನಾಹೀರಾ ಕುಷ್ಟಗಿ
5 years ago

ಜಹನರವರ ವಿಶ್ಲೇಷಣೆ ಕವಿಯ ಕಾವ್ಯವನ್ನು ಉತ್ತಮವಾಗಿ ಪರಿಚಯಿಸಿದೆ

1
0
Would love your thoughts, please comment.x
()
x