ಮಕ್ಕಳನ್ನು ಕೇವಲ ಮುದ್ದುಮಾಡಿ ಬೆಳೆಸಬೇಡಿ ಮೌಲ್ಯಗಳನ್ನೂ ಬೆಳೆಸಿ: ಶ್ರೀ ಜಗದೀಶ ಸಂ.ಗೊರೋಬಾಳ

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಮಾತು ಸತ್ಯವಾದರೂ ಇಂದಿನ ಮಕ್ಕಳಿಗೆ ನಾವು ಅವರಿಗೆ ಮುಂದೆ ಬೇಕಾಗುವುದನ್ನು ಕೊಡಬೇಕು ಅಲ್ವಾ? ಕೇವಲ ಸಸಿನಟ್ಟು ಅದರ ಫಲಕ್ಕೆ ಆಸೆಪಟ್ಟರೆ ಹೇಗೆ? ಅದನ್ನು ದಿನಂಪ್ರತಿ ನೀರು ಗೊಬ್ಬರ ಹಾಕಿ ಪೋಷಿಸಿದಾಗ ಮುಂದೊಮ್ಮೆ ಅದರಿಂದ ಫಲ ನಿರೀಕ್ಷಿಸಬಹುದು. ಹಾಗೆಯೇ ನಮ್ಮ ಶಾಲಾ ಮಕ್ಕಳನ್ನು ಬೆಳೆಸಬೇಕಿದೆ. ಮಕ್ಕಳ ಬಗ್ಗೆ ಹಲವು ಶಿಕ್ಷಕರ ಅಭಿಪ್ರಾಯಗಳು ಹೀಗಿರಲೂಬಹುದು : “ಇಂದಿನ ಮಕ್ಕಳಿಗೆ ಹಿರಿಯರೆಂದರೆ ಗೌರವವೇ ಇಲ್ಲ”, “ನನ್ನ ಕ್ಲಾಸ್ ಮಕ್ಕಳು ಹಾಳಾಗಿವೆ!”, “ನಾನು ಎಷ್ಟ್ ಅರಚಿದರೂ ನನ್ನ ಪಾoಢÀದಲ್ಲಿ ಮಕ್ಕಳು ಸುಮ್ಮನಿರಲ್ಲ”, “ನನ್ನ ಕ್ಲಾಸ್‍ನಲ್ಲಿ ಕೆಲವು ಮಕ್ಕಳು ಕ್ಲಾಸ್‍ಗೆ ಚಕ್ಕರ್ ಹಾಕಿ ತಿರಗತಾರೆ”, “ನನ್ನ ಕ್ಲಾಸ್ ಮಕ್ಕಳಿಗೆ ಸಹಾಯ ಮಾಡೋ ಬುದ್ಧಿಯೇ ಇಲ್ಲ”, “ ಮಕ್ಕಳು ಮನೇಲಿ ತಂದೆ-ತಾಯಿ ಮಾತೇ ಕೇಳೋದಿಲ್ವಂತೆ”, “ಕ್ಲಾಸ್‍ನಲ್ಲಿ ಕೆಲವು ಮಕ್ಕಳು ಪೆನ್ನು-ಪುಸ್ತಕ-ಪೆನ್ಸಿಲ್ ಕದೀತಾರೆ”, “ನನ್ನ ಕ್ಲಾಸ್‍ನಲ್ಲಿ ಕೆಲವು ಮಕ್ಕಳು ನೀಟಾಗಿ ಡ್ರೆಸ್ ಮಾಡ್ಕೊಂಡ್ ಬರೋದಿಲ್ಲ”, “ಮಕ್ಕಳು ಆವರಣದಲ್ಲಿ ಬೆಳೆಸಿದ ಸಸಿಗಳನ್ನು ಕಿತ್ತು ಹಾಳ ಮಾಡ್ತಾರೆ”, “ಮಕ್ಕಳು ಎಲ್ಲೆಂದರಲ್ಲಿ ಕಸ ಬಿಸಾಕ್ತಾರೆ”, “ಹೇಳಿದ ಮಾತೇ ಕೇಳಲ್ಲ”, “ಮಕ್ಕಳು ಸುಳ್ಳು ಹೇಳ್ತಾರೆ”- ಈ ಎಲ್ಲಾ ದೂರುಗಳಲ್ಲಿ ಕೆಲವನ್ನಾದರೂ ಶಿಕ್ಷಕರಿಂದ ಕೇಳಿರಬಹುದು ಅಲ್ವಾ?

ಇನ್ನೊಂದು ಕಡೆ “ಈಗೀನ್ ಕಾಲದ ಮಕ್ಕಳೇ ಹೀಗೆ ಬಿಡ್ರಿ ಯಾರ ಮಾತೂ ಕೇಳಂಗಿಲ್ಲ!”, “ಹಿರೀಕರಿಗೆ ಗೌರವ ಕೊಡುವುದಿಲ್ಲ”, “ನಮ್ಮ ಕಾಲದಲ್ಲೆಲ್ಲಾ ಹೀಗಿರಲಿಲ್ಲ ಬಿಡಿ!”, “ಚಿಕ್ಕವರಿದ್ದಾಗಲೇ ನಮಗೆ ನೂರಾರು ರಾಮಾಯಣ-ಭಾರತದ ಕತೆಗಳು ಗೊತ್ತಿತ್ತು. ಈಗೀನ್ ಮಕ್ಕಳಿಗೆ ರಾಮಾಐಣದ ಕತೆಗಳು ಗೊತ್ತಿಲ್ಲ, ಪುರಾಣ ಕತೆಗಳು ಗೊತ್ತಿಲ್ಲ, ಬೈಬಲ್‍ನ ಕತೆಗಳು ಗೊತ್ತಿಲ್ಲ, ಅರೇಬಿಯನ್ ನೈಟ್ಸ್ ಕತೆಗಳು ಗೊತ್ತಿಲ್ಲ” ಎಂದು ಗೊಣಗುತ್ತಿರುತ್ತಾರೆ. ಈ ಎಲ್ಲ ಮಾತುಗಳು ಸತ್ಯ ಎಣಿಸಿದರೂ ಇದಕ್ಕೆ ಇಂದಿನ ಮಕ್ಕಳನ್ನು ಈಗಿನ ತಾಂತ್ರಿಕತೆಯನ್ನು ದೂಷಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಈಗ ನೋಡೋಣ. ಶಾಲೆಗೆ ಹೋಗುವ ಮಕ್ಕಳು ಹೀಗಾಗಲು ನೇರವಾಗಿ ನಾವೇ ಕಾರಣರು.

ಪೋಷಕರಾಗಿ ನಾವು ನಮ್ಮ ಮಕ್ಕಳಿಗೆ ಮನೆಯಲ್ಲಿ ಮೌಲಿಕ ಕತೆಗಳನ್ನು, ಪ್ರಸಂಗಗಳನ್ನು, ಇತಿಹಾಸದ ಸ್ವಾರಸ್ಯಕರ ಘಟನೆಗಳನ್ನು ಹೇಳುತ್ತಿಲ್ಲ. ಮಕ್ಕಳೊಂದಿಗೆ ಸಮಯ ಕಳೆಯಲು ಈಗಿನ ಪೋಷಕರಿಗೆ ವೇಳೆ ಇಲ್ಲ. ಎಲ್ಲವೂ ಯಾಂತ್ರಿಕ ಜಗತ್ತು. ತಂತ್ರಜ್ಞಾನ ಮನುಷ್ಯನನ್ನು ಸೋಮಾರಿಯಾಗಿ ಮಾಡಿದೆ ಎಂಬ ಮಾತು ಅಕ್ಷರಸಃ ಸತ್ಯ. ಹೆಚ್ಚುತ್ತಿರುವ ನಗರೀಕರಣ, ಕೈಗಾರಿಕೀಕರಣಗಳ ಪ್ರಭಾವದಿಂದ ಇಂದಿನ ಕುಟುಂಬಗಳು ವಿಭಕ್ತ ಕುಟುಂಬಗಳಾಗುತ್ತಿವೆ. ಹೀಗಾದಾಗ ಚಿಕ್ಕಮಕ್ಕಳು ಅಜ್ಜ-ಅಜ್ಜಿ, ಮಾವ-ಅತ್ತೆ, ಚಿಕ್ಕಪ್ಪ-ಚಿಕ್ಕಮ್ಮರ ಜೊತೆ ಬೆಳೆಯಲು ಅವಕಾಶವೇ ಇಲ್ಲವಾಗುವುದು. ಮೌಲ್ಯಶಿಕ್ಷಣವನ್ನು ನೀಡುವಲ್ಲಿ ಅವಿಭಕ್ತ ಕುಟುಂಬದ ಕೊಡುಗೆ ಬಹಳಷ್ಟಿದೆ. ಒಂದು ಮಗು ಅರ್ಧಭಾಗ ಮೌಲ್ಯವನ್ನು ತನ್ನ ಕುಟುಂಬದಿಂದಲೇ ಪಡೆಯುತ್ತದೆ. ಇನ್ನರ್ಧ ಭಾಗವನ್ನು ತನ್ನ ಸ್ನೇಹಿತರಿಂದ, ತನ್ನ ಶಾಲೆಯ ಅಧ್ಯಾಪಕರಿಂದ ಮತ್ತು ಇತರ ಸಾಮಾಜಿಕ ಸಂಸ್ಥೆಗಳಿಂದ ಪಡೆಯುತ್ತದೆ. “ಮಕ್ಕಳಿಗೆ ಕತೆ, ನೀತಿ ಹೇಳಲಿಕ್ಕೆ ಎಲ್ಲಿದೇ ಟೈಮು?” “ಅವರನ್ನು ಶಾಲೆಗೆ ಕಳಿಸಿ, ನಂತರ ಟ್ಯೂಶನ್‍ಗ ಕಳಿಸಬೇಕು. ಅವರು ಒಳ್ಳೇ ಮಾಕ್ರ್ಸ ತೆಗಿಬೇಕು, ಅದಬಿಟ್ಟು ಈ ಕತೆ ಪುರಾಣ ಹೇಳಿದರೇ ಅದು ಬರೀ ಟೈಮ್‍ವೇಸ್ಟು” ಎಂದು ಹೇಳುವ ಶೇ.70 ಪಾಲಕರು ನಮ್ಮಗಳ ಮಧ್ಯೆಯೇ ಇದ್ದಾರೆ. ಒಂದು ಮಗುವಿಗೆ ಮೌಲ್ಯಶಿಕ್ಷಣವನ್ನು ನೀಡುವಲ್ಲಿ ತಂದೆತಾಯಿಗಳು ಎಷ್ಟು ನಿರ್ಣಾಯಕರೋ ಅಷ್ಟೇ ಮಹತ್ವದ ಸ್ಥಾನವನ್ನು ಶಾಲಾ ಅಧ್ಯಾಪಕರು ನಿರ್ವಹಿಸುತ್ತಾರೆ. ಇನ್ನು ಶಾಲಾ ಅಧ್ಯಾಪಕರು ಶಾಲೆಗಳಲ್ಲಿ ಮೌಲ್ಯಶಿಕ್ಷಣ ನೀಡಬೇಕೆಂದಿದ್ದರೂ ಎಷ್ಟು ಶಾಲೆಗಳಲ್ಲಿ ಈ ಕಾರ್ಯ ನಡೆದಿದೆ? ಇತಿಹಾಸ, ಕತೆಪುಸ್ತಕಗಳನ್ನು ಓದಿಯಾದರೂ ಮಕ್ಕಳಿಗೆ ಕತೆ, ಘಟನೆಗಳನ್ನು ಹೇಳಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯಗಳನ್ನು ಬೆಳೆಸಲು ಬಹಳ ಪರಿಣಾಮಕಾರಿ ಸಾಧನ ಕತೆ. ಸಮಾಜದ ಋಣಾತ್ಮಕ ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸಿ ಅವರನ್ನು ಸುಶಿಕ್ಷಿತ ನಾಗರಿಕರನ್ನಾಗಿ ಮಾಡುವ ಗುರುತರ ಜವಾಬ್ದಾರಿ ಪೋಷಕ ವರ್ಗ ಹಾಗೂ ಅಧ್ಯಾಪಕ ವರ್ಗದ ಮೇಲಿದೆ. ಓಡುತ್ತಿರುವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ನೀತಿವಂತರನ್ನಾಗಿ ಮಾಡದಿದ್ದರೆ ಮುಂಬರುವ ಸಮಾಜ ರೋಗಗ್ರಸ್ಥವಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಯೋಗ್ಯ ಸಂಸ್ಕಾರದ ಅಗತ್ಯವಿದೆ. ಇತ್ತೀಚಿನ ಟಿ.ವಿ ಕಾರ್ಯಕ್ರಮಗಳು, ಸಿನೇಮಾಗಳು, ವಿಡಿಯೋ ಗೇಮ್‍ಗಳು, ಅಂತರ್ಜಾಲ ಕರ್ಮಗಳು, ಮೊಬೈಲ್ ಆಟಗಳು, ಮಕ್ಕಳನ್ನು ದಾರಿತಪ್ಪುವಂತೆ ಮಾಡುತ್ತವೆ. ನೈತಿಕ ಮೌಲ್ಯಗಳನ್ನು ಪಾಠ ಕಲಿಸಿಅದಂತೆ ಕಲಿಸಲಿಕ್ಕೆ ಆಗುವುದಿಲ್ಲ. ಒಂದು ಮಗುವಿಗೆ “ನೀನು ಸತ್ಯವನ್ನೇ ನುಡಿಬೇಕು, ಪ್ರಾಮಾಣಿಕನಾಗಿರಬೇಕು” ಎಂದು ಹೇಳುತ್ತಿದ್ದರೆ ಆ ಮಗು ಮೌಲ್ಯಪಾಲಿಸುವುದಿಲ್ಲ. ಬದಲಿಗೆ ಆ ಮಗುವಿಗೆ ಸತ್ಯ ಪ್ರಾಮಾಣಿಕತೆಗೆ ಸಂಬಂಧಿಸಿದ ನೀತಿಕತೆ, ಘಟನೆ ಅಥವಾ ಗಾಂಧೀಜಿಯವರ ಜೀವನದ ಸಂದರ್ಭಗಳನ್ನು ಹೇಳಿದರೆ ಮೌಲ್ಯಗಳು ಮಕ್ಕಳಲ್ಲಿ ಮನೆ ಮಾಡಿಕೊಳ್ಳುತ್ತವೆ ಎನ್ನುತ್ತಾರೆ ಶಿಶುಮನೋವಿಜ್ಞಾನಿಗಳು. ಹಾಗಾದರೆ ನಮ್ಮ ಮಕ್ಕಳಿಗೆ

ನಾವು ನೈತಿಕತೆ- ಮೌಲ್ಯಗಳನ್ನು ಹೇಗೆ ಅರಿಕೆಮಾಡಿಸಬೇಕು? ಈ ಬಗ್ಗೆ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.
 ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆಯ ಮಾತುಗಳನ್ನಾಡಿ. ಪ್ರತಿಕ್ರಿಯಿಸದೇ ಸುಮ್ಮನಿರಬೇಡಿ.
 ನಿಮ್ಮ ಸಮಯವನ್ನು ಯೋಜಿಸಿ ಮಕ್ಕಳೊಂದಿಗೆ ಕಳೆಯಿರಿ. ನಿಮ್ಮ ಬಿಜಿ ಬದುಕಿಗೆ ಆಮಿಷಗಳನ್ನು ತೋರಿಸಬೇಡಿ.
 ಪುರಾಣ, ಇತಿಹಾಸ, ರಾಮಾಯಣ, ಭಾರತ, ಬೈಬಲ್, ಕುರಾನ್‍ದಲ್ಲಿಯ ಕತೆಗಳನ್ನು/ಪ್ರಸಂಗಗಳನ್ನು ಓದಿ ಮಕ್ಕಳಿಗೆ ಹೇಳಿ. ಮೌಡ್ಯತೆ ಬೆಳೆಸಬೇಡಿ.
 ನೀವು ತಪ್ಪು ಮಾಡಿದಾಗ ಮಕ್ಕಳಲ್ಲಿ ಕ್ಷಮೆ ಕೇಳಿ. ನಿರ್ಲಕ್ಷ್ಯದಿಂದ ಸುಮ್ಮನಿರಬೇಡಿ.
 ಮಕ್ಕಳ ಟಿ.ವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯ ಮೇಲೆ ಒಂದು ಕಣ್ಣಿಡಿ ಅಷ್ಟೇ. ಅತಿಯಾಗಿ ನಿರ್ಬಂಧಿಸಬೇಡಿ.
 ನಿಮ್ಮ ಮಕ್ಕಳನ್ನು ಇನ್ನೊಬ್ಬರಿಗೆ ಸಹಾಯ ಮಾಡಲು ಪ್ರೋತ್ಸಾಹಿಸಿ. ಹಿಯಾಳಿಸಬೇಡಿ.
 ನಿಮ್ಮ ವೈಯಕ್ತಿಕ ಅನುಭವದ ಘಟನೆಗಳನ್ನು ಹಂಚಿಕೊಳ್ಳಿ. ಸುಮ್ಮನೆ ಕಟ್ಟುಕತೆ ಹೇಳಬೇಡಿ.
 ಮಕ್ಕಳಿಗೆ ಪರಾನುಭೂತಿ(empathy) ತೋರಿಸುತ್ತಾ ಪರಾನುಭೂತಿ ಮೌಲ್ಯ ತಿಳಿಸಿ. ಪರಾನುಭೂತಿಯ ಉಪನ್ಯಾಸ ಹೇಳಬೇಡಿ.
 ಮಕ್ಕಳ ವ್ಯಕ್ತಿತ್ವವನ್ನು ಗೌರವಿಸಿ. ಮಕ್ಕಳಿಗೆ ಅವರ ಮಟ್ಟಕ್ಕನುಗುಣವಾಗಿ ಜವಾಬ್ದಾರಿಯನ್ನು ನೀಡಿ ವೀಕ್ಷಿಸುತ್ತಿರಿ. ಚಿಕ್ಕವರೆಂದು ಅಸಡ್ಡೆ ತೋರಬೇಡಿ.
 ಮಕ್ಕಳು ನಿಮಗೇನಾದರೂ ಸಹಾಯ ಮಾಡಲಿ ಸಣ್ಣದೋ ದೊಡ್ಡದೋ ಅವರಿಗೆ ಮೊದಲು ಧನ್ಯವಾದಗಳನ್ನು ಹೇಳಿರಿ.
 ಮಕ್ಕಳು ಏನಾದರೂ ತಪ್ಪು ಮಾಡಿದಾಗ ಕ್ಷಮಿಸಿ. ಹೊಡೆದು ಬಡಿದು ಪೋಲಿಸ್ ತರಹ ವರ್ತಿಸಬೇಡಿ.
 ಮಕ್ಕಳು ಸ್ವಲ್ಪ ದೊಡ್ಡವರಿದ್ದರೆ ಅವರಿಗೆ ಮಹಾತ್ಮರ, ವಿಜ್ಞಾನಿಗಳ ಜೀವನ ಚರಿತ್ರೆ ಓದಲು ಪುಸ್ತಕ ಕೊಡಿಸಿ. ಅವರ ಆದರ್ಶಗಳನ್ನು ಪಾಲಿಸುವಂತೆ ಪ್ರೇರೇಪಿಸಿ.
 ಪರಧರ್ಮದ ಹಬ್ಬಗಳ ಬಗ್ಗೆ ಅವುಗಳ ಮಹತ್ವವನ್ನು ತಿಳಿಯಲು ಅವಕಾಶಮಾಡಿ ಕೊಡಿ. ಹಬ್ಬಗಳ ಹಿನ್ನೆಲೆಯನ್ನು ತಿಳಿಸುತ್ತಿರಿ.
 ನಿಮ್ಮ ಮಕ್ಕಳ ಗೆಳೆಯರ ಕೂಟದ ಮೇಲೊಂದು ಕಣ್ಣಿಡಿ. ಒಳ್ಳೆಯ ಗೆಳೆತನಕ್ಕೆ ಅನುವು ಮಾಡಿಕೊಡಿ. ವಿನಾಕಾರಣ ನಿರ್ಬಂಧಿಸಬೇಡಿ.
 ಮಕ್ಕಳ ಆಸೆ-ಆಕಾಂಕ್ಷೆಗಳನ್ನು ಈಡೇರಿಸಿ. ಕುಂಟುನೆಪ ಹೇಳಿ ತಣ್ಣೀರೆರಚಬೇಡಿ.
 ನಿಮ್ಮ ನಡೆ ನುಡಿ ವೇಷ-ಭೂಷಣ ಸಭ್ಯವಾಗಿರಲಿ. ವೃತ್ತ ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ಮೊದಲು ನಿಮ್ಮದಾಗಿರಲಿ. ಸುಮ್ಮನೆ ಮಕ್ಕಳಿಗೆ ಲೆಕ್ಚರ್ ಕೊಡಬೇಡಿ.
 ಶಾಲೆಗಳಲ್ಲಿ ಮಕ್ಕಳಿಗೆ ಸಾಂವಿಧಾನಿಕ ಮತ್ತು 84 ಕೋರ್ ಮೌಲ್ಯಗಳಿಗೆ ಒತ್ತುನೀಡಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯಗಳನ್ನು ಬೆಳೆಸದಿದ್ದರೆ ಸಮಾಜಕ್ಕೆ ಅಪಾಯವನ್ನು ತಂದೊಡ್ಡಿದಂತೆ ಎಂದು ಅಮೇರಿಕದ ಮಾಜಿ ಅಧ್ಯಕ್ಷ್ಯ ರೂಸವೆಲ್ಟರು ಅಭಿಪ್ರಾಯಪಡುತ್ತಾರೆ.
 ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ನಮ್ಮ ಸಂಸ್ಕøತಿ ಬಗ್ಗೆ ತಿಳಿಯಲು ಅವಕಾಶ ಕಲ್ಪಿಸಿ. ಪರಸಂಸ್ಕøತಿ ಬಗ್ಗೆ ಅವಹೇಳನವೂ ಬೇಡ.
 ತಾಯಿಯಂತೆ ಮಗಳು ನೂಲಿನಂತೆ ಸೀರೆ ಎಂಬ ಮಾತೊಂದು ನಮ್ಮಲ್ಲಿದೆ. ಈ ಮಾತೂ ಸಹ ಮೌಲ್ಯಗಳಿಗೆ ಸಂಬಂಧಿಸಿದ್ದು. ಮಗುವಿನ ನೈತಿಕತೆಯ ನಿರ್ಧಾರಕರು ಅದರ ತಂದೆ ತಾಯಿ ಶಿಕ್ಷಕರು ಎಂದರ್ಥ.
 ಮಕ್ಕಳಿಂದ ಅಪೇಕ್ಷಿತ ವರ್ತನೆ ಕಂಡುಬಂದಾಗ ಅವುಗಳನ್ನು ಸೂಕ್ತ ರೀತಿಯಲ್ಲಿ ಪುಷ್ಟೀಕರಿಸಬೇಕು. ಕಲಿಕಾ ಅನುಭವಗಳನ್ನು ಒದಗಿಸುವುದರ ಮೂಲಕ ಮೌಲ್ಯಗಳನ್ನು ಸುಲಭವಾಗಿ ಬಿತ್ತಬಹುದೇ ವಿನಃ ಯಾವುದೇ ಉಪನ್ಯಾಸದಿಂದಲ್ಲ.
 ಶ್ರೀರಾಮಚಂದ್ರ, ಸತ್ಯಹರಿಶ್ಚಂದ್ರ, ಏಕಲವ್ಯ, ಭೀಷ್ಮ, ಕರ್ಣ, ಅಶೋಕ ಚಕ್ರವರ್ತಿ, ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ಅಬ್ದುಲ್ ಕಲಾಂ, ನೀರಜಾ ಬಾನೋಟ್ ಮುಂತಾದವರ ಜೀವನ ಕೊಡುಗೆಗಳನ್ನು ತಿಳಿಸುತ್ತಾ ಅವರ ಆದರ್ಶ ಪಾಲನೆಗೆ ಪ್ರೋತ್ಸಾಹಿಸುವುದು.

ಮಕ್ಕಳು ಹಸಿಯಾದ ಸಿಮೆಂಟ್ ಗೋಡೆ ಇದ್ದಂತೆ, ಆ ಗೋಡೆಗೆ ಏನು ಎಸೆದರೂ ಗೋಡೆಗೆ ದಕ್ಕೆಯಾಗುತ್ತದೆ. ಆದ್ದರಿಂದ ಆ ಗೋಡೆಗೆ ಮೌಲ್ಯಗಳೆಂಬ ನೀರನ್ನು ಹಣಿಸಿ ಗೋಡೆಯನ್ನು ಗಟ್ಟಿಗೊಳಿಸುವ ಅಗತ್ಯತೆ ಇಂದು ಬಹಳ ಇದೆ. ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತ ಸಮಾಜವನ್ನು ನಿರ್ಮಿಸಬೇಕಾಗಿದ್ದು ನಮ್ಮೆಲ್ಲರ ಗುರುತರ ಹೊಣೆ. ಇಂದು ನಾವು ತಾಂತ್ರಿಕತೆಯ ಉತ್ತುಂಗದ ಎತ್ತರದಲ್ಲಿದ್ದರೂ ನಮ್ಮಲ್ಲಿ ಮೌಲ್ಯಗಳ ಬಡತನ ಬಹಳಷ್ಟಿದೆ. ನಾವು-ನಮ್ಮವರು ಎಂಬ ಭಾವನೆ ಕಡಿಮೆಯಾಗಿದೆ, ಸಹಾಯ ಮಾಡುವ ಬುದ್ಧಿ ವಿರಳವಾಗಿದೆ, ಪರಧರ್ಮಸಹಿಷ್ಣುತೆಯಲ್ಲಿ ಇಳಿಮುಖವಾಗಿದೆ, ಕೋಮುಗಲಭೆಗಳಲ್ಲಿ ಯುವಕರು ಆಸಕ್ತರಾಗಿದ್ದಾರೆ, ಸಮಾಜಘಾತುಕ ದಂದೆಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ, ಮಕ್ಕಳ ಮೇಲಿನ ದೌರ್ಜನ್ಯಗಳು ಲೈಂಗಿಕ ದೌರ್ಜನ್ಯಗಳೂ ಸೇರಿ ಅಧಿಕವಾಗುತ್ತಿವೆ, ವೃದ್ದಾಶ್ರಮಗಳು ಅಧಿಕವಾಗುತ್ತಿವೆ, ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ, ಯುವ ಜನಾಂಗ ಮಾದಕ ಜಗತ್ತಿಗೆ ಮರುಳಾಗುತ್ತಿದೆ, ದೇವರು-ಧರ್ಮದ ವಿಷಯಗಳಲ್ಲಿ ಮೌಡ್ಯತೆ ಹೆಚ್ಚುತ್ತಿದೆ, ನಮ್ಮ ಆಚಾರ-ವಿಚಾರ, ಸಂಪ್ರದಾಯಗಳಲ್ಲಿ ನಂಬಿಕೆ ಕಳೆದುಕೊಂಡು ಪಾಶ್ಚಾತ್ಯರ ಅನುಕರಣೆ ಹೆಚ್ಚುತ್ತಿದೆ-ಇಂತಹ ಮಲಿನ ಸಮಾಜವನ್ನು ತಿಳಿಮಾಡುವ ಅಗತ್ಯತೆ ಇಂದು ತೀರಾ ಇದೆ.

ಮಕ್ಕಳ ಕತೆಗಳು ಮೌಲ್ಯಗಳ ಕಣಜ
ಮೂರು ವರ್ಷಗಳಿಂದ ಹಿಡಿದು ಎಲ್ಲ ವಯೋಮಾನದ ಮಕ್ಕಳಿಗೆ ಕತೆಗಳೆಂದರೆ ಪಂಚಪ್ರಾಣ. ಅದರಲ್ಲೂ ಪಂಚತಂತ್ರದ ಕತೆಗಳು, ತೆನಾಲಿರಾಮನ ಕತೆಗಳು, ಅಕ್ಬರ್-ಬೀರಬಲ್ಲನ ಕತೆಗಳೆಂದರೆ ಅವರ ಕೂತುಹಲ ಹೇಳತೀರದು. ಕತೆಗಳಲ್ಲಿ ಪ್ರಾಣಿ-ಪಕ್ಷಿಗಳು ಮನುಷ್ಯರಂತೆ ಮಾತನಾಡುವುದನ್ನು ಇಷ್ಟಪಡುತ್ತಾರೆ. ತಾವೂ ಕತೆಯಲ್ಲಿನ ಒಂದು ಪಾತ್ರವೆಂದು ಬಗೆಯುವುದುಂಟು. ಮಕ್ಕಳು ಕತೆಗಳಲ್ಲಿನ ಪಾತ್ರಗಳಿಗೆ ಆಕರ್ಷಿತರಾಗುತ್ತಾರೆ. ಇದರಿಂದ ಮಕ್ಕಳ ಹುಮ್ಮಸ್ಸು ಇಮ್ಮಡಿಯಾಗುತ್ತದೆ. ಕತೆಯನ್ನು ಅನುಕರಿಸುತ್ತಾ ಕತೆಯ ಆದರ್ಶದಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ಈ ಟಿ.ವಿ, ರೇಡಿಯೋ ಸಿನೇಮಾಗಳಿಲ್ಲದ ಕಾಲದಲ್ಲಿ ಎಲ್ಲರ ಮನೆಗಳಲ್ಲಿ ಹಿರಿಯ ಅಜ್ಜ-ಅಜ್ಜಿಯರು ಮಕ್ಕಳಿಗೆ ಕತೆಗಳ ಕಣಜವಾಗಿದ್ದರು. ಈಗ ಬೆರಳೆಣಿಕೆಯ ಮನೆಗಳಲ್ಲಿ ಮಾತ್ರ ಈ ಕತೆ ಹೇಳುವ ಅಜ್ಜ-ಅಜ್ಜಿಯರಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿ ಈಗಲೂ ಅಗಣಿತ ಜನಪದ ಕತೆಗಳು ಜನರ ಬಾಯಲ್ಲಿವೆ. ಇಂತಹ ಕತೆಗಳು ಕೂಡಾ ಮುಗ್ದ ಮಕ್ಕಳಿಗೆ ಪ್ರಿಯವಾಗಿವೆ. ಯೂಲಿಸಿಸ್ ಸಿಂಡ್ರೇಲಾ ಕತೆ, ಪುಣ್ಯಕೋಟಿ ಕತೆ, ಅಲಿಬಾಬಾ ಮತ್ತು ನಾಲ್ವತ್ತು ಕಳ್ಳರ ಕತೆ, ಈಸೋಪನ ಕತೆಗಳು, ರಾಬಿನ್ ಹುಡ್ ಕತೆಗಳು, ಹ್ಯಾರಿಪಾಟರ್ ಕತೆಗಳು ಈಗಲೂ ಕೂಡಾ ಮಕ್ಕಳಿಗೆ ಪ್ರಿಯವಾದ ಕತೆಗಳು.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ರಲ್ಲಿ ತಿಳಿಸಿರುವಂತೆ ಸ್ವತಂತ್ರ ಚಿಂತನೆ, ಬೇರೆಯವರ ಒಳಿತು ಮತ್ತು ಭಾವನೆಗಳಿಗೆ ಸಂವೇಧನಾ ಶೀಲವಾಗಿರಲು ಶಿಕ್ಷಣ ಕೊಡಬೇಕು. ಹೊಸ ಸನ್ನಿವೇಶಗಳಿಗೆ ಹೊಂದಾಣಿಕೆ ಮತ್ತು ಸೃಜನಶೀಲ ರೀತಿಯಲ್ಲಿ ಪ್ರತಿಕ್ರಿಯಿಸಲು ಕಲಿಯಲು ಶಿಕ್ಷಣ ಕೊಡಬೇಕು. ರಾಷ್ಟ್ರೀಯ ಶಿಕ್ಷಣ ಕಾಯ್ದೆ 2009 ಜಾರಿಗೆ ಬಂದ ಮೇಲೆ ಮೌಲ್ಯಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಪಠ್ಯ ಕ್ರಮಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಪಠ್ಯಪುಸ್ತಕಗಳ ರಚನೆಯಾಗಿವೆ. ಹೀಗೆ ನಾವು ನಮ್ಮ ಮಕ್ಕಳಿಗೆ ಸಂಸ್ಕಾರದ ಪಾಠ ಒದಗಿಸಿದರೆ ಅವರ ಭವಿಷ್ಯ ಉತ್ತಮವಾಗಿ ನಿರ್ಮಾಣಗೊಳ್ಳುತ್ತದೆ. ನಾಳೆಯ ನಾಡಿನ ಸುಪ್ರಜೆಗಳಾಗಿ ದೇಶದ ಆಸ್ತಿಯಾಗುತ್ತಾರೆ. ಮೌಲ್ಯ ಶಿಕ್ಷಣದ ಕಲಿಕೆ ಬೋಧನೆಯು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ನಡೆಯಲಿ. ಎರಡು ಅಕ್ಷರ ಕಡಿಮೆ ಕಲಿತರೂ ಪರವಾಗಿಲ್ಲ ನಮಗೆ ಉತ್ತಮ ನಡೆನುಡಿಯ ಮೌಲಿಕ ಮಕ್ಕಳಾಗಲಿ ಸಾಕು ಅಲ್ವಾ?

-ಶ್ರೀ ಜಗದೀಶ ಸಂ.ಗೊರೋಬಾಳ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x