ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ: ಆದಿತ್ಯಾ ಮೈಸೂರು

ಭಾರತವು ಅಂದು ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಅಸಮಾನತೆ, ಲಿಂಗ ತಾರತಮ್ಯ, ಸತಿ ಸಹಗಮನ, ಬಾಲ್ಯ ವಿವಾಹ ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಇನ್ನೂ ಮುಂತಾದ ಮೌಢ್ಯತೆ, ಕಂದಾಚಾರಗಳ ಬಿತ್ತುವ ಆಗರವಾಗಿತ್ತು. ಅಂದಿನ ಸಮಾಜ ಶೂದ್ರ ಅತಿಶೂದ್ರ ಮತ್ತು ಮಹಿಳೆಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು. ವರ್ಣಾಶ್ರಮದ ನೆಲೆಗಟ್ಟಿನಲ್ಲೆ ನಿಂತಿದ್ದವು. ಮೇಲ್ವರ್ಗದವರೆ ಸರ್ವಶ್ರೇಷ್ಠರೆನಿಸಿಕೊಂಡಿದ್ದರು. ಶಿಕ್ಷಣವೆಂಬುದು ಅವರಿಗೆ ಮಾತ್ರ ಸೀಮಿತವಾಗಿತ್ತು. ಶೂದ್ರರು ಅದರಿಂದ ದೂರವೇ ಉಳಿಯಬೇಕಾಗಿತ್ತು ಇದಕ್ಕೆ ಅರ್ಹರಾಗಿರಲಿಲ್ಲ. ಇನ್ನೂ ಮಹಿಳೆಯರ ಶಿಕ್ಷಣವೆಲ್ಲಿ ?

ಧರ್ಮದ ಹೆಸರಿನಲ್ಲಿ ಇವರ ಶಿಕ್ಷಣವನ್ನು ಮೊಟಕುಗೊಳಿಸಲಾಗಿತ್ತು.
ಮನುಸ್ಮೃತಿಯಲ್ಲಿ ಮನು ಹೇಳಿರುವಂತೆ “ಹೆಣ್ಣು ಅಬಲೆ ಅವಳು ಸದಾ ಅಧೀನಳಾಗಿರಬೇಕು. ಬಾಲ್ಯದಲ್ಲಿ ತಂದೆ, ಯೌವ್ವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಮಗನ ಆಶ್ರಯದಲ್ಲಿರಬೇಕು” ಕಲಿಕೆಗೆ ಇವಳು ಅನರ್ಹಳು. ತಿಂಗಳಲ್ಲಿ ಮೂರು ದಿನ ಹೊರಗುಳಿಯುವುದರಿಂದ ಅವಳು ಅಪವಿತ್ರಳು ಶ್ರೇಷ್ಠತೆಗೆ ಯೋಗ್ಯಳಲ್ಲ, ಕಲಿತರೆ ಧರ್ಮಕ್ಕೆ ಬಗೆದ ದ್ರೋಹದವಳು ಎಂಬಿತ್ಯಾದಿ ಹಣೆಪಟ್ಟಿಯನ್ನ ಹೆಣ್ಣಿಗೆ ಕಟ್ಟಲಾಗಿತ್ತು.

ಇಂತಹ ಸಂದರ್ಭದಲ್ಲಿ ನವೋತ್ತರ ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಭಾರತಕ್ಕೂ ಬೀಸ ತೊಡಗಿತು. ಸಾಮಾಜಿಕ ಕ್ರಾಂತಿ ಕಿಡಿ ಹೊತ್ತಲಾರಂಭಿಸಿತು. ಅನೇಕ ಸಮಾಜ ಸುಧಾರಣೆಗಳಾದವು.ಪ್ರಮುಖ ವೈಚಾರಿಕತೆ ವಿಚಾರ ಚಿಂತನೆಗಳು ಬೇರು ಬಿಡಲು ಹಾಗೂ ಸ್ವಾತಂತ್ರ್ಯದ ಅರ್ಥ ಶಿಕ್ಷಣ ಹಕ್ಕು ಅರಿಯಲು ಸಾಧ್ಯವಾಯಿತು.

ಆಧುನಿಕ ಭಾರತದ ಮೊದಲ ಮಹಿಳಾ ಶಿಕ್ಷಕಿ, ಸಂಶೋಧಕಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಮಹಿಳೆಯರ ಆಶಾಕಿರಣ, ಸಾವಿತ್ರಿಬಾಯಿ ಫುಲೆ ಈ ಪ್ರವರ್ಧಮಾನದ ಹಣತೆಯಾಗಿ ಬಂದರು. ಇವರು 1831 ಜನವರಿ 3ರಂದು ಮಹಾರಾಷ್ಟ್ರದ ಸತಾರ್ ಜಿಲ್ಲೆಯ ನೈಗಾಂನ್ ಎಂಬಲ್ಲಿ ತಂದೆ ನೇವಸೆ ಪಾಟೀಲ್, ತಾಯಿ ಲಕ್ಷ್ಮೀ ಬಾಯಿ ದಂಪತಿಗಳ ಮಗಳಾಗಿ ಜನಿಸಿದರು.

ಆಗ ಬಾಲ್ಯ ವಿವಾಹ ಪದ್ಧತಿ ಆಚರಣೆಯಿಲಿದ್ದ ಕಾರಣ ತನ್ನ 8ನೇವಯಸ್ಸಿಗೆ 13 ವರ್ಷದ ಜ್ಯೋತಿ ಬಾಫುಲೆಯನ್ನ ವಿವಾಹವಾಗುತ್ತಾರೆ. ಸಾವಿತ್ರಿ ಬಾಯಿ ಫುಲೆಯವರಿಗೆ ಮನೆಯೇ ಮೊದಲ ಪಾಠ ಶಾಲೆ, ಗಂಡನೇ ಮೊದಲ ಗುರುವು. ಜ್ಯೋತಿ ಬಾಫುಲೆ ಯವರ ವೈಚಾರಿಕ ಚಿಂತನೆ ತತ್ವಗಳಿಗೆ ಸಹಕಾರಿಯಾಗಿ ನಿಂತು, ತಾನು ಸಹ ಅಕ್ಷರಭ್ಯಾಸ ಮಾಡಿ 1847ರಲ್ಲಿ ಶ್ರೀಮತಿ ಮಿಚೆಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದು ತಮ್ಮ 17ನೇ ವಯಸ್ಸಿಗೆ ಮಹಾರಾಷ್ಟ್ರದಲ್ಲಿ ತರಬೇತಿ ಪಡೆದ ಮೊದಲ ಮಹಿಳಾ ಶಿಕ್ಷಕಿಯಾದರು.

ಸಾವಿತ್ರಿ ಬಾಯಿ ಫುಲೆ ಯವರು ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾ ಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲಘಟ್ಟದಲ್ಲಿ ಒಬ್ಬ ಹಿಂದೂ ಹೆಣ್ಣು ಮಗಳು ಶಿಕ್ಷಕಿಯಾಗುವುದು ಧರ್ಮಕ್ಕೂ ಸಮಾಜಕ್ಕೂ ಎಸಗಿದ ದ್ರೋಹವೇ ಸರಿ ಎನ್ನುವಂತಿತ್ತು. ಆಗ ಶಾಲೆಗೆ ಅವರು ಹೋಗುವಾಗ ಕೆಲವು ಕಿಡಿಗೇಡಿಗಳು ಅಪಮಾನಿಸಿ ಕೇಕೆ ಹಾಕಿ ನಗೆ ಬೀರಿ ಕಲ್ಲು ಎಸೆದು ಸಗಣಿ ಎರಚುತ್ತಿದ್ದರು. ಇದ್ಯಾವುದಕ್ಕೂ ಎದರದೆ ಮುನ್ನುಗ್ಗುತ್ತಿದ್ದರು. ಆ ಸಂದರ್ಭದಲ್ಲಿ ಅವರ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಸೀರೆಯನ್ನು ಮಕ್ಕಳು ಬರುವುದರೊಳಗಾಗಿ ಬದಲಿಸಿ ಪಾಠ ಮಾಡಲು ಸಿದ್ಧರಾಗುತ್ತಿದ್ದರು. ಹೀಗೆ 1852 ರ ನಡುವೆ ಸುಮಾರು 18 ಶಾಲೆಗಳನ್ನು ಈ ದಂಪತಿಗಳು ತೆರೆದರು. ಅದರ ಆಡಳಿತ ಉಸ್ತುವಾರಿ ಕಾರ್ಯ ನಿರ್ವಹಿಸಿ ಬ್ರಿಟಿಷ್ ಸರ್ಕಾರದ ಪ್ರಶಂಸೆಗೆ ಪಾತ್ರರಾದರು.

ಸಾವಿತ್ರಿ ಬಾಯಿ ಫುಲೆ ಯವರು ಸಮಾಜದ ಅನಿಷ್ಟ ಪದ್ಧತಿ ಮತ್ತು ಹಕ್ಕುಗಳಿಗಾಗಿ ಹೋರಾಟ ಮಾಡಿದವರು. ಬಾಲ್ಯ ವಿವಾಹ, ಸತಿ ಸಹಗಮನ, ಕೇಶಮುಂಡನೆ ವಿರುದ್ಧ ಎದೆತಟ್ಟಿ ನಿಂತು. ಮಹಿಳೆಯರಿಗಾಗಿ ಅಬಲಾಶ್ರಮಗಳನ್ನು ತೆರೆದು ಅವರಿಗೆ ಬೆಳಕಾದರು. ತಳ ಸಮುದಾಯ ನಿರಾಶ್ರಿತರು ಅಸ್ಪೃಶ್ಯರು ಎಲ್ಲಾ ವರ್ಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟರು. ರಾತ್ರಿಯ ಶಾಲೆಗಳನ್ನೂ ತೆರೆದು ರೈತರು ಕಾರ್ಮಿಕರಿಗೂ ಶಿಕ್ಷಣ ಆರಂಭಿಸಿದರು. ಆಗಿನ ಕಾಲದಲ್ಲೂ ಶಿಷ್ಯವೇತನವನ್ನು ಸಹ ನೀಡಿದರು.

ಇವರ ಸೇವೆಯನ್ನು ಮನಗಂಡು ಅಂದಿನ ಬ್ರಿಟಿಷ್ ಸರ್ಕಾರ ” ಇಂಡಿಯನ್ ಫಸ್ಟ್ ಲೇಡಿ ಟೀಚರ್ ” ಎಂದು ಬಿರುದನ್ನು ನೀಡಿ ಗೌರವಿಸಿದರು. ವಿಧವೆಯರಿಗೆ, ವಿವಾಹ ಬಾಹಿರವಾಗಿ ಗರ್ಭಿಣಿಯಾಗುವ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳು ಮತ್ತು ವಿವಾಹ ಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗೆ ಶಿಶು ಕೇಂದ್ರಗಳನ್ನು ಸ್ಥಾಪಿಸಿದರು. ದಿಕ್ಕಿಲ್ಲದವರ ಬಾಳಿಗೊಂದು ಅರ್ಥ ಕಲ್ಪಿಸಿಕೊಟ್ಟರು.

ದಂಪತಿಗಳ ನಡುವೆ ಮಧುರ ಪ್ರೇಮ ಬಾಂದವ್ಯ, ಪರಸ್ಪರ ಗೌರವ ಪ್ರೀತಿ ಇವುಗಳಿಂದಲೆ ತುಂಬಿತ್ತು. ತನ್ನ ಜೀವನದುದ್ದಕ್ಕೂ ಗಂಡನ ತತ್ವ ಸಿದ್ಧಾಂತಗಳಿಗೆ ಬೆನ್ತಟ್ಟುವ ಕೆಲಸ ಮಾಡಿದರು. ಒಬ್ಬ ಬ್ರಾಹ್ಮಣ ವಿಧವೆಯ ಮಗುವನ್ನು ದತ್ತು ಪಡೆದು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಕಾರಣಕರ್ತರಾದರು.

ಇವರ ಸೇವೆ ಅನನ್ಯ ಅನುಪಮವಾದದ್ದು
ಮಹಾರಾಷ್ಟ್ರದಲ್ಲಿ ಕ್ಷಾಮ ತಲೆದೂರಿದಾಗ ನಿರಂತರ ಎರಡು ವರ್ಷ ಸೇವೆ ಮಾಡಿದರು. ದಲಿತರಿಗೆ ಕುಡಿಯಲು ತಾವು ತೆಗಿಸಿದ ಬಾವಿಯನ್ನು ಬಿಟ್ಟು ಕೊಟ್ಟರು. ಹಾಗೇ 1897 ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆ ಮಾಡುವಾಗ ಆ ಸೊಂಕು ಇವರಿಗೆ ತಗುಲಿ ಆ ಕಾಯಿಲೆಯಿಂದ ಅಕಾಲಿಕ ಮರಣಕ್ಕೆ ಮಾರ್ಚ್ 10 ರಂದು ತನ್ನ 66ನೇ ವಯಸ್ಸಿಗೆ ತುತ್ತಾದರು.

ಇಂಥ ಮಹಾನ್ ಧೀನ ದಯಾಳುವನ್ನು ನಾವು ಕಳೆದು ಕೊಂಡೆವು. ಭಾರತದಂತ ಪುರುಷ ಪ್ರಧಾನ ರಾಷ್ಟ್ರದಲ್ಲಿ ಸಮಾನತೆ ಸ್ವಾತಂತ್ರ್ಯ ಶಿಕ್ಷಣ ಅಭಿವ್ಯಕ್ತಿಯಿಂದ ವಂಚಿತಳಾಗಿದ್ದ ಹೆಣ್ಣಿಗೆ ವಿಚಾರವಂತಳಾಗಿ ಮಾಡಿ ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ. ಇವರ ಹುಟ್ಟಿದ ದಿನವನ್ನು ಜನವರಿ 3ರಂದು ನಾವೆಲ್ಲ ಮಹಿಳಾ ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ.
–ಆದಿತ್ಯಾ ಮೈಸೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x