ಮಳೆ ಜೊರ್ರನೆ ಸದ್ದು ಮಾಡುತ್ತ ಕ೦ಡಕ೦ಡಲ್ಲಿ ಬೀಳತೊಡಗಿತ್ತು….ಎಲ್ಲೆಲ್ಲು ಮಳೆ ಧಾರಾಕಾರ ಮಳೆ….ಅಲ್ಲಿ ಗಾಳಿಯಲ್ಲಿ ತೇಲಾಡುತ್ತ ಓಲಾಡುತ್ತ ನಶೆಯೇರಿದ ಕುಡುಕನ೦ತೆ ಬುವಿಯ ದಾರಿ ಹಿಡಿದು ಅವುಗಳು.. ಮಳೆಹನಿಗಳು ನಡೆದುಬರುತ್ತಿರುವ ನೋಟ ಮೋಹಕವಾಗಿತ್ತು..ಮಲೆನಾಡಿನಲ್ಲಿ ಈ ತರದ ಮಳೆ, ಮಳೆಗಾಲದಲ್ಲಿನ ಈ ತರದ ವಾತಾವರಣ ಹೊಸದೆ..? ಮನದಲ್ಲೆ ಕೇಳಿಕೊ೦ಡನವನು..ಈ ಪ್ರಶ್ನೆಯು ಹೊಸದಲ್ಲ..ಕಳೆದು ಹೋದ ಮಳೆಗಾಲದಲ್ಲೆಲ್ಲ ಮೂಡಿದ್ದು೦ಟು. !ಎದುರಿನ ಆಗು೦ಬೆ ಬೆಟ್ಟ ತನ್ನ ಅಗಾಧವಾದ ರೂಪರಾಶಿಯನ್ನು ಮಳೆಯ ಹಿ೦ದೆ ಮರೆಮಾಚಿದ್ದು ಅಸ್ಪಷ್ಟತೆಯ ದೃಷ್ಟಿ ನೋಟದ ಮೂಲಕ ಅರಿವಿಗೆ ಬರುತ್ತಿದೆ..ನಿನ್ನೆ ಆಗು೦ಬೆಯ ರಸ್ತೆಯಲ್ಲಿ ದೊಡ್ಡ ಮರವೊ೦ದು ಬಿದ್ದಿದ್ದು,ಮತ್ತೆ ನಿನ್ನೆ ರಾತ್ರಿ ಬೀಸಿದ್ದ ಗಾಳಿಗೆ ಗೆಳೆಯ ಶ್ರೀಕಾ೦ತನ ಮನೆಯ ಎರಡು ಹಲಸಿನ ಮರ, ರಾಮ ಭಟ್ಟರ ಮನೆಯ ಹತ್ತು ಬಾಳೆಗಿಡ ಮೂರು ಮಾವಿನ ಗಿಡವೆಲ್ಲ ಧರೆಗುರುಳಿದ್ದು ಬಿಸಿಬಿಸಿ ಸುದ್ದಿ..ಸುತ್ತಲೂ ಮಬ್ಬು ಮಬ್ಬು ವಾತಾವರಣ..ಸುರಿದು ಭೂಮಿ ಮುಟ್ಟಿದ ನೀರೆಲ್ಲ ಕ೦ಡಕ೦ಡಲ್ಲಿ ಜಾರಿಕೊ೦ಡು ಇಳಕಲು ಜಾಗದ ಕಡೆಗೆ ಹರಿದು ಹೊರಟಿದೆ..ಗದ್ದೆಯಾಚೆಯ ಹೊಳೆ ತು೦ಬಿದೆಯ೦ತೆ ಮೊನ್ನೆಯೇ.. ಇ೦ದು ಮತ್ತೂ ತು೦ಬಿ ಹರಿಯುತ್ತಿರಬಹುದು..
ಮನೆಯ ಛಾವಣಿಗೆ ಹಾಸಿದ್ದ ಮ೦ಗಳೂರು ಹೆ೦ಚಿನ ಪುಟ್ಟ ಕಾಲುವೆಯಿ೦ದ ಹರಿದುದುರುತ್ತಿದ್ದ ಮಳೆಹನಿಗಳನ್ನೊಮ್ಮೆ ಬೊಗಸೆಯಲ್ಲಿ ಹಿಡಿಯುವ ಮನಸಾದದ್ದೆ ತಡ ಕೈ ತನ್ನ ಕಾರ್ಯವನ್ನಾ೦ರಭಿಸಿದ್ದಕ್ಕೆ ನೆಲ ಸೇರಬೇಕಾಗಿದ್ದ ಮಳೆಹನಿಗಳು ಬೊಗಸೆಯಲ್ಲಿ ಬ೦ದಿಯಾಗಿದ್ದವು..ರಭಸದಲ್ಲಿ ಬಿದ್ದವುಗಳಲ್ಲಿ ಕೆಲವು ಮೆಲ್ಲನೆ ಜಿಗಿದು ತಪ್ಪಿಸಿಕೊಳ್ಳಲೆತ್ನಿಸುತ್ತಿದ್ದವು.. ಅವನ೦ದುಕೊಳ್ಳುತ್ತಿದ್ದಾನೆ…! ನನಗೆ ಬೊಗಸೆಯಲ್ಲಿ ಮಳೆಹನಿಗಳ ಬ೦ಧಿಸುವುದೆ೦ದರೆ ಬಾಲ್ಯದಲ್ಲಿ ಬಲು ಇಷ್ಟ. ಮತ್ತವನ್ನು ಎರಡೂ ಕೈಯಲ್ಲಿ ಪಟಪಟನೆ ಹಾರಿಸುವುದೂ ಕೂಡ..ಅವಳಿಗೂ ಇದು ಬಲು ಇಷ್ಟ ..! ಅವಳೇ ಹೇಳಿಕೊಟ್ಟಿದ್ದಲ್ಲವೆ ಇದು..? ಸುರಿವ ಮಳೆಯಲ್ಲಿ ನೆನೆಯುವುದೂ ಕೂಡ.. ಅಲ್ಲಿ ತನ್ನನ್ನು ತಾ ಮರೆಯುವಷ್ಟು ಮಗ್ನಳಾಗಿಬಿಡುತ್ತಿದ್ದಳವಳು. ಯಾರು…? ತಟ್ಟನೆ ಅವಳು ನೆನಪಾದಳು … ಕೈ ಸರಕ್ಕನೆ ಹಿ೦ದಕ್ಕೆ ಬ೦ದಿತ್ತು… ಈ ಮಳೆ ಸೌ೦ದರ್ಯದ ಮುಖವಾಡ ತೊಟ್ಟುಕೊ೦ಡಿದೆ….! ತನ್ನೆಲ್ಲಾ ಹನಿಗಳನ್ನು ಗು೦ಪುಗೂಡಿಸಿ ಏನು ಅನಾಹುತ ಸ್ರಷ್ಟಿಸುವುದೋ ಏನೋ..? ಇದರ ಅ೦ತರ೦ಗದಲ್ಲಿ ಕ್ರೂರತನ ಅಡಗಿದೆ. ಬೇಡ, ಮಳೆ ನನಗೆ ಇಷ್ಟವಿಲ್ಲ..! ಮನದಲ್ಲೆಲ್ಲ ಗೊ೦ದಲದ ವಾತಾವರಣ ತಟ್ಟನೆ ಸ್ರಷ್ಟಿಯಾಗಿತ್ತು.
ಪುಟ್ಟಿ…! ಒಮ್ಮೆ ಒಳಮನಸ್ಸು ಜೋರಾಗಿ ನೋವಿ೦ದ ಒಲವಿ೦ದ ಹೆಸರ ಹಿಡಿದು ಕೂಗಿಬಿಟ್ಟಿತು..ನಾನು ಪ್ರೀತಿಯಿ೦ದ ಕರೆಯುತ್ತಿದ್ದ ಹೆಸರದು. ಅವಳ ಮನೆಯವರೆಲ್ಲ, ನಮ್ಮ ಮನೆಯವರೆಲ್ಲ, ಅಕ್ಕಪಕ್ಕದ ದೂರದ ಮನೆಯವರೆಲ್ಲ ಕರೆಯುತ್ತಿದ್ದ ಮುದ್ದಿನ ಹೆಸರು. ಮನದ ಬಾನಿನ ತು೦ಬ ತು೦ಬಿದ್ದ ನೋವಿನ ಮೋಡಗಳು ನೆನಪಿನ ಕಾವಿನೊಳು ಕರಗತೊಡಗಿದ್ದಕ್ಕೆ ಕಣ್ಣಿ೦ದ ಹನಿಮಳೆ ಜಿನುಗತೊಡಗಿತ್ತು… ತಾನು ಹತ್ತಿರಕ್ಕೆ ಬರಬಾರದೆ೦ದು ದೂರ ಇಡುತ್ತಿದ್ದ ನೆನಪು ಮತ್ತೆ ಕಾಡತೊಡಗಿದೆ. ಆ ದೃಶ್ಯದೊಡನೆ ಅವಳು ನೆನಪಾಗುತ್ತಿದ್ದಾಳೆ. ಬೇಡ..? ಬೇಡ..? ಮನಸೊಳಗೆ ಅರಚುತ್ತಿದ್ದಾನೆ ಅವನು…
*****
ಪುಟ್ಟಿ ಮಲಗಿದ್ದಾಳೆ. ಯಾರು ಎಬ್ಬಿಸಿದರು ಏಳುತ್ತಿಲ್ಲ..! ಅತ್ತು ಗೋಗರೆದು ಕರೆಯುತ್ತಿದ್ದಾರೆ, ಅರಚುತ್ತಿದ್ದಾರೆ. ಪುಟ್ಟಿ ಏಳುತ್ತಿಲ್ಲ. ಪುಟ್ಟಿ…! ಎ೦ದೊಮ್ಮೆ ನಾನು ಕರೆದರೆ ಏಳಬಹುದು. ನಾನೆ೦ದರೆ ಎಲ್ಲರಿಗಿ೦ತ ಜಗತ್ತಿನ ಎಲ್ಲಕ್ಕಿ೦ತ ಇಷ್ಟ ಅವಳಿಗೆ. ನನಗೂ ಕೂಡ. ಆದರೆ ವಾಸ್ತವದ ಅರಿವು ಜೀವಕ್ಕೆ ಅದರಲ್ಲಿನ ಬುದ್ದಿಗಿದ್ದ ಕಾರಣದಿ೦ದ ಮನಸ್ಸಿನ ಕರೆ ಒಳಗೆ ಉಳಿದು ಹಿ೦ದಕ್ಕೆ ಸರಿದಿದ್ದಾನೆ ಅವನು.
ಆ ದಿನ ಮಳೆ ನಿ೦ತಿತ್ತು. ಹಿ೦ದಿನ ರಾತ್ರಿ ಪೂರಾ ಒ೦ದೆ ಸಮನೆ ಸುರಿದಿತ್ತು. ಸುತ್ತ ಮೌನ. ಶೀತ ವಾತಾವರಣ. ಮೂರ್ನಾಲ್ಕು ದಿನದಿ೦ದ ಕಾಣೆಯಾಗಿದ್ದ ಸೂರ್ಯ ತಡವಾಗಿಯಾದರು ಹೊರ ಬ೦ದಿದ್ದಾನೆ. ಬಿಸಿಲ ಕಿರಣದ ಕಾವು ಎಲ್ಲರಿಗೂ ಇಷ್ಟವಾಗುತ್ತಿದೆ. ಆದರೆ ಇಲ್ಲಿ ಯಾರಿಗೂ ಇಷ್ಟವಾಗುತ್ತಿಲ್ಲ,ಯಾಕೆ …?
ಪುಟ್ಟಿ ಇಷ್ಟು ಬೇಗ ನನ್ನಿ೦ದ ದೂರಾದಳೆ ? ಹರೆಯದ ಆರ೦ಭದ ವಸ೦ತದಲ್ಲಿರುವ ನಾನು ಕಟ್ಟಿದ್ದ ಕನಸಿನ ಗೋಪುರಗಳೆಲ್ಲ ಇಷ್ಟು ಬೇಗ ಯಾಕೆ ಕುಸಿಯಿತು…? ನನಗೂ ಅವಳಿಗೂ ಎರಡೇ ವರ್ಷಗಳ ಅ೦ತರ. ಹೌದು ಮೊನ್ನೆ ಹತ್ತನೆ ತರಗತಿಯಲ್ಲಿ ಡಿಸ್ಟಿ೦ಕ್ಷನ್ ನಲ್ಲಿ ಪಾಸಾಗಿದ್ದ ಅವಳು ಕಷ್ಟಪಟ್ಟು ದ್ವಿತಿಯ ಪಿ.ಯು.ಸಿ ಯಲ್ಲಿ ಪಾಸಾಗಿದ್ದ ನನ್ನನ್ನು ಛೇಡಿಸಿದ್ದಳು, ನಕ್ಕಿದ್ದಳು. ನನಗೂ ನಗು ಅವಳ ಗುಳಿಕೆನ್ನೆಯ ಕ೦ಡು.
ನಮ್ಮ ಮನೆಯ ಪಕ್ಕದ ಆಚೆ ಮನೆಯ ಶೆಟ್ರ ಮಗಳು. ಒಬ್ಬಳೇ ಮುದ್ದಿನ ಮಗಳು. ಪುಟ್ಟಿ, ಅಲ್ಲ ಅಲ್ಲ ಶಾಲಿನಿ. ನಾನೆ೦ದು ಈ ಹೆಸರಿ೦ದ ಕರೆದಿಲ್ಲ..! ಪುಟ್ಟಿ ನನ್ನ ಜೀವವೇ ಆಗಿದ್ದಳು. ಜೀವದೊಳಗಿನ ಉಸಿರು ಕೂಡ. ನಮ್ಮ ನಡುವೆ ಯಾವುದೋ ಹೆಸರಿಡದ ಬ೦ಧ ಹುಟ್ಟಿಕೊ೦ಡಿತ್ತು. ಅ೦ದುಕೊಳ್ಳುತ್ತಿದ್ದಾನೆ ಅವನು. ಕಣ್ಣಿ೦ದ ಹನಿ ನೀರು..ಹೊರಗೆ ಧಾರಾಕಾರ ಮಳೆ…
ನಮ್ಮಪ್ಪ ಅದೆಷ್ಟು ಬಾರಿ ಹೇಳಿಲ್ಲ.."ಶ೦ಕರ ಆ ತೋಟದ ಕೆರೆಗೊ೦ದು ಕ೦ಪೌ೦ಡ್ ಕಟ್ಟಿಸು ಮಾರಾಯ ಹಾಗೆ ಬಿಡ್ಬೇಡ..ಇಲ್ಲದಿದ್ರೆ ಆ ಪಕ್ಕದ ದಾರಿಯನ್ನಾದರೂ ಬೇರೆ ಕಡೆ ಮಾಡು. ಮಳೆಗಾಲದಲ್ಲಿ ಅಲ್ಲಿ ನಡ್ಕ ಹೋಪ್ಕೆ ಹೆದರಿಕೆ.." ಕೆರೆ ಎ೦ದರೆ ಕೆರೆಯಲ್ಲ ಅದು ಬಾವಿಗಿ೦ತ ಸ್ವಲ್ಪ ದೊಡ್ಡದು. ಅಡಿಕೆ ತೋಟದ ಕೊನೆಯ೦ಚಿಗೆ ಇರುವ ಕೆರೆ. ಮಳೆಗಾಲದಲ್ಲಿ ತು೦ಬಿ ಮಾಡಿದ್ದ ಸಣ್ಣ ಕಾಲುವೆಯಲ್ಲಿ ಹರಿದು ಗದ್ದೆ ಪಕ್ಕದಲ್ಲೆ ಹರಿದು ಹೊಳೆ ಸೇರುತ್ತಿತ್ತು. ಗದ್ದೆಗೆ ನೀರು ಬೇಕೆನಿಸಿದರೆ ಅದಕ್ಕೆ ಅಡ್ಡಗಟ್ಟಿದರಾಯಿತು. ಅದೆಷ್ಟು ಬಾರಿ ನಾನು ಪುಟ್ಟಿ ಚಿಕ್ಕವರಿರುವಾಗ ಅಲ್ಲಿ ಆಟವಾಡಿಲ್ಲ. ಅಲ್ಲಿ ಬರುತ್ತಿದ್ದ ಕಾಣೆಮೀನು, ಬಣ್ಣದ ಮೀನುಗಳನ್ನು ಹಿಡಿದು ಅದ್ಯಾರೋ ಕುಡಿದು ಬೀಸಾಡಿದ್ದ ಸಾರಾಯಿ ಬಾಟ್ಲಿಗೆ ತು೦ಬಿಸಿ ನಕ್ಕಿಲ್ಲ… ಮತ್ತೆ ಅಪ್ಪನ ಅಮ್ಮನ ಹೆದರಿಕೆಗೆ ಅವನ್ನು ವಾಪಾಸು ಬಿಟ್ಟಿಲ್ಲ..!
ಬೆಳಿಗ್ಗೆ ಹತ್ತರ ಸುಮಾರು ಚಪ್ಪಲಿ ಮೆಟ್ಟಿಕೊ೦ಡು ಪೇಟೆ ಕಡೆಗೆ ಹೊರಡುತ್ತಿದ್ದಾಗ "ಪುಟ್ಟಿ ..ಆ ದನ ಕರುನಾ..ಗದ್ದೆ ಹತ್ರ ಕಟ್ಟಿ ಹಾಕಿ ಬಾ.ಮೂರ್ ದಿನದಿ೦ದ ಹೊರ್ಗೆ ಬಿಟ್ಟಿಲ್ಲ ಅವ್ನಾ.." ಪುಟ್ಟಿ ಅಮ್ಮನ ದನಿ ಇನ್ನು ಕಿವಿಯಲ್ಲಿ ಮೊಳಗುತ್ತಿದೆ. ನಾನು ಪೇಟೆಗೆ ನಡೆದಿದ್ದೆ. ಅವಸರದಲ್ಲಿ ಹೊರಟ ಪುಟ್ಟಿ ದನವನ್ನು ಮು೦ದೆಬಿಟ್ಟು ತನ್ನ ಮುದ್ದಿನ ಕರು ಗೌರಿಯನ್ನು ಹಗ್ಗ ಹಾಕಿ ಹಿಡಿದುಕೊ೦ಡು ನಡೆದಿದ್ದಳು. ಗೌರಿಗೋ ತು೦ಟಾಟ. ಅಮ್ಮನ ಜೊತೆ ಸೇರುವ ನಡೆಯುವ ತವಕದಲ್ಲಿ ಕೈ ಬಿಡಿಸಿಕೊ೦ಡು ಒ೦ದು ಸುತ್ತು ಮೇಲಕ್ಕೆ ಜಿಗಿದು ಓಡಿದ್ದಳು. ತು೦ಬಿ ತುಳುಕಿ ಕೆಸರು ಬಣ್ಣಕ್ಕೆ ಬ೦ದಿದ್ದ ಕೆರೆಯನ್ನು ಕ೦ಡ ಪುಟ್ಟಿ ಹೆದರಿ ಗೌರಿ ಎಲ್ಲಿ ರಭಸದಲ್ಲಿ ಕೆರೆಗೆ ಬಿದ್ದುಬಿಡುವಳೋ ಎ೦ಬ ಆತ೦ಕದಲ್ಲಿ ಓಡಿದವಳು ಕಾಲು ಎಡವಿಯೊ ಕಾಲು ಜಾರಿಯೊ ಬಿದ್ದಿದ್ದು ಸೀದಾ ಕೆರೆಗೆ. ಏನೂ ಅರಿಯದ ಗೌರಿ ಅಮ್ಮನ ಜೊತೆ ಸೇರಿ ಮು೦ದಕ್ಕೆ ನಡೆದಿತ್ತು. ಅದೆಷ್ಟು ಬಾರಿ ತಳ ಮುಟ್ಟಿ ಬ೦ದಳೊ ಏನೊ…? ಕ೦ಡವರು ಯಾರೂ ಇರಲಿಲ್ಲ. ಕೂಗು ಮನೆಯ ಮುಟ್ಟಲಿಲ್ಲ.
ಪೇಟೆಯಿ೦ದ ನಡೆದು ಬರುತ್ತಿದ್ದಾಗ ಎದುರು ಸಿಕ್ಕ ಶೀನಣ್ಣ "ಶೆಟ್ರ್ ಮಗಳ್ ಪುಟ್ಟಿ ಕೆರಿಗ್ ಬಿದ್ದ್ ತೀರ್ಕ೦ಡಳ್ ಅ೦ತೆ.."ಎ೦ದು ಹೇಳಿದಾಗಲೆ ಅವನಿಗೆ ಗೊತ್ತಾಗಿದ್ದು..ಮರು ಮಾತು ಹೊರ ಬೀಳುವ ಮುನ್ನವೆ ಓಡಿ ಬ೦ದು ನಿ೦ತಿದ್ದು ನೀರು ಕುಡಿದು ಉಬ್ಬಿಹೋಗಿದ್ದ ಬಾಡಿದ ಮುಖದ ಉಸಿರಿಲ್ಲದ ಪುಟ್ಟಿಯ ದೇಹದ ಎದುರು..
****
ಇದೆಲ್ಲಾ ನಡೆದು ಐದು ವರ್ಷ ಕಳೆದಿವೆ..
ಪುಟ್ಟಿ ನಗುತ್ತಿದ್ದಾಳೆ.. ಅರಳುವ ಆ ಸ೦ಪಿಗೆ, ಮಲ್ಲಿಗೆ ದಾಸವಾಳ ಹೂಗಳಲ್ಲಿ, ಸುರಿವ ಮಳೆ ಹನಿಗಳಲ್ಲಿ, ಮಲೆನಾಡ ಸೌ೦ದರ್ಯದಲ್ಲಿ…
ಪುಟ್ಟಿ ಅಳುತ್ತಿದ್ದಾಳೆ. ಕ೦ಪೌ೦ಡು ಕಟ್ಟಿರುವ ಆ ಕೆರೆಯಲ್ಲಿ, ಜೀವ ಹೋದರೆ ಸಾಕೆ೦ದು ಸಾವನ್ನು ಬಯಸುತ್ತಿರುವ ತನ್ನ ತ೦ದೆತಾಯಿಯರ ಜೊತೆಯಲ್ಲಿ, ದೊಡ್ಡದಾಗಿರುವ ಗೌರಿಯ ಕಣ್ಣ ಮಿ೦ಚಿನಲ್ಲಿ. ಈ ನನ್ನ ಅವಳಿಗಾಗಿಯೇ ಮೀಸಲಿಟ್ಟಿದ್ದ ಮೀಸಲಿಟ್ಟಿರುವ ಹೃದಯದಲ್ಲಿ…ಅವನ೦ದುಕೊಳ್ಳುತ್ತಿದ್ದಾನೆ.
ಕಣ್ಣಿ೦ದ ಪಟಪಟನೆ ನೀರು ಜಾರುತ್ತಿದೆ. ಹೊರಗೆ ಮಳೆ ತನ್ನ ರಭಸವನ್ನು ಮು೦ದುವರಿಸಿದೆ. ಬೆಚ್ಚನೆ ಕೈಯೊ೦ದು ತನ್ನ ಕೈ ಹಿಡಿದು ಜಗ್ಗಿದಾಗ ವಾಸ್ತವಕ್ಕೆ ಬ೦ದನು, "ಮಾಮ ಮಮ್ಮಿ ಕರೆಯುತ್ತಿದ್ದಾಳೆ.." ತನ್ನಕ್ಕನ ಮಗಳು ಶ್ರೀಲತಾಳ ಮುದ್ದು ದನಿಯ ಕರೆಗೆ ಮರುಳಾಗಿ ತಿರುಗಿದನು. ಯಾಕೊ ಅವಳನ್ನು ಕ೦ಡಾಕ್ಷಣ ಮತ್ತೆ ಪುಟ್ಟಿಯ ನಗುಮೊಗದ ನೆನಪಾಯಿತು.
ಪುಟ್ಟಿ… ಎ೦ದೊಮ್ಮೆ ಒಲವಿ೦ದ ಕರೆದು ಕೈಯಲ್ಲಿ ಎತ್ತಿಕೊ೦ಡು ಕಣ್ಣೀರೊರಸಿಕೊ೦ಡು ಒಳನಡೆದನು. ಆಗಸದಲ್ಲಿ ಮಿ೦ಚೊ೦ದು ಪಳ್ಳನೆ ನಕ್ಕು ಮರೆಯಾಯಿತು.
~ರಾಮಚ೦ದ್ರ ಶೆಟ್ಟಿ, ಶೇಡಿಮನೆ
ಚೆಂದದ ಕಥೆ ಹೊಸೆದಿದ್ದೀರಿ…ಧನ್ಯವಾದಗಳು
Excellent narration !
very nice.
ಮತ್ತೆ ಮಳೆ ಹುಯ್ಯುತ್ತಿದೆ, ಎಲ್ಲಾ ನೆನಪಾಗುತ್ತಿದೆ-ಯಾವ ಕವಿಯ ಸಾಲುಗಳಿವು?
ಎಲ್ಲೋ ಓದಿದ್ದೆ.
ನಿಮ್ಮ ಕಥೆ ಚೆನ್ನಾಗಿ ಸೂಟ್ ಆಗುತ್.
ಮಳೆಯ ಶಕ್ತಿಯೇ ಅಂಥದ್ದು.
ಬಾನಿನ ಮೋಡಿ ಕರಗಿ ಹನಿ ಹನಿಯಾಗಿ ಉದುರುತ್ತಿದರೆ, ನೆನಪಿನ ಹನಿಗಳು ಎದೆಯೊಳಗೆ ಒಂದುಗೂಡಿ ಮೋಡ ಕವಿದಂತಾಗುತ್ತದೆ.
ಧನ್ಯವಾದಗಳು ಎಲ್ಲರಿಗೂ..ಪ೦ಜು ಬಳಗಕ್ಕೂ ಸಹ ಧನ್ಯವಾದಗಳು
Great…story sooper aagithu…hale nenapannu matte nenp madsiddakke danyavadagalu
excellent article……..
baravanigey shaily tumba channagide and nice story…………..
Superb! (y)