"ಮರೆವು" ಎಂಬುದು ಜ್ಞಾನಾಸಕ್ತರಿಗೆ ಅದರಲ್ಲೂ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಶತ್ರುವಂತೆ ಕಾಡುತ್ತದೆ.ಪ್ರತಿಯೊಬ್ಬರಿಗೂ ಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ ಈ "ಮರೆವು" ಉಂಟಾಗಿ ಕೆಲವೊಮ್ಮೆ ಅವಮಾನ, ಮತ್ತೆ ಕೆಲವೂಮ್ಮೆ ಅಪಘಾತ ಇನ್ನೂ ಕೆಲವು ಸಾರಿ ಆನಂದವನ್ನೇ ಉಂಟು ಮಾಡುತ್ತದೆ.ಅದಕ್ಕೆ ಮನೋವಿಜ್ಞಾನಿಗಳು "ಮರೆವು ಮನುಷ್ಯನಿಗೆ ವರವೂ ಹೌದು ಶಾಪವೂ ಹೌದು" ಎಂದಿದ್ದಾರೆ.
ನಿಜ ನಮ್ಮ ಮೆದುಳಿನಲ್ಲಿ ನಮ್ಮ ಪಂಚೇ೦ದ್ರಿಯಗಳಿಂದ ಪಡೆದ ಅನುಭವಗಳೆಲ್ಲವನ್ನು ದಾಖಲಿಸುವ ಸಾಮರ್ಥ್ಯ ಇರುತ್ತದೆ.ಆದರೆ ಆ ಧಾರಣ ಸಾಮರ್ಥ್ಯವು ಎಲ್ಲರಲ್ಲೂ ಒಂದೇ ಸಮನಾಗಿ ಇರುವುದಿಲ್ಲ.ಸರಾಸರಿಯಾಗಿರುವ ಸಂಗ್ರಹಣಾ ಸಾಮರ್ಥ್ಯವು ವೃದ್ದಿಯಾಗಲು ಅಥವಾ ಕ್ಷೀಣಿಸಲು ಆಯಾ ವ್ಯಕ್ತಿಯ ಮನೋಭಾವವು ಕಾರಣವಾಗುತ್ತದೆ.ಅಂದರೆ ಆಸಕ್ತಿ, ಅವಧಾನಗಳಿಂದ ವೀಕ್ಷಿಸಿದ ಅಥವಾ ಗ್ರಹಿಸಿದ ಅಂಶಗಳು ನಮ್ಮ ಸ್ಮೃತಿ ಪಟಲದಲ್ಲಿ ಹೆಚ್ಚು ಕಾಲ ಉಳಿಯುತ್ತದೆ.ನಿರಾಸಕ್ತಿಯಿಂದ ನಿರ್ಲಕ್ಷ್ಯದಿಂದ ವೀಕ್ಷಿಸುವ ಅಥವಾ ಗ್ರಹಿಸುವ ಅಂಶಗಳು ಅಸ್ಪಷ್ಟವಾಗಿ ದಾಖಲಾಗಿ ಬಹುಬೇಗ ಕಳೆದು ಹೋಗುತ್ತವೆ.
ನಮ್ಮ ಬದುಕಿನ ಹಂತಗಳಾದ ಬಾಲ್ಯ, ಯೌವ್ವನ, ವೃದ್ದಾಪ್ಯಗಳಲ್ಲಿ ಮರೆವಿನ ಪರಿಮಾಣ ಮತ್ತು ಪರಿಣಾಮ ಬೇರೆ ಬೇರೆಯಾಗಿರುತ್ತದೆ.
"ಮರೆವು" ಎಂಬುದಕ್ಕೆ ಮನೋವಿಜ್ಞಾನಿಗಳು ನಿರ್ದಿಷ್ಠವಾದ ವ್ಯಾಖ್ಯೆಗಳನ್ನು ನೀಡಿದ್ದಾರೆ.ಡ್ರೂವರ್ ಎಂಬುವವರು ಹೇಳುವಂತೆ "ಯಾವುದೇ ಸಮಯದಲ್ಲಿ ಒಂದು ಅನುಭವವನ್ನು ಸ್ಮರಿಸಿಕೊಳ್ಳಲು ಪ್ರಯತ್ನಿಸಿದಾಗ ಅಥವಾ ಹಿಂದೆ ಕಲಿತ ಕಾರ್ಯವನ್ನು ಮಾಡಲು ಯತ್ನಿಸಿದಾಗ ವಿಫಲವಾಗುವುದಕ್ಕೆ ಮರೆವು ಅಥವಾ ವಿಸ್ಮೃತಿ ಎನ್ನುತ್ತಾರೆ."
ಮನ್ ರವರ ಪ್ರಕಾರ, "ಹಿಂದೆ ಕಲಿತದ್ದನ್ನು ಸ್ಮರಿಸುವ ಅಥವಾ ಗುರುತಿಸುವ ಸಾಮರ್ಥ್ಯವು ತಾತ್ಕಾಲಿಕವಾಗಿ ಇಲ್ಲವಾಗುವುದೇ ಮರೆವು. ಸಾಮಾನ್ಯ ಮಾತಿನಲ್ಲಿ ಹೇಳುವುದಾದರೆ, ಮಾನವರೆಲ್ಲರೂ ಮುಖ್ಯವಲ್ಲದ ವಿಷಯಗಳನ್ನು ಮರೆತುಬಿಡುತ್ತೇವೆ.ಅತಿ ಮುಖ್ಯವಾದ ಸಂಗತಿಗಳನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುತ್ತೇವೆ.ಆದರೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡುವ ಕಲಿಕಾರ್ಥಿಗಳಿಗೆ ಯಾವುದು ಮುಖ್ಯ ಅಥವಾ ಅಲ್ಲ ಎಂಬುದನ್ನು ಊಹಿಸುವುದು ಕಷ್ಟಕರವಾದುದರಿಂದ ತರಗತಿಯಲ್ಲಿ ಬೋಧಿಸುವ ಎಲ್ಲಾ ಪಠ್ಯಾಂಶಗಳನ್ನು ನೆನಪಿನ ಬುತ್ತಿಯಾಗಿ ಕಾಯ್ದಿರಿಸಿಕೊಂಡು ಪರೀಕ್ಷಾ ಸಂದರ್ಭದಲ್ಲಿ ಉತ್ತರಗಳಾಗಿ ಹೊರ ಹಾಕಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆ ಹೆಚ್ಚಾಗಿದೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಸರಿಹೊಂದುವ ನಾಗರೀಕರಾಗಲು ಜ್ಞಾನ ಸಂಗ್ರಹಣೆ ಮೂಲ ಮಾನದಂಡ ಆಗಿಬಿಟ್ಟಿರುವುದರಿಂದ ಯಾವುದನ್ನು ನಿರ್ಲಕ್ಷಿಸದೆ ಕಲಿತ ಎಲ್ಲಾ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕು.ಕೇವಲ ಆಯಾ ತರಗತಿಗಳ ಉತ್ತೀರ್ಣತೆಗಾಗಿ ಮಾತ್ರ ಈ ಸಂಗ್ರಹಿತ ಜ್ಞಾನದ ಅಗತ್ಯವಿದೆ ಎಂಬುದು ತಪ್ಪು ಗ್ರಹಿಕೆ.ಏಕೆಂದರೆ, "ಕಲಿವಿನ ಫಲ" ಬದುಕಿನ ಬೇರೆ ಬೇರೆ ಅಗತ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾಗುತ್ತದೆ.ನಮ್ಮ ಬದುಕಿಗೊಂದು ನೆಲೆ ಮತ್ತು ಬೆಲೆ ಒದಗಿಸುವ ಉದ್ಯೋಗ ಒದಗಿಸಿ ಕೊಡಲು ಈ ಜ್ಞಾನದ ಅವಶ್ಯಕತೆ ತುಂಬಾ ಇದೆ.ಓದಿ ವಿದ್ಯಾಭ್ಯಾಸ ಪೂರೈಸಿದವರೆಲ್ಲರೂ ಸರಕಾರಿ ನೌಕರಿಯನ್ನೆ ಪಡೆಯಲು ಆಗುವುದಿಲ್ಲ.ನಿಜ ಆದರೆ ಖಾಸಗಿ ಕಂಪನಿಗಳು ಉದ್ದಿಮೆಗಳು ವ್ಯಾಪಾರ ವಹಿವಾಟುಗಳಲ್ಲಿ ಸ್ವಯಂ ಉದ್ಯೋಗ ಮತ್ತು ಆಧುನಿಕ ಬೇಸಾಯ ನಿರ್ವಹಣೆಯಲ್ಲಿ ನಮ್ಮ ಸಂಗ್ರಹಿತ ಜ್ಞಾನದ ಅವಶ್ಯಕತೆ ಬಹಳವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಪ್ರೀತಿಯನ್ನು ಬೆಳಸಿಕೊಳ್ಳಲು ವ್ಯವಹಾರ ಕೌಶಲ್ಯ ಗಳಿಸಿಕೊಳ್ಳಲು ನಮ್ಮ ಬದುಕು ಸಾಧನೆ ಸಾರ್ಥಕಗಳ ನೆಲೆಗಟ್ಟಿನಲ್ಲಿ ಕೊಂಡೊಯ್ಯಲು ವಿದ್ಯಾರ್ಜನೆ ಮೂಲಕ ಗಳಿಸುವ ಜ್ಞಾನ ಸಂಪತ್ತಿನಿಂದ ಮಾತ್ರ ಸಾಧ್ಯವಾಗುತ್ತದೆ.
ಈ ಜ್ಞಾನ ಸಂಪಾದನೆಯ ಮಾರ್ಗ ಸುಲಭವಾಗಬೇಕಾದರೆ, ವಿದ್ಯಾರ್ಥಿಗಳು ಈ ಮರೆವನ್ನು ದೂರ ಮಾಡಿಕೊಳ್ಳಬೇಕು.ಆದರೆ ಅರಿವಿನ ಆಪ್ತ ಮಿತ್ರ (ಶತ್ರುವೂ) ನಾಗಿರುವ ಮರೆವನ್ನು ಮರೆಯುವುದು ಅಷ್ಟು ಸುಲಭವಲ್ಲ ಮತ್ತು ಕಠಿಣವೂ ಅಲ್ಲ.ವಿದ್ಯಾರ್ಜನೆ ಮಾಡುವ ಎಲ್ಲ ವಿದ್ಯಾರ್ಥಿಗಳೂ ಕೆಲವು ಅಭ್ಯಾಸಗಳನ್ನು, ಉಪಾಯಗಳನ್ನು ರೂಢಿಸಿಕೊಂಡರೆ ಮರೆವನ್ನು ಮರೆತು ಅರಿವಿನ ಪರಿಧಿಯನ್ನು ಹಿಗ್ಗಿಸಿಕೊಳ್ಳಬಹುದು.
|| ಮರೆವನ್ನು ಮರೆಯಲು ಕೆಲವು ತಂತ್ರಗಳು ||
ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ಮುಂದಿನ ಕೆಲವು ತಂತ್ರಗಳ ಮೂಲಕ ಮರೆವನ್ನು ಹೋಗಲಾಡಿಸಿ ತಮ್ಮ ಸ್ಮೃತಿ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಬಹುದು.
* ನಾವು ಏನನ್ನು ಕಲಿಯುತ್ತೇವೆಯೇ ಆ ವಿಷಯದ ಕಡೆ ನಮ್ಮ ಅವಧಾನವನ್ನು ಕೇ೦ದ್ರೀಕರಿಸಿಕೊಂಡು ಮಾನಸಿಕವಾಗಿಯೂ ಜಾಗೃತರಾಗಬೇಕು.
* ನಾವು ಕಲಿಯುವ ಅಂಶಗಳನ್ನು ಪುನಃ ಪುನಃ ಕಲಿಯುವುದರಿಂದ ಜ್ಞಾಪಕ ಶಕ್ತಿ ಉತ್ತಮವಾಗುತ್ತದೆ.ಮತ್ತೆ ಮತ್ತೆ ಪುನರಾವರ್ತಿಸುವುದರಿಂದ ಜ್ಞಾಪಕದಲ್ಲಿ ದೀರ್ಘ ಕಾಲ ಉಳಿಯುತ್ತದೆ.
* ಕಲಿಯುವ ವಿಷಯ ವಸ್ತುವಿನ ಅರ್ಥವನ್ನು ಗ್ರಹಿಸಿಕೊಳ್ಳುವಾಗ ಅದರ ಮಾನಸಿಕ ಚಿತ್ರವನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ.
* ನಮ್ಮ ಅಭ್ಯಾಸ ಉತ್ತಮ ಕಲಿಕಾ ವಾತಾವರಣದಲ್ಲಿ ಇರಬೇಕಾದ್ದು ಅತ್ಯವಶ್ಯಕ ಅಂದರೆ ಹೊರಜಗತ್ತಿನ ಗದ್ದಲ, ದೂರದರ್ಶನದ ಕಾರ್ಯಕ್ರಮ ಧ್ವನಿವರ್ಧಕಗಳ ಕಿರುಚಾಟಗಳಿಂದ ಮುಕ್ತವಾಗಿರುವ ವಾತಾವರಣವಿದ್ದರೆ ನಮ್ಮ ಅಭ್ಯಾಸಕ್ಕೆ ತುಂಬಾ ಅನುಕೂಲವಾಗುತ್ತದೆ.
* ಕಲಿಯುವ ವಿಷಯಗಳಲ್ಲಿ ಸ್ಮೃತಿ ಗುರುತುಗಳನ್ನು ಪುಷ್ಠೀಕರಿಸಿಕೊಳ್ಳಲು ನಮ್ಮ ಜ್ಞಾನೇ೦ದ್ರಿಯಗಳ ಬಳಕೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ.
* ಪರೀಕ್ಷೆಗಳು ಸಮೀಪವಾಗುತ್ತಿದ್ದಂತೆ ಅನಗತ್ಯ ಒತ್ತಡ ತಂದುಕೊಂಡು ಅಭ್ಯಾಸ ಮಾಡುವುದು ಪ್ರಯೋಜನ ನೀಡುವುದಿಲ್ಲ.ಬದಲಾಗಿ ಆಯಾ ಶೈಕ್ಷಣಿಕ ವರ್ಷದ ಆರಂಭದಿಂದಲೂ ನಿಯಮಿತವಾಗಿ ಅಭ್ಯಾಸ ಮಾಡುವುದು ಹೆಚ್ಚು ಉಪಯೋಗ ನೀಡುತ್ತದೆ.ಅಲ್ಲದೇ ಅಭ್ಯಾಸ ಸಂದರ್ಭದಲ್ಲಿ ಕ್ಲಿಷ್ಟವೆನಿಸುವ ಸಾಮರ್ಥ್ಯಗಳನ್ನು ಪುನರಾವರ್ತನೆ ಮಾಡಿ ಅರ್ಥೈಸಿಕೊಳ್ಳಲು ಅವಕಾಶ ಸಿಕ್ಕುತ್ತದೆ.
* ಸ್ಮರಣೆಯ ಸೂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ನೆನಪಿನ ಶಕ್ತಿ ವೃದ್ಧಿಸಿಕೊಳ್ಳಲು ಸಾಧ್ಯವಿದೆ. ಈ ರೀತಿಯ ಸೂತ್ರಗಳು ಸಿದ್ದ ಸೂತ್ರಗಳೇ ಆಗಬೇಕು ಎಂದೇನಿಲ್ಲ. ಆಯಾ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ತಾವೇ ಒಂದೊಂದು ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳಬಹುದು.
ಉದಾ 1: ಬಹುಜನಪ್ರಿಯವಾದ VIBGYOR ಎಂಬ ಪದ ಪುಂಜದಿಂದ ಕಾಮನ ಬಿಲ್ಲಿನ ಏಳು ಬಣ್ಣಗಳ ಪರಿಚಯವನ್ನು ಅತೀ ಸರಳವಾಗಿ ಅರಿತುಕೊಳ್ಳಬಹುದು.V-ನೇರಳೆ,I-ಬೂದು,B-ನೀಲಿ,G-ಹಸಿರು, Y-ಹಳದಿ, O-ಕಿತ್ತಳೆ ಮತ್ತು R-ಕೆಂಪು
ಉದಾ 2: ಅಭಯ ಪದದಿಂದ ಸನ್ನೆಯ ವಿಧಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. [ಅ=ಅನಿಸಿಕೆ, ಭ=ಬಲ, ಯ+ಯತ್ನ]
ಉದಾ 3: ಯಮಾತರಾಜ ಬಾನಸಲಗಂ ಎಂಬ ಅಕ್ಷರ ಸಮುಚ್ಛಯದಿಂದ ಕನ್ನಡ ವ್ಯಾಕರಣದಲ್ಲಿ ಗಣ ಪ್ರಸ್ತಾರ ಹಾಕಿ ವಿಂಗಡಿಸಲು ಸುಲಭವಾಗುತ್ತದೆ.
* ಕಲಿಯುವ ವಿಷಯ ವಸ್ತುವನ್ನು ಅನುಕೂಲಕರ ರೀತಿಯಲ್ಲಿ ಗುಂಪುಗಳನ್ನಾಗಿ ಸಂಘಟಿಸಿಕೊಂಡರೆ ಸ್ಮೃತಿ ಉತ್ತಮಗೊಳ್ಳುತ್ತದೆ.
ಉದಾಹರಣೆಗೆ:ದೂರವಾಣಿ ಸಂಖ್ಯೆಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು 944 933 8810 ಈ ರೀತಿಯಲ್ಲಿ ಗುಂಪು ಮಾಡಿಕೊಳ್ಳಬಹುದು.
* ಮಗ್ಗಿಗಳನ್ನು ಸುಲಭವಾಗಿ ಕಲಿಯಲು ರಾಗಬದ್ಧವಾಗಿ ಅಭ್ಯಾಸ ಮಾಡುವುದು.(ಇಷ್ಟವಾದ ಹಾಡಿನ ಧಾಟಿ ಹೆಚ್ಚು ಪ್ರಯೋಜನ ನೀಡುತ್ತದೆ)
* ಕಲಿಕಾ ಅಭ್ಯಾಸ ಚಟುವಟಿಕೆಯು ನಿರಂತರವಾದರೆ, ಆಸಕ್ತಿ ಕಡಿಮೆಯಾಗುತ್ತದೆ.ಆದ್ದರಿಂದ ನಡುವೆ ಆಗಾಗ ವಿಶ್ರಾಂತಿ ಪಡೆಯುವುದು ಅತ್ಯಂತ ಅಗತ್ಯ. ಈ ರೀತಿಯ ವಿಶ್ರಾಂತಿಗಾಗಿ ತಮಗೆ ಹಿತವೆನ್ನಿಸುವ ಕ್ರಮಗಳನ್ನು ಅನುಸರಿಸಬಹುದು.
* ಮತ್ತೊಂದು ಪ್ರಮುಖವಾದ ಸ್ಮರಣಶಕ್ತಿ ಸುಧಾರಿಸುವ ವಿಧಾನವೆಂದರೆ, PQRST ವಿಧಾನ
P. Preview (ಪೂರ್ವಾವಲೋಕನ) :ಅಭ್ಯಾಸ ಮಾಡಿದ ಇಡೀ ಘಟಕವನ್ನು ಸಾರಾಂಶ ಗ್ರಹಿಸುವ ಸಲುವಾಗಿ ಅಲ್ಲಲ್ಲಿ ಕೆಲವು ಮುಖ್ಯಾಂಶಗಳನ್ನು ನೆನಪಿಸಿಕೊಳ್ಳುವುದು.
Q-Question (ಪ್ರಶ್ನಿಸುವಿಕೆ): ವಿಷಯವನ್ನು ಗ್ರಹಿಸುವ ನಂತರ ಉತ್ತರ ಹುಡುಕಬೇಕಾದಂತಹ ಪ್ರಶ್ನೆಗಳನ್ನು ರಚಿಸುವುದು.
R-Read (ಓದು): ಊಹಿಸುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ವಿಷಯವನ್ನು ನಿಧಾನವಾಗಿ ಓದುವುದು.
S-Self recitation(ಮನನ ಮಾಡು): ಮುಖ್ಯವಾದ ಅಂಶಗಳನ್ನು ಪುನಃ ಸ್ಮರಿಸಲು ಪ್ರಯತ್ನಿಸಿ ಆ ಮಾಹಿತಿಗಳನ್ನು ಮನನ ಮಾಡಿಕೊಳ್ಳುವುದು.
T-Test (ಪರೀಕ್ಷೆ): ಇಡೀ ಘಟಕಗಳನ್ನು ಅಭ್ಯಾಸ ಮಾಡಿದ ನಂತರ, ಕಲಿತ ವಿಷಯಗಳನ್ನು ಉತ್ತರಗಳ ರೂಪದಲ್ಲಿ ಪ್ರಶ್ನೆಗಳ ಮೂಲಕ ತಮ್ಮನ್ನು ತಾವೇ ಪರೀಕ್ಷೆಗೊಳಪಡಿಸಿಕೊಂಡಾಗ ಕಲಿಕೆ ದೃಢವಾಗುತ್ತದೆ.
* ವಿಷಯಗಳನ್ನು ಅಭ್ಯಾಸ ಮಾಡುವಾಗ, ಪುನಃಸ್ಮರಣೆ ಕೈಗೊಳ್ಳುವಾಗ ತಡೆಯುಂಟು ಮಾಡುವ ಉದ್ವೇಗ, ಆತಂಕ, ಗದ್ದಲಗಳಿಂದ ಮುಕ್ತವಾಗಿರಬೇಕು.
* ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವಿರಬೇಕು. ನನಗೆ ನೆನಪಿನ ಶಕ್ತಿ ಕಡಿಮೆ,ಪರೀಕ್ಷೆಯಲ್ಲಿ ಮರೆತು ಹೋಗುತ್ತೇವೆ ಎಂಬಂತಹ ಅನಗತ್ಯ ಅಲೋಚನೆಗಳು , ಪೂರ್ವಾಗ್ರಹಪೀಡಿತ ನಕಾರಾತ್ಮಕ ಧೋರಣೆಗಳಿಗೆ ಅವಕಾಶ ಕೊಡಬಾರದು. ಸಮಾಧಾನ ಮತ್ತು ಏಕಾಗ್ರತೆಯೊಂದಿಗೆ ಅನುಕೂಲಕರ ವಾತಾವರಣದಲ್ಲಿ ಅಭ್ಯಾಸ ಮಾಡಬೇಕು.
ಇವೆಲ್ಲಕ್ಕೂ ಮುಖ್ಯವಾದ ಅಂಶವೆಂದರೆ, ಪರೀಕ್ಷೆ ತೇರ್ಗಡೆಗಾಗಿ ಮಾತ್ರ ಎಂದು ಭಾವಿಸದೆ ಜ್ಞಾನಾರ್ಜನೆಗಾಗಿ ಎಂದು ತಿಳಿದು ಇಷ್ಟಪಟ್ಟು ಕಲಿಯುವುದರಿಂದ ನಮ್ಮ ಫಲಿತಾಂಶ ಅತ್ಯುತ್ತಮವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ.
* * * * *
–> ಹೊರಾ.ಪರಮೇಶ್