ನನ್ನೊಳಗಿನ ಗೆಳತಿ: ಸುಮನ್ ದೇಸಾಯಿ

   
ಅದೊಂದು ಸುಂದರ ಸಂಜೆ. ಪಾರ್ಕಿನೊಳಗ ಅವರಿಗಾಗಿ ಕಾಯಿಕೊಂಡು ಕೂತಿದ್ದೆ. ಇಗೀಗಷ್ಟೆ ಅವರ ಪರಿಚಯ ಆಗಿತ್ತು. ದಿನಾಲು ವಾಕಿಂಗ್ ಬರ್ತಿದ್ರು. ಸುಮಾರು ೫೩ ರ ಅಂಚಿನ ಅವರು, ಅದ್ರ ಹಂಗ ಅನಿಸ್ತಿದ್ದಿಲ್ಲ. ನಲವತ್ತೈದರ ಆಸು ಪಾಸು ಅನಿಸ್ತಿತ್ತು. ತಿಳಿಯಾದ ಬಣ್ಣ, ಸ್ವಲ್ಪ ಕೋಲೆನ್ನಬಹುದಾದ ಮುಖ, ಕಂಡು ಕಾಣದಂತೆ ನಗುವ ಕಣ್ಣುಗಳು, ಧೀಮಂತ ಮುಖಕ್ಕೆ ಒಪ್ಪುವ ಕನ್ನಡಕ. ಸ್ನೆಹಮಯವಾದ ಸಂಯಮದಿಂದ ಕೂಡಿದ ಮಾತುಗಳು. ಇತ್ತೀಚಿಗ್ಯಾಕೊ ಮನಸ್ಸಿಗೆ ಹತ್ತರ ಆಗ್ಲಿಕತ್ತಿದ್ರು.

ಆವತ್ತ ಅವರನ್ನ ನೋಡಿದ ಮೊದಲ ದಿನ, ನನ್ನ ಮಕ್ಕಳು ಭಾಳ ಹಟಾ ಮಾಡಿ ಪಾರ್ಕಿಗೆ ಹೋಗಣಂತ ಕರಕೊಂಡ ಹೋಗಿದ್ರು. ಅವರನ್ನ ಆಟಾ ಆಡಲಿಕ್ಕೆ ಬಿಟ್ಟು ಅಲ್ಲೆ ಇದ್ದ ಬೆಂಚ ಮ್ಯಾಲೆ ಕೂತೆ. ಬಾಜುದ್ದ ಬೆಂಚ್‌ನ್ಯಾಗನ ಅವರು ಕೂತಿದ್ರು. ಮಕ್ಕಳ ಆಟ, ಜಗಳಗಳನ್ನ ಮುಗುಳ್ನಗುತ್ತ ನೋಡಕೋತ, ನಡು ನಡುವ ವಾಕಿಂಗ್ ಮಾಡಕೊಂಡು ಸಂಜೆಯನ್ನ ಸವಿಲಿಕತ್ತಿದ್ರು. ಯಾವುದೊ ವಿಷಯಕ್ಕ ಜಗಳಾಡ್ಕೊಂಡ ಬಂದ ನನ್ನ ಮಕ್ಕಳು ಅವರಿಗೆ ಬಂದು ಅಪ್ಪಳಿಸಿದಾಗ, ಬೈಯ್ಯಲಿಕ್ಕನುವಾದ ನನ್ನ ತಡೆದು, ಸಮಾಧಾನದಿಂದ ಮಕ್ಕಳ ತಲೆ ನೆವರಿಸಿ ಹೋಗಿದ್ರು.

ಸ್ಕೂಲಿಗೆ ರಜಾ ಇದ್ದಿದ್ದರಿಂದ ಮಕ್ಕಳಿಗೆ ಇಡಿ ದಿನಾ ಮನ್ಯಗ ಕೂತು ಬ್ಯಾಸರಾಗಿರ್‍ತದಂತ ದಿನಾ ಪಾರ್ಕಿಗೆ ಹೋಗೊದು ಅನಿವಾರ್ಯ ಆತು. ದಿನಾ ಅದೇ ಹೊತ್ತಿಗೆ ಅವರು ಬರ್ತಿದ್ರು. ದಿನಂಪ್ರತಿಯ ಭೇಟಿ, ಮುಗುಳ್ನಗೆಯ ವಿನಿಮಯಕ್ಕ ತಿರುಗಿತು, ಮುಗುಳ್ನಗೆ, ಮೆಲುಮಾತಿಗೆ ತಿರುಗಿತು. ಸವಕಾಶ ಮೆಲುಮಾತುಗಳು ಹರಟೆ, ವಸ್ತು ವಿಷಯಗಳ ಚರ್ಚೆಗೆ ಅನುವಾಯಿತು. ಮುಕ್ತವಾಗಿ ಹರಟೆ ಚರ್ಚೆಗಳು ನಡಿತಿದ್ವು ನಮ್ಮಿಬ್ಬರ ನಡುವ. ಅವರ ವಿಶಾಲಮನೋಭಾವದ ವಿಚಾರಗಳನ್ನ ಕೇಳಿದಾಗ ಆಶ್ಚರ್ಯ ಆಗ್ತಿತ್ತು ಅವರ ವ್ಯಕ್ತಿತ್ವ ಕಂಡು. 

ರಾಷ್ಟ್ರಿಕೃತ ಬ್ಯಾಂಕ ಒಂದರೊಳಗ ಕೆಲಸ ಮಾಡೊ ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಇಬ್ಬರನ್ನು ಮದುವೆ ಮಾಡಿಕೊಟ್ಟಿದ್ರು, ಜೀವನಪಯಣದ ಅರ್ಧ ದಾರಿಯೊಳಗ ಬಾಳಸಂಗಾತಿಯನ್ನ ಕಳಕೊಂಡು ಒಂಟಿಯಾಗಿದ್ರು. ತಮಗಿದ್ದ ಜವಾಬ್ದಾರಿಗಳನ್ನ ಪೂರೈಸಿಕೊಂಡ, ನಿವೃತ್ತಿಯಲ್ಲದ ನಿವೃತ್ತ ಜೀವನ ಅವರದಾಗಿತ್ತು. ದಿನದಿನದ ಭೇಟಿಯೊಳಗ, ಅವರ ಆತ್ಮೀಯತೆ, ಸ್ನೆಹಭಾವದ ಮಾತುಗಳಿಂದ ಅವರು ಇಷ್ಟ ಆಗಲಿಕತ್ತಿದ್ರು. ಮಕ್ಕಳ ಶಾಲೆ ಶುರುವಾದ ಮ್ಯಾಲು ನನ್ನ ಪಾರ್ಕಿಗೆ ಹೋಗೊ ಅಭ್ಯಾಸ ಮುಂದುವರಿತು. 

ಈಗೆರಡು ದಿನದಿಂದ ಜೋರಾಗಿ ಸುರಿಯ ಹತ್ತಿದ ಮಳಿ ಬಿಡಲೆ ಇಲ್ಲ. ಹಿಂಗಾಗಿ ಪಾರ್ಕಿಗೆ ಹೋಗಲಾಗಲಿಲ್ಲ. ಆವತ್ತ ಹೆಂಗೆಂಗ ಸಂಜೆ ಕಳೆದುಹೋದಂಗ ಮನಸ್ಸಿನ ತುಂಬ ಏನೊ ತಳಮಳ, ಒಂಥರ ಅಸ್ವಸ್ಥತೆಯ ಭಾವ. ಯಾಕ್ಹಿಂಗ? ನನ್ನ ನಾನ ಪ್ರಶ್ನಿಸಿಕೊಂಡು ಒಂದು ಘಳಿಗಿ ಕಣ್ಣು ಮುಚ್ಚಿದಾಗ ಕಂಡದ್ದು ಅವರ ಆ ರೂಪ. ಮುಗುಳ್ನಗುತ್ತಿರುವ ಆ ಮುಖ. ಥಟ್ಟನೆ ಕಣ್ಣು ಬಿಟ್ಟೆ. ಇದೇನು ಹಿಂಗ? ಯಾಕೆ ಈ ಭಾವ? ನಾ ಅವರಿಂದ ಆಕರ್ಷಿತಳಾಗ್ಲಿಕತ್ತನೆನೊ ಅನ್ನಿಸ್ತು. ಆ ನಗು, ನಾ ಹೇಳುವ ಪ್ರತಿಯೊಂದು ವಿಷಯವನ್ನ ಆಪ್ತತೆಯಿಂದ ಕೇಳುವ ಆ ತಾಳ್ಮೆ, ನನ್ನ ತಪ್ಪುಗಳನ್ನ ಹೆಕ್ಕಿ ನಯವಾಗಿ ಬುದ್ಧಿ ಹೇಳುವ ಪರಿ, ಒಂದೊಂದ ಸುರುಳಿಯಂಘ ಬಿಚ್ಚಿ ಕಣ್ಣಮುಂದ ಸುಳಿದಾಡಲಿಕತ್ವು. ಅವರನ್ನು ನೋಡದೆ ಇದ್ದ ಆ ಮನಸ್ಸಿನ ತಾಕಲಾಟಕ್ಕ ಅರ್ಥ ಹುಡುಕಿ ಹುಡುಕಿ ಸಾಕಾಗಿತ್ತು. ಹೊರಗಿನ ಜಿಟಿಜಿಟಿ ಮಳೆ ಮನಸ್ಸಿನ ತುಂಬೆಲ್ಲ ಯೋಚನೆಯ ಕಂಪನ ಎಬ್ಬಿಸ್ಲಿಕತ್ತಿತ್ತು. 

ಒಂದ ಕ್ಷಣ ನನ್ನ ಬಗ್ಗೆ ನಂಗ ನಾಚಿಕೆ ಆಯ್ತು. ಮದುವಿ ಆಗಿ ಮಕ್ಕಳತಾಯಿಯಾದ ನಂಗ ಇಂಥಾ ವಿಚಾರಗೊಳು ಬರೊದು ಸರಿನೊ, ತಪ್ಪೊ? ಅನ್ನಿಸಿ ತಲಿ ಯಾಕೊ ಧೀಂ ಅನ್ನಲಿಕತ್ತಿತ್ತು. ಇಂಥಾ ವಿಚಾರಗೊಳು ಬರೊದಬ್ಯಾಡ ಅಂತ ಒಂದಿಲ್ಲೊಂದು ಕೆಲಸದೊಳಗ ನನ್ನನ್ನ ನಾ ವ್ಯಸ್ತಳಾಗಿಟ್ಟೆ. ಎರಡು ದಿನಾ ಆಗಿತ್ತು ಹತ್ತಿದ ಮಳಿ ಬಿಡದೆ. ಅವತ್ತ ರಾತ್ರಿ ಮಕ್ಕಳ, ಅವರ ಊಟಾ ಮುಗಿಸಿ, ಅವರೆಲ್ಲಾ ಮಲ್ಕೊಂಡಾದ ಮ್ಯಾಲೆ ಎಲ್ಲ ಕೆಲಸ ಮುಗಿಸಿ ಬಂದಾಗ ಹೊತ್ತಾಗಿತ್ತು. ಇನ್ನು ಮಳೆಯ ರಭಸ ಕಡಿಮಿ ಆಗಿದ್ದಿಲ್ಲ. ಹಂಗೆ ಒರಗಿ ಕಣ್ಣುಮುಚ್ಚಿದಾಗ, ಆಶ್ಚರ್ಯ! ಮತ್ತದೆ ಅವರ ನಗು ಮುಖ. ಈ ಸಲ ಕಣ್ಣು ಬಿಚ್ಚುವ ಮನಸಾಗಲೇ ಇಲ್ಲ. ಹಂಗ ಆ ನಗುಮುಖದ ಆಕರ್ಷಣೆಯೊಳಗ ತೇಲಿಹೋಗಿ ನಿದ್ದೆಬಂದದ್ದು ಗೊತ್ತಗಲೇ ಇಲ್ಲ.

ಮರುದಿನ ಎದ್ದಾಗ ಮಳೆ ನಿಂತು ಸ್ವಚ್ಛ ಆಗಿತ್ತು ನಭೆ. ಹೂಬಿಸಿಲು ಮನಸ್ಸಿನೊಳಗ ಏನೊ ಒಂಥರಾ ಚೈತನ್ಯ ಹುಟ್ಟಿಸಿತ್ತು. ಒಂದು ಕ್ಷಣ ಓಡುನಡುಗಿಯೊಳಗ ಹೊಂಟ ನನ್ನ, ಹೀಂಗ್ಯಾಕಿವತ್ತ? ಅನ್ನೊ ಯೋಚನೆ ತಡೆದು ನಿಲ್ಲಿಸ್ತು.  ಓಹ್ ಮಳೆ ಇಲ್ಲ ಇವತ್ತ, ಅವರನ್ನ ಭೇಟ್ಟ ಆಗಬಹುದು. ಇವತ್ತ ನನ್ನ ಮನಸ್ಸಿನಲ್ಲಿರುವದನೆಲ್ಲ ಹೇಳಿ ಬಿಡಬೇಕಂತ ವಿಚಾರ ಮನಸ್ಸೊಳಗ ಬಂದಾಗ, ಮುಖ ತನ್ನಂತಾನೆ ಅರಳಿತು. ಸಂಜೆ ಆಗೊದನ್ನ ಕಾಯ್ಕೋತ ಕೂತಾಕಿಗೆ ಆ ದಿನ ದೀರ್ಘ ಅನಿಸಿತ್ತು. 

ಯೋಚನೆಯ ಸುಳಿಯೊಳಗಿಂದ ಹೊರಬಂದು ಅವರು ಬರೊ ದಾರಿಯತ್ತ ನೋಡಿದಾಗ ದೂರದೊಳಗ ಮಸುಕುಮಸುಕಾಗಿ ಕಾಣುತ್ತ ಅವರು ಹತ್ತಿರ ಬರೊವಷ್ಟರೊಳಗ ನನ್ನ ಎದೆಮಿಡಿತ ಸ್ಥಿಮಿತ ತಪ್ಪಲಿಕತ್ತಿತ್ತು. ಅವರು ಅತೀ ಹತ್ತಿರ ಬರುವಷ್ಟರೊಳಗ ಎಚ್ಚರ ತಪ್ಪುವದೇನೊ ಅನ್ನಿಸ್ಲಿಕತ್ತಿತ್ತು. ದಿನದಂಗ ಮಾತಾಡ್ಲಿಕ್ಕಾಗಲಿಲ್ಲ. ಮಾತುಗಳು ತಡವರಿಸ್ಲಿಕತ್ತಾವ ಅನಿಸ್ಲಿಕತ್ತಿತ್ತು. ನನ್ನಲ್ಲಾಗ್ಲಿಕತ್ತಿರೊ ಈ ಸಂಚಲನೆ ಅವರಿಗೆ ಗೊತ್ತಾತು ಅನಿಸ್ತು. ಅವರೆ ಕೇಳಿದ್ರು, ಯಾಕ ನೀನು ದಿನದಂತಿಲ್ಲ? ಏನಾದ್ರು ಸಮಸ್ಯೆ ಅದ ಎನು? ಅಂತ ಕೇಳಿದ್ರು. 

ಈ ಎರೆಡು ದಿನದಿಂದಾದ ನನ್ನ ಮನಸ್ಸಿನ ಕೋಲಾಹಲವನ್ನ ಹೇಳಿಕೊಂಡೆ ನಾನು. ಇದು ಪ್ರೀತಿಯೊ, ಸ್ನೇಹವೊ, ಆಕರ್ಷಣೆಯೊ ತಿಳಿಯದು ಎಂದೆ. ಅದಕ್ಕವರು ಅದೇ ಸಮಾಧಾನದಿಂದ  ನಿನ್ನೊಳಗಿನ ನೀನು ಅನ್ನೊ ಗೇಳತಿಯನ್ನ ಕಳೆದುಕೊಂಡಿದ್ದಿ. ಅದರ ಲಕ್ಷಣಗಳಿವು ಅಂದ್ರು. ನಂಗರ್ಥ ಆಗಲಿಲ್ಲ, ಗೊಂದಲದಿಂದ ಅವರ ಮುಖ ನೋಡಿದೆ. ನನ್ನ ಗೊಂದಲ ಅರ್ಥವಾದ ಅವರು ತಾವಾಗೆ ಹೇಳಲನುವಾದ್ರು,

ನೋಡು ಈ ಜಗತ್ತನೊಳಗ ನಮ್ಮನ್ನ ನಾವು ಪ್ರೀತಿಸಿದಷ್ಟು ಬ್ಯಾರೆ ಯಾರು ನಮ್ಮನ್ನ ಪ್ರೀತಿಸ್ಲಿಕ್ಕೆ ಸಾಧ್ಯ ಇಲ್ಲ. ನಮಗ ನಾವು ಒಳ್ಳೆ ಗೆಳೆಯ/ಗೆಳತಿ ಆದಷ್ಟು ಬ್ಯಾರೆ ಯಾರು ಆಗಲಿಕ್ಕೆ ಸಾಧ್ಯ ಇಲ್ಲ. ನಮ್ಮನ್ನ ನಾವು ಖುಷಿಯಾಗಿಡೊವಷ್ಟು ಬ್ಯಾರೆ ಯಾರು ನಮಗ ಖುಷಿ ಕೊಡುದಿಲ್ಲ. ಮತ್ತ ಯಾವುದೇ ಸಮಸ್ಯೆ ಇರಲಿ ನಮಗ ನಾವು ಸಮಾಧಾನಾ, ಪರಿಹಾರ ಹುಡಕಿಕೊಡೊವಷ್ಟು ಪ್ರಾಮಾಣಿಕತನದಿಂದ ಯಾರು ಸಹಾಯ ಮಾಡುದಿಲ್ಲ. ಆ ನಿನ್ನೊಳಗಿನ ನೀನು ಅನ್ನೊ ಗೆಳತಿಯನ್ನ ಮತ್ತ ಹುಡುಕಬೇಕಾದ್ರ ನೀನೆನು ಭಾಳ ಕಷ್ಟ ಪಡಬೇಕಾಗಿಲ್ಲ. ನಿನಗಾಗಿ ನೀನು ಒಂದೆರಡು ದಿನ ಏಕಾಂತವನ್ನ ಕಲ್ಪಿಸಿಕೊಡು. ನಿನಗ ನೀನೆ ಆತ್ಮ ವಿಮರ್ಷೆ ಮಾಡ್ಕೊ. ಈ ಏಕಾಂತದ ಅವಧಿ ನಮ್ಮನ್ನ ನಾವು ಸಂಭಾಳಿಸೊ ಅಂಥಾ ಮತ್ತ ನಮ್ಮ ನಾವು ಖುಷಿಪಡಿಸೊ ಅಂಥಾ ಕಲೆನ ಕಲಿಸಿಕೊಡ್ತದ. ನಮ್ಮ ಆತ್ಮವಿಶ್ವಾಸ, ಜೀವನವನ್ನ ಪ್ರೀತಿಸುವ ಕ್ಷಮತೆ, ಯಾವಾಗಲು ನಗುವ ಮನಸ್ಸನ್ನ ಈ ಏಕಾಂತ ಅನ್ನೊ ತಪಸ್ಸಿನೊಳಗ ಪಡಿಬಹುದು. ಆ ಕ್ಷಮತೆನ  ನೀನ್ನೊಳಗಿರೊ ನಿನ್ನ ಗೆಳತಿ. 

ಈ ಸಾಧನೆ ಕೈಗೂಡಿದ್ರ, ನಿಂಗ ಈಗಿರುವ ಹಂಗ ಇನ್ನೊಬ್ಬರನ್ನ ನೋಡಲೆಬೇಕು, ಮಾತನಾಡಿಸಲೇಬೇಕು, ಪ್ರೀತಿಸಲೇಬೇಕು, ಅನ್ನೊ ದುರ್ಬಲ ಮನಸ್ಸಿನ ಅನಿವಾರ್ಯತೆ ಇರೊದಿಲ್ಲ. ಒಂದುಸಲ ನಿನಗೆ ನೀನೆ ಸ್ವಲ್ಪ ಸಮಯವನ್ನ ಕೊಟ್ಟು ನೋಡು. ನಿನ್ನ ಆಪ್ತನಾಗಿ, ಹಿರಿಯನಾಗಿ ನೀನು ಕುಸಿಯುವದನ್ನ ನಾ ಬಯಸೊದಿಲ್ಲ. ಚಿಗುರೊಡೆದ ಜೀವನ ನಿಂದು ಹಸಿರು ಹಸಿರಾಗಿ ನಳನಳಿಸುತ್ತಿರಲಿ. ಆತ್ಮೀಯತೆಯಿಂದ ತಲೆ ನೆವರಿಸಿ ಹೋಗ್ಲಿಕತ್ತಂಥಾ ಅವರನ್ನ ನೋಡಿ ಹೆಮ್ಮೆಯಿಂದ ಕಣ್ಣು ಹನಿಗೂಡಿದ್ವು. ಮಾನಸಿಕವಾಗಿ ಅಧೋಗತಿಯತ್ತ ಜಾರಲಿಕತ್ತ ನನ್ನ, ಸನ್ಮಾರ್ಗದ ಮಾತುಗಳ ಭದ್ರವಾದ ಒಡ್ಡು ಕಟ್ಟಿ ಬೀಳದಂಘ ಹಿಡಿದು ನಿಲ್ಲಿಸಿದ್ರು. ಹಂಗ ಹೊಂಟವರು ಮತ್ತೆ ತಿರುಗಿ ನೋಡಿ, ಮಳಿ ಬರೊಹಂಗದ ಲಗೂ ಮನಿಗೆ ಹೊಗು ಅಂತ ಸನ್ನೆ ಮಾಡಿ ಕೈಬಿಸಿ ಹೊಗ್ಲಿಕತ್ತಂಥಾ ಅವರನ್ನ ನೋಡಿ, ಕಣ್ಣಿರಲ್ಲು ನಗುವಿನ ಎಳಿ ಸುಳಿತು. ತಂಪಾದ ಮನಸ್ಸಿನೊಂದಿಗೆ ಮನೆಕಡೆ ಹೊರಟೆ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Anil Talikoti
Anil Talikoti
9 years ago

ಕಥೆಯ ಆಪ್ತತೆ ಮನಮುಟ್ಟುವಂತಿದೆ.

HariharapuraSridhar
9 years ago
Reply to  Anil Talikoti

 ಅದ್ಭುತ! ಬೇರೆ ಮಾತುಗಳಿಲ್ಲ ಭಗಿನಿ. ಇಂತಾ ನೂರಾರು ಕಥೆಗಳು ಮೂಡಿಬರಲಿ

2
0
Would love your thoughts, please comment.x
()
x