ಜುಲೈ ೫ ೨೦೧೪ ಶನಿವಾರದಂದು ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ. ಉದಯೋನ್ಮುಖ ಕವಿ ರಚಿಸಿದ ಪರಿಸರ ಜಾಗೃತಿ ಕುರಿತಾದ ನಾಟಕ ಸಂಜೆ ೭ ಗಂಟೆಗೆ ಶುರುವಾಗಬೇಕಿತ್ತು. ಕಾರಣಾಂತರಗಳಿಂದಾಗಿ ರಾತ್ರಿ ೯.೩೦ಕ್ಕೆ ಶುರುವಾಯಿತು. ಮುಕ್ಕಾಲು ತಾಸಿನ ಮಕ್ಕಳು ಅಭಿನಯಿಸಿದ ಸುಂದರ ನಾಟಕ ಮುಗಿಸಿ ಮನೆಗೆ ಹೋಗಿ ಊಟ ಮಾಡಿ ಮಲಗುವಾಗ ಹನ್ನೊಂದು ಘಂಟೆಯ ಮೇಲಾಗಿತ್ತು. ಮೆಸ್ಕಾಂನವರು ಹಠ ತೊಟ್ಟು ವಿದ್ಯುತ್ ನಿಲುಗಡೆ ಮಾಡಿ ಮಲಗಿದ್ದರು. ಮಲಗಿದವನಿಗೆ ಕಣ್ಣು ಹತ್ತುತ್ತಿತ್ತು. ಡಂ! ಎಂಬ ಶಬ್ಧವಾಯಿತು. ಮಗ ಎದ್ದು ಬಂದ. ಯಾರೋ ಈಡು ಮಾಡಿದ್ದಾರೆ, ನೋಡಿ ಬರೋಣವೆಂದ. ಸರಿ, ಚಪ್ಪಲಿ ಮೆಟ್ಟಿ ಹೊರಟಾಯಿತು. ನಮ್ಮ ಹತ್ತಿರ ಅಷ್ಟು ಒಳ್ಳೆಯ ಟಾರ್ಚ್ ಇರಲಿಲ್ಲ. ಪಕ್ಕದ ಮನೆಯವರನ್ನು ಎಬ್ಬಿಸಿ, ಪ್ರಖರವಾಗಿ ಬೆಳಕು ಬೀರುವ ಟಾರ್ಚ್ ಪಡೆದು ಹೊರಟೆವು. ಕೈಯಲ್ಲಿ ಕತ್ತಿ-ಕುಡುಗೋಲು. ರವ-ರವ ರಾತ್ರಿ ಹೊತ್ತು, ತೋಟವಿಳಿದು, ಬೆಟ್ಟ ಹತ್ತಿ, ಆಲಿಸಿದರೆ ಏನು ಇಲ್ಲ. ಕಳ್ಳ ಬೇಟೆಗಾರರು ಬಲಿಯ ಸಮೇತ ಹೋಗಿಯಾಗಿತ್ತು. ಇನ್ನೇನು ಮಾಡುವುದು ವಾಪಾಸು ಹೋಗೋಣವೆಂದೆ. ಆಯಿತು ಎಂದ. ವಾತಾವರಣದಲ್ಲಿ ಅದೇನೋ ಅಸಹಜತೆ ಕಂಡು ಬಂತು. ಎತ್ತರದ ನೇರಳೆ ಮರದ ಮೇಲೆ ನಿದ್ದೆ ಮಾಡುತ್ತಿದ್ದ ನವಿಲು ಭಯದಿಂದ ರೆಕ್ಕೆ ಬಡಿದ ಸದ್ದು ಕೇಳಿಸಿತು. ಆಗ ಗಂಟೆ ಸರಿಯಾಗಿ ರಾತ್ರಿ ೧೨.೦೦ ಗಂಟೆ.
ಕಳ್ಳನಾಟದ ದಂಧೆ ಮತ್ತು ಕಳ್ಳ ಬೇಟೆಯಿಂದಾಗಿ ಈ ಜಗತ್ತಿನ ಜೀವಿವೈವಿಧ್ಯ ಅಳಿಯುತ್ತಿದೆ. ೬೫ ಮಿಲಿಯನ್ ವರ್ಷಗಳ ಹಿಂದೆ ಅಳಿದು ಹೋದ ಮಹೋರಗಗಳ ನಂತರದಲ್ಲಿ ಕಳೆದ ೫೦೦ ವರ್ಷಗಳ ಅವಧಿಯಲ್ಲಿ ಮನುಷ್ಯನಿಂದಾಗಿ ೮೪೪ ಸಸ್ಯ ಮತ್ತು ಪ್ರಾಣಿ ಪ್ರಭೇಧಗಳು ಅಳಿದುಹೋಗಿವೆ. ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಸರಿಯಾದ ಲೆಕ್ಕ ಇನ್ನೂ ಸಿಕ್ಕಿಲ್ಲ. ಹವಾಮಾನ ವೈಪರೀತ್ಯಕ್ಕೆ ಅರಣ್ಯ ನಾಶವೂ ಒಂದು ಬಹುಮುಖ್ಯ ಕಾರಣವಾಗಿದೆ. ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಸಾಮೂಹಿಕ ವಿನಾಶಕ್ಕೆ ಅರಣ್ಯ ನಾಶ ಕಾರಣವಾಗಲಿದೆ ಎಂದು ಯುನೈಟೆಡ್ ನೇಷನ್ಸ್ ಹೇಳಿದೆ. ಇಡೀ ಪ್ರಪಂಚ ಅಭಿವೃದ್ಧಿಯತ್ತ ಸಾಗುತ್ತಿದೆ. ಇತ್ತ ಅರಣ್ಯ ಸಂಪತ್ತು ಬರಿದಾಗುತ್ತಿದೆ. ಮಲೆನಾಡಿನ ಅರಣ್ಯ ನಾಶಕ್ಕೆ ಮುಖ್ಯ ಕಾರಣ ಒತ್ತುವರಿ. ಜೋಳ-ಶುಂಠಿ ಇತ್ಯಾದಿ ಹಣ ತರುವ ಬೆಳೆಗಳು ಸಾಕಷ್ಟು ಅರಣ್ಯಪ್ರದೇಶವನ್ನು ನುಂಗಿ ಹಾಕಿವೆ. ಅರಣ್ಯವನ್ನು ಕಾಯುವುದಕ್ಕೆ ಪ್ರತ್ಯೇಕ ಇಲಾಖೆಯಿದ್ದರೂ ಕೂಡ ಅರಣ್ಯ ರಕ್ಷಣೆ ಆಗುತ್ತಿಲ್ಲ. ಅರಣ್ಯ ಕಾಯುವವರಿಗಿಂತ ಅರಣ್ಯವನ್ನು ಕಡಿಯುವವರ ಸಂಖ್ಯೆ ಹೆಚ್ಚಾಗಿದೆ. ರಾತ್ರಿಯ ಹೊತ್ತಿನಲ್ಲಿ ಅದ್ಯಾವುದೋ ಮೂಲೆಯಲ್ಲಿ ಗರಗಸ ಓಡುತ್ತಿದ್ದರೆ ಇಲಾಖೆಯ ಗಮನಕ್ಕೆ ಬರುವುದು ಕಷ್ಟಸಾಧ್ಯ. ವೃತ್ತಿಯಿಂದ ಇಂಜಿನಿಯರ್ ಮತ್ತು ಭೌತಶಾಸ್ತ್ರಜ್ಞನಾದ ಸ್ಯಾನ್‌ಫ್ರಾನ್ಸಿಕೋದ ಮಿಸ್ಟರ್||ಟಾಪರ್ ವೈಟ್‌ನ ತಲೆಯಲ್ಲಿ ಮಳೆಕಾಡುಗಳನ್ನು ಹೇಗಾದರೂ ಮಾಡಿ ಉಳಿಸಬೇಕು ಎಂಬ ಯೋಚನೆ ಬಂತು. ಇದಕ್ಕಾಗಿ ಆತ ರೈನ್‌ಫಾರೆಸ್ಟ್ ನೆಟ್‌ವರ್ಕ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಳೆಕಾಡುಗಳನ್ನು ಉಳಿಸುವ ಯೋಚನೆ ಇದೀಗ ಯೋಜನೆಯಾಗಿ ಮಾರ್ಪಟ್ಟಿದೆ.
ತಂತ್ರಜ್ಞಾನ ಮುಂದುವರೆದು ಎಲ್ಲರ ಬೆರಳ ತುದಿಯಲ್ಲೂ ಪ್ರಪಂಚವಿದೆ. ಅದೇ ಸ್ಮಾರ್ಟ್ ಫೋನ್. ಇವತ್ತು ಕೊಂಡುಕೊಂಡ ಮೊಬೈಲ್ ನಾಳೆಯ ಹೊತ್ತಿಗೆ ಹಳತಾಗಿರುತ್ತದೆ. ಹಣವುಳ್ಳವರು ಹಳೆಯ ಸ್ಮಾರ್ಟ್ ಫೋನ್ ಕೊಟ್ಟು ಹೊಚ್ಚಹೊಸತನ್ನು ಕೊಳ್ಳುತ್ತಾರೆ. ಇಂತಹ ಮೊಬೈಲ್ ಬಳಸಿ ಕಾಡು ಮತ್ತು ವನ್ಯಮೃಗಗಳನ್ನು ಉಳಿಸುವ ಟಾಪರ್ ವೈಟ್‌ನ ಯೋಚನೆ ಕಾರ್ಯಸಾಧುವಾಗಿದೆ. ಪಶ್ಚಿಮ ಸುಮಾತ್ರದ ಕಾಡುಗಳಲ್ಲಿ ದೊಡ್ಡ ಮರಗಳ ಛಾವಣಿಯಲ್ಲಿ ಇಂತಹ ಹಲವಾರು ಸ್ಮಾರ್ಟ್ ಫೋನ್‌ಗಳು ಅಡಗಿ ಕುಳಿತಿವೆ. ಹೇಗೆಂದು ಕೊಂಚ ವಿವರವಾಗಿ ನೋಡೋಣ. ಸೌರಶಕ್ತಿಯನ್ನು ಹೀರಿಕೊಂಡು ಅದನ್ನು ವಿದ್ಯುತ್ ಆಗಿ ಪರಿವರ್ತಿಸುವ ಚಿಕ್ಕ ಫಲಕಗಳು ಸ್ಮಾಟ್‌ಫೋನ್‌ಗಳಿಗೆ ಜೀವ ನೀಡುತ್ತವೆ. ಅಕ್ರಮ ಮರ ಕಡಿತಲೆಯ ಶಬ್ದವನ್ನು ಸ್ಮಾರ್ಟ್ ಫೋನ್ ಗ್ರಹಿಸಿ ತಕ್ಷಣದಲ್ಲಿ ಹತ್ತಿರದ ಅರಣ್ಯ ಕೇಂದ್ರಕ್ಕೋ ಅಥವಾ ಸೂಚಿತ ಇನ್ಯಾವುದೇ ಮೊಬೈಲ್‌ಗಳಿಗೆ ಸಂದೇಶ ರವಾನಿಸುತ್ತದೆ. ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ೩೩ ಮಿಲಿಯನ್ ಎಕರೆ ಕಾಡುಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿದೆ ಎಂದು ಯುನೈಟೆಡ್ ನೇಷನ್ಸ್ ವರದಿ ಹೇಳುತ್ತದೆ. ಇಂತಹ ಒಂದು ಚಿಕ್ಕ ಉಪಕರಣ, ತನ್ನ ಇರುವಿಕೆಯಿಂದ ಒಂದು ಕಿಲೋಮೀಟರ್ ದೂರದವರೆಗಿನ ಗುಂಡಿನ ಸದ್ದು, ಗರಗಸದ ಶಬ್ಧವಲ್ಲದೆ, ಮನುಷ್ಯರ ಅಕ್ರಮ ನುಸುಳುವಿಕೆ ಅಥವಾ ಇನ್ಯಾವುದೆ ಅಸಹಜ ಶಬ್ಧಗಳನ್ನು ಗ್ರಹಿಸಿ ಕಾಡುಕಾಯುವವರ ಮೊಬೈಲಿಗೆ ಮೆಸೇಜ್ ನೀಡುತ್ತದೆ ಎಂಬುದು ಪ್ರಾಯೋಗಿಕವಾಗಿ ಸಾಬೀತಾಗಿದೆ ಎನ್ನುವುದನ್ನು ಟಾಪರ್ ವೈಟ್ ಅಮೇರಿಕನ್ ಸೈಂಟಿಫಿಕ್ ಪತ್ರಿಕೆಗೆ ತಿಳಿಸಿದ್ದಾನೆ.
ಹೋದ ವರ್ಷ ಜೂನ್ ತಿಂಗಳಲ್ಲೇ ಇಂತಹ ಐಡಿಯಾ ಟಾಪರ್ ವೈಟ್ ತಲೆಗೆ ಹೊಳೆದಿತ್ತು. ಸುಮಾತ್ರಾದ ಕಲಾವೇಟ್ ಗಿಬ್ಬನ್ ರಕ್ಷಿತಾರಣ್ಯದಲ್ಲಿ ಇಂತಹ ೪ ಪೋನ್‌ಗಳನ್ನು ೧೩೫ ಹೆಕ್ಟರ್ ಪ್ರದೇಶದಲ್ಲಿ ಅಡಗಿಸಿಡಲಾಗಿತ್ತು. ಕಾಯುತ್ತಾ ಕುಳಿತ ಅರಣ್ಯರಕ್ಷಕರಿಗೆ ಗರಗಸದ ಸದ್ದಿನ ಶಬ್ಧ ಕೇಳಿದ ಮೆಸೇಜ್ ಬಂತು. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಕೂಡಲೇ ಮೆಸೇಜ್ ಬಂದ ಪೋನಿನತ್ತ ಧಾವಿಸಿದರಾದರೂ, ಕಳ್ಳರು ಸಿಕ್ಕಲಿಲ್ಲ. ಪ್ರತಿದಿನ ಇಂತಹ ತುರ್ತು ಸಂದೇಶ ಬರುವುದು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸುವುದು ನಡದೇ ಇತ್ತು. ಹೀಗೆ ೨ ವಾರಗಳ ಕಾಲ ಭೇಟಿ ನೀಡಿದ ಅರಣ್ಯ ಸಿಬ್ಬಂದಿಗಳಿಗೆ ಯಾರು ಖಚಿತವಾದ ವರ್ತಮಾನ ನೀಡುತ್ತಿದ್ದಾರೆ ಎಂಬ ಮಾಹಿತಿ ಕಾಡುಗಳ್ಳರಿಗೆ ಸಿಗಲಿಲ್ಲ. ೨ ವಾರಗಳ ಕಾಲ ಅಕ್ರಮ ಕಡಿತಲೆಗೆ ಪ್ರಯತ್ನಿಸಿದ ಕಳ್ಳರು ಇದೂವರೆಗೂ ರಕ್ಷಿತಾರಣ್ಯದ ಕಾಡು ಕಡಿಯಲು ಬರಲಿಲ್ಲ. ಇದೊಂದು ಮರಗಳ್ಳರ ಮೇಲೆ ದಕ್ಕಿದ ವಿಜಯವಾಗಿದೆ ಎಂದು ವೈಟ್ ತಿಳಿಸಿದ್ದಾರೆ.
ಈ ಪದ್ಧತಿಯಲ್ಲೂ ನೂನ್ಯತೆಗಳಿವೆ ಎಂಬುದನ್ನು ಅಲ್ಲಗಳೆಯಲಾಗದು. ಯಾವುದೇ ಮರವನ್ನು ಕತ್ತರಿಸುವ ಶಬ್ಧ ಬಂದಾಗ ಮಾತ್ರ ಈ ಉಪಕರಣ ಸಂದೇಶ ನೀಡುತ್ತದೆಯಾದರೂ, ಮರಗಳ್ಳರನ್ನು ಮಾಲು ಸಮೇತ ಹಿಡಿಯಲು ಅನುಕೂಲವಾಗಿದೆ ಅಥವಾ ಇನ್ನಷ್ಟು ಮರಗಳ ಕಡಿತಲೆಯಾಗುವುದನ್ನು ತಪ್ಪಿಸಬಹುದಾಗಿದೆ. ಈಗ ರೈನ್‌ಫಾರೆಸ್ಟ್ ನೆಟ್‌ವರ್ಕ್ ಸಂಸ್ಥೆಯು ಈ ಯೋಜನೆಗೆ ಹೆಚ್ಚಿನ ಚಾಲನೆ ನೀಡಲು ಬಯಸಿದೆ. ಜುಲೈ ೨೦೧೪ರ ಹೊತ್ತಿಗೆ ಇಂಡೊನೇಷಿಯಾ, ಆಫ್ರಿಕಾ ಮತ್ತು ಅಮೇಜಾನ್ ಕಾಡುಗಳಲ್ಲಿ ಉಪಕರಣಗಳನ್ನು ಅಳವಡಿಸಲು ಬಯಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಕಾಯಕದಲ್ಲಿ ತೊಡಗಿದೆ. ಮಳೆ-ಗಾಳಿ-ಬಿಸಿಲಿಗೆ ಹಾಳಾಗದಂತಹ ಬಹುಕಾಲ ಬಾಳಿಕೆ ಬರುವಂತಹ ಸ್ಮಾರ್ಟ್ ಫೋನ್‌ಗಳನ್ನು ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿದೆ. ಇದರ ಮೊದಲ ಹಂತವಾಗಿ ಲಂಡನ್ನಿನ ಜೂಯಾಲಜಿಕಲ್ ಸೊಸೈಟಿಯ ಸಹಕಾರದೊಂದಿಗೆ ಅಳಿವಿನಂಚಿನಲ್ಲಿರುವ ಗೋರಿಲ್ಲಾ, ಚಿಂಪಾಜಿ ಮತ್ತು ಆನೆಗಳನ್ನು ಹಂತಕರಿಂದ ರಕ್ಷಿಸಲು ಕ್ಯಾಮರಾನಿನ ೨೦೦ ಹೆಕ್ಟರ್ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆಗ ಸರಿಯಾಗಿ ಮಧ್ಯರಾತ್ರಿ ೧೨ ಗಂಟೆ. ದೂರದಲ್ಲಿ ಗೂಬೆಯ ಗುಗ್ಗುಗಗೂ. . ಗುಗ್ಗುಗುಗೂ. . . ಕೂಗು ಕೇಳುತ್ತಿತ್ತು. ತಲೆಯ ಮೇಲೆ ಎತ್ತರದಲ್ಲಿ ದೊಡ್ಡ ರೆಕ್ಕೆಯ ಬಾವಲಿಗಳು ಹಾರುತ್ತಾ ಆಹಾರ ಹುಡುಕಾಟದಲ್ಲಿ ತೊಡಗಿದ್ದವು. ಅಷ್ಟರಲ್ಲಿ ದೊಡ್ಡದಾಗಿ ಉಸಿರುಬಿಡುವ ಶಬ್ಧ ಸ್ಪಷ್ಟವಾಗಿ ಕೇಳಿ ಬಂತು. ಕೈಯಲ್ಲಿ ಆತ್ಮ ರಕ್ಷಣೆಗಾಗಿ ಕತ್ತಿ-ಕುಡುಗೋಲುಗಳಿದ್ದರೂ, ಕೈಯಲ್ಲಿ ಪ್ರಖರವಾದ ಟಾರ್ಚ್ ಇದ್ದರೂ, ಅದೇನೋ ಒಂದು ತರಹದ ದುಗುಡದ ಜೊತೆ ಕುತೂಹಲ ಇಣುಕಿ ಹಾಕಿತು. ಪಿಸುದನಿಯಲ್ಲಿ ಪರಸ್ಪರ ಮಾತಾನಾಡಿಕೊಂಡು ಶಬ್ಧ ಮಾಡಬಾರದೆಂದು ತೀರ್ಮಾನಿಸಿ, ಟಾರ್ಚ್ ಬಂದ್ ಮಾಡಿ ಸುಮ್ಮನೆ ನಿಂತೆವು. ಅಗಣಿತ ಸಂಖ್ಯೆಯಲ್ಲಿ ಸೊಳ್ಳೆಗಳು ಮುತ್ತುತ್ತಿದ್ದವು. ಆತಂಕದ, ಕುತೂಹಲದ ೫ ನಿಮಿಷಗಳು ಕಳೆದವು. ಬಹುಷ: ಕಾಡುಕೋಣದ ಮಂದೆಯಿರಬೇಕು. ಮಲೆನಾಡಿನ ಕಾಡುಗಳ ವಿಶೇಷವೆಂದರೆ, ಕೆಳಹಂತದಲ್ಲೂ ದಟ್ಟವಾದ ಪೊದೆಗಳಿರುತ್ತವೆ. ಹಗಲಲ್ಲೂ ನೇರವಾಗಿ ನೂರಡಿ ದೂರವನ್ನು ಕಣ್ಣಿನಿಂದ ಅಳೆಯಲು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಟಾರ್ಚ್ ಹಿಡಿದು ಕಾಡುಕೋಣದ ಮಂದೆಯನ್ನು ಹುಡುಕುವುದು ಬಣವೆಯಲ್ಲಿ ಸೂಜಿ ಹುಡುಕಿದಂತೆ ಸರಿ. ಕಾಡುಕೋಣದ ಮಂದೆಗೂ ನಮ್ಮ ಇರುವಿಕೆ ಅಸಹನೆ ಹುಟ್ಟಿಸಿತ್ತೆಂದು ಕಾಣುತ್ತದೆ. ಮಟ್ಟಿಯನ್ನು ಕುಟ್ಟಿ ಪುಡಿ ಮಾಡುತ್ತಿದ್ದವು, ಗೊರಸಿನಿಂದ ನೆಲವನ್ನು ಕೆರೆಯುತ್ತಿದ್ದವು. ನಾವೂ ಕೂಡ ವಾಪಾಸು ಮನೆಗೆ ಹೋಗುವ ತೀರ್ಮಾನ ತೆಗೆದುಕೊಂಡಾಗಿತ್ತು. ಟಾರ್ಚ್ ಮಗನ ಕೈಯಲ್ಲಿತ್ತು. ಈಗ ದೊಡ್ಡದಾಗಿ ಮಾತಾನಾಡುತ್ತಾ ಬಂದ ದಾರಿಯಲ್ಲೆ ವಾಪಾಸು ತಿರುಗಿದೆವು. ಹತ್ತು ಹೆಜ್ಜೆ ಹೋಗುವಷ್ಟರಲ್ಲಿ, ಅಚಾನಕ್ ಆಗಿ ಟಾರ್ಚ್ ಬಂದ್ ಆಯಿತು. ಸುತ್ತಲೂ ಘೋರುಗತ್ತಲೆ. ಬೆಳಕನ್ನು ಕಿಲೋಮೀಟರ್‌ವರೆಗೂ ತಲುಪಬಲ್ಲ ಹೊಸ ಟಾರ್ಚ್ ಹೀಗೆ ನಡುರಾತ್ರಿಯಲ್ಲಿ, ನಡುಗಾಡಿನಲ್ಲಿ ನಮಗೆ ಕೈಕೊಟ್ಟಿತ್ತು. ಬೆಳಕಿನ ಸಹಾಯವಿಲ್ಲದೆ ಮನೆ ತಲುಪುವುದು ಅಸಾಧ್ಯವೇ ಸೈ. ಇಷ್ಟು ಹೊತ್ತಿನ ತನಕ ನಿರಾಳವಾಗಿದ್ದ ನಮಗೆ ಇದೀಗ ಆತಂಕ ಶುರುವಾಯಿತು.
ಈ ಚಿತ್ರದಲ್ಲಿ ರೈನ್ ಫಾರೆಸ್ಟ್ ಕನೆಕ್ಷನ್ ಸಂಸ್ಥೆಯ ಈ ನೂತನ ಕಾಡು ರಕ್ಷಿಸುವ ಉಪಕರಣ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸಲಾಗಿದೆ.
ಅರ್ಧಗಂಟೆಯಲ್ಲಿ ಮನೆಗೆ ವಾಪಾಸು ಬರುತ್ತೇವೆ ಎಂದು ಮನೆಯಲ್ಲಿ ಹೇಳಿ ಹೋಗಿಯಾಗಿತ್ತು. ಕಾಡುಗಳ್ಳರನ್ನು ಹಿಡಿಯುವ ಹುಮ್ಮಸ್ಸಿನಲ್ಲಿ ಬಹುದೂರ ಕ್ರಮಿಸಿದ್ದೆವು. ಇಷ್ಟರಲ್ಲಿ ಜೇಬಿನಲ್ಲಿರುವ ಮೊಬೈಲ್ ಟಿಂ. ಟೀಂ ಎಂದು ತನ್ನಿರುವನ್ನು ಬಹಿರಂಗ ಪಡಿಸಿತು. ಹಸಿರು-ನೀಲಿ ಮಿಶ್ರಿತ ಮೊಬೈಲ್ ಪರದೆಯ ಮೇಲೆ ನ್ಯೂ ಮೆಸೇಜ್ ಎಂಬ ಸಂದೇಶವಿತ್ತು. ತೆರೆದು ನೋಡಿದರೆ ಸಿಕ್ಕಿದರಾ? ಎಂಬ ಪ್ರಶ್ನಾರ್ಥಕ ಚಿಹ್ನೆಯ ಪ್ರಶ್ನೆ ಮಡದಿಯಿಂದ ಬಂದಿತ್ತು. ಮನೆ ತಲುಪಲು ಇದ್ದ ಏಕಮಾತ್ರ ಉಪಕರಣವೆಂದರೆ ಮೊಬೈಲ್ ಮಾತ್ರ. ಅದರ ಬೆಳಕಿನಿಂದಲೇ ಮನೆ ತಲುಪುವುದು ಎಂದು ಕೊಂಡೆವು. ನಮ್ಮ ಹತ್ತಿರವಿರುವುದು ನೋಕಿಯಾ ಎಕ್ಸ್೨ ಮಾಡೆಲ್. ಇದರಲ್ಲಿ ಟಾರ್ಚ್ ಸೌಲಭ್ಯವಿಲ್ಲ. ಪದೇ ಪದೇ ಯಾವುದಾದರೊಂದು ಬಟನ್ ಒತ್ತುತ್ತಿದ್ದರೆ ಮಾತ್ರ ಬೆಳಕು ಬರುತ್ತದೆ. ಮಧ್ಯ-ಮಧ್ಯ ಚಾರ್ಜ್‌ಬಲ್ ಟಾರ್ಚ್ ಬಟನ್ ಒತ್ತಿ ನೋಡಿದೆವು, ಒಂದು ಸಾರಿ ಫಕ್ಕೆಂದು ಬೆಳಕು ಬಂತು ಅಷ್ಟೆ. ಇಷ್ಟರಲ್ಲಿ ನಾವು ಬಂದ ದಾರಿಯನ್ನು ತಪ್ಪಿಕೊಂಡಿದ್ದೆವು. ದಾರಿಯೆಂದರೆ ಕಾಲು ದಾರಿಯೂ ಅಲ್ಲ, ಇದ್ದುದ್ದರಲ್ಲಿ ಕಡಿಮೆ ಜೀಡು ಇರುವ ಜಾಗದಲ್ಲೇ ನುಗ್ಗಿ ಬಂದಿದ್ದೆವು. ಈಗ ಅದೂ ತಪ್ಪಿಹೋಗಿತ್ತು. ಮಲೆನಾಡಿನ ಕಾಡಿನಲ್ಲಿ ಹಾದಿ ತಪ್ಪಿಸುವ ಬಳ್ಳಿ ಇರುತ್ತದೆ ಎಂಬ ಪ್ರತಿತಿಯೊಂದು ಇದೆ. ಉತ್ತರ ಕನ್ನಡದಲ್ಲಿ ಇದಕ್ಕೆ ದಾಟ್‌ಬಳ್ಳಿ ಎನ್ನುತ್ತಾರೆ. ಈ ತರಹದ ಬಳ್ಳಿಯನ್ನು ದಾಟಿದೆವೇನೋ ಎಂಬ ಅನುಮಾನ ಮಗನಿಗೆ ಬಂತು. ಲಾಗಾಯ್ತಿನಿಂದ ತಿರುಗಾಡಿದ ಜಾಗವಾದ್ದರಿಂದ, ಮನೆ ತಲುಪುವ ಬಗ್ಗೆ ನನಗೆ ಅನುಮಾನಗಳಿರಲಿಲ್ಲ. ಆದರೂ ಕತ್ತಲಲ್ಲಿ ಕಷ್ಟ. ಸಾಮಾನ್ಯವಾಗಿ ಜೂನ್-ಜುಲೈ ತಿಂಗಳು ಎಂದರೆ ಹಾವುಗಳು ಮೊಟ್ಟೆಯಿಟ್ಟು ಮರಿ ಮಾಡುವ ಕಾಲ. ಅದರಲ್ಲೂ ಕಾಳಿಂಗ ಸರ್ಪಗಳು ಮೊಟ್ಟೆಯಿಟ್ಟು ಕಾಯುತ್ತಿರುತ್ತವೆ. ಇದೊಂದೆ ನನಗಿದ್ದ ಭಯ. ಆದರೆ ಇದನ್ನು ಮಗನಿಗೆ ಹೇಳುವ ಹಾಗಿಲ್ಲ.
ಅಂತೂ ಅರ್ಧಗಂಟೆ ಸುತ್ತು ಹಾಕಿದ ಮೇಲೆ, ಬೆಟ್ಟಕ್ಕೆ ನಾವು ಹತ್ತಿದ ಜಾಗದ ಹತ್ತಿರ ಬಂದೆವು. ಅಲ್ಲಿಂದ ಕೆಳಗಿಳಿದರೆ ತೋಟ, ತೋಟವನ್ನು ದಾಟಿ ಬಂದರೆ, ಮುಖ್ಯರಸ್ತೆ, ಮುಖ್ಯರಸ್ತೆ ಸೇರಿದ ಮೇಲೆ ಮನೆ ತಲುಪಲು ಬರೀ ೫ ನಿಮಿಷ ಸಾಕು. ಕೆಟ್ಟು ಹೋದ ಟಾರ್ಚ್‌ನ್ನು ಮರಳಿಸಲು ಪಕ್ಕದ ಮನೆಯ ಕದ ಬಡಿದರೆ, ಅವರೆಲ್ಲಾ ಜೋರು ನಿದ್ದೆಯಲ್ಲಿದ್ದರು. ಬೆಳಗ್ಗೆ ವಾಪಾಸು ಕೊಟ್ಟರಾಯಿತು ಎಂದುಕೊಂಡು ಅಲ್ಲಿಂದ ಸುರಕ್ಷಿತವಾಗಿ ಮನೆ ತಲುಪಿದೆವು. ಮಡದಿಯಿಂದ ಮುಖಕ್ಕೊಂದಿಷ್ಟು ಮಂಗಳಾರತಿಯಾಯಿತು. ಯಾರೋ ಗುಂಡು ಹಾರಿಸಿದರೆಂದು, ನೀವು ಕಾಡಿನಲ್ಲಿ ಮಗನನ್ನು ಕಟ್ಟಿಕೊಂಡು ಹೋಗಿ ಏನಾದರೂ ಹೆಚ್ಚು-ಕಡಿಮೆಯಾದರೆ ಎಂಬುದು ಮಡದಿಯ ದುಗುಡ. ಅದು ಸಹಜ ಕೂಡ.
ಮಾರನೇ ದಿನ ಈ ಕತೆ ಕೇಳಿದ ಸ್ನೇಹಿತರ ಅಭಿಪ್ರಾಯವೂ ನನ್ನ ಮಡದಿಯ ಅಭಿಪ್ರಾಯಕ್ಕಿಂತ ಭಿನ್ನವಾಗಿರಲಿಲ್ಲ. ನನಗೂ ಈ ಪರಿಕಲ್ಪನೆಯಿದೆ. ಕಾಡುಪ್ರಾಣಿಗಳಿಂದ ನಮಗೆ ಯಾವುದೆ ತೊಂದರೆ ಆಗುವುದಿಲ್ಲ. ತೊಂದರೆಯಾದರೆ, ಮರಗಳ್ಳರೋ ಅಥವಾ ಪ್ರಾಣಿಹಂತಕರಿಂದಲೇ ಆಗಬೇಕು. ದಟ್ಟಾರಣ್ಯಗಳು ಮತ್ತು ವನ್ಯಜೀವಿಗಳು ಏಕಕಾಲದಲ್ಲಿ ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕುವಲ್ಲಿ ಕೆಲಸ ಮಾಡುತ್ತವೆ. ನಾವು ಉಪಯೋಗಿಸುವ ವಿಮಾನಯಾನ, ರಸ್ತೆ-ರೈಲು ಪ್ರಯಾಣ ಹಾಗೂ ಹಡಗಗಳಿಂದಾಗುವ ವಾಯು ಮಾಲಿನ್ಯಕ್ಕಿಂತಲೂ ಹೆಚ್ಚು ವಾಯು ಮಾಲಿನ್ಯ ಅರಣ್ಯ ನಾಶದಿಂದ ಸಂಭವಿಸುತ್ತದೆ ಎಂದು ವರದಿ ಹೇಳುತ್ತದೆ. ಮುಂದಿನ ಪೀಳಿಗೆಗಾಗಿ ನಾವು ಅಂದರೆ ಇಂದಿನ ಜನಾಂಗ ಇಷ್ಟು ಮಾತ್ರದ ರಿಸ್ಕ್ ತೆಗೆದು ಕೊಳ್ಳದಿದ್ದರೆ ಹೇಗೆ? ರಾತ್ರಿಯ ಇಡೀ ಘಟನೆಯಲ್ಲಿ ನನಗಾದ ವೈಯಕ್ತಿಕ ನಷ್ಟವೆಂದರೆ, ಬೆಳಕಿಗಾಗಿ, ಪದೇ ಪದೇ ಮೊಬೈಲ್‌ನ ಬಟನ್ ಒತ್ತುತ್ತಿದ್ದೆ. ಎ ಹೆಸರಿನಿಂದ ಶುರುವಾಗುವ ಸ್ನೇಹಿತರೊಬ್ಬರಿಗೆ ಕರೆ ಹೋಗಿದೆ ಅದೂ ಮಧ್ಯರಾತ್ರಿಯಲ್ಲಿ, ಹಲೋ. . ಹೇಳಿದ್ದಾರೆ. ನನ್ನವತಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲವಾದ್ದರಿಂದ ಕಟ್ ಮಾಡಿ ಮಲಗಿದ್ದಾರೆ. ದುರದೃಷ್ಟವೆಂದರೆ ಆ ಕರೆ ಕಟ್ ಆಗಲೇ ಇಲ್ಲ. ಅದೇ ದಿನ ಹಾಕಿದ ಅಷ್ಟೂ ಕರೆನ್ಸಿ ಖಾಲಿಯಾದ ಮೇಲೆ ಫೋನ್ ಸಂಪರ್ಕ ಕಡಿತಗೊಂಡಿದೆ. ಬೆಳಗ್ಗೆ ಯಾರಿಗೋ ಫೋನ್ ಮಾಡಲೆಂದರೆ ಒಂದು ಪೈಸೆ ಕರನ್ಸಿಯೂ ಇಲ್ಲ.
ನಾವೂ ಅಭಿವೃದ್ದಿಯ ಮಂತ್ರ ಜಪಿಸುತ್ತಿದ್ದೇವೆ. ಸುಸ್ಥಿರ ಅಭಿವೃದ್ಧಿಯ ಕಲ್ಪನೆ ಸಾಕಾರಗೊಳ್ಳಬೇಕು. ಕಾಡು ಹಂತಕರನ್ನು ಮಟ್ಟ ಹಾಕುವಲ್ಲಿ ನಾವು ಕೂಡ ತಂತ್ರಜ್ಞಾನದ ಮೊರೆ ಹೋಗಬೇಕು. ಕಾಡು ಕಾಯುವ ಜವಾಬ್ದಾರಿಯಿರುವ ಇಲಾಖೆ ಮತ್ತು ಅಧಿಕಾರಿಗಳು, ಆಳುವವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.
*****
ತುಂಬಾ ಕುತೂಹಲಕಾರಿಯಾಗಿದೆ! ಕಳ್ಳರ ನಿಯಂತ್ರಿಸಲು ಅನುಕೂಲವಾಗುವ ಇಂಥದೊಂದು ಉಪಕರಣ ಅಥವಾ ವ್ಯವಸ್ಥೆ ಬೇಗನೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸೋಣ.
ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್…. ಅಭಿನಂದನೆಗಳು.