ಪ್ರೇಮ ಪತ್ರಗಳು

ಮನೆಯ ಅಂಗಳದಲ್ಲಿ ರಂಗವಲ್ಲಿ ಬಿಡಿಸಿ: ಸಚಿನ್ ನಾಯ್ಕ ಅಂಕೋಲ

ಹೃದಯದಲ್ಲಿ  ಪುಟ್ಟ ಪುಟ್ಟ ಕನಸುಗಳ ಅರಮನೆ ಕಟ್ಟಿ ಬದುಕಿನುದ್ದಕ್ಕೂ ನನ್ನೊಡನೆ ಅಲ್ಲೇ ಇರುವ ಭರವಸೆಗೆ ನಗು ನಗುತ್ತಲೇ ಒಪ್ಪಿಗೆಕೊಟ್ಟ 
ನಿನಗಾಗಿ                                         

ನಿನ್ನವನಿಂದ….

ನೋಡು ಹೊರಗಡೆ ; ಆಕಾಶದಲ್ಲಿ ಇಂದು ಪೂರ್ಣಚಂದ್ರ…. ನೆಲದ ಮೇಲೆಲ್ಲಾ ಅವನ ಹಾಲು ಬೆಳಕು…. ಜೀsss ಎನ್ನೋ ಮರದ ಮೇಲೆ  ಎಂದೂ ಕಾಣದಂತೆ ಅದೃಶ್ಯವಾಗೇ ಇರುವ ಜಿರಲೆಗಳ ಕೂಗಾಟ… ಕೆಲವೇ ಹೊತ್ತಿನ ಹಿಂದೆಯೇ ಬಂದು ಹೋದ ಮಳೆಯ ಕುರುಹು ಎಂಬಂತೆ ಬಿಟ್ಟು ಬಿಟ್ಟು ತೊಟ್ಟಿಕ್ಕುತ್ತಿರುವ ಹನಿಗಳು…. ಎಲ್ಲಾ ಸರಿ ಕಣೆ ಸಾಯಂಕಾಲ ಕರೆಂಟು ಇಲ್ಲ ಮಾರಾಯ್ತಿ ಇಡೀ ಊರಿಗೇ ಇಲ್ವಂತೆ ….! ಕುಂದಾಪುರ ಪ್ಯಾಟೇಲೇ ಕರಂಟ್ ಇಲ್ಲಾ ಮಾರಾಯ್ರೆ…. ಇವತ್ ರಾತ್ರಿ ಪೂರಾ ಕುತಿದ್ರೂ ಕರಂಟ್ ಬತ್ತಿಲೆ….ನಾವ್ ಮನೆಗ್ ಹೋಪ್ಪಾ  ಎಂದು ಗೊಣಗುತ್ತಲೆ ನಮ್ಮ ಮೀನ್ ಸಾರ್ ಹೋಟೆಲ್‌ನ ಬಯ್ಯಾ ಹೋಟಲ್ ಬಂದು ಮಾಡಿದ್ದು  ಆಯ್ತು …. ಇತ್ತ ನಾನೂ ನನ್ನ ಹೊಸ ರೂಮಲ್ಲಿ ಮೊದಲ ಬಾರಿಗೆ ಕ್ಯಾಂಡಲ್ ಬೆಳಕು  ಚೆಲ್ಲಿದ್ದು  ಆಯ್ತು …. ಅದೆಲ್ಲಾ ಸರಿ ಇವತ್ತೇನು ಹೊಸದಾಗಿ ಪತ್ರ ಬರಿತಿದಿಯಾ ಅಂತಾ ಅಲ್ವಾ  ನಿನ್ನ ಪ್ರಶ್ನೆ…,? ಇರೋ ಎರಡು ಮೊಬೈಲ್‌ಗೂ ಚಾರ್ಜ್ ಇಲ್ಲಾಕಣೆ ; ಸ್ವಿಚ್ ಆಪ್ ಆಗಿದಾವೆ…. ಹೇಳಲೇ ಬೇಂಕೆಂದಿದ್ದ ಒಂದಷ್ಟು ವಿಷಯಗಳನ್ನು ಹೇಳದೆ ಮಲಗಿದ್ರು ನಿದ್ರೆ ಹತ್ತಾಲ್ಲಾ ನೋಡು ಅದಕ್ಕೆ ಈ ಉಪಾಯ…. ಕೈಗೆ ಮೊಬೈಲ್ ಬಂದ ಮೇಲಿಂದ ಯಾರೂ ಪತ್ರವನ್ನೇ ಬರೆಯಲ್ಲಾ  ನೋಡು ಅಷ್ಟರಮಟ್ಟಿಗೆ  ಅವು ಮಾಯಾವಾಗಿ ಬಿಟ್ಟಿದಾವೆ…. ಈ ಮೊಬೈಲ್ ಕಂಪನಿ ಕೋಡೋ ೧೦೦ limitted messages ಅನ್ನೂ ನಿಂಗೆ ಕಳುಹಿಸಿದ ಮೇಲೂ ಮತ್ತೂ ಏನೇನೋ ಹೇಳೋದು ಬಾಕಿ ಉಳಿದು ಬಿಡುತ್ತೆ…ಆಡೋ ಮಾತನ್ನ ಕಟ್ ಮಾಡಿ  ೧ text ಗೆ ಸೀಮಿತ ಮಾಡಿ ಬಿಡುತ್ತೆ ಈ ಮೆಸ್ಸೇಜು ಅನ್ನೋದು…. ಆದ್ರೆ ಪತ್ರಗಳು ಹಾಗಲ್ಲ ಹೇಳಬೇಕು ಅಂದು ಕೊಂಡಿದ್ದ  ಮಾತಿಗೆ ಮನಸ್ಸಿನಲ್ಲಿರೋ ಎರಡು  ಮಾತನ್ನ  ಸೇರಿಸಿ ಹೇಳುತ್ತೆ… ಯಾಕಂದ್ರೆ ಪತ್ರಗಳಿಗೆ limitation ಅನ್ನೋದು ಇಲ್ಲಾ ಅಲ್ವಾ…. ನೋಡು ನೀನು ಮುಖಾನ ಆ ತರ ಮಾಡಬೇಡ ಕೊರಿಬೇಡಾ ತುಂಬಾ, ನೇರ ವಿಷಯಕ್ಕೆ ಬಾ ಅಂತಾ ಹೇಳ್ಬಿಡು..

ಅಲ್ವೇ ನೀನ್ಯಾಕೆ ನನ್ನ ಇಷ್ಟು ಕಾಡೋದು ..?? ಆ ರೋಡಲ್ಲಿ ಯಾರೋ ಗಂಡಾ ಹೆಂಡತಿ  ನಡ್ಕೊಂಡು ಹೋದ್ರೆ, ಅಲ್ಯಾರೋ ಮಗುನಾ ಸ್ಕೂಲಿಗೆ ಬಿಡೋಕೆ ಒಟ್ಟಿಗೆ ಬಂದ್ರೆ, ದೇವಸ್ಥಾನ  
ಪಾನಿಪುರಿ  ಸ್ಟಾಲ್, ಪಾರ್ಕು, ಬೀಚು ಹೋಟೆಲ್  ಎಲ್ಲೇ ಗಂಡಾ ಹೆಂಡತಿ ಪುಟ್ಟ ಮಗು  ಇವರನೆಲ್ಲಾ  ಜೊತೆಯಾಗಿ ಕಂಡಾಗ ಅದು ನಾನು ನೀನು ಅಂತಾ ಅನ್ಸೋದು ಯಾಕೆ..??
ಇವತ್ ಏನಾಯ್ತು ಗೊತ್ತಾ ಅದೇ  ನಮ್ಮ ಬಯ್ಯಾನ ಹೋಟೆಲ್ ಅಲ್ಲಿ ಒಬ್ರು ಗಂಡಾ ಹೆಂಡತಿ ಮೀನು ಪ್ರೈ ತಗೊಂಡು ಹೋಗೋಕೆ ಬಂದಿದ್ರು…. ನೋಡಿದ್ರೆ ಹೊಸದಾಗಿ ಮದುವೆ ಆಗಿರೋ ತರಾ ಇದ್ರು ಅವರನ್ನು ನೋಡಿದ  ಮೇಲಂತೂ ನಂಗೆ ನನ್ನ-ನಿನ್ನ ಮುಂದಿನ ದಿನಗಳೇ ಕಣ್ಣಮುಂದೆ ಬಂದುಬಿಟ್ವು…. ಒಂದು ದಿನವೂ ಮೀನು ಇಲ್ಲದೆ ಊಟ ಮಾಡದ ನನಗೆ ; ಜೀವನ ಪೂರ್ತಿ ಮೀನು ಅಂದ್ರೆ ಏನೂ ಅಂತಾನೇ  ಗೊತ್ತಿಲ್ಲದ ನೀನು ಅದು ಹೇಗೆ  ಗಂಟು ಬಿದ್ದೆ ಮಾರಾಯ್ತಿ ..!! ನಿಜ ಅಲ್ವಾ ನಾನೂ ಕೂಡಾ ಹೀಗೆ ಮುಂದೆ ಮೀನಿಗಾಗಿ ಹೋಟಲ್ಗೆ ಅಲೆಯೋದೆ ಗತಿ…! ನೆನಸ್ಕೊಂಡಾಗಲೆಲ್ಲಾ  ನಗೋದೋ….? ಅಳೋದೋ..? ಗೊತ್ತಾಗಲ್ಲ..!!

ಆದರೂ ನೀನು ಬೇಗ ಬಂದು ಬಿಡು, ನೀನಿಲ್ಲದೆ ನನ್ನ ಈ ಪುಟ್ಟ ಮನೆ ಖಾಲಿ ಖಾಲಿ ಅನ್ನಿಸತ್ತೆ…. ನಿಂಗೊತ್ತಲ್ವಾ ನಂಗೆ ಈ ಕ್ಯಾಂಡಲ್ ಅಂದ್ರೆ ಎಷ್ಟು ಇಷ್ಟ ಅಂತ, ಅದರ ಬೆಳಕನ್ನ ನೋಡ್ತಾ ಜಗತ್ತನ್ನೇ ಮರಿತೀನಿ ಅಂತಾ…. ಆದ್ರೆ  ನಿಂಗೆ ಗೊತ್ತಿಲ್ಲದೆ ಇರೋ ಒಂದು ಸತ್ಯ ಕೇಳು, ಆ ಚೆಂದದ ಬೆಳಕಲ್ಲಿ ಸದಾ ನಂಗೆ ಹೊಳೆಯೋ ನಿನ್ನ ಮುದ್ದು ಮುಖ ಕಾಣಿಸುತ್ತೆ. ನಿನ್ನೊಳಗೆ ಇರುವ ಪ್ರೇಮದ ಜ್ಯೋತಿ ಕಾಣಿಸುತ್ತದೆ…! ನಿಜವಾದ ಪ್ರೀತಿ ಅಂದ್ರೆ ಏನು ಅಂತ ತಿಳಿದದ್ದು ನೀನು ಬದುಕಿಗೆ ಬಂದ ಮೇಲೆಯೇ…. 

ನೀನು ಮಾಡೋ ಬೇಳೆಸಾರಾದ್ರು ಪರವಾಗಿಲ್ಲ ನಿನಗೋಸ್ಕರ ಜೀವನ ಪೂರ್ತಿ ಸಹಿಸ್ಕ್ಕೊತಿನಿ… ಬೇಗ ಬಾ ಈ ಕೋಣೆಯ ಮೂಲೆ ಮೂಲೆಯಲ್ಲೂ ಕ್ಯಾಂಡಲ ಇಟ್ಟಿದ್ದೇನೆ… ನಿನ್ನ ಕೈಯಾರೆ ಬೆಳಗುವಿಯಂತೆ…. ಹೀಗೆ ಮತ್ತೆ ಏನೇನೋ ಕೆಲಸಗಳಿವೆ…. ಮುಖ್ಯವಾಗಿ ನಮ್ಮ ಮಗಳಿಗೆ ಮೂರು ವರ್ಷ…. ನಮ್ಮ ಪ್ರೀತಿ ಹುಟ್ಟಿದಾಗಿನಿಂದ ಅವಳ ಕಲ್ಪನೆ ಹುಟ್ಟಿ ಮೂರು ವರ್ಷ….. ಅವಳನ್ನು ಇವಾಗ ಸ್ಕೂಲ್‌ಗೆ ಸೇರಿಸಬೇಕು…. ಹೀಗೆ ತುಂಬಾನೇ… ಇವತ್ತು ಕರೆಂಟ್ ಹೋಗಿದ್ದು ಒಳ್ಳೆಯದೇ ಆಯ್ತು….  ಅದೆಷ್ಟೋ ವಿಷಯಗಳನ್ನು ನಿನ್ನೊಡನೆ ಹಂಚಿಕೊಂಡ ತೃಪ್ತಿ ಸಿಕ್ಕಂತಾಯ್ತು….  

ನೋಡು ಈ ಕ್ಯಾಂಡಲ್ ಬೆಳಕು ನೆಲವನ್ನು ಮುತ್ತಿಡುವ ಸಮಯ ಬಂದಾಯ್ತು…. ಗಡಿಯಾರದ ಎರಡು ಮುಳ್ಳುಗಳು ನೆಟ್ಟಗೆ ನಿಂತು ಒಂದರ ಮೇಲೊಂದು  ಬಂದಾಯ್ತು ಕ್ಯಾಲೆಂಡರ ನಲ್ಲಿ ದಿನಾಂಕವೂ ಬದಲಾಯ್ತು…. ಈ ಪತ್ರಕ್ಕೆ  ವಿರಾಮ ಹೇಳೋ ಸಮಯೂ ಬಂತು…. ಇದು ನಿನ್ನ ಕೈಗ ಎಂದು ಸೇರತ್ತೋ ಗೊತ್ತಿಲ್ಲಾ but ನಾನಂತೂ ಎಲ್ಲವನ್ನು ಹೇಳಿಕೊಂಡು ಹಗುರಾದ ಆನಂದದಲ್ಲಿ ನಿದ್ರೆಗೆ ಜಾರುತ್ತೇನೆ……bye.

ಇಂತಿ
 ಮನೆಯ ಅಂಗಳದಲ್ಲಿ
ರಂಗವಲ್ಲಿ ಬಿಡಿಸಿ
 ನಿನ್ನ ಬರುವಿಕೆಗಾಗಿ ಕಾಯುತ್ತಿರುವವ…… 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *