ರೆಡಿ ಸ್ಟೆಡಿ ಪೋ!: ಗುರುಪ್ರಸಾದ ಕುರ್ತಕೋಟಿ

ಅವತ್ತಿನ ದಿನದಲ್ಲೇನು ಹೇಳಿಕೊಳ್ಳುವಂತಹ ವಿಶೇಷತೆಯಿರಲಿಲ್ಲ. ಪ್ರತಿದಿನದಂತೆ ಅವತ್ತೂ ಬೆಳಗಾಗಿತ್ತು, ವೆಂಕಣ್ಣ  ಎಂದಿನಂತೆ ಬಲ ಮಗ್ಗಲಲ್ಲೇ ಎದ್ದಿದ್ದ! ಅವನ ಹೆಂಡತಿ ಎಂದಿನಂತೆ ಅವತ್ತು ಕೂಡ ಇನ್ನೂ ಎದ್ದಿರಲಿಲ್ಲವಾದ್ದರಿಂದ, ಹಲವು ಬಗೆಯ ರಾಸಾಯನಿಕಗಳ ಆಗರವೆಂದು ಗೊತ್ತಿದ್ದೂ ಕೂಡ ಚಹಾ ಎನ್ನುವ ಕಷಾಯದ ವಿಷವನ್ನು ತನ್ನ ಕೈಯಾರೆ ಕುದಿಸಿಕೊಂಡ. ಎಷ್ಟಂದ್ರೂ ನಮಗೆ ಬೇಕಾದ ವಿಷವನ್ನು ನಾವೇ ಆರಿಸಿಕೊಳ್ಳಬೇಕೆಂದು ಹಿರಿಯರು ಹೇಳಿಬಿಟ್ಟಿದ್ದಾರಲ್ಲ! ಯಾಂತ್ರಿಕವಾಗಿ ಇತರ ಪ್ರಾತಃ ಕರ್ಮಗಳಿಗೂ ಮುಕ್ತಿಯನ್ನು ಕರುಣಿಸಿದ್ದ. ಹಿಂದಿನ ದಿನ ನೋಡಿದ್ದ ನಾಟಕದ ಪಾತ್ರವೊಂದು ಅವನ ತಲೆಯಲ್ಲಿ ಇನ್ನೂ ಗುಂಯ್ ಗುಡುವ ಕಾರ್ಯದಲ್ಲಿ ತೊಡಗಿತ್ತು….  ಏನೇ ಆದರೂ ಅವನು ಅವತ್ತು ಕೆಲಸಕ್ಕೆ ಹೋಗಲೇ ಬೇಕಿತ್ತು. ಪ್ರಳಯವಾದರೂ ಸರಿಯೇ, ಅವನ ಪ್ರಳಯಾಂತಕ ಬಾಸ್ ಗೆ ಇವನನ್ನು ಕಣ್ಣೆದುರಿಗೆ ಕಾಣದಿದ್ದರೆ ಸಮಾಧಾನವೇ ಇಲ್ಲವಲ್ಲ! ಅಷ್ಟು ಲವ್ವು!!

ಅಂತು ಆಫೀಸು ಮುಟ್ಟಿದಾ ಅನ್ನಿ. ಅಲ್ಲೂ ಏನಂಥ ವಿಶೇಷ ಬದಲಾವಣೆಗಳಿರಲಿಲ್ಲ. ಅವೇ ಅತೃಪ್ತ ಆತ್ಮಗಳು,  ತಾವೆ ತಮ್ಮ ಕೈಯ್ಯಾರೆ ಮಾಡಿಕೊಂಡಿದ್ದ ತಮ್ಮ ಸ್ವಂತ ತಪ್ಪು ನಿರ್ಧಾರಗಳಿಂದ ಹೀಗಾಯಿತು ಅಂತ ಪರಿತಪಿಸುತ್ತ, ಇತ್ತ ಕೆಲಸ ಬಿಟ್ಟು ಓಡಿ ಹೋಗಲೂ ಆಗದೇ, ಖುಷಿಯಿಂದ ಕೆಲಸ ಮಾಡಲೂ ಮನಸ್ಸಿಲ್ಲದೆ, ಅಂತರ್ ಪಿಶಾಚಿಗಳಂತೆ ಅಲೆದಾಡುವ ದೃಶ್ಯ ಎಂದಿನಂತೆ ಮಾಮೂಲಿಯಾಗಿತ್ತು. ಆದರೆ ಇವನ ಬಾಸ್ ನ ಮುಖ ಮಾತ್ರ ಮಾಮೂಲಿಯಂತೆ ಸಪ್ಪೆಯಾಗಿರದೆ ಲವಲವಿಕೆಯಿಂದ ತುಂಬಿ ತುಳುಕುತ್ತಿದ್ದುದು ಇವನಿಗೆ ಸ್ವಲ್ಪ ಕುತೂಹಲಕಾರಿಯಾಗಿತ್ತು! ಬಾ ಅಂತ ಸನ್ನೆ ಮಾಡಿ ಕರೆದಾಗಲಂತೂ ಬಹುಷಃ ಅವರು ಕೆಲಸಕ್ಕೆ ರಾಜಿನಾಮೆ ಕೊಟ್ಟಿರಬಹುದೆ? ಅಂತ ಯೋಚನೆ ಬಂದು ಪುಳಕಗೊಂಡು ಅವರ ಬಳಿ ಹೋಗಲಾಗಿ…

Good news! ಅಂದ್ರು! ತಾವು ರಾಜಿನಾಮೆ ಕೊಟ್ರೆ ತನಗೆ ಖುಷಿ ಅಂತ ಇವರಿಗೆ ಹೇಗೆ ಗೊತ್ತಾಯ್ತು ಅಂತ ಇವನು ಬೆರಗು ಗಣ್ಣಿನಿಂದ ನೋಡುತ್ತಿರುವಂತೆ …

ಅಮೇರಿಕಾಕ್ಕೆ ಕರೀತಿದ್ದಾರೆ ರೆಡಿ ಆಗಿ! ಅನ್ನಬೇಕೆ? ಅದನ್ನು ಕೇಳುತ್ತಲೆ ಇವನು ಖಿನ್ನನಾದ! ಅದಕ್ಕೆ ಕಾರಣಗಳು ಎರಡು. ಬಾಸ್ ರಾಜಿನಾಮೆ ಕೊಡುತ್ತಿರಬಹುದೆಂಬ ತನ್ನ ಊಹೆ ಸುಳ್ಳಾಗಿದ್ದು ಒಂದು! ಇನ್ನೊಂದೆಂದರೆ,  ಬುರ್ಗರ್ ವಾಸ್ನೆ ನೆನಪಾಗಿ!  ಯಾಕಂದ್ರೆ ಕೊನೇ ಬಾರಿ ಅಲ್ಲಿಗೆ ಹೋಗಿದ್ದಾಗ ಸಸ್ಯಾಹಾರಿಯಾಗಿದ ಇವನು ಬೇರೆ ಗತಿಯಿಲ್ಲದೆ, ಹೋದಲ್ಲಿ ಬಂದಲ್ಲಿ ಸುಲಭವಾಗಿ ಸಿಗುತ್ತಿದ್ದ ಬರ್ಗರ್ ತಿಂದು ತಿಂದು, ವಾಪಸ್ಸು ಭಾರತಕ್ಕೆ ಬಂದ ಮೇಲೆ, ಅದನ್ನು ತಿನ್ನುವುದೇ ಬಿಟ್ಟಿ ಬಿಟ್ಟಿದ್ದ. ಅಷ್ಟು ವಾಕರಿಕೆ ಬಂದಿತ್ತು. ಅವನ ಮೂಗಿನಲ್ಲಿ ಅದರ ವಾಸನೆ ಇನ್ನೂ ತಾಜಾ ಇತ್ತು!  

ಯಾಕೆ? ಸಡನ್ನಾಗಿ ಡಿಪ್ರೆಸ್ಸ್ ಆದ್ರೀ? ಅಂತ ಕಂಗ್ಲಿಷ್ ಪಂಡಿತರಾದ ಅವನ ಬಾಸು ಕೇಳಲಾಗಿ.

ನನಗೆ ಹೋಗಲು ಇಷ್ಟವಿಲ್ಲ ಅಂತರುಹಿ ಸೂರನ್ನು ದಿಟ್ಟಿಸುತ್ತ ನಿಂತ. ಅವರು ಇವನಿಂದ ಇಂತಹ ಅಧಿಕ ಪ್ರಸಂಗಿ  ಉತ್ತರವನ್ನು ನಿರೀಕ್ಷಿಸಿರಲಿಲ್ಲವೇನೋ…

ಕಮಾನ್ ಮ್ಯಾನ್! ಎಲ್ರೂ ಅಲ್ಲಿ ಹೋಗೋಕೆ ಸಾಯ್ತಾರೆ. ನೀವೇನ ಹಿಂಗ್ ಅಂತೀರ? ಹೋಗ್ತೀರೊ ಇಲ್ವೋ ಅಂತ ನಾ ಕೇಳಿಲ್ಲ. ನೀವು ಹೋಗ್ಲೆ ಬೇಕು, ಇದು ತುಂಬಾ ಇಂಪಾರ್ಟಂಟ್ ಪ್ರಾಜೆಕ್ಟು ನಮಗೆ. ಅದೂ ಅಲ್ದೆ ಕಸ್ಟಮರ್ರೆ ಕರೆತಿದ್ದಾರ್ರಿ, ನೀವೆ ಬರ್ಬೇಕಂತೆ ಅವ್ರಿಗೆ! 

ಓಹೊ! ಇದು ವ್ಯವಸ್ಥಿತ ಸಂಚು! ತಮಗೆ ಬೇಕಾದ ಕುರಿಯನ್ನು ಅವರೆ ಆರಿಸಿಕೊಂಡಿದ್ದರು ಇವನ ಕಷ್ಟಮಾರಾಯ್ರು (customer). 

ಬಾಸ್ ನ ನಿರ್ಧಾರ ಅಚಲವಾಗಿತ್ತು. ಕೋಳಿ ಕೇಳಿ ಯಾರಾದರೂ ಸಾಂಬಾರ ಅರಿಯುತ್ತಾರೆಯೇ? ಆದರೂ ತನ್ನ ನಖರಾ ತೋರಿಸಲು ಒಂದು ದಿನದ ಸಮಯ ತೆಗೆದುಕೊಂಡ. 

ಈ ಸಲ ಪರಿವಾರ ಸಮೇತನಾಗಿ ಹೋದರೆ ಹೇಗೆ ಅನ್ನುವ ಒಂದು ಯೋಚನೆ ಬಂತು. ಮನೆಗೆ ಹೋಗಿ ಜಾನುಗೆ ಆ ವಿಚಾರ ಹೇಳಲಾಗಿ ಅವಳು ಮನಸ್ಸಿದ್ದರೂ, ಒಲ್ಲೆ ಒಲ್ಲೆ ಅನ್ನುತ್ತಲೇ ಹೂಂ ಗುಟ್ಟಿದಳು!

ಮರುದಿನ ಬಾಸಿಗೆ ತಾನು ತನ್ನ ಹೆಂಡತಿ ಮಗಳನ್ನೂ ಕರೆದುಕೊಂಡು ಹೋಗಲು ಒಪ್ಪುವುದಾದರೆ ನಾ ಹೋಗಲು ಸಿದ್ಧ, ಅಂದಿದ್ದಕ್ಕೆ 'ನಿಮ್ಮ ಹೆಂಡ್ತಿನ್ನ ನಿಮ್ಮ ಜೊತೆ ಕರ್ಕೊಂಡು ಹೋಗಲು ಬೇಡಾ ಅನ್ನಲು ನಾನ್ಯಾರ್ರೀ!?' ಅಂತಂದು ತಮ್ಮ ಅದ್ಭುತ ಜೋಕಿಗೆ ಪಕ ಪಕ ಅಂತ ನಕ್ಕರು. ಆದರೆ ಮುಂದಿನ ಕ್ಷಣವೇ ಗಂಭೀರವಾಗಿ ನಿಮ್ಮ ಮನೆಯವರ ಟಿಕೇಟ್ ಖರ್ಚು ನೀವೇ ನೋಡ್ಕೋಬೇಕು ಅಂದ್ರು. ಅದಕ್ಕೆ ನಗಬೇಕೋ ಅಳಬೇಕೋ ಗೊತ್ತಾಗದ ವೆಂಕಣ್ಣ ಸುಮ್ಮನೆ ಕೈಕಟ್ಟಿಕೊಂಡು ನಿಂತಿದ್ದನ್ನು ಅವನ ಟೀಮಿನ ಹುಡುಗಿ ನೋಡಿದ್ದಂತು ನಿಜ! 

ಬರುತ್ತೇನೆ ಅಂದಾಗ ಬಾ ಅಂತ ಬರಸೆಳೆದುಕೊಳ್ಳುವ ದೇಶವಂತೂ ಅಲ್ಲಾ ಅದು. ಎಲ್ಲರೂ ತನ್ನ ದೇಶಕ್ಕೆ ಬರಲು ಹಪಹಪಿಸುತ್ತಾರೆ, ಹಾಗೆ ಬಂದವರು ತಮ್ಮ ದೇಶದಲ್ಲೇ ಬೇರು ಬಿಡುತ್ತಾರೆ ಎಂದು ಅನವಶ್ಯಕವಾದ ತಪ್ಪು ನಂಬಿಕೆಯಲ್ಲಿರುವ,  ದೇಶವದು! ಅಲ್ಲಿಗೆ ಹೋಗಲೇ ಮನಸ್ಸಿಲ್ಲದ ವೆಂಕಣ್ಣನಂತವರೂ ಇರುವರೆನ್ನುವ ವಿವೇಕವಿಲ್ಲವೇ ಆ ದೇಶಕ್ಕೆ? ಅದರೂ ಬೇಲಿ ಹಾರಿ ಬಂದವರಿಗೆಲ್ಲಾ ಜೀವನಕ್ಕೆ 'ಅಧಾರ' ಮಾಡಿಕೊಡುವ ಭಾರತೀಯರಷ್ಟು ಉದಾರಿಗಳೆ ಅವರು? 

ಇವನ ತಯ್ಯಾರಿ ಶುರುವಾಗಿತ್ತು. ಇವನ ವೀಸಾ ಮೊದಲೇ ಇತ್ತಾದರೂ ಹೆಂಡತಿ ಮಗಳದು ಮಾಡಿಸಬೇಕಿತ್ತು. ಏಜಂಟೊಬ್ಬಳ ಬಳಿ ಹೋಗಲಾಗಿ, ಅಮೇರಿಕಾದವ್ರು  ವೀಸಾ ದಯಪಾಲಿಸಬೇಕೆಂದರೆ ಏನೇನು ತಯಾರಿ ಬೇಕೆಂದು ಅವಳು ಖಡಾ ಖಂಡಿತವಾಗಿ ಇಂಗ್ಲೀಷಿನಲ್ಲೇ ಹೇಳತೊಡಗಿದಳು. ಆ ಪ್ರೂಫು ಈ ಪ್ರೂಫು ಅಂತೆಲ್ಲಾ ಹೇಳಿ ಬ್ಯಾಂಕಿನಲ್ಲಿರುವ ಎಲ್ಲಾ ಡೆಪಾಸಿಟ್ಟು ತೋರಿಸ್ಬೇಕು ಅಂದು ಇವನ ಕಣ್ಣುಗಳು ಉಪೇಂದ್ರನ ಶೈಲಿಯಲ್ಲಿ ತಿರುಗುವ ಹಾಗೆ ಮಾಡಿದಳು. ಇವನಿಗೆ ಕೆಂಡದಂಥ ಕೋಪ ಬಂತು. ಇದೆಲ್ಲಾ ಯಾಕೆ ತೋರಿಸಬೇಕು ಅನ್ನೊ ಸಿಟ್ಟು ಒಂದಾದರೆ, ಇದ್ದ ಬದ್ದ ದುಡ್ಡನ್ನೆಲ್ಲಾ ಹಾಕಿ  ಹೆಂಡತಿ ಮಗಳನ್ನು  ಅಮೇರಿಕಾ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಇಲ್ಲದ ಡೆಪಾಸಿಟ್ಟು ಎಲ್ಲಿಂದ ತೋರಿಸುವುದು ಅಂತ! ಆದ್ರೂ ಏಜಂಟ್ ಬಳಿ ಅದೆಲ್ಲ ಹೇಳೋಕಾಗುತ್ತದೆಯೆ? ಏನೇನಿದೆಯೋ ಅದನ್ನು ತೋರಿಸಿದರಾಯ್ತು ಅಂತ ಸುಮ್ಮನಾದ. ಎಲ್ಲಾ ತಯ್ಯಾರಿ ಮಾಡಿಟ್ಟುಕೊಂಡು, ವೀಸಾ ಸಂದರ್ಶನ ಚೆನ್ನೈ ನಲ್ಲಿ ನಿಗದಿಯಾದ ಹಿಂದಿನ ದಿನ ಕಾರಿನಲ್ಲಿ ಪರಿವಾರ ಸಮೇತ ಹೊರಟ. ಕಾರಿನಲ್ಲಿ ಹೋದರೆ ಕೆಲಸ ಮುಗಿದ ತಕ್ಷಣ ಬೆಂಗಳೂರಿಗೆ ಬಂದು ಬಿಡಬಹುದಲ್ಲ ಅನ್ನುವ ದೂರ ದೃಷ್ಟಿ ವೆಂಕಣ್ಣನದು!

ದಾರಿಯಲ್ಲಿ ಕಾಂಚಿಪುರಮ್ ಅನ್ನುವ ಸೀರೆ ಮಾರಾಟಕ್ಕೆ ಪ್ರಸಿದ್ಧಿ ಪಡೆದ ಊರನ್ನು ಕಂಡ. ಜಾನುಗೆ, ಬೇಕಾದರೆ ನಿನಗೊಂದು ಸೀರೆ ತೊಗೋಳೋದಿದ್ರೆ ತೊಗೊ ಅಂತ ಹೇಳುವಾಗ, ಅದು ತನ್ನ ಜೀವನದ ಅಸಂಖ್ಯಾತ ತಪ್ಪು ನಿರ್ಧಾರಗಳಲ್ಲಿ ಇನ್ನೊಂದಾದೀತು ಅನ್ನುವ ಕಲ್ಪನೆ ಅವನಿಗಿರಲಿಲ್ಲ! ಆ ಊರೊಳಗೆ ತಲಪುತ್ತಲೇ ಒಳ್ಳೆಯ ಸೀರೆ ಅಂಗಡಿ ಎಲ್ಲಿದೆ ಅಂತ ಒಬ್ಬ ಹುಡುಗನಿಗೆ ಕೇಳಿದ. ಅವನು ತಮಿಳಿನಲ್ಲೇನೋ ಹೇಳಿದ. "ತಮಿಳು ತೆರಿಯಾದು" ಅಂದನಿವನು. ಇವಗೆ ಗೊತ್ತಿದ್ದ ತಮಿಳು ಅಷ್ಟೆ! "ತಮಿಳ ತೆರಿಯಾದಾ?" ಅಂದ ಹುಡುಗ ಮತ್ತೆ ತಮಿಳಿನಲ್ಲೇ ಮಾತಾಡಿದ. ಅವನ ಭಾಶಾಭಿಮಾನಕ್ಕೊಂದು ಮೆಚ್ಚಿಗೆಯ ನಗೆ ನಕ್ಕು ಮುಂದೆ ಸಾಗಿದ. ಮತ್ತೆ ತಮ್ಮ ಅದೃಷ್ಟ ಪರೀಕ್ಷಿಸಲು ಇನ್ನೊಬ್ಬನ ಕೇಳಲಾಗಿ ಮತ್ತೆ ತಮಿಳು ಕಿವಿಗಪ್ಪಳಿಸಿ, ಇವನು ನಿರಾಸೆಯಿಂದ ಮತ್ತೆ "ತೆರಿಯಾದು" ಅನ್ನಲಾಗಿ ಆ ಮನುಷ್ಯ "ಬೆಂಗಳೂರಾ? ಕನ್ನಡ ಮಾತಾಡ್ತೀರಾ?" ಅಂಥೇಳಿ ಇವನ ಕಿವಿಯಲ್ಲಿ  ಜೀವ ತರಿಸಿದ! 

ಅವನೇ ಖುದ್ದಾಗಿ ಅಲ್ಲೊಂದು ಸೀರೆ ಅಂಗಡಿಗೆ ಕರೆದೊಯ್ದ. ಅಲ್ಲೂ ಸುಮಾರು ಜನ ಕನ್ನಡ ಮಾತಾಡುತ್ತಿದ್ದರು. ಅಲ್ಲಿ ತುಂಬಾ ಕನ್ನಡಿಗರು ಸೀರೆ ಕೊಳ್ಳಲು ಬರುತ್ತಿದ್ದುದಕ್ಕೆ ಕನ್ನಡ ಮಾತಾಡುವವರು ಜಾಸ್ತಿ ಇರಬೇಕೆ? ಅಥವ ಗಡಿಯಲ್ಲಿದ್ದುದಕ್ಕೆ ಹೀಗಿರಬಹುದೆ? ಅದೇನೆ ಇರಲಿ, ಇವನ ಹೆಂಡತಿ ಮಾತ್ರ ತನಗೊಂದಲ್ಲದೆ ಅಮ್ಮನಿಗೆ, ಚಿಕ್ಕಮ್ಮಗಳಿಗೆ, ಆಪ್ತ ಗೆಳತಿಯರಿಗೆ ಅಂಥೇಳಿ ಹತ್ತು ಸೀರೆ ತೊಗೊಂಡು, ತಮಿಳುನಾಡಿನಲ್ಲಿ ಕನ್ನಡ ಕೇಳಿ ಕುಣಿದಾಡುತ್ತಿದ್ದ ಇವನೆದೆಯ ಝಲ್ ಎನಿಸಿದಳು! ಸೀರೆಗಳ ಗಂಟು ಕಾರಿನಲ್ಲಿ ಒಟ್ಟಿಕೊಂಡು ಮತ್ತೆ ಇವರ ಪಯಣ ಮುಂದುವರಿದು ರಾತ್ರಿಗೆ ಚೆನ್ನೈ ತಲುಪಿದರು. ಕೊತ ಕೊತ ಕುದಿಯುವ ಸೆಕೆಯಲ್ಲಿ ಬೆವೆತು ಮಿಂದವರಿಗೆ ರಾತ್ರಿ ಹವಾನಿಯಂತ್ರಿತ ಹೋಟೇಲಿನಲ್ಲಿ ಮಲಗಿದ್ದೊಂದೇ ನೆನಪು! 

ಬೆಳಿಗ್ಗೆ ಎದ್ದು ಅಮೇರಿಕಾದ ವೀಸಾ ಕಚೇರಿಗೆ ಹೋದವರಿಗೆ ಸ್ವಾಗತಿಸಿದ್ದು ಉದ್ದನೆಯ ಪಾಳಿ.  ಹೆಚ್ಚು ಕಡಿಮೆ  ಸಂಜೆಯವರೆಗೆ ಸುಡು ಬಿಸಿಲಿನಲ್ಲಿ ಬೆಂದದ್ದಾಯ್ತು. ಎಲ್ಲ ಕೈ ಬೆರಳುಗಳ  ಮುದ್ರಣವನ್ನು ದಾಖಲಿಸಿಕೊಂಡರು. ಮರುದಿನ ಮತ್ತೊಂದು ಕಡೆಗೆ ಇನ್ನೂ ಉದ್ದದ ಪಾಳಿ. ಅಲ್ಲೆಲ್ಲಾ ದಾಖಲೆಗಳ ಪರಿಶೀಲಿಸಿದ ಅಮೇರಿಕದವರು ನೀವು ಹೋಗಲು ಅಡ್ಡಿ ಇಲ್ಲ ಅಂತ ಸೀಲು ಹೊಡೆದು ಅಸ್ತು ಅಂದಾಗ ಸುಸ್ತಾಗಿ ಹೋಗಿದ್ದರಿವರು. 

ಅಲ್ಲಿಂದ ತಿರುಗಿ ಬೆಂಗಳೂರಿಗೆ ಪ್ರಯಾಣಿಸುವಾಗ ದಾರಿಯಲ್ಲಿ ವೆಂಕಣ್ಣ ಯೋಚನೆಗೆ ಬಿದ್ದಿದ್ದ. ನಾವು ವಾಪಸ್ಸು ಬಂದೇ ಬರುತ್ತೇವೆ, ನಮ್ಮನ್ನು ನಂಬಿ ಅಂತ ಇಷ್ಟೊಂದು ಗೋಗರೆದು ವೀಸಾ ಪಡೆಯಬೇಕೆ? ಈ ಪರಿಯ ಕಷ್ಟ ಪಟ್ಟು ಅವರ ಒಂದು ಸೀಲಿಗೆ ಕಾಯಬೇಕೆ? ಇಲ್ಲಿ ವೀಸಾ ಸಿಕ್ಕಿತೆಂದ ಮಾತ್ರಕ್ಕೆ ಆ ದೇಶಕ್ಕೆ ಹೋದಾಗ ಒಳಗೆ ಬಿಡುವರೆಂಬ ಭರವಸೆಯೂ ಇಲ್ಲಾ. ಯಾವುದೋ ಕಾರಣಕ್ಕೆ ಅವರಿಗೆ ಬೇಡವೆನಿಸಿದರೆ,  ಅಮೇರಿಕಾ ಪ್ರವೇಶಿಸುತ್ತಿದ್ದಂತೆಯೇ ಭಾರತಕ್ಕೆ ವಾಪಸ್ಸು ಕಳಿಸುವ ಸಾಧ್ಯತೆಗಳೂ ಇರುತ್ತವೆ. ಮೂವತ್ತಕ್ಕೂ ಹೆಚ್ಚು ಗಂಟೆಗಳ ಕಾಲ ಪಯಣಿಸಿ ಮತ್ತೆ ಅಷ್ಟೇ ಗಂಟೆಗಳ ಪ್ರಯಾಣ ಮಾಡಿ ವಾಪಸ್ಸು ಬರುವುದೆಂದರೆ? ಅದೇನು ತಮಾಷೆಯೇ? ಇಷ್ಟೆಲ್ಲಾ ಕಾರಣಗಳಿಂದ ತಾನು ಆ ದೇಶಕ್ಕೆ ಯಾಕೆ ಹೋಗಬೇಕು ಅನ್ನುವ ಪ್ರಶ್ನೆ ಅವನಲ್ಲಿ ಬಲವಾಗಿ ಕಾಡತೊಡಗಿ ಅಲ್ಲಿಗೆ ಹೋಗುವದೇ ಬೇಡವೆನಿಸಿತವನಿಗೆ. ಬಾಸ್ ಗೆ ಏನೋ ಒಂದು ನೆಪ ಹೇಳಿ ತಪ್ಪಿಸಿಕೊಳ್ಳುವುದೆಂದು ನಿರ್ಧರಿಸಿದ.    

ಹೀಗೆ ತೀರಾ ಯೋಚನೆಯಲ್ಲಿ ಮಗ್ನನಾದವನನ್ನು ಮಗಳು ತಿವಿದು ಎಚ್ಚರಿಸಿ ಕೇಳಿದಳು 

'ಅಪ್ಪಾ ಅಲ್ಲಿ ಸ್ನೋ ಇರ್ತದ ಅಂತ ಹೇಳಿದ್ದ್ಯಲ್ಲಾ? ಎಷ್ಟ ಮಜಾ ಬರ್ತದ. ನಂಗ ಸ್ನೋ ದಾಗ ಆಡಲಿಕ್ಕೆ ಕರಕೊಂಡು ಹೋಗ್ತಿಯಲ್ಲಾ?'

ಇವನು ಅದಕ್ಕೆ ಏನು ಹೇಳುವುದೆಂದು ತಿಳಿಯದೇ ಪೇಚಾಡುತ್ತಿರುವಾಗಲೇ  ಜಾನು  

'ಅಂತೂ ವೀಸಾ ಸಿಕ್ತು. ಎಲ್ಲಾರಿಗೂ ಫೋನ್ ಮಾಡಿ ಹೇಳಬೇಕು.  ಇನ್ನೂ ಏನೂ ಪ್ಯಾಕಿಂಗ್ ಮಾಡಿಲ್ಲಾ. ಭಾಳ ಕೆಲಸಾ ಬಾಕಿ ಅವ ….' ಅಂತ ತನ್ನ ಉಳಿದಿರುವ ಕೆಲಸಗಳ ಪಟ್ಟಿ ಮಾಡತೊಡಗಿದಳು.  

ಅದರರ್ಥ, ಜಾನು ಮತ್ತು ಮರಿ ಜಾನು ಇಬ್ಬರೂ ಅಲ್ಲಿಗೆ ಹೋಗುವುದಕ್ಕೆ ಆಗಲೇ ಸಿದ್ಧರಾಗಿದ್ದರು. ಅವರ ಉಮೇದಿ ಕಂಡು ವೆಂಕಣ್ಣನಿಗೆ ಆಶ್ಚರ್ಯವಾಗಿತ್ತು.  ಅವರಿಗೋಸ್ಕರವಾದರೂ ತನ್ನ 'ಅಲ್ಲಿಗೆ ಹೋಗುವುದು ಬೇಡಾ' ಅನ್ನುವ ನಿರ್ಧಾರ ಬದಲಿಸಲೇ ಬೇಕಾಗಿತ್ತು. ಅವರಿಗೂ ಬೇರೊಂದು ದೇಶವನ್ನು ನೋಡಿದಂತಾಗುತ್ತೆ. ಅಲ್ಲದೇ ತಾನೊಬ್ಬ ಕೋಪದಿಂದ ಅಲ್ಲಿಗೆ ಹೋಗದಿದ್ದರೆ ಆ ದೇಶಕ್ಕೇನು ವ್ಯತ್ಯಾಸವಾದೀತು? ಅಲ್ಲಿಗೆ ಹೋಗಲು ಇನ್ನೂ ಒಂದೆ ವಾರ ಬಾಕಿ ಇತ್ತು. ಯಾವುದೇ ತಯ್ಯಾರಿಗಿಂತಲೂ ಮಾನಸಿಕವಾಗಿ ಸಿಧ್ಧವಾಗುವುದು ಅತೀ ಮುಖ್ಯವಾಗಿತ್ತು. ಕಾರಿನ ಡೆಕ್ಕಿನಲ್ಲಿ ಚೆನ್ನೈ ಎಕ್ಸ್ಪ್ರೆಸ್ಸ್ ಸಿನೆಮಾದ "ರೆಡಿ ಸ್ಟೆಡಿ ಪೊ ಪ್ಪೊ ಪ್ಪೊ ಪ್ಪೊ" ಹಾಡು ಸಾಂದರ್ಭಿಕವೆನಿಸುತ್ತಿತ್ತು!    

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

27 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ನವಿರಾದ ಹಾಸ್ಯ ಬೆರೆಸಿ ವಾಸ್ತವವನ್ನು ಪ್ರಸ್ತುತ ಪಡಿಸಿದ್ದೀರಾ. ಬರಹ ಚೆಂದವಾಗಿ ಮೂಡಿ ಬಂದಿದೆ. ಧನ್ಯವಾದಗಳು ಕುರ್ತಕೋಟಿ & ಸಾಧ್ಯವಾದರೆ ಪ್ರತಿವಾರ ಬರೆಯಿರಿ.

ಗುರುಪ್ರಸಾದ ಕುರ್ತಕೋಟಿ

ಪ್ರಿಯ ಅಖಿಲೇಶ, ನಿಮ್ಮ ಪ್ರೋತ್ಸಾಹದಾಯಕ ಅನಿಸಿಕೆಯನ್ನು ಓದಿ ಖುಷಿಯಾಯ್ತು! ವಾರಕ್ಕೊಮ್ಮೆ ಬರೆದರೆ ಬೋರು ಹೊಡಿಸಿಬಿಡುತ್ತೇನೇನೊ ಅನ್ನುವ ಭಯ ಇದೆ 🙂

ಮೂರ್ತಿ
ಮೂರ್ತಿ
9 years ago

ಚೆಂದದ ಲೇಖನ. ತಮ್ಮ ಅಮೇರಿಕಾ ಅನುಭವದ ಕಥಗಳ ಮಾಲಿಕೆ ಪ್ರಾರಂಭವಾಗುತ್ತಿದೆ ಎಂಬುದನ್ನು 'ರೆಡಿ ಸ್ಟೆಡಿ ಪೋ' ಎನ್ನುವ ಶೀರ್ಷಿಕೆಯಡಿ ಸೂಚ್ಯವಾಗಿ ತಿಳಿಸಿದ್ದೀರಿ. ಪ್ರವಾಸಕಥನವನ್ನು ತೆಳು ಹಾಸ್ಯದ ಕಥೆಯರೂಪದಲ್ಲಿ ಹೇಳುವ ಹೊಸ ಪ್ರಯತ್ನ ಸ್ವಾಗತಾರ್ಹ. Vasco da Gama has boarded the boat. Let’s enjoy his voyage through Gringo land of America !! 

ಗುರುಪ್ರಸಾದ ಕುರ್ತಕೋಟಿ

ಮುರ್ತಿ ಬಾವಾ, ನಿಮ್ಮ ಅನಿಸಿಕೆಗಳನ್ನು ಓದೋಕೆ ನನಗೆ ಖುಷಿ, ಧನ್ಯವಾದಗಳು! ಒಟ್ಟಿನಲ್ಲಿ 'ಗುರು' ವನ್ನು (ವಾಸ್ಕೊಡಿ)ಗಾಮಾ ಮಾಡಿ ದೊಡ್ಡ ಜವಾಬ್ದಾರಿ ತಲೆ ಮೇಲೆ ಹೊರೆಸಿದಿರಿ ಅಂತಾಯ್ತು 🙂

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಗುರು,  ಆಧಾರ, ಕಷ್ಟಮಾರಾರ್ಯಾ….ಪದಗಳ ಬಳಕೆ ಸೂಕ್ತ ಮತ್ತು ಪಂಚ್ ನಂತಿವೆ… ಬರಹ ಚೆನ್ನಾಗಿದೆ……

ಗುರುಪ್ರಸಾದ ಕುರ್ತಕೋಟಿ

ಅಮರ್ ಭಾಯ್, ಧನ್ಯವಾದಗಳು! ನಾನು ತುಂಬಾ ಇಷ್ಟ ಪಟ್ಟು ಬರೆದ 'ಪಂಚ್' ಗಳನ್ನು ನೀವು ಗುರುತಿಸಿದ್ದು ಮತ್ತು ಮೆಚ್ಚಿದ್ದು ಕೇಳಿ  ಖುಷಿಯಾಯ್ತು.

Ambika
Ambika
9 years ago

Tumba chennagide Guru:)

ಗುರುಪ್ರಸಾದ ಕುರ್ತಕೋಟಿ
Reply to  Ambika

ಅಂಬಿಕಾ, ಲೇಖನವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

ಜೆ.ವಿ.ಕಾರ್ಲೊ
ಜೆ.ವಿ.ಕಾರ್ಲೊ
9 years ago

ವೀಸಾಕ್ಕಾಗಿ ಚೆನ್ನಯ್ ನ ಧಗೆಯಲ್ಲಿ ಕ್ಯೂ ನಿಂತಿರುವ ಕುರಿತು ಕೇಳಿದ್ದೆ. ನಿಮ್ಮ ಬರಹದಲ್ಲಿ ಪ್ರತ್ಯಕ್ಷ ನಿಂತ ಹಾಗಾಯ್ತು.

ಗುರುಪ್ರಸಾದ ಕುರ್ತಕೋಟಿ

ಹೌದು ಕಾರ್ಲೊ ಸರ್, ನಾನದನ್ನು ಪ್ರಮಾಣಿಸಿಯೂ ನೋಡಿದ್ದೇನೆ :). ಧನ್ಯವಾದಗಳು!

Veeresh
Veeresh
9 years ago

ಏನಪಾ ನಿನ್ನದ ಕಥೆ ಬರದಿದಿಯ. ಕೋಳಿ ಕೇಳಿ ಮಸಾಲೆ ಅರಿಯೋದು ಸಾಂಬಾರ್ ಅಲ್ಲ  🙂 

ಗುರುಪ್ರಸಾದ ಕುರ್ತಕೋಟಿ
Reply to  Veeresh

ಗೆಳೆಯಾ ವೀರೇಶ, ನೀನು ನನ್ನ ಲೇಖನ ಓದಿದ್ದು ನೋಡಿ ಖುಷಿ ಆತು! ಇದು ನನ್ನ ಕಥಿ ಅನ್ನೊಕಿಂತಾ ನನ್ನ-ನಿನ್ನಂಥವರ ಕಥಿ ಅನ್ನಬಹುದು :). 'ಸಾಂಬಾರ' ಅಂದ್ರ 'ಮಸಾಲಾ ಪದಾರ್ಥ' ಅಂತನೂ ಅರ್ಥ ಅದ ಅನ್ನೋದು ನನ್ನ ತಿಳುವಳಿಕೆ

Manju Bannur
9 years ago

ಸಖತ್ ಆಗಿದೆ ಪ್ರಸಾದ್ ! ಪಾರ್ಟ್ ೨ ಶುರು ಮಾಡಿ

ಗುರುಪ್ರಸಾದ ಕುರ್ತಕೋಟಿ
Reply to  Manju Bannur

ಪ್ರಿಯ ಮಂಜು, ಪ್ರೀತಿಯಿಂದ ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು! ಎರಡನೇ ಭಾಗ ಬರೆಯುವ ಪ್ರಯತ್ನ ಖಂಡಿತ ಮಾಡುವೆ.

ವನಸುಮ
9 years ago

ಸೂಪರಾಗಿದೆ.

ಗುರುಪ್ರಸಾದ ಕುರ್ತಕೋಟಿ

ಪ್ರಿಯ ಗಣೇಶ, ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!

ಶ್ರೀನಿವಾಸ್ ಪ್ರಭು

ಆಫೀಸಿನಲ್ಲಿ ಬಾಸ್ ಬಕ್ರಾ ಮಾಡುವ ಪರಿ, ವಿಸಾಕ್ಕಾಗಿ ದಿನವಿಡೀ ಪರದಾಡುವ ರೀತಿ, ಅಷ್ಟು ಕಷ್ಟ ಪಟ್ಟು ಅಮೆರಿಕಾದ ಏರ್ ಪೋರ್ಟ್ ನಿಂದ ಚಡ್ಡಿ ಜಾರಿಸಿ ವಾಪಾಸ್ ಕಳುಹಿಸಿದರೆ? ಎಂಬ ಯಾತನೆ – ಇದೇ ಅಲ್ಲವೆ ಇಂದಿನ ಬದುಕಿನ ಬವಣೆ. ಬರೆದಿಟ್ಟರೆ ಓದುಗರಿಗೆ ಕಥೆ-ಅನುಭವಿಸಿದವರಿಗೆ ವ್ಯಥೆ! ಚೆನ್ನಾಗಿದೆ ಬರಹ ಮುಂದುವರಿಸಿ. 

ಗುರುಪ್ರಸಾದ ಕುರ್ತಕೋಟಿ

ಪ್ರಿಯ ಶ್ರಿನಿವಾಸ್, ಹೌದು, ಅವರಿಗೆ ಚೆಲ್ಲಾಟ, ಅನುಭವಿಸುವವರಿಗೆ ಪ್ರಾಣ ಸಂಕಟ! ಬರಹವನ್ನು ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!

Lakshmi
Lakshmi
9 years ago

swanta anubhavana guruprasadare? lekhana tumba chennagide 🙂

ಗುರುಪ್ರಸಾದ ಕುರ್ತಕೋಟಿ
Reply to  Lakshmi

ಲಕ್ಷ್ಮಿ, ಲೇಖನವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು! ಈ ಕಥೆ ನನ್ನ ಅನುಭವದಿಂದ ಪ್ರೇರಿತವಾಗಿದ್ದು ಅಷ್ಟೆ. ನನಗಿಂತಲೂ ಮೊದಲೇ ಬೇಗನೆ ಎದ್ದು, ನನ್ನ ಊಟದ ಡಬ್ಬಿಯನ್ನೂ ತಯಾರಿಸಿಡುವ ನನ್ನ ಅನ್ನಪೂರ್ಣೆಶ್ವರಿಯ ಬಗ್ಗೆ '…ಅವಳು ಇನ್ನೂ ಎದ್ದಿರಲಿಲ್ಲ' ಅಂತ ಬರೆದು, ಇದು ನನ್ನ ಅನುಭವ ಅಂತ ಘೋಷಿಸಿದರೆ, ನನ್ನ ಪಾಡೆನಾದೀತು? 🙂

vitthal Kulkarni
vitthal Kulkarni
9 years ago

ಮಸ್ತ ಅದ ಗುರು…  ಓದಿ ಖುಷಿಯಾತು! ಮುಂದ ಯೆನ್ ಹೇಳತಿರಿ ಅಂತ ಕಾಯಲಿಖತ್ತಿನಿ…

ಗುರುಪ್ರಸಾದ ಕುರ್ತಕೋಟಿ

ಗೆಳೆಯಾ ವಿಟ್ಠಲ್, ಅಭಿಮಾನದಿಂದ ಓದಿ ಮೆಚ್ಚಿಕೊಂಡಿದ್ದಕ್ಕೆ ಖುಷಿಯಾಯ್ತು! ಮುಂದಿನ ಭಾಗ ಬರೆಯಲು ಇಷ್ಟು ಪ್ರೋತ್ಸಾಹ ಸಾಕು! 🙂

Anant
Anant
9 years ago

ಕಷ್ಟದ' ವೀಷಯವನ್ನು ಓದಲು ಇಷ್ಟವಾಗುವಂತೆ ಬರೆದಿದ್ದಿರಿ, ಲೇಖನ ತುಂಬಾ ಚೆನ್ನಾಗಿದೆ….

ಗುರುಪ್ರಸಾದ ಕುರ್ತಕೋಟಿ
Reply to  Anant

ಪ್ರಿಯ ಅನಂತ್, ಪ್ರೀತಿಯಿಂದ ಓದಿ ಬರಹವನ್ನು ಇಷ್ಟಪಟ್ಟಿದ್ದು ಕೇಳಿ  ಖುಷಿಯಾಯ್ತು! ಧನ್ಯವಾದಗಳು.

ಬದರಿನಾಥ ಪಲವಳ್ಳಿ

Eat ಮಸ್ತ್ ಬರ್ಗರೂ..

ಗುರುಪ್ರಸಾದ ಕುರ್ತಕೋಟಿ

ಬದರಿ ಭಾಯ್, ಓದಿ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು!

27
0
Would love your thoughts, please comment.x
()
x