ವಿಚ್ಚೇದನಾ ಪ್ರಕರಣ ಕಾರ್ಯಕ್ರಮದ ನಂತರ: ಅಮರ್ ದೀಪ್ ಪಿ.ಎಸ್.

ಚೆಂದನೆಯ ಕಥಾವಸ್ತುವುಳ್ಳ ಸಿನೆಮಾಗಳು ಹಿಂದೆ  ನೂರು ದಿನ ಪ್ರದರ್ಶನ ಕಾಣುವುದು ಮಾಮೂಲಾಗಿತ್ತು. ಸತತ ಇಪ್ಪತ್ತೈದನೇ ವಾರ, ಐವತ್ತನೇ ವಾರ,  ಒಂದು ವರ್ಷ,  ಎರಡು ವರ್ಷದ ದಾಖಲೆ ಪ್ರದರ್ಶನದ ಸಂಭ್ರಮ.  ಮೊನ್ನೆ ಮೊನ್ನೆ ಒಂದು ಹಿಂದಿ ಸಿನೆಮಾ ಬರೋಬ್ಬರಿ ಒಂದು ಸಾವಿರ ವಾರ ಪ್ರದರ್ಶನ ಕಂಡು ಅದೇ ಸಿನಿಮಾದೊಂದಿಗೆ ಆ ಸಿನಿಮಾ ಥಿಯೇಟರ್ ಮುಚ್ಚಲಾಯಿತು. ಇತ್ತೀಚಿನ ಸಿನೆಮಾಗಳು ವಾರಗಳ ಲೆಕ್ಕದ ಬದಲು ದಿನದ ಲೆಕ್ಕದಲ್ಲಿ ಪ್ರದರ್ಶನ ಕಂಡ ಬಗ್ಗೆ   “ಇಪ್ಪತ್ತೈದನೇ ದಿನ”  “ಐವತ್ತನೇ ದಿನ” “ನೂರನೇ ದಿನ” ಪೋಸ್ಟರ್ ಗಳನ್ನು ಹಚ್ಚುವುದನ್ನು ನೋಡುತ್ತಿದ್ದೇವೆ. ವ್ಯವಹಾರಿಕವಾಗಿ  ವಾರೊಪ್ಪಿತ್ತಿನಲ್ಲಿ ಚಿತ್ರಗಳ ಹೂಡಿಕೆಯ ದುಡ್ಡಿನ ಫಸಲು ಅಥವಾ ಫೈಸಲ್ಲಾಗಿರುತ್ತವೆ. ಆದರೆ, ಚಿತ್ರ ಪ್ರದರ್ಶನಗಳು?  ಅವು ಕೇವಲ ಕೆಲವೇ ದಿನಗಳಿಗೆ ಸೀಮಿತವಾಗಿರುತ್ತವೆ. ಕೆಲವು ಚಿತ್ರಗಳೂ ನಿಜಕ್ಕೂ ಚೆನ್ನಾಗಿರುತ್ತವೆ. ಆದರೆ, ಟೀವಿ ಚಾನಲ್ ಗಳ ಹಾವಳಿಯಲ್ಲಿ ಅವಕ್ಕೂ ದುರ್ಬರ ಪರಿಸ್ಥಿತಿ.  

ಅದೇ ರೀತಿ ಈ ದಾಂಪತ್ಯದ ವಿಚಾರಕ್ಕೆ ಬಂದರೆ,  ಹಳೇ ಕಾಲದ ಮಂದಿ ವಯಸ್ಸಾಗಿ ಒಬ್ಬಿಗೊಬ್ಬರು ಕಾಣದಂಥ ಮಂಜುಗಣ್ಣಾದರೂ ಕನಿಷ್ಠ ಎಪ್ಪತ್ತರಿಂದ  ಎಂಭತ್ತು ವರ್ಷ ಆಯಸ್ಸು ಅನುಭವಿಸಿ ಅದರ ಮಧ್ಯೆ ಅರವತ್ತು ವರ್ಷ ತುಂಬಿದ ದಾಂಪತ್ಯದ ಸಂತೋಷವನ್ನೂ ಮದುವೆಯ ಐವತ್ತನೇ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳೊಂದಿಗೆ ಖುಷಿ ಹಂಚಿಕೊಂಡವರಿರುತ್ತಾರೆ. ಈಗಿನ ಮದುವೆಗಳಿಗೆ, ಸಂಬಂಧಗಳಿಗೆ, ದಾಂಪತ್ಯಕ್ಕೆ ಆಯುಷ್ಯವೇ ಕಡಿಮೆಯಾಗಿದೆ.  ದಿನನಿತ್ಯದ ಸುದ್ದಿಗಳಲ್ಲಿ ನಾವು ಓದಿರುವಂತೆ ಸುಶಿಕ್ಷಿತ ವರ್ಗದಲ್ಲೇ ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ.  ದಾಂಪತ್ಯ ಜೀವನ ವರ್ಷಗಳ ಲೆಕ್ಕದಲ್ಲಿ ತಪ್ಪಿ ದಿನಗಳ ಲೆಕ್ಕದಲ್ಲೂ ಆಯುಷ್ಯವನ್ನು ಇಳಿಸಿಕೊಂಡಿದೆ. 

ಮೂರು ದಿನದ ಕೆಳಗೆ ಸ್ನೇಹಿತರೊಬ್ಬರು ತಮ್ಮ ಹದಿನಾರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದರು.  ತುಂಬಾ ಸ್ನೇಹಿತರು ಅವರ ದಾಂಪತ್ಯ ಜೀವನದ ಹದಿನಾರನೇ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು.   ಅದರಲ್ಲೊಬ್ಬ ಅವಿವಾಹಿತ “ವಾಹ್,  ಹದಿನಾರನೇ ವರ್ಷದ ವಾರ್ಷಿಕೋತ್ಸವನಾ? ಸರ್, ಅಭಿನಂದನೆಗಳು” ಅಂತ ಕಾಮೆಂಟ್ ಹಾಕಿದ್ದರು. ಅವರ ಕುತೂಹಲ ಮತ್ತು ಭಾವನೆ ವ್ಯಕ್ತಪಡಿಸುವ ಚಿಹ್ನೆ ಹೆಂಗಿತ್ತೆಂದರೆ, ಕೆಲವೇ ವಾರಗಳಲ್ಲಿ ಅಥವಾ ಒಂದೆರಡು ವರ್ಷಗಳಲ್ಲಿ ಪ್ರೀತಿ, ಮದುವೆ, ವೈವಾಹಿಕ ಜೀವನ, ದ್ರೋಹ, ವಿಚ್ಛೇದನಗಳನ್ನು ಕಂಡು ಮತ್ತೊಂದು ಮೆಟ್ಟಿಲ ತುದಿಗೆ ನಿಂತು ಗದ್ದಕ್ಕೆ ಕೈ ಕೊಟ್ಟು ಯೋಚಿಸುವವರ ಮಧ್ಯೆ ಇವತ್ತಿನ ದಿನಮಾನದಲ್ಲಿ ಹದಿನೈದಿಪ್ಪತ್ತು ವರ್ಷ ದಾಂಪತ್ಯ ಜೀವನ ಕಳೆದು ಆ ವೈವಾಹಿಕ ಸಂಭಂಧ ಉಳಿದಿದ್ದರೆ, ಅದೇ ದೊಡ್ಡ ಸಾಧನೆ ಎನ್ನುವಂತಿತ್ತು. ಅದಕ್ಕೆ ಪ್ರತಿಯಾಗಿ ಇವರು “ಹೌದು ಸ್ವಾಮಿ ಹದಿನಾರು ವರ್ಷ, ಒಬ್ಳೇ ಹೆಣ್ತಿ ಜೊತೆ ಸಂಸಾರ, ಭಾರತ ದೇಶದಲ್ಲಿ ಇದೂ ಸಾಧ್ಯ” ಅಂತ ತಮಾಷೆ ಮಾಡಿದ್ದರು.

ದಿನಾ ಬೆಳಕರುದ್ರೇ ಸಾಕು, ಸುದ್ದಿ ಮಾಧ್ಯಮಗಳಲ್ಲಿ ಅಲ್ಲಿ ಕೊಲೆ ಇಲ್ಲಿ ಅಪಘಾತ, ಮತ್ತೆಲ್ಲೋ ಅತ್ಯಾಚಾರ. ಹಸಿಗೂಸಿನೊಂದಿಗೆ ತಾಯಿಯ ಆತ್ಮಹತ್ಯೆ ಬರೀ ಇಂಥವೇ. ರಾಜಕೀಯ ಸುದ್ದಿಗಳು, ಅದರ ಮಧ್ಯೆ ಒಂದೊಂದು ಸುದ್ದಿಯನ್ನು ಹಿಂಗೂ ಓದಿಕೊಳ್ಳುತ್ತಿರುತ್ತೇನೆ; “ಪತ್ನಿಯಿಂದ ತನ್ನ ಸ್ವಂತ ಪತಿಯ ಕೊಲೆ” ಅಂತ.  ಅಪರೂಪಕ್ಕೆ ಬೇರೆ ಚಾನಲ್ ತಿರುವಿದರೆ, ಅಹಾ…. ಢಾಳಾಗಿ ಮೇಕಪ್ ಮಾಡಿಕೊಂಡು ಮಿರಿಮಿರಿ ಮಿಂಚುವ ಸೀರೆ ಸುತ್ತಿಕೊಂಡು ಬರುತ್ತಿರುವ ಹೆಂಗಸರು ಇನ್ನೇನು ಅವ್ರು ಯಾವ್ದೋ ಕಾರ್ಯಕ್ರಮಕ್ಕೆ ಹೊಂಟಂಗೆ ಅಂದ್ಕೋಬೇಕು, ಸೀದಾ  ಬಂದು ಅಡುಗೆ ಮನೆಯಲ್ಲಿ ಸೌಟು ಹಿಡಿದು ತಿರುವುತ್ತಾರೆ.  ಸಂಜೆ ಆಫೀಸ್ ಕೆಲಸ ಮುಗಿಸಿ ಮನೆಗೆ ಬಂದು ಹೆಣ್ತಿಗೆ ಒಂದು ಕಪ್ಪು ಕಾಫಿ ಮಾಡ್ಕೊಡು ಅಂದ್ರೆ “ಶ್ರೀರಸ್ತು ಶುಭಮಸ್ತು” ಧಾರವಾಹಿಗೆ ಜೋತು ಬಿದ್ದಿರುತ್ತಾಳೆ. ಫ್ರೆಶ್ ಆಗಿ ಗದರಿದ ಮೇಲೆ “ಜೊತೆ ಜೊತೆಯಲಿ”  ಅಂತ ಎರಡು ಕಾಫಿ ಕಪ್ಪು ಎದುರಿಗಿರುತ್ತವೆ.  

ಮೊನ್ನೆ ಒಂದಿನ ಯಾವುದೋ ವಾಹಿನಿಯಲ್ಲಿ ಮಧ್ಯಾಹ್ನ ವಿಶೇಷ ಕಾರ್ಯಕ್ರಮ ಬರ್ತಾ ಇತ್ತು. ವಿಷಯ “ಕೌಟುಂಬಿಕ ದೌರ್ಜನ್ಯ ನಿಯಂತ್ರಣಾ ಕಾಯ್ದೆ”ಯ ದುರ್ಬಳಕೆ ಕುರಿತಾಗಿತ್ತು.  ಈ ಕಡೆ ಆ್ಯಂಕರ್, ಎದುರಗಡೆ ಒಬ್ಬರು ವಕೀಲರು, ಪಕ್ಕದಲ್ಲಿ ತಾಯಿ ಮತ್ತು ವಿಚ್ಚೇದಿತ ಮಗ.  ಆ ಕಾಯ್ದೆಯಿಂದ ಪೇಚಿಗೆ ಸಿಲುಕಿ ಬದುಕಿನ ಅವಾಂತರಗಳನ್ನು ಕಂಡು, ಅನುಭವಿಸಿ ಕೋರ್ಟು ಮೆಟ್ಟಿಲೇರಿ ಹದಿನಾಲ್ಕು ವರ್ಷ ಕಳೆದ ನಂತರ ದುಬಾರಿ ವಿಚ್ಚೇದನ ಪಡೆದ ಪುರುಷ. ಈ ಪ್ರಕರಣದಲ್ಲಿ ಪತಿ ವಿರುದ್ಧ ಕೇಸು ದಾಖಲಿಸಿದ ಪತ್ನಿ ಇನ್ನೊಂದು ವಿವಾಹವಾಗುತ್ತಾಳೆ.  ಪತಿ ಈ ಪ್ರಕರಣದ ಅಂತ್ಯ ಕಾಣುವವರೆಗೂ ಅಥವಾ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯುವವರೆಗೂ ಇನ್ನೊಂದು ಮದುವೆ ಆಗುವಂತಿಲ್ಲ. ದಾಂಪತ್ಯ ಜೀವನದಲ್ಲಿ ಭಾಗಿಯಾಗದೇ ಪತಿಯನ್ನು ಬಿಟ್ಟು ತೊರೆದ ಪತ್ನಿಯೊಬ್ಬಳು ಸಾಕ್ಷಿ, ಪುರಾವೆ ಇಲ್ಲದೇ ದಾಖಲಿಸಿದ ಕೌಟುಂಬಿಕ ದೌರ್ಜನ್ಯ ಪ್ರಕರಣವಿದಾಗಿತ್ತು.  ಇಂಥ ಪ್ರಕರಣಗಳಲ್ಲಿ ಆರೋಪಿಯು ತಾನೇ ತನ್ನ ಸಾಚಾತನ, ಪ್ರಮಾಣಿಕತೆ, ಗುಣನಡತೆ ಮತ್ತು ಒಳ್ಳೇತನಗಳನ್ನು ಕೋರ್ಟಿಗೆ ಸಾಬಿತುಪಡಿಸಬೇಕಾಗುತ್ತದೆ.  ಕಡೆಗೂ ತಾನು ನಿರಪರಾಧಿ ಎಂದು ಈ ಪ್ರಕರಣದಲ್ಲಿ ಪತಿ ಸಾಬೀತುಪಡಿಸಿ ವಿಚ್ಛೇದನ ಪಡೆಯುವ ಹೊತ್ತಿಗೆ ಹದಿನಾಲ್ಕು ವರ್ಷ ಕಳೆದಿರುತ್ತವೆ. ಅಲ್ಲಿಗೆ ಒಂದು ಸುಳ್ಳು ಕೇಸು ಒಬ್ಬನ ಹದಿನಾಲ್ಕು ವರ್ಷದ ಜೀವನವನ್ನು ಹಾಳುಗೆಡವಿರುತ್ತದೆ, ಜೊತೆಗೆ ದುಡಿಯುವ  ಉಮ್ಮೇದಿ ಚೈತನ್ಯವನ್ನೂ.  ಅದಕ್ಕೂ ಮೂರು ದಿನ ಮುಂಚೆ ಗಂಡನೇ ವಿಚ್ಛೇದನ ಕೇಳಿ ಕೋರ್ಟು ಮಟ್ಟಿಲೇರಿದ್ದರೂ ಮೆಂಟೆನೆನ್ಸ್ ಆದೇಶ ಹೊರಬಿದ್ದ ನಂತರ  ಹೆಂಡತಿಯೊಂದಿಗೆ ಮತ್ತೆ ಒಂದಾಗಿ ಬಂದು ಮಾಧ್ಯಮಗಳೆದುರು ನಿಂತು ನಕ್ಕ ಜೋಡಿ ಕಥೆ ಬಿತ್ತರವಾಗಿತ್ತು.

ಕೈಕಾಲು ಮುಖ ತೊಳೆದು ಟೀವಿ ಮುಂದೆ ಕುಂತು ನನ್ನ ಹೆಂಡ್ತಿಗೆ ಊಟಕ್ಕೆ ತರಲು ಹೇಳಿದೆ.  ನಾನು ಊಟಕ್ಕೆ ಹೋಗೋದಕ್ಕೂ ಮುಂಚೆಯಿಂದ  ಆ ವಿಶೇಷ ಕಾರ್ಯಕ್ರಮ ಪ್ರಸಾರವನ್ನು ಆಕೆ ನೋಡುತ್ತಿದ್ದಳೇನೋ . ಅಡುಗೆ ಮನೆಯಿಂದ ತಟ್ಟೆಯಲ್ಲಿ ನೀಡ್ಕ್ಯಂಡು  ಮುಂದಿಟ್ಟು  “ಅಲ್ನೋಡ್ರೀ ಅಂಥಾ ಹೆಣ್ತಿ ಸಿಗಬೇಕಿತ್ ನಿಮಗಾ  ಆಗ ಗೊತ್ತಾಕಿತ್ತು ಪಜೀತಿ” ಅಂದಳು.  ಮುಖ ನೋಡಿದೆ; ಹುಳ್ಳಗೆ ನಗುತ್ತಿದ್ದಳು.   ಸಡನ್ನಾಗಿ ಕೆಳಗೆ ಸ್ಕ್ರೋಲ್ ಆಗ್ತಿದ್ದ ಸುದ್ದಿ ತೋರಿಸಿದೆ. “ ಸಾಕ್ಷಿ ಸಿಗದೇ ಪೋಲಿಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ ಪತ್ನಿ ಕೊಂದ ಚಾಣಾಕ್ಷ.” ಅಂತ. ಗಪ್ಪಾಗಿ ಕುಂತಳು. ಹೆಂಗಸರಿಗೆ ಒಂದ್ನಮೂನಿ ಕುತೂಹಲಗಳಿರುತ್ತವೆ. “ರೀ, ನಾ ಏನಾರ ಗೊಟಕ್ಕಂದ್ರ ನೀವ್ ಇನ್ನೊಂದು ಮದ್ವಿ ಆಕೀರಾ? ಒಂದ್ವೇಳೆ  ಮದಿವ್ಯಾದ್ರ ಮಕ್ಳುನ್ನ ನನ್ನ ತೌರ್ಮನಿಗೆ ಬಿಡ್ತೀರಾ ಇಲ್ಲಾ ನೀವೇ ಜ್ವಾಪಾನಾ ಮಾಡ್ತೀರಾ?”  ಹೆಂಗರಾ ಯಾಕಾಗ್ಲಿ  ನಾ ಸಾಯೊದ್ರೋಳ್ಗ ಈ ಹಾಳು ಬಾಡ್ಗಿ ಮನಿ ಸಾವಾಸ ಬಿಡಿಸಿ ಸ್ವಂತ ಮನಿ ಕಟ್ಸಿಬಿಡಪ್ಪಾ ಮಾರಾಯಾ ಅಲ್ಲೇ ಸಾಯ್ತೀನಿ ಅಂದಳು.  ಮಧ್ಯಾಹ್ನದ ಸುಡು ಬಿಸಿಲಲ್ಲಿ ಹಸಿದ ಸಂಕಟಕ್ಕೆ ನನ್ನ ಚಿತ್ತ ತಟ್ಟೆ ಮೇಲಿತ್ತು. ಆಕೆ ಮತ್ತೆ ಮುಂದುವರೆಸಿದಳು “ನಂಗೊತ್ತು ಬಿಡ್ರಿ, ನಾನ್  ಸತ್ರ, ನಿಮಗೇನ್ ಕಮ್ಮಿ ಗೌರ್ಮೆಂಟ್ ನೌಕ್ರಿ ಐತಿ, ಎರಡ್ನೇದಾದ್ರೂ ಲಕ್ಷ ವರದಕ್ಷಿಣೆ ಕೊಟ್ಟು ಕನ್ಯಾ ಕೊಡಂಗದಾರೇಳು ಜನ”.   

ಗಂಟಲಿಗೆ  ಅನ್ನದ ಅಗುಳು ಸಿಕ್ಯಂಡು ಕೆಮ್ಮುತ್ತಲೇ “ನೀನು ಅಷ್ಟು ಗಡಾ ಎಲ್ಲಿ ಸಾಯ್ತಿಯೇಳು?  ಹಂಗೇನಾರ ನೀ ಸತ್ರ, ಆಮೇಲೆ ನಾ ಮದ್ವಿ ಆಗೋದು ಬಿಡೋದು ಮುಂದಿಂದು.  ಇಲ್ಲಾ ನಾ ಮದ್ವಿ ಆದೇ ಅಂತಾನಾ ಇಟ್ಗ. ನೀ ಬಂದು ಏನ್ಮಾಡಂಗದೀ?” ಕೇಳಿದೆ.   “ದೆವ್ವಾಗಿ ಗಂಟುಬಿದ್ದು ನಿನ್ ಎರಡ್ನೇ ಹೆಣ್ತಿ ಜೀವ ತಿಂತೀನಿ” ಅಂದುಬಿಟ್ಟಳು, ನನ್ನ ಹೆಣ್ತಿ. ಅಲ್ಲೀಗೇ ಆಕೆ ಸಾಯೋದು ಕನಸಿನ ಮಾತು.  ಸತ್ರೂ ನಮ್ಮನ್ನು ಅದರಲ್ಲೂ ನಾನು ಎರಡ್ನೇ ಮದಿವ್ಯಾಗಿ ಎರಡ್ನೇ ಹೆಣ್ತಿ ಜೊತೆ ನನ್ನೂ ಬದುಕೋಕೆ ಬಿಡೋದು ದೂರದ ಮಾತಾಯಿತು ಬಿಡು ಅಂದುಕೊಂಡು ಸುಮ್ಮನಾದೆ.  

ಊಟ ಮುಗಿಸಿ ಒಂದೈದು ನಿಮಿಷ ಅಡ್ಡಾಗಿ ಮಲಗಿದೆ. ಆ ದಿನವೇನೋ ವಿಶೇಷ ಕಾರ್ಯಕ್ರಮಕ್ಕೆ ಅಂತೂ “ಡೈವೋರ್ಸ್” ಕೊಟ್ಟು ಮುಗಿಸಿದೆವು. ಆದರೆ, ಈ ಡೈವೋರ್ಸ್ ಎನ್ನುವ ಪದ ಮತ್ತು ಪ್ರಸಂಗಗಳು ಪದೇ ಪದೇ ನಮ್ಮ ಮಧ್ಯೆ ಸುತ್ತುತ್ತಿದ್ದವು.   ಒಮ್ಮೊಮ್ಮೆ ಮಕ್ಕಳ ವಿಚಾರದಲ್ಲಿ ಏನಾದ್ರೂ ಏರುಪೇರಾದರೆ, ಸಣ್ಣಗೆ ದುಸುಮುಸು ಮಾಡುತ್ತಿರುತ್ತೇನೆ.  ಆಗ ನನ್ನ ಹೆಣ್ತಿ ಅಡ್ಡ ಬಾಯಿ ಹಾಕಿ ತಡೆಯುವುದಾಗಲೀ ಮಾತಾಡುವುದಾಗಲೀ ಮಾಡಿದರೆ,  ಸಿಟ್ಟಿನಲ್ಲಿ ಬೈಯುವುದು ನನ್ನ ಹಳೇ ಚಾಳಿ. 

ಇದೇ ವಿಚಾರವನ್ನು ನಾನು ಸಿಟ್ಟು ಮರೆತು ತಣ್ಣಗೆ ಕುಂತಾಗ ಮತ್ತೆ ಮತ್ತೆ ನೆನಪಿಸಿ “ಹೆಂಗ್ರಿ, ಸಿಟ್ನ್ಯಾಗ ಮುಖ ಮಾಡೋದು?” ಅಂದು ಆಕೆ ಕಾಲೆಳೆಯುತ್ತಾಳೆ. “ನಾನ್ ಹೇಳಿದ್ ಕೇಳ್ಕಂಡು, ಏನಾದ್ರೂ ಹೇಳೂದಿದ್ರೆ ನಾನ್ ತಣ್ಣಗಿದ್ದಾಗ ಹೇಳಂಗಿತ್ತೂ ಸರೀಹೋತು…. ಇಲ್ಲಾಂದ್ರ ಕಟ್ಟು ಗಂಟು ಮೂಟೆ, ತಗಾ ಡೈವೋರ್ಸು” ಅಂದು ತಮಾಷೆ ಮಾಡುತ್ತಿದ್ದೆ. ಇನ್ನು ಕೆಲವೊಮ್ಮೆ ನಮ್ಮ ಮಗ ತಿಂಡಿ, ಊಟದ ವಿಷಯದಲ್ಲಿ “ಏನಮ್ಮಾ,  ದಿನಾ ಅನ್ನ ಸಾರು, ರೊಟ್ಟಿ ಪಲ್ಯ, ಒಗ್ಗರಣೆ, ಉಪ್ಪಿಟ್ಟು,  ದೋಸೆ, ಇಡ್ಲಿ ಬರೀ ಇವನ್ನೇ ಮಾಡ್ತೀಯಾ, ಬೇರೆ ಏನಾದ್ರೂ ಮಾಡು” ಅಂತ ಜಗಳ ಶುರು ಮಾಡಿಬಿಡುತ್ತಿದ್ದ. ಆಗೆಲ್ಲಾ,  ಅಡುಗೆ ಮನೆಯಿಂದಲೇ ನನಗೆ ಕೇಳಿಸುವಂತೆ “ನಿಮ್ಮಪ್ಪಂಗೆ ಚಲೋsssssತ್ನಾಗಿ ಅಡ್ಗಿ ಮಾಡಾಕೀನ ಕಟ್ಗ್ಯಂಡ್ ಬರಾಕ್ ಹೇಳು, ನೀವು ನಿಮ್ಮಪ್ಪ, ಚಲೋತ್ನಾsssssssಗಿ ಅಡ್ಗೆ ಮಾಡೋವಾಕಿ ಎಲ್ರೂ ಇಲ್ಲೇ ಇರ್ರಿ, ನಾನ್ ನಮ್ಮಪ್ಪನ ಮನೀಗೆ ಹೋಕ್ಕೀನಿ” ಅಂತ ನನ್ನ ಹೆಣ್ತಿ ಅನ್ನೋದೇ ತಡ,  ಪಡಸಾಲೆಯಿಂದ “ಲೇ ಮಗಾ, ಎಣಿಸ್ಲೇ ಮನ್ಯಾಗ ಎಷ್ಟದಾವು ಬ್ಯಾಗು. ಎಲ್ಲಾ ಬ್ಯಾಗಿನಲ್ಲೂ ನಿಮ್ಮಮ್ಮನ ಬಟ್ಟೆ, ಬರೆ ಸಾಮಾನು ಏನಿದವೇ ಎಲ್ಲಾ ತುಂಬಿ ಕೇಕೆ ಹೊಡ್ಕೊಂತ ಬಿಟ್ಟು ಬರ್ತೀನಿ.  ಹನ್ನೆಲ್ಡು ವರ್ಷಾಯ್ತು ಮದಿವ್ಯಾಗಿ, ನಾನೂ ಕಾದು ಕಾದು ಸಾಕಾಯ್ತು ಈಗೋಕ್ತಾಳ,  ಆಗೋಕ್ತಾಳ  ಅಂತ.  ಬರೀ ಮಾತಾಡೋದೇ ಆಗೇತಿ.  ಕುತ್ಗಿ ಹಿಡುದು ದಬ್ಬಿದರೂ ಹೋಗಾಕ್ ತಯಾರಿಲ್ಲ. ಈಗಾದ್ರೂ ಬಿಟ್ಟು ಬಂದ್ರಾತು”  ಹೀಗೆ ನಾನು ಗದರುತ್ತಿದ್ದರೆ, ನನ್ನ ಮಗ ನಮ್ಮಿಬ್ಬರನ್ನೂ ಸಿರಿಯಸ್ ಆಗಿ ನೋಡದೇ ತನ್ನ ಪಾಡಿಗೆ ತಾನು ನಗುತ್ತಾ ಶಾಲೆಗೆ ಹೊರಡಲು ಯೂನಿಫಾರ್ಮ್ ಹಾಕ್ಕೊಂಡು ಬ್ಯಾಗು, ಬೂಟು, ಬುಕ್ಸ್  ಎಲ್ಲಾ ಜೋಡಿಸುತ್ತಿರುತ್ತಾನೆ.

ಒಮ್ಮೆ ಏನಾಗಿತ್ತೆಂದರೆ, ನಾನು ಹೊತ್ತು ತಪ್ಪಿ ಮನೆಗೆ ಊಟಕ್ಕೆ ಬಂದು ಅಡುಗೆ ಇನ್ನೂ ಆಗಿಲ್ಲದ ಸಂಧರ್ಭದಲ್ಲಿ  “ಇನ್ನಾ ಹೊತ್ತಾಗುತ್ತೆ ಅಂದ್ರ,  ಮತ್ತ ನಾ ‘ಆ ಕಡೆ’ ಮನೀಗ್ಯಾರ ಹೋಗ್ಲೇನ್” ಅಂತ ಸೀರಿಯಸ್ಸಾಗಿ ಕೇಳಿದರೆ, ಈಕೆ “ಹ್ಞೂಂ..ಹಂಗಾ ನನಗೂ ನಿಮ್ ಮಕ್ಕಳೀಗೂ ಪಾರ್ಸಲ್ ಕಟ್ಟಿಸಿಕೊಂಡು ಬರ್ರೀ…..” ಅಂದುಬಿಟ್ಟಳು; ಅಷ್ಟೇ ಸಲೀಸಾಗಿ.   “ಇಂಥ ಹೆಣ್ತಿ ಸಿಗೋದು ನನ್ನ ಏಳ್ನೇ ಜನ್ಮದ ಪುಣ್ಯ”  ಅಂತ ನಾನು.    “ಅಲ್ಲಾ,  ಇನ್ನೂ ಆರು ಜನ್ಮ ಬಾಕಿ ಅದಾವು”  ಅಂತ ನನ್ನ ಹೆಣ್ತಿ…..    ಹಂಗಾಗಿ, ನನ್ನ ಬಾಕಿ ಇರುವ  ಆರು ಜನ್ಮದಲ್ಲೂ ನಾನು ಡೈವೋರ್ಸ್ ಕಾಣುವುದು ಸುಲಭದ ಮಾತಲ್ಲ ಅನ್ನುವುದೇ ಈ ಜನ್ಮದಲ್ಲಿ ಬೇಜಾನ್ ದು:ಖ… 

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
ಗುರುಪ್ರಸಾದ ಕುರ್ತಕೋಟಿ

ಅಮರ್ ಭಾಯ್, ವಿವಾಹವೆನ್ನುವುದು ಒಂದು ಪ್ರೇಮದ ಬಂಧ! ಆದರೆ ತುಂಬಾ ಜನರು ಅದನ್ನು 'ಬಂಧನ'ವೆಂದೇ ಬಗೆದು ಅದರಿಂದ ಮುಕ್ತರಾಗಲು ಹೆಣಗುತ್ತಿರುವುದೊಂದು ವಿಚಿತ್ರವಾದರೂ ಸತ್ಯ. ಲೇಖನ ಚೆನ್ನಾಗಿ ಮೂಡಿಬಂದಿದೆ! ಕೊನೆಯ ಅರ್ಧವಂತೂ ಮುದ್ದಣ ಮನೋರಮೆಯರ ಸಂವಾದದಂತೆ ಮುದ ನೀಡಿತು.

ಆರತಿ ಘಟಿಕಾರ್
ಆರತಿ ಘಟಿಕಾರ್
9 years ago

 “ನೀನು ಅಷ್ಟು ಗಡಾ ಎಲ್ಲಿ ಸಾಯ್ತಿಯೇಳು?  ಹಂಗೇನಾರ ನೀ ಸತ್ರ, ಆಮೇಲೆ ನಾ ಮದ್ವಿ ಆಗೋದು ಬಿಡೋದು ಮುಂದಿಂದು.  ಇಲ್ಲಾ ನಾ ಮದ್ವಿ ಆದೇ ಅಂತಾನಾ ಇಟ್ಗ. ನೀ ಬಂದು ಏನ್ಮಾಡಂಗದೀ  ?:)  ನಿಮ್ಮ  ಈ  ಲಾಜಿಕಾಲ್ ಪ್ರಶ್ನೆ   ಬಹಳ  ಹಿಡಿಸಿತು .:) ಅನ್ನುವುದು  ಸುಮ್ನೆ ತಮಾಷೆಗಾಗಿಯೇ  . ನಿಮ್ಮ ಪ್ರೇಮ some-ಭಾಷಣೆ  ಚೆನ್ನಾಗಿದೆ ! ಏನೇ ಅನ್ನಿ  ಈಗೀಗ  ವಿಚ್ಚೇದನ  ಪ್ರಕರಣಗಳು  ಹೆಚ್ಚುತ್ತಿವೆ , ಗಂಡ ಹೆಂಡತಿ  ಪರಸ್ಪರ ತಮ್ಮ  ಅಹಂ ಅನ್ನು  ತಗ್ಗಿಸಿ  , ಹೊಂದಾಣಿಕೆಯನ್ನು ಹಿಗ್ಗಿಸಿ  ನೋಡದ  ಹೊರತು  ದಾಂಪತ್ಯ  ಸೋಗಸಾಗಲಾರದು . ಲೇಖನ  ಸಮಕಾಲಿನ ವಾಗಿದೆ .

kotresh.s
kotresh.s
9 years ago

ಅಮರ್ ಅದ್ಬುತ ಬರಹ. ಮುದ್ದಣ ಮನೋರಮೆಯರ ಸಲ್ಲಾಪದನ್ತಿರುವ ಹೇಳಿಕೆ ನಿಜಕ್ಕು ಸತ್ಯ ಕಣೊ. ಹಾಸ್ಯಬರಹದ ಕೊರತೆ ಕನ್ನಡ ಸಾಹಿತ್ಯದಲ್ಲಿ ಇದೆ ನಿನ್ನ ಶ್ರಮ ಅದರಲ್ಲಿರಲಿ, ಕನ್ನಡದಲ್ಲಿ ಬೆಳೆ.

ravi kumar kn
9 years ago

ಅದ್ಬುತ ಬರಹ.

 

Habeeb
Habeeb
9 years ago

Dear Putta

Excellent article… Keep it up…

Rajshekhar
Rajshekhar
9 years ago

ಯಾಕೆ ಸ್ವಾಮಿ ಹೆಣ್ತಿ ಸರಿಯಾಗಿ ನೋಡ್ತಾ ಇಲ್ವಾ ಗುರುಗಳೇ?

6
0
Would love your thoughts, please comment.x
()
x