ಮನುಷ್ಯನಿಗಿರಲಿ ಮಾನವೀಯತೆ: ತುಳಸಿ ನವೀನ್. ಬೆಂಗಳೂರು

ಮಾನವೀಯತೆಯು ಹುಟ್ಟಿನಿಂದಲೇ ಬರುವಂತದ ಗುಣ. ಆದರೆ ನಾವು ಬೆಳೆಯುವ ಪರಿಸರ,ವ್ಯವಹರಿಸುವ ಜನರು, ಅವರ ಮನಸ್ಥಿತಿಯಿಂದ ಬದಲಾಗುತ್ತಾ ಹೋಗುತ್ತದೆ. ಮುಗ್ಧತೆ ಮಾಯವಾಗಿ ಕುಕೃತ್ಯಕ್ಕೆ ತಿರುಗುತ್ತದೆ. ಮತ್ಸರ,ದ್ವೇಷ ಮನಸ್ಸಿನಲ್ಲಿ ಮನೆಮಾಡುತ್ತದೆ. ಆಸೆ-ದುರಾಸೆ ಲಾಲಸೀತನ ಮೈದಳೆಯುತ್ತದೆ. ನೀವು ಗಮನಿಸಬಹುದು, ಶಾಲಾ-ಕಾಲೇಜಿನಲ್ಲಿ ಪುಟ್ಟಪುಟ್ಟ ಮನಸ್ಸುಗಳು, ಮುಗ್ಧ ಮನಸ್ಸುಗಳೆಲ್ಲವೂ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸ್ವಚ್ಛಂದವಾಗಿ ಸ್ನೇಹಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ. ಪರಸ್ಪರ ಪ್ರೀತಿ, ಸ್ನೇಹ, ಸಹಾಯ ಮಾಡಿಕೊಂಡು ಸಂತೋಷದಿಂದ ಜೀವನ ಕಳೆಯುತ್ತಾ ಇರುತ್ತಾರೆ. ಆ ಮನಸ್ಸುಗಳಲ್ಲಿ ಯಾವುದೇ ಬೇಧಭಾವದ ಕಪ್ಪುಚುಕ್ಕೆಗಳಿರುವುದಿಲ್ಲ. ಅದೇ ಕಾಲೇಜು ಜೀವನದಿಂದ ಹೊರಬಂದ ಮೇಲೆ ಜಾತಿ ಧರ್ಮದ ಹೆಸರಿನಲ್ಲಿ ತನ್ನ ಜೊತೆಗಿದ್ದ ಸ್ನೇಹಿತನನ್ನೇ ಅನುಮಾನಿಸುವ, ಹಂಗಿಸಿ ಮನ ನೋಯಿಸುವ, ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವಂತಹ ಮನಸ್ಥಿತಿಗೆ ಬಂದು ಬಿಡುತ್ತಾರೆ. ಅದಕ್ಕೆಲ್ಲ ಕಾರಣ ಏನು? ಈ ನಮ್ಮ ಸಮಾಜ. ದಯೆ, ಕರುಣೆ, ಪರಸ್ಪರ ಸ್ನೇಹ -ಸಹಕಾರದಿಂದ ಬದುಕಬೇಕಾದುದು ಹಿರಿಯರ ಆಶಯವಾಗಿದೆ. ಈಗಲೂ ಹಿರಿತಲೆಗಳು ಹೇಳುವ ಮಾತು “ಶಾಂತಿ ಮತ್ತು ಪ್ರೀತಿಯಿಂದ ಬದುಕಿರಿ. ಅಮಾಯಕರ ಮೇಲೆ , ಅಸಹಾಯಕ ಮೇಲೆ ಕೊಂಚ ದಯೆ ಕರುಣೆ ಇರಲಿ. ಅವರಿಗೂ ಸಹಾಯ ಮಾಡಿ ಬದುಕಲು ದಾರಿತೋರಿಸಿ, ಜಗಳ ವೈರತ್ವ ಸಲ್ಲ…” ಎಂದು. ಆದರೆ ಜನರು ಎಷ್ಟು ಸ್ವಾರ್ಥಿಗಳೆಂದರೆ ಒಬ್ಬನಿಗೆ ಏನಾದರೂ ಕಷ್ಟವಾದಾಗ ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ. ಈಗಿನ ಪರಿಸ್ಥಿತಿ ಹೇಗಾಗಿದೆ ಎಂದರೆ ರಸ್ತೆಯಲ್ಲಿ ಅಪಘಾತಗಳಾದರೆ ಅದನ್ನು ಫೋಟೋ ತೆಗೆಯುತ್ತಲೋ ಇಲ್ಲ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಲೋ ನಿಲ್ಲುವರು ವಿನಃ, ಅಪಘಾತಕ್ಕೀಡಾದವರ ರಕ್ಷಣೆಗೆ , ಪ್ರಥಮ ಚಿಕಿತ್ಸೆಗೆ ಮುಂದಾಗುವುದಿಲ್ಲ. ಶೋಕೀತನ, ‘ಯಾರಿಗೇನಾದರೆ ನನಗೇನು?’ ಎನ್ನುವ ಉಢಾಫೆತನ ಮೈಮನದಲ್ಲಿ ತುಂಬಿಸಿಕೊಂಡಿರುತ್ತಾರೆ. ಅವರಲ್ಲಿನ ಮಾನವೀಯತೆ ಮೌಲ್ಯ ಸತ್ತಿರುತ್ತದೆ.

ಇನ್ನೂ ಕೆಲವರದ್ದು ‘ಮಾನವೀಯತೆ’ ಯು ಭಾಷಣದಲ್ಲೇ ಮುಗಿದುಬಿಡುತ್ತದೆ. ರಾಜಕೀಯದ ದಾಳವಾಗಿ ಜನರ ಉಪಯೋಗಿಸುತ ಜಾತ್ಯಾತೀತರಾಗಿರಬೇಕು, ಮಾನವೀಯತೆಯ ಮೆರೆಯಬೇಕು ಎಂದು ಭಾಷಣ ಮಾಡಿ ಕೈತೊಳೆದುಕೊಳ್ಳುತ್ತಾರೆ. ನೀವು ಗಮನಿಸಿದ್ದೀರಾ, ಬಡವರು, ಇಲ್ಲ ಹೆಚ್ಚು ತಿಳಿದಿರುವವರು ಈ ಸಮಾಜದಲ್ಲಿ ಹೇಯಕೃತ್ಯಗಳ ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ. ಬಡವರಿಗೆ ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ಯಾರು ಬೇಕಾದರೂ ಹಣದ ಆಸೆ ತೋರಿಸಿ ಕುರಿಗಳನ್ನಾಗಿ ಮಾಡಬಹುದು. ಅಲ್ಲದೇ ಸಮಾಜಕ್ಕೆ ಘಾತುಕರಾಗಿ ಅವರ ಮನಃಪರಿವರ್ತಿಸಬಹುದು. ಕೋಮುಗಲಭೆ ಎಬ್ಬಿಸುವ ಅಸ್ತ್ರವಾಗಿ ಬದಲಾಯಿಸಬಹುದು. ಇನ್ನು ಅತೀ ಬುದ್ಧಿವಂತರು, ವಿದ್ಯಾವಂತರೆನಿಸಿದವರಿಗೆ ಈ ಸಮಾಜದ ಯಾವ ನಡತೆಗಳೂ ಸರಿ ಕಾಣದು. ಹಾಗಾಗಿ ಅವರೇ ಬದಲಾಯಿಸಲು ಮುಂದೆ ಹೋಗಿ ಅನೇಕ ದುಷ್ಟಶಕ್ತಿಗಳಾಗಿ ಬದಲಾಗಿ ಈ ಸಮಾಜಕ್ಕೆ ದುಷ್ಪರಿಣಾಮ ಬೀರಬಹುದು.

ಇದಕ್ಕೆಲ್ಲ ಪರಿಹಾರ: ಸಣ್ಣ ವಯಸ್ಸಿನಿಂದಲೇ ಮಕ್ಕಳ ಬೆಳವಣಿಗೆಯಲ್ಲಿ , ಅವರ ಮನೋಬಲದ ಅಭಿವೃದ್ಧಿಗಾಗಿ ಪೋಷಕರು ಮತ್ತು ಪರಿಸರವು ಹಾಗೂ ಈ ಸಮಾಜವು ಮುತುವರ್ಜಿ ವಹಿಸಬೇಕಾದುದು. ಕಾರಣ, ಕಲೆ, ಸಾಹಿತ್ಯ, ಪುಸ್ತಕ, ವಿಜ್ಞಾನ, ಕೃಷಿ ಇತ್ಯಾದಿಗಳ ವಿಚಾರವೇ ಇಲ್ಲದೆ ಈಗಿನ ಮಕ್ಕಳು ಬೆಳೆಯುತ್ತಿದ್ದರೆ, ಅವರ ಮನಸ್ಸನ್ನು ಮೌಢ್ಯ ಕವಿಯುತ್ತದೆ. ಮನುಷ್ಯ ಬೆಳೆಯುವುದು, ಅವನ ಮನಸ್ಸು ವಿಕಾಸಗೊಳ್ಳುವುದು ನಿಸರ್ಗದ ಮಡಿಲಲ್ಲಿ, ಪುಸ್ತಕಗಳ ಸಂಪರ್ಕದಲ್ಲಿ. ಕೇವಲ ತಿನ್ನುವ ಉಣ್ಣುವ ಮನುಷ್ಯ, ಮಾನವೀಯವಾದ ಮಾತಿನ ಮಹತ್ವ ಅರಿಯದ ಮನುಷ್ಯ, ಸಂಸ್ಕೃತಿ ಎಂದರೇನೆಂಬುದನ್ನು ಪೂರ್ಣವಾಗಿ ತಿಳಿದುಕೊಳ್ಳದ ಮನುಷ್ಯ ಪ್ರೀತಿಯೆಂದರೇನೆಂದು ಅನುಭವದ ಮೂಲಕ ಅರ್ಥ ಮಾಡಿಕೊಳ್ಳುವ ಬದಲು ಭೌತಿಕ ಸಾಧನಗಳನ್ನು ಅಥವಾ ಒಂದಷ್ಟು ಭೂಮಿ, ಒಂದಷ್ಟು ಹಣ ಕೂಡಿಟ್ಟು ಅದರಲ್ಲಿ ಸಂತೋಷವನ್ನು ಕಾಣಬಯಸುವ ಮನುಷ್ಯ ,ಮೌಲ್ಯಯುತವಾದುದನ್ನು ಎಂದೂ ಗುರುತಿಸಲಾರ. ಅಲ್ಲದೇ ಕಾಮುಕ, ಮೋಹಿಯಾಗಿ ಹೆಣ್ಣು, ಹಣದ ಆಸೆಗೆ ಬಿದ್ದು ಮೃಗಗಳಂತೆ ವರ್ತಿಸುತ್ತಾನೆ. ಅಮಾನವೀಯ, ಹೇಯಕೃತ್ಯಗಳ ಎಸಗುತ್ತಾನೆ. ಹೆಣ್ಣಿನ ಮೇಲಾಗುವ ದೌರ್ಜನ್ಯ, ಅತ್ಯಾಚಾರ, ಭ್ರಷ್ಟಾಚಾರ ಕಡಿಮೆಯಾದಂತೆ ಎಲ್ಲವೂ ಸರಿಯಾಗುತ್ತಾ ಹೋಗುತ್ತದೆ. ಈಗಿನ ಯುವಕರಲ್ಲಿ ಜೇಬು ತುಂಬಾ ಹಣ, ಓಡಾಡಲು ಬೈಕು, ಸಾಮಾಜಿಕ ಜಾಲತಾಣ, ಅಂತರ್ಜಾಲದಲ್ಲಿ ಬರುವ ಮನಸ್ಸಿಗೆ ದುಷ್ಪರಿಣಾಮ ಬೀರುವ ಕೆಲವು ಚಾನೆಲ್ ಗಳು,ಸೈಟುಗಳು, ಸ್ಮಾರ್ಟ್ ಫೋನ್ ಗಳು, ಮೊಬೈಲ್ ಗಳು ಇವೆಲ್ಲದರಿಂದ ಮಕ್ಕಳ ಯುವ ಜನತೆಯ ಮೇಲೆ ಮಾರಕ ಪರಿಣಾಮ ಬೀರುತ್ತಲಿದೆ. ಸತ್ಚಿಂತನೆ ಮಾಡುವ ಮನೋಭಾವವೇ ದೂರವಾಗಿದೆ. ಈ ಸಮಾಜದ ಬೆಳವಣಿಗೆಗೆ ತನು ಮನ ಧನ ಸಹಾಯದ ಅಗತ್ಯವಿದೆ. ಅಂದರೆ ಕಷ್ಟಕ್ಕೆ ಸಹಾಯ ಮಾಡುವುದು, ಹಣದ ಮೂಲಕವೋ ಇಲ್ಲ ತಾವೇ ಮುಂದಾಗಿ ಸಹಾಯ ಮಾಡುವುದು. ಅಲ್ಲದೆ ಉತ್ತಮ ವಿಚಾರವುಳ್ಳ , ಇನ್ನೊಬ್ಬರಿಗೆ ಒಳಿತನ್ನು ಬಯಸುವ ಮನಸ್ಸನ್ನು ಹೊಂದಿರುವುದು. ಇಲ್ಲಿ ಎಲ್ಲರೂ ಸಮಾನರು. ಎಲ್ಲರನ್ನೂ ಪ್ರೀತಿಸುವ ಗೌರವಪೂರ್ವಕವಾಗಿ ನೋಡುವ ಗುಣ ಬೆಳೆಸಿಕೊಂಡರೇನೆ ಮಾನವೀಯತೆಯ ಮೌಲ್ಯ ಎತ್ತಿಹಿಡಿಯಬಹುದು. ಸಮಾಜವು ಸ್ವಾಸ್ಥ್ಯಪೂರ್ಣವಾಗಿರುತ್ತದೆ. ದೇಶವೂ ಅಭಿವೃದ್ಧಿಯಾಗುತ್ತದೆ.

– ತುಳಸಿ ನವೀನ್. ಬೆಂಗಳೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x