ಮಹಾ ಶರಣ ಹರಳಯ್ಯ: ಜಯಶ್ರೀ ಭ ಭಂಡಾರಿ


ಮಹಾ ಶರಣ ಹರಳಯ್ಯ ಪಾರಪಯ್ಯ ಹೊನ್ನಮ್ಮ ದಂಪತಿಗೆ ದವಣದ ಹುಣ್ಣಿಮೆಯೆಂದು ಬಿಜಾಪೂರ ಜಿಲ್ಲೆಯ ಕಲಿಗೂಡು ಎಂಬಲ್ಲಿ ಜನಿಸಿದರು. ಆ ಮನೆತನ ಇಂದಿಗೂ ಹರಳಯ್ಯನ ಮಠ ಎಂದು ಗುರುತಿಸಲ್ಪಡುತ್ತದೆ. ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದಾರೆ. ಬಾಯಿಂದ ಬಂದ ಮಾತು ದಿಟವಾಗುವಂತ ಮಹಾನ ಚೇತನಶಕ್ತಿ ಹರಳಯ್ಯನದಾಗಿತ್ತು. ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ಇಡೀ ಬಡಾವಣೆಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಮಳೆ ತರಿಸಿದ್ದರು, ತನ್ನ ಪ್ರದೇಶದ ರಾಜನಿಗೆ ಹಾವು ಕಚ್ಚಿದಾಗ ತಮ್ಮ ಶಕ್ತಿಯಿಂದ ಬದುಕುಳಿಯುವಂತೆ ಮಾಡಿದ್ದರು ಎಂಬ ಅನೇಕ ಪವಾಡ ಕಥೆಗಳಿವೆ. ಲೋಕ ಕಲ್ಯಾಣಕ್ಕಾಗಿ ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ಹಲವಡೆ ಸಂಚಾರ ಮಾಡಿ ಅವರು ಸ್ಥಾಪಿಸಿದ 34 ಕೇಂದ್ರಗಳು ಇಂದು ಪವಾಡ ಕ್ಷೇತ್ರಗಳಾಗಿವೆ. ಹರಳ ಪೂಜೆಯ ಫಲವಾಗಿ ಜನಿಸಿದ ಶರಣನೇ ಹರಳಯ್ಯ ಎಂದು ಹಾಡುತ್ತಾರೆ.

ಉತ್ತರ ಕರ್ನಾಟಕದ ಭಾಗದಲ್ಲಿ ಇಂದಿಗೂ ವಿಜೃಂಭನೆಯಿಂದ ಅವರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ “ದವಣದ ಹುಣ್ಣಿಮೆ ದಿನ ಬಂತು ಧರೆ ದೇವ ಹರಳಯ್ಯ ಧರೆಗೆ ಬಂದಾನೊ” ಜನಪದದಲ್ಲಿ ಶರಣ ಹರಳಯ್ಯನ ಜನನವನ್ನು ಈ ರೀತಿ ಪದ ಕಟ್ಟಿ ಹಾಡುತ್ತಾರೆ. ಯಾವ ವ್ಯಕ್ತಿ ಸಮಾಜಕ್ಕೆ ಜೀವನವನ್ನು ಕಾಣಿಕೆಯಾಗಿ ನೀಡುತ್ತಾನೊ ಆತನೇ ಮಹಾತ್ಮ ಎನ್ನಲಿಕ್ಕೆ ಶರಣ ಹರಳಯ್ಯ ಆದರ್ಶಪ್ರಾಯ. 12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ಅತ್ಯಂತ ಹಿರಿಯ ಮತ್ತು ಸಮರ್ಥ ಸಿದ್ಧಿಯೋಗಿ, ಸಂಕಲ್ಪಸಾಧಕ ಶರಣೆನಿಸಿಕೊಂಡು ಸಮಗಾರ ಹರಳಯ್ಯ ಬಸವಧರ್ಮವನ್ನು ಎತ್ತಿ ಹಿಡಿದು ಮಹಾಮಾನವತಾವಾದಿ ಶರಣನೆನಿಸಿದವರು.

ಬಿಜ್ಜನಹಳ್ಳಿ ಗುಲಬರ್ಗಾ ಜಿಲ್ಲೆಯ ಸೇಡಂ ತಾಲೂಕಿನಲ್ಲಿಯ ಒಂದು ಚಿಕ್ಕ ಗ್ರಾಮ. ಆದರೆ ಈ ಹಳ್ಳಿಯಲ್ಲಿರುವ ಪ್ರತೀಕಾತ್ಮಕ ಮೌಲ್ಯವುಳ್ಳ ಹಿರಿದಪ್ಪ ವಸ್ತುವೊಂದರ ಪ್ರಭಾ ವಲಯದಲ್ಲಿ ಅಲ್ಲಿಯ ಜನ ಜೀವಿಸುತ್ತಿದ್ದಾರೆ. 12ನೇಯ ಶತಮಾನದಲ್ಲಿ ನಡೆದ ಕ್ರಾಂತಿಯ ಕುರುಹಾದ ಶರಣ ಹರಳಯ್ಯ – ಕಲ್ಯಾಣಮ್ಮ ಇವರು ಜಗಜ್ಯೋತಿ ಬಸವೇಶ್ವರರಿಗೆ ಅರ್ಪಿಸಿದ ಪುಣ್ಯಕರವಾದ ಪಾದುಕೆಗಳು ಬಿಜ್ಜನ ಹಳ್ಳಿಯಲ್ಲಿ ಇಂದಿಗೂ ಪೂಜೆಗೊಳ್ಳುತ್ತಿರುವದು ಕಲ್ಯಾಣ ಕ್ರಾಂತಿಯ ಕುರುಹಾಗಿದೆ.

ರಾಷ್ಟ್ರಕೂಟ ರಾಜಮನೆತನದ ಅರಸರಿಗೆ ರಾಜಧಾನಿಯಾಗಿದ್ದ ಮಾನ್ಯಖೇಟ (ಈಗ ಅದರ ಹೆಸರು ಮಳಖೇಡ) ನಗರದ ಅಂಚಿನಲ್ಲಿದ್ದ ಹಳ್ಳಿ ಇದು. ಈ ಬಿಜ್ಜನ ಹಳ್ಳಿಯಲ್ಲಿರುವ ಅಮೂಲ್ಯ ವಸ್ತು ಯಾವುದೆಂದರೆ ಒಂದು ಜೊತೆ ಪಾದರಕ್ಷೆಗಳು ಎಂಟನೂರು ವರ್ಷಗಳಿಂದಲೂ ಸಂರಕ್ಷಿಸಲ್ಪಟ್ಟ ಪೂಜೆಗೊಳ್ಳುತ್ತಿರುವ ಈ ಪಾದರಕ್ಷೆಗಳು ಬಸವಣ್ಣವರಿಗಾಗಿ ನಿರ್ಮಿಸಲ್ಪಟ್ಟಂಥ, ಆದರೆ ಬಸವಣ್ಣ ಅವುಗಳನ್ನು ಕಾಲಲ್ಲಿ ಮೆಟ್ಟಿಕೊಳ್ಳದೆ ತಲೆಯ ಮೇಲಿರಿಸಿಕೊಂಡು ಗೌರವಿಸಲ್ಪಟ್ಟಂತ ಪಾದರಕ್ಷೆಗಳು. ಇಂಥ ಅಭೂತಪೂರ್ವ ಗೌರವವು ಒಂದು ಜೊತೆ ಪಾದರಕ್ಷೆಗಳಿಗೆ ದೊರೆತುದು ಬಸವಣ್ಣನವರ ದೀನದಲೀತರ ಏಳಿಗೆಯ ಕೇಂದ್ರಬಿಂದುವಾಗಿರುವಂಥ ಉಚ್ಛತಮ ವಿಚಾರ ಹಾಗೂ ಆ ವಿಚಾರಗಳನ್ನು ಆಚಾರಕ್ಕಿಳುಸುವ ಅವರ ಎದೆಗಾರಿಕೆಗಳ ಪ್ರಭಾವದಿಂದಾಗಿ.

ಗುಲ್ಬರ್ಗಾದಿಂದ 56 ಕೀ.ಮಿ. ಅಂತರದಲ್ಲಿ ಕಾಗಿನಿ ನದಿಯ ದಡದಲ್ಲಿರುವ ಬಿಜ್ಜನಹಳ್ಳಿಗೆ ಈ ಪಾದರಕ್ಷೆಗಳು 12ನೇ ಶತಮಾನದಲ್ಲಿಯೇ ಬಂದು ತಲುಪಿದವು ಈ ಕುರಿತು ಪ್ರಚಲಿತದಲ್ಲಿರುವ ಅಖ್ಯಾಯಿಕೆಯ ಪ್ರಕಾರ ಕಲ್ಯಾಣದಲ್ಲಿ ವಿಪ್ಲವ ಉಂಟಾಗಿ ಬಸವಾನುಯಾಯಿ ಶರಣರೆಲ್ಲ ಚದುರಿಹೋಗುತ್ತಿರುವ ಸಮಯದಲ್ಲಿ ಚನ್ನಬಸವಣ್ಣನವರಿಗೆ ಈ ಪಾದರಕ್ಷೆಗಳ ಸಂರಕ್ಷಣೆಯ ಕುರಿತು ಚಿಂತೆಯುಂಟಾಯಿತು. ಅವರು ಒಬ್ಬ ಶರಣನನ್ನು ಕರೆದು ಈ ಪಾದರಕ್ಷೆಗಳನ್ನು ಅವನಿಗೆ ಒಪ್ಪಿಸಿ, ದಕ್ಷಿಣ ದಿಕ್ಕಿನಲ್ಲಿ ಮೂರು ಹಗಲು ಮೂರು ರಾತ್ರಿ ನಡೆದು ಹೋಗಿ ಆಗ ತಲುಪಿದ ಊರಲ್ಲಿ ಈ ಪಾದರಕ್ಷೆಗಳನ್ನು ಸುರಕ್ಷಿತವಾಗಿ ಇರಿಸಲು ವ್ಯವಸ್ಥೆ ಮಾಡಬೇಕೆಂದು ಆಜ್ಞಾಪಿಸಿದರು. ಈ ರೀತಿ ಬಿಜ್ಜನಹಳ್ಳಿಗೆ ಪಾದರಕ್ಷೆಗಳನ್ನು ತಂದವನ ಹೆಸರು ಗವಿಸಿದ್ದಪ್ಪ ಎಂದು ಹೇಳಲಾಗುತ್ತಿದೆ. ಅವನ ಸಮಾಧಿಯೂ ಈ ಊರಲ್ಲಿ ಇದೆ. ನೆಲಮನೆಯಿಂದ ಕಟ್ಟಡದಲ್ಲಿ ಸಮಾಧಿಯಿದ್ದು ಮೇಲೆ ಚೌಕ ಆಕಾರದ ಕಟ್ಟೆ ಇದೆ.

ಪಾದರಕ್ಷೆಗಳು “ಸೊಲಬ” ಎಂಬ ಹೆಸರಿನ ಮನೆತನದವರ ಸುಪರ್ದಿನಲ್ಲಿವೆ ಅವರಿಂದ ನಿತ್ಯವೂ ಶುಚಿರ್ಭೂತವಾಗಿ ಪೂಜೆ ನಡೆಯುತ್ತಿದೆ. ಆಧುನಿಕ ಕಾಲದಲ್ಲಿ ಒಂದು ಚಿಕ್ಕ ಮಂದಿರವನ್ನು ನಿರ್ಮಿಸಿ ಅದರಲ್ಲಿ ಈ ಪಾದರಕ್ಷೆಗಳನ್ನು ಇಡುವ ವ್ಯವಸ್ಥೆ ಮಾಡಲಾಗಿದೆ. ಅವನ್ನು ಒಂದು ಗಾಜಿನ ಚೌಕೋನಿ ಪೆಟ್ಟಿಗೆಯಲ್ಲಿ ಇಡಲಾಗಿದೆ. ಬೇರಾವ ಜೋಪಾನೆಯ ತಾಂತ್ರಿಕ ವ್ಯವಸ್ಥೆ ಇಲ್ಲದೆ ಇದ್ದರೂ ಪಾದರಕ್ಷೆಗಳು ಸುಸ್ಥಿತಿಯಲ್ಲಿ ಇವೆ.

ಈ ಪಾದರಕ್ಷೆಗಳಿಗೆ ಇರುವ ಮಹತ್ವ ಅವು ಯಾರಿಗಾಗಿ ತಯಾರಿಸಲ್ಪಟಂಥವು ಎನ್ನುವುದಕ್ಕೆ ಮಿಗಿಲಾಗಿ ಅವು ಯಾರಿಂದ ಹಾಗೂ ಹೇಗೆ ನಿರ್ಮಾಣಗೊಂಡವು ಎನ್ನವುದರಲ್ಲಿ ಇದೆ. ಈ ಪಾದರಕ್ಷೆಗಳನ್ನು ಬಸವಣ್ಣನವರ ದಲಿತ ಭಕ್ತರೊಲ್ಲೊಬ್ಬರಾದ ಸಮಗಾರ ಹರಳಯ್ಯ ಹಾಗೂ ಅವನ ಪತ್ನಿ ಕಲ್ಯಾಣಮ್ಮ ಅವರು ತಮ್ಮ ತೊಡೆಗಳಿಂದ ಸುಲಿದು ತೆಗೆದ ಚರ್ಮವನ್ನು ಜೋಡಿಸಿ ತಯಾರಿಸಿದ್ದರು ಈ ನಿರ್ಮಿತಿಗೆ ಹಿನ್ನಲೆಯಾಗಿ ಇರುವ ಕಥೆ ಹೀಗಿದೆ;

ಹರಳಯ್ಯ ಒಂದುಸಲ ಎದುರಿಗೆ ಬರುತ್ತಿರುವ ಬಸವಣ್ಣನವರನ್ನು ಕಂಡು ‘ಶರಣಾರ್ಥಿ’ ಎಂದ ಅದಕ್ಕೆ ಪ್ರತಿಯಾಗಿ ಬಸವಣ್ಣ ಹರಳಯ್ಯನಿಗೆ ‘ಶರಣುಶರಣಾರ್ಥಿ’ಎಂದುಬಿಟ್ಟರು. ಸಾಮಾನ್ಯ ಹೀನಕುಲ-ಕಸುಬಿನವನಾದ ತನಗೆ ಬಸವಣ್ಣ ಎರಡುಸಲ ಶರಣಾರ್ಥಿ ಎಂದರಲ್ಲಾ ಎಂದು ಹರಳಯ್ಯನ ಮನಸ್ಸಿನಲ್ಲಿ ಕಳವಳ ಉಂಟಾಯಿತು. ನೊಂದ ಮನಸ್ಥಿತಿಯಲ್ಲಿ ಗೂಡಿಗೆ ಮರಳಿದ ಹರಳಯ್ಯನ ಖಿನ್ನ ಮುಖಚರ್ಯೆಯನ್ನು ಕಂಡು ಗಾಬರಿಗೊಂಡ ಕಲ್ಯಾಣಮ್ಮ ಏನಾಯಿತೆಂದು ವಿಚಾರಿಸಿದಳು. ಕಾರಣವನ್ನು ತಿಳಿದ ಕಲ್ಯಾಣಮ್ಮ ಬಸವಣ್ಣನವರ ಎರಡು ಶರಣುಗಳ ಋಣದ ಭಾರವನ್ನು ಇಳಿಸಲು ತಮ್ಮೀರ್ವರ ದೇಹದ ಚರ್ಮವನ್ನು ಜೋಡಿಸಿದ ಪಾದುಕೆಗಳನ್ನು ತಯಾರಿಸಿ ಬಸವಣ್ಣನಿಗೆ ಅರ್ಪಿಸುವ ಸಲಹೆಯಿತ್ತಳು. ಕೂಡಲೇ ಕೆಲಸಕ್ಕೆ ಇಳಿದು ಶ್ರದ್ಧೆ, ಭಕ್ತಿ, ಸಮರ್ಪನಾ ಭಾವಗಳಿಂದ ಪ್ರೇರೇಪಿತ ಕಲಾಕುಶಲತೆಯಿಂದ ಅಪೂರ್ವವಾದ ಪಾದುಕೆಗಳನ್ನು ತಯಾರಿಸಿದರು. ನವಿರಾದ ಬಟ್ಟೆಯಲ್ಲಿ ಅವುಗಳನ್ನು ಸುತ್ತಿಕೊಂಡು ಬಸವಣ್ಣನಿಗೆ ಅರ್ಪಿಸಲೆಂದು ಹೊರಟಾಗ ದಾರಿಯಲ್ಲಿ ಮಧುವರಸರು ಎದುರಾಗಿ ಬಲವಂತದಿಂದ ಆ ಪಾದುಕೆಗಳನ್ನು ಮೆಟ್ಟಿಕೊಳ್ಳಲು ಪ್ರಯತ್ನಿಸಿದರು. ಅದರ ಫಲವಾಗಿ ಮೈಯೆಲ್ಲ ಉರಿಯದ್ದು ಪರಿತಪಿಸಿದರು. ಹಾಗೂ ಆ ಪೀಡೆಯನ್ನು ಕಳೆದುಕೊಳ್ಳಲು ಹರಳಯ್ಯನ ಬಚ್ಚಲು ಮನೆಯ ಚರಂಡಿಯ ನೀರನ್ನು ಪ್ರಯೋಗಿಸಬೇಕಾಯಿತು. ಶರಣರ ಮಹತಿಯನ್ನು ಅರಿತು ಅನುಭವಿಸಿ ಮಧುವರಸರೂ ಬಸವಣ್ಣನ ಅನುಯಾಯಿಯಾಗಿ ಶರಣರಾದರು.

ಇತ್ತ ಹರಳಯ್ಯ ತಂದ ಪಾದರಕ್ಷೆಗಳನ್ನು ಕಂಡು ಬಸವಣ್ಣ ವಿಸ್ಮಿತರಾಗಿ ಹರ್ಷೋಲ್ಲಾಸದಲ್ಲಿ ಹರಳಯ್ಯನನ್ನು ಬಿಗಿದಪ್ಪಿ ಶರಣರ ಕುಲಕ್ಕೆ ತಿಲಕ ಪ್ರಾಯನಾದ ನೀನು ನಿರ್ಮಿಸಿ ತಂದ ಈ ಪಾದರಕ್ಷೆಗಳನ್ನು ಕಾಲಲ್ಲಿ ಮೆಟ್ಟಿಕೊಳ್ಳಲು ಯೋಗ್ಯವಾದಂಥವಲ್ಲ ಇವುಗಳ ಸ್ಥಾನ ನನ್ನ ಶಿರಸ್ಸು ಎಂದು ಹೇಳುತ್ತಾ ಅವುಗಳನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡರು. ಈ ಪಾದರಕ್ಷೆಗಳೇ ಇಂದು ಬಿಜ್ಜನಹಳ್ಳಿಯಲ್ಲಿ ನಮಗೆ ನೋಡಲು ದೊರೆಯುವಂತವು. ಈ ಪಾದರಕ್ಷೆಗಳಲ್ಲಿ ಉಪಯೋಗಿಸಿರುವ ಚರ್ಮ ಮಾನವ ಚರ್ಮ ಎಂದು ಡಾ.ತಳ್ಳಳ್ಳಿ ಎಂಬುವರು ನಡೆಸಿದ ಪ್ರಯೋಗ ಶಾಲಾ ಪರೀಕ್ಷೆಯಿಂದ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವೈಜ್ಞಾನಿಕ ಪರೀಕ್ಷೆಗಿಂತ ಹೆಚ್ಚಿನ ಖಚಿತತೆ ಈ ಪಾದರಕ್ಷೆಗಳಿಗೆ ಇರುವುದು ಬಿಜ್ಜನಹಳ್ಳಿಯ ಜನತೆಯ ಮನಸ್ಸಿನಲ್ಲಿಯ ಶ್ರದ್ಧಾಭಾವನೆಯಲ್ಲಿ. ಈ ಜನ ಬಸವಣ್ಣನ ಪಾದರಕ್ಷೆಗಳನ್ನು ತಮ್ಮ ಪ್ರಾಣಕ್ಕೆ ಮಿಗಿಲಾಗಿ ಕಾಪಾಡುತ್ತಿದ್ದಾರೆ. ಕರ್ನಾಟಕದ ಸ್ವಾಮಿಗಳೊಬ್ಬರು ಒಂದು ಲಕ್ಷ ರೂ.ಗಳನ್ನು ಕೊಟ್ಟು ಈ ಪಾದರಕ್ಷೆಗಳನ್ನು ಪಡೆಯಬೇಕೆಂದು ಇಚ್ಚಿಸಿದಾಗ ತಾವು ಅದಕ್ಕೆ ಒಪ್ಪಲಿಲ್ಲ ಎಂದು ಇಲ್ಲಿಯ ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಶ್ರದ್ಧೆಯ ಸಂಕೇತದ ವ್ಯಾಪಾರೀಕರಣದ ವ್ಯಾಮೋಹ ಬಿಜ್ಜನಹಳ್ಳಿಯ ಜನರಲ್ಲಿ ಇಲ್ಲಿಯವರೆಗಂತೂ ಮೂಡಿಲ್ಲ.

ಜನಪದ ಸಾಹಿತ್ಯದಲ್ಲಿ ಮಾತ್ರ ಹರಳಯ್ಯನ ಸಮಗ್ರ ಜೀವನಚರಿತ್ರೆ ಅತೀವ ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಶಿಷ್ಟ ಪ್ರಜ್ಞೆಯಲ್ಲಿ ಮಸುಕಾಗುತ್ತಿರುವ ಸಮತಾ ಕ್ರಾಂತಿಯ ಘಟನೆ ಜನಪದ ಪ್ರಜ್ಞೆಯಲ್ಲಿ ಜ್ವಲಂತವಾಗಿ ಉಳಿದುಕೊಂಡಿದೆ. ಇಂದು ಜನಮನದಲ್ಲಿ ಪ್ರಚಲಿತವಿರುವ ಹರಳಯ್ಯನ ಕಥೆಗೆ ಜನಪದ ಹಾಡುಗಳೇ ಮೂಲಾಧಾರವಾಗಿವೆ.
ಹರಳಯ್ಯನ ಮಗ ಮಧುವರಸರ ಮಗಳ ಮದುವೆಯ ಐತಿಹಾಸಿಕತೆಗೆ 12ನೇ ಶತಮಾನದ ಲಿಖಿತ ಆಧಾರವೇ ಇದೆ. ಸಿದ್ಧರಾಮೇಶ್ವರನ “ಕುಲಧಿಂಬಧಿಕವೆಂದು ಹೋರಾಡುವ ಅಣ್ಣಗಳಿರಾ ಕೇಳಿರಯ್ಯ” ಎಂಬ ವಚನದಲ್ಲಿದೆ ಈ ಆಧಾರ. ಕಥೆ ಹೇಳುವುದಾಗಲೀ ಘಟನೆಯನ್ನು ವಿವರಿಸುವುದಾಗಲೀ ಈ ವಚನದ ಉದ್ದೇಶವಲ್ಲದುದರಿಂದ ಮದುವೆ ಶಬ್ದ ಇಲ್ಲಿ ಬಂದಿರದೆ ಇದ್ದರೂ, ವಿವಾಹಕ್ಕೆ ಸಂಬಂಧಪಟ್ಟ ಜೋಡಿಗಳ ಜತೆಯಲ್ಲಿಯೇ ಹರಳಯ್ಯ-ಮಧುವಯ್ಯಗಳ ಹೆರಸನ್ನು ಎತ್ತಲಾಗಿದೆ. ವಚನದ ಮೂಲ ಆಶಯ ಕುಲದಿಂದ ಯಾರು ಹೆಚ್ಚಿನವಾರಾಗುವುದಿಲ್ಲ ಎಂದು ಪ್ರತಿಪಾದಿಸುವುದೇ ಆಗಿದೆ. ಅಲ್ಲಿ ಉಲ್ಲೆಖಿತವಾದ ಮದುವೆಗಳೆಲ್ಲ ವರ್ಣಸಂಕರದ ಸಂಬಂಧಗಳೇ ಆಗಿವೆ.

ಇಷ್ಟೊಂದು ಐತಿಹಾಸಿಕ ಮಹತ್ವವುಳ್ಳ ಬಿಜ್ಜನಹಳ್ಳಿಯ ಪಾದತ್ರಾಣಗಳು ನಾಡಿನಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿಲ್ಲ ಎಂಬುದು ವಿಷಾದನಿಯ ಸಂಗತಿಯಾಗಿದೆ. ಆ ಸ್ಥಳದಲ್ಲಿಯ ಸಂದರ್ಶಕರ ನೋಟಬುಕ್ಕಿನ ಅವಲೋಕನವು ವ್ಯಥಿತಗೊಳಿಸುವ ಇನ್ನೊಂದು ಸಂಗತಿಯನ್ನು ಹೊರಗೆಡುಹುತ್ತದೆ. ಈ ಸ್ಥಳಕ್ಕೆ ಭೇಟ್ಟಿಕೊಡುವ ಜನರಲ್ಲಿ ಹೆಚ್ಚಿನವರೆಲ್ಲ ಹರಳಯ್ಯನ ಸಮಾಜಬಾಂಧವರೇ ಆಗಿದ್ದಾರೆ. ಬಸವಣ್ಣನ ಸಂಗಾತಿಗಳಾದ ಮಹಿಮಾನ್ವಿತ ಶರಣರು, ಅದರಲ್ಲೂ ಶೂದ್ರ ದಲಿತವರ್ಗದಿಂದ ಬಂದವರು ಅವರವರ ಸಮುದಾಯದ ಆರಾಧ್ಯ ವ್ಯಕ್ತಿಗಳಾಗಿ ದೈವತ್ವಗಳಾಗಿ ಬಿಡುವ ಪ್ರಕ್ರಿಯೆಯ ಪ್ರತ್ಯಯ ಬಿಜ್ಜಳನಹಳ್ಳಿಯಲ್ಲೂ ದೊರೆಯುತ್ತದೆ. ಹೊಸ ಯುಗದ ಹುಟ್ಟಿಗಾಗಿ ತನ್ನನ್ನೆ ಸಮರ್ಪಿಸಿಕೊಂಡ ಮಾನವೀಯ ಮಹೋನ್ನತಿಯ ಬೆಳಗಿನ ಹರಿಕಾರನಾದಂಥ ಹರಳಯ್ಯ ತಾನು ಮೀರಲೆಳೆಸಿದ ಜಾತಿ ಬಂಧನಕ್ಕೆ ಪುನಃ ಎಲೆಯಲ್ಪಟ್ಟುದುದು ದುರಾದೃಷ್ಟಕರ ವಾಸ್ತವವಾಗಿದೆ.

ಸಮತಾ ಸಮಾಜ ನಿರ್ಮಾಣ ಆಂದೋಲನದ ಗೌರವಾರ್ಹ ಕೇಂದ್ರಗಳಾಗಿ ಬಾಗೇವಾಡಿ, ಕೂಡಲಸಂಗಮ ಹಾಗೂ ಬಸವಕಲ್ಯಾಣಗಳು ಮಾತ್ರ ಪ್ರಾಮುಖ್ಯವಾಗಿ ಪ್ರಸಿದ್ಧಿಯನ್ನು ಪಡೆಯುತ್ತಿವೆ. ಹಾಗೆಯೇ ಸಮತಾ ಕ್ರಾಂತಿಯ ಸಂಕೇತವಾಗಿ ಬಿಜ್ಜನಹಳ್ಳಿ ಬೆಳಕಿಗೆ ಬರಬೇಕಾದುದು ಅತ್ಯವಶ್ಯಕವಾಗಿದೆ. ಜತೆಯಲ್ಲಿ ಹರಳಯ್ಯನ ಹೆಂಡತಿ ಕಲ್ಯಾಣಮ್ಮಳ ಸಮಾಧಿ ಇರುವ ತಿಗಡಿ (ಬೆಳಗಾವಿ ಜಿಲ್ಲೆ)ಯೂ ತನ್ನ ಈಗಿನ ಅವಕಳೆಯನ್ನು ಕಳೆದುಕೊಂಡು ಸಮತೆ ಹಾಗೂ ಮಹಿಳಾ ದಾಸ್ಯ ವಿಮೋಚನೆಯ ಸ್ಪೂರ್ತಿ ಸ್ಥಾನವಾಗಿ ಅಭಿವೃದ್ದಿಗೊಳ್ಳುವುದು ಅಗತ್ಯವಾಗಿದೆ. ಸಮಾಜದಲ್ಲಿ ತೀರಾ ಕನಿಷ್ಟರೆಂದು ಕಡೆಗಾನಿಸಲ್ಪಟ್ಟ ವರ್ಗದಿಂದ ಬಂದವರೂ ಕೂಡಾ ಅನುಭಾವದ ಮೇಲ್ಮಟ್ಟಕ್ಕೇರಬೇಕಾದರೆ ಬಸವಣ್ಣನವರು ನಿರ್ಮಾಣ ಮಾಡಿದ ವಾತಾವರಣ ಎಷ್ಟು ದಿವ್ಯ ಹಾಗೂ ಪವಿತ್ರವಾಗಿರಬೇಕೆಂಬುದರ ಅರಿವು ನಮಗಾಗುತ್ತದೆ.
-ಜಯಶ್ರೀ ಭ ಭಂಡಾರಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಮಹಾ ಶರಣ ಹರಳಯ್ಯ: ಜಯಶ್ರೀ ಭ ಭಂಡಾರಿ […]

1
0
Would love your thoughts, please comment.x
()
x