ಹಿಪ್ಪರಗಿ ಸಿದ್ದರಾಮ್ ಅಂಕಣ

ಮತ್ತೊಮ್ಮೆ ‘ವೀರ ಸಿಂಧೂರ ಲಕ್ಷ್ಮಣ’ ದರ್ಶನ: ಹಿಪ್ಪರಗಿ ಸಿದ್ಧರಾಮ

ಸಮೃದ್ಧ ಪರಂಪರೆಯುಳ್ಳ ಇಂಡಿಯಾ ದೇಶದ ಸಾಮಾಜಿಕ ಮತ್ತು ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೇಡೆಯಾದರೆ ಜಾಗೃತ ಯುವಮನಸ್ಸುಗಳು, ಶೋಷಿತರ ಮತ್ತು ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ನಾಡ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರಾಣಾರ್ಪಣೆಗೈದಿದ್ದು ಇನ್ನೊಂದೆಡೆ. ಸುರಪುರ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಮೈಲಾರ ಮಹಾದೇವ, ಹಲಗಲಿಯ ಬೇಡರು, ಸಂಗೊಳ್ಳಿ ರಾಯಣ್ಣ ಹೀಗೆ ಇನ್ನೂ ಅನೇಕ ಅನಾಮಿಕರ ಕಲಿಗಳ ಸಾಲಿನಲ್ಲಿ ನಿಲ್ಲುವ ಹೆಸರು ವೀರ ಸಿಂಧೂರ ಲಕ್ಷ್ಮಣ. ಸ್ವಾತಂತ್ರ್ಯಪೂರ್ವದ ಮಹಾರಾಷ್ಟ್ರದ ಜತ್ತ ಸಂಸ್ಥಾನಿಕರು ಮತ್ತು ಬ್ರಿಟಿಷರ ವಿರುದ್ಧ ಹೋರಾಟ ನಡೆಸುವ ಅದೇ ಸಂಸ್ಥಾನದ ಸಿಂಧೂರ ಗ್ರಾಮದ ಯುವಕ ಲಕ್ಷ್ಮಣನ ಜೀವನ ಕಥೆಯಾಧಾರಿತ ನಾಟಕವನ್ನು ಆಗಿನ ವೃತ್ತಿ ಕಂಪನಿಗಳ ಗಲ್ಲಾಪೆಟ್ಟಿಗೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಾಟಕಕಾರ ಪುಂಡಲೀಕ ದುತ್ತರಗಿಯವರು ಬದುಕಿದ್ದಾಗಲೇ ರಚಿಸಿದ್ದರು. ಹಾಗೆ ರಚಿತಗೊಂಡು ಹಲವಾರು ದಶಕಗಳ ಕಾಲ ವಿವಿದೆಡೆ ಪ್ರದರ್ಶನಗೊಂಡು ಯಶಸ್ವಿಯಾದ ಈ ನಾಟಕವನ್ನು ಇತ್ತೀಚೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹುಬ್ಬಳ್ಳಿ ಮೂಲದ ಶ್ರೀನಟರಾಜ ಕಲಾಬಳಗ(ರಿ) ಕಲಾವಿದರು ಇತ್ತೀಚೆಗೆ (31-10-2019) ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ಸಹಯೋಗದೊಂದಿಗೆ ಹಿರಿಯ ರಂಗಕರ್ಮಿ ಚೆನ್ನಬಸಪ್ಪ ಕಾಳೆಯವರ ನಿರ್ದೇಶನದಲ್ಲಿ ಅಭಿನಯಿಸಿದರು.

ಜನಪ್ರೀಯ ನಾಟಕದ ಈ ಪ್ರಯೋಗದಲ್ಲಿ ವೃತ್ತಿರಂಗಭೂಮಿ ಮತ್ತು ಹವ್ಯಾಸಿ ಕಲಾವಿದರು ತಮ್ಮ ಶಕ್ತ್ಯಾನುಸಾರ ಅಭಿನಯಿಸಿ, ಪ್ರೇಕ್ಷಕರಿಗೆ ನಿರಾಶೆಯಾಗದಂತೆ ನೋಡಿಕೊಂಡರು. ಈ ನಾಟಕಕ್ಕೆ ಅಪ್ಪುರಾಜ್ ಮೇವುಂಡಿಯವರು ಸಂಗೀತ ನೀಡಿದರು. ರಿದಂ ಪ್ಯಾಡ್‍ದಲ್ಲಿ ಆಗಿನ ಕಾಲದ ಧ್ವನಿ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಹೊರಡಿಸಿದವರು ಪ್ರಕಾಶ ದಾವಣಗೇರೆ. ಸಿಂಧೂರ ಲಕ್ಷ್ಮಣನ ಅಬ್ಬರದಲ್ಲಿ ಗೌಡನ ಪಾತ್ರ ಇನ್ನೂ ಕಳೆ ಕಟ್ಟಬಹುದಾಗಿತ್ತು. ಕಟಕ್ ಇನ್ಸಪೆಕ್ಟರ್ ಪಾತ್ರದಲ್ಲಿ ಈರಣ್ಣ ಕರೀಕಟ್ಟಿ ಗಮನ ಸೆಳೆದರು. ಪೇದೆಗಳ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಮಹಾಂತೇಶ ಮತ್ತು ಶೇರಖಾನ ಅವರದು ಮಾಗಿದ ಅಭಿನಯ. ತಂಗಿಯ ಪಾತ್ರದ ಅಭಿನಯ ಪರಿಣಾಮಕಾರಿಯಾಗಿ ಪ್ರಕಟಗೊಳ್ಳಲು ಪ್ರಸಾದನ ಮಾಡಿದ ಶ್ರೀಕಾಂತ ಕುಲಕರ್ಣಿ ಅವರ ಕೈಚಳಕವೂ ಕಾರಣವಾಯಿತು. ವೀರಯ್ಯ ಸ್ವಾಮೀಜಿಯ ಪಾತ್ರದಲ್ಲಿ ಮಕಬೂಲ ಹುಣಶೀಕಟ್ಟಿಯವರದು ಎಚ್ಚರಿಕೆಯ ಮತ್ತು ಜಾಗೃತಾವಸ್ಥೆಯ ಮಾಗಿದ ಅಭಿನಯ. ವೃತ್ತಕಂಪನಿಯ ಕಲಾವಿದೆಯರು ನಿರ್ವಹಿಸಿದ ತಾಯಿ (ರಾಧಿಕಾ ಸಿಗ್ಗಾಂವಿ) ಮತ್ತು ಮೇರಿಯಮ್ಮನ (ಮೀನಾಕ್ಷಿ ಬೈಲಹೊಂಗಲ) ಪಾತ್ರಗಳು ಪ್ರೇಕ್ಷಕರ ಅನುಕಂಪ ಗಿಟ್ಟಿಸಿಕೊಂಡರು. ತಂಗಿ ದುಂಡವ್ವನ ಪಾತ್ರದಲ್ಲಿ ಭಾರತಿ ದಾವಣಗೇರಿ ಅವರದು ಸಂದರ್ಭೋಚಿತ ಅಭಿನಯ. ಸಿಂಧೂರ ಲಕ್ಷ್ಮಣ (ಸಿ.ಎಸ್.ಪಾ.ಕುಲಕರ್ಣಿ) ಮತ್ತು ನಾಲ್ವರು ಸಹವರ್ತಿಗಳ (ರವಿರಾಜ, ಭೀಮನಗೌಡ, ಗುರು, ಶ್ರೀಧರ) ಅಬ್ಬರ, ಕೂಗಾಟಗಳು, ಹಾರಾಟಗಳು ನಾಟಕಕ್ಕೆ ಪೂರಕವಾಗಿದ್ದವು. ಹು-ಧಾ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿರುವ ಸುಭಾಷ ಸಿಂಧೆಯವರು ದುರುಳ ಭೀಮನಗೌಡನ ಪಾತ್ರ ನಿರ್ವಹಿಸುವ ಮೂಲಕ ತಮ್ಮಲ್ಲಿನ ಕಲಾವಿದನನ್ನು ಕಾಪಿಟ್ಟುಕೊಂಡಿರುವುದನ್ನು ಸಾಭೀತು ಮಾಡುವಂತಹ ಅಭಿನಯ ನೀಡಿದರು.

ಕೊನೆಯ ಸನ್ನಿವೇಶದ ಕಪ್ಪರದ ಪಡಿಯವ್ವನ ಗುಡಿಯಲ್ಲಿ ಸ್ವಜನರ ಮೋಸದಿಂದ ವೀರ ಸಿಂಧೂರ ಲಕ್ಷ್ಮಣ (15 ಜುಲೈ 1922) ಬಲಿಯಾಗುವ ದೃಶ್ಯಾವಳಿಯ ಸಂಯೋಜನೆಯು ಪ್ರೇಕ್ಷರ ಗಮನ ಸೆಳೆಯಿತು. ಇಂದಿಗೂ ಪೋಲಿಸರ ದಾಖಲೆಯಲ್ಲಿ ದರೋಡೆಕೋರನಾಗಿ, ಪ್ರಭುತ್ವಗಳ ಚರಿತ್ರೆಯಲ್ಲಿ ಬಂಡುಕೋರನಾಗಿ ದಾಖಲಾದ ವೀರ ಸಿಂಧೂರ ಲಕ್ಷ್ಮಣ ಜನರ ಎದೆಯಲ್ಲಿ ಹುತಾತ್ಮನಾಗಿ, ಜನಪದರ ನಾಲಿಗೆಯಲ್ಲಿ ಲಾವಣಿ, ಗೀಗೀ, ಸಂಪ್ರದಾಯದ ಹಾಡುಗಳ ಮೂಲಕ ಅಮರನಾಗಿದ್ದಾನೆ. ಇಂತಹ ವೀರನ ಕಥಾನಕವನ್ನು ಕರುನಾಡಿನ ರಂಗಭೂಮಿಗೆ ಪಿ.ಬಿ.ದುತ್ತರಗಿ, ಕಂಠಿ ಹನುಮಂತರಾಯರು, ಲಕ್ಷ್ಮಣರಾವ್ ಪುರಿ, ಟಿ.ಕೆ.ಮಹಮ್ಮದಲಿ, ಸಂಗಮೇಶ ಗುರವ ಸೇರಿದಂತೆ ಹಲವಾರು ಮಹನೀಯರು ರಂಗಕೃತಿಯನ್ನು ರಚಿಸಿದ್ದು, ವಾಸ್ತವಿಕತೆಯೊಂದಿಗೆ ಕಾಲ್ಪನಿಕ ದೃಶ್ಯಗಳ ವೈಭವದೊಂದಿಗೆ ವೃತ್ತಿರಂಗಭೂಮಿಯಲ್ಲಿ ಪ್ರಯೋಗಿಸಿದ್ದಾರೆ. ಈ ಮೂಲಕ ಅವರು ವೀರನೊಬ್ಬನ ಕಥೆಯು ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ. ವೃತ್ತಿರಂಗಭೂಮಿಯ ವೈಭವದ ದಿನಗಳಲ್ಲಿ ಗಲ್ಲಾಪೆಟ್ಟಿಗೆ ತುಂಬಿಸಿದ್ದ ಈ ನಾಟಕದ ಪ್ರಯೋಗಗಳಲ್ಲಿ ಅಭಿನಯಿಸಿ ಗುಡಗೇರಿ ಬಸವರಾಜ್, ಸುಧೀರರಂತಹ ಧೀಮಂತ-ಪ್ರಾತಃಸ್ಮರಣೀಯ ಕಲಾವಿದರು ಹೆಸರು ಮಾಡಿದ್ದು ಇದೇ ನಾಟಕದಿಂದ ಎಂಬುದನ್ನು ಹಿರಿಯ ನಾಟಕ ಪ್ರೇಮಿಗಳು ನೆನಪಿಸಿಕೊಳ್ಳುವಂತೆ ಈ ಪ್ರಯೋಗ ಮೂಡಿ ಬಂದಿತು. ಇಂತಹ ನಾಟಕದ ನಿರ್ದೇಶನ ಮಾಡಿದ ಚನ್ನಬಸಪ್ಪ ಕಾಳೆ ಮತ್ತು ಪ್ರಯೊಗ ನೀಡಿದ ಶ್ರೀ ನಟರಾಜ ಕಲಾಬಳಗದ ಕಲಾವಿದರು ಅಭಿನಂದನಾರ್ಹರು. ನಾಟಕದ ಆರಂಭಕ್ಕೂ ಮೊದಲು ವಾಗೀಶ ಭೀಕ್ಷಾವರ್ತಿಮಠ ಅವರ ಜಾದೂ ಕಾರ್ಯಕ್ರಮ ಮತ್ತು ಗುರುಸ್ವಾಮಿ ಹಿರೇಮಠರ ಭರತನಾಟ್ಯ ಪ್ರೇಕ್ಷರನ್ನು ರಂಜಿಸಿದವು.
-ಹಿಪ್ಪರಗಿ ಸಿದ್ಧರಾಮ

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮತ್ತೊಮ್ಮೆ ‘ವೀರ ಸಿಂಧೂರ ಲಕ್ಷ್ಮಣ’ ದರ್ಶನ: ಹಿಪ್ಪರಗಿ ಸಿದ್ಧರಾಮ

Leave a Reply

Your email address will not be published. Required fields are marked *