ದೀರ್ಘಕಾಲದ ಎದೆನೋವು ತಾಳಲಾರದೆ ತತ್ತರಿಸಿ ಹೋಗಿದ್ದ ನೀಲಜ್ಜನಿಗೆ ಕಳೆಯುವ ಒಂದೊಂದು ನಿಮಿಷವೂ ಒಂದೊಂದು ಘಳಿಗೆಯಾಗುತ್ತಿದೆ. ಆಸರೆಯಾಗಬೇಕಾದ ಮಕ್ಕಳು ಹೊಟ್ಟೆಪಾಡಿನ ಕೆಲಸ ಅರಸಿ ಪಟ್ಟಣ ಸೇರಿದ್ದರು. ಊರುಗೋಲಾಗಬೇಕಾಗಿದ್ದ ಪತ್ನಿಯೂ ತೀರಿಹೋಗಿದ್ದಳು. ತಲತಲಾಂತರದಿಂದ ಬಂದಿದ್ದ ಕಂಬಳಿ ನೇಯುವ ಕಾಯಕವನ್ನು ಮಕ್ಕಳು ನೆಚ್ಚಿರಲಿಲ್ಲ. ಈ ಕೊರಗೂ ನೀಲಜ್ಜನಿಗಿತ್ತು. ಗಂಡು ಮಕ್ಕಳು ಪಟ್ಟಣ ಸೇರಿದರೇನಂತೆ ಮಗಳು ರುಕ್ಮಿಣಿ ಪಾದರಸದಂತೆ ಮನೆಯಲ್ಲಿ ಓಡಾಡಿಕೊಂಡು ಅಪ್ಪನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಳು. ರುಕ್ಮಿಣಿ ಅಪ್ಪನ ಜೊತೆ ಇರುವುದರಿಂದ ಗಂಡು ಮಕ್ಕಳು ಅಪ್ಪನ ಬಗ್ಗೆ ಚಿಂತೆ ಮಾಡುತ್ತಿರಲಿಲ್ಲ. ಆದರೆ ಆರು ತಿಂಗಳ ಹಿಂದೆ ರುಕ್ಮಿಣಿಯ ವಿವಾಹ ಮಾಡಿಕೊಟ್ಟಿದ್ದರು. ಅಲ್ಲಿಂದ ನೀಲಜ್ಜನಿಗೆ ಜೀವನವೇ ದುಸ್ತರವೆನಿಸಿತು. ಈ ಇಳಿ ವಯಸ್ಸಿನಲ್ಲಿ ಅವನ ಕಷ್ಟ ಹೇಳತೀರದು. ಅವನು ಕಳೆದ ಎಷ್ಟೋ ದಿನಗಳಲ್ಲಿ ಹಸಿವಿನಿಂದ ಇದ್ದ ದಿನಗಳೇ ಹೆಚ್ಚು. ಅಪ್ಪ ಒಬ್ಬನೇ ಇರುವುದು ಬೇಡವೆಂದು ಮಗಳು ರುಕ್ಮಿಣಿ ತನ್ನ ಗಂಡನ ಊರು ರಾಮದುರ್ಗಕ್ಕೆ ಕರೆದೊಯ್ಯಲು ಪ್ರಯತ್ನಿಸಿದರೂ ನೀಲಜ್ಜ ಹುಟ್ಟಿ ಬೆಳೆದ ಮನೆ ಬಿಟ್ಟು ಹೋಗಲು ಸುತಾರಾಂ ಒಪ್ಪಲಿಲ್ಲ.
ನೀಲಜ್ಜನಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಕೂಡಾ ಪರದೇಸಿಯಂತೆ ಬದುಕಬೇಕಾದ ಸ್ಥಿತಿ ಬಂದೊದಗಿದೆ. ಅಪ್ಪನನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಲು ಮಕ್ಕಳು ತೋರಿಕೆ ಪ್ರೀತಿಯಿಂದ ಕರೆದಿದ್ದು ಕರುಳಿಗೆ ಗೊತ್ತಾಗಿ ಒಲ್ಲೆ ಎಂದನು. ಭಾವುಕ ಜೀವಿ ನೀಲಜ್ಜ ತಾನು ಇನ್ನೊಬ್ಬರಿಗೇಕೆ ಭಾರವಾಗಬೇಕು ಎಂದುಕೊಳ್ಳುತ್ತಿದ್ದ. ನೀಲಜ್ಜ ಮನೆಯಲ್ಲಿ ನರಳಾಡುತ್ತಾ ಮಲಗಿರುವಾಗ ಅಕ್ಕಪಕ್ಕದ ಮನೆಯವರು ನೀಲಜ್ಜನನ್ನು ನೋಡಲು ಬರುತ್ತಿದ್ದರು. ಬಂದವರು ಅವನಿಗೆ ಹಿತವಾಗುವುದನ್ನು ಬಿಟ್ಟು ಅವನ ಮನಸ್ಸಿಗೆ ನೋವುಂಟಾಗುವ ಮಾತುಗಳನ್ನಾಡುತ್ತಿದ್ದರು. ಬರಿ ಮಾತಿನ ಅವರ ಅನುಕಂಪ ಅವನಿಗೆ ಹಿಡಿಸದಿದ್ದರೂ ಅವರ ಮುಂದೆ ಎಂದೂ ಕಣ್ಣೀರಿಟ್ಟವನಲ್ಲ. ಕಾರಣ ನೀಲಜ್ಜನಿಗೆ ಗೊತ್ತು ತಾನು ತಿರಸ್ಕೃತನಲ್ಲವೆಂದು. ತನ್ನ ಹಠಕ್ಕೆ ತನಗೆ ಈ ಸ್ಥಿತಿ ಬಂದೊದಗಿದೆ ಎಂಬರಿವು ಆತನಿಗಿತ್ತು. ಯಾರೋ ಒಬ್ಬರು ನೀಲಜ್ಜನ ಆಪ್ತರು ಈ ವಿಷಯವನ್ನು ನೀಲಜ್ಜನ ಹಿರಿಮಗ ಸುರೇಶನಿಗೆ ಕಾಗದ ಬರೆದು ತಿಳಿಸಿದರು. ಸುರೇಶ ತನ್ನ ತಂದೆಯ ಸ್ಥಿತಿಯ ಬಗ್ಗೆ ಅರಿತು ಕಣ್ಣೀರಿಟ್ಟ. ಕಾಗದ ತಲುಪಿದ ಮರುದಿನವೇ ಎರಡು ದಿನ ಶಿರಸಂಗಿಗೆ ತನ್ನ ಹೆಂಡತಿ-ಮಕ್ಕಳನ್ನು ಕರೆದುಕೊಂಡು ಬಂದನು.
ಸುರೇಶ ಬಂದಿರುವುದನ್ನು ನೀಲಜ್ಜನ ಕರುಳರಿಯಿತು. ಸುರೇಶನು ಮನೆಗೆ ಬಂದವನೆ ತಂದೆಯನ್ನು ಬಾಚಿ ತಬ್ಬಿ ಬಿಕ್ಕಿಬಿಕ್ಕಿ ಅತ್ತನು. ನೀಲಜ್ಜನ ಕಣ್ಣಲ್ಲೂ ನೀರು ಬಂದಿತು. “ನಿನಗ ಮೊದಲ ಹೇಳೀನಿ, ನಡಿ ನಮ್ಮ ಜೋಡಿ ಇಲ್ಲಿ ಊಟಕ್ ತ್ರಾಸ್ ಅಕ್ಕೇತ್ಯಂತ. ಈಗ ನೋಡ ಊರಾನ ಮಂದಿ ಕಡಿಂದ ಹೇಳ್ಸಗೋಂಗಾತ್” ಅಂತ ಸುರೇಶನು ನೀಲಜ್ಜನನ್ನು ಗದರುತ್ತಾ ಕಣ್ಣೀರಿಟ್ಟ. ಸುರೇಶನ ಹೆಂಡತಿಯೂ ಕೂಡಾ, “ವಯಸ್ಸಾದ ಮುದುಕನ್ನ ಮಕ್ಕಳು ನೋಡವಲ್ರು ಅಂತಾ ಊರಾನ ಮಂದಿ ಆಡಕೋಳಾತೈತಿ” ಅಂತಾ ಮಾವನನ್ನು ಬುದ್ಧಿ ಹೇಳುವ ತೆರದಲ್ಲಿ ಗದರಿದಳು. ನೀಲಜ್ಜನು ಮಾತ್ರ ಅವರ ಮಾತುಗಳನ್ನು ಕೇಳಿಯೂ ಕೇಳದವನಂತೆ ಮೊಮ್ಮಗನನ್ನು ಕರೆದು ತಬ್ಬಿ ಮುದ್ದಾಡಲು ಹೋದಾಗ ಅಜ್ಜನ ಪರಿಚಯವಿರದ ಮೊಮ್ಮಗ ಅಳಲಾರಂಭಿಸಿತು. ಆಗ ಸುರೇಶನ ಹೆಂಡತಿ ಮಗನನ್ನು ಎತ್ತಿಕೊಂಡು ಸಮಾಧಾನ ಮಾಡಲು ಮನೆಯ ಹಿತ್ತಲಿಗೆ ಹೋದಳು. ಅದೇ ವೇಳೆಯಲ್ಲಿ ನೀಲಜ್ಜ ಸುರೇಶನ ಕಡೆ ಮುಖಮಾಡಿ, “ಎಷ್ಟ ದಿನಾ ಸೂಟಿ ತುಗೊಂಡ್ ಬಂದಿದಿ?” ಎಂದು ಕೇಳಿದ. ಸುರೇಶನು, “ಈ ಭಾರಿ ನಾವು ಇದ್ದ ಹೋಗಾಕ್ ಬಂದಿಲ್ಲ, ಈ ಸಲ ನಿನ್ನೂ ಕರಕೊಂಡ ಹೋಗಾಕ್ ಬಂದೇವ್ಯ” ಎಂದು ಹೇಳಿದಾಗ ನೀಲಜ್ಜನಿಗೆ ಬಹಳ ಬೇಸರವಾಯಿತು. “ಆಗಂಗಿಲ್ಲ! ನನ್ನ ಜೀವ ಇರೂ ತನಕಾ ಇದ ಮನ್ಯಾಗ್ ಇರತೇನ್ಯ. ನಿಮ್ಮವ್ವನ ಜೀವಾ ಇದ ಮನ್ಯಾಗೈತಿ. ಅದನ್ನ ಜ್ವಾಕ್ಯ ಮಾಡಾಕ್ ನಾ ಇಲ್ಲೇ ಇರಬೇಕ” ಎಂದು ಅರಚುತ್ತಾ ಗಾಬರಿಗೊಂಡು ಬೆವೆತುಹೋದ ನೀಲಜ್ಜನ್ನು ಕಂಡು ಸುರೇಶನಿಗೆ ಏನೂ ತೋಚದೆ ಕೂಡಲೇ ರಡ್ಡೇರ ಡಾಕ್ಟರನ್ನ ಕರೆದುಕೊಂಡು ಬಂದ. ಡಾಕ್ಟರ್ ನೀಲಜ್ಜನನ್ನು ಮಾತನಾಡಿಸುತ್ತಾ ರಕ್ತದೊತ್ತಡ ಪರೀಕ್ಷಿಸಿದರು. ನೀಲಜ್ಜನ ಬಾಯಿಯಿಂದ ಮಾತುಗಳು ಹೊರಡಲಿಲ್ಲ. ಡಾಕ್ಟರ್ ಸುರೇಶನಿಗೆ, “ಅಜ್ಜನ ಬಿ.ಪಿ ಬಹಳ ಕಡಿಮೆಯಾಗಿದೆ. ಕೂಡಲೇ ಸಿಟಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ದು ತೋರಿಸಿ. ಈಗ ನಾನು ಬೆಳಗಿನವರೆಗೆ ಸ್ವಲ್ಪ ಸುಧಾರಿಸಿಕೊಳ್ಳುವಂತೆ ಇಂಜಿಕ್ಷನ್ ಕೊಟ್ಟಿರುತ್ತೇನೆ” ಎಂದು ಹೇಳಿದರು.
ಸುರೇಶನೊಬ್ಬನಿಗೆ ಏನು ಮಾಡಬೇಕೆಂದು ತೋಚದೇ ಇದ್ದಾಗ ತಮ್ಮ ರಮೇಶನನ್ನು ಕರೆಸುವಂತೆ ಹೆಂಡತಿ ಹೇಳಿದಳು. ಸುರೇಶನು ರಮೇಶನಿಗೆ ಫೋನಾಯಿಸಿ ವಿಷಯವನ್ನೆಲ್ಲಾ ತಿಳಿಸಿದ. ನೀಲಜ್ಜನ ಎರಡನೇ ಮಗ ರಮೇಶನು ಸಂಸಾರ ಸಮೇತ ಧಾರವಾಡದಲ್ಲಿ ದಿನಗೂಲಿ ಕೆಲಸ ಮಾಡುತ್ತಾ ವಾಸವಿದ್ದನು. ವಿಷಯ ತಿಳಿದ ರಮೇಶ ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬೆಳಗಿನ ಮೊದಲು ಬಸ್ಸು ಹಿಡಿದು ಶಿರಸಂಗಿಗೆ ಬಂದನು. ಸುರೇಶನು ರಮೇಶ ಬಂದ ಮೇಲೆ ಅಪ್ಪ ನೀಲಜ್ಜನನ್ನು ಸರ್ಕಾರಿ ಅಂಬುಲೆನ್ಸನಲ್ಲಿ ಸವದತ್ತಿಯ ಆಸ್ಪತ್ರೆಗೆ ಕರೆದುಕೊಂಡು ಬಂದನು. ನೀಲಜ್ಜನ ಸ್ಥಿತಿ ಕಂಡು ಊರ ಜನರು ಮರುಗಿದರು. ನೀಲಜ್ಜನ ಗಂಡು ಮಕ್ಕಳಿಗೆ ಛೀ ಎಂದರು. ಆದರೆ ವಾಸ್ತವ ಜನರಿಗೆ ಗೊತ್ತಿರಲಿಲ್ಲ. ನೀಲಜ್ಜನನ್ನು ಪರೀಕ್ಷಿಸಿದ ವೈದ್ಯರು ನೀಲಜ್ಜನನ್ನು ಮೂರು-ನಾಲ್ಕು ದಿನ ಆಸ್ಪತ್ರೆಯಲ್ಲೆ ಇಟ್ಟುಕೊಂಡು ಚಿಕಿತ್ಸೆಕೊಡಬೇಕಾಗುವುದೆಂದು ತಿಳಿಸಿದರು. ಸುರೇಶನು ತನ್ನ ರಜೆಗಳನ್ನು ಮುಂದುವರೆಸುವಂತೆ ತನ್ನ ಮೇಲಾಧಿಕರಿಗಳಿಗೆ ತಿಳಿಸಿದರು.
ವಯೋಸಹಜ ಖಾಯಿಲೆಯಿಂದ ತತ್ತರಿಸಿ ಹೋಗಿದ್ದ ನೀಲಜ್ಜನು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿ ನಿದ್ರಿಸುವಂತೆ ಕಾಣುತ್ತಿತ್ತು ಆದರೆ ಅವನ ಮನದೊಳಗಿನ ನೋವು ಅಲ್ಲಿರುವ ಯಾರಿಗೂ ಅರ್ಥವಾಗಲಿಲ್ಲ. ಆಸ್ಪತ್ರೆಯಲ್ಲಿ ಮೂರು ದಿನ ಕಳೆದರೂ ಅಪ್ಪನಲ್ಲಿ ಏನು ಸುಧಾರಣೆ ಕಾಣಲಿಲ್ಲ. ಅಪ್ಪ ನಿದ್ರೆಯಲ್ಲಿರುವುನೆಂದು ರಮೇಶನು ಅಣ್ಣನಿಗೆ, “ ಅಣ್ಣಾ ಎಷ್ಟ ದಿನಾ ಅಂತ ಇಲ್ಲೇ ಚಾಕರಿ ಮಾಡಕೋಂತಿರೂದು ನಾನು ಸಂಜೀಕ ಹೋಗತೇನ್ಯ ಎರಡ ದಿನ ಬಿಟ್ಟ ಮತ್ತ ಬರತೇನ್ಯ” ಎಂದು ಹೇಳಿದ. ಆಗ ಸುರೇಶ, “ನೀ ಹೋದರ ನಾನೊಬ್ಬನ ಏನ್ ಮಾಡಲಿ? ಅಪ್ಪ ಅರಾಮಾಗಿ ಮನಿಗಿ ಹೋಗು ತನಕಾ ಇಲ್ಲೇ ಇರ. ಏನ್ ಅಂವಾ ನನಗ ಒಬ್ಬ ಅಪ್ಪ ಏನ್, ನಿನಗೂ ಅಪ್ಪ ಹೌದಿಲ್ಲೋ?” ಎಂದು ಕೋಪದಿಂದ ತಮ್ಮನಿಗೆ ಗದರಿದನು. ನಂತರ ರಮೇಶನು ತಂಗಿ ರುಕ್ಮಿಣಿಗೂ ವಿಷಯ ತಿಳಿಸಲು ಫೋನ್ ತೆಗೆದುಕೊಂಡು ಹೊರಬಂದ. ಗಾಬರಿಯಾಗುವ ವಿಷಯವಾಗಿಲ್ಲದಿರುವುದರಿಂದ ಇಲ್ಲಿಯವರೆಗೆ ರುಕ್ಮಿಣಿಗೆ ವಿಷಯ ತಿಳಿಸಿರಲಿಲ್ಲ. ಇತ್ತ ಆಸ್ಪತ್ರೆಗೆ ಊಟದ ಬುತ್ತಿ ಕಟ್ಟಿಕೊಂಡು ನೀಲಜ್ಜನ ಇಬ್ಬರು ಸೊಸೆಯಂದಿರು ಬಂದರು. ಅವರು ಬಂದಾಗ ನೀಲಜ್ಜ ಗಾಢವಾದ ನಿದ್ರೆಯಲ್ಲಿದ್ದನು. ಸ್ವಲ್ಪ ಸಮಯದ ನಂತರ ಊಟ ಮಾಡಿಸಿದರಾಯಿತು ಎಂದು ಹಾಗೆ ಮಾತನಾಡುತ್ತಾ ಕುಳಿತರು. “ಇನ್ನೂ ಈ ಮುದುಕಂದ ಏನೇನ್ ಸೇವಾ ಮಾಡಬೇಕೊ ಏನೋ. ಇದರದ ಏನರ ರೊಕ್ಕಾ ರುಪಾಯಿ ಬಂಗಾರ ಇದ್ದಿದ್ರ, ನಾವ ಕರಕೊಂಡ ಹೋಗಿ ಒಂದು ರೊಟ್ಟಿ ಹಾಕಿ ಸಾಕತಿದ್ವಿ” ಎಂದು ವ್ಯಂಗವಾಗಿ ಹೇಳುತ್ತಾ ನಗಾಡಿದಳು.
ಈ ಮಾತಿಗೆ ಸುರೇಶನ ಹೆಂಡತಿಯೂ ನಗಾಡುತ್ತಾ ಸ್ವಲ್ಪ ಹೊತ್ತು ಹರಟಿದರು. ರಮೇಶನ ಹೆಂಡತಿಯಾಡಿದ ಮಾತುಗಳು ನೀಲಜ್ಜನ ಕಿವಿಗೆ ಬಿದ್ದಿರಬೇಕು ಅದಕ್ಕೆ ಇಲ್ಲಿಯವರೆಗೆ ಇರದ ಅವನ ಕಣ್ಣಂಚಿನಲ್ಲಿ ಕಣ್ಣೀರಧಾರೆ ಹರಿಯಿತು. ಈಗ ನೀಲಜ್ಜನಿಗೆ ತಾನೆಷ್ಟು ತಿರಸ್ಕೃತನೆಂದು ಅರಿವಾಯಿತು. ತನ್ನ ಹೆಂಡತಿ ಸರೋಜಮ್ಮ ಇದ್ದಾಗ ಮಹರಾಜನ ಹಾಗಿದ್ದ ಆ ದಿನಗಳನ್ನು ನೆನೆದು ಬಹಳ ಕೊರಗಿದನು. ಸಂಜೆ ಐದಾದರೂ ನೀಲಜ್ಜನಿಗೆ ಹಸಿವೆನೆಸಿ ಏಳಲಿಲ್ಲ. ಮಾರನೇ ದಿನವೇ ರುಕ್ಮಿಣಿಯು ಅಪ್ಪನನ್ನು ಕಾಣಲು ಗಾಬರಿಯಿಂದ ಗಂಡನೊಂದಿಗೆ ಬಂದಳು. ರುಕ್ಮಿಣಿಯ ಮಾತು ಕೇಳಿ ನೀಲಜ್ಜನು ಚುರುಕಾದನು.
ರುಕ್ಮಿಣಿ ನೀಲಜ್ಜನಿಗೆ ತಾಯಿಯಾಗಿದ್ದಳು. ಅಪ್ಪನ ಸ್ಥಿತಿ ಕಂಡು ಮಮ್ಮಲ ಮರುಗಿದಳು. ಮಗಳು ಬಂದಿರುವದನ್ನು ಗಮನಿಸಿದ ನೀಲಜ್ಜ ನಿದಾನವಾಗಿ ಹಾಸಿಗೆಯಲ್ಲೆ ಎದ್ದು ಕುಳಿತು, “ ಎವ್ವಾ ಯಾವಾಗ ಬಂದಿ? ಅರಾಮದೀ ಎವ್ವಾ? ನನ್ನ ಬಂಗಾರಿ ಎಲ್ಲೈತಿ” ಅಂತಾ ಮೊಮ್ಮಗಳನ್ನು ಹುಡುಕುತ್ತಾನೆ. ಅಪ್ಪನ ತೋಳಲ್ಲಿದ್ದ ಮೊಮ್ಮಗಳನ್ನು ಬಳಿಗೆ ಕರೆದು, “ಅಲೆಲೆಲೆ…ಬಂಗಾರಿ, ಅಜ್ಜನ್ ನೋಡಾಕ್ ಬಂದಿದಿ” ಎಂದು ಮೊಮ್ಮಗಳನ್ನು ತಬ್ಬಿ ಮುದ್ದಾಡಿದ. ರುಕ್ಮಿಣಿಯು ಅಣ್ಣಂದಿರಿಂದ ನಡೆದ ಎಲ್ಲ ವಿಷಯವನ್ನು ತಿಳಿದುಕೊಂಡಳು. ನಂತರ ನೀಲಜ್ಜ ರುಕ್ಮಿಣಿ ತಂದ ತಿಂಡಿ ತಿಂದು ಚಹ ಸೇವಿಸಿದನು. ಔಷದಿಯಿಂದಾಗದ ಬದಲಾವಣೆ ರುಕ್ಮಿಣಿಯಿಂದಾಗಿತ್ತು. ನೀಲಜ್ಜನ ಮುಖದ ಕಳೆ ನೋಡಿ ಸುರೇಶ ರಮೇಶನಿಗೂ ಸಂತಸವಾಯಿತು. ನೀಲಜ್ಜನನ್ನು ಪೂರ್ಣ ತಿಳಿದ ರುಕ್ಮಿಣಿಯು ತನ್ನ ಗಂಡನಿಗೆ, “ರೀ…(ಅಳುತ್ತಾ) ಅಪ್ಪನ್ನ ನಮ್ಮ ಜೋಡೀನ ಕರಕೊಂಡ ಹೋಗೂನ್ರಿ” ಎಂದು ಬಿಕ್ಕಿ ಬಿಕ್ಕಿ ಅತ್ತಳು.
ರುಕ್ಮಿಣಿ ಗಂಡ ಬಹಳ ಒಳ್ಳೆಯವನು. ಸುರೇಶ ರಮೇಶನ ತರಹ ವಯಸ್ಸಾದವರನ್ನು ನಿಸ್ಪ್ರಯೋಜಕ ಎಂದು ತಿಳಿದವನಲ್ಲ. ತಂದೆ ತಾಯಿ ಮಕ್ಕಳ ಸಂಬಂಧದ ಬಗ್ಗೆ ಪೂರ್ಣ ಅರಿತವನಾಗಿದ್ದ. ರುಕ್ಮಿಣಿ ಗಂಡ, “ಆಯ್ತು ರುಕ್ಮಿಣಿ ಮಾವನವರು ಬಂದರೆ ಕರಕೊಂಡು ಹೋಗೂಣ ಇಂತಾ ಸ್ಥಿತಿಯೊಳಗ ಅವರ್ನ ಒಬ್ಬರನ್ನ ಬಿಡೂದ್ ತಪ್ಪ ಅಕ್ಕೇತ್ಯ” ಎಂದು ಉತ್ತರಿಸುತ್ತಾ ರುಕ್ಮಿಣಿಯನ್ನು ಸಮಾಧಾನಿಸಿದ. ಇತ್ತ ನೀಲಜ್ಜನ ಸೊಸೆಯಂದಿರಿಗೆ ಒಳಗೊಳಗೆ ಸಂತಸವಾಯಿತು. ಇವರ ಸಂತಸ ನೀಲಜ್ಜನ ಸೂಕ್ಷ್ಮ ಮನಸ್ಸಿಗೆ ಮಾತ್ರ ಅರ್ಥವಾಯಿತು. ನೀಲಜ್ಜ ಚೇತರಿಸಿಕೊಂಡಿರುವುದನ್ನು ಗಮನಿಸಿದ ಡಾಕ್ಟರ್ ನೀಲಜ್ಜನನ್ನು ಬೆಳೆಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿದರು. ರುಕ್ಮಿಣಿ ಅಪ್ಪನ ಕೈಹಿಡಿದು, “ನಡಿ ನಮ್ಮೂರಿಗೆ ಹೋಗೂನ ಶೀಗಿ ಹುಣ್ಣಿವಿ ಮುಗಸಕೊಂಡ ಬರುವಂತೆ” ಎಂದು ಕರೆದಳು. ನೀಲಜ್ಜ ಆ ಒಂದು ಕ್ಷಣ ಮೌನವಾಗುಳಿದ. ಯಾರೂ ಏನೂ ಮಾತಾಡಲಿಲ್ಲ. ಆ ನಿಶ್ಯಬ್ಧ ಸನ್ನಿವೇಶವನ್ನು ರುಕ್ಮಿಣಿಯ ಮಗಳ ಕಾಲ್ಗೆಜ್ಜೆಯ ನಿನಾದವು ಮುರಿಯಿತು. ಕೂಡಲೇ ನೀಲಜ್ಜ ಮೊಮ್ಮಗಳನ್ನು ಮಗಳ ತೆಕ್ಕೆಯಿಂದ ಬರಸೆಳೆದು ಎತ್ತಿಕೊಂಡು ಆಸ್ಪತ್ರೆಯಿಂದ ಹೊರನಡೆದು ಅಳಿಯಂದಿರ ಗಾಡಿಯೇರಿ ಕುಳಿತುಬಿಟ್ಟನು. ಇತ್ತ ಸುರೇಶನೂ ರಮೇಶನೂ ಅಪ್ಪನ ಚಿಂತೆ ಬಿಟ್ಟು ತಮ್ಮ ತಮ್ಮ ಗೂಡು ಸೇರಿದರು.
ಕಣ್ಣರಿಯದ್ದನ್ನು ಕರುಳರಿಯುತ್ತದೆ ಎಂಬ ಮಾತು ನೀಲಜ್ಜನಿಗೆ ಸತ್ಯವೆನಿಸಿತು. ಕರುಳ ಬಳ್ಳಿಯ ಸಂಬಂಧಗಳ ಬಗ್ಗೆ ಆತ್ಮ ವಿಮರ್ಶೆಮಾಡಿಕೊಂಡನು. ತನ್ನ ಗಂಡು ಮಕ್ಕಳು ತಮ್ಮ ಹೆಂಡಂದಿರ ಗುಲಾಮರಾಗಿರುವುದನ್ನು ಕಂಡು ಮರುಗಿದ. ತನ್ನ ಗಂಡು ಮಕ್ಕಳು ಚಿಕ್ಕವರಿದ್ದಾಗ ತನ್ನ ಹೆಗಲೇರಿ ಆಟವಾಡಿದ ದಿನಗಳು, ಅವರಿಗಾಗಿ ತಾನು ಮಾಡಿದ ತ್ಯಾಗಗಳು, ಮಕ್ಕಳ ಹೊಟ್ಟೆ ತುಂಬಿಸಲು ತಾನು ಹಾಗೂ ತನ್ನ ಹೆಂಡತಿ ಪಟ್ಟ ಕಷ್ಟಗಳನ್ನೆಲ್ಲಾ ನೆನೆದನು. ಗಾಡಿಯಲ್ಲಿ ಹೋಗುವಾಗ ನೀಲಜ್ಜನಿಗೆ ಜೀವನವೇ ಅಸಹ್ಯವೆನಿಸಿತು. ಆಸ್ಪತ್ರೆಯಲ್ಲಿ ನೀಲಜ್ಜನನ್ನು ಕುರಿತು ಸೊಸೆಯಂದಿರು ಆಡಿದ ಮಾತುಗಳಿಂದ ಹಾಗೂ ಅವರ ಢಾಂಬಿಕತನದ ವರ್ತನೆಯಿಂದ ಬಹಳ ಬೇಸರಪಟ್ಟಿದ್ದನು. ನೀಲಜ್ಜನು ಅಂತರ್ಮುಖಿ ವ್ಯಕ್ತಿತ್ವದವನಾಗಿದ್ದರಿಂದ ತನ್ನ ಭಾವನೆಗಳನ್ನು ತನ್ನ ಬಾಳ ಸಂಗಾತಿಯನ್ನು ಬಿಟ್ಟು ಇತರರೊಂದಿಗೆ ಅಷ್ಟು ಸುಲಭದಲ್ಲಿ ಹಂಚಿಕೊಂಡವನಲ್ಲ. ತನಗೆಷ್ಟೇ ನೋವಿದ್ದರೂ ರುಕ್ಮಿಣಿಯ ಮುಖ ನೋಡಿ ಎಲ್ಲವನ್ನೂ ಮರೆಯುತ್ತಿದ್ದನು. ಮಗಳ ಮನೆಯಲ್ಲಿ ನೀಲಜ್ಜನು ಆರಾಮಾಗಿದ್ದನು. ಮೊಮ್ಮಗಳೊಂದಿಗೆ ಆಟವಾಡುತ್ತಾ ತಾನೂ ಮಗುವಾಗಿದ್ದ ನೀಲಜ್ಜನನ್ನು ನೋಡಿ ರುಕ್ಮಿಣಿಯೂ ಅವಳ ಗಂಡನೂ ಸಂತೋಷಪಟ್ಟರು.
ನೀಲಜ್ಜನ ಪಾಲಿಗೆ ಗಂಡು ಮಕ್ಕಳು ಇಲ್ಲವಾಗಿದ್ದರು. ಮಗಳ ಊರಲ್ಲಿ ನೀಲಜ್ಜನನ್ನು ಯಾರಾದರೂ ಮಕ್ಕಳೆಷ್ಟು ಎಂದು ಕೇಳಿದರೆ ನೀಲಜ್ಜನು ತನಗೊಬ್ಬಳೇ ಮಗಳು ರುಕ್ಮಿಣಿ ಎಂದು ಎದೆ ತಟ್ಟಿಕೊಂಡು ಹೇಳಿ ಸಂಭ್ರಮಿಸುತ್ತಿದ್ದ. ನನ್ನ ಮಗಳು ನನ್ನ ಆಯಸ್ಸನ್ನು ಹೆಚ್ಚಿಸಿದಳು ಎಂದು ಹೇಳುತ್ತಿದ್ದ. ಹೀಗೆ ತಿಂಗಳು ಕಳೆದ ನೀಲಜ್ಜನಿಗೆ ಮಗಳ ಮನೆ ಬಹಳ ದಿವಸದ್ದಲ್ಲ ಅಂತ ಅನಿಸಿತೋ ಏನೋ ಒಂದಿನ ರಾತ್ರಿ ಊಟವಾದ ಮೇಲೆ ನೀಲಜ್ಜನು ರುಕ್ಮಿಣಿಯ ಬಳಿ ಬಂದು, “ಎವ್ವಾ ರುಕ್ಮವ್ವ, ನಾನು ಬಾಳ ದಿನ ಮನಿಬಿಟ್ಟ ಇದ್ದಾಂವಲ್ಲ. ಎಷ್ಟ ದಿನ ಅಂತ ಇಲ್ಲೇ ಇರಾಕಕ್ಕೇತಿ. ನಾ ನಾಳೆ ಹೋಗ್ತನವ್ವ ಶಿರಸಂಗಿಗೆ. ನಿಮ್ಮವ್ವ ಅಲ್ಲಿ ಒಬ್ಬಕಿ ಅಕ್ಕಾಳ” ಎಂದು ಹೇಳುತ್ತಾ ಭಾವುಕನಾದ. ಅಪ್ಪನ ಮಾತು ಕೇಳಿ ರುಕ್ಮಿಣಿಗೆ ಏನೂ ತೋಚದಂತಾಯಿತು. ಅಪ್ಪನ ಸ್ವಭಾವವರಿತ ರುಕ್ಮಿಣಿ ಅಪ್ಪನಿಗೆ ಬೆಳಗಾಗಲಿ ನೋಡೋಣ ಎಂದು ಹೇಳಿ ಮಲಗಲು ಹೇಳಿದಳು. ತನಗೆ ನಿದ್ರೆ ಬರದಿದ್ದರೂ ನಿದ್ರೆ ಬಂದವರ ಹಾಗೆ ಹೇಳಿ ಕಳಿಸಿದ ರುಕ್ಮಿಣಗೆ ಆ ದಿನ ರಾತ್ರಿ ನಿದ್ರೆಯೇ ಬರಲಿಲ್ಲ. ಇತ್ತ ನೀಲಜ್ಜನಿಗೂ ಆ ರಾತ್ರಿ ಕಳೆಯುವುದು ದುಸ್ತರವಾಯಿತು. ಮುದ್ದಾದ ಮೊಮ್ಮಗಳನ್ನು ಬಿಟ್ಟು ಹೋಗಲು ಅವನ ಮನಸ್ಸು ಒಪ್ಪಲೇ ಇಲ್ಲ. ಆದರೂ ಸ್ವಾಭಿಮಾನಕ್ಕೆ ಮಣಿದು ಗಟ್ಟಿ ಮನಸ್ಸು ಮಾಡಿದ. ಬೆಳಗಾದಾಗ ಅಳಿಯ ರಂಗನಾಥ ನೀಲಜ್ಜನ ಬಳಿ ಬಂದು, “ಮಾವ ನೀವು ಇಲ್ಲೆ ಇನ್ನೂ ಸ್ವಲ್ಪ ದಿನ ಇರಬಹುದಲ್ವಾ, ನಮಗೂ ಜೊತೆಯಾದಂತಾಗುತ್ತದೆ. ನಿಮ್ಮ ಬಂಗಾರಿಗೂ ಒಬ್ಬ ಗೆಳೆಯ ಬೇಕು. ನೀವು ಇಲ್ಲೇ ಇದ್ರೆ ನಮಗೆಲ್ಲ ಸಂತೋಷ” ಎಂದು ತನ್ನಿಚ್ಛೆಯನ್ನು ತಿಳಿಸಿದನು. ನೀಲಜ್ಜನು ಅಳಿಯನ ಮಾತಿಗೆ ಸುಮ್ಮನಾಗಿ ಏನೂ ಉತ್ತರ ಕೊಡಲಿಲ್ಲ. ಅಳಿಯನ ನಿಷ್ಕಲ್ಮಶ ಹೃದಯ, ಮೊಮ್ಮಗಳ ಮುದ್ದು ಮುಖ, ಮಗಳ ತೋರುವ ತಾಯಿ ಪ್ರೇಮ ಇವೆಲ್ಲವೂ ನೀಲಜ್ಜನನ್ನು ಮಗಳ ಮನೆಯಲ್ಲೆ ಕಟ್ಟಿ ಹಾಕಿದವು. ರುಕ್ಮಿಣಿಯು ಅಪ್ಪನು ತನ್ನ ನಿರ್ಧಾರ ಬದಲಿಸಿರುವುದಕ್ಕೆ ಸಂಭ್ರಮಿಸಿದಳು.
ವರ್ಷಗಳೇ ಕಳೆದವು ಇತ್ತ ಸುರೇಶನಾಗಲಿ ರಮೇಶನಾಗಲಿ ಅಪ್ಪನನ್ನು ನೋಡುವುದಾಗಲಿ ನೀಲಜ್ಜನ ಕ್ಷೇಮವನ್ನೂ ವಿಚಾರಿಸಲಿಲ್ಲ. ನೀಲಜ್ಜನು ತನ್ನ ಗಂಡು ಮಕ್ಕಳಿಂದ ಪ್ರೀತಿಯೊಂದನ್ನು ಬಿಟ್ಟು ಮತ್ತೇನನ್ನೂ ಬಯಸಿದವನಲ್ಲ. ಅಪ್ಪ ಎನ್ನುವ ಆದರವಿಲ್ಲದಿದ್ದರೂ ತಂಗಿಯೆಂಬ ಮಮತೆ ಇಲ್ಲವೇನು ಅವರಿಗೆ ಅಂತಾ ಮರುಗಿದ. ತನಗೆ ಗಂಡು ಮಕ್ಕಳೇ ಇಲ್ಲದಿರುವಾಗ ತಾನೇಕೆ ಅವರ ಬಗ್ಗೆ ಯೋಚಿಸಬೇಕೆಂದು ತನಗೆ ತಾನೆ ಸಮಾಧಾನಪಟ್ಟುಕೊಳ್ಳುತ್ತಿದ್ದ. ಅಲ್ಲದೇ ತನ್ನ ಮಕ್ಕಳೂ ಮುಂದೊಂದು ದಿನ ತನ್ನಂತಾದಾಗ ತಾನವರಿಗೆ ಆರ್ಥವಾಗಬಹುದೆಂದು ಅಂದುಕೊಳ್ಳುತ್ತಿದ್ದ. ಈಗಲೂ ನೀಲಜ್ಜನಿಗೆ ಯಾವಾಗಲಾದರೊಮ್ಮೆ ತನ್ನ ಗಂಡು ಮಕ್ಕಳ ನೆನಪಾದರೆ ಮತ್ತದೇ ಮೌನ ; ಮತ್ತದೇ ಬೇಸರ.
–ಎನ್.ಎಚ್.ಕುಸುಗಲ್ಲ