ಮಂಜಯ್ಯನ ಮಡಿಕೆ ಮಣ್ಣಾಗಲಿಲ್ಲ: ಜಗದೀಶ ಸಂ.ಗೊರೋಬಾಳ

ಬಹಳ ವರ್ಷಗಳಿಂದ ತಿರುಗದ ತಿಗರಿಯ ಶಬ್ದ ಕೇಳಿ ಮಂಜಯ್ಯನ ಮನಸ್ಸು ಕದಡಿತು. ಯಾವ ಶಬ್ದ ಕೇಳಿ ಮಂಜಯ್ಯ ತನ್ನ ಅರ್ಧಾಯುಷ್ಯ ಕಳೆದನೋ ಆ ಶಬ್ದ ಇಂದು ಮಂಜಯ್ಯನಿಗೆ ಅನಿಷ್ಟವಾಗಿದೆ. ಎದೆಬಡಿತ ಜಾಸ್ತಿಯಾಗಿ, “ಯಾರೇ ಅದು ಸುಗಂಧಿ ತಿಗರಿ ಸುತ್ತೋರು? ನಿಲ್ಸೆ ಅನಿಷ್ಟಾನಾ!” ಎಂದು ಕೂಗುತ್ತಾ ಕಿವಿ ಮುಚ್ಚಿಕೊಂಡನು ಮಂಜಯ್ಯ. ಸುಗಂಧಿ ತಿಗರಿ ಕಡೆ ಹೋಗುವಷ್ಟರಲ್ಲಿ ಶಬ್ದ ನಿಂತಿತ್ತು. ಪಕ್ಕದ ಮನೆಯ ಚಿಕ್ಕ ಹುಡುಗನೊಬ್ಬನು ತಿಗರಿಯನ್ನು ತಿರುಗಿಸಿ ಆಟವಾಡಿ ಸುಗಂಧಿ ಬರುವಷ್ಟರಲ್ಲಿ ಓಡಿ ಹೋಗಿದ್ದನು. ತಿಗರಿ ತಿರುಗಿಸುವುದೆಂದರೆ ಮಕ್ಕಳಿಗೆ ಖುಷಿ ಆಗೋದು. ಅದೂ ಅಲ್ಲದೇ ತಿಗರಿ ತಿರುಗಿಸಿದಾಗ ಮಂಜಯ್ಯ ಕೋಪಿಸಿಕೊಳ್ಳುವುದು ಆ ಮಕ್ಕಳಿಗೆ ಮತ್ತಷ್ಟು ಮಜ ಕೊಡುತ್ತಿತ್ತು. ಅಷ್ಟಕ್ಕೂ ಮಂಜಯ್ಯ ತಿಗರಿಯ ಶಬ್ದ ಕೇಳಿ ಬೆಚ್ಚಿ ಬೀಳಲು ಕಾರಣವಿತ್ತು. ಅವನ ತಿಗರಿ ತಿರುಗದೆ ಇಂದಿಗೆ ಹತ್ತು ವರ್ಷಗಳಾದವು. ಹತ್ತು ವರ್ಷಗಳ ಹಿಂದೆ ಮಂಜಯ್ಯನ ತಿಗರಿಗೆ ಭಾರಿ ಬೇಡಿಕೆ ಇತ್ತು. ಮಂಜಯ್ಯನ ಮಡಿಕೆಗಳೆಂದರೆ ಪೇಟೆಗಳಲ್ಲಿ ಜನ ಏನೂ ಯೋಚನೆ ಮಾಡದೆ ಖರೀದಿಸುತ್ತಿದ್ದರು. ಅಲ್ಲದೇ ಮಂಜಯ್ಯನ ಮನೆಗೆ ಬಂದು ತಮಗೆ ಬೇಕಾದ ಮಡಿಕೆಗಳನ್ನು ತೆಗದುಕೊಂಡು ಚೌಕಾಸಿ ಮಾಡದೆ ಹೇಳಿದಷ್ಟು ಹಣ ಕೊಟ್ಟು ಸಂತೋಷದಿಂದ ಹೋಗುತ್ತಿದ್ದರು. ಮಂಜಯ್ಯ ತಿರುಗಿಸಿ ತಯಾರಿಸಿದ ಮಡಿಕೆಗಳು ಎರಡು-ಮೂರು ದಿನಗಳಲ್ಲಿ ಮಾರಾಟವಾಗಿ ಬಿಡುತ್ತಿದ್ದವು. ಬೇಸಿಗೆ ದಿನಗಳಲ್ಲಿ ಮಂಜಯ್ಯನ ಹರಿವಿಗಳು ಬಹಳ ಮಾರಾಟವಾಗುತ್ತಿದ್ದವು. ಮಾಣಿಕಪುರದ ಬಹಳಷ್ಟು ಮನೆಗಳಲ್ಲಿ ಮಂಜಯ್ಯನ ಮಡಕೆಗಳನ್ನೆ ಬಳಸುತ್ತಿದ್ದರು. ಮಂಜಯ್ಯನ ಜೀವನ ಈ ಮಡಕೆ ವ್ಯಾಪಾರದಿಂದ ಸಂತೃಪ್ತವಾಗಿತ್ತು. ಇದೆ ಸಂಪಾದನೆಯಿಂದ ಮಗಳು ನಾಗವೇಣಿಯ ಮದುವೆಮಾಡಿಕೊಟ್ಟಿದ್ದನು. ಅಲ್ಲದೆ ತನ್ನೊಬ್ಬ ಮಗನೂ ಇದೇ ವೃತ್ತಿಯಲ್ಲಿ ಮುಂದುವರೆಯಬೇಕೆಂಬ ಕನಸು ಕಂಡಿದ್ದ.

ಆದರೆ ಮಂಜಯ್ಯನ ಈ ವೈಭವ ಬಹಳ ದಿನ ಮುಂದುವರೆಯಲಿಲ್ಲ. ಯಾವುದೋ ದೂರದ ಪಶ್ಚಿಮದ ದೇಶದಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯ ಬಿಸಿ ಮಂಜಯ್ಯನ ಊರಿಗೂ ತಟ್ಟಿತ್ತು. ಊರ ಜನರ ಜೀವನ ಶೈಲಿಗಳಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳಾದವು. ಪಾಶ್ಚಿಮಾತ್ಯರ ಅನುಕರಣೆಯ ಒಲವು ಜನರಲ್ಲಿ ಹೆಚ್ಚಿತು. ಮಂಜಯ್ಯನ ಮಡಿಕೆಗಳು ಜನರಿಗೆ ಹಿಡಿಸದಾದವು. ಪರದೇಶದಿಂದ ಬಂದ ಕಬ್ಬಿಣದ ಪಾತ್ರೆಗಳು ಎಲ್ಲರ ಮನೆಮನೆಗಳಲ್ಲಿ ರಾರಾಜಿಸಿದವು. ಆರೋಗ್ಯಕ್ಕೆ ಅಹಿತವಾಗಿದ್ದರೂ ಜನರು ವಿವಿಧ ವಿನ್ಯಾಸದ ಬಹುಕಾಲ ಬಾಳಿಕೆ ಬರುವ ಕಬ್ಬಿಣದ ಜರ್ಮನಿ ಪಾತ್ರೆಗಳಿಗೆ ಮರುಳಾದರು. ಇಂತಹ ಪಾತ್ರೆಗಳು ಶ್ರೀಮಂತರಿಗೆ ದೊಡ್ಡಸ್ತಿಕೆಯ ದ್ಯೋತಕಗಳಾದವು. ಮಡಿಕೆಗಳು ಕೇವಲ ಬಡವರ ಮನೆಗೆ ಸೀಮಿತವಾದವು. ಇದರಿಂದ ಮಂಜಯ್ಯನ ವ್ಯಾಪಾರ ಕುಂಠಿತವಾಯಿತು. ಮಂಜಯ್ಯನ ಮಡಕೆಗಳು ತಿಂಗಳಾದರೂ ಮಾರಾಟವಾಗದೆ ಹಾಗೆಯೆ ಉಳಿಯುತ್ತಿದ್ದವು. ಮಂಜಯ್ಯ ತನ್ನ ಮಡಕೆಗಳನ್ನು ಮಾರಾಟಮಾಡಲು ಹೆಣಗಾಡುತ್ತಿದ್ದನು.

ಒಮ್ಮೊಮ್ಮೆ ಪೇಟೆಗೆ ಮಾರಲು ತೆಗೆದುಕೊಂಡ ಹೋದ ಮಡಕೆಗಳನ್ನು ರಾತ್ರಿ ಹಾಗೆಯೆ ಮನೆಗೆ ತೆಗೆದುಕೊಂಡು ಬಂದು ಸುಗಂಧಿಯ ಮುಂದೆ ಕುಳಿತು ಅಳುತ್ತಿದ್ದನು. ಮಗ ಪಂಜು ಪೇಟೆಯಿಂದ ಬಂದ ಅಪ್ಪ ತನಗೇನಾದರೂ ತಿಂಡಿ ತಂದಿರುವನೆಂದು ಓಡಿ ಬರುತ್ತಿದ್ದ ಆಗ ಅಳುತ್ತ ಕುಳಿತಿದ್ದ ಅಪ್ಪಯ್ಯನನ್ನು ಕಂಡು, “ಅಪ್ಪ!” ಎಂದು ತಾನೂ ಮರುಕಪಡುತ್ತಿದ್ದನು. ಮಕ್ಕಳ ಮೈಮೇಲಿನ ಹರಕು ಬಟ್ಟೆಗಳನ್ನು ನೋಡಿ ಮಂಜಯ್ಯನು ಬಹಳ ದುಃಖಿಸುತ್ತಿದ್ದನು. ತನ್ನ ಈ ದುರಾವಸ್ಥೆಗೆ ತಿಗರಿಯೇ ಕಾರಣವೆಂದು ಅಂದಿನಿಂದ ಹಳಿಯಲು ಆರಂಭಿಸಿದನು. ದಿನದಿಂದ ದಿನಕ್ಕೆ ತನ್ನ ಜೀವವಾಗಿದ್ದ ತಿಗರಿ ವೈರಿಯಂತೆ ತೋರಿತು. ಮಂಜಯ್ಯನು ತನ್ನ ತಿಗರಿಯನ್ನು ನಿಲ್ಲಿಸಿಬಿಟ್ಟನು. ಊರ ಜನರು ಮಂಜಯ್ಯನನ್ನು ಮಡಿಕೆ ಮಂಜಯ್ಯ ಎಂದೆ ಕರೆಯುತ್ತಿದ್ದರು. ಈಗ ಅವನಿರುವ ಪರಿಸ್ಥಿಯಲ್ಲಿ ಯಾರಾದರೂ ಮಡಿಕೆ ಮಂಜಯ್ಯ ಎಂದು ಕರೆದರೆ ಮಂಜಯ್ಯ ಕೆಂಡದಂತಾಗುತ್ತಿದ್ದ. ಆತ್ಮೀಯರು ಮಂಜಯ್ಯನನ್ನು ಮಾತನಾಡಿಸಿದರೆ ಮಂಜಯ್ಯನಿಂದ ಒಂದೆ ಮಾತು ಬರುತ್ತಿತ್ತು. ಅದೇನೆಂದರೆ, “ಮಣ್ಣು ಮಡಿಕೆಯಾಗ್ತಿತ್ತು, ಈಗ ಮಡಿಕೆ ಮಣ್ಣಾಗಿದೆ. ಇನ್ನೆಂದೂ ಈ ಮಣ್ಣು ಮಡಿಕೆಯಾಗಲ್ಲ” ಎಂದು ಹೇಳಿ ಮುನ್ನಡೆಯುತ್ತಿದ್ದನು. ಮಂಜಯ್ಯನ ವ್ಯಾಪಾರ ತಲೆಕೆಳಗಾಗಿರುವುದಕ್ಕೆ ಮಂಜಯ್ಯ ಹಾಗಾಡಿದ ಎಂದು ಜನರು ಆಡಿಕೊಂಡರು. ಮಂಜಯ್ಯನಂತೆ ಹಲವಾರು ಜನ ಮಡಿಕೆಕಾರರು ಆ ದಿನಗಳಲ್ಲಿ ದುಸ್ಥಿತಿಯಲ್ಲಿದ್ದರು.

ಕಾಲಚಕ್ರದ ಗಾಳಿಗೆ ಮಂಜಯ್ಯ ಬದಲಾಗಲಿಲ್ಲ. ಹೇಗೋ ತನ್ನ ಮಗ ಪಂಜು ಸಂಬಂಧಿಗಳ ನೆರವಿನಿಂದ ಓದು ಮುಗಿಸಿ ಎಂ.ಬಿ.ಎ ಪದವಿಧರನಾಗಿದ್ದನು. ತನಗೆ ಉದ್ಯೋಗ ಸಿಗುವವರೆಗೆ ಯಾಕೆ ತಾನು ಅಪ್ಪನ ತಿಗರಿ ತಿರುಗಿಸಬಾರದೆಂದು ಯೋಚಿಸಿದನು. ಅಪ್ಪ ತಿರುಗಿಸಿದ ಆ ಜೀವದ ತಿಗರಿಯನ್ನು ಸ್ವಚ್ಛಗೊಳಿಸಿಕೊಂಡು ತಿರುಗಿಸಿಯೇ ಬಿಟ್ಟನು. ಮಂಜಯ್ಯ ಎಷ್ಟೇ ವಿರೋಧಿಸಿದರೂ ಪಂಜು ಕೇಳಲಿಲ್ಲ. ಮಂಜಯ್ಯ ಪಂಜುನನ್ನು ಮಡಕೆ ಮಾಡಲು ಬಿಡದೆ ಇರಲಿಕ್ಕೆ ಕಾರಣ ಒಂದೆ ತನ್ನಂತೆ ತಿಗರಿ ನಂಬಿ ಹಾಳಾಗಿಯಾನು ಎಂಬ ಭಯದಿಂದಷ್ಟೆ. ಪಂಜು ತಿಗರಿಯನ್ನು ತಿರುಗಿಸುತ್ತಾ ಅಪ್ಪಯ್ಯನಿಗೆ, “ ಇದು ನಿಮ್ಮ ಕಾಲದ ಮಡಕೆ ತರಾ ಅಲ್ಲ, ನಾನು ಈ ಕಾಲದ ಅಭಿರುಚಿಗೆ ತಕ್ಕಂತೆ ಮಾಡ್ತೀನಿ ನೋಡ್ತಾ ಇರಿ ಅಪ್ಪಯ್ಯ” ಎಂದು ಹೇಳಿದನು. ಪಂಜು ಬಹಳ ಶ್ರದ್ಧೆಯಿಂದ ಕೆಲವು ಹೊಸ ಮಾಟದ ಮಡಕೆಗಳು, ಹೂದಾನಿಗಳು, ಮತ್ತು ಮಣ್ಣಿನ ಕೆಲವು ಆಕೃತಿಗಳನ್ನು ಮಾಡಿದನು. ಮಂಜಯ್ಯನಿಗೆ ಮಗ ಮಾಡಿದ ಆಟಿಕೆ ಪರಿಕರಗಳಂತೆ ಕಾಣುವ ಮಡಕೆಗಳನ್ನು ನೋಡಿ ನಗೆ ಬಂದಿತು. “ಸುಗಂಧಿ, ಏನೆ ಇದು ಮಕ್ಕಳಾಟ? ನಾನು ಮಾಡಿದ ಎಂತೆಂತಾ ಮಡಕೆಗಳನ್ನೆ ಜನ ತಿರಸ್ಕರಿಸಿರುವಾಗ, ನಿನ್ನ ಮಗ ಮಾಡಿರೊ ಈ ಆಟಿಕೆಗಳಂತ ಮಡಿಕೆಗಳನ್ನು ಯಾರ ಕೊಳ್ತಾರೆ?” ಎಂದು ಮಂಜಯ್ಯ ತನ್ನ ಹೆಂಡತಿಗೆ ತುಂಟನಗೆ ಬೀರಿ ಹೇಳುತ್ತಾನೆ. ಪಂಜು ಮಾತ್ರ, “ಅಪ್ಪಯ್ಯ ನಿಮಗೆ ಇವುಗಳನ್ನು ನೋಡಿ ನಗೆ ಬರಬಹುದು, ಆದರೆ ನಾನು ಇವುಗಳನ್ನು ಪೇಟೆಗೆ ಹೋಗದೆ ಮನೆಯಲ್ಲೆ ಕುಳಿತು ಹೇಗೆ ಮಾರಾಟ ಮಾಡುತ್ತೇನೆ ನೋಡ್ತಾ ಇರಿ” ಎನ್ನುತ್ತಿದ್ದನು. ಪಂಜು ಈಗಿನ ಕಾಲದ ಹುಡುಗ ಆಧುನಿಕ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಬಗ್ಗೆ ಜ್ಞಾನವಿದ್ದವ. ಪಂಜು ಲಖನೌದಲ್ಲಿ ಓದುತ್ತಿದ್ದಾಗ ಮಾರುಕಟ್ಟೆಯನ್ನೆಲ್ಲ ತಿರುಗಾಡಿ ತನ್ನಪ್ಪಯ್ಯನ ಉದ್ಯೋಗದಲ್ಲಿ ಏನಾದರೂ ಹೊಸತನ ತಂದು ಅದನ್ನು ಪುನಃಶ್ಚೇತನಗೊಳಿಸಬೇಕೆಂದು ಯೋಚಿಸಿ ಅಧ್ಯಯನ ಮಾಡಿಕೊಂಡು ಬಂದಿದ್ದನು.

ಪಂಜು ತಾನು ಮಾಡಿದ ಮಣ್ಣಿನ ಪರಿಕರಗಳಿಗೆಲ್ಲ ಆಕರ್ಷಕ ಬಣ್ಣಗಳನ್ನು ಲೇಪನ ಮಾಡಿದನು. ತನ್ನ ಸ್ನೇಹಿತರ ನೆರವಿನಿಂದ ಆನಲೈನ್ ಮಾರುಕಟ್ಟೆಗಳನ್ನು ಸಂಪರ್ಕಿಸಿ ತನ್ನ ಉತ್ಪನ್ನಗಳನ್ನು ಪರಿಚಯಿಸಿ ಜಾಹಿರಾತು ಹಾಕಿಸಿದನು. ಸಾಮಾಜಿಕ ಜಾಲತಾಣಗಳಲ್ಲಿ ಮಂಜಯ್ಯನ ಮಡಿಕೆ ಮತ್ತು ಮಣ್ಣಿನ ಪರಿಕರಗಳ ಬಗ್ಗೆ ಭಾರಿ ಸುದ್ಧಿಯಾಯಿತು. ಕೆಲವರು ಶೋಕೇಸ್ ಆಟಿಕೆಗಳನ್ನು ಇಷ್ಟಪಟ್ಟರು, ಇನ್ನೂ ಕೆಲವರು ಬಣ್ಣ ಬಣ್ಣದ ಆಕರ್ಷಕ ಮಡಿಕೆ ಪಾತ್ರೆಗಳನ್ನು ಇಷ್ಟಪಟ್ಟು ಖರೀದಿಸಿದರು. ಆನಲೈನ್‍ನಲ್ಲಿ ಸಾಕಷ್ಟು ಆರ್ಡರ್‍ಗಳು ಬಂದವು. ಪಂಜು ಬರೋಡಾ ಬ್ಯಾಂಕಿನಿಂದ ಸಾಲಪಡೆದು ಯಂತ್ರಗಳನ್ನು ಖರೀದಿಸಿದನು. ಜೊತೆಗೆ ಹತ್ತಾರು ನಿರುದ್ಯೋಗಿ ಯುವಕರಿಗೆ ಕೆಲಸಕೊಟ್ಟು ಸಹಾಯಕ್ಕಾಗಿ ಅವರನ್ನು ತನ್ನ ಬಳಿ ಇಟ್ಟುಕೊಂಡನು. ಯಂತ್ರಗಳಿಂದ ತಯಾರಿಸಿದ ಮಡಿಕೆಗಳ ಚಿತ್ತಾಕರ್ಷಕ ಹೊಳಪು ಜನರನ್ನು ಆಕರ್ಷಿಸಿಸಿತು. ದಿನೇ ದಿನೇ ಪಂಜುವಿನ ವ್ಯಾಪಾರ ಬೆಳೆಯಿತು. ಮಂಜಯ್ಯ ತನ್ನ ಮಗನ ಜಾಣ್ಮೆಗೆ ಬೆರಗಾಗಿ ತಾನೂ ಮಗನ ಜೊತೆ ಸೇರಿ ಮತ್ತೆ ಮಡಕೆ ಮಾಡಲು ಮುಂದಾದ. ಈಗ ಮಂಜಯ್ಯನ ಕೈತುಂಬ ಸಾವಿರಾರು ರೂಪಾಯಿಗಳು ಓಡಾಡಿದವು. ಅಲ್ಲದೇ ಪಂಜು ದೆಹಲಿಗೆ ತೆರಳಿ ಪರಿಸರ ಮಂತ್ರಿಗಳನ್ನು ಬೇಟಿಯಾಗಿ ತಾನು ತಯಾರಿಸಿದ ಪರಿಸರ ಸ್ನೇಹಿ ಚಹ ಕುಡಿಯುವ ಕಪ್, ಪರಿಸರ ಸ್ನೇಹಿ ನೀರಿನ ಬಾಟೆಲ್, ಪರಿಸರ ಸ್ನೇಹಿ ತಿಂಡಿ ತಿನ್ನುವ ಬೌಲ್‍ಗಳನ್ನು ತೋರಿಸಿದನು. ತನ್ನ ಈ ಪ್ರಯತ್ನವನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸಿಕೊಂಡನು. ಆಗ ಪರಿಸರ ಮಂತ್ರಿಗಳು ಪಂಜುವಿನ ಪ್ರಯತ್ನವನ್ನು ಮೆಚ್ಚಿದರು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‍ಗೆ ಈ ಮಣ್ಣಿನ ಪರಿಕರಗಳನ್ನು ಪರ್ಯಾಯವಾಗಿ ಬಳಸಬಹುದೆಂದು ತಿಳಿದುಕೊಂಡು ಅಲ್ಲೇ ಒಂದು ಸರ್ಕಾರಿ ಆದೇಶವನ್ನು ಹೊರಡಿಸಿ ಪಂಜುವಿನ ಉದ್ಯಮವನ್ನು ಪ್ರೋತ್ಸಾಹಿಸಿದರು. ಅಲ್ಲಿಂದ ಪಂಜುವಿನ ಪರಿಸರ ಸ್ನೇಹಿ ಪರಿಕರಗಳಿಗೆ ಭಾರಿ ಬೇಡಿಕೆ ಬರಲಾರಂಭಿಸಿತು. ಅಲ್ಲದೆ ವಿಶ್ವ ಪರಿಸರ ದಿನಾಚರಣೆಯಂದು ದೆಹಲಿಯಲ್ಲಿ ಪರಿಸರ ಮಂತ್ರಾಲಯವು ಪಂಜು ಮತ್ತು ಮಂಜಯ್ಯರನ್ನು ಸನ್ಮಾನಿಸಿತು.

ಮಂಜಯ್ಯನ ಬಡತನ ದೂರಾಯಿತು. ಮಂಜಯ್ಯ ತನ್ನ ಮಗನ ಬಗ್ಗೆ ಹೆಮ್ಮೆಪಟ್ಟುಕೊಂಡನು. ಮಂಜಯ್ಯನ ಪಾಲಿಗೆ ಮಡಿಕೆ ಮಣ್ಣಾಗಿತ್ತು. ಈಗ ಮತ್ತೆ ಮಣ್ಣು ಮಾಡಿಕೆಯಾಗಿದೆ. ಮಾರುಕಟ್ಟೆಯಲ್ಲಿ ಮಂಜಯ್ಯ ಬ್ರಾಂಡಿನ ಮಣ್ಣಿನ ಕುಸುರಿ ಪರಿಕರಗಳಿಗೆ ಬಹಳ ಬೇಡಿಕೆ ಉಂಟಾಯಿತು. ಪಂಜುವಿನ ಉತ್ಪನ್ನಗಳಿಗೆ ಆಗ್ರಾ, ಹರಿದ್ವಾರ, ಚಿತ್ರಕೂಟ, ಅಯೋಧ್ಯಾ, ಗ್ವಾಲಿಯರ್‍ಗಳಿಂದ ನಿರಂತರ ಪೂರೈಕೆ ಕುರಿತು ದೊಡ್ಡ ಪ್ರಮಾಣದ ವ್ಯಾಪಾರದ ಬೇಡಿಕೆ ಬಂದಿತು. ಈ ಬೇಡಿಕೆಯನ್ನರಿತ ಪಂಜು ಒಂದು ದೊಡ್ಡ ಜಾಗ ಕೊಂಡುಕೊಂಡು ಇನ್ನೂ ಹಲವು ಯಂತ್ರಗಳನ್ನು ತರಿಸಿ ಉದ್ಯಮವನ್ನು ವಿಸ್ತರಿಸಿದ. ಮಂಜಯ್ಯನ ಮಗ ಪಂಜು ಲಕ್ಷಾದೀಶ್ವರನಾದನು. ಪಂಜುವಿಗೆ ಪೈಪೋಟಿ ಕೊಡಲು ಆ ಅವಧಿಯಲ್ಲಿ ಯಾರಿಂದಲೂ ಸಾಧ್ಯವಾಗಲಿಲ್ಲ. ಪಂಜುವಿನ ಶ್ರದ್ಧೆ ಮತ್ತು ನಿರಂತರ ದುಡಿಮೆ ಈ ವ್ಯಾಪಾರದ ಗುಟ್ಟಾಗಿತ್ತು. ಅಲ್ಲದೇ ಪಂಜು ತಾನು ಆ ದೊಡ್ಡ ಉದ್ಯಮದ ಮಾಲಿಕನಾಗಿದ್ದರೂ ತನ್ನ ನೌಕರರೊಂದಿಗೆ ಸೇರಿ ನೌಕರನಾಗಿ ಕೆಲಸ ಮಾಡುತ್ತಿದ್ದನು. ನೌಕರರ ನೋವು ನಲಿವುಗಳಿಗೆ ಹತ್ತಿರದಿಂದ ಸ್ಪಂದಿಸುತ್ತಿದ್ದನು. ಈ ಗುಣವೆ ಪಂಜುನನ್ನು ಗೆಲ್ಲಿಸಿತ್ತು. ಅಂದು ಪಂಜು ತನ್ನಪ್ಪನ ತಿರುಗದ ತಿಗರಿಯನ್ನು ತಿರುಗುಂತೆ ಮಾಡದಿದ್ದರೆ ಇಂದು ಅವನ ಕುಲಕಸುಬಿಗೆ ನೆಲೆಯಿರುತ್ತಿರಲ್ಲವೇನೊ. ಮಾಣಿಕಪುರದÀ ಎಷ್ಟೋ ಜನ ನಿರುದ್ಯೋಗಿಗಳು ಪಂಜುವಿನಿಂದ ಸ್ಪೂರ್ತಿಪಡೆದುಕೊಂಡು ಸೃಜನಶೀಲರಾದರು.

ಒಂದು ದಿನ ಸಂಜೆ ಮಂಜಯ್ಯ ಸುಗಂಧಿಯೊಂದಿಗೆ ಚಹ ಕುಡಿಯುತ್ತಾ ಕುಳಿತಿರುವಾಗ, “ಸುಗಂಧಿ! ಮನುಷ್ಯ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಇಲ್ಲವಾದರೆ ಜೀವನ ದುಸ್ತರವಾಗತ್ತೆ ನನ್ನ ತರಹ. ನಾನು ಕಾಲಕ್ಕೆ ತಕ್ಕಂತೆ ಬದಲಾಗಲಿಲ್ಲ. ಅಜ್ಜ ಹಾಕಿದ ಆಲದ ಮರಕ್ಕೆ ನೇತಾಡಿದೆ. ಆದರೆ ನಮ್ಮ ಪಂಜು ನನ್ನಂತಲ್ಲ. ಈಗಿನ ಕಾಲದ ಅಭಿರುಚಿ ಬಲ್ಲವ. ನನ್ನ ಮಗ ನನಗೆ ಮರುಜನ್ಮ ನೀಡಿಬಿಟ್ಟ ಕಣೆ” ಎಂದು ಭಾವುಕನಾದನು. ಆಗ ಸುಗಂಧಿಯು, “ನೊಂದಕೋಬೇಡಿ, ನಮ್ಮ ಮಗ ಇಂದು ನಮಗಷ್ಟೆ ಅಲ್ಲ ನಮ್ಮ ಈ ಕುಲಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದಾನೆ. ಎಷ್ಟೋ ಜನ ಕುಲಕಸುಬುದಾರರಿಗೆ ಪ್ರೇರಣೆಯಾಗಿದ್ದಾನೆ ಪಂಜು. ಇನ್ನೇನು ನಮಗೆ ಬದುಕೆ ಇಲ್ಲ ಎಂದು ಕೈಚೆಲ್ಲಿ ಕುಳಿತ ನಮ್ಮ ಮಡಕೆಕಾರರ ತಿರುಗದ ತಿಗರಿಗಳನ್ನು ತಿರುಗಿಸುವಂತೆ ಮಾಡಿದ್ದಾನೆ. ನಾವು ಮಾಡಲಾಗದಿರುವುದನ್ನು ನಮ್ಮ ಮಗನಾದರೂ ಮಾಡಿದನಲ್ಲ ಎಂದು ಖುಷಿ ಪಡೋಣ” ಎಂದು ಮಂಜಯ್ಯನನ್ನು ಸಮಾಧಾನಪಡಿಸಿ ಅಡುಗೆಮನೆಯೊಳಗೆ ಹೋದಳು. ಮಂಜಯ್ಯನ ಕುಲಬಾಂಧವರೆಲ್ಲಾ ಒಮ್ಮೆ ಮಂಜಯ್ಯನ ಮನೆಗೆ ಬಂದು ಪಂಜುವಿನ ಕಾರ್ಯ ಮೆಚ್ಚಿ ಕೊಂಡಾಡುವಾಗ ಮಂಜಯ್ಯನ ಕಣ್ಣುಗಳು ಆನಂದ ಕಣ್ಣೀರಿನಿಂದ ಒದ್ದೆಯಾದವು. “ನಮ್ಮಗಳ ಮಡಕೆ ಮಣ್ಣಾಗಲಿಕ್ಕೆ ಬಿಡಲಿಲ್ಲ ನಿಮ್ಮ ಪಂಜು. ಆತ್ಮವಿಶ್ವಾಸ ಬತ್ತಿಹೋದ ನಮ್ಮೆದೆಗಳಲ್ಲಿ ಗೆಲುವಿನ ಜೀವ ತುಂಬಿಸಿದ್ದಾನೆ. ಆ ದ್ಯಾವರು ನಿಮ್ಮನ್ನು ಚೆನ್ನಾಗಿಟ್ಟಿರಲಿ” ಎಂದು ಹರಸಿ ಹಾರೈಸಿ ಹೋಗುವಾಗ ಸುಗಂಧಿ ಮತ್ತು ಮಂಜಯ್ಯ ತಮ್ಮ ಜೀವನದ ಸಾರ್ಥಕ್ಯವನ್ನು ಕಂಡರು.

ಜಗದೀಶ ಸಂ.ಗೊರೋಬಾಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Ganesh mandarthi
Ganesh mandarthi
3 years ago

Jaggu super…. keep it up

1
0
Would love your thoughts, please comment.x
()
x