ಮಲೆನಾಡಿನ ಅಡಿಕೆ ವ್ಯವಸಾಯ ಮತ್ತು ಪರಿಸ್ಥಿತಿ: ಗೀತಾ ಜಿ.ಹೆಗಡೆ, ಕಲ್ಮನೆ.


ಈ ಯುಗಾದಿ ಹಬ್ಬದ ಆಸು ಪಾಸು ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಅಡಿಕೆ ಕೊಯ್ಲು ಬಲು ಜೋರು. ಎಲ್ಲರ ಮನೆ ಅಂಗಳದಲ್ಲಿ ದೊಡ್ಡ ದೊಡ್ಡ ಅಟ್ಟ ನಿರ್ಮಿಸಿ ಅದರ ತುಂಬಾ ಅಡಿಕೆಯ ಹರವು ಕಂಡರೆ ಇನ್ನು ಮನೆ ಒಳಗೆ, ಹೆಂಚಿನ ಮಾಡಿನ ಮೇಲೆ ಎಲ್ಲೆಂದರಲ್ಲಿ ಅಡಿಕೆಯದೇ ದರ್ಬಾರು. ಒಣಗಿಸಲು ಹಾಕಿದ ಗೋಟು ಬಿಸಿಲಿಗೆ ಬಾಡಿ ಮುತ್ತಜ್ಜಿ ಮುಖವಾದರೆ ಇತ್ತ ಹಸಿ ಅಡಿಕೆ ಸೊಲಿದು ಬೇಯಿಸಿ ಒಣಗಿಸಿ ತೊಗರು ಬಣ್ಣದಲ್ಲಿ ಮಿರಿ ಮಿರಿ ಮಿಂಚುತ್ತಾ ಕೆಂಪಡಿಕೆಯೆಂಬ ಹೆಸರು ಪಡೆಯುತ್ತದೆ. ಒಂದು ರೀತಿ ಘಮಲು ಜಗುಲಿಯ ತುಂಬೆಲ್ಲ.

ಈ ಕೆಂಪಡಿಕೆ ಜಾಸ್ತಿ ತಯಾರಿಸೋದಿಲ್ಲ. ಏಕೆಂದರೆ ಇದಕ್ಕೆ ಕೆಲಸ ಜಾಸ್ತಿ. ಹಸಿ ಅಡಿಕೆಯನ್ನು ಮರದಿಂದ ಕೊಯ್ದ ಒಂದೆರಡು ದಿನಕ್ಕೆ ಹೆಚ್ಚು ಅಂದರೆ ಮೂರು ದಿನಗಳೊಳಗೆ ಅಡಿಕೆಯನ್ನು ಸುಲಿಯಬೇಕು. ಇದನ್ನು ಸುಲಿಯುವಾಗ ಅದರಲ್ಲಿರುವ ರಸಕ್ಕೆ ಕೈಯ್ಯೆಲ್ಲಾ ಕಪ್ಪಾಗಿ ಒಡೆದು ಬೆರಳುಗಳು ಸಣ್ಣದಾಗಿ ಸೀಳು ಬಿಡುತ್ತವೆ. ಈ ಅಡಿಕೆಯನ್ನು ದೊಡ್ಡ ತಾಮ್ರದ ಹಂಡೆಯಲ್ಲಿ ನೀರು,ಸುಣ್ಣ ,ಮರದ ಚೆಕ್ಕೆ ಬೆರೆಸಿ ಬೇಯಿಸಬೇಕು. ಅಡಿಕೆ ಬೆಂದಂತೆ ಅಡಿಕೆಯಲ್ಲಿರುವ ಸಣ್ಣ ಕಣ್ಣು ಅಡಿಕೆಯಿಂದ ಬಿಟ್ಟು ಮೇಲೆ ಬರುತ್ತದೆ. ತದ ನಂತರ ದೊಡ್ಡ ಬೆತ್ತದ ಬುಟ್ಟಿಗೆ ಅಡಿಕೆಯನ್ನು ಹಂಡೆಯಿಂದ ತೆಗೆದು ಹಾಕಿ ನೀರೆಲ್ಲ ಸೋರಿದ ಮೇಲೆ ಬಿಸಿಲಿಗೆ ಚೆನ್ನಾಗಿ ಒಣಗಿಸಬೇಕು.

ಒಣಗಿದ ಮೇಲೆ ಮತ್ತಿದರಲ್ಲಿ ವರ್ಷ ಪೂರ್ತಿ ಕೆಲಸಗಾರರಿಗೆ ಕೊಡಲು ಒಂದಷ್ಟು ಅಡಿಕೆ ಆಯ್ದಿಡುತ್ತಾರೆ. ‌ಮನೆ ಮಂದಿಗೆ ಕವಳ ಹಾಕಲು ಆಪಿ ಅಡಕೆ ಆಯ್ದಿಡುವ ಕೆಲಸ ಬೇರೆ. ಈ ಅಡಿಕೆ ತಿನ್ನಲು ಅಷ್ಟು ಒಗರಿರುವುದಿಲ್ಲ ರುಚಿ ಜಾಸ್ತಿ. ಇದರಲ್ಲೇ ಮದುವೆ ಮುಂಜಿ ಸಮಾರಂಭಗಳಲ್ಲಿ ಮನೆಯಲ್ಲಿಯೇ ತಯಾರಾಗುತ್ತವೆ ತುಪ್ಪದ ಅಡಿಕೆ ಪುಡಿ. ತಿನ್ನುವ ಅಡಿಕೆಗೆ ತೊಗರು ಬಣ್ಣ ಹಾಕುವುದಿಲ್ಲ.

ಈ ಹಿಂದೆ ಅಡಿಕೆ ಬೇಯಿಸಿದ ನೀರು ಬಿಸಿಲಿಗಿಟ್ಟ ಪರಿಣಾಮ ಕೆಂಪನೆಯ ತೊಗರು ಬಣ್ಣವಾಗಿ ವರಿವರ್ತನೆಯಾಗಿರುತ್ತದೆ. ಇದರಲ್ಲಿ ಒಣಗಿದ ಅಡಕೆಯನ್ನು ಚಿಕ್ಕ ಬುಟ್ಟಿಯ ಸಹಾಯದಿಂದ ಮುಳುಗೇಳಿಸಿ ಮತ್ತೆ ಈ ತೊಗರೆಲ್ಲ ಬಸಿಯುವವರೆಗೆ ಇಟ್ಟು ಪುನಃ ನಾಲ್ಕಾರು ಬಿಸಿಲು ಒಣಗಿಸಬೇಕು. ಈಗ ಅಡಿಕೆಯು ಅಚ್ಚ ಕೆಂಪು ಬಣ್ಣ ತಳೆದು ಮಾರಾಟಕ್ಕೆ ತಯಾರಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ತೊಗರು ಬಣ್ಣ ಹಾಕದೇ ಹಾಗೆ ಮಾರಾಟ ಮಾಡುತ್ತಿದ್ದಾರೆಂದು ಕೇಳ್ಪಟ್ಟೆ. ಇದು ಖರೀದಿದಾರರ ಡಿಮಾಂಡ್ ಅಂತೆ!

ಇನ್ನು ಮರದಲ್ಲೆ ಹಣ್ಣಾದ ಅಡಿಕೆಗೆ ಗೋಟು ಎಂದು ಕರೆಯುತ್ತಾರೆ. ಇದು ಮರದಲ್ಲಿ ಹಣ್ಣಾದಂತೆ ಉದುರಿ ಬೀಳೋದರಿಂದ ಆಯಾ ಸಮಯಕ್ಕೆ ಸರಿಯಾಗಿ ಮರದಿಂದ ಕೊಯ್ಯಲೇ ಬೇಕು. ಇದನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ನಂತರ ಸುಲಿಯಬೇಕು. ಈ ಅಡಿಕೆ ಸುಲಿಯದೇ ಒಂದು ವರ್ಷದವರೆಗೂ ಇಟ್ಟುಕೊಂಡು ಸಮಯವಾದಾಗಲೆಲ್ಲ ಸುಲಿಯಬಹುದು. ಇದು ದೊಡ್ಡ ಹಿಡುವಳಿದಾರರಿಗೆ ಮಾತ್ರ ಸಾಧ್ಯ! ಈ ಒಣಗಿದ ಅಡಿಕೆಗೆ ಚಾಲಿ ಅಡಿಕೆ ಎಂದು ಕರೆಯುತ್ತಾರೆ. ಸುಲಿದ ಈ ಚಾಲಿ ಅಡಿಕೆಯಲ್ಲಿ ಉತ್ತಮ ಅಡಿಕೆ, ಗೋಟು ಅಡಿಕೆ ಮತ್ತು ಕೋಕಾ ಅಡಿಕೆ ಎಂದು ಮೂರು ಭಾಗ ಮಾಡುತ್ತಾರೆ. ಗೋಟಡಿಕೆಯನ್ನು ಚಿಕ್ಕ ಕತ್ತಿಯಲ್ಲಿ ಒಂದೊಂದೇ ಹೆರೆದು ಅಂಟಿಕೊಂಡ ಸಿಪ್ಪೆ ತೆಗೆದು ಉತ್ತಮ ಅಡಿಕೆಯಾಗಿ ಪರಿವರ್ತಿಸುತ್ತಾರೆ. ಕೋಕಾ ಅಡಿಕೆಗೆ ಬೆಲೆ ಕಡಿಮೆ. ಇದು ಹಾಳಾದ, ಒಟ್ಟೆ ಬಿದ್ದ,ಒಡೆದ ಅಡಿಕೆಗಳ ಆಯ್ದ ಗುಂಪು. ಚಾಲಿ ಸುಲಿದ ಮೇಲೂ ಕೆಲವು ತಿಂಗಳು ಇಟ್ಟುಕೊಂಡು ಒಳ್ಳೆಯ ಬೆಲೆ ಬಂದಾಗ ಮಾರಿಕೊಳ್ಳಬಹುದು. ಇದೇ ರೀತಿ ಕೆಂಪಡಿಕೆಗೂ ಅವಕಾಶವಿದೆ.

ಅಡಿಕೆ ಸುಲಿಯಲು ಹೆಣ್ಣಾಳುಗಳು ಸಿಗೋದಿಲ್ಲ. ಗತಿಯಿಲ್ಲದೇ ಮನೆ ಮಂದಿಯೆಲ್ಲ ಹಗಲೊತ್ತಿನಲ್ಲಲ್ಲದೆ ರಾತ್ರಿ ಹನ್ನೊಂದಾಗಲಿ ಹನ್ನೆರಡಾಗಲಿ ಸುಲಿಯುವ ಕಸರತ್ತಿನಲ್ಲಿ ಮಗ್ನರಾಗಲೇ ಬೇಕು. ಇನ್ನು ಸುಲಿಯುವವರು ಸಿಕ್ಕರೂ ಸುಲಿಯುವ ಹೆಣ್ಣಾಳುಗಳಿಗೆ ಡಿಮಾಂಡ್ ಜಾಸ್ತಿ ಆದಂತೆ ಅವರ ಶರತ್ತುಗಳೂ ಏರುತ್ತಲೇ ಇವೆ. ತಿಂಡಿ, ಊಟ ಕೊಟ್ಟು ಕವಳ ಹಾಕಲು ಅಡಿಕೆನೂ ಕೊಡಬೇಕು. ಅವರು ಸುಲಿದ ಅಡಿಕೆಗೆ ಒಂದು ಸಾವಿರಕ್ಕೆ (ಒಂದು ಅಳತೆಯ ಬುಟ್ಟಿ ತುಂಬಿ ಅಳೆಯುತ್ತಾರೆ. ಇದಕ್ಕೆ ಒಂದು ಬುಟ್ಟಿಗೆ ಒಂದು ಸಾವಿರ ಅನ್ನೋದು) ಇಂತಿಷ್ಟು ಅಂತ ಕಾಸೂ ಕೊಡಬೇಕು. ಒಮ್ಮೊಮ್ಮೆ ಹಗಲೆಲ್ಲ ಬೇರೆ ಕೆಲಸ ಮಾಡಿ ಸಂಜೆ ಬಂದು ತಡ ರಾತ್ರಿಯವರೆಗೆ ಇದ್ದು ಅಡಿಕೆ ಸುಲಿದು ಹೋಗುತ್ತಾರೆ. ಇವರು ಸುಲಿದು ಮುಗಿಸುವ ಅಷ್ಟೂ ಹೊತ್ತೂ ಮನೆ ಜನ ಅವರೊಂದಿಗೆ ಕುಳಿತು ಅಡಿಕೆ ಸುಲಿಯುತ್ತಿರುತ್ತಾರೆ.

ತಡ ರಾತ್ರಿಯವರೆಗೂ ಅಡಿಕೆ ಸುಲಿಯುವಾಗಿನ ಸಂಭಾಷಣೆಗಳೂ ಅಷ್ಟೇ ಜೋಷಾಗೂ ಇರುತ್ತದೆ. ಏನೇನೆಲ್ಲಾ ಸುದ್ದಿ ವಿಷಯಗಳು ತಟಪಟ ಅಂತ ಹಣುಕಿ ಹಾಕುವುದಂತೂ ನಿಶ್ಚಿತ ;

“ಅಲ್ವೆ ನಾಗಿ ನೀನು ಪಟೇಲರ ಮನೆ,ಮನೆ ಕೆಲಸಕ್ಕೆ ಹೋಗ್ತೀಯಲ್ಲಾ ಅವರ ಮಗಳು ಗಂಡನ ಮನೆಗೆ ಹೋದ್ಲಾ?”

“ಇಲ್ಲೆ ಮಾರ್ರೆ, ಇನ್ನೂ ಇಲ್ಲೇ ಇತ್ತು. ರಾಶಿ ದಿನಾ ಆತು ಬಂದು.”

“ಹೌದನೆ? ನಂಗೂ ಯಾರೊ ಹೇಳಿದ್ರು. ಅದಕ್ಕೆ ಕೇಳ್ದೆ. ಪಾಪ ಗಂಡ ಹೆಂಡತಿ ಮಧ್ಯೆ ಎಂತಾ ಆತ ಏನ?, ಪ್ಯಾಟೆಲ್ಲಿ ಇರ್ತು ಹೇಳಿ ನೌಕರಿ ಇರವ್ನೆ ಹುಡುಕಿ ಮದುವೆ ಮಾಡಿದ್ದಾ ಪಟೇಲಾ. ದೊಡ್ಡವರ ಮನೆ ಕತೆಯೇ ಇಷ್ಟು. ನಮಗೆಂತಕ್ಕೆ ದೊಡ್ಡವರ ವಿಚಾರಾ?”

” ಹೌದ್ರಮ್ಮಾ, ಆದ್ರೂ ಒಸಿ ಪಾಪ ಕಾಣ್ತದೆ‌ ಎಷ್ಟೆಂದರೂ ನಮ್ಮಂಗೆ ಹೆಣ್ಣು ಅಲ್ವಾ?”

“ಹೌದು ಮಾರಾಯ್ತಿ”

“ಇಲ್ಕೇಳಿ ನಿಂಗ ಹೋಗಿ ಮಲ್ಕಳಿ. ನಾ ಇವೆಲ್ಲ ಹೋದ ಮೇಲೆ ಬಂದು ಮಲ್ಕತ್ತಿ‌ ಸಂಜಿಕಡಿಗೆ ತಲೆ ನೋವೆ. ಎಂತಕೊ ಚಳಿ ಚಳಿ ಆಗ್ತೆ ಹೇಳಿದ್ರಲ್ದ?”

ಎಲ್ಲೋ ಇದ್ದ ಗೌರಕ್ಕ ಪಟಕ್ಕಂತ ಗಂಡನ ಬುಡಕ್ಕೆ ಬರೋದು ಕಾಳಜಿ ಕರುಣೆ ದೇಕರೇಖೆ ಎಲ್ಲ ಮಿಳಿತ ಇವೆಲ್ಲವೂ ನಮ್ಮ ಹಳ್ಳಿ ಹೆಂಗಸರಲ್ಲಿ ಹಾಸು ಹೊಕ್ಕಾಗಿದೆ ಅಂದರೂ ತಪ್ಪಿಲ್ಲ‌.

ಇನ್ನೊಂದು ಇತ್ತೀಚಿನ ವರ್ಷಗಳಲ್ಲಿ ಸುಲಿಯುವವರು ಇಲ್ಲದೇ ಬಂದ ಹೊಸ ಪದ್ಧತಿ ಅವರ ತಂಡ ಇರುವಲ್ಲಿಗೇ ಬಾಡಿಗೆ ವಾಹನದಲ್ಲಿ ಹಸಿ ಮತ್ತು ಒಣಗಿದ ಚಾಲಿ ಅಡಕೆಯನ್ನು ಕೊಂಡೊಯ್ದು ಸುಲಿದಿಟ್ಟಿದ್ದನ್ನು ಮತ್ತೆ ಹೋಗಿ ತರಬೇಕು. ಆಮೇಲೆ ಹಸಿ ಅಡಕೆಯನ್ನು ಬೇಯಿಸಿ,ಒಣಗಿಸಿ,ಆರಿಸಿ,ತೊಗರು ಬಣ್ಣ ಹಾಕಿ ಮತ್ತೆ ಒಣಗಿಸಿ ರೆಡಿ ಮಾಡೋ ಅಷ್ಟರಲ್ಲಿ ಅಡಿಕೆಯ ಅರ್ಧಕ್ಕಿಂತ ಹೆಚ್ಚು ಬೆಲೆ ಇದಕ್ಕೇ ಖರ್ಚಾಗಿರುತ್ತದೆ. ಇದರ ಮದ್ಯೆ ಹ್ಯಾಮಾರಿಸಿದ ಅಡಿಕೆಯ ಲೆಕ್ಕ ಸಿಗುವುದೇ ಇಲ್ಲ ಬಿಡಿ!

ಅಡಿಕೆ ಕೊಯ್ಲು ಮುಗಿದ ಮೇಲೆ ಮನೆಯೆಲ್ಲಾ ಧೂಳು ತುಂಬಿರುತ್ತದೆ. ಹಳ್ಳಿಗಳಲ್ಲಿನ ಹಳೆಯ ಕಾಲದ ದೊಡ್ಡ ಹೆಂಚಿನ ಮನೆಯ ಮೂಲೆ ಮೂಲೆನೂ ಒಪ್ಪ ಓರಣ ಮಾಡುವುದು ಕಡಿಮೆ ಕೆಲಸವಲ್ಲ‌. ಅಲ್ಲೆಲ್ಲ ಬಂದು ಹೋಗುವ ನೆಂಟರು, ಪರಿಚಯದವರು ಜಾಸ್ತಿ. ಆಯಾ ಸಮಯಕ್ಕೆ ತಕ್ಕಂತೆ ಊಟೋಪಚಾರ ಮಾಡಲೇ ಬೇಕು. ಹೊತ್ತಿಲ್ಲ ಗೊತ್ತಿಲ್ಲ. ಅನು ಆಪತ್ತು ಬಂದರಂತೂ ಮುಗಿದೇ ಹೋಯ್ತು. ಪೇಟೆಯ ವೈದ್ಯರ ಭೇಟಿ ಅಷ್ಟು ಸುಲಭದಲ್ಲಿಲ್ಲದ ಕಾರಣ ಮೊದಲು ಹಳ್ಳಿ ಮದ್ದು. ಇದಕ್ಕೂ ಬಗ್ಗದಿದ್ದರೆ ಪೇಟೆಯತ್ತ ಮುಖ ಚಕ್ಕಡಿ ಗಾಡಿಯಲ್ಲಿ. ಇದು ಆಗಿನ ಸಂಗತಿ. ಈಗ ಸಾಕಷ್ಟು ಹಳ್ಳಿಯ ಸ್ಥಿತಿ ಬದಲಾಗಿದೆ, ಆಧುನಿಕತೆಯ ಎಲ್ಲ ಸೌಲತ್ತುಗಳನ್ನೂ ಮೈಗೂಡಿಸಿಕೊಂಡಿದೆ.

ಇನ್ನು ಇದರ ನಡುವೆ ಹಳ್ಳಿಯ ಹೆಂಗಸರು ತಮ್ಮ ತಮ್ಮ ಮನೆವಾರ್ತೆಯ ಜೊತೆಗೆ ಬಟ್ಟೆ ಹೊಲಿಯುವುದು, ಹಾಡು,ಶೇಡಿ,ಕುಶಲ ಕೈಗಾರಿಕೆಯಲ್ಲಿ ನಿಪುಣತೆಯನ್ನು ಹೊಂದಿರುತ್ತಾರೆ. ಎಷ್ಟೋ ಹೆಂಗಸರು ಮನೆಯಲ್ಲಿ ಕುಳಿತು ಕಲಿಕೆಯ ಹಂಬಲ ಈಡೇರಿಸಿಕೊಳ್ಳುತ್ತಾರೆ ಅಲ್ಲೆ ಅಕ್ಕ ಪಕ್ಕದ ಮನೆಯವರೊಂದಿಗೆ ಅರಿತು. ಈಗಂತೂ ಟೀವಿ ಬಂದಿರೋದರಿಂದ ಆ ಸಮಯಕ್ಕೆ ಸರಿಯಾಗಿ ಟೀವಿ ಮುಂದೆ ಕುಳಿತು ಕಲಿಯುತ್ತಿದ್ದಾರೆ. ಅವರ ಆಯ್ಕೆ ಹೆಚ್ಚಾಗಿ ಹೊಸ ಹೊಸ ಅಡಿಗೆ, ಕಸೂತಿ, ನರ್ಸರಿ ಇತ್ಯಾದಿ.

“ಸವಿತಾ ಬಗ್ಗನೆ ಟೀವಿ ಹಾಕು ಚಂದನ. ಹೊಸಾ ಕಸೂತಿದೆಂತದೊ ಹೇಕೊಡ್ತಾ ಇದ್ದ. ಪುರುಸೊತ್ತು ಇದ್ದರೆ ಬಾರೆ ಯಮ್ಮನಿಗೇಯಾ. ಊಟ ಆಗಿ ಕೆಲಸೆಲ್ಲ ಆತನೆ…?”

“ಹೂಂ. ಆತೆ. ಆದರೆ ಯಮ್ಮನಿಗೆ ಮದುವೆಗೆ ಕರೆಯಲ್ಲೆ ಬಂಜ್ವೆ ನೆಂಟರು. ನೀ ನೋಡಿಟ್ಗ. ಯಂಗೆ ಕಡಿಗೆ ಹೇಳ್ಕೊಡಲಕ್ಕು ಅಕಾ..?”

ನೋಡಿ ಇಂತಹ ಹೊಂದಾಣಿಕೆಗಳು ಇಲ್ಲಿಗೇ ಮುಗಿಯುವುದಿಲ್ಲ. ಸಂಜೆ ಹಸು ಎಮ್ಮೆ ಹಾಲು ಕರೆದು ಮನೆಗೆ ಬೇಕಾದಷ್ಟು ಇಟ್ಟು ಒಂದು ಕ್ಯಾನಲ್ಲಿ ಮಿಕ್ಕಿದ ಹಾಲು ಸುರಿದು ಹೊರಡುತ್ತಾರೆ ಊರ ಸೊಸೆಯಂದಿರು. ಒಂದು ಕೀ.ಮೀ.ದೂರದಲ್ಲಿರುವ ಹಾಲಿನ ಡೇರಿಗೆ. ಅಲ್ಲೊಂದು ನೂರಾರು ವರ್ಷದ ಹಳೆಯ ಮಾವಿನ ಮರ. ಸುತ್ತ ಕಟ್ಟೆ ಹಾಕಿದ್ದಾರೆ. ಅದು ಊರ ಭೂತಪ್ಪನ ಕಟ್ಟೆ. ಅದರ ಮೆಟ್ಟಿಲ ಮೇಲೆ ಕುಳಿತು ಒಂದಷ್ಟು ಹೊತ್ತು ಹರಟೆ. ಹಾಗೆ ಸುತ್ತ ಮುತ್ತ ಸಮಾರಂಬಕ್ಕೆ ಒಟ್ಟಾಗಿ ಹೋಗುವ ಬಗ್ಗೆ ನಿರ್ಧಾರ. ಬೆಳಗಿಂದ ಸಾಯಂಕಾಲದವರೆಗೆ ನಡೆದ ಅವರವರ ಮನೆ ವಿದ್ಯಮಾನವೆಲ್ಲ ಹರಡಿ ಹಂಚಿಕೊಂಡು ಖುಷಿ ಪಡುವ ದುಃಖ ತೋಡಿಕೊಳ್ಳುವ, ಸಾಂತ್ವನ ಹೇಳಿಕೊಳ್ಳುವ ಪೃಕ್ರಿಯೆ ನಡೆಯುತ್ತದೆ ನಿರಂತರ.

ಈ ಬೆಂದಕಾಳೂರಿನಲ್ಲಿ ಮತ್ತದೇ ಬದಲಾವಣೆಯಿಲ್ಲದ ನಿರಂತರ ಬದುಕು ಅಲ್ಲಿ ಹೋದರೆ ನಾನ್ಯಾಕೆ ಇಲ್ಲೇ ಜೀವನ ನಡೆಸುವಂತಾಗಲಿಲ್ಲ ಅಂತ ಹಲವು ಸಂದರ್ಭದಲ್ಲಿ ಅನಿಸಿದ್ದಿದೆ. ನಿತ್ಯ ಹೊಸತನ ಹೊಸ ಚೈತನ್ಯ ಆ ಮುಗ್ದ ಮನಸುಗಳಲ್ಲಿವೆ, ಆ ಪ್ರಕೃತಿಯಲ್ಲಿದೆ, ಸುತ್ತಮುತ್ತಲಿನ ವಾತಾವರಣದಲ್ಲಿದೆ. ಹಳ್ಳಿ ಜೀವನ ಕಷ್ಟವಾದರೂ ಇಷ್ಟ ಪಡುವ ಬೇಕಾದಷ್ಟು ಸಂಗತಿಗಳು ಅಲ್ಲಿವೆ.

ಬದುಕು ಅತ್ಯಂತ ಹತ್ತಿರ ಆಪ್ತವಾಗುವ ವಾತಾವರಣ ಅಲ್ಲಿ. ಮೈತುಂಬ ಕೆಲಸವಿರುವಾಗ ಬೇರೆ ಯೋಚನೆಗೂ ಆಸ್ಪದ ನೀಡದ ಹೊತ್ತುಗಳು ನಮ್ಮನ್ನು ಆವರಿಸಿಬಿಟ್ಟಿರುತ್ತವೆ. ಇಂಟರ್ನೆಟ್ ಇಲ್ಲ. ಯಾವ ಗೌಜು,ಗಲಾಟೆ, ಪೊಲ್ಯೂಷನ್ ಇಲ್ಲ. ಒಂದು ಬೆಳಗ್ಗೆ ಎದ್ದರೆ ಶುರುವಾಗುತ್ತದೆ ಕೆಲಸ ಕೆಲಸ ಕೆಲಸ.

ಕೊಟ್ಟಿಗೆಯಲ್ಲಿಯ ಹಸು ಎಮ್ಮೆಗಳು ಅಂಬಾ ಎಂದು ಕೂಗಿ ಕರೆಯುವ ಸದ್ದು ಕರ್ಣ ತುಂಬಿಕೊಳ್ಳುವಾಗ ಕಣ್ಣು ಬಿಟ್ಟಂತೆ ಕಾಣುವುದು ಹಸಿರು ವನಗಳ ರಾಶಿ. ಯಾರ ಮನೆಯೇ ಆಗಲಿ ಮನೆ ಸುತ್ತ ಮುತ್ತ ಹಿತ್ಲು ಎಂದು ಕರೆಸಿಕೊಳ್ಳುವ ಗಾರ್ಡನ್. ಚಿಲಿಪಿಲಿ ಹಕ್ಕಿಗಳ ನಿನಾದ. ಚುಮು ಚುಮು ಬೆಳಗಲ್ಲಿ ಆ ಎಲೆಗಳ ಮೇಲೆ ಮಂಜಿನ ಮುತ್ತು. ಬಾಳೆ ಎಲೆಗಳ ಬಾಗುತನಕೆ ತೊಟ್ಟಿಕ್ಕುತ್ತವೆ ಮಂಜಿನ ಹನಿಗಳು.

ಅಣ್ಣ ಕೊಟ್ಟಿಗೆಯಲ್ಲಿ ಸಗಣಿ ಎಲ್ಲ ಬಾಚಿ ಹುಲ್ಲು ಹಾಕಿದರೆ ಅತ್ತಿಗೆ ಹಾಲು ಕರೆಯುವ ಚೊಂಬು ಹಿಡಿದು ಹೊರಡುತ್ತಾಳೆ.
ಇಲ್ಲಿಂದಲೇ ಶುರುವಾಗುತ್ತದೆ ಗಂಡ ಹೆಂಡತಿಯ ಮದ್ಯೆ ಸಾಮರಸ್ಯ. ನಾನು ನನ್ನದೆನ್ನುವ ದುಡಿದು ಬದುಕು ಸಾಗಿಸುವ ಮೂಕ ಪ್ರಾಣಿಯ ಮೇಲೆ ಉಕ್ಕಿ ಹರಿಯುವ ಮಮತೆ ಅವರವರ ಪಾಡಿಗೆ ಯಾವುದೇ ಜಟಾಪಟಿಗೆ ಆಸ್ಪದ ಕೊಡದೆ ಸರಾಗವಾಗಿ ಸಾಗುವ ಸಂಸಾರದ ನೊಗ ಇಬ್ಬರೂ ಹೊತ್ತು ನಡೆಯುವಾಗ ತವರು ಹೀಗೆ ತಣ್ಣಗಿರಲಿ ಎಂದು ಮನ ಹಾರೈಸುವುದು ಸುಳ್ಳಲ್ಲ.

ಈಗೇನು ಅಡಿಕೆ ಕೊಯ್ಯೋದರಿಂದ ಹಿಡಿದು ಸುಲಿಯುವವರೆಗೂ ಉಪಕರಣಗಳು ಬಂದಿವೆ. ಆದರೆ ಸಣ್ಣ ಹಿಡುವಳಿದಾರರಿಗೆ ಖರೀದಿಸಿ ನಿರ್ವಹಣೆ ಮಾಡೋದೂ ಕಷ್ಟ. ಇದರ ಅಗತ್ಯ ತಿಳಿದ ಎಷ್ಟೋ ದೊಡ್ಡ ಹಿಡುವಳಿದಾರರು ಯಂತ್ರಗಳನ್ನು ಖರೀದಿಸಿಟ್ಟುಕೊಂಡಿದ್ದಾರೆ. ಬಾಡಿಗೆಗೂ ಕೊಡುತ್ತಾರೆ. ಇನ್ನು ಕೆಲವರು ಸಾಲ ಮಾಡಿ ಮಷಿನರಿ ಖರೀದಿಸಿ ಬಾಡಿಗೆಗೆ ಕೊಡುತ್ತ ಕಂತಿನ ರೂಪದಲ್ಲಿ ಸಾಲ ತೀರಿಸುತ್ತ ಉಪ ಕಸುಬಾಗಿ ಜೀವನ ನಡೆಸುತ್ತಿದ್ದಾರೆ.

ಮಲೆನಾಡಿನ ಚಳಿ ಸುಯ್^^^ಎಂದು ಬೀಸಿ ಬರುವ ಥಂಡಿ ಗಾಳಿ. ಇಂತಹ ಚಳಿಯ ಮದ್ಯೆ ರಾತ್ರಿ ಮನೆಯಿಂದ ಹೊರಗೇ ಮಲಗಿ ಅಡಿಕೆ ಪಾರಾ ಕಾಯಬೇಕು. ಹೀಗೆ ರಾತ್ರಿ ಹಗಲೆನ್ನದೆ ಕೆಲಸ ಮಾಡುವ ನಮ್ಮ ಅಡಿಕೆ ಬೆಳೆಗಾರರ ಸ್ಥಿತಿ ಬಹಳ ಕಷ್ಟಕರವಾಗಿದೆ. ಮುಖ್ಯವಾಗಿ ಕೆಲಸಗಾರರ ಕೊರತೆ ಮತ್ತು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಬೆಳೆ ಬಂದಾಗ ಸಿಗದೇ ಇರುವುದಾಗಿದೆ. ಬೆಲೆ ಬರುವವರೆಗೂ ಬೆಳೆ ಇಟ್ಟುಕೊಂಡು ದಿನ ದೂಡುವ ತಾಕತ್ತು ಸಣ್ಣ ಹಿಡುವಳಿದಾರರಿಗೆ ಖಂಡಿತಾ ಇಲ್ಲ. ಇದೇ ಯೋಚನೆಯಲ್ಲಿರುವ ಅಡಕೆ ಬೆಳೆಗಾರರು ;

“ಹೋಯ್ಯ ಬಾವಾ ನಿಮ್ಮನಿಗೆ ಕೊನೆ ಗೌಡಾ ಯಾವಾಗ ಬತ್ತಿ ಹೇಳಿದ್ನೋ? “

“ಥೊ^^^^ಯಮ್ಮಲ್ಲಂತೂ ಅಡಿಕೆ ಎಲ್ಲಾ ಹಣ್ಣಾಗಿ ಉದರತ್ತಿದ್ದಾ. ದಿನಾ ಬೆಳಗ್ಗೆ ಈ ಚಳಿಯಲ್ಲಿ ಹೆಕ್ಕಲ್ಲೆ ಹೋಪದೆ ಕಷ್ಟ. ಅತ್ಲಾಗೆ ಬಂದು ಕೊಯ್ದಾಕಿದ್ರೆ ಮನೆ ಬಾಗಲಲ್ಲಾದರೂ ಬಿದ್ದಿರ್ತಿತ್ತು. ಅಡಿಕೆ ರೇಟೂ ಸ್ವಲ್ಪ ತೇಜಿ ಆಜಡಾ. ಹೋಗಿದ್ಯ ಪ್ಯಾಟಿಗೆ?”

ಕೇಳುವ ಪ್ರಶ್ನೆಗಿಂತ ಅವರವರ ತಾಪತ್ರಯದ ಮಾತೇ ಇಲ್ಲಿ ಜಾಸ್ತಿ. ಹೀಗೆ ಸಾಗುವ ಆತ್ಮೀಯ ಸಂಭಾಷಣೆ ಹಳ್ಳಿಯ ಸುತ್ತಮುತ್ತಲಿನ ಬಾಂಧವ್ಯ ಇವತ್ತಿಗೂ ಹೀಗೆಯೇ ಇದೆ. ಕೆಲಸಗಾರರಿಲ್ಲದ ಇಂದಿನ ದಿನಮಾನದಲ್ಲಿ ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಊರು ಅಕ್ಕ ಪಕ್ಕದ ಹಳ್ಳಿಯ ಹೆಂಗಸರು ಗಂಡಸರು ಎಲ್ಲರೂ ಸೇರಿ ಒಂದು ಟೀಮ್ ರಚಿಸಿಕೊಂಡು ಅಡಿಕೆ ಕೊಯ್ಯುವುದೊಂದನ್ನು ಬಿಟ್ಟು ಉಳಿದೆಲ್ಲ ಕೆಲಸವನ್ನು ತಾವುಗಳೇ ಒಗ್ಗಟ್ಟಿನಿಂದ ಮಾಡಿ ಮುಗಿಸುತ್ತಿರುವುದನ್ನೂ ಹಲವಾರು ಹಳ್ಳಿಗಳಲ್ಲಿ ಕಾಣಬಹುದು. ಅತ್ಯಂತ ಹೆಣಗಾಡುವ ಅಡಿಕೆ ಬೆಳೆಗಾರರ ಬದುಕು ಇತ್ತೀಚಿನ ದಿನಗಳಲ್ಲಿ ಅಸಹಾಯಕ ಪರಿಸ್ಥಿತಿ ತಲುಪಿದೆ. ಕಾರಣ ;

ವರ್ಷಕ್ಕೊಂದೇ ಬೆಳೆ. ವರ್ಷ ಪೂರ್ತಿ ಖರ್ಚು ಸರಿದೂಗಿಸಿಕೊಳ್ಳಲು ಇರುವ ಬೆಳೆ ಇದೊಂದೇ. ಮೊದಲಾದರೆ ಅಡಿಕೆ ಬೆಳೆ ಜೊತೆಗೆ ಏಲಕ್ಕಿ, ಕಾಳು ಮೆಣಸು, ಬಾಳೆಕಾಯಿ ಇವೆಲ್ಲವೂ ಉಪ ಬೆಳೆಯಾಗಿತ್ತು. ಆದರೀಗ ರೋಗ ಮಂಗನ ಕಾಟದಿಂದಾಗಿ ಅಡಿಕೆ ತೋಟ ಬರಿದಾಗುತ್ತ ಸಾಗಿದೆ. ಹೊಸದಾಗಿ ಹಾಕಿಸಲು ನಾನಾ ರೀತಿಯ ಆರ್ಥಿಕ ತೊಂದರೆ. ಜೊತೆಗೆ ಕೆಲಸದವರ ತತ್ವಾರ. ಮನೆ ಮಕ್ಕಳು ಓದಿ ಪಟ್ಟಣ ಸೇರಿದರೆ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದವರು ಹಬ್ಬ ಹುಣ್ಣಿಮೆ ರಜಾದಲ್ಲಿ ಬಂದು ನಾಲ್ಕು ದಿನ ಉಳಿದು ಹೋಗುತ್ತಾರೆ.

ಹಳ್ಳಿಯಲ್ಲೇ ಉಳಿದು ವ್ಯವಸಾಯ ಮಾಡುತ್ತಿರುವ ಗಂಡಿಗೆ ಹೆಣ್ಣು ಕೊಡುವವರು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳಿಗೆ ಮದುವೆಯೂ ಮಾಡಲಾಗದೇ ಹೆತ್ತವರು ಕಂಗಾಲಾಗುತ್ತಿದ್ದಾರೆ. ಮಗನ ಒಂಟಿ ಜೀವನ ನೋಡುತ್ತ ಮನೆ ದೀಪ ಹಚ್ಚಲೂ ಒಂದು ಹೆಣ್ಣು ಸಿಗುತ್ತಿಲ್ಲವಲ್ಲಾ? ಮುಂದೆ ಮಗನ ಜೀವನ ಹೇಗೆ? ಹೀಗೆ ಮುಂದುವರಿದರೆ ಮನೆತನ ಮುಂದುವರಿಯದೇ ಇಲ್ಲಿಗೇ ನಶಿಸಿ ಹೋಗುವುದೆಂಬ ಮನಸಿನ ಯಾತನೆ ಹಿರಿ ಜೀವಗಳು ಕೊರಗುವಂತೆ ಮಾಡಿದೆ. ಜಾತಿಯನ್ನು ಮೀರಿ ಅನಾಥಾಶ್ರಮದಿಂದ ಅಥವಾ ಲಿಂಗಾಯತ ಜನಾಂಗದಿಂದ ಹೆಣ್ಣು ತಂದು ತಾವೇ ಎಲ್ಲಾ ಖರ್ಚು ಹಾಕಿ ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಿರುವವರೂ ಇದ್ದಾರೆ. ಇದು ಇತ್ತೀಚಿನ ಬೆಳವಣಿಗೆಯಾದರೂ ಸ್ವಾಗತಾರ್ಹ.

ಆರ್ಥಿಕ ತೊಂದರೆ, ಕೆಲಸದವರ ಅಭಾವ ಇತ್ಯಾದಿಗಳಿಂದ ವ್ಯವಸಾಯ ಸರಿಯಾಗಿ ಮಾಡಲಾಗದೇ ಉತ್ಪನ್ನ ಕಡಿಮೆಯಾಗುತ್ತಿದೆ. ಎಷ್ಟೋ ಮನೆಗಳಲ್ಲಿ ವಯಸ್ಸಾದ ಜೀವಗಳು ತಮ್ಮ ಹಳೆಯ ವ್ಯವಸಾಯದ ದಿನಗಳ ನೆನಪಿನೊಂದಿಗೆ ಕಣ್ಣೀರಿಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಒಟ್ಟು ಕುಟುಂಬಗಳು ಈಗ ಬೇರೆಯಾಗಿ ತಮ್ಮ ತಮ್ಮ ಪಾಲಿನ ಜಮೀನಿನಲ್ಲಿ ಕಷ್ಟ ಪಟ್ಟು ದುಡಿದರೂ ಸಂಸಾರ ತೂಗಿಸುವುದು ಅಲ್ಲಿಂದಲ್ಲಿಗೆ. ದೊಡ್ಡ ಹಿಡುವಳಿದಾರರ ಮನೆ ಗಂಡು ಮಕ್ಕಳು ಮನೆಯಲ್ಲಿ ಇದ್ದರೆ ಅವರು ಕೆಲಸದಾಳುಗಳ ಒಂದು ಸಂಸಾರವನ್ನೇ ತಮ್ಮ ಮನೆ ಕೆಲಸ, ತೋಟದ ಕೆಲಸಕ್ಕೆ ಇರಿಸಿಕೊಂಡಿದ್ದೂ ಇದೆ. ಜೊತೆಗೆ ಆಧುನಿಕ ವ್ಯವಸಾಯ ಸಲಕರಣೆಗಳನ್ನೂ ಖರೀದಿಸಿ ಉತ್ಪನ್ನ ತೆಗೆಯುತ್ತಿದ್ದಾರೆ. ಒಳ್ಳೆಯ ಬೆಲೆ ಬಂದಾಗ ಮಾರಿಕೊಂಡು ಲಾಭ ಪಡೆಯುತ್ತಾರೆ.

ಆಯಾ ಊರಿನ ಸೊಸೈಟಿಗಳ ಮೂಲಕ ಪಡೆಯುವ ಬಡ್ಡಿ ರಹಿತ ಬೆಳೆ ಸಾಲ ತಾತ್ಪೂರ್ತಿಕ ನೆರವು ನೀಡಿದರೆ ಅಲ್ಲಿ ಇಲ್ಲಿ ಕೈಸಾಲದ ಮೊರೆ ಹೋಗುವವರು ಅನೇಕರು. ಒಟ್ಟಾರೆ ಹಳ್ಳಿ ವ್ಯವಸಾಯ ಅಲ್ಲಿ ಜನಕ್ಕೆ ಮಾಡಲಾಗದೆ, ಮಾಡದಿದ್ದರೆ ಜೀವನ ಕಳೆಯದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಅಲ್ಲಿಗೆ ಹೋದಾಗಲೆಲ್ಲ ಕಣ್ಣಾರೆ ಕಂಡು ಮನಸ್ಸು ಚುರ್^^^ಎನ್ನುತ್ತದೆ.

ಅಸಹಾಯಕತೆ ಅರಿತು ಅಂತಹವರಿಂದ ಬೆಳೆ ಬಂದಾದ ಮೇಲೆ ಇಂತಿಷ್ಟು ಹಣ ನೀಡುತ್ತೇವೆಂಬ ಒಪ್ಪಂದದ ಮೇರೆಗೆ ಅಡಿಕೆ ಬೆಳೆ ಗುತ್ತಿಗೆ ಪಡೆದು ಕೊಯ್ಲು ಮಾಡಿಕೊಡುವವರೂ ಇದ್ದಾರೆ. ಆದರೆ ತೋಟದ ಕೆಲಸದ ನಿರ್ವಹಣೆ ಆಯಾ ರೈತರದೇ ಆಗಿರುತ್ತದೆ. ಪ್ರತೀ ವರ್ಷ ತೋಟ ಸ್ವಚ್ಛ ಗೊಳಿಸೋದು, ಗೊಬ್ಬರ ಹಾಕಿ ಮಳೆಗಾಲದಲ್ಲಿ ಮಣ್ಣು ತೊಳೆದು ಹೋಗದಂತೆ ತೋಟಕ್ಕೆಲ್ಲ ಸುತ್ತಮುತ್ತಲಿನ ಬೆಟ್ಟದಿಂದ ದರಕು(ಒಣ ಎಲೆ)ತಂದು ಮುಚ್ಚಿಗೆ ಮಾಡೋದು, ಮಳೆಗಾಲದಲ್ಲಿ ಅಡಿಕೆಗೆ ಮದ್ದು ಸಿಂಪಡಿಸೋದು ಇತ್ಯಾದಿ ಕಸುಬುಗಳನ್ನು ಮಾಡಿಸಲೇ ಬೇಕಾಗುತ್ತದೆ. ಇದಕ್ಕೆಲ್ಲ ಕೆಲಸದವರನ್ನೇ ಅವಲಂಬಿಸಬೇಕು. ಅವರಿಗೆ ದಿನಗೂಲಿ ಲೆಕ್ಕದಲ್ಲಿ ಸಂಬಳ, ಉಪಹಾರ ಕೊಡಬೇಕು. ದಿನ ಕಳೆದಂತೆ ಅವರ ಸಂಬಳ ಹೆಚ್ಚಾಗುತ್ತಿದೆ ಹೊರತೂ ಮೊದಲಿನಷ್ಟು ನಿಯತ್ತಾಗಿ ಕೆಲಸ ಮಾಡುವವರು ವಿರಳ.

ಕೊನೆಗೆ ಏನೇನೆಲ್ಲಾ ಕಷ್ಟಪಟ್ಟು ಬೆಳೆ ಬೆಳೆದರೂ ಸರಿಯಾದ ಬೆಲೆ ಸಿಗಬಹುದೆಂಬ ನಂಬಿಕೆ ಇಲ್ಲ. ಬೆಳೆ ಕೈಗೆ ಬಂದಂತೆ ರೈತ ಹೆಚ್ಚಿನ ಹಣದ ಆಸೆಗಾಗಿ ಹತ್ತಿರದ ಅಡಿಕೆ ಮಂಡಿಯಲ್ಲಿ ತನ್ನ ಬೆಳೆ ಇಟ್ಟು ಅಡ್ವಾನ್ಸ ಹಣ ತಂದು ಖರ್ಚು ತೂಗಿಸುತ್ತಾನೆ. ಕೆಲವರು ಸೊಸೈಟಿಗಳಲ್ಲಿ ಒಳ್ಳೆ ಬೆಲೆ ಬರುವವರೆಗೆ ಬೆಳೆದ ಬೆಳೆಗಳನ್ನು ಇಟ್ಟು ಸಾಲ ಪಡೆಯುತ್ತಾರೆ. ಇಲ್ಲಿ ಸಾಲಕ್ಕೂ ಬಡ್ಡಿ ಕಟ್ಟಬೇಕು. ಜೊತೆಗೆ ಇಟ್ಟ ಮಾಲಿಗೂ ಚಾರ್ಜ್ ಕಟ್ಟಬೇಕು. ಇವರಿಬ್ಬರೂ ಎಪಿಎಂಸಿ ಮೂಲಕವೇ ಬೆಳೆ ಮಾರಬೇಕೆಂಬ ಕಾನೂನು ಈಗ ಜಾರಿಯಲ್ಲಿದ್ದರೂ ರೈತರು ತಮ್ಮ ಬೆಳೆಯ ಮೇಲೆಯೇ ಹಣ ತೆಗೆದುಕೊಂಡ ಈ ಹಣಕ್ಕೆ ಬಡ್ಡಿ ಕಟ್ಟುವುದು ತಪ್ಪುವುದಿಲ್ಲ.

ಬೆಳೆಗೆ ಒಳ್ಳೆ ಬೆಲೆ ಸಿಗಬಹುದೆಂಬ ದೂರದ ಆಸೆ ಇದಕ್ಕೆಲ್ಲ ಕಾರಣ. ಮುಂದಿನ ಬೆಳೆ ಬೆಳೆಯಲು ಮತ್ತೆ ಸಾಲ ಅದಕ್ಕೂ ಬಡ್ಡಿ ಕಟ್ಟಿ ರೈತ ಯಾವತ್ತೂ ಸಾಲದ ಸುಳಿಯಿಂದ ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಇಲ್ಲಿ ರೈತರಿಂದ ಬೆಳೆ ಖರೀದಿ ಮಾಡಿದ ಮದ್ಯವರ್ತಿ ಬಡ್ಡಿಗೆ ಹಣ ಕೊಟ್ಟು ಉತ್ತಮ ಬೆಲೆ ಬಂದಾಗ ಮಾರಿ ಉಳಿಕೆ ಹಣ ಕೊಡುತ್ತಾನೆ. ಇತ್ತ ಬೆಳೆದ ಬೆಳೆಗೇ ಬಡ್ಡಿ ಕಟ್ಟಿದ ರೈತನಿಗೆ ಲಾಭ ಪಂಗನಾಮ. ಇದು ಸಾಮಾನ್ಯವಾಗಿ ಬಡ ರೈತರ ಪಾಡು.

ಈ ಪದ್ಧತಿ ನನಗೆ ಬುದ್ಧಿ ತಿಳಿದಾಗಿನಿಂದಲೂ ನೋಡುತ್ತಲೇ ಬಂದಿದ್ದೇನೆ. ಆಗೆಲ್ಲ ಅಂದರೆ ಸುಮಾರು 1974-75ರ ಆಸುಪಾಸು ಅಪ್ಪ ಅಡಿಕೆ ಮೂಟೆ ಚಕ್ಕಡಿ ಗಾಡಿಯಲ್ಲಿ ಹೇರಿಕೊಂಡು ಒಂದು ಬೆಳಗಿನ ಜಾವ ಹನ್ನೆರಡು ಕೀ.ಮೀ. ದೂರದಲ್ಲಿರುವ ಗೊತ್ತಿರುವ ಸಿರ್ಸಿಯ ಅಡಿಕೆ ಮಂಡಿಗೆ ತೆಗೆದುಕೊಂಡು ಹೋಗುವಾಗ ನಾನೂ ಅವರೊಂದಿಗೆ ಹೋಗಿದ್ದಿದೆ. ಸೀದಾ ರಾಯರ ವಖಾರಿಯಲ್ಲಿ ಅಡಿಕೆ ಚೀಲಗಳನ್ನು ಇಳಿಸಿ ದೊಡ್ಡ ಹಜಾರದಲ್ಲಿ ರಾಯರು ಬರೋದನ್ನೇ ಕಾಯೋದು. ಅವರು ಬಂದ ಮೇಲೆ ಅದೇನೇನೊ ಚೌಕಾಸಿ ವ್ಯಾಪಾರದ ಮಾತು. ನಂತರ ಅಲ್ಲಿಯ ಕಾರಖೂನ ಒಂದು ದೊಡ್ಡ ಪುಸ್ತಕದಲ್ಲಿ ಹೆಸರು ಸಂದಾಯವಾದ ಹಣ ವಗೈರೆ ಎಲ್ಲ ಬರೆದು ಸಹಿ ಪಡೆಯುತ್ತಿದ್ದ. ದುಡ್ಡು ತೆಗೆದುಕೊಂಡು ನಾವು ಹೊರಟಾಗ ಅಪ್ಪನ ಮುಖದಲ್ಲಿ ಬೆಳೆ ತರುವಾಗಿನ ಕಳೆ ಇರುತ್ತಿರಲಿಲ್ಲ. ನಿರಾಸೆಯ ಭಾವದಲ್ಲಿ ಹಣೆಯಲ್ಲಿ ನೆರಿಗೆ ಕಟ್ಟಿದ್ದು ಆಗ ನಾನಿನ್ನೂ ಚಿಕ್ಕವಳಾಗಿದ್ದರೂ ನನಗೆಲ್ಲ ಗೊತ್ತಾಗುತ್ತಿತ್ತು. ಆದರೆ ಅಪ್ಪ ಯಾಕೆ ಬೇಜಾರು ಮಾಡಿಕೊಂಡಿದ್ದು ಇದು ಮಾತ್ರ ಅರ್ಥ ಆಗುತ್ತಿರಲಿಲ್ಲ. ಆದರೆ ಈಗೆಲ್ಲ ಅರ್ಥ ಆಗುತ್ತದೆ. ಈಗ ನೆನಪಾಗಿ ನನಗೂ ಅಪ್ಪನಷ್ಟೇ ಸಂಕಟವೂ ಆಗುತ್ತದೆ. ಏಕೆಂದರೆ ರೈತನ ಮಗಳಾದ ನಾನು ಹಳ್ಳಿಯ ಜೀವನದ ಅನೇಕ ಕಷ್ಟ ನಷ್ಟಗಳನ್ನು ಸ್ವತಃ ಅನುಭವಿಸಿದ್ದೇನೆ.

ಜಗುಲಿ ತುಂಬ ಅಂಗಳದ ತುಂಬ ಅಡಿಕೆ ರಾಶಿ, ಮೂಟೆ ತುಂಬ ಕಾಳು ಮೆಣಸು, ಕೇಜಿಗಟ್ಟಲೆ ಏಲಕ್ಕಿ, ಬಾಳೆಕಾಯಿ ಪೇರಿಸಿಟ್ಟಿದ್ದೆಲ್ಲ ಕಂಡಾಗ ನಾವು ಬಲು ಶ್ರೀಮಂತರು ಎಂಬ ಹಮ್ಮು ಒಳಗೊಳಗೆ. ಆದರೆ ನಮಗೆ ಬೇಕಾಗಿದ್ದು ಈಗಿನ ಮಕ್ಕಳಿಗೆ ಹೆತ್ತವರು ದಾರಾಳವಾಗಿ ಕೊಡಿಸುವಂತೆ ಒಂದಿನವೂ ಕೇಳಿದರೂ ಕೊಡಿಸುತ್ತಿರಲಿಲ್ಲ. ಆಗೆಲ್ಲ ಭಯಂಕರ ಬೇಜಾರಲ್ಲಿ ಅತ್ತಿದ್ದು,ಸಿಟ್ಟು ಮಾಡಿದ್ದು ಈಗ ತಪ್ಪು ಅನಿಸುತ್ತಿದೆ.

ಹೌದು, ಕೇವಲ ವರ್ಷಕ್ಕೊಮ್ಮೆ ಮಾತ್ರ ಬರುವ ಬೆಳೆಯಲ್ಲಿ ಇಡೀ ವರ್ಷದ ಸಂಸಾರದ ಖರ್ಚು, ಮದುವೆ ಮುಂಜಿ ಸಮಾರಂಭದ ಖರ್ಚಲ್ಲದೇ ಓದು, ಔಷಧಿ, ಕೋರ್ಟು ಕಛೇರಿ ಓಡಾಟದ ಖರ್ಚು, ಮುಂದಿನ ಬೆಳೆ ಬೆಳೆಯಲು ಇತ್ಯಾದಿ ಎಲ್ಲದಕ್ಕೂ ಇದೇ ಹಣ ವ್ಯಯ ಮಾಡಬೇಕಿತ್ತು. ಒಂದೊಂದು ರೂಪಾಯಿಗೂ ಅಪ್ಪ ಲೆಕ್ಕ ಬರೆದಿಡುತ್ತಿದ್ದರು. ಇವೆಲ್ಲ ಆಗ ಬಾಲಿಶ ಅನಿಸಿದರೂ ಅವರು ಮಾಡಿದ್ದು ಸರಿ ಅಂತ ಮನಸ್ಸು ಮನಸ್ಪೂರ್ವಕವಾಗಿ ಈಗ ಒಪ್ಪಿಕೊಳ್ಳುತ್ತದೆ.

ಈಗ ಸರ್ಕಾರ ರೈತರ ಪರವಾಗಿ ಅನೇಕ ಯೋಜನೆಗಳನ್ನು ಕೈಗೊಂಡಿದೆ. ಇತ್ತೀಚೆಗೆ ನೇರವಾಗಿ ರೈತರ ಖಾತೆಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಕಂತಿನ ರೂಪದಲ್ಲಿ ಸಂದಾಯ ಕೂಡಾ ಮಾಡುತ್ತಿದೆ. ಆದರೆ ಈ ಅಲ್ಪ ಹಣ ರೈತರ ಕಷ್ಟ ನೀಗಿಸದು. ರೈತರು ಸಾಲದ ಸುಳಿಯಿಂದ ಹೊರ ಬರಲು ಸಾಧ್ಯವೂ ಇಲ್ಲ. ವರ್ಷ ಪೂರ್ತಿ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಅಂದಿನಿಂದ ಇಂದಿನವರೆಗೂ ಒದ್ದಾಡುತ್ತಿರುವ ಪರಿಸ್ಥಿತಿ ಕಣ್ಣಾರೆ ಕಾಣುತ್ತಲೇ ಇದ್ದೇವೆ. ಅತ್ಯಂತ ಹತಾಶೆಯ ಪರಿಸ್ಥಿತಿಯಲ್ಲಿ ಎಷ್ಟೋ ರೈತರು ಬೆಳೆದ ತರಕಾರಿಗಳನ್ನು ರಸ್ತೆಗೆ ಚೆಲ್ಲಿ ತಮ್ಮ ನೋವು,ವ್ಯಥೆ, ಕಷ್ಟವನ್ನೆಲ್ಲ ಹೊರ ಹಾಕುತ್ತಲೂ ಇದ್ದಾರೆ.

ಇನ್ನು ಬೆಳೆಗಾರರು ಬೆಳೆದ ಬೆಳೆಗೆ ಸರಿಯಾದ ಮಾರ್ಕೆಟ್ ಇಲ್ಲದೇ ಸಂಗ್ರಹಿಸಿಡಲು ಶೈತ್ಯಾಗಾರದ ಸೌಲತ್ತೂ ಇಲ್ಲದೇ ಸೋತು ಉಪ ಬೆಳೆಗಳನ್ನು ಬೆಳೆಯುವುದನ್ನು ಕೈ ಬಿಟ್ಟಿದ್ದಾರೆ. ಉದಾ; ಹಿಂದೆಲ್ಲ ನಮ್ಮ ಮಲೆನಾಡಿನಲ್ಲಿ ಗದ್ದೆಯಲ್ಲಿ ಭತ್ತದ ಕೊಯ್ಲಾದ ನಂತರ ಬೇಸಿಗೆ ಹಿತ್ತಲು ಅಂತ ಬೆಳೆಯುತ್ತಿದ್ದರು. ಈ ಬೆಳೆ ಬೆಳೆಯಲು ಅವರದೇ ಗದ್ದೆ ಆಗಬೇಕು ಅಂತಿರಲಿಲ್ಲ. ಅಕ್ಕಪಕ್ಕದ ಪರಿಚಯದವರ ಗದ್ದೆಗಳಲ್ಲಿ ನೀರಿನ ಅನುಕೂಲ ನೋಡಿಕೊಂಡು ವರ್ಷಕ್ಕೆ ಬೇಕಾದಷ್ಟು ಮೊಗೆಕಾಯಿ(ಮಂಗಳೂರು ಸೌತೆ) ಅಡಿಗೆಗೆ ಬೇಕಾದ ಪ್ರತಿಯೊಂದು ತರಕಾರಿಗಳನ್ನು ಬೆಳೆಯುತ್ತಿದ್ದರು. ಮನೆ ಖರ್ಚಿಗೆ ಹೆಚ್ಚಾದ ತರಕಾರಿಗಳನ್ನು ಮನೆ ಹತ್ತಿರವೇ ಬಂದು ಕೊಂಡೊಯ್ಯುವ ತರಕಾರಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ಇದರಿಂದ ಸಂತೆಯಿಂದ ತರಕಾರಿ ತರುವ ಖರ್ಚೂ ಉಳಿಯುತ್ತಿತ್ತು ಹಾಗೆ ಕೈಗೆ ಸ್ವಲ್ಪ ಹಣವೂ ಸಿಗುತ್ತಿತ್ತು. ಆದರೆ ಪರಿಸ್ಥಿತಿ ಈಗ ಹೀಗಿಲ್ಲ. ಹಳ್ಳಿಗಳಲ್ಲಿ ತರಕಾರಿ ಬೆಳೆಯುವುದು ಬಹಳ ಕಡಿಮೆ ಆಗಿದೆ. ಒಂದೊಮ್ಮೆ ತರಕಾರಿ ಬೆಳೆದ ರೈತರು ಸಿಟಿಗೆ ತಂದು ಬೆಳಗಿಂದ ಸಂಜೆಯವರೆಗೂ ತಾವೇ ಸ್ವತಃ ಮಾರಲು ಕುಳಿತರೂ ಅಲ್ಪ ಸ್ವಲ್ಪ ಮಾರಾಟವಾದರೂ ಉಳಿದದ್ದು ಯಾವುದಾದರೂ ಹೊಟೇಲಿಗೆ ಕೇಳಿದಷ್ಟು ಬೆಲೆಗೆ ಕೊಟ್ಟು ಹಳ್ಳಿ ಕಡೆ ಮುಖ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಮಾರ್ಕೆಟ್ ಇಲ್ಲ. ಬೆಳೆದು ನಷ್ಟ ಮಾಡಿಕೊಳ್ಳುವ ಬದಲು ತಾವೂ ಸಂತೆಯಿಂದಲೇ ತರಕಾರಿ ತಂದರಾಯಿತೆಂಬ ಅಸಡ್ಡೆ ಮನೆ ಮಾಡಿದೆ.

ಬೆಳೆ ಕಟಾವಿಗೆ ಬರುವ ಮುನ್ನವೇ ಆಯಾ ಪ್ರದೇಶದ ಸ್ಥಳೀಯ ಸೊಸೈಟಿಗಳ ಮೂಲಕ ರೈತರು ಬೆಳೆದ ಬೆಳೆಗಳನ್ನು ಪರಿಶೀಲಿಸಿ ಸರ್ಕಾರವು ವರದಿ ತರಿಸಿಕೊಂಡು ಬೆಳೆ ಕೈಗೆ ಬರುವ ಸಮಯಕ್ಕೆ ಸರಿಯಾಗಿ ಉತ್ತಮ ಬೆಲೆ ನಿಗದಿಪಡಿಸಬೇಕು. ಕನಿಷ್ಟ ಮೂರು ತಿಂಗಳಾದರೂ ಅವಕಾಶ ನೀಡಿ ಶರತ್ತಿಗನುಗುಣವಾಗಿ ರೈತರಿಂದ ಬೆಳೆ ಖರೀದಿಸಿ ಹಣ ಸಂದಾಯ ಮಾಡುವಂತಾಗಬೇಕು. ಇದರಿಂದ ಸಾಲದ ಸುಳಿಯಿಂದ ತಪ್ಪಿಸಿ ಅನ್ನದಾತನಿಗೆ ನ್ಯಾಯ ಒದಗಿಸಿ ಉತ್ಸಾಹದಿಂದ ಇನ್ನಷ್ಟು ಬೆಳೆ ಬೆಳೆಯಲು ಬಡ ರೈತರಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಇದು ಎಲ್ಲಾ ರೈತರ ಒಕ್ಕೊರಲೂ ಕೂಡಾ ಹೌದು. ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಡಲೆಂಬುದು ರೈತರ ಪರವಾಗಿ ನನ್ನ ಆಶಯ, ಬೇಡಿಕೆ!

ಗೀತಾ ಜಿ.ಹೆಗಡೆ, ಕಲ್ಮನೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಮಲೆನಾಡಿನ ಅಡಿಕೆ ವ್ಯವಸಾಯ ಮತ್ತು ಪರಿಸ್ಥಿತಿ: ಗೀತಾ ಜಿ.ಹೆಗಡೆ, ಕಲ್ಮನೆ. https://panjumagazine.com/?p=16470 […]

1
0
Would love your thoughts, please comment.x
()
x