ಪ್ರಶಸ್ತಿ ಅಂಕಣ

ಮಣ್ಣಾದ ಶೂ ಮತ್ತು ಮೋಡಗಳ ಊಟಿ: ಪ್ರಶಸ್ತಿ ಅಂಕಣ

ಇದೇನಪ್ಪಾ ವಿಚಿತ್ರ ಶೀರ್ಷಿಕೆ ,ಶೂ ಮಣ್ಣಾಗೋಕೂ ಮತ್ತು ಊಟಿ ಮೋಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂದ್ಕೊಂಡ್ರಾ ? ಊಟಿ ಅಂದ್ರೆ ಮಧುಚಂದ್ರದ ಜಾಗ. ಅದ್ರ ಬಗ್ಗೆ ಮದ್ವೆಯಾಗದ ಈ ಹುಡ್ಗ ಏನು ಬರಿಬೋದು ಅಂದ್ಕೊಂಡ್ರಾ ? ಹಿ.ಹಿ. ನಾ ಆ ವಿಷ್ಯದ ಬಗ್ಗೆ ಹೇಳ್ತಿರೋದಲ್ಲ.ಶೂ ಬೆಂಗ್ಳೂರಲ್ಲಿದ್ರೂ ಮಣ್ಣಾಗತ್ತೆ. ಅದಕ್ಕೆ ಊಟಿ ಮೋಡ ಸುರ್ಸೋ ಮಳೇನೇ ಆಗ್ಬೇಕಾ ಅಂದ್ರಾ ? ವಿಷ್ಯ ಅದೂ ಅಲ್ಲ. ಹೇಳೋಕೆ ಹೊರಟೊರೋದು ಎಲ್ಲಾ ಸಾಮಾನ್ಯವಾಗಿ ನೋಡೋ ದೊಡ್ಡಬೆಟ್ಟ, ಗುಲಾಬಿ ತೋಟ, ಊಟಿ ಕೆರೆಗಳನ್ನೊಳಗೊಂಡ ಊಟಿಯ ಬಗ್ಗೆ ಅಲ್ಲ. ಬದಲಿಗೆ ಊಟಿಯಿಂದ ಹದಿನಾಲ್ಕೇ ಕಿ.ಮೀ ದೂರವಿದ್ದರೂ ಸುಮಾರಷ್ಟು ಜನ ಮಿಸ್ ಮಾಡಿಕೊಳ್ಳೋ ಕೂನೂರು ಮತ್ತು ಕೋಟಗಿರಿ ಎಂಬ ಸ್ಥಳಗಳ ಬಗ್ಗೆ.ಸ್ಥಳ ಅನ್ನೋಕಿಂತ ಮೋಡಗಳೊಂದಿಗೆ ಮೊಹಬ್ಬತ್ತಿನ ಮಹಲುಗಳು ಅಂತ ಇವನ್ನು ಕರೆದ್ರೂ ತಪ್ಪಾಗಲಾರದೇನೋ.

ಅತ್ತೆ, ಮಾವ(ಮಾವ ಅಂದ್ರೆ ಸೋದರ ಮಾವ ಮಾರ್ರ. ಥೋ.) ಊಟಿಯ ಹತ್ತಿರದ ಕೂನೂರಿಗೆ ವರ್ಗವಾಗಿ ಆರು ತಿಂಗಳಾಗುತ್ತಾ ಬಂದಿತ್ತು. ಪ್ರತೀ ಬಾರಿಯೂ ಅವರ ಕರೆಗೆ ಏನಾದ್ರೂ ಒಂದು ಪಿಳ್ಳೆ ನೆವ ಒಡ್ಡುತ್ತಿದ್ದ ನಂಗೆ ಈ ಸಲ ಯಾಕೋ ಹೋಗ್ಬೇಕೂ ಅನಿಸಿಬಿಟ್ಟಿತ್ತು ಅಲ್ಲಿಗೆ. ತಡಿಯಂಡಮಾಲ್ ಟ್ರಿಪ್ಪಲ್ಲಿ ಮಣ್ಣಾದ ಶೂವನ್ನು ಈ ವಾರ ತೊಳೆಯಬೇಕು ಅಂದ್ಕೋತಾ ಇದ್ರೂ ಪ್ರತೀ ವಾರಾಂತ್ಯ ಇನ್ನೆಲ್ಲಾದ್ರೂ ಟ್ರಿಪ್ಪುಗಳು ರೆಡಿಯಾಗಿ ಬಿಡ್ತಿತ್ತು. ದಸರಾಕ್ಕೆ ಊರು, ನಗರ, ಬಿಳಿಗಿರಿ ರಂಗನ ಬೆಟ್ಟ, ಬೆಂಗ್ಳೂರ ಮಣ್ಣು ಹೀಗೆ ಈ ತೊಳೆಯುವಿಕೆಯ ಕನವರಿಕೆಯಲ್ಲೇ ಇನ್ನೊಂದಿಷ್ಟು ಮಣ್ಣು ತುಂಬಿಕೊಳ್ಳುತ್ತಿದ್ದ ಶೂಗೆ ಸ್ನಾನ ಮಾಡಿಸೋ ಮುಹೂರ್ತ ಬರ್ಬೇಕಂದ್ರೆ ಅದು ಊಟಿಗೆ ಹೋಗಿ ಬಂದ ಮೇಲೇ ಸೈ ಅನಿಸಿಬಿಟ್ಟಿತ್ತು ! ಆಯ್ತು ಅಂತೊಂದು ಶುಕ್ರವಾರ ರಾತ್ರೆ ಒಂಭತ್ತೂಮುಕ್ಕಾಲರ ಬಸ್ಸು ಹತ್ತಿದ ನಾನು ಬೆಳಗ್ಗೆ ಆರಕ್ಕೆ ಊಟಿಗೆ ಹೋಗಿ ಮುಟ್ಟಿದ್ದೆ. ಅಲ್ಲಿಂದ ಕೂನೂರು ಮುಟ್ಟಬೇಕು ಸರಿ. ಆದ್ರೆ ಯಾವ ಬಸ್ಸು ಅಂತ ನೋಡಿದ್ರೆ ಕೂನೂರು ಅಂತ ಕೂಗ್ತಿದ್ದ ಯಾವ ದನಿಯೂ ಇಲ್ಲ. ಇಂಗ್ಲೀಷನ್ನು ಬುಡಸಮೇತ ಕಿತ್ತಾಕಬೇಕು ಅನ್ನುವಂತಿದ್ದ ಪೂರ್ಣ ತಮಿಳಕ್ಷರದ ಬೋರ್ಡುಗಳು ನನಗೆಲ್ಲಿ ಅರ್ಥ ಆಗ್ಬೇಕು ! ಅಂತೂ ಇಂತೂ ಎರಡು ಮೂರು ಜನ ಡ್ರೈವರುಗಳನ್ನ ಇಂಗ್ಲೀಷಲ್ಲೇ ಕೇಳಿದಾಗ ಒಬ್ಬ ೪೨೩ ರ ಬಸ್ಸು ಹತ್ತಿ ಅಂದ ಹರಕು ಮುರುಕು ಇಂಗ್ಲೀಷಿನಲ್ಲಿ.

ಬಸ್ಸು ಹತ್ತಿ ಕೂತ ಡ್ರೈವರ್ ಕನ್ನಡದಲ್ಲಿ ಮಾತಾಡಿದಾಗ ಆಶ್ಚರ್ಯ !. ಥೋ . ಕನ್ನಡದಲ್ಲೇ ಕೇಳ್ಬೋದಿತ್ತಲ್ವಾ ಆರಾಮಾಗಿ ಅಂತ. ಊಟಿಯಲ್ಲಿ ಬಡಗರು, ಥೋಡರು ಅಂತ ಜನಾಂಗದವ್ರು ಇರ್ತಾರೆ. ಈ ಬಡಗು ಭಾಷೆ ಕನ್ನಡದ ಉಪಭಾಷೆ ಅಂತ ಆಮೇಲೆ ಗೊತ್ತಾಯ್ತು ! ಮಾವನ ಮನೆಯಲ್ಲಿ ಪಕ್ಕಾ ಕನ್ನಡ ಮಾತಾಡೋ ಕೆಲಸದ ಅಮ್ಮ ಸಿಕ್ಕಿದ್ದು ಆಮೇಲಿನ ವಿಷಯ ಬಿಡಿ. ಇದನ್ನೆಲ್ಲಾ ನೆನೆದು ಬಸ್ಸು ಯಾವ್ದು ಕೇಳೋಕೆ ಪಟ್ಟ ಪಾಡು ನೆನದ್ರೆ ಈಗ್ಲೂ ನಗು ಬರತ್ತೆ.

ಕೂನೂರಿಗೆ ಊಟಿಯಿಂದ ಹದಿನಾಲ್ಕು ಕಿ.ಮೀ ಅಷ್ಟೆ. ಬಸ್ಚಾರ್ಚು ಹದಿಮೂರು ರೂ. ಆದ್ರೆ ಆ ದಾರಿಗೆ ಮುಕ್ಕಾಲು ಘಂಟೆ ತಗೊಂಡ ಹಸಿರು ಬಸ್ಸಲ್ಲಿ ಕೂನೂರು ತಲುಪಿದ ನನಗೆ ಮೋಡಗಳ ಸ್ವಾಗತ. ಜಿಮುರು ಮಳೆಯ ನಡುವೆ ಮಾವನ ಮನೆಗೆ ಸಾಗಿದ ನನಗೆ ಯಾವಾಗ ಅಲ್ಲಿನ ಸ್ಥಳಗಳ ನೋಡ್ತೇನೋ ಅನ್ನೋ ಕುತೂಹಲ. ಆದ್ರೆ ಮಳೆ ಬಿಟ್ಟರಲ್ಲವೇ ಎಲ್ಲಿಗಾದ್ರೂ ತೆರಳೋದು ? ! ರಾತ್ರೆ ನಿದ್ದೆಯಿಲ್ಲದಿದ್ದರೂ ಹಗಲು ಮಲಗಲೊಲ್ಲದ ನಾನು ಬೆಳಕಿನ ಕಿಂಡಿ ಹೊರಹೊಮ್ಮೋದನ್ನೇ ಕಾಯ್ತಾ ಇದ್ದೆ. ಹತ್ತೂಮುಕ್ಕಾಲರ ಹೊತ್ತಿಗೆ ಅಂತೂ ಚೂರು ಬಿಸಿಲು ಹೊರಟಂತಾದಾಗ ಅಲ್ಲಿನ ಸ್ಥಳಗಳ ನೋಡ ಹೊರಟ್ವಿ. ಮೊದಲು ನೋಡಿದ್ದ್ರು ವೆಲ್ಲಿಗ್ಟಂನ್ ಲೇಕ್ ಅನ್ನೋ ಕೆರೆ. ಸಾರ್ವಜನಿಕರ ಪ್ರವೇಶಕ್ಕೆ ತಲಾ ಹತ್ತು ರೂ ಶುಲ್ಕ, ದೋಣಿಯಾನಕ್ಕೆ ಹದಿನೈದರ ಶುಲ್ಕ ಅಂತ ಬೋರ್ಡು ನೋಡಿದ ನಂಗೆ ಈ ದುಬಾರಿ ದುನಿಯಾದಲ್ಲೂ ಇಂಥಾ ಜಾಗಗಳಿವೆಯಾ, ಪರವಾಗಿಲ್ವೇ ಅನಿಸಿತು. ಓ, ಇದನ್ನು ನೋಡ್ಕೊಳ್ತಾ ಇರೋರು ಭಾರತೀಯ ಸೇನೆಯವ್ರು. ಹಾಗಾಗಿ ಈ ತರ ಅಂತ ಆಮೇಲೆ ಅರಿವಾಯ್ತು. ಹಲತರದ ಬಾತುಗಳು ವಿಹರಿಸ್ತಾ ಇರೋ ಆ ಕೆರೆಯಲ್ಲಿ ಲೈಫಜಾಕೇಟ್ ತೊಟ್ಟು ತುಳಿಯೋ ಬೋಟು ಹೊಕ್ಕು ಒಂದು ರೌಂಡು ಹಾಕಿ ಬರೋದಿದ್ಯಲ್ಲ. ಎಂಥಾ ಖುಷಿ ಅಂತೀರಾ ? ಕೈಗೆ ಸಿಗುವಂತೆ ನಮ್ಮ ಪಕ್ಕದಲ್ಲೇ ಈಜುತ್ತಿರೋ ಬಾತುಗಳು ಯಾವುದಾದ್ರೂ ಸುಂದರಿಯ ಸಂದೇಶ ಹೊತ್ತು ತಂದವಾ ಅಂತ ಕೈ ಚಾಚೋದ್ರೊಳಗೆ ಅವು ದೂರ ಓಡಬೇಕೇ ? !!

ಒಂದು ಹದಿನೈದಿಪ್ಪತ್ತು ತರದ ಕಲ್ಲುಗಳು, ಅವುಗಳ ಪೂರ್ಣ ವಿವರ, ಹಲತರದ ಹೂಗಳನ್ನೊಳಗೊಂಡ ರಮ್ಯ ನೋಟ.. ಹೀಗೆ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಖುಷಿ ಕೊಡ್ಬೋದಂತಹ ತಾಣವಿದು. ಅಲ್ಲಿಂದ RMC ಗಾರ್ಡನ್ನಿಗೆ ತೆರಳಿ ಅಲ್ಲೊಂದಿಷ್ಟು ಹೂಗಳ ಫೋಟೋ ಕ್ಲಿಕ್ಕಿಸೋ ಹೊತ್ತಿಗೆ ಊಟದ ಸಮಯ ಆಗ್ತಾ ಬಂದಿತ್ತು. ನಾ ಕೊಟ್ಟ್ರ ಬ್ರೇಕು ಮುಗೀತು. ಮತ್ತೆ ಬರ್ತೀನಿ ನೊಡ್ರಪ್ಪ ಅಂತ ಮಳೆ ಶುರುವಾಗೋದ್ರೊಳಗೆ ಮನೆ ಸೇರ್ಕೋಬೇಕೆಂಬ ತುಡಿತ ಕಾಡ್ತಾ ಇತ್ತು.ಅಂತೂ ಮನೆ ಸೇರಕ್ಕೂ ಮಳೆ ಭೋರ್ಗರೆಯೋಕೂ ಸರಿ ಆಯ್ತು.

ಮಧ್ಯಾಹ್ನ ನಾಲ್ಕೂವರೆ ಹೊತ್ತಿಗೆ ರಾತ್ರಿಯಿಡೀ ನಿದ್ರೆಯಿರದ ನಂಗೊಂದು ಜೊಂಪು ಹತ್ತಿ ಎಚ್ಚರಾಗಿದ್ರೂ ಮಳೆ ಹನಿ ಕಡಿದಿರಲಿಲ್ಲ. ಇನ್ನು ಹಿಂಗೇ ಬಿತ್ರೆ ಆಗೋಲ್ಲ ಅಂತ ಉಳಿದ ಜಾಗ ನೋಡೋಕೆ ಹೊರಟ್ವಿ. ಕೂನೂರಿಂದ ಏಳು ಕಿ.ಮೀ ದೂರದಲ್ಲಿ ಲ್ಯಾಂಬ್ಸ್ ರಾಕ್, ಅಲ್ಲಿಂದ ಐದು ಕಿ.ಮೀ ದೂರದಲಿ ಡಾಲ್ಫಿನ್ ನೋಸ್ ಅಂತ ಎರಡು ಜಾಗಗಳಿವೆ ಅಂತ ಓದಿದ್ದೆ. ಅಲ್ಲೇ ದಾರಿಯಲ್ಲಿ ಲಾಸ್ ಫಾಲ್ಸ್ ಮತ್ತು ಡಾಲ್ಫಿನ್ ಮೂಗಿಂದ ಹದಿಮೂರು ಕಿ.ಮೀ ದೂರದಲ್ಲಿ ಲಾರೆನ್ಸ್ ಫಾಲ್ಸ್ ಅಂತ ಮತ್ತೊಂದು ಜಲಪಾತ. ಸರಿ, ಇದ್ರಲ್ಲಿ ಕೆಲವೊಂದನ್ನಾದ್ರೂ ನೋಡ್ಬೇಕಂತ ಹೊರಟ ನಮಗೆ ಎದುರಾಗಿದ್ದು ದಟ್ಟ ಕತ್ತಲೆಯ ಶೋಲಾ ಕಾಡುಗಳು. ನಾಲ್ಕೂ ಮುಕ್ಕಾಲಿಗೆ ರಾತ್ರಿಯಾದಂತಹ ಕತ್ತಲು ಇವನ್ನು ಹೊಕ್ರೆ. ಕಾಡು ದಾಡಿದ್ರೆ ಮತ್ತೆ ಬೆಳಗು. ಮತ್ತೊಂದಿಷ್ಟು ಮರ ಬಂತು ಅಂದ್ರೆ ದಟ್ಟ ಕತ್ತಲಿನ ಪ್ರವೇಶ. ಒಂತರಾ ಹಗಲಿರುಳುಗಳ ನಡುವಿನ ದಾರಿಯಲ್ಲಿ ಅತ್ತಿತ್ತ ಹೊಯ್ದಾಡಿದಂತಹ ಭಾವ !

ಮೊದಲು ಡಾಲ್ಫಿನ್ನಿನ ಮೂಗು ನೋಡಿದ್ವಿ. ಅಲ್ಲಿನ ಗೋಪುರ ಚೂಪಾದ ಬೆಟ್ಟದ ತುದಿಯಲ್ಲಿದ್ದು ದೂರದಿಂದ ನೋಡಿದೋರಿಗೆ ನೀರಿಂದ ಮೇಲೆ ನೆಗೆದ ಡಾಲ್ಫಿನ್ನಿನ ಮೂಗಿನ ತರಹ ಕಾಣತ್ತೆ ಅಂತ ಆ ತರಹ ಹೆಸ್ರು ಬಂದಿರಬಹುದು ಅಂತ ಮಾವನ ಅಂಬೋಣ. ಅಲ್ಲಿ ಬೆಳಗ್ಗೆ ಆದ್ರೆ ಟೀ, ಕಾಫಿಯ ಅಂಗಡಿಗಳಿರುತ್ತೆ. ಆದ್ರೆ ನಾವು ಹೋಗೋ ಹೊತ್ತಿಗೆ ಐದೂವರೆ ಆಗ್ತಾ ಬಂದಿದ್ರಿಂದ ಎಲ್ಲಾ ಬಾಗ್ಲಾಕಿತ್ತು. ಅದ್ರೂ ಫೋಟೋ ಕ್ಲಿಕ್ಕಿಸೋ ಜನಕ್ಕೆ, ಸೂರ್ಯಾಸ್ತವನ್ನು ನಿರೀಕ್ಷಿಸುತ್ತಿದ್ದ ಸೌಂದರ್ಯಪ್ರೇಮಿಗಳಿಗೇನೋ ಕೊರತೆಯಿರಲಿಲ್ಲ. ಅಲ್ಲಿಂದ ಮರಳ್ತಾ ಕ್ವೀನ್ ಸೀಟ್ ಅನ್ನೋ ಸ್ಥಳವೂ ಸಿಕ್ಕಿತು. ಅಲ್ಲಿಂದ ನೂರು ಮೀಟರ್ ಮೇಲೆ ಹತ್ತಿದ್ರೆ ಮತ್ತೊಂದು ಸೂರ್ಯಾಸ್ತ ವೀಕ್ಷಣೆಯ ಸ್ಥಾನ. ಆದ್ರೆ ಅಲ್ಲಿಗೆ ಹೋದ್ರೆ ಕುರಿಕಲ್ಲು(ಲ್ಯಾಂಬ್ಸ್ ರಾಕ್!)ಗೆ ಹೋಗಲಾಗದೇ ಇರಬಹುದೆಂಬ ಭಯದಿಂದ ಅಲ್ಲಿಗೆ ಹೋಗಲಿಲ್ಲ. ಕುರಿಕಲ್ಲಿಗೆ ಹೋದ್ರೆ ಅಲ್ಲಿ ಮತ್ತೆ ಕತ್ತಲ ಗವಿ. ಐನೂರು ಮೀಟರ್ ಶೋಲಾ ಕಾಡೊಳಗಿನ ದಾರಿಗೆ ಸ್ವಾಗತ ಅಮ್ತ ಬೋರ್ಡೊಂದು ಅಲ್ಲಿ ನಮಗೆ ಸ್ವಾಗತ ಕೋರುತ್ತಿತ್ತು. ಅಲ್ಲಿ ಎಡಕ್ಕೊಂದು ಬಲಕ್ಕೊಂದು ದಾರಿಗಳಿದ್ವು. ಬಲದ ದಾರಿ ಬೆಟ್ಟದ ಮೇಲೆ ಸ್ವಲ್ಪ ಬೇಗ ತಲುಪಿಸಿದ್ರೆ ಎಡದ್ದು ಸ್ವಲ್ಪ ಸುತ್ತಿ ಬಳಸಿ ಕಾಡಿನ ದರ್ಶನ ಮಾಡಿಸುವಂತದ್ದು. ಎರಡೂ ಕಡೆ ಕಲ್ಲಿನ ಮೆಟ್ಟಿಲುಗಳಿರೋದ್ರಿಂದ ಆ ಕಾಡ ಕತ್ತಲಲ್ಲೂ ನಾವು ಕಳೆದು ಹೋಗದೇ ತುದಿ ತಲುಪಿ ಮರಳೋದು ಸಾಧ್ಯವಾಯ್ತು. ಪೂರ್ಣ ಕತ್ತಲಾವರಿಸ್ತುತ್ತಾ ಬಂದಿದ್ರೂ ಅಲ್ಲಿನ ಮಂಜ ಪರಿ ಅದ್ಭುತ. ಕತ್ತಲು ಕವಿದು ಎದುರಿನ ಜಾಗವೇ ಮರೆಯಾಗಬೇಕೆಂಬ ಸಮಯದಲ್ಲಿ ಚೂರು ಬೆಳಕು. ಆ ಬೆಳಕನ್ನೆಲ್ಲಾ ಹಂತ ಹಂತವಾಗಿ ನುಂಗಲು ಹೊಂಚುತ್ತಿರುವ ಮೋಡಗಳು. ಮೋಡಗಳ ಹಾಲ ರಾಶಿಯ ನೋಡ ನೋಡುತ್ತಾ ಅವು ನಮ್ಮ ಮೇಲೇ ಬಂದು ನಮ್ಮನ್ನೂ ತಮ್ಮ ಕಾಲಗರ್ಭದಲ್ಲಿ ,ಸ್ವಚ್ಛ ಶುಭ್ರತೆಯಲ್ಲಿ ಲೀನವಾಗಿಸಿಬಿಟ್ಟಾವೆಯಾ ಎಂಬ ಭಯ.

ಅಲ್ಲಿಂದ ಮನಸ್ಸಿಲ್ಲದ ಮನಸ್ಸಿಂದಿಳಿದು ಮನೆ ಮುಟ್ಟಿದ್ವಿ. ಮಾರನೇ ದಿನ ಕೂನೂರಿನಿಂದ ಮುರು ಕಿ.ಮೀ ದೂರದ ಸಿಮ್ಸ್ ಪಾರ್ಕು, ಪಕ್ಕದ ರೇಬಿಸ್ಗೆ ಔಷಧಿ ಕಂಡು ಹಿಡಿದ ಲೂಯಿಸ್ ಪಾಶ್ಚರಿನ ಪಾಶ್ಚರ್ ಇನ್ಸಿಟಿಟ್ಯೂಟ್, ಟ್ಯಾನ್ ಟೀ ಮ್ಯೂಸಿಯಂ ನೋಡೋದಿತ್ತು. ಹಲತರದ ಸಸ್ಯಗಳ ಬಗ್ಗೆ ತಿಳಿಯೋ ಕುತೂಹಲವಿರೋರಿಗೆ ಇದೊಂದು ಒಳ್ಳೆಯ ತಾಣ. ಇನ್ನೂರು, ಇನ್ನೂರೈವತ್ತು ವರ್ಷಗಳಷ್ಟು ಹಳೆಯ ಮರಗಳಿರೋ ಸಿಮ್ಸ್ ಪಾರ್ಕ್ ಸಂದರ್ಶನಕ್ಕೆ ದೊಡ್ಡವರಿಗೆ ೩೦, ಮಕ್ಕಳಿಗೆ ೧೫ ಮತ್ತು ಕ್ಯಾಮರಾಕ್ಕೆ ೫೦ ರೂ ಪ್ರವೇಶ ಶುಲ್ಕ. ಇಲ್ಲಿರೋ ಸಖತ್ ಹೂಗಳಿಗೆ ಹೋಲಿಸಿದ್ರೆ ಕ್ಯಾಮರಾಕ್ಕೆ ಕೊಡೋ ೫೦ ನಿಜಕ್ಕೂ ಸಾರ್ಥಕ ಎಂದೇ ಹೇಳಬೇಕು. ಅಲ್ಲಿಂದ ಕೋಟಗಿರಿ ಮಾರ್ಗದಲ್ಲಿ ಸಾಗಿ ಪ್ರಕೃತಿಯ ಆನಂದ ಸವಿಯೋದ್ರೊಂದಿಗೆ ದಾರಿ ಮಧ್ಯದ ಚಿನ್ನ ಬಾಲಾಜಿ ದೇವಸ್ಥಾನವ ಸಂದರ್ಶಿಸುವ ಮನಸ್ಸೂ ಇತ್ತು. ಬೆಂಗಳೂರಿಗೆ ಮರಳೋ ಬಸ್ಸು ಸಂಜೆ ಐದೂವರೆಗೆ ಇಲ್ಲದಿದ್ದರೆ ಅಲ್ಲೇ ಇನ್ನೆರಡು ದಿನ ಇದ್ದು ನೀಲಗಿರಿ ರೈಲಲ್ಲಿ ಅಲೆಯುವ, ಸುತ್ತಮುತ್ತಲ ಜಾಗಕ್ಕೆ ಟ್ರೆಕ್ಕಿಂಗ್ ಹೋಗೋ ಬಯಕೆಯೂ ಇತ್ತು. ಅಂದಂಗೆ ಇಲ್ಲಿ ಮೂರು ಟ್ರೆಕ್ಕಿಂಗ್ ಮಾರ್ಗಗಳಿವೆ. ಊಟಿಯದೊಂದು, ಕೋಟಗಿರಿಯದೊಂದು, ಕೂನೂರಿನದೊಂದು. ಮುಂದೊಮ್ಮೆ ಇವುಗಳಲ್ಲಿ ಯಾವುದಾದರೂ ಒಂದಕ್ಕೆ ಹೋಗೋ ಮನಸ್ಸಿದೆ. ಅದು ಸಾಧ್ಯವಾದ ದಿನ ಅದ್ರ ಬಗ್ಗೆಯೂ ಬರೆಯೋ ಪ್ರಯತ್ನ ಮಾಡುವೆ. ಅಲ್ಲಿಯವರೆಗೆ ದೀಪಾವಳಿಯ ಶುಭಾಶಯಗಳು ಮತ್ತು ಶುಭದಿನ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮಣ್ಣಾದ ಶೂ ಮತ್ತು ಮೋಡಗಳ ಊಟಿ: ಪ್ರಶಸ್ತಿ ಅಂಕಣ

Leave a Reply

Your email address will not be published. Required fields are marked *