ಮತ್ತೆ ರಂಗದಲ್ಲಿ ಅಬ್ಬರಿಸಿದ ’ವೀರ ಸಿಂಧೂರ ಲಕ್ಷ್ಮಣ’: ಹಿಪ್ಪರಗಿ ಸಿದ್ಧರಾಮ್,

ಗಾಂಧಿಯವರ ಅಸಹಕಾರ ಚಳುವಳಿಯ ಕರೆಗೆ ಓಗೊಟ್ಟ ಫಲವಾಗಿ ಹಲವರು ಸ್ಥಳೀಯ ಮಟ್ಟದಲ್ಲಿ ಕರನಿರಾಕರಣೆ, ಸರಕಾರಿ ಖಜಾನೆಗಳ ಲೂಟಿ, ಶ್ರೀಮಂತರ ಸ್ವತ್ತನ್ನು ದೋಚಿಕೊಂಡು ಬಡವರಿಗೆ ಹಂಚುವುದು ಮುಂತಾದವುಗಳನ್ನು ಮಾಡುತ್ತಾ ಆಗಿನ ಸರಕಾರಗಳಿಗೆ ಸವಾಲಾಗಿರುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ದೇಶದ ಸ್ವಾತಂತ್ರ್ಯ ಸಮರದ ಇತಿಹಾಸವನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೆಡೆಯಾದರೆ ಜಾಗೃತ ಯುವಮನಸ್ಸುಗಳು, ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವ್ವಾತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ತಾಯ್ನೆಲದ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರಾಣಾರ್ಪಣೆಗೈದಿದ್ದು ಮತ್ತೊಂದೆಡೆ. ಸುರಪುರ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಮೈಲಾರ ಮಹಾದೇವ, ಹಲಗಲಿಯ ಬೇಡರು, ಸಂಗೊಳ್ಳಿ ರಾಯಣ್ಣ ಹೀಗೆ ಇನ್ನೂ ಅನೇಕ ಅನಾಮಿಕ ಕಲಿಗಳ ಸಾಲಿನಲ್ಲಿ ನಿಲ್ಲುವ ಹೆಸರು ವೀರ ಸಿಂಧೂರ ಲಕ್ಷ್ಮಣ. ಸ್ವಾತಂತ್ರ್ಯಪೂರ್ವದ ಮಹಾರಾಷ್ಟ್ರದ ಜತ್ತ ಸಂಸ್ಥಾನಿಕರು ಮತ್ತು ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಾ ಅಮರನಾಗುವ ಅದೇ ಸಂಸ್ಥಾನದ ಸಿಂಧೂರ ಗ್ರಾಮದ ವಾಲೀಕಾರ ವೃತ್ತಿಯ ಲಕ್ಷ್ಮಣ (೧೮೯೮-೧೯೨೨) ಎಂಬ ಯುವಕನ ಹೋರಾಟದ ಕಥೆಯಾಧಾರಿತ ನಾಟಕವನ್ನು ಬಹಳ ಹಿಂದೆಯೇ ನಾಟಕಕಾರ ದಿ.ಪುಂಡಲೀಕ ದುತ್ತರಗಿಯವರು ರಚಿಸಿದ್ದರು. ಹಾಗೆ ರಚಿತಗೊಂಡು ಹಲವಾರು ದಶಕಗಳ ಕಾಲ ವಿವಿದೆಡೆ ಪ್ರದರ್ಶನಗೊಂಡು ಯಶಸ್ವಿಯಾದ ಈ ಕ್ಲಾಸಿಕ್ ನಾಟಕವನ್ನು ಇತ್ತೀಚೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಾಲ್ಮೀಕಿ ಜಯಂತಿಯ (೦೮-೧೦-೨೦೧೪) ಸಂದರ್ಭದಲ್ಲಿ ಧಾರವಾಡದ ಪುಟ್ಟರಾಜ ಗವಾಯಿಗಳ ಸಾಂಸ್ಕೃತಿಕ ಪ್ರತಿಷ್ಟಾನದ ಕಲಾವಿದರು ವೃತ್ತಿಯಿಂದ ವಕೀಲರಾದರೂ ಪ್ರವೃತ್ತಿಯಿಂದ ರಂಗಕರ್ಮಿಗಳಾಗಿರುವ ಮಹಾದೇವ ದೊಡ್ಡಮನಿ ನಿರ್ದೇಶನದಲ್ಲಿ ಅಭಿನಯಿಸಿದರು.  

ಜನಪ್ರಿಯ ಮತ್ತು ಶೈಲಿಕೃತ ನಾಟಕದ ಈ ಪ್ರಯೋಗದಲ್ಲಿ ವೃತ್ತಿರಂಗಭೂಮಿ ಮತ್ತು ಹವ್ಯಾಸಿ ಕಲಾವಿದರು ತಮ್ಮ ಶಕ್ತ್ಯಾನುಸಾರ ಅಭಿನಯಿಸಿ, ಪ್ರೇಕ್ಷಕರಿಗೆ ನಿರಾಶೆಯಾಗದಂತೆ ನೋಡಿಕೊಂಡರು. ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡುಮದ್ಯಾಹ್ನದ ಸಮಯದಲ್ಲಿ ಪ್ರದರ್ಶನಗೊಂಡ ಈ ನಾಟಕಕ್ಕೆ ಅಪ್ಪುರಾಜ್ ಮೇವುಂಡಿಯವರು ಸಂಗೀತ ನೀಡಿದರು. ಬ್ರಿಟಿಷ್‌ರ  ಕಾಲಮಾನದ ಧ್ವನಿಪರಿಣಾಮಗಳನ್ನು ಅದ್ಭುತವಾಗಿ ರಿದಂ ಪ್ಯಾಡ್‌ದಲ್ಲಿ ಹೊರಡಿಸಿದವರು ಪ್ರಕಾಶ ಧಾವಣಗೆರೆ. ಸಿಂಧೂರ ಲಕ್ಷ್ಮಣನ ಪಾತ್ರಧಾರಿ (ಸಿಎಸ್) ಅಬ್ಬರದಲ್ಲಿ ಗೌಡನ ಪಾತ್ರ ಕಳೆಗುಂದಿತು. ಇನ್ಸಪೆಕ್ಟರ್ ಕಠಕ್ ಪಾತ್ರದಲ್ಲಿ ಚನಬಸಪ್ಪ ಕಾಳೆ ಕನ್ನಡದೊಂದಿಗೆ ಹಿಂದಿ ಮತ್ತು ಮರಾಠಿ ಸಂಭಾಷಣೆ ಹೇಳಿ ಗಮನ ಸೆಳೆದರು. ಪೇದೆಗಳ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಕಲಾಲ್ ಮತ್ತು ಶೇರಖಾನ ಅವರದು ಮಾಗಿದ ಅಭಿನಯ. ತಂಗಿಯ ಪಾತ್ರದ ಅಭಿನಯ ಇನ್ನೂ ಪರಿಣಾಮಕಾರಿಯಾಗಿ ಪ್ರಕಟಗೊಳ್ಳಲು ಬೆಳಕಿನ ವಿನ್ಯಾಸ ಮಾಡಿದ ತಂತ್ರಜ್ಞ ವಿಜಯೀಂದ್ರ ಅರ್ಚಕ ಅವರು ಕ್ರಮಿಸುವ ದಾರಿ ದೂರವಿದೆ. ಉಪದ್ವಾಪಿ ವೀರಯ್ಯಸ್ವಾಮೀಜಿಯ ಪಾತ್ರದಲ್ಲಿ ಮಕಬೂಲ ಹುಣಶೀಕಟ್ಟಿಯವರದು ಎಚ್ಚರಿಕೆಯ ಮತ್ತು ಜಾಗೃತಾವಸ್ಥೆಯ ಮಾಗಿದ ಅಭಿನಯ. ತಾಯಿ ಮತ್ತು ಮೇರಿಯಮ್ಮನ ಪಾತ್ರಧಾರಿಗಳು ಭಾವನಾತ್ಮಕ ಅಭಿನಯದಿಂದ ಪ್ರೇಕ್ಷಕರ ಅನುಕಂಪ ಗಿಟ್ಟಿಸಿಕೊಂಡರು.  

ಕೊನೆಯ ಸನ್ನಿವೇಶದ ಕಪ್ಪರದ ಪಡಿಯವ್ವನ ಗುಡಿಯಲ್ಲಿ ಸ್ವಜನರ ಮೋಸದಿಂದ ವೀರ ಸಿಂಧೂರ ಲಕ್ಷ್ಮಣ (೧೫ ಜುಲೈ ೧೯೨೨) ಬಲಿಯಾಗುವ ದೃಶ್ಯಾವಳಿಯ ಸಂಯೋಜನೆಯು ಪ್ರೇಕ್ಷರ ಗಮನ ಸೆಳೆಯಿತು. ಇಂದಿಗೂ ಪೋಲಿಸರ ದಾಖಲೆಯಲ್ಲಿ ದರೋಡೆಕೋರನಾಗಿ, ಪ್ರಭುತ್ವಗಳ ಚರಿತ್ರೆಯಲ್ಲಿ ಬಂಡುಕೋರನಾಗಿ ದಾಖಲಾದ ವೀರ ಸಿಂಧೂರ ಲಕ್ಷ್ಮಣ ಜನರ ಎದೆಯಲ್ಲಿ ಹುತಾತ್ಮನಾಗಿ, ಜನಪದರ ನಾಲಿಗೆಯಲ್ಲಿ ಹಾಡಾಗಿ ಅಮರನಾಗಿದ್ದಾನೆ. ಇಂದಿಗೂ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಜನಮಾನಸದಲ್ಲಿ ಜನನಾಯಕ ಮತ್ತು ಸ್ವಾತಂತ್ರ್ಯಯೋಧನೆಂದು ಗೌರವಿಸುವ ಇಂತಹ ವೀರನ ಕಥಾನಕವನ್ನು ಪಿ.ಬಿ.ದುತ್ತರಗಿ, ಕಂಠಿ ಹನುಮಂತರಾಯರು, ಲಕ್ಷ್ಮಣರಾವ್ ಪುರಿ, ಟಿ.ಕೆ.ಮಹಮ್ಮದಲಿ, ಸಂಗಮೇಶ ಗುರವ ಸೇರಿದಂತೆ ಹಲವರು ರಂಗಕೃತಿಯನ್ನು ರಚಿಸಿದ್ದು, ಕಾಲ್ಪನಿಕ ದೃಶ್ಯಗಳ ವೈಭವದೊಂದಿಗೆ ವಾಸ್ತವವನ್ನು ಸಂಗ್ರಹಿಸಿರುವುದು ವೀರನೊಬ್ಬನ ಕಥೆಯು ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ. ವೃತ್ತಿರಂಗಭೂಮಿಯ ವೈಭವದ ದಿನಗಳಲ್ಲಿ ಗಲ್ಲಾಪೆಟ್ಟಿಗೆ ತುಂಬಿಸಿದ್ದ ಈ ನಾಟಕದಲ್ಲಿ ಅಭಿನಯಿಸಿ ಗುಡಗೇರಿ ಬಸವರಾಜ್, ಸುಧೀರರಂತಹ ಧೀಮಂತ-ಪ್ರಾತಃಸ್ಮರಣೀಯ ಕಲಾವಿದರು ಹೆಸರು ಮಾಡಿದ್ದು ಇದೇ ನಾಟಕದಿಂದ ಎಂಬುದನ್ನು ಹಿರಿಯ ನಾಟಕ ಪ್ರೇಮಿಗಳು ನೆನಪಿಸಿಕೊಳ್ಳುವಂತೆ ಈ ಪ್ರಯೋಗ ಮೂಡಿ ಬಂದಿತು. ಇಂತಹ ನಾಟಕ ಪ್ರದರ್ಶನ ಏರ್ಪಡಿಸಿದ ಜಿಲ್ಲಾಡಳಿತದ ಎಲ್ಲಾ ಅಧಿಕಾರಿ ವರ್ಗದವರು ಅಭಿನಂದನಾರ್ಹರು.

*****
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಬಸವರಾಜ್
ಬಸವರಾಜ್
6 years ago

ಸರ್,

24/10/2014  ರಂದು ಸಿಂಧೂರ ಲಕ್ಷ್ಮಣ್ ಕುರಿತಾದ ಬರೆದವರ ದೂರಧ್ವನಿ ಸಂಖ್ಯೆ ದಯವಿಟ್ಟು ಕಳುಹಿಸಿ.

ಬಸವರಾಜ್
ಬಸವರಾಜ್
6 years ago

ನನ್ನ ಮೊಬೈಲ್ 07709707161

 

2
0
Would love your thoughts, please comment.x
()
x