ಪಂಜು-ವಿಶೇಷ

ಮಕ್ಕಳ ಹಕ್ಕುಗಳ ರಕ್ಶಣೆಯಲ್ಲಿ ಮಾಧ್ಯಮದ ಪಾತ್ರ: ಜ್ಯೋತಿ ಇರವರ್ತೂರು

ಇತ್ತೀಚೆಗೆ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದ್ರೆ ಮಕ್ಕಳಿಗೂ ಹಕ್ಕುಗಳು ಇದೆಯಾ ಅನ್ನಿಸುತ್ತೆ. ತಮ್ಮವರಿಂದ, ಸಮಾಜದಿಂದ ಹೀಗೆ ತಮ್ಮ ಹಕ್ಕುಗಳೇನೆಂದು ಅರಿವು ಮೂಡುವ ಮುನ್ನ ಕನಸುಗಳ ಬಣ್ಣ ಕಳೆದುಕೊಳ್ಳುತ್ತಾರೆ ಈ ಚಿಣ್ಣರು. ಇಂತಹ ಸಂದರ್ಭದಲ್ಲಿ ಅರಿವು ಮೂಡಿಸಿ ಅವರ ಭವಿಷ್ಯ ದಾರಿ ಅರ್ಥಪೂರ್ಣವಾಗಿಸಲು ಮಾಧ್ಯಮದ ಪಾತ್ರ ಬಹಳ ದೊಡ್ಡದು. 

ಶಾಲೆಯಲ್ಲಿ ಪುಟ್ಟ ಬೆನ್ನಿಗೆ ಬೆಟ್ಟದ ಹೊರೆ, ಬದುಕಿನ ಬಣ್ಣ ಕಳೆದುಕೊಂಡ ಬಾಲಕಾರ್ಮಿಕರು ; 
ಕಾಫಿ ಕುಡಿಯಲೆಂದು ಹೋಟೇಲಿಗೆ ಹೋದಾಗ ಟೇಬಲ್ ಒರೆಸುವ ಪುಟ್ಟ ಕಂದನನ್ನು ನೋಡಿ ನಿಮ್ಮ ಮನಸ್ಸು ಕೊರಗಬಹುದು. ಮನೆಯಲ್ಲಿರುವ ನಿಮ್ಮ ಮಗ ಅದೇ ಪ್ರಾಯ ಅಂತ ನೆನಪಾಗಿ ಮನಸ್ಸು ಭಾರವಾಗಬಹುದು. ಇಂತಹ ಬಾಲಕಾರ್ಮಿಕ ಪದ್ದತಿಯ ನಿರ್ಮೂಲನದಲ್ಲಿ ಮಾಧ್ಯಮದ ಪಾತ್ರ ಬಹಳ ದೊಡ್ಡದು.ಈ ಕುರಿತಂತೆ ಅಭಿಯಾನವನ್ನು ಹಮ್ಮಿಕೊಳ್ಳಬಹುದು. ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಮಾಧ್ಯಮ ಕೆಲಸಮಾಡಬಹುದು. ಕೇವಲ superficial ಆಗಿರದೆ ಸಮಸ್ಯೆಯ ಆಳಕ್ಕೆ ಇಳಿದು ಪರಿಹಾರದ ಹಾದಿಯಲ್ಲಿ  ಹೆಜ್ಜೆಯಿಡುವ ಪ್ರಯತ್ನವನ್ನು ಮಾಧ್ಯಮ ಮಾಡಬಹುದು. 

ಮಕ್ಕಳ ಮೇಲೆ ಹೆಚ್ಛುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಬೆಳಕಿಗೆ ಬಾರದೆ ಮುದುಡಿ ಹೋದ ಮುದ್ದು ಮುಖಗಳು ;
ತಮ್ಮ ಕಾಮತೃಷೆಗೆ ಮಕ್ಕಳನ್ನು ಬಳಸಿಕೊಳ್ಳುವ ಅಮಾನವೀಯ ಪ್ರವ್ರತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಕ್ಕಳ ಮುಗ್ಧತೆಯನ್ನುಬಳಸಿಕೊಳ್ಳುವ ಇಂತಹ ಕಾಮುಕರು ಏನು ಮಾಡಲು ಹೇಸದವರು. ಮೊನ್ನೆ  ತಾನೆ ರಾಮನಗರದಲ್ಲಿ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಕೊನೆಗೆ ತಮ್ಮವರಿಂದಲೆ ಜೀವವನ್ನೆ ಕಳೆದುಕೊಂಡ ಎಂಟು ವರ್ಷದ ಬಾಲಕಿಯ ಬಗ್ಗೆ ಕೆಲವು ಮಾಧ್ಯಮ ವರದಿ ಮಾಡಿದ್ದವು. ಆದರೆ ಅಪರಾಧಿಗಳಿಗೆ ಶಿಕ್ಷೆ, ಸಾಮಾಜಿಕ ಪರಿಸರ, ಇಂತಹ ಪ್ರಸಂಗ ನಡೆಯುತ್ತಿರುವ ಬಗ್ಗೆ ಅರಿವಿದ್ದರೂ ಸುಮ್ಮವಿರುವ ಮಹಾನುಭಾವರು. ಇದೆಲ್ಲ ಆಯಾಮಗಳ ಬಗ್ಗೆ ಜಾಗೃತಿ ಮೂಡಿಸೋದು ಮಾಧ್ಯಮದ ಪಾತ್ರ. ಆದರೆ ಬಹುತೇಕ ಇಂತಹ ಘಟನೆಗಳನ್ನು ಅತಿರಂಜಿತವಾಗಿ ವರದಿ ಮಾಡೋದನ್ನು ಬಿಟ್ಟರೆ ಬೇರೆ ದೃಷ್ಟಿಕೋನದಿಂದ ನೋಡುವ ಗೋಜಿಗೆ ಬಹುತೇಕ ಮಾಧ್ಯಮ ಹೋಗದಿರುವುದು ದುರದೃಷ್ಟಕರ.  

ಹೆಣ್ಣು ಮಕ್ಕಳೆಂದು ಮಕ್ಕಳ ಮೇಲೆ ತಂದೆಯೇ ಹಲ್ಲೆ ಮಾಡಿದ ;
ಮೊನ್ನೆ ತಾನೆ ನನ್ನ ಆತ್ಮೀಯರೊಬ್ಬರು  ಕವರ್ ಮಾಡಿದ ಸ್ಟೋರಿ ಬಗ್ಗೆ ಹೇಳ್ತಾ ಇದ್ರು. ತಂದೆಯೇ ಮಕ್ಕಳ ಮೇಲೆ ಹಲ್ಲೆ ಮಾಡಲು ಮುಖ್ಯ ಕಾರಣ ಅವರು ಹೆಣ್ಣು ಮಕ್ಕಳೆನ್ನುವುದು. ಇಂತಹ ಸಂದರ್ಭದಲ್ಲಿ  ಸಮಸ್ಯೆಯ ಜೊತೆಗೆ  ಸಕಾರಾತ್ಮಕ ಚಿಂತನೆಗಳಿಗೆ ಮನಸ್ಸನ್ನು ತೆರೆದುಕೊಳ್ಳುವಂತೆ ಮಾಡೋದು ಮಾಧ್ಯಮದ ಕೆಲಸ. ಸಾಮಾಜಿಕ ಪರಿವರ್ತನೆ ಅದು ನಮ್ಮ ಚಿಂತನೆ ಬದಲಾದರೆ ಮಾತ್ರಸಾಧ್ಯ. ಬರಿ ಅಪರಾಧದ ಅತಿರಂಜಿತ ವರದಿಯಲ್ಲದೆ  ಬದಲಾವಣೆಗೆ ಮುನ್ನುಡಿಯಾಗಬಲ್ಲ ದಿಕ್ಕಿನಲ್ಲಿ ಮಾಧ್ಯಮ ಹೆಜ್ಜೆ ಹಾಕಬೇಕು ಮಾತ್ರವಲ್ಲದೆ ಕೇವಲ ವೀಕ್ಷಕರ ಭಾವನೆಗಳನ್ನು ತಾತ್ಕಾಲಿಕವಾಗಿ ಕೆರಳಿಸುವತ್ತ, ತಮ್ಮ ತಮ್ಮ ಟಿಆರ್ಪಿ ಹೆಚ್ಚು ಮಾಡಿಕೊಳ್ಳುವತ್ತ ಮಾತ್ರ ಗಮನ ಹರಿಸದೆ, ಮಕ್ಕಳ ವಿಷಯದಂಥ ಸೂಕ್ಷ್ಮ ಮತ್ತು ಬಹು ಮುಖ್ಯ ವಿಷಯಗಳಲ್ಲಿ ಸಮರೋಪಾದಿಯಲ್ಲಿ ಕಾರ್ಯಗತವಾಗಬೇಕು ಮಾಧ್ಯಮ. ಸಮಸ್ಯೆಯ ಮೂಲದವರೆಗೂ ಮುಟ್ಟಿ ಅಧಿಕಾರಿಗಳನ್ನು ಜಾಗೃತಗೊಳಿಸಿ ವ್ಯವಸ್ಥೆಯನ್ನು ಚುರುಕುಗೊಳಿಸ ಬೇಕಾದ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಮಾಧ್ಯಮ ಎಂದರೆ ಗ್ಲಾಮರ್ ಮತ್ತು ಟೈಂ ಪಾಸ್ ಎನ್ನುವ ಮನೋಭಾವ ಸಮಾಜದಲ್ಲಿ ಬದಲಾಗಬೇಕೆಂದರೆ ಮಾಧ್ಯಮಗಳು ಮಕ್ಕಳ ಸುರಕ್ಷತೆತೆಯ ಬಗ್ಗೆ ಈಗಿಂದೀಗಲೇ ಗಮನ ಹರಿಸಿ ಸಮಾಜವನ್ನು ಉತ್ತಮ ರೀತಿಯಲ್ಲಿ ಪ್ರಚೋದಿಸುವಂಥ ಕೆಲಸ ಮಾಡಬೇಕು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮಕ್ಕಳ ಹಕ್ಕುಗಳ ರಕ್ಶಣೆಯಲ್ಲಿ ಮಾಧ್ಯಮದ ಪಾತ್ರ: ಜ್ಯೋತಿ ಇರವರ್ತೂರು

  1. ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ಜ್ಯೋತಕ್ಕ…

Leave a Reply

Your email address will not be published. Required fields are marked *