ಮಡಿಕೇರಿ ಅಂದಾಕ್ಷಣ ನೆನಪಾಗೋ ಸ್ಥಳಗಳಲ್ಲಿ ಮಂದ್ಲಪೇಟೆಯೂ ಒಂದು. ಹಿಂದಿನ ಸಲ ಹೋದಾಗ ಇಲ್ಲಿಂದ ೨೭ ಕಿ.ಮೀ ಅಂತ ನೋಡಿದ್ರೂ ಹೋಗಕ್ಕಾಗದೇ ಇದ್ದ ಕಾರಣಕ್ಕೋ ಏನೋ ಗೊತ್ತಿಲ್ಲ. ಈ ಸಲ ಮಡಿಕೇರಿಗೆ ಹೋದಾಗ ಮಂದ್ಲಪೇಟೆಗೆ ಹೋಗ್ಲೇಬೇಕು ಅಂತ ಮನ ತುಡೀತಿತ್ತು . ನಮ್ಮ ಗಾಳಿಪಟ ಚಿತ್ರದಲ್ಲಿ ಮುಗಿಲುಪೇಟೆ, ಕೆಲವರ ಬಾಯಲ್ಲಿ ಮಾಂದ್ಲಪೇಟೆ, ಮಂದ್ಲಪಟ್ಟಿ.. ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳೋ ಮುಗಿಲುಗಳಿಗೆ ಮುತ್ತಿಕ್ಕೋ ಜಾಗ ಇದೇನೆ. ಗಾಳಿಪಟ ಚಿತ್ರದ ಹೆಸರಿದ್ದಂತೆಯೇ ಇಲ್ಲಿ ಮುಗಿಲುಗಳದ್ದೇ ಮೊಹಬ್ಬತ್ . ಆದ್ರೆ ಕೆಲೋ ಸಲ ವಿಪರೀತ ಮೋಡಗಳಾಗಿ ಏನೂ ನೋಡೋಕೆ ಸಿಗಲ್ಲ. ಕೆಲೋ ಸಲ ಭಯಾನಕ ಮಳೆ, ಕೆಲವೊಮ್ಮೆ ಯದ್ವಾ ತದ್ವಾ ಬಿಸ್ಲು. ಇವತ್ತಿದ್ದಂಗೆ ನಾಳೆ ಇರಲ್ಲ ಇಲ್ಲಿನ ಹವಾ ಅಂತ ಒಬ್ರು ಹೇಳ್ತಾ ಇದ್ರು. ಮೊದಲಿಗೆ ಇದು ಸ್ವಲ್ಪ ಜಾಸ್ತೀನೆ ಬಿಲ್ಡಪ್ಪು ಅನಿಸಿದ್ರೂ ಹಿಂದಿನ ದಿನ ತಡಿಯಂಡಮಾಲ್ ಚಾರಣಕ್ಕೆ ಹೋದಾಗ ಹತ್ತುವ ಮೊದಲು ಮೋಡ ಕವಿದ ವಾತಾವರಣ, ಅರ್ಧ ಹತ್ತಿದ ಮೇಲೆ ವಿಪರೀತ ಮಳೆ. ಅರ್ಧ ಇಳಿಯೋ ಹೊತ್ತಿಗೆ ನಿಂತ ಮಳೆ ಮತ್ತೆ ಶುರುವಾದ ಬಿಸಿಲು. ಪರ್ವತಗಳಿಗೆ ಹಲವಾಕಾರದ ಹಾರಗಳಂತಿದ್ದ ಮೋಡಗಳ ಆಕಾರಗಳನ್ನು ನೋಡಿದ್ದ ನಮಗೆ ಇದು ಇದ್ದರೂ ಇರಬಹುದೇನೋ ಅನಿಸಿದ್ದು ಸುಳ್ಳಲ್ಲ.
ಮಡಿಕೇರಿಯಿಂದ ನಾಲ್ಕು ಕಿ.ಲೋ ಮೀಟರ್ ಬಂದ್ರೆ ಒಂದು ಕವಲು ದಾರಿ. ಅಲ್ಲಿಂದ ಎಡಕ್ಕೆ ಹೋದ್ರೆ ಅಬ್ಬಿ ಜಲಪಾತ. ಬಲಕ್ಕೆ ಹದಿನೆಂಟು ಕಿ.ಮೀ ಹೋದ್ರೆ ಮಂದ್ಲಪೇಟೆ. ಇಲ್ಲಿ ನಮ್ಮದೇ ಸ್ವಂತ ಗಾಡಿಯಿದ್ರೂ ಇಲ್ಲಿನ ಜೀಪು ಡ್ರೈವರುಗಳು ಮುಂದೆ ಹೋಗಲು ಬಿಡೋದಿಲ್ಲ. ಒಂದೊಂದು ಜೀಪಿಗೆ ಸಾವಿರದೈನೂರು ಬಾಡಿಗೆ. ಬೈಕಲ್ಲಿ ಬಂದೋರು ಬಿಟ್ಟು ಉಳಿದವರೆಲ್ಲಾ ಜೀಪೇ ಹತ್ತುತ್ತಿದ್ದರಿಂದ ನಮಗೂ ಬೇರೆ ದಾರಿಯಿಲ್ಲದೇ ಜೀಪಿಗೆ ಜೈ ಅನ್ನಬೇಕಾಯ್ತು. ಇಪ್ಪತ್ತೆರಡು ಜನರಿದ್ದ ನಾವು ತಲಾ ಏಳರಂತೆ ಒಂದೊಂದು ಜೀಪಲ್ಲಿ ಹತ್ತಿ ಮಂದ್ಲಪೇಟೆಯತ್ತ ಹೊರಟೆವು. ಅಚಾನಕ್ಕಾಗಿ ಎದುರಾಗುತ್ತಿದ್ದ ಏರು, ತಟ್ಟನೆ ಸಿಗುತ್ತಿದ್ದ ಇಳುಕಲುಗಳಲ್ಲಿ ಟಾರ್ ರೋಡಾದ್ರೂ ಇಂಥಾ ಜೀಪುಗಳ ಬಿಟ್ರೆ ಬೇರೆ ಯಾವ ವಾಹನಗಳಲ್ಲೂ ಸುತ್ತೋದು ಕಷ್ಟವೇ ಅನಿಸಿದ್ದು ಸುಳ್ಳಲ್ಲ.
ಟಾರು ರಸ್ತೆ ಕೊನೆಯವರೆಗೂ ಇಲ್ಲ ಮಾರ್ರೆ. ಟಾರ್ ರಸ್ತೆ ಮುಗಿದು ಜಲ್ಲಿಯ, ಮಣ್ಣಿನ ರಸ್ತೆ ಶುರುವಾಗುತ್ತೆ ನೋಡಿ. ಅಲ್ಲೇ ಇರೋದು ಮಜ. ಅತ್ತ ಇತ್ತ ಎತ್ತ ತಿರುಗಿದ್ರೂ ಕಾಣೋದು ಕಂದಕದಾಚೆಗಿನ ಪರ್ವತಗಳು ಇಲ್ಲಾ ಪಕ್ಕಕ್ಕೆ ಉದ್ದುದ್ದ ಚಾಚಿರೋ ಶಿಖರಗಳು. ಈ ಶಿಖರಗಳ ಉದ್ದಗಲ ಅಳೆಯುವಂತೆ ಚಲಿಸುತ್ತಿರೋ ಬಿಳಿ ಬಿಳಿ ಮೋಡಗಳು. ದಿನಾ ಅದೇ ದಾರಿಯಲ್ಲಿ ಓಡಾಡಿ ಓಡಾಡಿ ಅಭ್ಯಾಸವಾಗಿರೋ ಈ ಡ್ರೈವರುಗಳು ಕೆಸರಿರಲಿ, ಜಾರುತ್ತಿರೋ ಕಲ್ಲ ದಾರಿಯಿರಲಿ, ಕಂದಕ ಅಂತ ಭಯ ಹುಟ್ಟಿಸೋ ತಿರುವುಗಳಿರಲಿ ಅದೇ ತಾದ್ಯಾತ್ಮದಿಂದ ಲೀಲಾಜಾಲವೆನಿಸುವಂತೆ ಗಾಡಿ ಓಡಿಸೋ ಪರಿಯಿದ್ಯಲ್ಲ ಅದನ್ನ ನೋಡಿ ಸ್ವಂತ ಗಾಡಿ ತಂದು ಈ ರೋಡಲ್ಲಿ ಪಾಡು ಪಡೋ ಬದ್ಲು ಜೀಪಲ್ಲಿ ಬಂದು ಪ್ರಾಕೃತಿಕ ಆನಂದ ಅನುಭವಿಸೋಕೆ ನಿರ್ಧರಿಸಿದ್ದೇ ಸರಿಯೆನಿಸಿತು.
ಅಂದಂಗೆ ಏರಿರಲಿ, ಇಳಿಜಾರಿರಲಿ . ಅದೆಂಗೆ ಇಷ್ಟು ಸುಲಭವಾಗಿ ಗಾಡಿ ಓಡಿಸ್ತಾರೆ ಅನ್ನೋ ಕುತೂಹಲ ತಣಿಸಿದ್ದು ನಮ್ಮ ಜೀಪಿನ ಡ್ರೈವರಣ್ಣ. ಇಲ್ಲಿ ನೋಡಿ ಇದ್ರ ಗೇರುಗಳು ಅಂತ ಅವ ಬೆರಳು ತೋರಿದತ್ತ ನೋಡಿದ್ರೆ ಒಮ್ಮೆ ಅಚ್ಚರಿ. ಎಲ್ಲ ಗಾಡಿಗಳಂತೆ ಒಂದಿರದೆ ಅದಕ್ಕೆ ಮೂರು ಗೇರುಗಳು. ದೊಡ್ಡ ಗೇರು ಸಾಮಾನ್ಯ ಏರುಗಳಿಗೆ. ಅದಕ್ಕಿಂತ ಸ್ವಲ್ಪ ಸಣ್ಣದು ಮಂದ್ಲಪೇಟೆಯ ಏರುಗಳಿಗೆ ಸ್ಪೆಷಲ್ಲಾಗಿ ಇರೋದು ಅಂದ ಅವ. ಕುತೂಹಲ ಅಲ್ಲಿಗೇ ತಣಿಯಲಿಲ್ಲ. ಆ ಮೂರನೇದು ಅಂದೆ. ಇದರಲ್ಲಿ ಎಂತಹಾ ಏರನ್ನಾದ್ರೂ ಹತ್ತಿಸಬಹುದು. ಇದರ ಉಪಯೋಗ ಬರೋದು ಬಹಳ ಕಡಿಮೆ ಅಂದ ಅವ. ಜೀವನದಲ್ಲಿ ಘಾಟಿಗಳನ್ನು ನೋಡದವನೇನಲ್ಲ ನಾನು. ಬಾಳೆಬರೆ ಘಾಟಿ, ಚಾರ್ಮಾಡಿ ಘಾಟಿ, ಕೊಲ್ಲೂರು ಘಾಟಿ.. ಹೀಗೆ ಪಯಣದ ಅನೇಕ ಸಂದರ್ಭಗಳಲ್ಲಿ ಘಾಟಿಗಳನ್ನು ಕಂಡರೂ ಇಲ್ಲಿನ ತರಹದ ತತ್ ಕ್ಷಣದ ಏರು, ತದನಂತರವೇ ಸಿಗೋ ಇಳಿಜಾರುಗಳು ಸ್ವಲ್ಪ ಅಪರೂಪ ಅನಿಸಿದ್ದೆಂತೂ ಹೌದು.
ಸುಮಾರು ನಲವತ್ತು ನಿಮಿಷವಾಗಿರಬಹುದೇನೋ. ಅಷ್ಟರಲ್ಲಿ ಮೇಲೆ ಬಂದು ತಲುಪಿದ್ದೆವು. ಇಲ್ಲೊಂದು ವೀಕ್ಷಣೆಯ ಸ್ಥಳವಿದೆ. ಇದನ್ನು ಬಿಟ್ರೆ ಮುಂದೆ ಅರಣ್ಯ ಇಲಾಖೆಗೆ ದುಡ್ಡು ಕೊಟ್ಟು ನೋಡಬಹುದಾದ ಮತ್ತೊಂದು ಸ್ಥಳ ಇದೆ ಅಂದ ಡ್ರೈವರ್ರು. ಯಾವುದು ಚೆನ್ನಾಗಿದೆ ಅಂದ್ರೆ ಎರಡೂ ಅಂದ. ತಗಾ ಇದನ್ನೂ ನೋಡೋಣ. ಅದನ್ನೂ ನೋಡೋಣ ಅಂದ್ವಿ . ಹಾಗಾದ್ರೆ ಹತ್ತು ನಿಮಿಷದಲ್ಲಿ ಬರ್ಬೇಕು ಇಲ್ಲಿಂದ ಓಕೆನಾ ಅಂದ. ಹೂಂ ಅಂತ ಮೇಲತ್ತಿದ್ವಿ. ಬಂದ ಮೇಲೆ ತಾನೇ ಬರೋದು …
ಮಳೆಗಾಲದಲ್ಲಿ ಹೂಬಿಸಿಲು ಬಿಟ್ಟಿದೆ. ಅದೂ ಪರ್ವತವೊಂದರ ಮೇಲೆ ಅಂದ್ರೆ ಕೇಳ್ಬೇಕಾ ? ಪಕ್ಕಾ ಫೋಟೋ ಸೆಷನ್ನಿನ ಜಾಗ ಆಗ್ಬಿಟ್ಟಿತ್ತು ಅದು. ಕಣ್ಣು ಹಾಯಿಸಿದತ್ತೆಲ್ಲಾ ಹಸಿರ ಹೊದಿಕೆ. ನಮ್ಮ ಫೋಟೋ ಸೆಷನ್ನಲ್ಲಿ ನಾವೂ ಬರ್ತೀವಿ ಅನ್ನುವಂತೆ ಒಂದಿಷ್ಟು ಆಕಳುಗಳೂ ಮೇಯೋದು ಬಿಟ್ಟು ಪಿಳಿಪಿಳಿ ಕಣ್ಣುಗಳಿಂದ ನಮ್ಮತ್ತ ತಲೆಯೆತ್ತಿ ನೊಡ್ತಿದ್ವು. ಅದ್ರ ಫೋಟೋ ತೆಗೆಯೋಕೆ ಹೋದ ಪುಣ್ಯಾತ್ಮರನ್ನು ಕಂಡು ಓಡದೆ, ಹಾಯಕ್ಕೆ ಬರದೇ ಅತ್ತಲೊಂದು ಸಾರಿ , ಇತ್ತಲೊಂದು ಸಾರಿ ಗೋಣು ಹಾಕಿ ಒಳ್ಳೊಳ್ಳೇ ಪೋಸೂ ಕೊಡ್ತಿದ್ವು !! ಪಕ್ಕಾ ಪ್ರೊಫೆಷನಲ್ ದನಗಳು ಬಿಡಪ್ಪ ಅಂತೊಮ್ಮೆ ಅನಿಸಿದ್ದೂ ಸುಳ್ಳಲ್ಲ!
ಅಲ್ಲಿಂದ ಮನಸ್ಸಿಲ್ಲದ ಮನಸ್ಸಿಂದ ಕೆಳಗಿಳಿದು ಮತ್ತೊಂದಕ್ಕೆ ಹೊರಟ್ವಿ. ಅದು ತೀರಾ ದೂರವೇನಿಲ್ಲ. ಜೀಪಲ್ಲಿ ಐದು ನಿಮಿಷವಷ್ಟೇ. ಮಂದ್ಲಪಟ್ಟಿಯ ಆ ಮುಖ್ಯ ವೀಕ್ಷಣಾ ಸ್ಥಳ ಮುಟ್ಟಿ ಅಲ್ಲಿನ ಅರಣ್ಯ ಇಲಾಖಾ ಕೇಂದ್ರದಲ್ಲಿ ತಲಾ ೨೦ಪ್ರವೇಶ ಶುಲ್ಕ ಕಟ್ಟಿ ಮತ್ತೆ ಮೇಲೇರೋಕೆ ಶುರು ಮಾಡಿದ್ವಿ. ಇಲ್ಲಿ ಒಂದೆಡೆ ಟಿ.ವಿ ಟವರಿನಂತೆ ಆಂಟೆನಾ ಹುಗಿದಿಟ್ಟಿದ್ದು ಕಾಣ್ತಿತ್ತು. ಅದೇ ಕೊನೆಯಾ ಅಂತ ಅಂದ್ಕೊಂಡು ಹತ್ತಿದ್ವಿ. ನೋಡಿದ್ರೆ ಅದಕ್ಕಿಂತ ಮುಂದೆ ಒಂದು ವೀಕ್ಷಣಾ ಗೋಪುರ. ಆ ವೀಕ್ಷಣಾ ಗೋಪುರ ಹತ್ತಿದ್ರೆ ಮುಂದೊಂದಿಷ್ಟು ಜನ ಕೆಳಗೆ ಇಳೀತಿದ್ದಿದ್ದು ಕಾಣಿಸ್ತು. ಸರಿ ಅಲ್ಲಿಗೆ ದಾಂಗುಡಿ. ಅಲ್ಲಿ ಹೋಗಿ ನೋಡಿದ್ರೆ ಇನ್ನೂ ಕೆಳಗೆ ಇಳೀತಿದ್ದ ಜನ ಕಾಣ್ಬೇಕೇ ? ತಗೋ ಅಲ್ಲೂ ಹೋದ್ವಿ. ಆ ಕೊನೆಯ ಜಾಗ ಇದ್ಯಲ್ಲ. ಅದು ನೋಡಿ ಮುಗಿಲುಪೇಟೆಗೆ ಆ ಹೆಸ್ರು ಯಾಕೆ ಬಂತು ಅಂತ ಸಾರಿ ಹೇಳೋ ಹಂಗಿತ್ತು. ಒಂದೆಡೆ ಹರಿತಿರೋ ನದಿಯ ನಿನಾದ. ಬೀಸುತ್ತಿರೋ ಗಾಳಿಯ ಸದ್ದು ಮತ್ತು ಅನುಭೂತಿ. ಸಂಚಾರಿ ಮೋಡಗಳು ಮೇಲೆ ಕಂಡ್ರೆ ಅವುಗಳಿಂದ ಕೆಳಗಿನ ಹಸಿರು ಬೆಟ್ಟಗಳ ಮೇಲೆ ಮೂಡುತ್ತಿದ್ದ ನೆರಳಿನ ಸೌಂದರ್ಯ ಮತ್ತೊಂದು ಪರಿ. ಒಂದು ನಿಮಿಷ ತಣ್ಣಗೆ ಕೂರೋಣ ತಡ್ಯೋ ಇಲ್ಲಿ ಅಂತ ಗೆಳೆಯನೊಬ್ಬ ಐಡಿಯಾ ಕೊಟ್ಟ. ಹಾಗೇ ತಣ್ಣಗೆ ಕಣ್ಮುಚ್ಚಿ ಕೂತ್ರೆ.. ವಾ.. ಅದೇನು ಖುಷಿ ಅಂತೀರ. ಮೋಡಗಳ ಪಲ್ಲಕ್ಕಿಯಲ್ಲಿ ಕೂತು ಎತ್ತರೆತ್ತರಕ್ಕೆ ಹಾರಿದಂತೆ. ಪರ್ವತಗಳ ಸುತ್ತ ಪ್ರದಕ್ಷಿಣೆ ಮಾಡಿದಂತೆ .. ಅದನ್ನ ಸವಿಯೋಕೆ ಅಲ್ಲಿಗೇ ಹೋಗ್ಬೇಕು. ಇಲ್ಲೆಲ್ಲಾ ಅದೆಷ್ಟು ಫೋಟೋ ತೆಗೆದ್ವೋ ನಮಗೇ ಗೊತ್ತಾಗ್ತಿರಲಿಲ್ಲ. ಅರೇ ಇಲ್ಲಿಗೆ ಬಂದು ಮುಕ್ಕಾಲು ಘಂಟೆ ಆಗ್ತಾ ಬಂತು. ಮತ್ತೆ ವಾಪಾಸ್ಸೂ ಹೋಗ್ಬೇಕಲ್ಲ ಅನ್ನೋ ತಿಳುವಳಿಕೆಯಿಂದ. ಮನಸ್ಸಿಲ್ಲದ ಮನಸ್ಸಿಂದ , ಮನ ತುಂಬಿದ ದೃಶ್ಯಕಾವ್ಯಗಳಿಂದ, ಅಲ್ಲೇ ಕೂತು ಕವನವನ್ನೋ, ಕಾದಂಬರಿಯನ್ನೋ ಬರೆಯುತ್ತಿದ್ದ ಫಾರಿನ್ ಚೆಲುವೆ ಯಾರಿರಬಹುದು, ಅವಳು ಬರೀತಿರೋದು ಏನಾಗಿರಬಹುದು ಅನ್ನೋ ಕುತೂಹಲದಿಂದ. ಆಗಲೇ ಒಂದು ಜೀಪು ಹೋಗಾಗಿದೆ. ನಮ್ಮದೇ ಕೊನೆಯೆರಡು ಜೀಪುಗಳು ಅನ್ನೋ ಆತಂಕದಿಂದ ಸರಸರನೆ ಕೆಳಗಿಳಿದೆವು.. ಜೀಪಿನ ಪಯಣ ಮತ್ತದೇ ಕವಲು ದಾರಿಯತ್ತ ಸಾಗಿತ್ತು. ಮುಂದೆ ಅಬ್ಬಿ ಜಲಪಾತಕ್ಕೆ ಹೋಗಬೇಕು. ಅದರ ಸೌಂದರ್ಯ ಸವಿಯಬೇಕು ಅನ್ನುವತ್ತ ನಮ್ಮೆಲ್ಲರ ನಿರೀಕ್ಷೆಗಳು ನೆಟ್ಟಿತ್ತು.
*****
ಕೊಡಚಾದ್ರಿಯಲ್ಲೂ ಹೀಗೆ ಜೀಪು ಓಡಿಸುತ್ತಾರೆ. ಆದರೆ ಜೀಪಲ್ಲಿ ಹೋಗುವುದಕ್ಕಿಂತ ಖಾರೆಘಾಟಿಯಿಂದ ಕಾಲುದಾರಿ ಹಿಡಿದು ಹತ್ತಿ ಹೋಗೋದೆ ಮಜ. ಚೆನ್ನಾಗಿದೆ ಪ್ರವಾಸ ಕಥನ ಪ್ರಶಸ್ತಿ.
Thank you Akki bhai 🙂