ವಿಜ್ಞಾನ-ಪರಿಸರ

ಮಂಗನಿಂದ ದಾನವ:ಅಖಿಲೇಶ್ ಚಿಪ್ಪಳಿ ಅಂಕಣ


ತಳವಾರ ತಿಮ್ಮ ಬೆಳಗಿನ ಗಂಜಿ ಕುಡಿದು, ನಾಡಕೋವಿಯನ್ನು ಹೆಗಲಿಗೆ, ಮಶಿ, ಚರೆ, ಗುಂಡುಗಳ ಚೀಲವನ್ನು ಬಗಲಿಗೆ ಹಾಕಿ ಹೊರಡುತ್ತಿದ್ದಂತೆ, ಅವನ ಹೆಸರಿಲ್ಲದ ಬೇಟೆ ನಾಯಿ ಬಾಲ ಅಲ್ಲಾಡಿಸುತ್ತಾ ತಿಮ್ಮನನ್ನು ಹಿಂಬಾಲಿಸಿತು. ಬೆಳಗಿನಿಂದ ಸಂಜೆಯವರೆಗೂ ಹತ್ತಾರು ಮೈಲು ಸುತ್ತಿ ಮಂಗನನ್ನು ಅಡಿಕೆ ತೋಟದಿಂದ ಓಡಿಸುವುದು ತಿಮ್ಮನ ವೃತ್ತಿ. ಹೀಗೆ ವರ್ಷಗಟ್ಟಲೇ ನಡೆದು-ನಡೆದು ತಿಮ್ಮನ ಅಂಗಾಲು ಗಟ್ಟಿಯಾಗಿದೆ. ಸಣ್ಣ-ಪುಟ್ಟ ಮುಳ್ಳುಗಳು ತಾಗುವುದಿಲ್ಲ. ಹಾಗಾಗಿ ತಿಮ್ಮ ಚಪ್ಪಲಿ ಮೆಟ್ಟುವುದಿಲ್ಲ. ತನ್ನ ಮನೆಯಿಂದ ತೋಟ ಕಾಯುವ ಊರಿಗೆ ಹೋಗಲು ಸುಮಾರು ಒಂದು ಮೈಲಿ ನಡೆಯಬೇಕು. ಕೈಯಲ್ಲಿರುವುದು ಕಳ್ಳಕೋವಿಯಾದ್ದರಿಂದ ವಾಹನಗಳು ಓಡಿಯಾಡುವ ರಸ್ತೆಗಳಲ್ಲಿ ರಾಜಾರೋಷ ತಿರುಗುವ ಹಾಗಿಲ್ಲ. ಫಾರೆಸ್ಟ್ರು ಅಥವಾ ಗಾರ್ಡು ಕೈಗೆ ಸಿಕ್ಕಿಕೊಂಡರೆ ಕಷ್ಟ. ಇದಕ್ಕಾಗಿ ತಿಮ್ಮ ಕಾಡಿನ ಹಾದಿಯನ್ನೇ ಬಳಸುತ್ತಾನೆ. ಹಾಗೆ ಸೊಪ್ಪಿನ ಬೆಟ್ಟ ಹತ್ತಿ, ಹೀಗೆ ಪ್ಲಾಂಟೇಷನ್ ಮೂಲಕ ಕೆರೆ ಏರಿ ತಲುಪಿಕೊಂಡ ಮೇಲೆ ಇವನ ಕಾಯಕ ಶುರು. ಯೂ. . . . ಹೂ. . . ಅಂತ ಕೂಗುತ್ತಾ ತೋಟ ಇಳಿಯುವುದು. ಮನೆಯಿಂದ ಹೊರಡುವಾಗಲೇ ಒಂಟಿನಳಿಗೆಯ ನಾಡಕೋವಿಯ ಹೊಟ್ಟೆಯನ್ನು ತುಂಬಿಯೇ ಹೊರಡುತ್ತಾನೆ. ನಾಡಕೋವಿಯ ಹೊಟ್ಟೆ ತುಂಬುವುದು ಎಂದರೆ, ನಳಿಗೆಯ ಬಾಯಿಗೆ ಮಶಿ (ಗನ್ ಪೌಡರ್) ಹಾಕುವುದು ಮೊದಲ ಹಂತ. ಮಶಿ ನಳಿಕೆಯ ಹತ್ತೆಯ ತೂತಿಗೆ ಬಂದ ಮೇಲೆ, ಕಾಯಿಕತ್ತವನ್ನು ಉಂಡೆ ಮಾಡಿ ನಳಿಗೆಯ ಒಳಗೆ ಹಾಕಿ ನಾಡಕೋವಿಯಲ್ಲಿರುವ ಕಬ್ಬಿಣದ ರಾಡಿನಿಂದ ಕುಟ್ಟಿ ಬಿಗಿ ಮಾಡುವುದು. ನಂತರ ಚರೆ ಹಾಕಿ, ಮತ್ತೆ ಕಾಯಿಕತ್ತವನ್ನು ಉಂಡೆ ಮಾಡಿ ತುರುಕುವುದು. ಆಮೇಲೆ ಗುಂಡು ಹಾಕಿ ನಂತರ ಮತ್ತೆ ಕಾಯಿಕತ್ತ ಹಾಕಿ ಬಿಗಿ ಮಾಡುವುದು. ಇಷ್ಟಾದರೆ ಈಡು ರೆಡಿ. ಹತ್ತೆಯ ಬುಡದ ತೂತಿಗೆ ಕೇಪು ಏರಿಸಿ, ತೂತಿಗೂ ಮತ್ತು ಕುದುರೆಗೂ ನಡುವೆ ಒಂದು ಬೆಣೆ ಇಟ್ಟುಕೊಂಡು ಹೊರಟರೆ ಆಯಿತು. ಪರಮಾಶಿಯಾಗಿ ಕೋವಿಯ ಕುದುರೆಯನ್ನು ಒತ್ತಿದರೂ ಅಪಾಯವಿಲ್ಲ. 

ಕೆಲಸವೇ ಮಂಗನ ಕಾಯುವುದಾದ್ದರಿಂದ, ತಿಮ್ಮ ದೃಷ್ಟಿ ಯಾವಾಗಲೂ ಮರಗಳ ಮೇಲೆ ಇರುತ್ತದೆ. ತೋಟದಲ್ಲಿರುವ ಮಂಗಗಳನ್ನು ಕಾಡಿಗೆ ಓಡಿಸುವ ಕೆಲಸವೆಂದರೆ ಸಾಮಾನ್ಯದ್ದಲ್ಲ. ಕೋತಿಗಳೋ ಬಲು ಹುಷಾರಿ! ತಿಮ್ಮನ ಕೂಗು ಕೇಳುತ್ತಿದ್ದಂತೆ ಒಂದೋ ಓಟ ಕೀಳುತ್ತವೆ. ಇಲ್ಲವೇ ಅಡಿಕೆ ಮರದ ಚಂಡೆಯ ತುದಿಯಲ್ಲಿ ಕಾಣದಂತೆ, ಅಲ್ಲಾಡದಂತೆ ಕೂತು ಬಿಡುತ್ತವೆ. ತಿಮ್ಮನ ಯಾವುದೇ ಕೂಗಿಗೂ ಬಗ್ಗುವುದಿಲ್ಲ. ಅಗೋಚರ ಮಂಗಗಳಿಗೆ ಈಡು ಹಾರಿಸುವುದು ದಂಡದ ಕೆಲಸ. ತಿಮ್ಮನ ನಾಯಿಯೂ ಬಲು ಹುಷಾರಿ. ಇಂತಹದೇ ಮರದಲ್ಲಿ ಮಂಗ ಅಡಗಿ ಕುಳಿತಿದೆ ಎಂದು ನಾಯಿಗೆ ಅನುಭವದಿಂದ ಗೊತ್ತು. ಮಂಗವಿರುವ ಮರದ ಬುಡದಲ್ಲೇ ನಿಂತು ಮೇಲೆ ನೋಡಿ ಬೊಗಳುತ್ತದೆ. ಅದೇ ಅಡಕೆ ಮರವನ್ನು ಝಾಡಿಸಿ ಒಂದು ಬಾರಿ ಒದ್ದರೆ ಸಾಕು ಮಂಗ ಮರದಿಂದ ಕದಲುತ್ತದೆ. ಗಾಬರಿಯಾಗಿ ಪಕ್ಕದ ಮರಕ್ಕೆ ಜಿಗಿಯುತ್ತದೆ. ಮಂಗಗಳ ಗುಂಪುಗಳಿದ್ದರಂತೂ ತಿಮ್ಮನ ಹೆಗಲನ್ನು ನೋಡಿಯೇ ದಿಕ್ಕಾಪಾಲಾಗಿ ಓಡುತ್ತವೆ. ತೀರಾ ಮಂಗನ ಉಪಟಳ ಹೆಚ್ಚಾದಾಗ ಗುಂಪಿನ ಯಾವುದಾದರೊಂದು ಮಂಗನ ಜೀವಕ್ಕೆ ಸಂಚಕಾರ ಬಂತು. ಗುರಿಯಿಟ್ಟು ಎದೆಗೋ, ತಲೆಗೋ ಈಡು ಬಿಟ್ಟರಾಯಿತು. ಸದ್ದು ಕೇಳಿದ ೧೦ ಸೆಕೆಂಡ್‌ಗಳಲ್ಲೇ ದೊಪ್ಪೆಂದು ಮಂಗ ಸತ್ತು ಬೀಳುತ್ತದೆ. ಮೊದಲೇ ಆವೇಶಗೊಂಡ ನಾಯಿ ಮಂಗ ಬೀಳುತ್ತಿದ್ದಂತೆ ಹೋಗಿ ಕತ್ತಿಗೆ ಬಾಯಿ ಹಾಕುತ್ತದೆ. ಹುಟ್ಟಿನಿಂದಲೇ  ಅನ್ಯಾಹಾರವನ್ನು ತಿಂದ ತಿಮ್ಮನಿಗೆ ಬಾಡೂಟಕ್ಕೇನು ಕಡಿಮೆಯಾಗುವುದಿಲ್ಲ. ಸಂಜೆ ಮನೆಗೆ ಹೋಗುವ ದಾರಿಯಲ್ಲಿ ಸಿಕ್ಕ ಯಾವ ಪ್ರಾಣಿಯಾದರೂ ಸೈ. ಚೋರೆಹಕ್ಕಿಯಿಂದ ಹಿಡಿದು ಮೊಲ, ಬರ್ಕ, ಮಂಗಟ್ಟೆ ಹಕ್ಕಿ, ಅಪರೂಪಕ್ಕೆ ಹಂದಿ, ಮುಳ್ಳಂದಿ ಕಬ್ಬೆಕ್ಕು, ಹಾರ್‍ಬೆಕ್ಕು ಹೀಗೆ ತಿಮ್ಮನ ಈಡಿಗೆ ಬಲಿಯಾಗದ ಪ್ರಾಣಿಗಳೇ ಇಲ್ಲ. ಯಾವ ಪ್ರಾಣಿಯೂ ಸಿಗದಿದ್ದರೂ, ಕಡೆಗೆ ಏಡಿ, ಆಮೆಯಾದರೂ ಆದೀತು. ಒಟ್ಟಾರೆ ರಾತ್ರಿಯಡುಗೆಗೆ ಮಾಂಸ ಆಗಲೇ ಬೇಕು ಎಂಬ ನಿಯಮ ತಿಮ್ಮನದು. ಈಗೀಗ ಮಶಿಯ ಬೆಲೆ ತುಂಬಾ ಹೆಚ್ಚಾಗಿರುವುದರಿಂದ ತೀರ ಸಣ್ಣ ಹಕ್ಕಿಗಳನ್ನು ಹೊಡೆದರೆ ಗೀಟುವುದಿಲ್ಲ ಎಂಬ ಕಾರಣಕ್ಕೆ ತಿಮ್ಮ ಎಲ್ಲಾ ಹಕ್ಕಿಗಳನ್ನು ಹೊಡೆಯುವುದಿಲ್ಲ. 

ಇಷ್ಟೆಲ್ಲಾ ಆಗಿ ಮಂಗಗಳೇ ನಮ್ಮ ಈ ಹಂತದ ಮುಖ್ಯ ಪಾತ್ರಗಳಾಗಿದ್ದರಿಂದ, ಮಂಗಗಳ ಬಗ್ಗೆ ಮತ್ತು ಅವುಗಳ ಉಪಟಳಗಳ ಬಗ್ಗೆ ಕೊಂಚ ಹೇಳದಿದ್ದರೆ ಲೋಪವಾದೀತು. ಮಂಗನಿಂದ ಮಾನವ ಎಂಬ ತತ್ವ್ತದಡಿಯಲ್ಲಿ ಜೀವ ವಿಕಾಸವಾಗಿದೆ ಎಂಬುದು ಡಾರ್ವಿನ್ ವಿಕಾಸವಾದದ ತಿರುಳು. ಅಂದರೆ ಮಂಗಗಳು ಎಂದರೆ ನಮ್ಮ ಪೂರ್ವಜರು ಅಂದ ಹಾಗೆ ಆಯಿತು. ಆದರೂ ಮಂಗಗಳು ಮನುಷ್ಯರಿಗೆ ಅದರಲ್ಲೂ ರೈತರಿಗೆ ಉಪಟಳಕಾರಿಯಾಗಿ ಪರಿಣಮಿಸಿದ್ದೇಕೆ? ವೈದ್ಯಕೀಯ ಕ್ಷೇತ್ರದಲ್ಲಿ ಆದ ಕ್ರಾಂತಿ ಹಾಗೂ ಹಸಿರುಕ್ರಾಂತಿ ಇತ್ಯಾದಿಗಳಿಂದಾಗಿ ನೈಸರ್ಗಿಕವಾಗಿ ಮಾನವ ಮರಣಗಳು ವಿರಳಗೊಂಡವು. ಜೊತೆಯಾಗಿ ಶಿಶುಮರಣ ಸಂಖ್ಯೆ ಇಳಿಮುಖವಾಗಿ ದೇಶದ ಜನಸಂಖ್ಯೆ ವೇಗವಾಗಿ ವೃದ್ಧಿಸಿತು. ಜನಸಂಖ್ಯೆಯ ಆಶೋತ್ತರಗಳನ್ನು ಪೂರೈಸಲು ಹೆಚ್ಚು ಭೂಮಿಯನ್ನು ಕೃಷಿಭೂಮಿಯನ್ನಾಗಿ ಪರಿವರ್ತಿಸಲಾಯಿತು. ಕಾಡು ಪ್ರದೇಶ ಕಡಿಮೆಯಾಗಿದ್ದರಿಂದ, ಸ್ವಾಭಾವಿಕವಾಗಿ ಕಾಡು ಪ್ರಾಣಿಗಳಿಗೆ ಆಹಾರದ ಅಭಾವ ಸೃಷ್ಟಿಯಾಯಿತು. ಮಾನವ-ವನ್ಯಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಾ ಇದೀಗ ವಿಪರೀತಕ್ಕೆ ಹೋಗಿದೆ. ಮಂಗಗಳಿಗೂ ಕಾಡಿನಲ್ಲಿ ಆಹಾರದ ಅಭಾವವನ್ನು ಎದುರಿಸುತ್ತವೆ. ಕನಿಷ್ಟವಾಗಿ ಬದುಕಲು ಮಂಗಗಳಿಗೆ ೧೦೦-೧೫೦ ಗ್ರಾಂಗಳಷ್ಟು ಆಹಾರವಾದರೂ ಬೇಕೆ ಬೇಕು. ಕಾಡಿನಲ್ಲಿ ಇದಕ್ಕೂ  ಸಂಚಕಾರ ಬಂದಿದೆ. ಬದುಕಿನ ಹೋರಾಟದಲ್ಲಿ ಒಂದು ಸೂತ್ರವಿದೆ. ಇದನ್ನು ಪ್ರಕೃತಿಯೇ ರೂಪಿಸಿದ್ದು, ಬಲಸ್ಯ ಪೃಥ್ವಿ (survival of the fittest), ಮನುಷ್ಯ ತನ್ನ ಬುದ್ಧಿ ಬಲದಿಂದ ಎನೇನೆಲ್ಲಾ ಯಂತ್ರಗಳನ್ನು ಕಂಡು ಹಿಡಿದು ಕಾಡು ಬರಿದು ಮಾಡಿದ. ಕಾಲ-ಕಾಲಕ್ಕೆ ಬದುಕುಳಿಯುವ ಮಾರ್ಗವನ್ನು ಕಂಡುಕೊಳ್ಳುವ ಹೋರಾಟದಲ್ಲಿ ಮಂಗಗಳೂ ಬದುಕುವ ಸಾಧ್ಯತೆಗಳಿಗಾಗಿ ಹೊಸ-ಹೊಸ ಸೂತ್ರಗಳನ್ನು ಅಳವಡಿಕೊಳ್ಳ ತೊಡಗಿದವು. ಮನೆಯ ಹೆಂಚನ್ನು ಎತ್ತಿ ಒಳಗಿಳಿದು, ಮನೆಯಲ್ಲಿ ಸಂಗ್ರಹಿಸಿಟ್ಟ ಧಾನ್ಯಗಳನ್ನು ತಿನ್ನುವುದು ಇತ್ಯಾದಿ. ಜಾನುವಾರುಗಳು, ಹಂದಿಗಳು, ಕಾಡುಕೋಣದ ಮಂದೆಗಳು ಬೆಳೆಗಳನ್ನು ಹಾಳುಗೆಡವದಿರಲಿ ಎಂದು ಕರೆಂಟಿನ ಬೇಲಿಯನ್ನು ನಿರ್ಮಿಸಿದ. ಆದರೆ ಮಂಗಗಳಿಗೇನು ಮಾಡುವುದು? ಊರಿನ ಮರಕ್ಕೆಲ್ಲಾ ಕರೆಂಟು ಕೊಡುವುದು ಸಾಧ್ಯವಿಲ್ಲ, ಆಕಾಶಕ್ಕೆ ಬೇಲಿ ಹಾಕುವುದು ಆಗುವುದಿಲ್ಲ. ಇದಕ್ಕಾಗಿ ಉಪಾಯವೆಂದರೆ, ತಳವಾರನ ನಿಯೋಜನೆ ಮಾಡುವುದು, ಮಂಗಗಳನ್ನು ಕೊಲ್ಲಿಸುವುದು. ಸತ್ತ ಮಂಗವನ್ನು ಕಾಡಿನ ಯಾವುದಾದರೂ ಮರದ ಮೇಲೆ ನೇತು ಹಾಕುವುದು. ಇಂತಹ ದುಷ್ಕ್ರತ್ಯಗಳನ್ನು ಮಾನವನಲ್ಲದೆ ಬೇರಾರು ಮಾಡಲು ಸಾಧ್ಯ? ಕೆಲವು ಕಡೆ ವಿಷ ಹಾಕಿ ಸಾಮೂಹಿಕ ಕೋತಿಗಳ ಹರಣ ಮಾಡುವುದು ಇದೆ. 

ಈಗ ನನ್ನ ಬದುಕೂ ಕೋತಿಗಳ ಕಾಟದಿಂದ ಏಗುವುದು ಹೇಗೆ ಎಂಬ ಚಿಂತೆಯಲ್ಲಿದೆ. ತೋಟದಲ್ಲಿರುವ ಅಡಕೆ, ಬಾಳೆಕಾಯಿ ಇತ್ಯಾದಿಗಳೆಲ್ಲ ಮಂಗಗಳ ಪಾಲಾಗುತ್ತವೆ. ರೈತ ಸಹಜವಾಗಿ ಸಿಟ್ಟಿಗೇಳುತ್ತಾನೆ. ಮಂಗಗಳು ತೋಟ ನುಗ್ಗಿ ಹಾಳು ಮಾಡುವುದಕ್ಕೆ ತಾನೇ ಕಾರಣ ಎಂಬುದನ್ನು ಮರೆಯುತ್ತಾನೆ. ಮಂಗಗಳ ಜೊತೆ ಸಹಬಾಳ್ವೆ ಸಾಧ್ಯವಿಲ್ಲವೇ ಎಂದರೆ, ಸಾಧ್ಯವಿದೆ ಅಂತಹ ಮನ:ಸ್ಥಿತಿ ಬೇಕು ಅಷ್ಟೆ. ಬೆಳೆದದ್ದು ಎಲ್ಲವೂ ನಮಗೆ ಸಿಗುವ ಹಾಗಿದ್ದರೆ, ಈ ಭೂಮಿ ಇನ್ನಷ್ಟು ಕೊಳೆಗಟ್ಟುತ್ತಿತ್ತು. ಬಂದ ಲಾಭವನ್ನು ರೈತ ಮಾರಿ ಅದರಿಂದ ಅಪಾರ ಹಣಗಳಿಸಿ, ಮತ್ತೂ-ಮತ್ತೂ ಕೊಳ್ಳುಬಾಕನಾಗುವ ಅಪಾಯವಿರುತ್ತದೆ. ಉದಾಹರಣೆಯಾಗಿ ನಿಮ್ಮ ಮನೆಯೆದಿರು ಒಂದು ಪಪ್ಪಾಯಿ ಗಿಡವಿದೆ ಎಂದಿಟ್ಟುಕೊಳ್ಳಿ. ಅದರಲ್ಲಿ ಕಾಯಿ ಬಿಟ್ಟು, ಬೆಳೆದು ಹಣ್ಣಾದ ಮೇಲೆ ನಮಗದು ಉಪಯೋಗ. ಆದರೆ ಹಸಿದ ಮಂಗಗಳು ಪಪ್ಪಾಯದ ಎಲೆಯನ್ನೇ ತಿಂದು ಬದುಕುತ್ತವೆ. ಆಹಾರಭದ್ರತೆಯೆಂದು ಬಡಾಯಿಕೊಚ್ಚಿಕೊಳ್ಳುವ ನಮಗೆ ಹಸಿವಿನ ಅರ್ಥ ಗೊತ್ತಿಲ್ಲವೆಂದೆ ಆಯಿತು. ನಾವು ಯಾರಾದರೂ ಹಸಿವಾಯಿತು ಎಂದು ಪಪ್ಪಾಯ ಸೊಪ್ಪು ತಿನ್ನುತ್ತೇವೆಯೇ? ಪರಂಪರಾನುಗತವಾಗಿ ಕಾಡಿನ ನೆಲೆಯನ್ನು ಮಾನವನ ಕಾರಣಕ್ಕೆ ಕಳೆದುಕೊಂಡ ಕಾಡುಪ್ರಾಣಿಗಳು ಬದುಕಲು ಏನೆಲ್ಲಾ ಹರಸಾಹಸ ಮಾಡಬೇಕಾಗುತ್ತದೆ. ಮಾನವನ ಅಂಜಿಕೆಯಿಂದಲೇ ಬದುಕುತ್ತವೆ. ಅವುಗಳಿಗೆ ಆಹಾರ ಪಡೆಯುವ ಪ್ರಕ್ರಿಯೆ ಕೂಡ ಆತ್ಮಹತ್ಯೆಯ ಪ್ರಕ್ರಿಯೆಗಿಂತ ಬೇರೆಯಲ್ಲ. 

ನಮ್ಮ ಪಕ್ಕದ ಮನೆಯವರು ಮಂಗಗಳನ್ನು ಬೆದರಿಸಲು ಮೊಳದಷ್ಟು ಉದ್ದದ ಕೋವಿಯನ್ನು ತಂದಿಟ್ಟುಕೊಂಡಿದ್ದಾರೆ. ಅದಕ್ಕೆ ಅಂಗಡಿಯಲ್ಲಿ ಸಿಗುವ ಆಟಂಬಾಂಬ್ ಕೂರಿಸಿ ಮೇಲೆರೆಡು ಚಿಕ್ಕ ಕಲ್ಲುಗಳನ್ನು ತುಂಬಿ ಬೆಂಕಿ ಹಚ್ಚಿದರಾಯಿತು. ದೊಡ್ಡ ಶಬ್ಧದಿಂದ ಸಿಡಿಯುವ ಕಲ್ಲುಗಳು ಮಂಗಗಳನ್ನು ಹೆದರಿಸುತ್ತವೆ. ಜೀವಕ್ಕೆ ಅಪಾಯ ಮಾಡುವುದಿಲ್ಲ. ಈ ಮೊದಲೇ ಹೇಳಿದಂತೆ ಮಂಗಗಳು ಬಲು ಹುಷಾರಿ, ಈ ಚಿಕ್ಕ ಕೋವಿಯಿಂದ ಸಿಡಿಯುವ ಚಿಕ್ಕ ಕಲ್ಲುಗಳು ಹೆಚ್ಚೆಂದರೆ ೫೦ ಅಡಿ ದೂರ ಹಾರುತ್ತವೆ. ಮಂಗಗಳು ಇದನ್ನು ಕಂಡುಕೊಂಡಿವೆ. ಈತ ಕೋವಿ ತೆಗೆದುಕೊಂಡು ಹೊರಬರುತ್ತಿದ್ದಂತೆ ಸುಮಾರು ೭೫ ಅಡಿ ಎತ್ತರದಲ್ಲಿ ಹೋಗಿ ಕುಳಿತುಕೊಳ್ಳುತ್ತವೆ. ಹೇಗೂ ಕಲ್ಲುಗಳು ಅಷ್ಟು ದೂರ ಹಾರುವುದಿಲ್ಲವೆಂದು ಅವಕ್ಕೆ ಗೊತ್ತು. 

ಮಂಗನ ಹಾವಳಿ ಹೆಚ್ಚಾದಾಗ ಊರವರೆಲ್ಲಾ ಸೇರಿ ಮಂಗಗಳನ್ನು ಹಿಡಿಸಿ ಬೇರೆ ಊರಿನ ಕಾಡಿನಲ್ಲಿ ಬಿಡುವ ಹೊಸ ಉಪಾಯವನ್ನು ಕಂಡುಕೊಂಡಿದ್ದಾರೆ. ದೊಡ್ಡದಾದ ಬೋನಿನಲ್ಲಿ ಬಾಳೆಹಣ್ಣು, ಮಂಡಕ್ಕಿ, ತರಕಾರಿ ಇತ್ಯಾದಿಗಳನ್ನು ಇಡುವುದು, ಭೋನಿನ ಒಳಗೆ ಹೋಗಲು ಒಂದು ಬಾಗಿಲು ಹಾಗೂ ಬೋನಿನ ಒಳಗೆ ಇನ್ನೊಂದು ಬಾಗಿಲು, ಹಸಿದ ಮಂಗಗಳು ಆಹಾರದ ಆಸೆಯಿಂದ ಬೋನಿನ ಒಳಗೆ ಹೋಗುತ್ತವೆ. ಇಲ್ಲೊಂದು ಚಿಕ್ಕ ತಂತ್ರವಿದೆ. ಇಲಿ ಬೋನಿನಂತೆ ಮಂಗ ಒಳಗೆ ಹೋದ ತಕ್ಷಣ ಹೊರಗಡೆಯ ಬಾಗಿಲು ಹಾಕಿಕೊಳ್ಳುತ್ತದೆ. ಈ ರೀತಿಯಲ್ಲಿ ಒಂದು ಬೋನಿನಲ್ಲಿ ೨೦-೨೫ ಮಂಗಗಳನ್ನು ಹಿಡಿಯುತ್ತಾರೆ. ಆಮೇಲೆ ಯಾವುದಾದರೊಂದು ವಾಹನದಲ್ಲಿ ತೆಗೆದುಕೊಂಡು ಹೋಗಿ ಕಾಡಿನಲ್ಲಿ ಬಿಡುತ್ತಾರೆ. ಹೀಗೆ ಮೊನ್ನೆ ಯಾರೋ ಹೊರಗಿನವರು ಬಂದು ತಿಮ್ಮನ ವ್ಯಾಪ್ತಿಯಲ್ಲಿ ಬರುವ ಕಾಡಿನಲ್ಲಿ ಮಂಗಗಳ ತಂಡವನ್ನು ಬಿಟ್ಟು ಹೋಗಿದ್ದರು. ತಿಮ್ಮನಿಗೆ ತಲೆನೋವು ಶುರುವಾಯಿತು. ಮೇಲಿನ ಕೇರಿಯಿಂದ ಒಡಿಸಿದ ಮಂಗಗಳು ಕೆಳಗಿನ ಕೇರಿಗೆ ಬಂದವು. ಹೀಗೆ ಬಹಳ ಹೊತ್ತು ಕಣ್ಣುಮುಚ್ಚಾಲೆಯಾಡಿದವು. ತೋಟದಲ್ಲಿರುವ ಬಾಳೆಕಾಯಿ, ಬಾಳೆಸಸಿ, ಅಡಕೆ, ಏಲಕ್ಕಿ ಹೀಗೆ ಸರ್ವವನ್ನು ಧ್ವಂಸ ಮಾಡಿದವು. ತಿಮ್ಮನಿಗೆ ಬೈಗುಳಗಳ ಸುರಿಮಳೆಯಾಯಿತು. 

ಕರ್ತವ್ಯಲೋಪದಂತಹ ಆಪಾದನೆ ತಿಮ್ಮನ ಮೇಲೆ ಬಂತು. ಶ್ರಾವಣ ಮಾಸದಲ್ಲಿ ಶ್ವಾನಗಳು ಬೆದೆಗೆ ಬರುತ್ತವೆ. ಇದೇ ಸಮಯದಲ್ಲಿ ತಿಮ್ಮನ ನಾಯಿ ಸಂಗಾತಿಯನ್ನು ಹುಡುಕಿಕೊಂಡು ಹೋಗಿತ್ತು. ಎರಡು ದಿನದಿಂದ ಮನೆಗೆ ಬಂದಿರಲಿಲ್ಲ. ಇವತ್ತು ಮಂಗಗಳಿಗೊಂದು ಗತಿ ಕಾಣಿಸಲೇಬೇಕು ಎಂದುಕೊಂಡ ತಿಮ್ಮ ತನ್ನ ಮೇಲೆ ಬಂದ ಕರ್ತವ್ಯಲೋಪಾದನೆಯನ್ನು ತೊಡೆದುಕೊಳ್ಳವ ಅನಿವಾರ್ಯತೆಯಲ್ಲಿದ್ದ. ಸಹಾಯಕ್ಕೆ ದರಿದ್ರ ನಾಯಿಯೂ ಇಲ್ಲದಿರುವುದು ತಿಮ್ಮನ ಸಿಟ್ಟನ್ನು ಇಮ್ಮಡಿಗೊಳಿಸಿತ್ತು. ಬೆಳಗ್ಗೆ ತಿಮ್ಮ ತೋಟ ತಲುಪವಷ್ಟರಲ್ಲೇ ಮಂಗಗಳು ತೋಟವಿಳಿದು ಸಾಕಷ್ಟು ಹಾನಿ ಮಾಡಿದ್ದವು. ಇಷ್ಟು ದಿನ ಬರೀ ಹೆದರಿಸುತ್ತಿದ್ದ ತಿಮ್ಮ ಇವತ್ತು ಸಿಟ್ಟಿನ ಸಿಂಹನಾಗಿದ್ದ. ತಿಮ್ಮನ ಬರುವಿಕೆಯನ್ನು ಗೊತ್ತು ಮಾಡಿಕೊಂಡ ಹಿಂಡು, ಅತ್ತಿತ್ತ ಜಿಗಿದು ಬೆಟ್ಟದಲ್ಲಿ ಅಡಗಿಕೊಂಡವು. ಇನ್ನು ಕೆಳಗಿನ ಕೇರಿಯ ಕತೆ ಏನು ನೋಡಲು ಹೋದ ತಿಮ್ಮನಿಗೆ ಅವತ್ತು ಯಾರೂ ಆದರ ತೋರಿ ಮಾತನಾಡಲಿಲ್ಲ. ಎಲೆ ಸಂಚಿಯಲ್ಲಿ ತಂಬಾಕು ಮುಗಿದಿತ್ತು. ಕೃಷ್ಣಯ್ಯನವರನ್ನು ಕೇಳಿದರೆ ಬರೀ ತಂಬಾಕಿನ ದಂಟು ಮತ್ತು ಕಲ್ಲಿನಂತಹ ಗೋಟಡಿಕೆ ಮತ್ತು ಒಣಗಿಹೋದ ವೀಳ್ಯೆದೆಲೆಯನ್ನು ತಿಮ್ಮನ ಮುಂದೆ ಎಸೆದು ಗುರಾಯಿಸಿದರು. ೧೨ ಗಂಟೆಯಾದರೂ ಯಾರೂ ಕರೆದು ಒಂದು ಲೋಟ ಮಜ್ಜಿಗೆಯನ್ನು ಕೊಡಲಿಲ್ಲ. ಹೊಟ್ಟೆ ಬೇರೆ ತಾಳ ಹಾಕುತ್ತಿತ್ತು. ಮಂಗಗಳೂ ಹಠತೊಟ್ಟು ದಾಳಿ ಮಾಡುತ್ತಿದ್ದವು. ಬೆಳಗಿನಿಂದ ಒಟ್ಟು ೫ ಈಡು ಹೊಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೆಳಗಿನ ಕೇರಿ-ಮೇಲಿನ ಕೇರಿ ಸುತ್ತಿ-ಸುತ್ತಿ ತಿಮ್ಮನ ಕಾಲು ನೋಯುತ್ತಿತ್ತು. ಮಧ್ಯಾಹ್ನವಾದರೂ ತಿಮ್ಮನ ಮತ್ತು ಮಂಗಗಳ ಸಂಘರ್ಷ ಮುಗಿಯಲಿಲ್ಲ.  

ಸಂಜೆ ೪ ಗಂಟೆಯ ಹೊತ್ತಿಗೆ ದ್ಯಾವರ ಭಟ್ಟರ ಮನೆಯ ಹಿಂದೆ ಇರುವ ಒಂಟಿಮರದಲ್ಲಿ ಒಂದು ಮಂಗ ಅಡಗಿ ಕುಳಿತಿತ್ತು. ಮಂಗನ ಬಾಲ ಮಾತ್ರ ಕಾಣುತ್ತಿತ್ತು. ಗುರಿಯಿಟ್ಟು ಈಡು ಹಾರಿಸಿಯೇ ಬಿಟ್ಟ. ಗುಂಡಿನ ಗುರಿ ತಪ್ಪಿದರೂ ಚರೆಗಳ ಗುರಿ ತಪ್ಪಲಿಲ್ಲ. ಅಮ್ಮನ ಹೊಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ಗೇಣುದ್ದದ ಮರಿಯ ಸೊಂಟಕ್ಕೆ ಸರಿಯಾಗಿ ಚರೆ ಬಿತ್ತು ಹಿಂದೆಯೇ ಮರಿಯೂ ದೊಪ್ಪನೆ ಕೆಳಗೆ ಬಿತ್ತು. ಸೊಂಟ ಮುರಿದಿತ್ತು. ಬದುಕಿ ಉಳಿಯಲು ಹೆಣಗುತ್ತಿತ್ತು. ಚಿಕ್ಕ ಕಣ್ಣುಗಳಲ್ಲಿ ಮರಣದ ಭಯವಿತ್ತು. ಮೇಲೆ ತಾಯಿಯ ಗಲಾಟೆ ಹೇಳ ತೀರದು. ಇಡೀ ಗುಂಪಿನ ಸದಸ್ಯರಿಗೆಲ್ಲಾ ಕ್ಷಣಾರ್ಧದಲ್ಲಿ ಅನಾಹುತದ ಅರಿವಾಯಿತು. ಭಯದ ಕೂಗು, ಅಳಲು, ಅಳು ಮುಗಿಲು ಮುಟ್ಟಿತು. ಈಡಿನ ಸದ್ದು ಕೇಳಿ ಹೊರಬಂದ ದ್ಯಾವರಭಟ್ಟರ ಪತ್ನಿ ಮಂಗನ ಮರಿಯ ಮರಣಾವಸ್ಥೆ ನೋಡಿ ಹೌಹಾರಿದಳು. ಇತ್ತ ತಿಮ್ಮನಿಗೂ ಏನು ಮಾಡುವುದೆಂದು ತೋಚಲಿಲ್ಲ. ಒಂದೇ ಹೊಡೆತಕ್ಕೆ ಸತ್ತು ಹೋಗಿದ್ದರೆ, ಬೇರೆ ಮಾತು. ಹಾಲು ಕುಡಿಯುವ ಹಸುಗೂಸು ಗುಂಡೇಟು ತಿಂದು, ಸೊಂಟ ಮುರಿದುಕೊಂಡು, ಬದುಕುಳಿಯಲು ತೆವಳುತ್ತಿದೆ. ಚಿಕ್ಕದಾಗಿ ಚೀಂ.. ಚೀ.. ಎಂದು ಅಳುತ್ತಿದೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಆಚೀಚೆ ಮನೆಯವರು ಸೇರಿದರು. ಒಟ್ಟಾರೆ ದೃಶ್ಯ ಕರುಳು ಹಿಂಡುವಂತಿತ್ತು. ದ್ಯಾವರ ಭಟ್ಟರ ೧೦ ವರ್ಷದ ಮೊಮ್ಮಗಳು ದೃಶ್ಯ ನೋಡಿ ಅಳತೊಡಗಿದಳು. ಈ ಹೊತ್ತಿನಲ್ಲಿ ಮಂಗನ ಕಾಯಲು ಬಂದ ತಳವಾರ ತಿಮ್ಮ ಎಲ್ಲರ ಕಣ್ಣೆದುರಿನಲ್ಲಿ ಖಳನಾಯಕನಾಗಿದ್ದ. ಬೆಟ್ಟದಲ್ಲೆಲ್ಲೋ ಹೀಗೆ ಆಗಿದ್ದರೆ, ಯಾರ ಗಮನಕ್ಕೂ ಬರುತ್ತಿರಲಿಲ್ಲ. ಅಥವಾ ತಿಮ್ಮ ನಾಯಿಯಿದ್ದಿದ್ದರೆ ಮರಿಯನ್ನು ಕಚ್ಚಿಕೊಂಡು ಹೋಗಿರುತ್ತಿತ್ತು. ದೃಶ್ಯ ನೋಡಲಾರದ ದ್ಯಾವರ ಭಟ್ಟರು ತಿಮ್ಮನಿಗೆ ಇನ್ನೊಂದು ಗುಂಡು ಹೊಡೆದು ಮರಿಯನ್ನು ಸಾಯಿಸಲು ಹೇಳಿದರು. ಸಮ್ಮೋಹನಗ್ಗೊಳಗಾದವನಂತೆ, ಸರ-ಸರ ಈಡು ಮಾಡಿ ಮರಿಯ ತಲೆಗೆ ಗುರಿಯಿಟ್ಟು ಹೊಡೆದ, ಮರಿ ಸತ್ತು ಹೋಯಿತು. ಅತ್ತ ಮೊಮ್ಮೊಗಳ ಅಳು ತಾರಕ್ಕಕ್ಕೇರಿತು. ಮೇಲಿನಿಂದ ನೋಡುತ್ತಿದ್ದ ಅಮ್ಮನ ರೋದನ ಹೃದಯವಿದ್ರಾಕವಾಗಿತ್ತು. ಒಂದು ಗುದ್ದಲಿ ತಂದು ಚಿಕ್ಕದೊಂದು ಹೊಂಡ ತೆಗೆದು ಬೇಲಿಯಂಚಿನಲ್ಲಿ ಮುಚ್ಚಿ ಹಾಕಿದರು. ಮನೆಗೆ ವಾಪಾಸು ಹೋಗುವಾಗ ತಿಮ್ಮ ಅಳುತ್ತಿದ್ದ. ತಾನೇನು ಮಾಡಿದೆ, ಎಂತಹ ಅಪರಾಧ ಎಂಬ ಪಾಪಪ್ರಜ್ಞೆ ಅತಿಯಾಗಿ ಕಾಡತೊಡಗಿತು. ಕಾಲು ಸೀದಾ ಹಾಲಗುಪ್ಪೆಯ ಹುಚ್ಚಪ್ಪನ ಮನೆ ತಲುಪಿದವು. ಜೇಬಿನಲ್ಲಿ ಹಣವಿಲ್ಲದ ತಿಮ್ಮನಿಗೆ ಅದೇಕೋ ಹುಚ್ಚಪ್ಪ ಹೊಟ್ಟೆಪೂರಾ ಕಳ್ಳಭಟ್ಟಿ ನೀಡಿದ. ಗಟಗಟನೆ ಒಂದೇ ಬಾರಿ ಸೆರೆಯನ್ನು ಹೀರಿದ ತಿಮ್ಮ ತೂರಾಡುತ್ತಾ ಮನೆ ತಲುಪಿದ. ಉಣ್ಣಲೂ ಇಲ್ಲ. ಹಾಗೇ ಮತ್ತಿನಲ್ಲೇ ತನಗೆ ತಾನೇ ಹಿಡಿಶಾಪ ಹಾಕಿಕೊಳ್ಳುತ್ತಾ ನಿದ್ದೆ ಹೋದ. 

(ಉಳಿದ ಭಾಗ ಮುಂದಿನ ವಾರ)

 

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಮಂಗನಿಂದ ದಾನವ:ಅಖಿಲೇಶ್ ಚಿಪ್ಪಳಿ ಅಂಕಣ

  1. ಅಖಿಲೇಶ್, ಕಥೆ ಕಣ್ಣಿಗೆ ಕಟ್ಟುವಂತಿದೆ! ಅಲ್ಲೊಂದು ಕಳಕಳಿಯಿದೆ, ಭಾವನೆಗಳಿವೆ… ತುಂಬಾ ಚೆನ್ನಾಗಿದೆ. ಮುಂದಿನ ಕಂತಿಗೆ ಕಾಯುವಂತೆ ಮಾಡಿದಿರಿ.

  2. ಓದಿ ಕಾಳಜಿಯಿಂದ ಮೆಚ್ಚಿದ್ದಕ್ಕೆ ಧನ್ಯವಾದಗಳು ಕುರ್ತಕೋಟಿ.

  3. ವಿಷಾದ ನಮ್ಮನ್ನೂ ಆವರಿಸುತ್ತದೆ.

    ಯಾರು ಸರಿ ಎಂಬ ಪ್ರಶ್ನೆಯ ಜೊತೆ  ತಾಯಿಯ ಅಳಲು ತಟ್ಟಿತು.

     

     

  4. ಓದಿ, ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು ಸ್ವರ್ಣಾಜೀ.

Leave a Reply

Your email address will not be published. Required fields are marked *