ಮೂರು ಕವಿತೆಗಳು: ಪ್ರವೀಣ್ ಡಿ. ಕಟೀಲ್, ರಮೇಶ್ ನೆಲ್ಲಿಸರ, ಬಸವರಾಜ ಕದಮ್

ಅಷ್ಟಕ್ಕೂ ಮಳೆಯೆಂದರೆ…
ಅವಳೇಕೆ ನೆನಪಾಗುತ್ತಾಳೆ…?

ಈ ಮಳೆಗೂ ಈಶಾನ್ಯಕ್ಕೂ ಸಂಬಂಧವಿದೆ,
ಮೊದಲ ಈಶಾನ್ಯ ಮಾರುತಗಳೇ
ಮೊದಲಮಳೆ ತರುತ್ತವೆ,

ಬದುಕಲ್ಲೂ ಅಷ್ಟೇ ಮೊದಲ ಮಳೆ
ತಂದವಳು ಈಶಾನ್ಯದವಳು,ಆ
ಮುಂಗಾರುಮಳೆ ಇನ್ನೂ ಇದೆ,

ಈ ಮೊದಲಪ್ರೇಮವೇ ಹೀಗೆಯೇ,
ಎಲುಬಿಲ್ಲದ ನಾಲಗೆ ಬೇಡವೆಂದರೂ
ನೋವಿದ್ದ ಹಲ್ಲಿನ ಕಡೆ ಹೊರಳುವ ಹಾಗೆ,

ವರ್ಷಾನುಗಟ್ಟಲೆ ಜೊತೆಯಾಗಿದ್ದ ಪ್ರೀತಿ
ಏಕಾ ಏಕಿ ಕೈಬಿಟ್ಟು ಹೋದಾಗ
ನಡುದಾರಿಯಲ್ಲೇ ಆಗೋ ಆಘಾತಕ್ಕೆ
ಶವದಂತಾದ ದೇಹಕ್ಕೆ ನೆತ್ತಿಯ ಮೇಲೆ
ಬಿದ್ದ ಮಳೆ ಹನಿ ಮಾತ್ರ ಸಮಾಧಾನ,
ಸಾಂತ್ವಾನ ನೀಡಬಲ್ಲುದು,
ಪ್ರೀತಿಯೆಂದರೆ ಸುರಿವ ಮಳೆಗೆ
ತೇಲಿಬಿಟ್ಟ ದೋಣಿಯ ಹಾಗೆ
ದಡ ಸೇರಬಹುದೆಂಬ ನಿರೀಕ್ಷೆ ಮಾತ್ರ….
 -ಪ್ರವೀಣ್ ಡಿ. ಕಟೀಲ್

'ಒಂದಿಷ್ಟು ಹನಿಗಳು'    

      …1…
ಬರೀ ಪರಿಣಾಮಗಳ
ಕುರಿತು ಅಂಜದಿರು
ನಮ್ಮಿಬ್ಬರನು ಒಂದಾಗಿಸಿದ
'ಕಾರಣ'ಗಳು ನೊಂದಾವು…!?

….2….
ಆ ಇರುಳು
ಒಂದು ಚಂದ್ರ,ಲೆಕ್ಕವಿರದ ತಾರೆಗಳನ್ನಷ್ಟೆ
ಹೊತ್ತು ತಂದಿದ್ದರೆ
ನನ್ನದೇನೂ ಅಭ್ಯಂತರವಿರಲಿಲ್ಲ
ಭಾವನೆಗಳನ್ನು ಸುಡುತ್ತಾ
ವಿದಾಯದ 'ಧೂಮಕೇತು'ವೊಂದು
ಹಾದುಹೋಗುವುದೆಂದು
ಯಾರು ತಾನೆ ತಿಳಿದಿದ್ದರು

         3
ಪ್ರತಿಕ್ಷಣಗಳನ್ನು ನಿನ್ನ
ನೆನಪುಗಳಿಂದ ನೇವರಿಸಿ
ಸಮಯಕ್ಕೊಂದು
ಹೊಸ ಅರ್ಥಕೊಡುವ
ಪ್ರಯತ್ನದಲ್ಲಿದ್ದೇನೆ…

            4
ಕಾರ್ಮೋಡದ ಹಿಂದಿರುವ
ಚಂದಿರನೂ
ಯೋಚಿಸುತ್ತಿದ್ದಾನೆ
ಕ್ಷಣಿಕ ವಿರಹವೂ
ಮನಕೆ ತಂಪೆರೆಯಬಲ್ಲದು.

            5
ಪ್ರೀತಿ ಎಂದರೇನು?
ಪ್ರೇಮಿಗಳ ನಡುವೆ
ವಾಗ್ವಾದ ನಡೆಯುತ್ತಿತ್ತು…
ಉತ್ತರ ಸಿಗಲಿಲ್ಲ
ಅವನು ತೊಡೆಯ ಮೇಲೆ
ತಲೆಯಿಟ್ಟು,ಅವಳು
ತಲೆಯ ನೇವರಿಸಿ
ತಮ್ಮವೇ ಆದ ಉತ್ತರ
ಕಂಡುಕೊಂಡರು….

        -ರಮೇಶ್ ನೆಲ್ಲಿಸರ.

 

 ಕನಸು :
ಕಂಡ ಕನಸುಗಳಿವು..
ನೆನಪಾಗಿ ಬರುವವು…
ನನಸಾಗಿ ನಲಿಯುವವು..

ನನಸು ;
ಆಕಾಶದಲ್ಲಿನ ಬೆಳಕುಗಳೆಲ್ಲ 
ನನ್ನ ಸುಖ ನಿದ್ರೆ ಕೆಡಿಸಿತು…
ನನ್ನ ಕನಸುಗಳು ಮಾತ್ರ
ನನಸುಗಳಾಗಿ ಜೋಗುಳ ಹಾಡಲಿಲ್ಲ..!

ನಿನ್ನದೇ ಹೆಸರು ;
ಶ್ರಾವಣದ ಸಂಜೆ ಮಳೆಗಾಲದಲ್ಲಿ
ಬೀಳುವ ಒಂದೊಂದು ಹನಿಗಳೆಲ್ಲ 
ನಿನ್ನದೇ ಹೆಸರು ನೆನಪಿಸುತ್ತಿದೆ…

ಸ್ಫೂರ್ತಿ ನೀನು ;
ನಾ ಬರೆದ ಕವನಗಳಿಗೆ ಸ್ಫೂರ್ತಿ ನೀನು 
ನಾ ಬರೆದ ಕವನಗಳಿಗೆ ಉಸಿರೇ ನೀನು
ನಿನ್ನ ಮೌನದ ಪ್ರಶ್ನೆಗಳು ಸಾಕು ಇನ್ನು
ನಿನ್ನ ಉತ್ತರಕ್ಕೆ ಕಾದಿಹ ನಾನು ಇನ್ನು…

ಮೌನ ;
ನಿನ್ನ ನೆನಪು ಕನಸುಗಳ ನಡುವೆ
ನನ್ನ ಹೃದಯದ ಮಾತು ಮೌನವಾಗಿದೆ.

ಆನಂದ ಭಾಷ್ಪ ;
ನೆನಪುಗಳನ್ನು ನೆನೆಸಿಕೊಂಡು ಅಳುತ್ತ ಹೋದರೆ
ಕನಸುಗಳನ್ನು ತುಂಬಿಕೊಂಡು ಈ ಹೃದಯವಂತ ಕಣ್ಣಲ್ಲಿನ 
ಆನಂದ ಭಾಷ್ಪದ ಪ್ರೀತಿ ಅರ್ಥವಾಗುವುದು ಹೇಗೆ ..?
-ಬಸವರಾಜ ಕದಮ್

ಕನ್ನಡದ ಬರಹಗಳನ್ನು ಹಂಚಿ ಹರಡಿ
1 1 vote
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x