ಗುರು ಕಾಡು ದಾಟಿ ಹೊಳೆಯ ದಂಡೆಗೆ ಬಂದು ಹಸಿಮಣ್ಣು ಕಂಡರೂ ಅದರ ಮೇಲೆ ಕುಳಿತುಕೊಂಡ. ಕಾಡಿನ ಗವ್ವೆನ್ನುವ ಧ್ವನಿ, ನದಿಯ ಜುಳುಜುಳು ನಾದ, ಹಕ್ಕಿಗಳ ಕಲರವ ಯಾವುದೂ ಅವನ ಕಿವಿ ಸೇರುತ್ತಿರಲಿಲ್ಲ. ತಾನು ಇಷ್ಟು ದಿನ ನಂಬಿಕೊಂಡು ಬಂದಿದ್ದ ಬದುಕು ಹೀಗೆ ತನ್ನನ್ನೇ ತಿನ್ನುವ ರಾಕ್ಷಸವಾಗುತ್ತದೆ ಎಂದು ಅವನು ಅಂದುಕೊಂಡಿರಲಿಲ್ಲ.
ನದಿ ತನ್ನ ಪಾಡಿಗೆ ತಾನು ಹರಿಯುತ್ತಿತ್ತು. ಅದರ ಗುರಿ ಸಮುದ್ರ ಸೇರುವುದು ಎಂದು ಯಾರೋ ಹೇಳಿದ್ದನ್ನು ಕೇಳಿ ಗಹಗಹಿಸಿ ನಕ್ಕಿದ್ದ. ಅದಕ್ಕೇನ್ ತಲಿ ಏತೇನ್ಲೇ? ಎಂದು ಹಲ್ಲು ಕಿಸಿಯುತ್ತಲೇ ಕೇಳಿದ್ದ. ನದಿ ನೋಡಿ, ಇರುವೆ ನೋಡಿ, ಆಮೆ ಮೊಲದ ಕತೆ ಕೇಳಿ, ಐದು ಸಾವಿರ ವರ್ಷ ಹಳೆಯ ರಾಮಾಯಣದ ಉದಾಹರಣೆಯಿಂದ ಬಾಳುವುದು ಮುರ್ಖತನ. ಚಿಕ್ಕವರು ತಾವು ಹೇಳಿದಂತೆ ಕೇಳಲೆಂದು ಹಿರಿಯರು ಹುಟ್ಟಿಸಿದ ಕಟ್ಟುಕತೆಗಳು ಅವು. ತಾವೇ ಅನುಸರಿಸಲಾಗದ್ದನ್ನು ನಮ್ಮ ಮೇಲೆ ಹೇರುವ ತಿಳಿಗೇಡಿಗಳು ಅವರು. ಐದನೇ ವಯಸ್ಸಿನಲ್ಲಿ ಹರಿಶ್ಚಂದ್ರನ ಕತೆ ಕೇಳಿ ಅಂವೆಂಥಾ ಹುಚ್ಚೋ ಯಪ್ಪಾ? ರಾಜ್ಯಾ ನಾಯೇನ್ ಕೊಡುದುಲ್ಲಂದಿದ್ರ ಅರಾಮಾಗಿ ಇರ್‍ತಿದ್ದಾ ಎಂದು ತೊದಲು ತೊದಲಾಗಿ ನುಡಿದಿದ್ದ. ಅದನ್ನು ಊರಿಗೆಲ್ಲ ಹೇಳಿ ಅವನಪ್ಪ ಖುಷಿಪಟ್ಟಿದ್ದ. ಶಾಲೆಯ ಹೊರಗೆ ಸಿಗುವ ಅನುಭವಾಮೃತವನ್ನು ತ್ಯಜಿಸಿ ಶಾಲೆಯ ಒಳಗಡೆ ಉಪಯೋಗಕ್ಕೆ ಬಾರದ ಸೂತ್ರಗಳನ್ನು ಬಾಯಿಪಾಠ ಮಾಡುವುದು ಶಿಕ್ಷೆಯಾಗಿತ್ತು ಅವನಿಗೆ. ಅಪ್ಪ ಅಮ್ಮ ಬೈಗುಳ, ಹೊಡೆತಗಳಿಗಂಜಿ ಪ್ರತಿಸಾರಿ ಎಂಟ್ಹತ್ತು ದಿನ ಓದಿ ೪೦-೪೩ ಅಂಕ ಪಡೆದು ಪಾಸಾಗುತ್ತಿದ್ದ. ಉಳಿದೆಲ್ಲ ದಿನಗಳು ಅವನ ಉಡಾಳತನಕ್ಕೆ ಕಡಿಮೆ ಬೀಳುತ್ತಿದ್ದವು. ಏಳನೇ ಇಯತ್ತೆ ಇರುವಾಗ ಬೀಡಿ; ಎಂಟನೇ ಇಯತ್ತೆಗೆ ಸಿಗರೇಟು, ಗುಟಕಾ; ಒಂಭತ್ತನೆಯದಕ್ಕೆ ಲೈಂಗಿಕ ಪುಸ್ತಕ, ಸಿನಿಮಾ; ಹತ್ತನೆಯ ಇಯತ್ತೆಗೆ ಸೂಳೆಯ ಸಹವಾಸ, ಕುಡಿತ ಎಲ್ಲ ಕರತಲಾಮಲಕವಾಗಿತ್ತು. ನಾಳೆ ಯಾವೋನು ನೋಡಿದ್ದಾನೆ, ಮುಂದೆ ಬಿದ್ದಿರುವ ಇವತ್ತನ್ನು ಮನಸ್ಪೂರ್ತಿ ಅನುಭವಿಸಬೇಕು ಎಂಬುದೊಂದೇ ಅವನ ತರ್ಕ. ಸಿಕ್ಕ ಅವಕಾಶಗಳನ್ನೆಲ್ಲ ದೋಚುವುದೊಂದೇ ಅವನ ಉದ್ದೇಶ. ಶಾಲೆ ಕಲಿತು ಮಾರ್ಕ್ಸ್ ತೆಗೆದು ಐದಾರು ವರ್ಷ ಕಾಲೇಜಿನಲ್ಲಿ ಕಾಲಹರಣ ಮಾಡಿ, ಓದಿ ಓದಿ ಚಸ್ಮ ಹಾಕಿಕೊಂಡು, ಸಿಕ್ಕಸಿಕ್ಕವರ ಕಾಲು ಬಿದ್ದು ಯಾರದೋ ಕೈಕೆಳಗೆ ಹೇಳಿದಂತೆ ಕೆಲಸ ಮಾಡಿಕೊಂಡು ಸ್ವಗೌರವವಿಲ್ಲದೇ ನಾಯಿಯಂತೆ ಬದುಕುವುದು ಅವನಿಗೆ ಹೇಸಿಗೆ ತರುವ ಕನಸು. ನಾಳೆ ನಾನು ಸತ್ತು ಹೋದರೆ ಇಂದು ಸಿಗಬಹುದಾಗಿದ್ದ ಮಜವನ್ನು ಕಳೆದುಕೊಂಡ ಪಶ್ಚಾತ್ತಾಪ ನನ್ನ ಆತ್ಮಕ್ಕಂಟಿಕೊಳ್ಳುತ್ತದೆ ಎಂಬುದು ಅವನ ದೃಢವಿಶ್ವಾಸ.
ಸ್ವಾರ್ಥವಿಲ್ಲದೇ ಯಾರೂ ಏನೂ ಮಾಡುವುದಿಲ್ಲ. ಅಪ್ಪ ಅಮ್ಮ ಹುಟ್ಟಿಸಿದ್ದು, ಶಾಲೆ ಕಲಿಸುವುದೆಲ್ಲ ತಮ್ಮ ಮುಪ್ಪಿನಲ್ಲಾಗಲಿ ಎಂಬ ಉದ್ದೇಶದಿಂದ. ಹೆತ್ತಮ್ಮ ಕೂಡ ಕೆಲಸ ಬಿಟ್ಟ ಮರುದಿನ ಊಟಕ್ಕೆ ಹಾಕುವುದಿಲ್ಲ ಎಂದು ಅವನು ಅಪ್ಪಗೋಳಿಗೆ ಹೇಳಿದರೆ ಅವರು ಬರೀ ನಕ್ಕು ಬಿಡುತ್ತಿದ್ದರು.
ಅಪ್ಪಗೋಳು ನವೋದಯ ಕೋಚಿಂಗ್ ಕೇಂದ್ರದಲ್ಲಿ ಎರಡು ಸಾವಿರ ರೂಪಾಯಿಗೆ ಗಣಿತ ಪಾಠ ಮಾಡುತ್ತಿದ್ದ ಗದಿಗಯ್ಯ ಹಿರೇಮಠರು. ತಾನು ಮಾಡುವುದಕ್ಕೆಲ್ಲ ಬರೀ ನಗೆಯೊಂದರಿಂದಲೇ ಉತ್ತರಿಸುತ್ತಿದ್ದ ಅವರೆಂದರೆ ಗುರೂಗೆ ಬಹಳ ಗೌರವ. ಬಹುಶಃ ಅವನು ಗೌರವ ನೀಡುತ್ತಿದ್ದ ಏಕೈಕ ವ್ಯಕ್ತಿಯೆಂದರೆ ಅಪ್ಪಗೋಳು. ತನ್ನ ಜೀವನದಲ್ಲಿ ನಡೆಯುತ್ತಿದ್ದ ಎಲ್ಲವನ್ನು ಅವನು ಅವರಿಗೆ ಹೇಳುತ್ತಿದ್ದ. ದಿನಕ್ಕೊಂದು ಬಾರಿಯಾದರೂ ಅವರ ಮನೆಗೆ ಹೋಗಿ ಮಾತನಾಡಿ ಬರದಿದ್ದರೆ ಅವನಿಗೆ ಊಟ ರುಚಿಸುತ್ತಿದ್ದಿಲ್ಲ. ಅವನು ದಿನವೂ ದಾರು ಕುಡಿಯಲು, ಉಳಿದ ಬಾಟಲಿ ಇಡಲು, ಲೈಂಗಿಕ ಪುಸ್ತಕಗಳನ್ನು ಬಚ್ಚಿಡಲು ಅವರ ಮನೆ ಸುರಕ್ಷಿತ ತಾಣ. ಇನ್ನೇನು ತಾನು ಮಜಾ ಉಡಾಯಿಸುತ್ತಿದ್ದ ಬಣ್ಣಬಣ್ಣದ ಹುಡುಗಿಯರನ್ನು ಮಾತ್ರ ಅಲ್ಲಿಗೆ ಕರೆದುಕೊಂಡು ಬಂದಿಲ್ಲ. ಅದು ಗೌರವದಿಂದಲೋ ಅಥವಾ ಆ ಯೋಚನೆ ಆತನಿಗೆ ಹೊಳೆದೇ ಇಲ್ಲವೋ ಹೇಳುವುದು ಕಷ್ಟ.
ಅವನ ಮನೆ ಎದುರಿಗೆ ಕಾಣುವ ಚಿಕ್ಕ ಬೋಳಿನಲ್ಲಿ ನೂರು ಮೀಟರು ನಡೆದು ಎಡಕ್ಕೆ ಹೊರಳಿ, ಮೂರು ಮೆಟ್ಟಿಲು ಇಳಿದು, ಬಲಕ್ಕೆ ತಿರುಗಿ ಎರಡು ಪಾವಟಿಗೆ ಇಳಿದು ನೇರ ಹೋದರೆ ತಿಪ್ಪೆಯ ಎದುರಿಗೆ ಕಾಣುವ ಕರಿ ಹಂಚಿನ ಹಾಳು ಮನೆಯಲ್ಲಿ ಅಪ್ಪಗೋಳ ವಾಸ. ಎದುರಿನ ತಿಪ್ಪೆ, ಬಲಕ್ಕೆ ಫರ್ಲಾಂಗು ದೂರದಲ್ಲಿ ಹರಿಯುತ್ತಿದ್ದ ಊರ ಕೊಳಚೆ ಹೊತ್ತೊಯ್ಯುವ ಹಳ್ಳ ಇವುಗಳಿಂದ ಮನೆ ಘಮಾಡಿಸುತ್ತಿತ್ತು. ಮನೆ ಒಳಗೆ ಕಾಲಿಟ್ಟೊಡನೆ ಮಬ್ಬು ಬೆಳಕಿನಲ್ಲಿ ಚೆಲ್ಲಾಪಿಲ್ಲಿಯಾಗಿ ಒಂದರ ಮೇಲೊಂದು ಬಿದ್ದಿರುವ ನೂರಾರು ಕನ್ನಡ, ಇಂಗ್ಲೀಷ, ಹಿಂದಿ ಭಾಷೆಯ ಡಿಸ್ಕವರಿ ಆಪಫ್ ಇಂಡಿಯಾ, ಗೈಡ್, ದೇವದಾಸ, ಶ್ರೀ ರಾಮಾಯಣ ದರ್ಶನಂ, ಪರ್ವ, ಬಸವಣ್ಣವರ ವಚನಗಳು, ಮಹಾಲಕ್ಷ್ಮೀ ವ್ರತದಿಂದ ಗುರು ತಂದು ಚೆಲ್ಲಾಡಿದ ಲೈಂಗಿಕ ಪುಸ್ತಕಗಳವರೆಗೆ ತರಾವರಿ ವಿಷಯದ ಪುಸ್ತಕಗಳು. ಬಾಗಿಲಿಗೆ ಹತ್ತಿಕೊಂಡೇ ಸ್ವಚ್ಛಗೊಳಿಸಿ ಎರಡು ಮಳೆಗಾಲವಾದರೂ ಕಳೆದಿರುವ ತೆಳ್ಳನೆಯ ಗಾದಿ, ಮೇಲೆ ಎತ್ತಲೋ ಮುಖ ಮಾಡಿ ಬಿದ್ದಿರುವ ದಿಂಬು, ಮಡಚದೇ ಬಿದ್ದಿರುವ ಸೊಲ್ಲಾಪುರಿ ಚಾದರು. ಎಡಗಡೆ ಮೂಲೆಯಲ್ಲೊಂದು ಬಚ್ಚಲು, ಅಲ್ಲಿ ಬೂದು ಬಣ್ಣಕ್ಕೆ ತಿರುಗಿರುವ ಎರಡು ಬಕೆಟಗಳು, ಒಂದೇ ಒಂದು ಜಗ್ಗು. ಆ ಜಗ್ಗಿನ ವಿಶೇಷತೆಯೆಂದರೆ ಬೆಳಿಗ್ಗೆ ಸಂಡಾಸಕ್ಕೆ ಅದು ಟಂಬ್ರೇಲ ಆಗುತ್ತಿತ್ತು, ಜಳಕಕ್ಕೆ ಜಗ್ಗು, ನೀರು ಕುಡಿಯುವುದಕ್ಕೆ ತಂಬಿಗೆ. ಸಂಡಾಸ್ಕ ಹೋಗಿ ಬಂದ್ ಮ್ಯಾಲ ತೊಳದ್ ಇಡ್ತೇನಲ್ಲಲೇ, ಅದ್ಕೇನಾಗ್ತೇತಿ? ಯಾವದ್ರೊಳಗೂ ಭೇದಭಾವ ಮಾಡ್ಬಾರದ್ ಎಂಬ ಅವರ ಉತ್ತರಕ್ಕೆ ಹೆದರಿ ಮನೆಯಿಂದ ಬಚ್ಚಿ ಒಂದು ಗ್ಲಾಸನ್ನು ತನ್ನ ಕುಡಿಯುವ ಕಾಯಕಕ್ಕೆ ತಂದು ಇಟ್ಟುಕೊಂಡಿದ್ದ. ಬಚ್ಚಲ ಬದಿಗೆ ಒಂದು ಗ್ಯಾಸ ಒಲೆ, ಬದಿಗೆ ಸಿಲೆಂಡರು, ಅವುಗಳ ಸುತ್ತಲೆಲ್ಲ ಚೆಲ್ಲಿರುವ ಭಾಂಡೆ, ತಾಟು, ಚಮಚಗಳು. ಗೋಡೆಗೆ ನೆಟ್ಟಿರುವ ಗೂಟುಗಳ ತುಂಬ ಜೋತು ಬಿದ್ದಿರುವ ಪ್ಯಾಂಟು, ಶರಟು, ಚಡ್ಡಿ, ಬನಿಯನ, ಟವೆಲ್ಲುಗಳು. ಇನ್ನೊಂದು ಗೋಡೆಯ ಗೂಟಗಳ ಮೇಲಿರುವ ಫಳಿಯ ಮೇಲೆ ಟ್ರಂಕು, ಸೂಟಕೇಸು, ಪೇಪರು, ಮತ್ತೇನೇನೋ ಸುಡುಗಾಡು ಶುಂಠಿ. ಮಧ್ಯ ಒಂದು ಚಿಕ್ಕ ಮಾಡಿನಲ್ಲಿ ಬಸವಣ್ಣನ, ಅಕ್ಕಮಹಾದೇವಿಯ ಫೋಟೋಗಳು, ಬಸವಣ್ಣನ ಮೂರ್ತಿ, ಬಟ್ಟಲದಲ್ಲಿ ಕೂತಿರುವ ಲಿಂಗ, ವಿಭೂತಿ, ಕರ್ಪೂರ, ಊದಕಡ್ಡಿಗಳು. ಮತ್ತೊಂದು ಮೂಲೆಯಲ್ಲಿ ಧೂಳಿನ ಬಣ್ಣಕ್ಕೆ ತಿರುಗಿರುವ ಒಂದು ಫ್ಯಾನು, ಕಪ್ಪು ಹಂಚಿಗೆ ಆಧಾರ ನೀಡಿರುವ ತೊಳೆಯ ಕೆಳಗೆ ಜೋತು ಬಿದ್ದಿರುವ ಎಣ್ಣೆಗೆಂಪು ಬಣ್ಣಕ್ಕೆ ತಿರುಗಿರುವ ಅರವತ್ತರ ಬಲ್ಬು. ಅವರ ಮನೆ ಎಷ್ಟು ಕೊಳಕಾಗಿದೆಯೋ ಅಷ್ಟೇ ಸ್ವಚ್ಛ ಅವರ ಮನಸ್ಸು. ಎಂದಿಗೂ ಯಾರ ಬಗೆಗೂ ಕೇಡು ಮಾತಾಡಿದವರಲ್ಲ, ಯಾವುದರಲ್ಲೂ ಭೇದ ಬಗೆದವರಲ್ಲ, ತಾನಾಯಿತು, ತನ್ನ ಪುಸ್ತಕಗಳಾದವು. ಎಷ್ಟೋ ಬಾರಿ ಮನೆಗೆ ಕೀಲಿ ಹಾಕಿಕೊಳ್ಳದೇ ಕೆಲಸಕ್ಕೆ ಹೋಗಿದ್ದು ಇದೆ. ಯಾವುದರ ಬಗೆಗೂ ಪರಿವೆಯೇ ಇಲ್ಲ ಅವರಿಗೆ. ಹಾಗೆಂದೇ ಅವರ ಮೇಲೆ ಗುರೂಗೆ ಅಪಾರ ಗೌರವ, ನಂಬಿಕೆ.
ಅವನು ಮೊಟ್ಟಮೊದಲ ಬಾರಿ ಸೂಳೆಯ ಜೊತೆಗೆ ಸಂಗ ಮಾಡಿದುದನ್ನು ಅವನು ರಸವತ್ತಾಗಿ ಹೇಳಿದರೆ, ಅವರು ಯಾವುದೇ ಭಾವಾತಿರೇಕವಿಲ್ಲದೆ, ನಿರ್ಲಿಪ್ತರಾಗಿ ಕೇಳಿ ನಕ್ಕು ಬಿಟ್ಟಿದ್ದರು. ವರ್ಷದಿಂದ ಓದುತ್ತಿದ್ದ ಲೈಂಗಿಕ ಪಸ್ತಕಗಳಿಂದ ಪ್ರೇರಿತಗೊಂಡು ಅದರ ರುಚಿ ಅನುಭವಿಸಬೇಕು ಎಂದು ನಿರ್ಧರಿಸಿದ ದಿನ ಹೋಗಿ ಮೂಕನನ್ನು ಭೇಟಿಯಾಗಿ ವ್ಯವಸ್ಥೆ ಮಾಡಲು ಕೇಳಿಕೊಂಡ. ಮೂಕ ಮಾಡದ ಕಾರ್ಯವೇ ಇಲ್ಲ ಜಗತ್ತಿನಲ್ಲಿ, ಸಿಗರೇಟು, ದಾರು, ಮದುವೆಯಾಗಿ ಮೂರು ಮಕ್ಕಳು ಹುಟ್ಟಿದರೂ ಸೂಳೆಯ ಸಹವಾಸ ಬಿಟ್ಟವನಲ್ಲ. ಅವನಿಗೆ ವಯಸ್ಸು ನಲವತ್ತು. ದಿನಾ ರಾತ್ರಿ ಗುರುವಿನ ತಂದೆ ನಡೆಸುತ್ತಿದ್ದ ಕಿರಾಣಿ ಅಂಗಡಿಯಲ್ಲಿ ಬಂದು ಊರ ಸುದ್ದಿಯನ್ನೆಲ್ಲ ಸಂಜ್ಞೆಯ ಮಾತುಗಳಲ್ಲೇ ಹೇಳಿ ಗದ್ದಲ ಎಬ್ಬಿಸುತ್ತಿದ್ದ. ಅಂದು ಗುರು ಒಬ್ಬನೇ ಅಂಗಡಿಯಲ್ಲಿ ಇದ್ದ. ಮೂಕ ಬಂದು ಸ್ವಲ್ಪ ಹೊತ್ತಿನ ತರುವಾಯ ಮೂಗಿನ ಮೇಲೆ ತೋರುಬೆರಳಿನಿಂದ ಎರಡು ಸಲ ಮೆಲ್ಲಗೆ ಹೊಡೆದುಕೊಂಡು ತನ್ನ ಆಶೆ ತಿಳಿಸಿ ಎಷ್ಟು ಎಂದು ಕೈಸನ್ನೆಯಲ್ಲೇ ಕೇಳಿದ. ಅದಕ್ಕೆ ಒಂದೊಂದು ಸಾರಿ ಮೂರು, ನಾಲ್ಕು, ಐದು ಬೆರಳುಗಳನ್ನು ತೋರಿಸಿ ಗಾಳಿಯಲ್ಲಿ ಎರಡು ಸಾರಿ ಸೊನ್ನೆ ಮೂಡಿಸಿದ. ಗುರು ಎರಡನೇ ಭಾನುವಾರ ಹೋಗಬೇಕೆಂದು ಹೇಳಿದ್ದಕ್ಕೆ, ಸರ್ಕಲ್ ಇನ್ಸಪೆಕ್ಟರ ಆಫೀಸಿನ ಹಿಂದೆ ರಾತ್ರಿ ಎಂಟು ಗಂಟೆಗೆ ಬಂದು ಸೇರಲು ಸನ್ನೆ ಮಾಡಿದ. ಗುರು ನಕ್ಕು ಗಲ್ಲೆಯಿಂದ ಹತ್ತರ ಮೂರು ನೋಟು ಎತ್ತಿಕೊಂಡು ಕಿಸೆಗೆ ತುರುಕಿಕೊಂಡ.
ಎರಡನೆಯ ಭಾನುವಾರಕ್ಕೆ ಸರಿಯಾಗಿ ೪೮೦ ರೂಪಾಯಿ ಅವನ ಹತ್ತಿರ ಗೋಳೆ ಆದವು. ೪೦೦ ರೂಪಾಯಿ ಕೊಟ್ಟು, ಉಳಿದುದರಲ್ಲಿ ಒಂದು ಬಾಟಲಿ, ಒಂದಿಷ್ಟು ಸಿಗರೇಟು, ಗುಟ್ಖಾಗಳನ್ನೆಲ್ಲ ಖರೀದಿಸಿ, ಅಪ್ಪಗೋಳ ಮನೆಗೆ ಹಾಜರಾಗಿ ಎರಡು ಪೆಗ್ ಗುಟುಕರಿಸಿ, ಅದರಿಂದ ಲೈಂಗಿಕ ಶಕ್ತಿ ಅರ್ಧಗಂಟೆಗೂ ಮಿಕ್ಕಿ ನಿಲ್ಲುತ್ತದೆಂದು ಯಾರೋ ಹೇಳಿದ್ದು ನೆನಪಿತ್ತು ಅವನಿಗೆ, ಚೆನ್ನಾಗಿ ತಯಾರಾಗಿ ಹೊರಟ. ಮೂಕ ಹೇಳಿದ ಜಾಗಕ್ಕೆ ಬಂದು ನಿಂತ. ಮೂಕ ಸೈಕಲ ಇಳಿದು ಅತ್ತಿತ್ತ ಯಾರೂ ಇಲ್ಲದ್ದನ್ನು ಖಾತ್ರಿಪಡಿಸಿಕೊಂಡು ಒಂದಿಷ್ಟು ದೂರ ನಡೆದು ಯಾವುದೋ ಮನೆ ಹೊಕ್ಕ. ಮೂಕ ರೇಟು ಹೊಂದಿಸಿ ಸೈಕಲ ಹತ್ತಿ ಹೊರಟುಹೋದ. ಇವನನ್ನು ಕಂಡ ಹೆಂಗಸು ಏನೋ ಚಿಟಮ್ಯಾ ಏನರೆ ಮಾಡಾಕ ಬರ್‍ತೇತಿ ನಿನಗ? ಎಂದಿದ್ದಕ್ಕೆ ಅರ್‍ಬಿರೇ ಕಳಿ ತಾನ ಗೊತ್ತಾಗ್ತೇತಿ ಎಂದು ಹೇಳಿ ಎದೆಯುಬ್ಬಿಸಿ ನಿಂತ. ಅವನ ಹಾಲುಗಲ್ಲ, ಉದ್ದನೆಯ ಮುದ್ದಾದ ಮೂಗು, ಜೆಲ್ ಹಚ್ಚಿ ಕೈಯಿಂದಲೇ ಹೊಸ ಫ್ಯಾಶನ್ನಿನಲ್ಲಿ ಹಿಕ್ಕಿದ ಕೂದಲು, ಹದಿನೈದಕ್ಕೆ ಹೆಚ್ಚೆನ್ನುವಂತೆ ಇದ್ದ ಎತ್ತರ, ಬಾಡಿ ಬಿಲ್ಡರನಂತೆ ಅಚ್ಚುಕಟ್ಟಾದ ಮಾಂಸ ಖಂಡಗಳು, ಅಳತೆ ಹಚ್ಚಿ ಮಾಡಿಸಿದಂತಿದ್ದ ಮೈಕಟ್ಟು ಕಂಡು ಅವಳ ಬಾಯಲ್ಲೂ ನೀರೂರಿರಬೇಕು. ಬೆತ್ತಲಾದ ಅವಳ ದೇಹ ಕಂಡು ನಾಲ್ಕನೆಯ ಇಯತ್ತೆ ಇರುವಾಗ ನಿದ್ದೆ ಹತ್ತದ ಒಂದು ದಿನ ಹೊರಳಿದರೆ ಕಂಡ ತಾಯಿಯ ಬೆತ್ತಲಾದ ದೇಹ, ನಂತರ ನಡೆದ ಕಾಮದಾಟ ನೆನಪಿಗೆ ತಂದುಕೊಂಡು ಅದನ್ನೆಲ್ಲ ಇಲ್ಲಿ ಪ್ರಯೋಗಿಸಿಬಿಟ್ಟ.
ಮೂಕನಿಗೆ ಊರಿನ ಎಲ್ಲ ಒಳ್ಳೆಯ ಕೆಟ್ಟ ಕೆಲಸಗಳ ಸುದ್ದಿ ತಲುಪುತ್ತಿತ್ತು. ಊರಲ್ಲಿ ಎಲ್ಲಿ ಏನು ನಡೆಯುತ್ತಿದೆ ಎಂದು ಅವನಿಗೆ ಕರಾರುವಕ್ಕಾಗಿ ತಿಳಿದಿರುತ್ತಿತ್ತು. ಹಾಗೆಯೇ ಅವನ ಕೈಸನ್ನೆಗಳ ಮೂಲಕ ಊರೆಲ್ಲ ಹರಡುತ್ತಲೂ ಇತ್ತು. ಹಾಗಿರುವಾಗ ಗುರುವಿನ ಸೂಳೆ ಪ್ರಸಂಗ ಅವನ ತಂದೆಯ ಕಿವಿ ತಲುಪಲು ವಾರವೂ ಬೇಕಾಗಲಿಲ್ಲ. ಮೈಮುರಿ ಹೊಡೆತಗಳು ಬಾಸುಂಡೆಗಳಾಗಿ ಮತ್ತೊಂದು ವಾರದವರೆಗೆ ಮಾಯಲೂ ಇಲ್ಲ.
ತಾನು ಹರಿವ ಹಾದಿಯಲ್ಲಿ ಅಡ್ಡ ಬಂದ ಗುಡ್ಡವನ್ನು ಕಂಡು ಎದೆಗುಂದದೆ ನದಿ ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ರಭಸದಿಂದ ಮುನ್ನುಗ್ಗಿ ಗುಡ್ಡ ಕೊರೆದು ಭೋರ್ಗರೆವ ಜಲಪಾತ ಸೃಷ್ಟಿಸುವಂತೆ ಗುರು ಅಪ್ಪನ ಹೊಡೆತಕ್ಕೆ ಕುಗ್ಗದೇ ಹೊಸ ಅನುಭವಗಳ ಹುಡುಕಾಟಕ್ಕೆ ವೇಗ ಮುಟ್ಟಿಸಿದ. ಗಲ್ಲಿಯ ಕೊನೆಯಲ್ಲಿ ದಿನಾಲೂ ಅವನು ಹೋಗುವ ಸಮಯಕ್ಕೆ ಆಶೆಯ ಕಂಗಳಿಂದ ದಿಟ್ಟಿಸುವ ರಮ್ಯ, ಹೊಲಕ್ಕೆ ಹೋಗಿ ಹುಲ್ಲು, ಶೇಂಗಾ ಹೊತ್ತು ಬರುವ ಸುಶೀಲ, ಆರೆಂಟು ಮನೆಯ ಕಸಮುಸುರೆ ಮಾಡುವ ಅದೇ ಆಗ ಯೌವನಕ್ಕೆ ಕಾಲಿಟ್ಟಿರುವ ಗಂಗಮ್ಮ ಇತ್ಯಾದಿ ಅನೇಕರನ್ನು ಜೋಕುಗಳ ಒಗೆದು ಬಲೆಗೆ ಬೀಳಿಸಿ ಮಜ ಉಡಾಯಿಸಿದ. ಎಲ್ಲೆಲ್ಲೋ ಜಾಗ, ಸಮಯ ಹೊಂದಿಸಿಕೊಂಡು ಖರ್ಚಿಲ್ಲದೆ ರಾಸಲೀಲೆ ಮುಂದುವರೆಸಿದ.
ಎಸ್ಸೆಸ್ಸೆಲ್ಸಿಯಲ್ಲಿ ಡುಬ್ಕಿ ಹೊಡೆದು ಪಾನಪಟ್ಟಿ ಅಂಗಡಿ ಇಟ್ಟು ವ್ಯಾಪಾರಕ್ಕೆ ತೊಡಗಿಕೊಂಡ. ಎರಡು ವರ್ಷಗಳ ಸತತ ಪ್ರಯತ್ನದ ಮೂಲಕ ಅದನ್ನು ಪಾಸು ಮಾಡಿಕೊಂಡು, ಮುಂದಿನ ಮೂರು ವರ್ಷಗಳಲ್ಲಿ ಪಿಯೂಸಿ ಮುಗಿಸಿ, ಬಿ.ಎಗೆ ಸೇರಿಕೊಂಡ. ಪಟ್ಟಿ ಅಂಗಡಿಯಲ್ಲಿ ವ್ಯಾಪಾರವೂ ಕುದುರಿ, ಫೈನಾನ್ಸಿನಲ್ಲಿ ಸಾಲ ಮಾಡಿ ಒಂದು ಝರಾಕ್ಸ ಕೊಂಡುಕೊಂಡ. ಜೋರು ಹಿಡಿದ ವ್ಯಾಪಾರಕ್ಕೆ ಕಂಪ್ಯೂಟರ ಖರೀದಿ ಮಾಡಿ ಖರೀದಿ ಪತ್ರ, ಕರಾರು ಪತ್ರ, ಸೋಡಚೀಟಿ, ಮೃತ್ಯುಪತ್ರ, ಬಿಎಡ್ ಹುಡುಗರ ಪ್ರಾಜೆಕ್ಟಗಳನ್ನು ಡಿಟಿಪಿ ಮಾಡಲು ಶುರುಮಾಡಿದ. ಹಣ ಬರುತ್ತಾ ಹೋಯಿತು, ಮಜ ಹೆಚ್ಚುತ್ತಾ ಹೋಯಿತು. ಅವನ ಚಾಣಾಕ್ಷತನ ಹುಡುಗಿಯರ ಸಂಗ ಮಾಡುವುದಕ್ಕೆ ಉಪಯೋಗವಾದದ್ದಕ್ಕಿಂತ ವ್ಯಾಪಾರಕ್ಕೆ ಸಹಾಯವಾಗತೊಡಗಿತು. ನಾಲ್ಕಾರು ವಕೀಲರ ಕೈಕೆಳಗೆ ಕಾರಕೂನನಾಗಿ ಕೆಲಸ ಮಾಡುತ್ತ ಇಂಥ ಖರೀದಿ ಪತ್ರ, ಕರಾರು ಪತ್ರ, ಆರ್ ಟಿ ಓ ಕೆಲಸ, ಪೋಲೀಸ ಕೆಲಸಗಳನ್ನೆಲ್ಲ ಮಾಡಿಕೊಡುತ್ತಿದ್ದ ಮಹಾರುದ್ರ ಅವನಿಗೆ ಹೆಚ್ಚೆಚ್ಚು ಕೆಲಸಗಳನ್ನು ಕೊಡುತ್ತ ಹೋದ.
ಹೀಗಿರುವಾಗ ಒಂದು ರಾತ್ರಿ ಅಂಗಡಿ ಬಂದ ಮಾಡುವ ಹತ್ತೂವರೆ ಸುಮಾರಿಗೆ ಮಾರುದ್ರ ಬಂದು ಒಳಗಿನಿಂದಲೇ ಶಟರು ಎಳೆದ. ಶರಟಿನ ಒಳಗೆ ತುರುಕಿಕೊಂಡಿದ್ದ ಕಾಗದಗಳನ್ನು ಹೊರತೆಗೆದ. ಅದರಲ್ಲಿ ಒಂದು ನೋಂದಣಿ ಮಾಡಿಸಿದ ಖರೀದಿ ಪತ್ರ, ಒಂದಿಷ್ಟು ಖಾಲಿ ಸ್ಟ್ಯಾಂಪಿನ ಕಾಗದಗಳು. ಸುತ್ತಿಕೊಂಡು ಕೈಯಲ್ಲಿ ಹಿಡಿದುಕೊಂಡಿದ್ದ ಚೀಲದಲ್ಲಿ ನಾಲ್ಕೆಂಟು ಶಿಕ್ಕಾಗಳು, ಇಂಕಪ್ಯಾಡ, ಕೆಂಪು, ಕರಿ, ಹಸಿರು, ನೀಲಿ ಬಣ್ಣದ ಪೆನ್ನುಗಳು. ಅವನ್ನೆಲ್ಲ ಹೊರತೆಗೆದು ಅವಕ್ಕಾಗಿ ನಿಂತಿದ್ದ ಗುರುಗೆ ಅವರು ಮಾಡಬೇಕಾದ ಕೆಲಸ ತಿಳಿಹೇಳಿದ. ಬಹಳ ಸರಳ ಕೆಲಸ. ಇಷ್ಟೆಲ್ಲ ಪರಿಕರಗಳ ಸಹಾಯದಿಂದ ಖರೀದಿ ಪತ್ರದ ನಕಲು, ಅಸಲಿನ ಹಾಗೆ ಕಾಣುವಂತೆ ತಯಾರಿಸುವುದು. ಗುರುವಿನ ಕೆಲಸ ಬರೀ ಅಸಲನ್ನು ನೋಡಿ ಖಾಲಿ ಸ್ಟ್ಯಾಂಪಿನ ಮೇಲೆ ಟೈಪು ಮಾಡಿಕೊಡುವುದು ಹಾಗೂ ಗುಟ್ಟನ್ನು ಬಿಟ್ಟು ಕೊಡದೇ ಇರುವುದು. ಅದಕ್ಕೆ ಅವನು ನೀಡುವ ಹಣ ಐದು ಸಾವಿರ. ಒಂದು ಸಾರಿ ಗುರು ಒಪ್ಪಿಕೊಂಡರೆ ಅವನ ಹತ್ತಿರ ಬೇಕಾದಷ್ಟು ಕೆಲಸಗಳಿವೆ. ವರ್ಷದೊಳಗೆ ಗುರು ಲಕ್ಷ ಲಕ್ಷ ಗಳಿಸಬಹುದು. ಗಾಬರಿಗೊಂಡ ಗುರುವಿಗೆ ಧೈರ್ಯ ತುಂಬಿದ್ದು ಮಾರುದ್ರನ ಒಂದೇ ಮಾತು. ತನಗೆ ಏನೂ ಗೊತ್ತಿಲ್ಲ, ಯಾರೋ ಬಂದರು ಹೀಗೆ ಟೈಪು ಮಾಡು ಎಂದರು ಮುಂದೆ ಏನಾಯಿತೋ ತನಗೇನೂ ಗೊತ್ತಿಲ್ಲ ಎಂದುಬಿಡುವುದು. ಅಷ್ಟಕ್ಕೂ ಅವನು ಮಾಡುತ್ತಿರುವುದು ಅಷ್ಟೇ ತಾನೇ? ನಿಜವಾದ ರಿಸ್ಕ ತೆಗೆದುಕೊಳ್ಳುತ್ತಿರುವವನು ಮಾರುದ್ರ. ಅವನೇ ನಕಲಿ ಸಹಿ ಮಾಡಿ, ನಕಲಿ ಶಿಕ್ಕಾ ಹಾಕಿ ಫೋಟೋಗಳನ್ನೆಲ್ಲ ಕಂಪ್ಯೂಟರಿನಲ್ಲಿ ನಕಲು ಮಾಡಿ ತಯಾರು ಮಾಡುವುದು. ಅಂಥ ಅವಕಾಶ ಗುರು ಬಿಟ್ಟಾನೆಯೇ? ಎರಡೂ ಕೈಯಿಂದ ಬಾಚಿಕೊಂಡ. ಹಣದ ಹೊಳೆ ಹರಿಯುತ್ತ ಹೋಯಿತು.
ಮತ್ತೆ ಯಾರೋ ಅಪ್ಪನ ಕಿವಿ ಚುಚ್ಚಿದ್ದರು. ಆ ದಿನ ರಾತ್ರಿ ಗುರು ಬಂದದ್ದು ಎರಡು ಗಂಟೆಗೆ. ಬೆಳಿಗ್ಗೆ ಎದ್ದು ಹಲ್ಲುಜ್ಜಿ, ಮುಖ ತೊಳೆದು ಚಹಾ ಕೇಳಿದೊಡನೆ ಕೂಡಲೇ ಶುರುವಾದ ಅಪ್ಪನ ಬೈಗುಳಗಳ ಮಳೆ ಗುರುವಿನ ಸಹನೆಯ ಕಟ್ಟೆಯೊಡೆಯುವವರೆಗೆ ಸುರಿಯುತ್ತಲೇ ಇತ್ತು. ನಡುನಡುವೆ ತಾಯಿ ಕೂಡ ನೂರೆಂಟು ಬೈದಳು. ತಡೆದುಕೊಂಡ ಸಿಟ್ಟು ಕಟ್ಟೆಯೊಡೆದು ಅಪ್ಪನನ್ನೇ ಬೈಯಲು ಗುರು ಶುರುಮಾಡಿದ. ಗುಡುಗು, ಸಿಡಿಲು, ಮಿಂಚುಗಳು ಜೋರಾದವು. ಬೈಗುಳ, ವಾಗ್ವಾದ, ಜಗಳ ಮಿತಿಮೀರಿ ಗುರುವಿನ ಮತಿಗೆಟ್ಟು ಕೋಪದ ಭರದಲ್ಲಿ ಅಪ್ಪನ ಕಪಾಳಕ್ಕೆ ಛಟೀರೆಂದು ಹೊಡೆದ. ಆಘಾತಗೊಂಡ ಅಪ್ಪ ದಿಗ್ಭ್ರಾಂತನಾಗಿ ನೆಲಕ್ಕೆ ಕುಸಿದು ಕುಳಿತ. ರುದ್ರಕಾಳಿಯಾದ ತಾಯಿ, ಅಪ್ಪಗ ಹೊಡ್ಯೂವಷ್ಟ ದೊಡ್ಡಾಂವಾದೇನ್ಲೇ ಭಾಡ್ಯಾ. ನಡಿ ಹೊರಗ್, ಮನಿ ಒಳಗ ಕಾಲಿಟ್ಯಂದ್ರ ಕಾಲ ಕಿತ್ತ ಕೈಯಾಗ ಕೊಡತೇನ್. ನಿನ್ ಬಾಯಾಗ ಹುಳಾ ಬಿದ್ದ ಸಾಯಾ.. ಎಂದು ಚೀರಿದವಳೇ ರಟ್ಟೆ ಹಿಡಿದು ಅಕ್ಷರಶ: ಹೊರಗೆ ದೂಡಿದಳು.
ಸಿಟ್ಟಿನಿಂದ ಜರ್ಜರಿತನಾದ ಗುರು ಎಲ್ಲಿ ಹೋಗಬೇಕೆಂದು ತಿಳಿಯದೆ ಕಾಲೇಜಿನಡೆಗೆ ನಡೆದ. ಕೆದರಿದ ಕೂದಲು, ಚುರ್ರೆನ್ನುವ ಹೊಟ್ಟೆ, ಎತ್ತ ಬೇಕತ್ತ ಮಡಚಿದ ಬಟ್ಟೆಗಳು ಯಾವುದರ ಪರಿವೆಯೂ ಇಲ್ಲ. ನೇರ ಕ್ಲಾಸಿಗೆ ಹೋಗಬೇಕೆಂದುಕೊಂಡವನಿಗೆ ಕಮ್ಯುನಿಟಿ ಹಾಲಿನಿಂದ ಯಾರೋ ಹಾಡುತ್ತಿರುವ ದನಿ ಕೇಳಿಸಿತು. ಅಲ್ಲಿ ಹೋಗಿ ಖಾಲಿ ಕಂಡ ಕೊನೆ ಸಾಲಿನ ಕುರ್ಚಿಯ ಮೇಲೆ ಕೂತ. ನಾಲ್ಕಾರು ಜನ ಅಪಸ್ವರದಲ್ಲಿ ಹಾಡುವುದ ಕೇಳಿ ತಲೆಕೆಟ್ಟು ಹೊರಟುನಿಂತ. ಎದ್ದವನನ್ನು ಯಾರೋ ಕೈ ಜಗ್ಗಿ ಕುಳ್ಳಿರಿಸಿದಂತೆ ಮಧುರವಾದ ಅವಳ ಹಾಡು ಅವನನ್ನು ಸೆಳೆಯಿತು. ಮನದ ಕ್ಲೇಶವೆಲ್ಲ ಹಬೆಯಾಗಿ ಹಾರಿ ಹೋಗುವಂಥ ದನಿ.
ಮೊದಲ ಬಾರಿಗೆ ನದಿಯಲ್ಲಿ ಈಜುಬಿದ್ದ ನೆನಪು. ಗೋಲಗುಮ್ಮಟದ ಉದ್ಯಾನದಲ್ಲಿ ಹುಲ್ಲುಹಾಸಿನ ಮೇಲೆ ಜಗತ್ತಿನ ಖಬರಿಲ್ಲದೆ ಮಲಗಿದ ನೆನಪು, ಅಮ್ಮ ಮುಡಿದ ಮೊಲ್ಲೆಯ ಸುವಾಸನೆಯ ನೆನಪು, ಹೊಲದಲ್ಲಿ ಕುಳಿತು ಮೊದಲ ಬಾರಿಗೆ ಸೂರ್ಯೋದಯ ಕಂಡ ನೆನಪು, ದೀಪಾವಳಿಯ ದಿನ ಬೆಳಿಗ್ಗೆ ನಾಲ್ಕಕ್ಕೆದ್ದು ಸುವಾಸನೆಯ ಎಣ್ಣೆಯಿಂದ ಮೈಯ್ಯುಜ್ಜಿಸಿಕೊಂಡು ಚಂದನದ ಸಾಬೂನಿನಿಂದ ಅಭ್ಯಂಗಸ್ನಾನ ಮಾಡಿ ಪಟಾಕಿ ಹಾರಿಸಿ ನಲಿದಾಡಿದ ನೆನಪು, ಹುಟ್ಟುಹಬ್ಬದ ದಿನ ಅಪ್ಪ ಹೊಟೇಲಿಗೆ ಕರೆದುಕೊಂಡು ಹೋಗಿ ಬಾಸುಂದಿ ತನ್ನಿಸಿದ ನೆನಪು, ಅಜ್ಜಿಯ ತೊಡೆಯ ಮೇಲೆ ಕುಳಿತು ಚಂದ್ರಮನ ಕತೆ ಕೇಳುತ್ತ ಕೈತುತ್ತು ಉಂಡ ನೆನಪು, ಮಾವಸಿ ಮಗಳ ಮದುವೆಯಲ್ಲಿ ರಾತ್ರಿಯಡಿ ದೊಡ್ಡವರ ಭಯವಿಲ್ಲದೇ ಹುಡುಗರ ಜೊತೆಗೂಡೆ ಆಟವಾಡಿದ ನೆನಪು ಎಲ್ಲ ಒಮ್ಮೆಲೆ ಒತ್ತರಿಸಿ ಬಂದು ವ್ಯಾಕುಲಗೊಂಡ ಮನವನ್ನು ಆಹ್ಲಾದಗೊಳಿಸಿದವು. ಜಗತ್ತನ್ನೆಲ್ಲ ಮರೆತು ಗಾಳಿಯಲ್ಲಿ ಹಾಯಾಗಿ ತೇಲುತ್ತಿರುವ ಭಾಸ.
ಮುಚ್ಚಿದ ಕಂಗಳನ್ನು ತೆರೆದು ನೋಡಿದರೆ ಮೈದಿನ ಎದುರಿಗೆ ಮಗ್ನವಾಗಿ ಕಣ್ಮುಚ್ಚಿ ಹುಡುಗಿಯ ಮೊಗ ಚುಂಬಕದಂತೆ ಸೆಳೆದಂತಾಯಿತು. ಮಬ್ಬು ಹಸಿರು ಬಣ್ಣದ ಚೂಡಿದಾರ, ಅದರ ಮೇಲೆ ಕೆಂಪು ನೀಲಿ ಬಣ್ಣದ ದುಪಟ್ಟಾ, ನೆಟ್ಟನೆಯ ಮೂಗು, ಚಿಕ್ಕ ಕೆಂಬಣ್ಣದ ತುಟಿಗಳು, ಗಟ್ಟಿಯಾಗಿ ಹಿಂದಕ್ಕೆ ಹಿಕ್ಕಿದ ಕೂದಲಿನ ಹುಡುಗಿ ಹೃದಯದಲ್ಲಿ ಹೂದೋಟ ಹುಟ್ಟಿದ ಅನುಭವ ನೀಡಿದಳು. ಹಾಡಿನ ಲಯಕ್ಕೆ ಕೈಯಲುಗಿಸುವ ರೀತಿ, ಕಣ್ಮುಚ್ಚಿ ತಲ್ಲೀನಳಾಗಿ ಸ್ವರಗಳನ್ನು ಉಸುರುವ ಭಾವ ಅವನಲ್ಲಿ ಹೊಸ ಸಂವೇದನೆಗಳನ್ನು ಹುಟ್ಟಿಸಿದವು.
ಹಾಡು ಯಾಕಾದರೂ ಮುಗಿಯಿತೋ ಎಂದು ಖೇದವಾಯಿತು. ಉಳಿದ ಆಯಸ್ಸನ್ನೆಲ್ಲ ಅವಳ ಹಾಡು ಕೇಳುತ್ತಲೇ ಇರಬೇಕೆಂಬ ಆಶೆಯಾಯಿತು. ಅವಳು ಮುಗುಳ್ನಕ್ಕು ಧನ್ಯವಾದ ಹೇಳಿ ವೇದಿಕೆ ಇಳಿಯುವುದನ್ನು ವೀಕ್ಷಿಸುವ ಗುಂಗಿನಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆ ಅವನಿಗೆ ಕೇಳಿಸಲೇ ಇಲ್ಲ. ಎದ್ದು ಅವಳು ಕುಳಿತ ಜಾಗಕ್ಕೆ ಹೋಗಿ ಅವಳನ್ನು ಅಭಿನಂದಿಸಬೇಕೆಂದು ಮನಸ್ಸಾದುದನ್ನು ಹೇಗೆ ತಡೆಹಿಡಿದುಕೊಂಡನೋ? ಅಲ್ಲಿಂದ ಕದಲಲಿಲ್ಲ, ನೋಟ ಮಾತ್ರ ಅವಳ ಮೇಲೆಯೇ ಕೀಲಿಸಿತ್ತು. ಕಾರ್ಯಕ್ರಮ ಮುಗಿದ ಮೇಲೆ ಮಾಯಕ್ಕೊಳಗಾದವನಂತೆ ಅವಳಿಗೆ ತಿಳಿಯದ ಹಾಗೆ ಅವಳನ್ನು ಹಿಂಬಾಲಿಸಿದ. ಅವಳು ತನ್ನ ಮನೆಯೊಳಕ್ಕೆ ಹೋಗುತ್ತಿದ್ದಂತೆ ನಿದ್ರೆಯಿಂದ ಎಚ್ಚರಗೊಂಡವನಂತೆ ಗಕ್ಕನೆ ನಿಂತುಬಿಟ್ಟ. ಎಲ್ಲಿ ಬಂದನೆಂದು ತಿಳಿದುಕೊಳ್ಳಲು ಸುತ್ತೆಲ್ಲ ಕಣ್ಣಾಡಿಸಿದ. ಅಪರಿಚಿತ ಜಾಗ. ಹೇಗೆ ಬಂದೆ, ತಿರುಗಿ ಹೋಗುವುದು ಹೇಗೆ ಒಂದೂ ಹೊಳೆಯಲಿಲ್ಲ. ಮನಸ್ಸನ್ನು ಹತೋಟಿಗೆ ತರಲೆಂದು ನಡೆಯಲು ಪ್ರಾರಂಭಿಸಿದ. ಅಡ್ಡ ಒಂದು ರಸ್ತೆ ಬಂತು. ಆಚೀಚೆ ನೋಡಿದರೆ ಎದುರಿಗೆ ಒಂದು ಹೊಟೇಲು ಕಾಣಿಸಿತು. ಏನೂ ಹೊಳೆಯದೇ ಒಳಗೆ ಹೋಗಿ ಕುಳಿತು ಚಹಾ ತರಲು ಹೇಳಿದ.
ಚಹಾ ಕುಡಿದು ಹೊರಬಂದು ನೋಡುತ್ತಾನೆ ಎದುರಿಗೆ ಟೀವಿ ಅಂಗಡಿ. ಹೆಸರು ಗಣೇಶ ಎಲೆಕ್ಟ್ರಾನಿಕ್ಸ. ತಟ್ಟನೆ ಹೊಳೆಯಿತು. ಅಲ್ಲಿಂದ ಆ ಹುಡುಗಿ ಒಳಹೊಕ್ಕ ಮನೆ ನೋಡಿದ. ವಿಳಾಸ ಗೊತ್ತಾಯಿತು. ಮನೆಯ ಬಾಗಿಲಿಗೆ ರಾಜಪ್ಪ ಅಮ್ಮಿನಭಾವಿ ಎಂಬ ಬೋರ್ಡ ಇತ್ತು. ಹೆಸರು ಮನಸ್ಸಿನಾಳಕ್ಕಿಳಿಯಿತು.
ಮನೆಗೆ ಹೋಗುವಂತಿರಲಿಲ್ಲ ಎಂದು ನೇರ ಅಪ್ಪಗೋಳ ರೂಮಿಗೆ ಹೋಗಿ ಮಲಗಿಕೊಂಡ. ಕಣ್ಣ ಮುಂದೆ ಬರೀ ಅವಳ ಬಿಂಬ, ಕಿವಿಯಲ್ಲಿ ಅವಳ ಹಾಡು, ಅವಳ ಮುಖ, ನಡೆ, ಕೈ, ಎಲ್ಲವೂ ಒಂದಾದ ಮೇಲೊಂದು ಅವನ ಹೃದಯದಲ್ಲಿ ಕೋಲಾಹಲ ಎಬ್ಬಿಸಿ ಒದ್ದಾಡುತ್ತಲೇ ಇದ್ದ. ಯಾಕೋ ಏನಾತು? ಎಂದು ಅಪ್ಪಗೋಳ ಕೇಳೀದ್ದಕ್ಕೆ ತಲಿ ಹೊಡ್ಯಾತೇತ್ರಿ ಎಂದಷ್ಟೇ ನುಡಿದು ಹುಡುಗಿಯ ನೆನಪೊಳಗೆ ನುಸುಳಿಕೊಂಡ. ಕುಡಿಯುವ, ತಿನ್ನುವ ಮನಸ್ಸಿಲ್ಲ, ನಿದ್ದೆ ಬರಲೊಲ್ಲ, ಹೇಗಾದರೂ ಮಾಡಿ ಅವಳನ್ನು ಕಂಡು ಮಾತನಾಡಿಸಬೇಕು ಎಂಬುದೊಂದೇ ಬಯಕೆ. ಹೃದಯವೆಲ್ಲ ಖಾಲಿಯಾಗಿ ಅಲ್ಲಿ ಅವಳು ತುಂಬಿಕೊಳ್ಳಬೇಕೆಂಬ ವೇದನೆ.
ಎಲ್ಲೋ ಹೊರಹೋಗಿದ್ದ ಅಪ್ಪಗೋಳ ರಾತ್ರಿ ಹತ್ತೂವರೆಗೆ ಬಂದು ಊಟಾ ಮಾಡ್ತಿಯೇನೋ? ಎಂದರು. ಅವನು ಅಡ್ಡಕ್ಕೆ ತಲೆ ಅಲ್ಲಾಡಿಸಿದ. ಅವರು ತಮ್ಮ ಪಾಡಿಗೆ ತಾವು ತಿಂದು ಓದಲು ಕುಳಿತರು. ರಾತ್ರಿ ಯಾವಾಗಲೋ ಅಲ್ಲೇ ಎಲ್ಲೋ ಬಿದ್ದಿದ್ದ ಚಾಪೆಯನ್ನು ಅವನ ಬಲಕ್ಕೆ ಹಾಸಿಕೊಂಡು ನಿದ್ದೆಹೋದರು.
ರಾತ್ರಿಯಿಡೀ ನಿದ್ದೆ, ಎಚ್ಚರ, ಅವಳು ಒಂದಕ್ಕೊಂದು ತಡಕಾಡಿಕೊಂಡು ಸೂರ್ಯನ ಕಿರಣ ಅವನ ತಾಕುತ್ತಲೇ ಎದ್ದು ಅವಳ ಗಲ್ಲಿಗೆ ಹೋದ. ಅತ್ತಿಂದಿತ್ತ ಅಲೆದಾಡಿ ಏನೂ ತೋಚದೇ ಎದುರಿನ ಹೊಟೇಲಿಗೆ ಹೋಗಿ ಒಂದು ಚಹಾ ಗುಟುಕರಿಸಿದ. ಮತ್ತೆ ಅಲ್ಲೇ ತಿರುಗಾಡುವುದನ್ನು ಯಾರಾದರೂ ಕಂಡು ಕೇಳಿದರೆ ಹೇಳುವುದೇನು ಎಂದು ಹೆದರಿ ಎತ್ತಲೋ ನಡೆದುಬಿಟ್ಟ. ಅವಳು ಹೊರಗೆ ಬಂದಾಳು, ನನ್ನ ನೋಡಿ ನಕ್ಕಾಳು, ಮಾತನಾಡಿಸಿಯಾಳು ಎಂಬಾಶೆ ಅವನ ತಿದಿಯೊತ್ತುತ್ತಲೇ ಇತ್ತು. ಅವಳನ್ನು ಎಷ್ಟೋ ವರ್ಷಗಳಿಂದ ಬಲ್ಲವರಂತೆ ಎದುರಿಗೆ ಬಂದರೆ ಆರಾಮಿದಿ? ಎಂದು ಕೇಳಬೇಕು ಎಂದು ಇಪ್ಪತ್ತು ಸಾರಿಯಾದರೂ ಅಂದುಕೊಂಡ. ಅವಳು ಕಾಣಲೇ ಇಲ್ಲ.
ದಿನವೇರಿದಂತೆ ತಾನು ಹುಚ್ಚನಂತೆ ಅಲೆಯುತ್ತಿದ್ದೇನೆ ಎಂಬ ಪ್ರಜ್ಞೆ ಮರುಕಳಿಸಿ ಅವಳ ಮನೆಗೆ ಫೋನು ಹಚ್ಚಬೇಕೆಂದು ಹವಣಿಸಿದ. ಧೈರ್‍ಯ ಸಾಲದೇ ಸುಮ್ಮನಾದ. ಮರುದಿನ ಮನೆಗೆ ಹೋಗಿ ಮೌನವಾಗಿ ತನಗೆ ಬೇಕಾದ ಬಟ್ಟೆಬರೆಗಳನ್ನೆಲ್ಲ ಒಂದು ಬ್ಯಾಗಿನಲ್ಲಿ ತುರುಕಿಕೊಂಡು ಒಯ್ದು ಅಪ್ಪಗೋಳ ಮನೆಯಲ್ಲಿ ಇಟ್ಟ. ಮನೆಯಲ್ಲಿ ನಡೆದ ಪುರಾಣ ಹೇಳಿ ತನಗೊಂದು ಮನೆ ಸಿಗುವವರೆಗೂ ಇಲ್ಲೇ ಇರುವೆ ಎಂದ. ಅವರು ನಕ್ಕರು. ಅವನು ಮನೆ ಹುಡುಕಲಿಲ್ಲ. ಹುಡುಗಿಯ ಮನೆ, ಕಾಲೇಜು, ಅವಳು ಹೋದಲ್ಲೆಲ್ಲ ತಿರುಗಾಡಿದ. ಎರಡು ವಾರ ಅದೇ ಒದ್ದಾಟದಲ್ಲಿ ಕಳೆದವು.
ಅದೆಲ್ಲಿಂದ ಧೈರ್‍ಯ ಬಂತೋ ಒಂದು ದಿನ ಅವಳಿಗೊಂದು ಚೀಟಿ ಬರೆದ. ನಿಮ್ಮನ್ನು ಮಾತನಾಡಿಸಬೇಕು ಎಂಬುದೊಂದೇ ಸಾಲು. ಅವಳು ಕಾಲೇಜಿಂದ ಬರುವ ದಾರಿಯಲ್ಲಿ ಅಡ್ಡಗಟ್ಟಿ ಅವಳ ಕೈಗೆ ಇಟ್ಟು ತಿರುಗಿ ನೋಡದೇ ಸರಸರನೆ ನಡೆದುಹೋದ. ಅವಕ್ಕಾಗಿ ತೆರೆದು ನೋಡಿದ ಅವಳು ನಕ್ಕು ಮುಷ್ಟಯಲ್ಲಿ ಮಡಚಿ ಗಟಾರಿನಲ್ಲಿ ಎಸೆದು ನಡೆದುಬಿಟ್ಟಳು.
ಮರುದಿನ ಅದೇ ಜಾಗದಲ್ಲಿ ನಿಂತಿದ್ದ ಅವನ ಕಂಡು ನಕ್ಕಳು. ಗುರುಗೊಂದೂ ತೋಚದೇ ನಿಂತುಕೊಂಡ. ನೀವ್ಯಾರ್ರಿ ನನ್ನ ಜೋಡಿ ಮಾತಾಡಾಕ? ಎಂದು ನೇರವಾಗಿ ಕೇಳಿದಳು. ಮಾತು ಹೊರಬರಲೊಲ್ಲದು, ಪೆಚ್ಚನಂತೆ ಹಲ್ಲು ತೋರಿದ. ಅವನು ಕೊಟ್ಟ ಚೀಟಿಯನ್ನು ಅವನ ಕೈಗೆ ಕೊಟ್ಟು ನಡೆದು ಹೋಗಿಬಿಟ್ಟಳು.
ಎಷ್ಟೋ ಹೊತ್ತು ಹಾಗೇ ಹೃದಯಾಘಾತಕ್ಕೊಳಗಾದವನಂತೆ ನಿಂತಿದ್ದವನಿಗೆ ಎತ್ತ ಹೋಗಬೇಕೆಂದು ದಾರಿ ತೋಚಲಿಲ್ಲ. ಯಾಕೋ ಶಟರು ಹಾಕಿಕೊಂಡು ಅಂಗಡಿಯ ಒಳಗೆ ಕುಳಿತುಕೊಂಡು ಅತ್ತುಬಿಡಬೇಕೆಂದು ಆಶೆ ಒತ್ತರಿಸಿ ಬರತೊಡಗಿತು. ಸತ್ತವನಂತೆ ಹೆಜ್ಜೆ ಹಾಕುತ್ತಾ ಅಂಗಡಿಯ ದಾರಿ ಹಿಡಿದು ಹೊರಟ. ಅವಳು ನೀವ್ಯಾರ್ರಿ ಎಂದು ಕೇಳಿದುದು ಗಂಟೆಯಂತೆ ಅವನ ತಲೆಯಲ್ಲಿ ಹೊಡೆಯತೊಡಗಿತು. ನಾನು ಯಾರು, ನನಗೆ ಯಾವ ಗುರುತಿದೆ, ನನ್ನ ಜೀವನದ ತುಂಬ ನಾನು ಮಾಡಿದುದಾದರೂ ಏನು? ನಾನು ಕುಡುಕ, ಕಚ್ಚೆಹರುಕ, ನಕಲಿ ದಾಖಲೆಗಳ ಸೃಷ್ಟಿಸುವ ಕಳ್ಳ, ನನಗೆ ಒಂದು ಹುಡುಗಿಯನ್ನು ಪ್ರೀತಿಸುವ ಅರ್ಹತೆಯಿದೆಯೇ? ಪ್ರೀತಿ? ನನಗೆ ಅವಳನ್ನು ಮಾತನಾಡಿಸುವ ಅರ್ಹತೆಯೂ ಇಲ್ಲ. ಅವಳು ಹೇಳಿದುದು ಸರಿ. ನಾನು ಯಾರು ಎಂಬುದೇ ನನಗೆ ಗೊತ್ತಿಲ್ಲ. ನಾನು ಹಂದಿಯಂತೆ, ನಾಯಿಯಂತೆ ಬಾಳುತ್ತಿರುವೆ. ನನ್ನನ್ನು ಯಾರೂ ಗೌರವಿಸುವುದಿಲ್ಲ, ಯಾರೂ ನನ್ನನ್ನು ಮಾತನಾಡಿಸುವುದಿಲ್ಲ.
ಅಂಗಡಿ ಇನ್ನೂ ಫರ್ಲಾಂಗು ದೂರ ಇರುವಾಗಲೇ ಅಂಗಡಿಯು ವಿಚಿತ್ರವಾಗಿ ಕಾಣುತ್ತಿದ್ದಂತೆ ಅನ್ನಿಸಿತು. ಗಕ್ಕನೆ ನಿಂತುಕೊಂಡ. ಅಂಗಡಿಯ ಮುಂದೆ ಯಾರನ್ನೋ ಕಾಯುತ್ತಿರುವ ಪೋಲೀಸರು. ಯಾರನ್ನೋ ಅಂದರೆ ನನ್ನನ್ನೆ? ಮೈಯೆಲ್ಲಾ ಬೆವರಿತು. ಮಿಂಚಿನಂತೆ ಹೊರಳಿ ಬೆನ್ನು ತಿರುಗಿಸಿ ಹೊರಟವ ಬಂದು ತಲುಪಿ ದಾರಿ ಕಾಣದೇ ಕುಳಿತುಕೊಂಡಿದ್ದು ಅದೇ ಹೊಳೆದಂಡೆಯ ಹಸಿಮಣ್ಣಿನ ಮೇಲೆ. ಗಿಡದ ಬುಡದಿಂದ ಹೊರಬಂದು ದಾರಿ ತಪ್ಪಿದ ಕೆಂಪಿರುವೆಯೊಂದು ಅವನ ನಿತಂಬಕ್ಕೆ ಕಚ್ಚಿಬಿಟ್ಟಿತು. ಮುಖ ಕಿವುಚಿ ನಿತಂಬದ ಮೇಲೊಂದು ಹೊಡೆದುಕೊಂಡ. ಎದುರಿಗೆ ನೋಡಿದರೆ ಮೆಲ್ಲಗೆ ನದಿ ಕಪ್ಪಿಟ್ಟು ಕಿರಿದಾಗುತ್ತ ಸಾಗಿತು, ದಂಡೆಯಲ್ಲೆಲ್ಲ ಕೊಳಚೆ ಸೇರತೊಡಗಿತು. ಕಪ್ಪು ಹಳ್ಳದ ರೂಪ ಪಡೆದುಕೊಂಡ ಹೊಳೆಯ ಮಧ್ಯ ಅಪ್ಪಗೋಳ ಸ್ಪಷ್ಟವಾದ ಬಿಂಬ, ಹಳ್ಳದ ಹರಿವಿಗೆ ಸ್ವಲ್ಪ ಕಸಿವಿಸಿಯಾದ ಬಿಂಬ ನಕ್ಕು ಕೈಚಾಚಿದಂತಾಯಿತು. ಗುರುವಿನ ಕಣ್ಣಲ್ಲಿ ನೀರಾಡಿದವು. ಮೆಲ್ಲಗೆ ಎದ್ದು ಅಪ್ಪಗೋಳ ಬಾಹುಗಳಲ್ಲಿ ಅಡಗಿಕೊಳ್ಳಲೆಂಬಂತೆ ಹಳ್ಳದ ಒಳಗೆ ಸಾಗತೊಡಗಿದ…
ಕತೆ ಚೆನ್ನಾಗಿದೆ. ಮಧ್ಯೆ ಸ್ವಲ್ಪ ಓಡಿಸಿದಂತೆ ಭಾಸವಾಯಿತು. (ಮನೆಯಿಂದ ಹೊರಬಿದ್ದ ಕೂಡಲೇ ಉಳಿದ ಘಟನೆಗಳು ಕಚ್ಚಿಕೊಂಡಂತೆ!)
ಧನ್ಯವಾದಗಳು ಈಶ್ವರ ಅವರೇ. ತಮ್ಮ ಅಭಿಪ್ರಾಯ ಸರಿಯಾಗಿದೆ. ಸ್ವಲ್ಪಗಡಿಬಿಡಿಯಾಯಿತು.
ಛಲೋ ಅದರಿ ನಿಮ್ಮ ಕಥೆ.
Good!
praveen avare, kathe channagi bandide. abhinandanegalu